ಉತ್ಪಾದನ ನಿರ್ವಹಣೆ

ಉತ್ಪಾದನ ನಿರ್ವಹಣೆ ಒಂದು ಉದ್ಯಮಸಂಸ್ಥೆಯ ಉತ್ಪತ್ತಿಯ ಮೊತ್ತದ ಯೋಜನೆ; ಪದಾರ್ಥದ ಉತ್ಪಾದನೆಗೆ ಅಗತ್ಯವಾದ ನಾನಾ ಕ್ರಿಯೆಗಳ ನಿರ್ದೇಶನ, ಸಂಘಟನೆ ಹಾಗೂ ನಿಯಂತ್ರಣ (ಪ್ರೊಡಕ್ಷನ್ ಮ್ಯಾನೇಜ್‍ಮೆಂಟ್).

ಹಿನ್ನೆಲೆ

ಬದಲಾಯಿಸಿ

ಎಲ್ಲಿ, ಹೇಗೆ, ಯಾವಾಗ ಪದಾರ್ಥವನ್ನು ಉತ್ಪಾದಿಸಬೇಕು ಎಂಬ ಯೋಜನೆ, ತದನುಗುಣವಾಗಿ ಉತ್ಪಾದನಕಾರ್ಯನಿರ್ವಹಣೆ, ತತ್ಸಂಬಂಧವಾಗಿ ಆಡಳಿತ ಮಂಡಳಿಗೆ ಸಮಯೋಚಿತ ಸಲಹೆ-ಇವೆಲ್ಲವೂ ಇದರಲ್ಲಿ ಅಂತರ್ಗತವಾಗಿವೆ. ಒಂದು ಸಂಸ್ಥೆಯಲ್ಲಿ ಉತ್ಪಾದನ ವಿಭಾಗ ಅತಿ ಮುಖ್ಯ ಅಂಗ. ಆಡಳಿತ ಮಂಡಲಿಯ ಆದೇಶಾನುಸಾರ ತಯಾರು ಮಾಡುವುದು ಇದರ ಕೆಲಸ. ಒಂದು ಸಂಸ್ಥೆಯ ಅಳಿವು-ಉಳಿವುಗಳು ಆ ಸಂಸ್ಥೆಯ ಉತ್ಪಾದನ ನಿರ್ವಹಣೆಯನ್ನೇ ಅವಲಂಬಿಸಿದೆ. ಪದಾರ್ಥವನ್ನು ಸರಿಯಾದ ಕಾಲದಲ್ಲಿ. ಅಚ್ಚುಕಟ್ಟಾಗಿ. ಕಡಿಮೆ ವೆಚ್ಚದಲ್ಲಿ ಗಿರಾಕಿಗಳ ಅಭಿಲಾಷೆಗೆ ತಕ್ಕಂತೆ ಉತ್ಪಾದಿಸಬೇಕಾದರೆ ಈ ಕಾರ್ಯಕ್ಕೆ ಅನೇಕ ವಿಭಾಗಗಳ ಸಹಕಾರ ಅತ್ಯಾವಶ್ಯಕ. ಉತ್ಪಾದನಕಾರ್ಯವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಒಂದು ಬೃಹತ್ ನಿರ್ವಹಣ ವ್ಯವಸ್ಥೆಯನ್ನೇ ಸ್ಥಾಪಿಸಿ ನಡೆಸ ಬೇಕಾಗುತ್ತದೆ.[]

ಉತ್ಪಾದನಕಾರ್ಯದ ವ್ಯಾ

ಬದಲಾಯಿಸಿ

ಒಂದು ದೃಷ್ಟಿಯಲ್ಲಿ ಉತ್ಪಾದನ ಕಾರ್ಯದ ವ್ಯಾಪ್ತಿ ಬಲು ಕಿರಿದೆನಿಸಬಹುದು. ಪದಾರ್ಥ ತಯಾರಿಕೆಯಷ್ಟೇ ಇದರ ಕೆಲಸ ವೆಂದೂ ಬೇರೆ ಯಾವ ಜವಾಬ್ದಾರಿಯೂ ಇದರದಲ್ಲವೆಂದೂ ಭಾವಿಸುವುದು ತಪ್ಪು. ಪದಾರ್ಥ ತಯಾರಿಕೆಯಷ್ಟೇ ಇದರ ಹೊಣೆಯಲ್ಲ. ತಯಾರಿಕೆಗೆ ಮೊದಲು ಆ ಪದಾರ್ಥದ ಭವಿಷ್ಯವನ್ನು ಅರಿತುಕೊಳ್ಳಬೇಕು. ಅದನ್ನು ತಯಾರು ಮಾಡಲು ಯಾವ ಯಾವ ಸಾಧನ ಸಾಮಗ್ರಿ ಎಷ್ಟೆಷ್ಟು ಪ್ರಮಾಣದಲ್ಲಿ ಯಾವ ಯಾವ ರೀತಿಯಲ್ಲಿ ಯಾವ ಯಾವ ಕಾಲಕ್ಕೆ ಅಗತ್ಯ. ಯಾವ ಬಗೆಯ ಕುಶಲಕೆಲಸಗಾರರು ಎಷ್ಟು ಸಂಖ್ಯೆಯಲ್ಲಿ ಯಾವ ಕಾಲಕ್ಕೆ ಒದಗಬೇಕು. ತಯಾರಿಕೆಯ ವಿಧಾನಗಳು ಹೇಗಿರಬೇಕು-ಎಂಬ ವಿಷಯಗಳ ಜೊತೆಯಲ್ಲಿ ಉತ್ಪಾದನೆಯ ವೆಚ್ಚ, ಗುಣ. ಉಪಯೋಗ ಇತ್ಯಾದಿಗಳನ್ನು ನಿರ್ಧರಿಸುವ ಜವಾಬ್ದಾರಿಯೂ ಉತ್ಪಾದನ ಕಾರ್ಯದ ಸೀಮೆಯೊಳಗೆ ಬರತಕ್ಕದ್ದೇ ಆಗಿದೆ.

ಉತ್ಪಾದನ ಸಂಘಟನೆ

ಬದಲಾಯಿಸಿ

ಕಾರ್ಖಾನೆಯ ಪ್ರಧಾನ ಅಂಗವಾದ ಉತ್ಪಾದನ ವಿಭಾಗ ಮಿಕ್ಕ ವಿಭಾಗಗಳಿಂದ ದೂರವಾಗಿ ಉಳಿಯುವಂತಿಲ್ಲ. ಉತ್ಪಾದನ ಕಾರ್ಯದಲ್ಲಿ ನಿರತನಾದ ವ್ಯವಸ್ಥಾಪಕನಿಗೆ ಇತರ ಎಲ್ಲ ವಿಭಾಗಗಳ ಸಹಾಯ ಸಹಕಾರ ಅತ್ಯಂತ ಅವಶ್ಯ. ಉತ್ಪಾದಿಸಲಿರುವ ಪದಾರ್ಥಕ್ಕೆ ಬೇಡಿಕೆ ಇದೆಯೆ, ಇಲ್ಲವೆ-ಎಂಬುದನ್ನು ಮೊಟ್ಟಮೊದಲು ಆತ ವಿಕ್ರಯ ವಿಭಾಗದ ಮುಖ್ಯಸ್ಥನಿಂದ ತಿಳಿದುಕೊಳ್ಳಬೇಕು. ಬೇಡಿಕೆ ಇಲ್ಲದ ಪಕ್ಷದಲ್ಲಿ ಅದಕ್ಕೆ ಮಾರುಕಟ್ಟೆ ಸೃಷ್ಟಿ ಸಾಧ್ಯವೇ? ಮಾರುಕಟ್ಟೆಯಲ್ಲಿ ಯಾವ ಬಗೆಯ ಪದಾರ್ಥಕ್ಕೆ ಬೇಡಿಕೆಯುಂಟು ಎಂಬುದನ್ನು ಆತ ತಿಳಿದುಕೊಳ್ಳಬೇಕು. ಉತ್ಪಾದನೆಯಲ್ಲಿ ತೊಡಗಲು ಸಾಕಷ್ಟು ಕೆಲಸಗಾರರು ಇರುವರೆ, ಇಲ್ಲವೆ ಎಂಬುದನ್ನು ಕಾರ್ಮಿಕಾಧಿಕಾರಿಯಿಂದ ಅರಿತುಕೊಳ್ಳುವುದಗತ್ಯ. ಯಂತ್ರ ಸಜ್ಜಿಕೆ, ಆರ್ಥಿಕ ಸಹಾಯ, ಸರಕು ಸರಬರಾಜು ಇತ್ಯಾದಿ ವಿಷಯಗಳ ಬಗ್ಗೆ ಆಯಾ ವಿಭಾಗಾಧಿಕಾರಿಗಳೊಡನೆ ಚರ್ಚಿಸಿ ಅನಂತರ ಉತ್ಪಾದನೆಯ ಯೋಜನೆ ತಯಾರಿಸಬೇಕು. ಈ ಯಾವ ಪೂರ್ವ ಸಿದ್ಧತೆಯೂ ಇಲ್ಲದೆಯೇ ಉತ್ಪಾದನೆಯಲ್ಲಿ ತೊಡಗಿದರೆ ತೊಂದರೆ ಉದ್ಭವಿಸುವುದು ಖಂಡಿತ. ಕಚ್ಚಾ ಸಾಮಗ್ರಿ ಸರಬರಾಜು ಇಲ್ಲದೆಯೂ ಯಂತ್ರಸೌಲಭ್ಯ ದೊರೆಯದೆಯೂ ಕೆಲಸಗಾರರ ಅಭಾವದಿಂದಲೂ ಉತ್ಪಾದನೆ ಸ್ಥಗಿತಗೊಳ್ಳಬಹುದು.[]

