ಉಡುಪಿಯ ಭೂಗತ ತೈಲ ಖಜಾನೆ

ಉಡುಪಿಯ ಸಮೀಪದ ಪಾದೂರು ಎಂಬಲ್ಲಿ ನೆಲದಾಳದಲ್ಲಿ ಸುರಂಗ ಕೊರೆದು ೨೫ ಲಕ್ಷ ಲೀಟರ್ ಪೆಟ್ರೋಲಿಯಂ ದ್ರವವನ್ನು ಶೇಖರಿಸುವ ಕೆಲಸ ಇದೀಗ (ಜನವರಿ ೨೦೧೭) ಆರಂಭವಾಗಿದೆ.[೧] ಯುದ್ಧ ಅಥವಾ ಬೇರಾವುದೇ ಆಪತ್ಕಾಲದಲ್ಲಿ ದೇಶಕ್ಕೆ ಪೆಟ್ರೋಲ್ ಕೊರತೆ ಉಂಟಾದರೆ ಇಂಥ ಖಜಾನೆಯಿಂದ ಕಚ್ಚಾತೈಲವನ್ನು ಹೊರತೆಗೆದು ಸಂಸ್ಕರಣೆ ಮಾಡಿ ಕೆಲವು ದಿನಗಳ ಕಾಲ ಬಳಸಿಕೊಳ್ಳಬಹುದು ಎಂಬುದು ಈ ಖಜಾನೆಯ ಉದ್ದೇಶ. ಪೆಟ್ರೋಲ್ ಮತ್ತು ಡೀಸೆಲ್ ನಮಗೆ ನಿತ್ಯವೂ ಬೇಕೇಬೇಕಾದ ಅನಿವಾರ್ಯ ವಸ್ತುವಾಗಿದೆ. ಪೆಟ್ರೋಲ್ ಬಂಕ್‍ಗಳು ಒಂದು ದಿನದ ಮಟ್ಟಿಗೆ ಸ್ಥಗಿತವಾದರೂ ಪೇಟೆಪಟ್ಟಣಗಳಲ್ಲಿ ಹಾಹಾಕಾರವೇ ಉಂಟಾಗುತ್ತದೆ. ಜೀವನ ಅಸ್ತವ್ಯಸ್ತವಾಗುತ್ತದೆ. ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕೆಂದರೆ ಯಾವ ದಿನವೂ ಯಾವ ಪಟ್ಟಣದಲ್ಲೂ ಪೆಟ್ರೋದ್ರವ ಎಂದೂ ಖಾಲಿಯಾಗದಂತೆ ಕಟ್ಟುನಿಟ್ಟಾದ ಕ್ರಮ ಜಾರಿಯಲ್ಲಿರಬೇಕಾಗುತ್ತದೆ.

