ಇಸ್ಲಾಮೀ ವಾಸ್ತುಶಿಲ್ಪ, ಕಲೆ
ಕ್ರಿ. ಶ. 7ನೆಯ ಶತಮಾನದಲ್ಲಿ ಈ ಕಲೆ ಹುಟ್ಟುವುದಕ್ಕೆ ಮುಂಚೆ, ಅಕ್ಕಪಕ್ಕದಲ್ಲಿದ್ದ, ಸಿರಿಯ, ಮೆಸಪೊಟೇಮಿಯ ಮತ್ತು ಇತರ ಪಾಶ್ಚಾತ್ಯ ದೇಶಗಳಲ್ಲಿ ವಾಸ್ತುಶಿಲ್ಪ, ಚಿತ್ರರಚನೆ, ಮುಂತಾದ ಕಲೆಗಳು ಒಂದು ರೀತಿಯ ಮೇಲ್ಮಟ್ಟವನ್ನು ಆಗಲೇ ಸಾಧಿಸಿದ್ದುವು. ಇಸ್ಲಾಮೀ ಕಲೆಯ ಪ್ರಾರಂಭದ ದಶಕಗಳಲ್ಲಿ ವಿಗ್ರಹರಚನೆ, ಅದರ ಆರಾಧನೆ ಮತ್ತು ಚಿತ್ರಕಲೆಯಲ್ಲಿ ಮನುಷ್ಯ, ಪಶು, ಪಕ್ಷಿ ಮುಂತಾದ ಜೀವಿಗಳ ನಿರೂಪಣೆ ಕಂಡುಬರುವುದಿಲ್ಲ. ದೇವರ ವಿನಾ ಮತ್ತೊಬ್ಬರಿಗೆ ಆಕೃತಿಗಳನ್ನು ಸೃಷ್ಟಿಸುವ ಅಧಿಕಾರವಿಲ್ಲವೆಂದು ಅವರು ಭಾವಿಸಿದ್ದರು. ಷಟ್ ದಿಕ್ಕುಗಳನ್ನು ಸೂಚಿಸುವುದು, ಪಂಚೇಂದ್ರಿಯಗಳಿಗೆ ಪರಿಣಾಮವನ್ನುಂಟುಮಾಡುವಂತೆ ಚಿತ್ರರಚನೆ ಮಾಡುವುದು-ಅಂದರೆ ಮುಖ್ಯವಾಗಿ ಉದ್ದ, ಅಗಲ, ಎತ್ತರ ಮತ್ತು ಜೀವಂತವಾದ ಆಕೃತಿಗಳ ರಚನೆ-ಘೋರ ಪಾಪವೆಂದು ಹನಾಫೀಯರು ಭಾವಿಸಿದ್ದರು. ಉದಾರ ಮನಸ್ಸಿನವರಾದ ಷಿಯ ಪಂಗಡದವರು ಈ ನಿಯಮವನ್ನು ಪಾಲಿಸಲಿಲ್ಲ. ಆದ್ದರಿಂದ ಇಸ್ಲಾಮೀ ಕಲೆಯ ಪ್ರಾರಂಭದಲ್ಲಿ ಮಾನವ ಪಶು ಪ್ರಾಣಿಗಳ ಆಕೃತಿಗಳು ಕಾಣವು. ರೇಖಾಗಣಿತದ ಚತುರಶ್ರ, ಮತ್ತು ವಿವಿಧ ಭಂಗಿಗಳ ಸುರಳೀ ರೂಪಗಳು ಕುರಾನ್ ವಚನಗಳನ್ನೊಳಗೊಂಡಂತೆ ಮಾತ್ರ ರಚಿತವಾದುವು ಈ ನಿರೂಪಣೆಯಲ್ಲಿನ ಪುಷ್ಪಲತಾವಿನ್ಯಾಸದ ಕಲ್ಪನಾಶಕ್ತಿ ಗಮನೀಯ.
ಇಸ್ಲಾಂ ಶಿಲ್ಪಾಕೃತಿಗಳು
ಬದಲಾಯಿಸಿರಮ್ಯವಾದ ಇಸ್ಲಾಂ ಶಿಲ್ಪಾಕೃತಿಗಳು ಮತ್ತು ಚಿತ್ರಗಳು ಮುಖ್ಯವಾಗಿ ಸ್ಪೇನ್, ಸಿಸಿಲಿ ಪರ್ಷಿಯ, ತುರ್ಕಿ, ಈಜಿಪ್ಟ್, ಭಾರತ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಭಾರತ, ಚೀನ, ಬಿಜಾಂಟಿಂಗಳ ಪ್ರಾಚೀನ ಧರ್ಮ ಮತ್ತು ಸಂಸ್ಕøತಿಗಳ ಪ್ರಭಾವಗಳು ಕಂಡುಬಂದರೂ ಇಸ್ಲಾಮೀ ಕಲೆಯ ಪ್ರತ್ಯೇಕತೆ ಗಮನಾರ್ಹವಾಗಿ ಉಳಿದುಬಂದಿದೆ.ದಂತದ ಕೆತ್ತನೆ ಮತ್ತು ಕುಂದಣದ ಕೆಲಸ, ನೇಯ್ಗೆಯ ಕೆಲಸ, ಲೋಹ, ಗಾಜು, ಮಡಕೆ, ವಾಸ್ತಶಿಲ್ಪ ಮುಂತಾದವುಗಳ ಅಲಂಕಾರವಿಧಾನದಲ್ಲಿ ಮುಸಲ್ಮಾನರ ಶೈಲಿ ಪಾಶ್ಚಾತ್ಯ ಕಲೆಗಳ ಮೇಲೆ ಪರಿಣಾಮವನ್ನುಂಟುಮಾಡಿತು. ಮಿನಾಯಿ (ಎನಾಮ್ಲ) ಹಾಕುವುದರಲ್ಲಿ ಇಸ್ಲಾಮೀ ಕಲೆ ಮೇಲ್ಮಟ್ಟವನ್ನು ಸಾಧಿಸಲಿಲ್ಲ. ಆದರೆ ಮಡಕೆಗಳಿಗೆ ಬಣ್ಣ ಬಣ್ಣದ ಹೊಳಪು