ಉಚ್ಛ್ವಾಸ
ಗಾಳಿಯಿಂದ ಆಮ್ಲಜನಕವು ಶ್ವಾಸಕೋಶಗಳನ್ನು ಪ್ರವೇಶಿಸಿದಾಗ ಉಚ್ಛ್ವಾಸ ಉಂಟಾಗುತ್ತದೆ. ಉಸಿರಾಟದ ಆವರ್ತದ ಭಾಗವಾಗಿ, ಗಾಳಿಯ ಉಚ್ಛ್ವಾಸವು ಎಲ್ಲ ಮಾನವ ಜೀವಿಗಳಿಗೆ ಜೀವನಾಧಾರವಾದ ಪ್ರಕ್ರಿಯೆಯಾಗಿದೆ. ವಾಸ್ತವಿಕವಾಗಿ, ಇದು ತನ್ನಷ್ಟಕ್ಕೆ ತಾನೇ ಆಗುತ್ತಿರುತ್ತದೆ (ಕೆಲವು ರೋಗದ ಸ್ಥಿತಿಗಳಲ್ಲಿ ಅಪವಾದಗಳಿವೆ) ಮತ್ತು ಇದಕ್ಕೆ ಪ್ರಜ್ಞಾಪೂರ್ವಕ ನಿಯಂತ್ರಣ ಅಥವಾ ಪ್ರಯತ್ನ ಬೇಕಾಗಿಲ್ಲ. ಆದರೆ, ಉಸಿರಾಟವನ್ನು (ಒಂದು ಮಿತಿಯೊಳಗೆ) ಪ್ರಜ್ಞಾಪೂರ್ವಕವಾಗಿ ನಿಯಂತ್ರಿಸಬಹುದು ಅಥವಾ ತಡೆಯಬಹುದು. ಉಸಿರಾಟದಿಂದ (ಬದುಕುಳಿಯಲು ಮಾನವರಿಗೆ ಮತ್ತು ಅನೇಕ ಇತರ ಪ್ರಜಾತಿಗಳಿಗೆ ಅಗತ್ಯವಿರುವ) ಆಮ್ಲಜನಕವು ಶ್ವಾಸಕೋಶಗಳನ್ನು ಪ್ರವೇಶಿಸುತ್ತದೆ. ಶ್ವಾಸಕೋಶಗಳಿಂದ ಆಮ್ಲಜನಕವನ್ನು ರಕ್ತಪ್ರವಾಹದಲ್ಲಿ ಹೀರಿಕೊಳ್ಳಬಹುದು.
ಕೆಲವೊಮ್ಮೆ ಗಾಳಿಯ ಬದಲು ಇತರ ಬಾಹ್ಯ ವಸ್ತುಗಳನ್ನು ಗಾಳಿ ಮೂಲಕ ಉಚ್ಛ್ವಾಸ ಮಾಡಬಹುದು, ಉದಾ. ಹೊಗೆ. ಮನರಂಜನಾ ಉದ್ದೇಶಗಳಿಗಾಗಿ ಅನಿಲ ರೂಪದ ಇತರ ವಸ್ತುಗಳನ್ನು ಉಚ್ಛ್ವಾಸ ಮಾಡಬಹುದು. ಉದಾಹರಣೆಗೆ, ಹೀಲಿಯಂ, ನೈಟ್ರಸ್ ಆಕ್ಸೈಡ್‍ನ (ಹಾಸಾನಿಲ/ನಗೆವಾಯು) ಉಚ್ಛ್ವಾಸ ಕಾನೂನುಬದ್ಧವಾಗಿದೆ. ವಿವಿಧ ಅನಿಲ ರೂಪದ, ಆವೀಕೃತ ಅಥವಾ ವಾಯುದ್ರವವಾಗಿ ಪರಿವರ್ತಿತವಾದ ಮನರಂಜನಾ ಮದ್ದುಗಳ ಉಚ್ಛ್ವಾಸವು ಕಾನೂನುಬಾಹಿರವಾಗಿದೆ.