ಹಿನ್ನೆಲೆ

ಬದಲಾಯಿಸಿ

ಭಾರತ ದೇಶದಲ್ಲಿ ಎಲ್ಲರಿಗೂ ಸಾಕಾಗುವಷ್ಟು ತೈಲ ಉತ್ಪಾದನೆ ಆಗುತ್ತಿಲ್ಲ. ನಮ್ಮ ಅಗತ್ಯದ ಶೇಕಡಾ ೭೦ ಭಾಗವನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರಬೇಕಾಗುತ್ತದೆ. ಅಕಸ್ಮಾತ್ ವಿದೇಶೀ ಆಮದು ನಿಂತುಹೋದರೆ ಹೆಚ್ಚೆಂದರೆ ಮೂರು ದಿನಗಳ ಕಾಲ ಮಾತ್ರ ಇಂಧನತೈಲವನ್ನು ಪೂರೈಸಬಹುದಾದ ವ್ಯವಸ್ಥೆ ನಮ್ಮಲ್ಲಿತ್ತು. ಅದು ಆಯಾ ಪೆಟ್ರೋಲಿಯಂ ಸಂಸ್ಕರಣಾ ಸ್ಥಾವರಗಳಗಳಲ್ಲಿ ಸಂಗ್ರಹವಾಗಿರುವ ತೈಲ. ನಾಲ್ಕನೆಯ ದಿನ ಅದೂ ಖಾಲಿಯಾದರೆ ದೇಶದ ಸಂಚಾರ ವ್ಯವಸ್ಥೆ ಸ್ಥಗಿತವಾಗುತ್ತದೆ. ಕೆಲವೆಡೆ ವಿದ್ಯುತ್ ಪೂರೈಕೆ ಕೂಡ ಸ್ಥಗಿತವಾಗುತ್ತದೆ. ಒಟ್ಟಾರೆ ಬದುಕೇ ಸ್ಥಗಿತವಾದಂತಾಗುತ್ತದೆ. ಉಡುಪಿ, ಮಂಗಳೂರು ಮತ್ತು ವಿಶಾಖಾಪಟ್ಟಣ ಹೀಗೆ ಮೂರು ಕಡೆ ಭೂಗತ ಖಜಾನೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಉಡುಪಿಯ ಖಜಾನೆಯ ನಿರ್ಮಾಣಕ್ಕೆಂದು ರೂ.೧೬೯೦ ಕೋಟಿ ವೆಚ್ಚ ಮಾಡಲಾಗಿದೆ. ಮಂಗಳೂರು ಬಳಿಯ ಎಮ‍್ಆರ್‍ಪಿಎಲ್ (ಮಂಗಳೂರು ರಿಫೈನರಿ ಅಂಡ್ ಪೆಟ್ರೊಕೆಮಿಕಲ್ಸ್ ಲಿ.) ಆವರಣದಲ್ಲಿ ಕೂಡ ಕಚ್ಚಾತೈಲವನ್ನು ನೆಲದಾಳದ ಗುಹೆಯಲ್ಲಿ ತುಂಬಿಸುವ ವ್ಯವಸ್ಥೆಯಾಗಿದೆ.

ತೈಲಬಾವಿಗಳಿಂದ ಹೊರಕ್ಕೆ ತೆಗೆದ ಕಚ್ಚಾತೈಲವನ್ನು ಹಡಗುಗಳಲ್ಲಿ ತುಂಬಿಸಿ ಅಥವಾ ಕೊಳವೆ ಮಾರ್ಗದ ಮೂಲಕ ಸಂಸ್ಕರಣಾ ಘಟಕಕ್ಕೆ ತಂದು ಅಲ್ಲಿ ದೊಡ್ಡ ಗಾತ್ರದ ಪೀಪಾಯಿಗಳಲ್ಲಿ ತುಂಬಿಸಿ, ಬೇಕಾದಾಗಲೆಲ್ಲ ಅದನ್ನು ಪೆಟ್ರೋಲ್, ಡೀಸೆಲ್, ವಿಮಾನ ಇಂಧನ ಅಥವಾ ಸೀಮೆಎಣ್ಣೆಯನ್ನಾಗಿ ಪರಿವರ್ತಿಸಿ ವಿವಿಧ ನಗರಗಳಿಗೆ ಟ್ಯಾಂಕರ್ ಅಥವಾ ಕೊಳವೆಗಳ ಮೂಲಕ ಸಾಗಿಸುತ್ತಾರೆ. ಯುದ್ಧಕಾಲದಲ್ಲಿ ಸಂಸ್ಕರಣಾ ಘಟಕದ ಮೇಲೆಯೇ ದಾಳಿ ನಡೆಯುವ ಸಂಭವ ಇರುತ್ತದೆ. ಹಾಗಾಗಿ ದಾಳಿಗೆ ತುತ್ತಾಗದ ಹಾಗೆ ನೆಲದೊಳಗಿನ ಗಟ್ಟಿಶಿಲೆಯ ಗುಹೆಗಳನ್ನು ಕೊರೆದು ಅದರಲ್ಲಿ ಕಚ್ಚಾತೈಲವನ್ನು ತುಂಬಿಸಿ ಇಡುವುದು ಆಪತ್ಕಾಲೀನ ಸುರಕ್ಷಾ ಕ್ರಮವೆನಿಸುತ್ತದೆ. ಕಚ್ಚಾತೈಲವನ್ನು ಅಂಥ ಗುಹೆಗಳಿಗೆ ಕೊಳವೆಗಳ ಮೂಲಕ ತುಂಬುತ್ತಾರೆ. ಸುಧಾರಿತ ಎಲ್ಲ ದೇಶಗಳಲ್ಲೂ ಇಂಧನ ಭದ್ರತೆಯ ದೃಷ್ಟಿಯಿಂದ ಇಂಥ ಭೂಗತ ತೈಲನಿಧಿಯನ್ನು ಕಾಪಿಡುವ ವ್ಯವಸ್ಥೆ ಇರುತ್ತದೆ. ಶಿಲೆಯ ಭಿತ್ತಿಗಳ ಮೂಲಕ ತೈಲ ಆಚೀಚೆ ಸೋರಿ ಅಂತರ್ಜಲವನ್ನು ಕಲುಷಿತ ಮಾಡದ ಹಾಗೆ, ಅಥವಾ ತೈಲ ಆವಿಯಾಗದ ಹಾಗೆ, ಅಥವಾ ಗುಹೆಯೊಳಕ್ಕೆ ನೀರು ನುಗ್ಗದ ಹಾಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ. ಬೇಕೆಂದಾಗ ತೈಲವನ್ನು ಪಂಪ್ ಮಾಡಲು ವಿದ್ಯುತ್ ವ್ಯವಸ್ಥೆ, ಪಂಪ್ ಮಾಡಿದ ತೈಲವನ್ನು ಸಂಸ್ಕರಣಾ ಘಟಕಕ್ಕೆ ಸಾಗಿಸಲೆಂದು ಪ್ರತ್ಯೇಕ ಕೊಳವೆಮಾರ್ಗವನ್ನು ಹಾಕಬೇಕಾಗುತ್ತದೆ. ಪಾದೂರಿನ ತೈಲಗುಹೆಗೆ ಕೊಳವೆ ಮಾರ್ಗವನ್ನು ಜೋಡಿಸುವ ಹಂತದಲ್ಲಿ ಕುತ್ಯಾರು, ಪಾದೂರು ಕಳತ್ತೂರು ಗ್ರಾಮಸ್ಥರು ತೀವ್ರ ವಿರೋಧ ಮಾಡಿದ್ದರು.[೨] ಪರಿಹಾರದ ಮೊತ್ತವನ್ನು ಹೆಚ್ಚಿಸಿದ ನಂತರ ಈ ವಿವಾದಕ್ಕೆ ತೆರೆ ಬಿದ್ದಿದೆ.

ಭೂಗತ ತೈಲಾಗಾರಗಳ ನಿರ್ಮಾಣ ಮತ್ತು ಉಸ್ತುವಾರಿಗೆಂದೇ ಕೇಂದ್ರ ಸರಕಾರದ ತೈಲ ಮತ್ತು ನೈಸರ್ಗಿಕ ಸಚಿವಾಲಯದ ಅಡಿಯಲ್ಲಿ ಐಎಸ್‍ಪಿಆರ್‍ಎಲ್ (ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ -ಭಾರತೀಯ ಆಯಕಟ್ಟಿನ ತೈಲನಿಧಿ ನಿಯಮಿತ) ಹೆಸರಿನ ಕಂಪನಿಯನ್ನು ಆರಂಭಿಸಲಾಗಿದೆ.

ಬಾಹ್ಯ ಸಂಪರ್ಕ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. https://www.kannadigaworld.com/kannada/karavali-kn/103001.html
  2. https://www.kannadigaworld.com/kannada/karavali-kn/103001.html