ಕೊಡುವುದರಲ್ಲಿ ನೈಪುಣ್ಯವನ್ನು ಮಾತ್ರ ಸಾಧಿಸಿತ್ತು. ಇದಕ್ಕೆ ವೆಲೆನ್‍ಷಿಯ ಕೇಂದ್ರವಾಗಿತ್ತು. ಅಲ್ಲಿಂದ ಆಮದು ಮಾಡಿದ ಮಡಕೆಗಳು ಪಾಯಿಷರ್ಸ್ ಮಡಕೆಗಳ ತಳಹದಿ ಹಾಕಿದುವು. ಸ್ಪೇನ್ ದೇಶದಿಂದ ಇಟಲಿಗೂ ಹಾಲೆಂಡಿಗೂ ಇಸ್ಲಾಮೀ ಕಲೆಯ ಪ್ರಭಾವ ಹಬ್ಬಿತು. ಸ್ಪೇನ್, ಸಿರಿಯ ದೇಶಗಳಿಂದ ಗಾಜಿಗೆ ಬಣ್ಣ ಹಾಕುವ ಶೈಲಿ ಬಂತು. ಮಡಕೆ ನಿರ್ಮಾಣದಲ್ಲಿ, ನಾನಾ ವರ್ಣಪ್ರಸ್ತರಗಳನ್ನು ಅಳವಡಿಸುವಲ್ಲಿ, ಹೊಳಪು ಕೊಡುವುದರಲ್ಲಿ ಸ್ಪೇನ್ ಮತ್ತು ಪೋರ್ಚುಗಲ್ಲಿನವರು ಇಸ್ಲಾಮಿಯರಿಗೆ ಚಿರಋಣಿಗಳಾಗಿರುತ್ತಾರೆ. ಆದರೆ ಹೊಳೆಯುವ ಮುಡೇಗಾರ್ ಮಡಕೆಗಳು ಚೀನೀಯರ ಮಡಕೆಗಳನ್ನು ಮೀರಿಸಲಾರವು.[೧]
ಮಧ್ಯಯುಗದ ರತ್ನಗಂಬಳಿ
ಬದಲಾಯಿಸಿಮಧ್ಯಯುಗದ ರತ್ನಗಂಬಳಿ ಮುಂತಾದವುಗಳ ನೇಯ್ಗೆಯ ಕೆಲಸದಲ್ಲಿ ಅರಬ್ಬರು ಪ್ರಖ್ಯಾತಿ ಹೊಂದಿದ್ದರೂ ಅವರು ಅಲಂಕಾರ ರಚನೆಯಲ್ಲಿ ಪರ್ಷಿಯನ್ನರಿಗಿಂತ ಮಿಗಿಲೆನಿಸಲಾರರು. ಅಲ್-ಮೌಸಿಲ್ ಪ್ರದೇಶದಿಂದ ಇಟಲಿಗೆ ಆಮದು ಮಾಡಿದ ನಿರ್ಮಲವಾದ ಅತಿ ಪಾರದರ್ಶಕ ಬಟ್ಟೆ, ರೇಶ್ಮೆಯ ಚಪ್ಪರ ಇವು ಮತ್ತೆರಡು ಉದಾಹರಣೆಗಳಾಗಿವೆ. ಅರ್ಥವಿಲ್ಲದ ಬರಹದ ಅಲಂಕಾರ ಮತ್ತು ಅರಬೆಸ್ಕುಗಳಲ್ಲಿ ಪಾಶ್ಚಾತ್ಯ ದೇಶಗಳಲ್ಲಿ 12ನೆಯ ಶತಮಾನದಿಂದ (ಲೋಹ, ಗಾಜು, ಮಡಕೆ, ವಾಸ್ತು ಶಿಲ್, ಅಲಂಕಾರರಚನೆ, ಚಿತ್ರಣ ಮುಂತಾದವುಗಳಲ್ಲಿ) ಇಸ್ಲಾಮೀ ಕಲೆಯನ್ನು ಅನುಕರಿಸಲಾಯಿತು. ಇಂದಿಗೂ ಸ್ಪೇನ್, ಸಿಸಿಲಿ ಮುಂತಾದ ದೇಶಗಳಲ್ಲಿ ಪೂರ್ವ ಪ್ರದೇಶದ ಕಸಬುಗಾರರು ಅಲ್ಲಿಯೇ ಉಳಿದುಕೊಂಡು ತಮ್ಮ ಕಲಾಕೃತಿಗಳಿಗೆ ಇಸ್ಲಾಮೀ ಪಾರಿಭಾಷಿಕ ಪದಗಳನ್ನು ಉಪಯೋಗಿಸುತ್ತಾರೆ.[೨]
ಸ್ಪೇನ್ ದೇಶ
ಬದಲಾಯಿಸಿಸ್ಪೇನ್ ದೇಶದಲ್ಲಿ ಇಸ್ಲಾಂ ಸಂಪ್ರದಾಯದ ವಾಸ್ತುಶಿಲ್ಪದ ಅವಶೇಷಗಳು ಕಾರ್ಡೋವದಲ್ಲಿ ಗ್ರಾನಡ ಪ್ರಾಂತ್ಯದ ಅಲ್-ಹಮ್-ಬ್ರಾನಲ್ಲಿ ನೋಡಬಹುದು. ಜೆರೂಸಲೆಂ ಮತ್ತು ಮೆಕ್ಕಗಳಲ್ಲಿನ ಮಸೀದಿಗಳಿಗೆ ಅವು ಪ್ರಕೃತಿಗಳಾಗಿವೆ. ಅಲ್-ಹಮ್-ಬ್ರಾ ಕಟ್ಟಡ ಕ್ರಿ.