ಪದಾರ್ಥಗಳಿಗಾಗಿ ಗ್ರಾಹಕರಿಂದ ಆದೇಶ ಬಂದಾಗ, ಅಂಥ ಬೇಡಿಕೆಯನ್ನು ಒಪ್ಪಿಸಿಕೊಳ್ಳುವ ಮೊದಲು ಆಡಳಿತ ಮಂಡಲಿಯವರು ಉತ್ಪಾದನ ವ್ಯವಸ್ಥಾಪಕನ ಸಲಹೆ ಪಡೆಯುವ ವಾಡಿಕೆಯುಂಟು. ಈತನ ಸಲಹೆಯ ಮೇಲೆಯೇ ಸರಕು ಸರಬರಾಜು ಮಾಡುವ ಅಥವಾ ಬಿಡುವ ನಿರ್ಧಾರ ಕೈಗೊಳ್ಳಲಾಗುತ್ತದೆ.

ವ್ಯಾಪ್ತಿ

ಬದಲಾಯಿಸಿ

ಉತ್ಪಾದನ ನಿರ್ವಹಣೆಯ ವ್ಯಾಪ್ತಿ ವಿಶಾಲವಾಗಿರುವುದರಿಂದ, ಎಲ್ಲ ಕಾರ್ಯಗಳನ್ನೂ ಸುಲಲಿತವಾಗಿಯೂ ಅಚ್ಚುಕಟ್ಟಾಗಿಯೂ ನಿರ್ವಹಿಸುವ ಉದ್ದೇಶದಿಂದ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಇದಕ್ಕೆ ಸಹಾಯಕವಾಗಿ ವಿಭಾಗಗಳಿರುತ್ತವೆ. ಅವುಗಳಲ್ಲಿ ಮುಖ್ಯವಾದವೆಂದರೆ : 1 ಉತ್ಪನ್ನ ಸಂಶೋಧನೆ ವಿಭಾಗ, 2 ಉತ್ಪನ್ನ ಕಾರ್ಯದ ನಿಯೋಜನೆ ಹಾಗೂ ನಕ್ಷಾಲೇಖನ ವಿಭಾಗ, 3 ಸಾಮಗ್ರಿವಿವರಣ, ಸಂಗ್ರಹಣ, ದಾಸ್ತಾನು ವಿಭಾಗ, 4 ಪ್ರಮಾಣ ವಿಭಾಗ, 5 ಪರೀಕ್ಷಣ ವಿಭಾಗ, 6 ಗುಣ ನಿಯಂತ್ರಣ ವಿಭಾಗ, 7 ವೆಚ್ಚ ವಿಶ್ಲೇಷಣೆ ಮತ್ತು ವೆಚ್ಚ ನಿಯಂತ್ರಣ ವಿಭಾಗ ಹಾಗೂ 8 ಕಾರ್ಯವಿಧಾನದ ಅಧ್ಯಯನ ಹಾಗೂ ಸಿದ್ದತಾ ವಿಭಾಗ, ಸಣ್ಣ ಸಣ್ಣ ಉದ್ಯಮಸಂಸ್ಥೆಗಳಲ್ಲಿ ಮೇಲ್ಕಂಡ ವಿಭಾಗಗಳ ಕಾರ್ಯವನ್ನೆಲ್ಲ ಉತ್ಪಾದನೆಯ ವಿಭಾಗವೇ ನಿರ್ವಹಿಸಬೇಕಾಗುತ್ತದೆ.

ಇನ್ನು ಕೆಲವು ಸಂಸ್ಥೆಗಳು ಉತ್ಪಾದನ ಕಾರ್ಯವನ್ನು ನಿರ್ವಹಿಸುವ ರೀತಿ ಭಿನ್ನವಾದ್ದು. ಅಲ್ಲಿ ಈ ಕಾರ್ಯವನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ : 1 ಕಾರ್ಯಾತ್ಮಕ ವ್ಯವಸ್ಥೆ (ಫಂಕ್ಷನಲ್ ಆರ್ಗನೈಸೇóಷನ್) ಮತ್ತು 2 ಪಂಕ್ತಿ ಮತ್ತು ಸಿಬ್ಬಂದಿ ವ್ಯವಸ್ಥೆ (ಲೈನ್ ಅಂಡ್ ಸ್ಟ್ಯಾಫ್ ಆರ್ಗನೈಸೇóಷನ್).

ಶ್ರಮವಿಭಜನೆ ಹಾಗೂ ವಿಶೇಷ ಪರಿಶ್ರಮಗಳಿಂದ ಲಭಿಸುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು, ಉತ್ಪಾದನ ಕಾರ್ಯ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುವುದು ಕಾರ್ಯಾತ್ಮಕ ವ್ಯವಸ್ಥೆಯ ಹೊಣೆ. ಉತ್ಪಾದನೆಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುವುದು ಸಾಧ್ಯವಾಗುವಂತೆ ನಾನಾ ವಿಭಾಗಗಳನ್ನು ತೆರೆದು ಉತ್ಪಾದನ ಕಾರ್ಯ ನೇರಮಾರ್ಗದಲ್ಲಿ ನಡೆಯುವಂತೆ ಏರ್ಪಡಿಸುವ ವ್ಯವಸ್ಥೆಯೇ ಪಂಕ್ತಿ ಮತ್ತು ಸಿಬ್ಬಂದಿ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಸೂಚನೆಗಳು ಮೇಲಿನ ಅಧಿಕಾರಿಯಿಂದ ಕೆಳಗಿನ ಅಧಿಕಾರಿಗೆ ಕ್ರಮವಾಗಿ ಬರುತ್ತವೆ. ಅದೇ ರೀತಿಯಲ್ಲಿ ಕೆಳಗಿನಿಂದ ವಿಷಯಗಳು ಹಂತ ಹಂತವಾಗಿ ಮೇಲೇರಿ ಉನ್ನತಾಧಿಕಾರಿಯನ್ನು ತಲುಪುತ್ತವೆ.[]

ಉತ್ಪಾದನೆಯ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಕೆಲವು ಸಮಸ್ಯೆಗಳು ಸಾಮಾನ್ಯ, ಸುಲಭವಾಗಿ ಪರಿಹಾರ್ಯ. ಮತ್ತೆ ಕೆಲವು ಹೆಚ್ಚು ಮುಖ್ಯ, ಜಟಿಲ. ಇಂಥವುಗಳ ಪರಿಹಾರ ಸುಲಭವೇನಲ್ಲ; ಆದರೆ ಇವನ್ನು ಹಾಗೆಯೇ ಬಿಡಲೂ ಸಲ್ಲ. ಅಂದರೆ ಈ ಸಮಸ್ಯೆಗಳ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಲೇಬೇಕಾಗುತ್ತದೆ, ಪರಿಹಾರ ಕಂಡು ಹಿಡಿಯಲೇ ಬೇಕಾಗುತ್ತದೆ.