ರೋಗನಿದಾನದ ಉದ್ದೇಶಗಳಿಗಾಗಿ ವಿವಿಧ ವಿಶೇಷ ತನಿಖೆಗಳು ಪರಿಚಿತ ಪದಾರ್ಥಗಳ ಉಚ್ಛ್ವಾಸವನ್ನು ಬಳಸುತ್ತವೆ. ಉದಾಹರಣೆಗೆ ಶ್ವಾಸಕೋಶದ ಕ್ರಿಯೆಯ ಪರೀಕ್ಷೆ (ಉದಾ. ಸಾರಜನಕ ತೊಳೆಯುವಿಕೆ ಪರೀಕ್ಷೆ), ವಿಸರಣ ಸಾಮರ್ಥ್ಯ ಪರೀಕ್ಷೆ (ಕಾರ್ಬನ್ ಮೋನಾಕ್ಸೈಡ್, ಮೀಥೇನ್) ಮತ್ತು ರೋಗನಿದಾನೋದ್ದೇಶದ ವಿಕಿರಣಶಾಸ್ತ್ರ (ಉದಾ. ವಿಕಿರಣಶೀಲ ಜ಼ೆನಾನ್ ಸಮಸ್ಥಾನಿಗಳು).
ಅರಿವಳಿಕೆಯಲ್ಲಿ ಬಳಸಲಾದ ಅನಿಲಗಳು ಮತ್ತು ಇತರ ಮದ್ದುಗಳಲ್ಲಿ ಆಮ್ಲಜನಕ, ಹಾಸಾನಿಲ, ಹೀಲಿಯಂ, ಜ಼ೆನಾನ್, ಬಾಷ್ಪಶೀಲ ಅರಿವಳಿಕೆ ಕಾರಕಗಳು ಸೇರಿವೆ. ದಮ್ಮು, ಗೂರಲು ಕೆಮ್ಮು, ಬಹಿಸ್ಸ್ರಾವಕ ತಂತೂತಕವೃದ್ಧಿಗೆ ಔಷಧಿಗಾಗಿಯೂ ಅನಿಲ ರೂಪದ ವಸ್ತುಗಳನ್ನು ಬಳಸಲಾಗುತ್ತದೆ.
ಉಚ್ಛ್ವಾಸವು ಪಕ್ಕೆಗೂಡಿಗೆ ಜೋಡಣೆಯಾದ ಸ್ನಾಯುಗಳ ಸಂಕೋಚನದಿಂದ ಆರಂಭವಾಗುತ್ತದೆ; ಇದರಿಂದ ಎದೆ ಕುಹರದಲ್ಲಿ ವಿಸ್ತರಣೆ ಉಂಟಾಗುತ್ತದೆ. ನಂತರ ವಪೆಯ ಸಂಕೋಚನದ ಆರಂಭವಾಗುತ್ತದೆ, ಇದರಿಂದ ಶ್ವಾಸಕೋಶ ಕುಹರದ ಸ್ಥಳದ ವಿಸ್ತರಣೆ ಮತ್ತು ಬಾಯ್ಲ್‌ನ ನಿಯಮದ ಪ್ರಕಾರ ಋಣಾತ್ಮಕ ಒತ್ತಡದಲ್ಲಿ ಹೆಚ್ಚಳ ಉಂಟಾಗುತ್ತದೆ. ವಾಯುಮಂಡಲ ಮತ್ತು ಕಿರುಗುಳಿ ನಡುವಿನ ಒತ್ತಡ ವ್ಯತ್ಯಾಸದ ಕಾರಣದಿಂದ ಈ ಋಣಾತ್ಮಕ ಒತ್ತಡವು ಗಾಳಿಪ್ರವಾಹವನ್ನು ಉತ್ಪಾದಿಸುತ್ತದೆ. ಗಾಳಿಯು ಮೂಗು ಅಥವಾ ಬಾಯಿಯಿಂದ ಗಳನಾಳ ಮತ್ತು ಶ್ವಾಸನಾಳವನ್ನು ಪ್ರವೇಶಿಸಿ ಶ್ವಾಸಕೋಶವನ್ನು ಹಿಗ್ಗಿಸುತ್ತದೆ, ನಂತರ ಗಾಳಿಯು ಕಿರುಗುಳಿಗಳನ್ನು ಪ್ರವೇಶಿಸುತ್ತದೆ.