ಶ. 786ರಲ್ಲಿ ಅಬ್-ಅಲ್ ರಾಜನಿಂದ ಪ್ರಾರಂಭಗೊಂಡು ಅವನ ವಂಶಿಕರಿಂದ ಪೂರ್ಣಗೊಂಡಿತು. ಅದು ಪಾಶ್ಚಾತ್ಯ ಕಬಾಷ್ ಎಂದು ಪ್ರಖ್ಯಾತಿ ಪಡೆಯಿತು. ಘನವಾದ 1,203 ಸ್ತಂಭಗಳನ್ನೊಳಗೊಂಡ ಅರಣ್ಯದಂತೆ ಕಾಣುವ ಈ ಮಸೀದಿಯಲ್ಲಿ ಕ್ರೈಸ್ತರ ಹಿತ್ತಾಳೆ ಗಂಟೆಗಳಿಂದ ರಚಿಸಲಾದ, ಒಂದು ಸಾವಿರ ಜ್ಯೋತಿಗಳನ್ನೊಳಗೊಂಡ ಒಂದು ಗುಚ್ಛವಿದೆ. ಉಮಾಯದ್ ಮಸೀದಿಗಳನ್ನು ಕಟ್ಟಿದ ಬಿಜಾನ್‍ಟಿಯಂ ಕಲೆಗಾರರು ಇದನ್ನು ಅಲಂಕರಿಸಿದ್ದಾರೆ. ಗ್ರೀಕರ ಕಲೆ ಸಂಸ್ಕøತಿಗಳ ಪ್ರಭಾವ ಇದರ ಗುಂಡಾದ ಕಂಬಗಳ ಮೇಲಿನ ಅಕ್ಯಾಂತಸ್ ಶೃಂಗಾರವನ್ನೊಳಗೊಂಡ ಚತುರರ್ಶರ ಬೋದಿಗೆಗಳಿಂದ ಸ್ಪಷ್ಟವಾಗುತ್ತದೆ. ಬಿಳಿ ಮತ್ತು ಕಪ್ಪು ಬಣ್ಣದ ಕಲ್ಲುಗಳಿಂದ ರೂಪಿಸಿದ ಅರ್ಧಚಂದ್ರಾಕಾರದ ಕಮಾನುಗಳನ್ನು ಈ ಬೋಧಿಗೆಗಳು ಧರಿಸಿವೆ. ಕಂಬಗಳಿಗೆ ಪಾದಗಳಿಲ್ಲ.ಮಧುರವಾದ ಇಸ್‍ಫಾನೋ ಶೈಲಿನ ಶೃಂಗಾರದ ವೈಶಿಷ್ಟ್ಯ ಅಲ್-ಹಮ್-ಬ್ರಾ ವಾಸ್ತುಶಿಲ್ಪದಲ್ಲಿ ಹೇರಳವಾಗಿ ಕಂಡು ಬರುತ್ತದೆ. ಇಲ್ಲಿನ ಮೊಸಾಯಿಕ್ಸ್, ಸ್ಟಾ-ಲಕ್-ಟೈಟ್ಸ್ ಬರಹದ ಅಲಂಕಾರ ಪಕ್ಷಿ ಮೃಗಗಳನ್ನೊಳಗೊಂಡ ಲತಾ ವಿಧಾನದ ಸುರಳೀ ಶೃಂಗಾರವುಳ್ಳ ಸ್ತಂಭಗಳು ವಿವಿಧ ರೂಪಗಳನ್ನೊಳಗೊಂಡ ಬೋಧಿಗೆಗಳು-ಮುಂತಾದುವು ಅತ್ಯದ್ಭುತವಾಗಿದೆ. ಅದರ ಒಳಗಿನ ಅಲಂಕಾರ ಅಬ್-ಅಲ್-ಹಾಜ್ಜಾಜ್ ಕಾಲದಲ್ಲಿ (1333-54) ಪೂರ್ಣಗೊಂಡಿತೆಂದು ಗೋಡೆಗಳ ಮೇಲಿನ ಶಾಸನಗಳಿಂದ ತಿಳಿದುಬರುತ್ತದೆ. ಸಿಂಹಗಳ ಪ್ರಾಂಗಣದಲ್ಲಿ ಅಲ್ಲಿನ ಅತ್ಯುತ್ತಮ ಸೌಂದರ್ಯ ಕಂಡುಬರುತ್ತದೆ. ಅಲ್ಲಿ ಹನ್ನೆರಡು ಅಮೃತಶಿಲೆಯ ಸಿಂಹಗಳು ಗುಂಡಾಗಿ ನಿಂತು ಬಾಯಿಂದ ನೀರನ್ನು ಹೊರಸೂಸುತ್ತವೆ. ಈ ಪ್ರಾಂಗಣ ದೀರ್ಘ ಚತುರರ್ಶರವಾಗಿದ್ದು (126' x 66') 124 ಅಮೃತಶಿಲೆಯ ಕಂಬಗಳುಳ್ಳ ಭವನವಾಗಿದೆ. ಕಂಬಗಳ ಮೇಲೆ ತಗ್ಗಾದ ಕೈಸಾಲೆ ಇದೆ. ಇದರ ಮುಂಭಾಗದಲ್ಲಿನ ಭದ್ರಮಂಟಪ ಪ್ರಾಂಗಣದಲ್ಲಿ ಹೊರಟುಕೊಂಡು ಅದರ ಎರಡು ಪಾಶ್ರ್ವಗಳ ಕೊನೆಗಳಲ್ಲಿ ಅಲಂಕೃತ ಗೋಪುರಗಳಿವೆ. ಪ್ರಾಂಗಣದ ನೆಲಕ್ಕೆ ಬಣ್ಣಬಣ್ಣದ ಹೆಂಚುಗಳನ್ನು ಹಾಸಲಾಗಿದೆ. ಗೋಡೆಗಳ ಮೇಲೆ 5' ಎತ್ತರದ ವರೆಗೂ ಮೇಲೆ ಕೆಳಗೆ ನೀಲಿ ಮತ್ತು ಚಿನ್ನದ ಬಣ್ಣದ ವಜ್ರಾಗಾರೆಯ ರೇಖಾ ಚೌಕಟ್ಟಿನಲ್ಲಿ ಕೂಡಿಸಿದ ನೀಲಿ ಮತ್ತು ಹಳದಿ ಬಣ್ಣಗಳ ಹೆಂಚುಗಳನ್ನು ಅಂಟಿಸಲಾಗಿದೆ. ಸ್ತಂಭಗಳ ಮೇಲಿನ ಕಮಾನುಗಳೂ ಅವುಗಳ ಮೇಲಿನ ಲತಾವಿಧಾನದ ಅಲಂಕಾರವೂ ಅತಿ ಕೋಮಲವಾಗಿವೆ. ಕಮಾನುಗಳು ಮಧ್ಯಭಾಗದಲ್ಲಿ ಜರತಾರಿ ಕಸೂತಿಯಂತೆ ಕಾಣುವ ಚತುರಶ್ರ ಬಿಲ್ಲೆಯ ಕೆಳಗೆ ಮತ್ತೊಂದು ಅರಬೆಸ್ಕ್ ಮಾದರಿಯ ಚಿತ್ತಾರ ಕೂಡ ಇದೆ.