ಅಗತ್ಯಗಳು

ಬದಲಾಯಿಸಿ

ಉತ್ಪಾದನೆಯ ಕಾರ್ಯಕ್ಕೆ ಬೇಕಾಗುವ ಜನ, ಧನ, ಸಾಮಗ್ರಿ, ಉತ್ಪಾದನಕಾಲ ಇತ್ಯಾದಿಗಳನ್ನು ಯೋಗ್ಯರೀತಿಯಲ್ಲಿ ಆರಿಸಲೇ ಬೇಕಾಗುತ್ತದೆ. ಆಗ ಆರ್ಥಿಕ, ತಾಂತ್ರಿಕ ಮತ್ತು ಮಾನವೀಯ ಸಮಸ್ಯೆಗಳು ಉದ್ಭವಿಸುತ್ತವೆ. ಒಂದೊಂದೂ ಒಂದು ದೃಷ್ಟಿಯಿಂದ ಅತಿಮುಖ್ಯವೆನಿಸಿದರೂ ಮತ್ತೊಂದು ದೃಷ್ಟಿಯಿಂದ ಹಾನಿಕರವೆನಿಸಬಹುದು. ತಾಂತ್ರಿಕ ದೃಷ್ಟಿಯಿಂದ ಲಾಭಕರವೆನಿಸಿದ್ದು ಆರ್ಥಿಕವಾಗಿ ನಷ್ಟಕರವಾಗಿರಬಹುದು. ಏನೇ ಆದರೂ ಸಮಸ್ಯೆಗಳನ್ನು ಪರಿಹರಿಸುವಾಗ ಮಾನವೀಯತೆಗೆ ಪ್ರಾಶಸ್ತ್ಯ ಕೊಡುವುದೂ ಅಗತ್ಯವಾದೀತು.

ಉತ್ಪಾದನೆಯ ಸಮಸ್ಯೆಗಳನ್ನು ಪರಿಹರಿಸುವ ಸುಲಭಮಾರ್ಗವೆಂದರೆ ಅವುಗಳ ವಿಶ್ಲೇಷಣೆ; ಚಿಕ್ಕ ತುಂಡುಗಳಾಗಿ ಅವುಗಳ ವಿಭಜನೆ. ಮೊದಲು ಸಾಮಾನ್ಯವಾದ ಸಣ್ಣ ಸಣ್ಣ ಸಮಸ್ಯೆಗಳನ್ನು ಮೂಲ ಸಮಸ್ಯೆಯಿಂದ ಬೇರ್ಪಡಿಸಿಕೊಳ್ಳಬೇಕು. ಅನಂತರ ಆ ಪ್ರತಿಯೊಂದು ಸಮಸ್ಯೆಯೂ ನಿರ್ದಿಷ್ಟ ಉಪಸಮಸ್ಯೆಗಳೊಡನೆ ಬೆರೆಯುವಂತೆ ಮಾಡಿ ಪರೋಕ್ಷ ಮಾರ್ಗದಿಂದ ನಿರ್ದಿಷ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು. ಕಚ್ಚಾಸಾಮಗ್ರಿಯಿಂದ ಪರಿಪೂರ್ಣ ಪದಾರ್ಥದ ತಯಾರಿಕೆಯೇ ಮುಖ್ಯ ಸಮಸ್ಯೆ. ಈ ಸಮಸ್ಯೆಯನ್ನು ವಿಶ್ಲೇಷಿಸಿದರೆ ಕಚ್ಚಾಸಾಮಗ್ರಿಯ ಸಮಸ್ಯೆ. ಕಾರ್ಮಿಕರ ಸಮಸ್ಯೆ, ಆರ್ಥಿಕ ಸಮಸ್ಯೆ, ಯಂತ್ರೋಪಕರಣಗಳ ಸಮಸ್ಯೆ ಈ ರೀತಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಮೊದಲು ಸರಕಿನ ಸಮಸ್ಯೆಯನ್ನು ತೆಗೆದುಕೊಂಡು ಎಷ್ಟು, ಯಾವಾಗ, ಹೇಗೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಂಡರೆ ಮೂಲಭೂತ ಸಮಸ್ಯೆಗೆ ಉತ್ತರ ದೊರೆಯುತ್ತದೆ.[]

ಮುನ್ಸೂಚನೆ

ಬದಲಾಯಿಸಿ

ಯಾವ ಪದಾರ್ಥ ತಯಾರು ಮಾಡುವುದಕ್ಕೂ ಮುಂಚೆ ಆ ವಸ್ತುವಿಗೆ ಉತ್ತಮ ಬೇಡಿಕೆಯ ಭವಿಷ್ಯ ಇದೆಯೆ ಇಲ್ಲವೆ ಎಂಬುದನ್ನು ಅರಿಯಬೇಕು. ಇದಕ್ಕಾಗಿ ಮಾರುಕಟ್ಟೆಯ ಸಂಶೋಧನೆ ನಡೆಸಬೇಕು. ಇದು ಗ್ರಾಹಕರ ನೈಜ ಬೇಡಿಕೆಯನ್ನು ತಿಳಿಸುತ್ತದೆ. ಅನುಭೋಗಿಗಳಿಗೆ ಯಾವ ತರದ ಪದಾರ್ಥ ಯಾವ ಕಾಲದಲ್ಲಿ ಎಷ್ಟು ಬೆಲೆಗೆ ಬೇಕಾಗಿದೆ ಎಂಬುದು ಗೊತ್ತಾಗುತ್ತದೆ. ಇದರಿಂದ ಉತ್ಪಾದಕ ಸುಲಭವಾಗಿ ಅದೇ ತೆರದ ಪದಾರ್ಥವನ್ನೆ ತಯಾರುಮಾಡಿ ಲಾಭ ಸಂಪಾದನೆಮಾಡಬಹುದು. ಕೆಲವು ವೇಳೆ ಹೊಸ ಪದಾರ್ಥ ತಯಾರುಮಾಡಲು ಹೊರಟರೆ ಅದಕ್ಕೆ ಬೇಡಿಕೆ ಹುಟ್ಟುವಂತೆ ಮಾಡಲು ಸಾಧ್ಯವಿದೆಯೆ, ಎಂದರೆ ಇದಕ್ಕೆ ಮಾರುಕಟ್ಟೆ ಸೃಷ್ಟಿಸಬಹುದೆ (ಕ್ರಿಯೇಟಿಂಗ್ ದಿ ಮಾರ್ಕೆಟ್) ಎಂಬುದನ್ನು ತಿಳಿಯುವುದು ಅತಿ ಮುಖ್ಯ. ಅಂಥ ಸಾಧ್ಯತೆ ಇದ್ದರೆ ತತ್‍ಕ್ಷಣದಲ್ಲೇ ಅದನ್ನು ಸೃಷ್ಟಿಸಲು ಎಲ್ಲ ಬಗೆಯ ಪ್ರಯತ್ನವನ್ನೂ ಮಾಡಬೇಕು. ಇದಕ್ಕೆ ವಿಕ್ರಯವಿಭಾಗದ ಪೂರ್ಣ ಸಹಕಾರ ಅಗತ್ಯ.

ವಿಕ್ರಯ ವಿಭಾಗ ಮಾರುಕಟ್ಟೆಯ ಸಂಶೋಧನೆಯ ಸಹಾಯದಿಂದ ವಿಕ್ರಯದ ಅಂದಾಜು ಪಟ್ಟಿಯನ್ನು ತಯಾರುಮಾಡಬೇಕು. ಈ ಪಟ್ಟಿಯಲ್ಲಿ ಬೇಡಿಕೆ ಇರುವ ಪದಾರ್ಥದ ಗುಣ, ಲಕ್ಷಣ, ಬೆಲೆ, ಪ್ರಮಾಣ ಉಪಯೋಗ, ಸಂರಕ್ಷಣೆ, ರವಾನಿಸಬೇಕಾದ ದಿನ, ಇದಕ್ಕೆ ಇರುವ ಬೇಡಿಕೆ, ಮುಂದಿನ ಅಂದಾಜು ಬೇಡಿಕೆ ಇತ್ಯಾದಿ ವಿವರಗಳನ್ನು ಕೊಟ್ಟಿರಬೇಕು. ಈ ಪಟ್ಟಿಯನ್ನು ಉತ್ಪಾದನ ವ್ಯವಸ್ಥಾಪಕನಿಗೆ ತಲುಪಿಸಬೇಕು.

ವಿಕ್ರಯದ ಅಂದಾಜು ಪಟ್ಟಿಯ ಆಧಾರದ ಮೇಲೆ ಉತ್ಪನ್ನದ ಅಂದಾಜು ಪಟ್ಟಿಯನ್ನು ತಯಾರಿಸುವುದು ಉತ್ಪಾದನ ವ್ಯವಸ್ಥಾಪಕನ ಕೆಲಸ. ಈ ಪಟ್ಟಿ ಉತ್ಪಾದನೆಗೆ ಬೇಕಾಗುವ ಸಕಲ ಸಲಕರಣೆ, ಜನ ಮತ್ತು ಸಾಮಗ್ರಿಗಳ ವಿವರಣೆ ನೀಡುತ್ತದೆ. ಈ ಪಟ್ಟಿಯನ್ನು ತಯಾರುಮಾಡುವುದಕ್ಕೆ ಮುಂಚೆ ಕೆಳಕಂಡ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡಿರಬೇಕು.

