ಉದಯನ (ವತ್ಸರಾಜ): ಸು. ಪ್ರ.ಶ.ಪು. 6ನೆಯ ಶತಮಾನ. ಯಮುನಾ ತೀರದಲ್ಲಿದ್ದ ವತ್ಸದೇಶದ ಅರಸರಾಗಿ ಆಳಿದವರಲ್ಲಿ ಅತಿ ಪ್ರಸಿದ್ಧ. ಕೌಶಾಂಬಿ ಈತನ ರಾಜಧಾನಿ. ಉದಯನನಿಗೆ ಸಂಬಂಧಿಸಿದ ಅನೇಕ ದಂತಕಥೆಗಳು ಗುಪ್ತರ ಕಾಲದಲ್ಲೂ ಹರ್ಷವರ್ಧನನ ಕಾಲದಲ್ಲೂ ಪ್ರಚಲಿತವಾಗಿದ್ದವು. ಕಥಾಸರಿತ್ಸಾಗರದಲ್ಲಿ ಇವನನ್ನು ಕುರಿತ ಕಥೆಗಳಿವೆ. ಭಾಸನ ಪ್ರತಿಜ್ಞಾ ಯೌಗಂಧರಾಯಣ ಮತ್ತು ಸ್ವಪ್ನವಾಸವದತ್ತ, ಹರ್ಷನ ರತ್ನಾವಳಿ ಮತ್ತು ಪ್ರಿಯದರ್ಶಿಕಾ ನಾಟಕಗಳಿಗೆ ಈತನೇ ನಾಯಕ. ಪ್ರದ್ಯೋತನ ಮಗಳಾದ ವಾಸವದತ್ತೆಯನ್ನು ಉದಯನ ಅಪಹರಿಸಿದ ವಿಷಯ ಪ್ರತಿಜ್ಞಾ ಯೌಗಂಧರಾಯಣದಲ್ಲೂ ಪದ್ಮಾವತಿಯನ್ನು ಈತ ಮದುವೆಯಾದ ಕಥೆ ಸ್ವಪ್ನವಾಸದತ್ತದಲ್ಲೂ ಬರುತ್ತದೆ. ಹರ್ಷನ ಎರಡು ನಾಟಕಗಳ ಹೆಸರುಗಳಲ್ಲೇ ಉದಯನನನ್ನು ವರಿಸಿದ ಇಬ್ಬರು ನಾಯಕಿಯರ ನಾಮಧೇಯಗಳಿವೆ. ನಿಜಕ್ಕೂ ಭಾಸ ಮತ್ತು ಹರ್ಷ ಇವರ ನಾಟಕಗಳು ಉದಯನನ ಹೆಸರನ್ನು ಚಿರಸ್ಥಾಯಿಯಾಗಿ ಮಾಡಿವೆ. ಪಾಳೀ ಗ್ರಂಥಗಳಲ್ಲೂ ಉದಯನನಿಗೆ ಸಂಬಂಧಿಸಿದ ವಿಚಾರಗಳಿವೆ. ಬುದ್ಧ ನಿರ್ವಾಣದ ವೇಳೆಗೆ ಇನ್ನೂ ಯೌವ್ವನಾವಸ್ಥೆಯಲ್ಲಿದ್ದ ಉದಯನ ಬುದ್ಧನನ್ನಾಗಲೀ ಬೌದ್ಧಮತವನ್ನಾಗಲೀ ಪುರಸ್ಕರಿಸಲಿಲ್ಲ. ಬುದ್ಧನ ಮರಣಾನಂತರ ಉದಯನ ಪ್ರಮುಖ ಬೌದ್ಧ ಭಿಕ್ಷುಗಳಲ್ಲೊಬ್ಬನಾದ ಪಿಂಡೋಲ ಭರದ್ವಾಜ ಎಂಬಾತನನ್ನು ಹಿಂಸೆಗೆ ಗುರಿಮಾಡಿದ. ಕೊನೆಗೆ ಪಿಂಡೋಲನೊಡನೆ ನಡೆದ ಸಂಭಾಷಣೆಯಿಂದ ಸಂಪ್ರೀತನಾಗಿ ಬೌದ್ಧಮತಾವಲಂಬಿ ಯಾದ. ಉದಯನನಿಗೆ ಬೋಧಿ ಎಂಬ ಕುಮಾರನಿದ್ದ. (ಜಿ.ಆರ್.ಆರ್.; ಎಂ.ಡಿ.