ನ್ಯಾಯಸ್ಥಾನದ ಪಡಸಾಲೆ
ಬದಲಾಯಿಸಿನ್ಯಾಯಸ್ಥಾನದ ಪಡಸಾಲೆಯ ಒಳಮಾಳಿಗೆಯ ಚಿತ್ರಗಳು ತೊಗಲಿನ ಮೇಲೆ ರಚಿತವಾಗಿ ಮುಸಲ್ಮಾನರ ಶೌರ್ಯಸೂಚಕವಾದ ವಿವಿಧ ಬೇಟೆಯ ದೃಶ್ಯಗಳನ್ನು ಒಳಗೊಂಡಿವೆ. ಇಲ್ಲಿನ ಚಿತ್ರರಚನೆಯಲ್ಲಿ ಮೇಲ್ಮಟ್ಟದ ಬಿಜಾನ್‍ಟಿಯಂ ಕಲೆಯ ಮುಖ್ಯಾಂಶಗಳು ವಿಶೇಷವಾಗಿ ಕಂಡುಬರುವುವು. ದೇಶವನ್ನಾಳಿದ ಹತ್ತು ರಾಜರು ವರ್ತುಲಾಕಾರದ ಪೀಠದಲ್ಲಿ ಕುಳಿತಿರುವ ಚಿತ್ರವಿದೆ. ಸ್ತಂಭಗಳು ಸುಂದರವಾದ ಲತಾವಿನ್ಯಾಸದಿಂದ ಶೋಭಿಸುತ್ತಿವೆ. ಇವುಗಳ ಮೇಲಿನ ಲಾಳದಾಕಾರವುಳ್ಳ ಕಮಾನುಗಳು ಇಸ್ಲಾಂ ಮತ ಹುಟ್ಟುವುದಕ್ಕೆ ಮುಂಚೆಯೇ ಭಾರತದಲ್ಲಿ (ಕೆನ್ಹೇರಿ, ಅಜಂತ, ಬಾಜಾ ಗುಹೆಗಳು) ಹೇರಳವಾಗಿದ್ದುವು.ರಾಯಭಾರಿಗಳ ಪಡಸಾಲೆ ಚಚ್ಚೌಕವಾಗಿದೆ (37' x 37'). ಇದು ಇಸ್ಲಾಂ ಸುಲ್ತಾನ ಸಿಂಹಾಸನಾಧಿಷ್ಠನಾಗಿ ದೇಶೀಯ ರಾಯಭಾರಿಗಳಿಗೆ ದರ್ಶನ ಕೊಡುವ ಸ್ಥಳ. 1' ಎತ್ತರದ ವರ್ಣರಂಜಿತ ಹೆಂಚುಗಳನ್ನು ಗೋಡೆಗಳ ಸುತ್ತಲೂ ಹಾಸಿ ಅವುಗಳ ಮೇಲೆ ಹೂವು ಮತ್ತು ಎಲೆಗಳ ಮಧ್ಯದಲ್ಲಿ ಶೋಭಿಸುವ ಶಾಸನಗಳನ್ನೊಳಗೊಂಡ ವರ್ತುಲಾಕಾರದ ಪದಕಗಳನ್ನಿಟ್ಟಿದ್ದಾರೆ. 75' ಎತ್ತರ ಇರುವ ಪಡಸಾಲೆಯ ಗೋಪುರದ ಒಳಮಾಳಿಗೆ ನಕ್ಷತ್ರಗಳಿಂದ ತುಂಬಿ ತುಳುಕಾಡುವ ಆಕಾಶದಂತೆ ವಿನ್ಯಾಸಗೊಂಡಿದೆ. ರಾಯಭಾರಿಗಳ ಪಡಸಾಲೆಯಲ್ಲಿನ ಮೊಸಾಯಿಕ್, ಅರಬೆಸ್ಕ್ ಅಲಂಕಾರ ಭಾರತದಲ್ಲಿ ಅಕ್ಬರ್ ನಿರ್ಮಿಸಿದ ಫತೆಪುರ್ ಸಿಕ್ರಿ ಮುಂತಾದಕಡೆ ಮಾತ್ರ ಕಂಡು ಬರುತ್ತದೆ. ಸುಂದರವಾದ ಜೋಡಿಸಿದ ಮೊಸಾಯಿಕ್ ಹೆಂಚುಗಳ ವಿಧಾನ ಭಾರತದ ಲಾಹೋರ್ ಕೋಟೆಯ ಸೌಂದರ್ಯವನ್ನು ಹೋಲುತ್ತದೆ. ಅಲ್-ಹಮ್ರಾದ ಗಾಂಭೀರ್ಯ, ಅದರ ಒಳಮಾಳಿಗೆಯ ಕೆತ್ತನೆ, ಪಾರದರ್ಶಕ ಪರದೆಯಂತೆ ಕೋಮಲವಾಗಿ ಗಾರೆಯಿಂದ ಕೊರೆದ ಜರತಾರಿ, ಕಸೂತಿ ಕೆಲಸ, ಅತಿ ಉತ್ತಮವಾದ ಅಲಂಕಾರ ಮುಂತಾದವು ಅಲ್ಲಿನ ತಂಪುಗಾಳಿಯಷ್ಟು ನವುರಾಗಿದೆ.
ಸಿಸಿಲಿ ದ್ವೀಪ
ಬದಲಾಯಿಸಿಸಿಸಿಲಿ ದ್ವೀಪದಲ್ಲಿ ಇಸ್ಲಾಂ ಕಲಾ ಅವಶೇಷಗಳು ಹೆಚ್ಚಾಗಿ ಇಲ್ಲ. ಆದರೆ ಅದು ನಾರ್ಮನ್ನರ ಆಡಳಿತಕ್ಕೆ ಬಂದ ಅನಂತರ ಅಲ್-ಹಮ್-ಬ್ರಾ ವೈಶಿಷ್ಟ್ಯವನ್ನು ನೆನಪಿಗೆ ತರುವ ಕಲಾಕೃತಿಗಳೂ ಕ್ರೈಸ್ತರ, ಗ್ರೀಕರ ಮತ್ತು ಚೀನೀಯರ ಸಂಸ್ಕøತಿಗಳ ಮಿಶ್ರಣದವು ಕೆಲವೂ ಉಳಿದುಕೊಂಡಿವೆ. ಅವುಗಳ ಪೈಕಿ ಅತಿ ಮುಖ್ಯವಾದವು ಸುಲ್ತಾನ್ ಮತ್ತು ಅಮೀರ್ಗಳ ಅಂತಃಪುರಗಳಾದ ಲಾ-ಕ್ಯೂಬಾ ಮತ್ತು ಲಾ-ಬೀಜಾ. ಮೀನುಗಳು ಕ್ರೀಡಿಸುವ ಅಮೃತಶಿಲೆಯ ಕೊಳಗಳು, ಅವುಗಳ ಸುತ್ತಿನ ಕೋಮಲವಾದ ಅರಬೆಸ್ಕ್ ಕೆತ್ತನೆ, ಸ್ತಂಭಗಳ ಮೇಲಿನ ಅಡ್ಡಪಟ್ಟಿಗಳ ಶೃಂಗಾರ, ವಿಧವಿಧವಾದ ಗ್ರೀಕರ ಶೈಲಿಯಲ್ಲಿ ಅಲಂಕರಿಸಲಾದ ಬೋದಿಗೆಗಳು, ಹೊಳೆಯುವ ಅಮೃತಶಿಲೆಯ ಕಂಬಗಳು, ಜರತಾರಿ ಕಸೂತಿಯನ್ನು ಮೀರಿಸುವ, ಒಳಮಾಳಿಗೆಯಿಂದ ನೇತಾಡುವ, ನಯಗಾರೆಯಲ್ಲಿ ಕೊರೆದ ಜೇನುಗೂಡುಗಳು-ಮುಂತಾದವು ಹೇರಳವಾಗಿರುವುದಲ್ಲದೆ ವಿಸ್ಮಯಕರವಾಗಿವೆ. ಮಾರ್ಡೋಲ್ಸ್ ಎಂಬ ಸಿಹಿನೀರಿನ ಸರೋವರ ನಾರ್ಮನ್ ರಾಜರಿಗೆ ವಿಶ್ರಾಂತಿಸ್ಥಾನವಾಗಿತ್ತು. ಮುಸಲ್ಮಾನರ ವಾಸ್ತುಶಿಲ್ಪಕ್ಕೆ ಬೆರಗಾಗಿ ಅವರು ಪೆಲೆರ್ಮೊವನ್ನು ತಮ್ಮ ಮುಖ್ಯ ಪಟ್ಟಣವನ್ನಾಗಿ ಮಾಡಿಕೊಂಡರು. ಕ್ರೈಸ್ತರ, ಗ್ರೀಕರ, ಮುಸಲ್ಮಾನರ ಮತ್ತು ಇತರ ವರ್ಣೀಯರ ಸಂಕಟ ಅಲ್ಲಿ ಹೆಚ್ಚಾಗಿತ್ತು. ಈ ಪರಿಸ್ಥಿತಿಯಲ್ಲಿ ರಾಜ ರೋಜರ್ಸ್‍ನಿಂದ ನಿರ್ಮಿತವಾದ (ಕ್ರಿ. ಶ. 1132) ಚಾಪೆಲ್-ರಿಯಲ್ ಹೆಸರಿನ ಸಣ್ಣ ದೇವಾಲಯ ಇಸ್ಲಾಮೀ ಕಲಾದೃಷ್ಟಿಯಲ್ಲಿ ಹೆಸರಾಗಿತ್ತು. ಇದರಲ್ಲಿನ ಸಂಕೀರ್ಣ ಜಾತಿಯ ಬೋದಿಗೆಗಳನ್ನೊಳಗೊಂಡ ಪ್ರಾಚೀನ ಸಂಸ್ಕøತಿಯ ಕಂಬಗಳು, ಅಲ್-ಹಮ್-ಬ್ರಾ ರೀತಿಯ ಓಲಮಾಳಿಗೆ, ಮುಸಲ್ಮಾನರ ಶೈಲಿಯಲ್ಲಿ ಅಲಂಕರಿಸಿದ ಮೊನೆಯುಳ್ಳ ಅರ್ಧಚಂದ್ರಾಕಾರದ ಕಮಾನುಗಳು, ಚಿನ್ನದಿಂದ ಬಳಿದ ಗೋಡೆಗಳಲ್ಲಿನ ಅಮೃತಶಿಲೆಯ ಫಲಕಗಳು. ಚಿನ್ನದ ನೀರೆರದ ಗೋಪುರಗಳು-ಮುಂತಾದವು ರಮಣೀಯವಾಗಿವೆ. ಗೋಡೆಗಳ ಮೇಲೆ, ಗೋಪುರಗಳೊಳಗೆ ಕ್ರೈಸ್ತಮತವನ್ನು ಸಾರುವ ಬೈಬಲ್ ದೃಶ್ಯಗಳು ಮೊಸಾಯಿಕ್ ಶ್ಲಾಘನೀಯವಾಗಿ ಚಿತ್ರಿತವಾಗಿವೆ. ಇದೇ ಉತ್ತಮವರ್ಗಕ್ಕೆ ಸೇರಿದ ಮತ್ತಿತರ ಕ್ರೈಸ್ತ ದೇವಾಲಯಗಳೆಂದರೆ ಲಾ-ಮೊರ್ಟೋರನ, ಪೆಲೆರ್ಮೊ ಕಥೇಡ್ರಲ್ (1300-1426) ಮತ್ತು ಮ್ಯಾನ್‍ರಿಯಲ್ ಕೆಥೆಡ್ರಲ್ (1186).
ಪೆಲೆರ್ಮೊ ದೇವಾಲಯ
ಬದಲಾಯಿಸಿಸತ್ತವರನ್ನು ಪೆಲೆರ್ಮೊ ದೇವಾಲಯದ ನೆಲಮಾಳಿಗೆಯಲ್ಲಿ ಸಮಾಧಿ ಮಾಡುತ್ತಿದ್ದರು. ಇದು ಗ್ರೀಕರ ಅಲಂಕಾರಯುತವಾದ ಸ್ಥೂಲ ಸ್ತಂಭಗಳ ಮೇಲೆ ನಡುನಡುವೆ ಹಾಯುವ ಕಮಾನುಗಳನ್ನೊಳಗೊಂಡ ಗಂಭೀರವಾದ ಕಟ್ಟಡ. ಒಳಗೆ ಹೋದಲ್ಲಿ ಅಲ್ಲಿನ ಚಿನ್ನ ಮತ್ತು ಮೊಸಾಯಿಕ್ ಕಲೆಗಳಿಂದ ಅಲಂಕರಿಸಿದ ಗೋಡೆ ಮುಂತಾದುವು ವಿಸ್ಮಯಕಾರಕವಾಗಿವೆ. ಇಲ್ಲಿ ಕೂಡ ಮೇಲ್ಕಂಡ ಸಂಕೀರ್ಣ ಜಾತಿಯ ಕಲೆ ಕಂಡುಬರುತ್ತದೆ. ಇದರ ಮಠದಲ್ಲಿ (ಕ್ಲಾಯಿಸ್ಟರ್) ಕೂಡ ಸಂಕೀರ್ಣ ಜಾತಿಯ ವಾಸ್ತುಶಿಲ್ಪವಿದೆ. ಇಲ್ಲಿನ ಸ್ತಂಭಗಳು ಒಂದನ್ನು ಮತ್ತೊಂದು ರೂಪದಲ್ಲಾಗಲಿ ಅಥವಾ ಶೃಂಗಾರದಲ್ಲಾಗಲಿ ಹೋಲುವುದಿಲ್ಲ. ಅತ್ಯಂತ ಕುಶಲತೆಯಿಂದ ಸಾಧಿಸಿದ ಇಲ್ಲಿನ ಲಲಿತಾಲಂಕಾರ ಆಶ್ಚರ್ಯವನ್ನುಂಟುಮಾಡುತ್ತದೆ. ಒಂದು ಕಡೆ ಭಾರತ ಸಂಪ್ರದಾಯದ, ಅಮೃತಶಿಲೆಯಲ್ಲಿ ಕೊರೆದ, ಅರಳುವ ಪದ್ಮ, ಅದರ ಮಧ್ಯದಲ್ಲಿ ನಾರ್ಮನ್ ಶೈಲಿಯಲ್ಲಿ ಕೆತ್ತಿರುವ ವಕ್ರಾಲಂಕಾರ ಸ್ತಂಭೀಯುತ ಗರ್ಭ ಕೇಸರ, ಅದರ ಮೇಲಿನ ಇಸ್ಲಾಂ ರೀತಿಯ ಗುಂಡಾಕಾರದ ತುದಿ, ಮತ್ತೊಂದು ಕಡೆ ಚಿತ್ರವಿಚಿತ್ರವಾದ ಶೃಂಗಾರದಲ್ಲಿ ಒಂದನ್ನು ಮತ್ತೊಂದು ಹೋಲದೇ ಇರುವ ಬೋದಿಗೆಗಳು-ಇವೆಲ್ಲವೂ ಇಸ್ಲಾಂ ಸಂಕೀರ್ಣ ಜಾತಿಯ ಕಲಾ ವೈಶಿಷ್ಟ್ಯಕ್ಕೆ ಕೌಶಲಕ್ಕೆ ಉನ್ನತಮಟ್ಟದ ನಿದರ್ಶನಗಳು.