ಸಾಮಗ್ರಿಗಳು ದಾಸ್ತಾನಿನಲ್ಲಿ ಬೇಕಾಗುವಷ್ಟು ಪ್ರಮಾಣದಲ್ಲಿ ಇವೆಯೆ? ಇಲ್ಲವೆ? ಇಲ್ಲದಿದ್ದರೆ ಸಕಾಲದಲ್ಲಿ ಸಾಮಗ್ರಿಗಳನ್ನು ಸರಬರಾಜು ಮಾಡಿಕೊಳ್ಳಬಹುದೆ? ಎಷ್ಟು ಸರಕನ್ನು ಕೊಳ್ಳಬೇಕು? ಇದಕ್ಕೆ ಹಣವಿದೆಯೆ? ಈಗ ಇರುವ ಕಾರ್ಮಿಕರೇ ಸಾಕೆ? ಇಲ್ಲದಿದ್ದರೆ ಯಾವ ಬಗೆಯ ಕೆಲಸಗಾರರನ್ನು ಎಷ್ಟು ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಬೇಕು? ಇದಕ್ಕೆ ತಕ್ಕ ಯಂತ್ರಗಳು ಇವೆಯೆ ಇಲ್ಲವೆ? ತಯಾರಿಕೆಯ ಕಾಲದಲ್ಲಿ ಯಾವುದಾದರೂ ತೊಂದರೆ ಉದ್ಭವಿಸಿದರೆ ಅದನ್ನು ನಿವಾರಿಸುವ ಶಕ್ತಿ ಇದೆಯೆ? ಹೀಗೆ ಬಗೆ ಬಗೆಯ ಸಮಸ್ಯೆಗಳಿಗೆ ಉತ್ತರ ಪಡೆದುಕೊಳ್ಳಬೇಕು.

ಇವು ಇಂಥ ಇನ್ನೂ ಹಲವು ಸಮಸ್ಯೆಗಳೂ ಹೊಸಪದಾರ್ಥ ತಯಾರು ಮಾಡುವಾಗ ಉದ್ಭವಿಸುವಂಥವು. ಹಿಂದಿನಿಂದ ತಯಾರು ಮಾಡುತ್ತಿರುವ ಪದಾರ್ಥಗಳಿಗಾಗಲಿ ಅಥವಾ ಹಳೆಯ ಸಂಸ್ಥೆಗಳಿಗಾಗಲಿ ಇಷ್ಟೊಂದು ಸಮಸ್ಯೆಗಳು ಉದ್ಭವಿಸುವುದಿಲ್ಲ. ಆದರೂ ಕಾಲದೇಶಗಳ ಬದಲಾವಣೆಯ ದೃಷ್ಟಿಯಿಂದ ಹೊಸ ಬೇಡಿಕೆ ಪೂರೈಸುವಾಗ ಈ ಸಮಸ್ಯೆಗಳು ಬಾರದಿರವು. []

ವ್ಯವಸ್ಥೆ

ಬದಲಾಯಿಸಿ

ಉತ್ಪನ್ನ ಅಂದಾಜು ಪಟ್ಟಿಯನ್ನು ತಯಾರುಮಾಡಿ ಅದನ್ನು ಆಡಳಿತ ಮಂಡಳಿಗೆ ಕಳುಹಿಸಬೇಕು. ಆಡಳಿತ ಮಂಡಳಿಯವರು ಅದರ ಯುಕ್ತಾಯುಕ್ತತೆಯನ್ನು ಕೂಲಂಕಷವಾಗಿ ಚರ್ಚಿಸಿ ಅನಂತರ ನಿರ್ಧಾರ ಕೈಗೊಳ್ಳುತ್ತಾರೆ.

ಗ್ರಾಹಕರ ಆದೇಶಾನುಸಾರ ಪದಾರ್ಥ ತಯಾರುಮಾಡುವ ಸಂಸ್ಥೆಗಳಿಗೆ ಇಷ್ಟೊಂದು ಸಮಸ್ಯೆಗಳಿರುವುದಿಲ್ಲ. ತಯಾರಿಸುವ ವಸ್ತುವಿನ ರೂಪರೇಖೆಯನ್ನು ಗ್ರಾಹಕರೇ ಕೊಟ್ಟರುವುದರಿಂದಲೂ ಬೇಡಿಕೆಯನ್ನು ಸೃಷ್ಟಿಮಾಡುವ ಹೊಣೆ ಸಂಸ್ಥೆಗೆ ಇಲ್ಲದಿರುವುದರಿಂದಲೂ ಉತ್ಪನ್ನ ಅಂದಾಜು ಪಟ್ಟಿಯನ್ನು ತಯಾರುಮಾಡಿಕೊಂಡರೆ ಸಾಕು. ಆದರೆ ಮುಂದಿನ ಬೇಡಿಕೆಯನ್ನು ನಿರೀಕ್ಷಿಸಿ ಈಗಲೇ ಪದಾರ್ಥ ತಯಾರಿಕೆಯಲ್ಲಿ ತೊಡಗುವ ಸಂಸ್ಥೆಗಳು ಅಂದಾಜುಪಟ್ಟಿಗಳನ್ನು ವಿವರವಾಗಿ ತಯಾರಿಸಬೇಕು.

ಉತ್ಪಾದನ ಯೋಜನೆ ಮತ್ತು ನಿಯಂತ್ರಣ

ಬದಲಾಯಿಸಿ

ಪದಾರ್ಥೋತ್ಪಾದನೆಯ ನಿರ್ಧಾರ ಕೈಗೊಂಡ ಮೇಲೆ ಯಾವರೀತಿಯಲ್ಲಿ ಉತ್ಪಾದಿಸಬೇಕು ಎಂಬ ಸಮಸ್ಯೆ ಉದ್ಭವಿಸುತ್ತದೆ. ಇದಕ್ಕಾಗಿ ಒಂದು ಯೋಜನೆ ತಯಾರಿಸಿ ಆ ಯೋಜನೆಯ ಮಾರ್ಗದಲ್ಲೆ ಉತ್ಪಾದನ ಕಾರ್ಯ ನಡೆಯುವಂತೆ ನೋಡಿಕೊಳ್ಳಬೇಕು. ಉತ್ಪಾದನ ಕಾರ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿಕೊಂಡು, ಪ್ರತಿಯೊಂದು ಭಾಗದ ಕಾರ್ಯವನ್ನೂ ಸುಗಮವಾಗಿ ನಡೆಸಿಕೊಂಡು ಹೋಗಲು ಒಬ್ಬೊಬ್ಬ ಅಧಿಕಾರಿಯನ್ನು ನೇಮಿಸಬೇಕು. 1. ಪಥಸೂಚಿ (ರೂಟಿಂಗ್), 2. ಅನುಸೂಚಿ (ಷೆಡ್ಯೂಲಿಂಗ್), 3. ನಿಯಂತ್ರಣ (ಕಂಟ್ರೋಲಿಂಗ್) ಮತ್ತು 4. ರವಾನೆ (ಡಿಸ್ಪ್ಯಾಚ್)-ಇವೇ ಆ ನಾಲ್ಕು ಭಾಗಗಳು.