ಎನ್.) ಪುರಾಣಗಳರೀತ್ಯ ಜನಮೇಜಯನ ಮರಿಮಗ. ಸಹಸ್ರಾನೀಕ ಮೃಗಾವತಿಯರ ಮಗ. ಗರ್ಭವತಿಯಾದ ಮೃಗಾವತಿ ರಕ್ತದ ಮಡುವಿನಲ್ಲಿ ಸ್ನಾನಮಾಡಬಯಸಿದಳು. ಅರಸ ರಕ್ತವರ್ಣದ ಮಡುವನ್ನು ನಿರ್ಮಿಸಿದ. ಮೃಗಾವತಿ ಮಿಂದು ಹೊರಬಂದಾಗ ಗರುಡ ಇವಳನ್ನು ಮಾಂಸದ ಮುದ್ದೆಯೆಂದು ಭ್ರಮಿಸಿ ಕೊಂಡೊಯ್ದು ಉದಯ ಪರ್ವತದ ಗವಿಯಲ್ಲಿಟ್ಟಿತು. ಚೇತರಿಸಿಕೊಂಡ ಮೃಗಾವತಿ ತನ್ನ ಸ್ಥಿತಿ ನೆನೆದು ಗೋಳಿಟ್ಟಳು. ಸಮೀಪದ ಆಶ್ರಮದಲ್ಲಿದ್ದ ಜಮದಗ್ನಿಋಷಿ ಧ್ವನಿ ಕೇಳಿ ಶಿಷ್ಯನ ಮೂಲಕ ಆಕೆಯನ್ನು ಕರೆತರಿಸಿ ಸಂತೈಸಿದ. ಕಾಲಕ್ರಮದಲ್ಲಿ ಮೃಗಾವತಿ ಮಗನನ್ನು ಹಡೆದಳು. ಉದಯಾಚಲದಲ್ಲಿ ಜನಿಸಿದವನಾದುದರಿಂದ ಉದಯನ ಎಂಬ ಹೆಸರಾಯಿತು. ಈತ ಪ್ರೌಢನಾಗಿ ಒಮ್ಮೆ ಬೇಟೆಗೆ ಹೋದಾಗ ಬೇಡನ ಕೈಗೆ ಸಿಕ್ಕಿದ್ದ ಹಾವೊಂದನ್ನು ತನ್ನ ಕೈಲಿದ್ದ ಕಡಗ ಕೊಟ್ಟು ಬಿಡಿಸಿದ. ಹಾವು ಮಾಯವಾಯಿತು. ಸರ್ಪರಾಜನ ಪುತ್ರ ಎದುರಿಗೆ ಬಂದು ಉದಯನನನ್ನು ಪಾತಾಳಕ್ಕೆ ಕರೆದೊಯ್ದು ತನ್ನ ಸಹೋದರಿ ಲಲಿತೆಯನ್ನು ಕೊಟ್ಟು ಮದುವೆ ಮಾಡಿಸಿದ. ಉದಯನನಿಂದ ಮಗನನ್ನು ಪಡೆದಮೇಲೆ ಘೋಷವತಿ ಎಂಬ ವೀಣೆ ಹಾಗೂ ಬಾಡದ ಹೂಮಾಲೆಯನ್ನು ಪುತ್ರನ ಸಮೇತ ಉದಯನನಿಗೆ ಇತ್ತು ಶಾಪಗ್ರಸ್ತಳಾಗಿದ್ದ ವಿದ್ಯಾಧರಿ (ಲಲಿತೆ) ಮಾಯವಾದಳು. ಉದಯನ ಪುತ್ರನ ಸಮೇತ ಜಮದಗ್ನಿ ಆಶ್ರಮದಲ್ಲಿದ್ದ ತಾಯಿಯನ್ನು ಕೂಡಿಕೊಂಡ. ಅತ್ತ ಉದಯನು ಬೇಡನಿಗಿತ್ತ ಕಡಗದಿಂದ ಸಹಸ್ರಾನೀಕ ತನ್ನ ಪತ್ನಿ ಜಮದಗ್ನಿ ಆಶ್ರಮದಲ್ಲಿರುವುದನ್ನು ತಿಳಿದು ಪತ್ನಿ ಪುತ್ರ ಪೌತ್ರರನ್ನು ಕೂಡಿದ ಎಂದು ಸ್ಕಂದ ಹಾಗೂ ಬ್ರಹ್ಮವೈವರ್ತ ಪುರಾಣಗಳಲ್ಲಿ ಉಕ್ತವಾಗಿದೆ.