ಪೆಲೆರ್ಮೊ ಪ್ರಾಂತ್ಯದಲ್ಲಿ ಮನೋರಂಜನೆಯ ಅಥವಾ ವಿಶ್ರಾಂತಿಗಾಗಿ ನಿರ್ಮಿಸಿದ ಭವನಗಳು ಸಹ ಇಸ್ಲಾಮೀ ಕಲೆಯನ್ನು ಸಾರುತ್ತವೆ. ಪೆಲಗೋನಿಯ ಯುವರಾಜ ನಿರ್ಮಿಸಿದವುಗಳಲ್ಲಿ ಮನುಷ್ಯ, ಪಶು ಮತ್ತು ಇತರ ಸಂಕೀರ್ಣ ರೂಪಗಳ ಉತ್ಕøಷ್ಟ ವಿವರಣೆ ಕಂಡುಬರುತ್ತದೆ. ಗೋಡೆಗಳೆಲ್ಲ ಕನ್ನಡಿಗಳಿಂದ ಕೂಡಿದ್ದು ಮಹಾಭಾರತದಲ್ಲಿನ ರಾಜಸೂಯಯಾಗದ ಮಯನಿರ್ಮಿತ ಮಂಟಪವನ್ನು ನೆನಪಿಗೆ ತರುತ್ತದೆ. ಇದರಲ್ಲಿನ ಕಳ್ಳ ಬಾಗಿಲುಗಳು, ವನವಾಸಿಗಳ ಮತ್ತು ಕ್ರೈಸ್ತರ ಪ್ರತಿಮೆಗಳು ಅದ್ಭುತವಾಗಿವೆ. ಈ ಭವನಗಳು ಬಾಬರ್, ಮತ್ತು ಜಹಾಂಗೀರ್ ಭಾರತದಲ್ಲಿ ನಿರ್ಮಿಸಿದ ಉದ್ಯಾನವನಗಳ ರೀತಿಯ ಉಪವನಗಳ ಮಧ್ಯೆ ಇದ್ದವೆಂದು ಸಿಸಿಲಿ ದೇಶದ ಚರಿತ್ರಕಾರರು ತಿಳಿಸುತ್ತಾರೆ.
ವಾಸ್ತು ಶಿಲ್ಪ
ಬದಲಾಯಿಸಿವಾಸ್ತು ಶಿಲ್ಪದಲ್ಲಿ ಪರ್ಷಿಯ ಅಂಥ ಘನತೆಯನ್ನು ಸಾಧಿಸಲಿಲ್ಲವಾದರೂ ಚಿತ್ರ ಕಲೆಯಲ್ಲಿ ಮಾತ್ರ ಉನ್ನತಮಟ್ಟದ ಸೊಬಗನ್ನು ಗಳಿಸಿತು. ಪಾರಸಿಕರಲ್ಲಿ ಅಸ್ಸಿರಿಯ ಮತ್ತು ಬ್ಯಾಬಿಲೋನಿಯ ಸಂಸ್ಕøತಿಗಳ ಸಂಯೋಗ ಕಾಣುತ್ತದೆ. ಇಲ್ಲಿನ ಇಸ್ಲಾಮೀ ಕಲೆಯ ಚರಿತ್ರೆ ಎರಡನೆಯ ಸಸೇನಿಯನ್ನರ ಆಡಳಿತದಿಂದ (226-652) ಪ್ರಾರಂಭವಾಯಿತು. ಅದು ವೀರರ ಯುಗ. ಆದಕಾರಣ ಅರ್ತಷೀರ್, ಪಾಪೂರ್, ಬಹ್ರಾಮ್‍ಗೂರ್ ಮುಂತಾದ ವೀರರ ಚರಿತ್ರೆಗಳನ್ನೊಳಗೊಂಡ ಚಿತ್ರರಂಜನೆ ಇದೆ. ಯುದ್ಧದ ಸಂಘಟನೆಗಳು, ಬೇಟೆಯ ದೃಶ್ಯಗಳು, ಮತ್ತು ವನ ನಿರ್ಮಾಣಗಳು ಅಲ್ಲಿ ವರ್ಣಿತವಾಗಿವೆ. ಸಸ್ಸಾನಿಯನ್ನರ ಆಡಳಿತದಲ್ಲಿ ರೂಪರಚನೆ ಕಟುವಾಗಿಯೂ ಬಲಯುತವಾಗಿಯೂ ಇತ್ತು; ಮುಖ ಚಿತ್ರಣ ಸುಧಾರಿಸಿದ್ದರೂ ಶೈಲಿ ಪ್ರಾಚೀನವೇ. ಸಸೇನಿಯನ್ನರ ಕಾಲದಲ್ಲಿ ಮೆನಿಕಿಯನ್ಸ್ ಎಂಬ ಹೆಸರಿನ ಒಂದು ಮತ ಹುಟ್ಟಿತು. ಇದು ಕ್ರೈಸ್ತ ಬೌದ್ಧ ಪಾರಸಿಕ ಮತಗಳ ಸಂಯೋಗ. ಈ ಮತ ಪರ್ಷಿಯದ ಚಿತ್ರ ಕಲೆಯ ಮೇಲೆ ಗಮನಾರ್ಹವಾದ ಪರಿಣಾಮವನ್ನುಂಟುಮಾಡಿತು. ಫಿರ್ದೌಸಿ ನುಡಿದಂತೆ ಮಣಿ ಉತ್ತಮ ದರ್ಜೆಯ ಚಿತ್ರಕಾರ. ಅವನ ಪಂಥದವರ ಪ್ರಖ್ಯಾತ ಕಲಾ ಸೂತ್ರಗಳು ಮುಂದಿನ ಇಸ್ಲಾಮೀ ಕಲೆಯ ಮೇಲೆ ಹೆಚ್ಚಾದ ಪ್ರಭಾವ ಬೀರಿದುವು. ಸಸೇನಿಯನ್ನರ ಹಿಂಸೆಯಿಂದ ಚೀನಕ್ಕೆ ವಲಸೆ ಹೋದ ಕೆಲವರು 271ರಲ್ಲಿ ಪ್ರಸಿದ್ಧವಾದ ಹಸ್ತಲಿಖಿತ ಪುಸ್ತಕದ ಸೂಕ್ಷ್ಮ ಚಿತ್ರಗಳನ್ನು ರಚಿಸಿದರು.