1. ಪಥಸೂಚಿ : ಯಾವ ರೀತಿಯಲ್ಲಿ ಉತ್ಪಾದಿಸಬೇಕೆಂಬ ಬಗ್ಗೆ ಮಾರ್ಗದರ್ಶನ ನೀಡುವ ಒಂದು ಸೂಚನಾಪಟ್ಟಿ. ಮಾಡಬೇಕಾದ ಕೆಲಸದ ಸಮಸ್ತ ವಿವರಣೆಗಳನ್ನೂ ಇದು ನೀಡುತ್ತದೆ. ಯಾವ ಸಾಮಗ್ರಿಯಿಂದ ಯಾವ ಕಾಲದಲ್ಲಿ, ಯಾವ ಯಂತ್ರಗಳ ಸಹಾಯದಿಂದ ಯಾವ ರೀತಿಯಲ್ಲಿ ಎಷ್ಟು ತಯಾರುಮಾಡಬೇಕು, ಯಾವ ಯಾವ ಸಲಕರಣೆಗಳು ಎಷ್ಟೆಷ್ಟು ಬೇಕು, ಅವುಗಳ ವಿವರಣೆ, ಉತ್ಪಾದನೆಯ ಹಂತಗಳು ಇತ್ಯಾದಿ ವಿಷಯಗಳ ಬಗ್ಗೆ ಇಲ್ಲಿ ವಿವರಣೆ ಇರುತ್ತದೆ ಈ ಪಥಸೂಚಿ ಕೆಲಸದ ಆದೇಶ ನೀಡುವುದಲ್ಲದೆ ಉತ್ಪಾದನೆ ಕಾರ್ಯ ಸುಗಮವಾಗಿ ನಡೆದುಕೊಂಡು ಹೋಗಲು ಸಹಾಯ ಮಾಡುತ್ತದೆ. ಇದರಿಂದ ಕೆಲಸಗಾರರು ಪದೇ ಪದೇ ಕೆಲಸ ಮಾಡಲು ಮೇಲಿನ ಅಧಿಕಾರಿಗಳಿಂದ ಆದೇಶಕ್ಕಾಗಿ ಕಾಯಬೇಕಾದ ಅಗತ್ಯವಿರುವುದಿಲ್ಲ. ಇದರಿಂದ ಮಧ್ಯೆ ಮಧ್ಯೆ ಕೆಲಸ ಸ್ಥಗಿತಗೊಳ್ಳದೆ ನಿರಂತರವಾಗಿ ನಡೆಯಲು ಸಾಧ್ಯ. ಕೆಲಸ ಸ್ತಬ್ದಗೊಂಡದ್ದರಿಂದ ಆಗಬಹುದಾದ ನಷ್ಟಗಳನ್ನೂ ಇದು ನಿವಾರಿಸುತ್ತದೆ. ಈ ಪಥಸೂಚಿಯನ್ನು ಉತ್ಪಾದನೆಗೆ ಪೂರ್ವಭಾವಿಯಾಗಿಯೇ ತಯಾರಿಸಿ ಎಲ್ಲರಿಗೂ ಹಂಚಲಾಗುತ್ತದೆ.

2. ಅನುಸೂಚಿ : ಪಥಸೂಚಿ ಉತ್ಪಾದನ ಮಾರ್ಗವನ್ನು ಮಾತ್ರ ಸೂಚಿಸುತ್ತದೆ; ಅದರ ಕಾಲವನ್ನು ನಿಯಂತ್ರಿಸುವುದಿಲ್ಲ. ಎಲ್ಲಕ್ಕೂ ಕಾಲ ಅತಿಮುಖ್ಯ. ಉತ್ಪಾದನ ಕಾರ್ಯವನ್ನು ಕಾಲದಿಂದ ನಿಯುಕ್ತಗೊಳಿಸದಿದ್ದರೆ ಉತ್ಪಾದನ ಕಾರ್ಯದಲ್ಲಿ ಅನೇಕ ಘರ್ಷಣೆಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ. ನಿಯತಕಾಲಕ್ಕೆ ವಸ್ತುಗಳನ್ನು ತಯಾರುಮಾಡಲು ಸಾಧ್ಯವಾಗದೆ ಸಂಸ್ಥೆ ನಷ್ಟ ಅನುಭವಿಸಬೇಕಾಗುತ್ತದೆ. ಕಾಲ ನಿರ್ಣಯವನ್ನೊಳಗೊಂಡ ಸೂಚನಾಪಟ್ಟಿಯೇ ಅನುಸೂಚಿ. ಯಾವಾಗ ವಸ್ತುಗಳನ್ನು ತರಿಸಿಕೊಳ್ಳಬೇಕು, ಯಾವಾಗ ವಸ್ತುಗಳನ್ನು ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ವರ್ಗಾಯಿಸಬೇಕು, ಯಾವ ಕಾಲದಲ್ಲಿ ಯಾವ ಯಂತ್ರವನ್ನು ಉಪಯೋಗಿಸಬೇಕು, ಎಂಬುದೆಲ್ಲ ಇಲ್ಲುಂಟು. ಉತ್ಪಾದನೆಯ ಪ್ರಾರಂಭದಿಂದ ಮುಕ್ತಾಯದ ವರೆಗೂ ಪ್ರತಿಯೊಂದು ಕ್ರಿಯೆಗೂ ಕಾಲ ಸೂಚಿಸಿರುತ್ತದೆ. ಉಪರಿಕಾಲದ (ಓವರ್‍ಟೈಮ್) ಕೆಲಸದ ಅವಶ್ಯಕತೆ, ಸಾಮಗ್ರಿಗಳ ಮತ್ತು ಉಪಸ್ಥಿತ ಸಲಕರಣೆಗಳ ನಿರ್ಮಾಣ ಇತ್ಯಾದಿಗಳ ಕಡೆಗೆ ಗಮನ ಹರಿಸಿ, ಉತ್ಪಾದನೆಯ ಕಾರ್ಯ ನಿರ್ದಿಷ್ಟ ಕಾಲದಲ್ಲಿ ಮುಗಿಯುವಂತೆ ಇದನ್ನು ತಯಾರುಮಾಡಬೇಕು.

3. ನಿಯಂತ್ರಣ : ಉತ್ಪಾದನಕಾರ್ಯ ಯೋಜಿತ ರೀತಿಯಲ್ಲೇ ಸಾಗುವಂತೆ ನಿಯಂತ್ರಿಸುವುದು ಅಗತ್ಯ. ತಯಾರಿಕೆಯ ಕಾಲದಲ್ಲಿ ಅನೇಕ ಕಾರಣಗಳಿಂದ ಉತ್ಪಾದನೆಯ ರೀತಿಯ ಬದಲಾವಣೆಯಾಗಿ ಉತ್ಪಾದಿಸುವ ಪದಾರ್ಥದ ಗುಣ. ಆಕಾರ, ಮತ್ತು ಪರಿಮಾಣ ದೃಷ್ಟಿಗಳಿಂದ ದೋಷಯುಕ್ತವಾಗುವ ಸಂಭವವುಂಟು. ಈ ರೀತಿ ದೋಷಯುಕ್ತ ಪದಾರ್ಥಗಳನ್ನು ತಯಾರುಮಾಡಿ ನಷ್ಟಹೊಂದುವುದಕ್ಕೆ ಬದಲಾಗಿ ತಯಾರಿಕೆಯ ಪ್ರತಿಯೊಂದು ಘಟ್ಟದಲ್ಲೂ ಪರೀಕ್ಷೆಗಳನ್ನು ನಡೆಸಿ ದೋಷ ನಿವಾರಿಸಿ ನಿಯಂತ್ರಿಸುವುದು ಅಗತ್ಯ.

ಪ್ರಚಲಿತ ಕಾರ್ಯದ ಪ್ರಗತಿಯನ್ನು ಯೋಜಿತಕಾರ್ಯದೊಡನೆ ತುಲನೆ ಮಾಡುವುದರಿಂದ ಕಾರ್ಯ ಬದಲಾವಣೆಯನ್ನಾಗಲಿ ಕಾರ್ಯದೋಷವನ್ನಾಗಲಿ ಸುಲಭವಾಗಿ ಕಂಡುಹಿಡಿಯಲು ಸಾಧ್ಯವಾಗುತ್ತದೆ. ಯಾವುದಾದರೂ ದೋಷಕಂಡುಬಂದಲ್ಲಿ ನಿಯಂತ್ರಣಾಧಿಕಾರಿ ಅದನ್ನು ತಕ್ಷಣವೇ ನಿವಾರಿಸಲು ಪ್ರಯತ್ನಿಸುತ್ತಾನೆ. ಉತ್ಪಾದನ ಕಾರ್ಯಪ್ರಗತಿಯನ್ನೂ ಮಧ್ಯೆ ಮಧ್ಯೆ ತಲೆದೋರುವ ಸಮಸ್ಯೆಗಳನ್ನೂ ಆಡಳಿತ ಮಂಡಳಿಗೆ ಈತನೇ ವರದಿಮಾಡಬೇಕು. ಈ ನಿಯಂತ್ರಣದಿಂದ ಮುಂದೆ ಆಗಬಹುದಾದ ನಷ್ಟವನ್ನು ತಪ್ಪಿಸಿಕೊಳ್ಳಲೂ ಶ್ರೇಷ್ಟಮಟ್ಟದ ವಸ್ತುಗಳನ್ನು ಕಡಿಮೆ ವೆಚ್ಚದಲ್ಲಿ ತಯಾರುಮಾಡಲೂ ಸಹಾಯವಾಗುತ್ತದೆ. ನಿಯಂತ್ರಣ ವಿಭಾಗ ಮುಖ್ಯವಾಗಿ ವಸ್ತುವಿನ ಗುಣ, ಶಕ್ತಿ, ವೆಚ್ಚ ಮುಂತಾದುವನ್ನು ನಿಯಂತ್ರಿಸುತ್ತದೆ.

