ಉಚ್ಚ, ನೀಚ ಸ್ಥಾನಗಳು

ಉಚ್ಚ, ನೀಚ ಸ್ಥಾನಗಳು: ಸಾಮಾನ್ಯವಾಗಿ ಖಗೋಳವಿಜ್ಞಾನದಲ್ಲಿ ಬಳಸುವ ಪದಗಳು. ಒಂದು ಆಕಾಶಕಾಯವನ್ನು ಕುರಿತು (ಇದರ ಹೆಸರು ಸ್ಥಿರ ಆಕಾಶಕಾಯ) ಇನ್ನೊಂದು ಆಕಾಶಕಾಯದ (ಇದರ ಹೆಸರು ಚರ ಆಕಾಶಕಾಯ) ಕಕ್ಷೆಯಲ್ಲಿ ಅತಿದೂರದ ಬಿಂದು ಚರ ಆಕಾಶಕಾಯದ ಉಚ್ಚಸ್ಥಾನ: ಅತಿ ಸಮೀಪದ ಬಿಂದು ಅದರ ನೀಚಸ್ಥಾನ. ಸೂರ್ಯನ ಸುತ್ತಲೂ ಪರಿಭ್ರಮಿಸುತ್ತಿ ರುವ ಭೂಮಿಯ ಕಕ್ಷೆ (ಆರ್ಬಿಟ್) ದೀರ್ಘ ವೃತ್ತಾಕಾರವಾಗಿದೆ. ಇದರ ಮೇಲೆ ಭೂಮಿ ಜುಲೈ 2ರ ಸುಮಾರಿಗೆ ಉಚ್ಚ ಬಿಂದು(A)ವಿನ ಲ್ಲಿಯೂ ಜನವರಿ 2ರ ಸುಮಾರಿಗೆ ನೀಚ ಬಿಂದು(P)ವಿನಲ್ಲಿಯೂ ಇರುವುದು. ಈ ಬಿಂದುಗಳ ಹೆಸರು ಕ್ರಮವಾಗಿ ಸೂರ್ಯೋಚ್ಚಬಿಂದು (ಅಪ್ಹೇಲಿಯನ್ ಪಾಯಿಂಟ್) ಮತ್ತು ಸೂರ್ಯನೀಚಬಿಂದು (ಪೆರಿಹೀಲಿಯನ್ ಪಾಯಿಂಟ್). ಅವರವಿ ಪುರರವಿ ಪರ್ಯಾಯ ಪದಗಳು ಇದೇ ಪ್ರಕಾರ ಪ್ರತಿಯೊಂದು ಗ್ರಹದ ಕಕ್ಷೆಯ ಮೇಲೂ ಇಂಥ ಎರಡು ಬಿಂದುಗಳಿವೆ. ಭೂಮಿಯನ್ನು ಕುರಿತು ಚಂದ್ರ ರೇಖಿಸುವ ಕಕ್ಷೆಯ ಮೇಲೆ ಭೂಮಿಯಿಂದ ಅತಿದೂರದ ಬಿಂದುವಿನ ಹೆಸರು ಅಪಭೂಮಿ (ಅಪೋಜೀ), ಅತಿ ಸಮೀಪದ ಬಿಂದು ಪುರಭೂಮಿ (ಪೆರಿಜೀ). ಭೂಮಿಯನ್ನು ಕುರಿತು ಸೂರ್ಯನ ಸಾಪೇಕ್ಷ ಕಕ್ಷೆಯಲ್ಲಿಯೂ ಅಪಭೂಮಿ ಮತ್ತು ಪುರಭೂಮಿ ಬಿಂದುಗಳು ಇವೆ. ಉಚ್ಚ, ನೀಚ (ಅಪ-ಪುರ) ಬಿಂದುಗಳನ್ನು ಜೋಡಿಸುವ ರೇಖೆ (AP) ದೀರ್ಘವೃತ್ತ ಕಕ್ಷೆಯ ಪ್ರಧಾನಾಕ್ಷ. ಇದರ ಮೇಲೆ ಕೇಂದ್ರಬಿಂದುವಿನಿಂದ (C) ಸ್ವಲ್ಪ ವಿಚಲಿತವಾಗಿ ಸ್ಥಿರ ಆಕಾಶಕಾಯ (S) ಇದೆ. ಈ ವಿಚಲನೆಯನ್ನು ಅಳೆಯುವ ಪ್ರಮಾಣದ ಹೆಸರು ಕಕ್ಷೆಯ ಉತ್ಕೇಂದ್ರತೆ (ಎಕ್ಸೆಂಟ್ರಿಸಿಟಿ). ಇದನ್ನು e ಪ್ರತೀಕದಿಂದ ಸೂಚಿಸಿದರೆ e= (SA-SP)/(SA+SP) SA, SP ಬೆಲೆಗಳನ್ನು ಪ್ರಾಯೋಗಿಕವಾಗಿ ಅಳೆದು eಯ ಬೆಲೆ ನಿರ್ಧರಿಸಬಹುದು. ಸೂರ್ಯನನ್ನು ಕುರಿತು ಭೂಕಕ್ಷೆಯ ಉತ್ಕೇಂದ್ರತೆ ಸು. 1/60. (ಸಿ.ಎನ್.ಎಸ್.)