ಪರ್ಷಿಯದ ಇಸ್ಲಾಮೀ ಕಲೆಯ ಚರಿತ್ರೆ
ಬದಲಾಯಿಸಿಪರ್ಷಿಯದ ಇಸ್ಲಾಮೀ ಕಲೆಯ ಚರಿತ್ರೆಯಲ್ಲಿ ಎರಡು ಮುಖ್ಯ ಯುಗಗಳನ್ನು ಗುರುತಿಸಬಹುದು : 1 ಉಮಾಯದ್ ಸುಲ್ತಾನರ ಯುಗ (661-750), ಅಬ್ಬಾಸಿದ್ದ ಸುಲ್ತಾನರ ಯುಗ (750-1258). ಮೊದಲ ಯುಗದಲ್ಲಿ ಮಹಮ್ಮದ್ ಪ್ರಚಾರ ಮಾಡಿದ ನಿರ್ಬಂಧಗಳನ್ನು ಕಲೆಯಲ್ಲಿ ಅನುಸರಿಸಲಾಯಿತು. ಆದಕಾರಣ ಕೇವಲ ಕಲ್ಪನಾರೂಪದ (ಅಬ್‍ಸ್ಟ್ರ್ಯಾಕ್ಟ್) ಅಲಂಕಾರ ಶೈಲಿ ಮಾತ್ರ ಕಂಡುಬರುತ್ತದೆ. ಸೂಕ್ಷ್ಮ ಚಿತ್ರಗಳನ್ನೊಳಗೊಂಡ ಹಸ್ತಲಿಖಿತ ಪುಸ್ತಕಾಲಂಕಾರಕ್ಕೆ ಹೆಚ್ಚು ಮನ್ನಣೆ ಇತ್ತು. ಪ್ರಾರಂಭದಲ್ಲಿ ಲಿಪಿ ಸಂಬಂಧವಾದ ವಿಧಾನದಲ್ಲಿ ರೂಪ ರಚನೆ ಸಾಗಿತು. ಕೆಲವು ಕಾಲಾನಂತರ ಮನುಷ್ಯ ಪಶು ಪಕ್ಷಿ ರೂಪಗಳನ್ನೂ ಸೇರಿಸಲಾಯಿತು. ರೆಕ್ಕೆಗಳುಳ್ಳ ಕುದುರೆಯ ಮೇಲೆ ಮಹಮ್ಮದ್ ಸ್ವರ್ಗಕ್ಕೆ ಹಾರುತ್ತಿರುವ ಚಿತ್ರ ರಚಿತವಾಯಿತು. ನಯಗಾರೆಯ ಮೇಲಿನ ಚಿತ್ರಣ (ಫ್ರಸ್ಕೋ). ಮೊಸಾಯಿಕ್ ರಚನೆಗಳು ಉಮಾಯದ್ ಆಡಳಿತದಲ್ಲಿ (8ನೆಯ ಶತಮಾನ) ಟ್ರಾನ್ಸ್-ಜೋರ್ಡನ್, ಚಿರೂಸಲೆಂ, ಪ್ಯಾಲಿಸ್ಟೈನ್ ಪ್ರದೇಶಗಳಲ್ಲಿ ವಿಪುಲವಾಗಿ ಹುಟ್ಟಿದುವು. ಆದರೆ ಚಿತ್ರಕಲೆ ಷಿಯ ಪಂಗಡಕ್ಕೆ ಸೇರಿದ ಅಬ್ಬಾಸಿದ್ ರಾಜರ ಕಾಲದಲ್ಲಿ ಮಾತ್ರ ಔನ್ನತ್ಯ ಪಡೆಯಿತು. ಈ ಶೈಲಿಯನ್ನು ಮೆಸೊಪೊಟೇಮಿಯ ಸಂಪ್ರದಾಯವೆಂದು ಕರೆಯುತ್ತಾರೆ. ಹಾರೂನ್-ಅಲ್-ರಷೀದನ ಕಾಲದಲ್ಲಿ (786-809) ಹಸ್ತಪ್ರತಿಗಳ ಅಲಂಕಾರ ಅತ್ಯುತ್ತಮ ಮಟ್ಟಕ್ಕೆ ಏರಿತು. ಸುಲ್ತಾನ್ ಮಹಮ್ಮದನ ಕಾಲದಲ್ಲಿ ಫರ್ದೌಸಿಯಿಂದ (1310) ರಚಿತವಾದ ಷಾ ನಾಮ ಹಸ್ತಲಿಖಿತ ಪುಸ್ತಕದಲ್ಲಿ ಚಿತ್ರರಚನೆ ಮತ್ತಷ್ಟು ರಮ್ಯತೆ ಪಡೆಯಿತು. ಇದೇ ರೀತಿಯ ಚಿತ್ರಣ ಸಂಸ್ಕøತ ಹಿತೋಪದೇಶದ ಅನುವಾದ ಮತ್ತು ಇಬ್ನುಲ್-ಮುಖೂಫ ರಚಿಸಿದ ಕಲಿಲ-ವ-ದಿಮ್ನಗಳಲ್ಲೂ (760) ಫಣ್ಣವೀಡ್ರು, ಶಮನೀಡ್ರು (900-1229) ಮತ್ತು ಸೆಲ್‍ಜೂಕರ ಕಾಲದ ಅನೇಕ ಕೃತಿಗಳಲ್ಲೂ ದೊರೆಯುತ್ತವೆ. ಮಂಗೋಲ್ ವಂಶದ ಇಲ್-ಖಾನ್ ಮನೆತನದವರು (1220-1335) ಪರ್ಷಿಯವನ್ನು ಗೆದ್ದ ಅನಂತರ ಚಿತ್ರರಚನೆಯಲ್ಲಿ ಮಂಗೊಲಾಯಿಡ್ ಮುಖವನ್ನು ಉಡುಪುಗಳನ್ನು ಹೊಸ ಜಾತಿಯ ಕುದುರೆಗಳ ರೂಪಗಳನ್ನು