4. ರವಾನೆ : ಉತ್ಪಾದನ ವಿಭಾಗಕ್ಕೆ ಸೂಕ್ತ ಸೂಚನೆಗಳನ್ನು ನೀಡುವುದು, ಉತ್ಪಾದನ ವಿಭಾಗದಿಂದ ಉತ್ಪಾದನೆಯ ಪ್ರಗತಿಯ ವಿಷಯವನ್ನು ತಿಳಿದುಕೊಂಡು ಆಡಳಿತ ಮಂಡಳಿಗೆ ಆ ವಿಷಯವನ್ನು ರವಾನಿಸುವುದು, ಪಥಸೂಚಿ ಮತ್ತು ಅನುಸೂಚಿಗಳ ಸಹಾಯದಿಂದ ಕೆಲಸಗಳನ್ನು ಹಂಚುವುದು, ಯಂತ್ರಗಳನ್ನು ಸಕಾಲಕ್ಕೆ ಒದಗಿಸುವುದು, ಮತ್ತು ಸಲಕರಣೆಗಳ ಸರಬರಾಜುಮಾಡುವುದು ಈ ಕಾರ್ಯಗಳ ಬಗ್ಗೆ ಯೋಗ್ಯ ತೀರ್ಮಾನ ಕೈಗೊಂಡು ಮೇಲ್ವಿಚಾರಕರ ಸಹಾಯದಿಂದ ಕೆಲಸಮಾಡಿಸುವುದು ಇವು ಈ ವಿಭಾಗದ ಕಾರ್ಯಭಾರ. []

ಸಾಮಗ್ರಿಗಳ ಬಗ್ಗೆ ತೀರ್ಮಾನ

ಬದಲಾಯಿಸಿ

ವಸ್ತುವಿನ ಉತ್ಪಾದನೆಗೆ ಅನೇಕ ವಿಧವಾದ ಸಾಮಗ್ರಿಗಳು ಅತ್ಯಾವಶ್ಯಕ. ಕಚ್ಚಾ ಸಾಮಗ್ರಿ. ಮುಂದುವರಿಯುತ್ತಿರುವ ಕೆಲಸ (ವರ್ಕ್-ಇನ್-ಪ್ರೊಗ್ರೆಸ್), ಶೋಧಿತ ಸಾಮಗ್ರಿ, ಪರೋಕ್ಷ ಸಾಮಗ್ರಿ ಮುಂತಾದವು ಹಣಕ್ಕಿಂತ ಹೆಚ್ಚು ಮುಖ್ಯ. ಕೆಲವು ವೇಳೆ ಹಣವನ್ನಾದರೂ ದೊರಕಿಸಿಕೊಳ್ಳಬಹುದು : ಆದರೆ ಸಾಮಗ್ರಿಗಳು ದೊರೆಯುವುದು ಕಷ್ಟ. ಉತ್ಪಾದನ ವಸ್ತುವಿನ ವೆಚ್ಚದಲ್ಲಿ ಸಾಮಾನ್ಯವಾಗಿ ಶೇಕಡಾ 50ರಿಂದ 80 ಭಾಗ ಸಾಮಗ್ರಿ ವೆಚ್ಚವೇ ಆಗಿರುತ್ತದೆ. ಆದ ಕಾರಣ ಇದರ ಬಗ್ಗೆ ಉತ್ಪಾದನೆಗೆ ಪೂರ್ವಭಾವಿಯಾಗಿ ಜಾಗರೂಕತೆಯಿಂದ ನಿರ್ಧಾರ ಕೈಗೊಳ್ಳುವುದು ಅತಿಮುಖ್ಯ. ಸರಿಯಾದ ಕಾಲಕ್ಕೆ ಸಾಮಗ್ರಿಯ ಸರಬರಾಜು ನಿಂತುಹೋದರೆ ಉತ್ಪಾದನೆಯನ್ನೇ ನಿಲ್ಲಿಸಬೇಕಾಗುತ್ತದೆ. ಅಥವಾ ಉತ್ತಮಗುಣದ ಸಾಮಗ್ರಿ ಕೊಳ್ಳದೆ, ವೆಚ್ಚ ಕಡಿಮೆಮಾಡುವ ಉದ್ದೇಶದಿಂದ ಕಡಿಮೆ ಬೆಲೆಯ ಸಾಮಗ್ರಿ ಕೊಂಡು ಅದರಿಂದ ಪದಾರ್ಥ ತಯಾರಿಸಿದರೆ, ಗುಣಮಟ್ಟ ಕಡಿಮೆಯಾಗಿ ಬೇಡಿಕೆಯೇ ಇಲ್ಲದೆ ಸಂಸ್ಥೆ ನಷ್ಟ ಹೊಂದಬೇಕಾಗುತ್ತದೆ.

ಈ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉತ್ಪಾದಿಸಲು ಎಷ್ಟು ಸಾಮಗ್ರಿ ಬೇಕು? ಎಷ್ಟು ಸಾಮಗ್ರಿ ಉಗ್ರಾಣದಲ್ಲಿ ಇರಬೇಕು? ಎಷ್ಟನ್ನು ಕೊಳ್ಳಬೇಕು, ಎಷ್ಟನ್ನು ಸಂಸ್ಥೆಯಲ್ಲೇ ಉತ್ಪಾದಿಸಬೇಕು? ಇವುಗಳನ್ನು ನಿರ್ಧರಿಸುವುದು ಬಹಳ ಕಷ್ಟ. ಹೆಚ್ಚು ಸಾಮಗ್ರಿ ಕೊಂಡು ತಂದು ಇಟ್ಟುಕೊಂಡು ಅದರ ಉಪಯೋಗ ಬಹಳವಾಗಿಲ್ಲದಿದ್ದರೆ ಅದರ ಮೇಲೆ ನಿಯೋಜಿಸಿದ ಬಂಡವಾಳ ವ್ಯರ್ಥ. ದಾಸ್ತಾನು ವೆಚ್ಚ, ಸಾಮಗ್ರಿ ನಿರುಪಯೋಗಿಯಾಗುವ ಸಂಭವ, ನಷ್ಟ ಇತ್ಯಾದಿ ಕಾರಣಗಳಿಂದ ಸಾಮಗ್ರಿಯ ವೆಚ್ಚ ಏರಿ ಉತ್ಪಾದನವೆಚ್ಚ ಹೆಚ್ಚುತ್ತದೆ. ಒಂದು ವೇಳೆ ಕಡಿಮೆ ಪರಿಮಾಣದಲ್ಲಿ ಸಾಮಗ್ರಿ ಕೊಂಡು ದಾಸ್ತಾನು ಮಾಡಿದರೆ, ಕಡೆಯಲ್ಲಿ ಸಾಮಗ್ರಿ ಸಾಲದೆ ಉತ್ಪಾದನೆಯನ್ನು ನಿಲ್ಲಿಸಬೇಕಾಗಬಹುದು. ಗುಣ, ವೆಚ್ಚ, ಉಪಯೋಗ, ಗಾತ್ರ ಇತ್ಯಾದಿಗಳನ್ನು ಹೆಚ್ಚಿಗೆ ಗಮನದಲ್ಲಿ ಇಟ್ಟುಕೊಂಡು ಈ ಬಗ್ಗೆ ನಿರ್ಧರಿಸಬೇಕು. ಇದರ ಜೊತೆಯಲ್ಲಿ ಮಿತವಾಗಿ ಕೊಳ್ಳುವಿಕೆಯಿಂದ ಆಗುವ ಲಾಭ, ಉತ್ಪಾದನೆಗೆ ಅಗತ್ಯವಾಗಿ ಬೇಕಾಗುವ ಸಾಮಗ್ರಿಯ ಪರಿಮಾಣ, ದಾಸ್ತಾನಿನಲ್ಲಿ ಮೀಸಲಿಡಬೇಕಾದ ಪ್ರಮಾಣ ಇತ್ಯಾದಿ ವಿಷಯಗಳನ್ನೂ ತಿಳಿದುಕೊಂಡು ವೆಚ್ಚಕ್ಕೆ ಸಮತೂಗುವಂತೆ ಕೊಳ್ಳುವಿಕೆಯನ್ನು ನಿರ್ಧರಿಸಬೇಕು.

ಸಾಮಗ್ರಿಗಳನ್ನು ಕೊಳ್ಳುವುದೇ ಮುಖ್ಯವಲ್ಲ. ಅದನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸುವುದೂ ಅವಶ್ಯಕ. ಹಣಕ್ಕಿಂತ ಮಿಗಿಲಾದ ಸಾಮಗ್ರಿಗಳು ಹಾಳಾಗದಂತೆ ನೋಡಿಕೊಳ್ಳುವುದು ಮುಖ್ಯ. ಇದಕ್ಕಾಗಿ ಅನೇಕ ಕ್ರಮ ಕೈಗೊಳ್ಳಬೇಕು.[]

ಸಾಮಗ್ರಿಗಳನ್ನು ಸ್ವೀಕರಿಸಿದ್ದಕ್ಕೂ ಅದನ್ನು ಅನೇಕ ವಿಭಾಗಗಳಿಗೆ ಸರಬರಾಜು ಮಾಡಿದ್ದಕ್ಕೂ ಸಾಮಗ್ರಿಗಳ ಖಾತೆಯಲ್ಲಿ ದಾಖಲೆ ಮಾಡಬೇಕು. ಪ್ರತಿಯೊಂದು ಸಾಮಗ್ರಿಗೂ ಒಂದೊಂದು ಸಂಕೇತ ಕೊಡಬೇಕು. ನಿರ್ದಿಷ್ಟ ಸಾಮಗ್ರಿಯನ್ನು ಸುಲಭವಾಗಿ ಪತ್ತೆ ಹಚ್ಚುವುದಕ್ಕೂ ಸಾಮಗ್ರಿಗಳ ವಿಷಯಗಳನ್ನು ಗೋಪ್ಯವಾಗಿ ಇಡುವುದಕ್ಕೂ ಈ ಸಂಕೇತ ಸಹಾಯಕ. ಪ್ರತಿಯೊಂದು ಸಾಮಗ್ರಿಗೂ ಗರಿಷ್ಠ ಪ್ರಮಾಣದ ಮಟ್ಟ, ಕನಿಷ್ಠ ಪ್ರಮಾಣದ ಮಟ್ಟ, ಅಪಾಯ ಪ್ರಮಾಣದ ಮಟ್ಟ, ಹೊಸದಾಗಿ ಸಾಮಗ್ರಿ ಸರಬರಾಜಿಗಾಗಿ ಬೇಡಿಕೆ ಕಳುಹಿಸಬೇಕೆಂಬುದನ್ನು ಸೂಚಿಸುವ ಮಟ್ಟ (ಆರ್ಡರಿಂಗ್ ಲೆವೆಲ್) ಇತ್ಯಾದಿ ಮಟ್ಟಗಳ ಸೂಚನೆಯಿಂದ ವೃಥಾ ಬಂಡವಾಳವನ್ನು ಸಾಮಗ್ರಿಗಳ ಮೇಲೆ ಹೂಡುವುದು ತಪ್ಪುವುದಲ್ಲದೆ, ಸರಕುಗಳನ್ನು ಸಕಾಲದಲ್ಲಿ ಸರಬರಾಜು ಮಾಡಿಕೊಳ್ಳಲು ಸಹಾಯಕವಾಗುತ್ತದೆ. ನಿರಂತರ ಸಾಮಗ್ರಿ ನಿಯಂತ್ರಣದಿಂದ (ಪರ್ಪೆಚುಯಲ್ ಇನ್‍ವೆಂಟರಿ ಕಂಟ್ರೋಲ್) ನಷ್ಟ ಹೊಂದಿದ, ಹಾಳಾದ, ಉಪಯೋಗಿಸದೆ ಇರುವ ವಸ್ತುಗಳ ಪತ್ತೆ ಸಿಕ್ಕಿ, ಈ ಸಮಸ್ಯೆಯ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು ಸಾಧ್ಯ. ಯಾವ ಕಾಲದಲ್ಲಿ ಎಷ್ಟು ಸರಕು ಇದೆ, ಮುಂದಕ್ಕೆ ಎಷ್ಟು ಬೇಕು, ಈಗ ಇರುವ ವಸ್ತುವಿನ ಮೌಲ್ಯವೇನು-ಮುಂತಾದ ವಿಷಯಗಳನ್ನು ಇದು ತಿಳಿಸುತ್ತದೆ. ಇದರಿಂದ ಮುಂದಿನ ಯೋಜನೆ ತಯಾರು ಮಾಡುವುದು ಸುಲಭ.

ಈ ರೀತಿ ಪ್ರತಿಯೊಂದು ಹಂತದಲ್ಲೂ ಸಮಸ್ಯೆಗಳು ಕೈಮೀರಿ ಹೋಗದಂತೆ ಎಚ್ಚರ ವಹಿಸಿ, ಸಾಮಗ್ರಿಗಳ ಬಗ್ಗೆ ಯೋಗ್ಯ ತೀರ್ಮಾನ ಕೈಕೊಂಡು ಉತ್ಪಾದನೆಯ ನಿರ್ವಹಣೆ ಮಾಡಲು ಇದು ಸಹಾಯಕವಾಗಬೇಕು.

ಶ್ರಮನಿರ್ಣಯ : ಉತ್ಪಾದನೆಯ ಕಾರ್ಯದಲ್ಲಿ ಎರಡನೆಯ ಮುಖ್ಯ ಅಂಗವಾದ ಶ್ರಮದ ಪಾತ್ರ ಬಲು ಹಿರಿದು. ಸಾಮಗ್ರಿಗಳು ಇದ್ದಮಾತ್ರಕ್ಕೆ ಉತ್ಪಾದನೆ ಸಾಧ್ಯವಿಲ್ಲ. ಅವನ್ನು ಸೂಕ್ತರೀತಿಯಲ್ಲಿ ಹೊಂದಿಸಿ ಮಾರ್ಪಡಿಸಿದರೆ ಮಾತ್ರ ಪರಿಪೂರ್ಣ ಉತ್ಪನ್ನ ಸಾಧ್ಯ. ಈ ಮಾರ್ಪಾಟಿನ ಕಾರ್ಯ ನಡೆಯುವುದು ಕಾರ್ಮಿಕರಿಂದ. ಇವರ ಬಗ್ಗೆ ಸೂಕ್ತ ನಿರ್ಧಾರ ಅತ್ಯಂತ ಮುಖ್ಯ.

ಈ ಬಗ್ಗೆ ನಿರ್ಧಾರ ಕೈಕೊಳ್ಳಲು ಕಾರ್ಮಿಕಾಧಿಕಾರಿಯ ಸಹಾಯ ಪಡೆಯಬೇಕು. ಪದಾರ್ಥದ ಉತ್ಪಾದನೆಗೆ ಯಾವ ಯಾವ ಬಗೆಯ ಪರಿಣತಿ ಪಡೆದವರು ಎಷ್ಟು ಸಂಖ್ಯೆಯಲ್ಲಿ ಎಷ್ಟು ಕಾಲಕ್ಕೆ ಬೇಕು ಎಂಬುದನ್ನು ನಿರ್ಧರಿಸಿ, ಈಗ ಇರುವವರ ಸಂಖ್ಯೆಯೊಡನೆ ತುಲನೆಮಾಡಿ, ಸಾಲದಿದ್ದರೆ ನೇಮಕ ಮಾಡಿಕೊಳ್ಳಬೇಕು. ಶ್ರಮ ನಷ್ಟವಾಗದಂತೆ ನೋಡಿಕೊಳ್ಳುವ ಸಲುವಾಗಿ, ಕಾಲದ ಅಧ್ಯಯನ (ಟೈಮ್ ಸ್ಟಡಿ), ಚಲನೆಯ ಅಧ್ಯಯನ (ಮೋಷನ್ ಸ್ಟಡಿ) ಮುಂತಾದವುಗಳ ಸಹಾಯದಿಂದ ಪ್ರತಿಯೊಂದು ಕೆಲಸಕ್ಕೂ ಎಷ್ಟು ಕಾಲ ಬೇಕು, ಇದನ್ನು ಹೇಗೆ ಮಾಡಬೇಕು ಎಂಬುದನ್ನು ಪೂರ್ವಭಾವಿಯಾಗಿ ತೀರ್ಮಾನಿಸಿ ಅದರಂತೆ ಮಾರ್ಗದರ್ಶನ ಮಾಡಬೇಕು. ಈ ಅಧ್ಯಯನದ ಫಲವಾಗಿ ಕೆಲಸಗಾರನ ಕುಶಲತೆಯನ್ನು ಅಳೆಯಲೂ ಬಹುದು. ಉತ್ತಮ ಕೆಲಸ ಪಡೆದುಕೊಳ್ಳಲೂಬಹುದು.

ಸೌಲಭ್ಯಗಳ ಬಗ್ಗೆ ನಿರ್ಧಾರ

ಬದಲಾಯಿಸಿ

ಬದಲಾಗುತ್ತಿರುವ ಬೇಡಿಕೆಗಳನ್ನು ಪೂರೈಸಲು ಹೊಸ ಹೊಸ ಪದಾರ್ಥಗಳನ್ನು ತಯಾರು ಮಾಡಬೇಕಾಗುತ್ತದೆ. ಹಾಗೆ ತಯಾರು ಮಾಡಲು ಈಗ ಇರುವ ಸಾಧನ ಸೌಲಭ್ಯಗಳು ಉಪಯೋಗಕ್ಕೆ ಬಾರದೆ ಅವುಗಳ ಬದಲಾವಣೆಯ ಅವಶ್ಯಕತೆ ಕಂಡುಬರುತ್ತದೆ. ಪದಾರ್ಥ ಉತ್ಪಾದಿಸುವುದಕ್ಕೆ ಮೊದಲು ಭೌತಿಕ ಸೌಲಭ್ಯಗಳ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಸ್ಥಳ, ಯಂತ್ರ, ಸಾಮಗ್ರಿ, ಮೇಲ್ವಿಚಾರಣೆ ಇವೇ ಅಲ್ಲದೆ, ಮೊದಲು ಉತ್ಪಾದನೆಯ ಸ್ಥಳದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಉತ್ಪಾದಿಸುವ ವಸ್ತುವಿಗೆ ಹೆಚ್ಚಿನ ಬೇಡಿಕೆ ದೊರೆಯುವ, ಕಡಿಮೆ ಸಾಗಾಣಿಕೆ ವೆಚ್ಚದಲ್ಲಿ ಸಾಮಗ್ರಿಗಳು ದೊರೆಯುವ, ಉತ್ತಮ ಹವಾಗುಣವಿರುವ, ಸುಲಭ ದರದಲ್ಲಿ ಕೆಲಸಗಾರರು ದೊರೆಯುವ, ಪೈಪೋಟಿ ಅಥವಾ ಸಹಕಾರಿ ಕಾರ್ಖಾನೆಗಳ ಉಪಸ್ಥಿತಿ ಅಥವಾ ಅನುಪಸ್ಥಿತಿಯಲ್ಲಿರುವ, ಕಡಿಮೆ ಬೆಲೆಯಲ್ಲಿ ನಗರಗಳಿಗೆ ಹತ್ತಿರವಾಗಿರುವ, ಮುಂದೆ ಅಭಿವೃದ್ದಿಪಡಿಸಿಕೊಳ್ಳಲು ಉತ್ತಮ ಅವಕಾಶಹೊಂದಿರುವ ಸ್ಥಳವನ್ನು ಆರಿಸಬೇಕು.

ಸ್ಥಳದ ಆಯ್ಕೆಯಾದ ಮೇಲೆ ಭವನದ ಒಳಗಡೆಗೆ ಬೇಕಾದ ಸಾಧನ ಸಲಕರಣೆಗಳನ್ನು ಆರ್ಥಿಕ ಮತ್ತು ತಾಂತ್ರಿಕ ವಿಚಾರಗಳ ಕಡೆಗೆ ಗಮನ ಕೊಟ್ಟು ಆರಿಸಿಕೊಳ್ಳಬೇಕು. ಉತ್ಪಾದಿಸುವ ವಸ್ತುವಿನ ಗುಣಲಕ್ಷಣ ಮತ್ತು ಉತ್ಪಾದಿಸುವ ರೀತಿನೀತಿ ಇವುಗಳಿಗೆ ಅನುಗುಣವಾದ ಯಂತ್ರ ಸಾಧನ ಸಲಕರಣೆ ತರಬೇಕು. ಸ್ಥಳಾಭಾವವಿರುವುದರಿಂದ ಕಡಿಮ ಸ್ಥಳದಲ್ಲೇ ಸಾಮಗ್ರಿ ಸಂರಕ್ಷಿಸಲು, ಯಂತ್ರಗಳನ್ನು ಸ್ಥಾಪಿಸಲು, ಆಡಳಿತದ ಕಾರ್ಯಗಳನ್ನು ನಿರ್ವಹಿಸಲು ಉತ್ಪಾದಿಸಿದ ಪದಾರ್ಥಗಳನ್ನು ಸಂಗ್ರಹಿಸಿ ಇಡಲು. ಉತ್ತಮ ವಾಹನಮಾರ್ಗ ಹೊಂದಲು ಯೋಜಕರು ಸ್ಥಳಮಾಡಿಕೊಡಬೇಕು. ಒಂದು ಸಲ ನಿರ್ಧರಿಸಿಕೊಂಡ ಸ್ಥಳವನ್ನು ಮತ್ತೊಂದು ಸಲ ಬದಲಾಯಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಸ್ಥಳದ ರೂಪರೇಖೆಯನ್ನು ಬಹಳ ಬುದ್ಧಿವಂತಿಕೆಯಿಂದ ಮಾಡಬೇಕು.

ಯೋಜಿತ ಪದಾರ್ಥಗಳನ್ನು ತಯಾರು ಮಾಡಲು ಯಾವ ಯಾವ ಸಲಕರಣೆಗಳು ಬೇಕು ಎಂಬುದನ್ನು ಯೋಜಿಸಿ. ಹೆಚ್ಚು ಬಾಳಿಕೆ ಬರುವ, ಪದಾರ್ಥದ ಗುಣ ಹೆಚ್ಚಿಸುವ, ಚಿನ್ನಾಗಿ ಕೆಲಸಮಾಡುವ, ಯಂತ್ರೋಪಕರಣಗಳನ್ನು ಕಡಿಮೆ ವೆಚ್ಚದಲ್ಲಿ ದೊರಕಿಸಿಕೊಳ್ಳಬೇಕು.

ಈ ರೀತಿಯಾಗಿ ಪ್ರತಿಯೊಂದು ವಿಚಾರದಲ್ಲೂ ವೆಚ್ಚದ ನಿಯಂತ್ರಣ ಮಾಡದಿದ್ದರೆ ಉತ್ಪಾದನ ವೆಚ್ಚ ಹೆಚ್ಚಾಗಿ, ಉತ್ಪನ್ನದ ಬೆಲೆ ಏರಿ, ಪದಾರ್ಥಕ್ಕೆ ಬೇಡಿಕೆ ಕಡಿಮೆಯಾಗಿ ಸಂಸ್ಥೆ ನಷ್ಟ ಹೊಂದುವ ಸ್ಥಿತಿಗೆ ಬರುತ್ತದೆ. ಈ ಎಲ್ಲ ವಿಷಯಗಳೂ ಉತ್ಪಾದನೆಯ ಕಾರ್ಯಕ್ಕೆ ಸಂಬಂಧಪಟ್ಟಿರುವುದರಿಂದ, ಉತ್ಪಾದನ ನಿರ್ವಾಹಕ ಅತ್ಯಂತ ಜಾಗರೂಕತೆಯಿಂದಲೂ ತೀಕ್ಷ್ಣಬುದ್ಧಿಯಿಂದಲೂ ಇವನ್ನೆಲ್ಲ ನಿರ್ವಹಿಸಬೇಕು. ಅಂದರೆ ಪ್ರತಿಯೊಂದು ಕಾರ್ಯವನ್ನೂ ಯುಕ್ತಾಯುಕ್ತ ಚಿಂತನೆಯಿಂದ ನಿರ್ಧರಿಸಿ. ಅನಂತರ ಪ್ರತಿಯೊಂದು ಘಟ್ಟದಲ್ಲೂ ಆಗಬಹುದಾದಂಥ ಕಷ್ಟ ನಷ್ಟಗಳನ್ನು ನಿಯಂತ್ರಿಸಿ ಪದಾರ್ಥಗಳ ಉತ್ಪಾದನೆ ಮಾಡುವುದೇ ಉತ್ಪಾದನ ನಿರ್ವಹಣೆ. []



ಉಲ್ಲೇಖಗಳು

ಬದಲಾಯಿಸಿ
  1. http://www.yourarticlelibrary.com/production-management/production-management-its-meaning-definition-function-and-scope/27925
  2. https://www.mbatuts.com/concept-production-management/
  3. https://www.mbatuts.com/concept-production-management/
  4. http://www.winman.com/blog/bid/341826/the-basic-principles-of-production-management
  5. "ಆರ್ಕೈವ್ ನಕಲು". Archived from the original on 2020-01-12. Retrieved 2020-01-12.
  6. https://www.managementstudyhq.com/production-management-its-functions-importance.html
  7. https://www.managementstudyguide.com/production-and-operations-management.htm
  8. https://www.britannica.com/technology/production-management