ಮತ್ತು ಮುಖ್ಯವಾಗಿ ಚೀನಿಯರ ಕಲಾಸಂಸ್ಕøತಿಯನ್ನು ಪರ್ಷಿಯದ ಕಲೆಗೆ ಕಾಣಿಕೆಯಾಗಿ ನೀಡಿದರು. ಸೂಕ್ಷ್ಮಚಿತ್ರಗಳು ಮತ್ತೊಮ್ಮೆ ಕಲ್ಪನಾಶೈಲಿಯೊಡನೆ ತಲೆದೋರಿದುವು. ಅದಲ್ಲದೆ ಸೂಕ್ಷ್ಮಾಕೃತಿಗಳ ಶೈಲಿ ಪರಿಪೂರ್ಣತೆ ಪಡೆಯಿತು. ಉದಾಹರಣೆ: ಇಬಲ್-ಭಕ್ತಿಷು (1205) ಬರೆದ ನೈಸರ್ಗಿಕ ಚರಿತ್ರೆಯಲ್ಲಿನ ಚಿತ್ರಗಳು ಮತ್ತು ರಶೀದ್-ಅದ್-ದೀನ್ ರಚಿಸಿದ ಪ್ರಪಂಚ ಚರಿತ್ರೆಯ (1247-1318) ಚಿತ್ರಗಳು. ಮೊದಲನೆಯದು ಬಿದ್-ಪೈನ್ ಜಾನವಾರದ ಕಥನವನ್ನು ಹೋಲುತ್ತ ಕ್ರೈಸ್ತರ, ಬೌದ್ಧರ, ಮುಸಲ್ಮಾನರ ಆಧ್ಯಾತ್ಮತತ್ತ್ವವನ್ನು ಸಾರುತ್ತದೆ. ಉತ್ತಮದರ್ಜೆಯ ಚೀನೀ ಕಲೆಯೇ ಶ್ರೇಷ್ಠವಾದುದೆಂದು ಭಾವಿಸಿ, ಎರಡನೆಯದರಲ್ಲಿನ ಚಿತ್ರಗಳಿಗೆ, ಹೆಚ್ಚಾದ ಸನ್ಮಾನವನ್ನು ನೀಡುತ್ತಿದ್ದರು ಈ ಸೂಕ್ಷ್ಮ ಚಿತ್ರಗಳಲ್ಲಿ ವಿಷಯಾಂಶ ಮುಖ್ಯ. ಆದರೆ ರೇಖಾವಿನ್ಯಾಸದಲ್ಲಿ ಕೋಮಲತೆಯಿದ್ದರೂ ಆಕೃತಿರೇಖೆಯಲ್ಲಿ ಬಿಜಾನ್ಟಿಯಂನಿಂದ ಆಬ್ಬಾಸಿದ್ದರು ಅನುಕರಿಸಿದ ಶೈಲಿಯ ಕಟುತ್ವ. ಬಿಕ್ಕಟ್ಟು ಇದ್ದುವು. ಭಾವಪ್ರದರ್ಶನದಲ್ಲಿ ಮಾತ್ರ ಮೇಲ್ಮಟ್ಟವನ್ನು ಸಾಧಿಸಲಾಗಿತ್ತು. ಮುಖಗಳು, ಮುಖವಾಡಗಳಂತೆ, ನಿರ್ಜೀವವಾಗಿದ್ದರೂ ಅವುಗಳ ಅಭಿನಯದ ಭಂಗಿಗಳು ಜೀವಕಳೆಯನ್ನು ಹೊಂದಿದ್ದುವು. ಲಿಪಿಸಂಬಂಧವಾದ ಅಲಂಕಾರದ ಮಧ್ಯದಲ್ಲಿ ಇಡಲಾದ ಈ ರೂಪಗಳ ಸೌಂದರ್ಯ ಮನೋಹರವಾಗಿತ್ತು. ಫಿರ್ದೌಸಿಯ ಷಾ ನಾಮ ಇದೇ ಕಾಲದ್ದು.
ತೈಮುರಿದರ್‍ರ ಕಾಲ
ಬದಲಾಯಿಸಿಅನಂತರ ಬಂದ ತೈಮುರಿದರ್‍ರ ಕಾಲದಲ್ಲಿ (1309-1509) ಈ ರೂಪಚಿತ್ರಣ ಲಿಪಿ ಸಂಬಂಧವಾದ ಅಲಂಕಾರದ ಹಿನ್ನಲೆಯಿಂದ ಪ್ರತ್ಯೇಕಿಸಲ್ಪಟ್ಟು ಎರಡನೆಯ ಮಂಗೋಲರ ದಾಳಿಯ (1381-1392) ಕಾಲದಲ್ಲಿ ಹೊಸ ಮಾಧುರ್ಯ ಪಡೆಯಿತು. ಬರಹದ ಹಿನ್ನೆಲೆ ಕೊನೆಗಂಡು ಪ್ರರ್ಕರತಿ ಚಿತ್ರಣದ ಹಿನ್ನೆಲೆಯಲ್ಲಿ ರೂಪಚಿತ್ರಣ ಹೊಸ ಸೂಕ್ಷ್ಮತೆಯನ್ನೂ ರಮ್ಯತೆಯನ್ನೂ ಹೊಂದಿ ಬೆಳೆಯಿತು. ಪ್ರಕೃತಿ ಸೌಂದರ್ಯ ಚಿತ್ರಣಕ್ಕೆ ಮಾನ್ಯತೆ ದೊರೆತದ್ದು ಈಗಲೇ. ಈ ಚಿತ್ರಗಳಲ್ಲಿ ವೈವಿಧ್ಯವಿತ್ತು. ಸೂಕ್ಷ್ಮ ವಿವರಣೆಯಿತ್ತು. ಲಾಲಿತ್ಯವಿತ್ತು. ಚೀನೀಯರ ಮಿಂಗ್ ಕಾಲದ ನಕ್ಷೆಗಳು. ಪುಷ್ಪಭರಿತವಾದ ಗಿಡಗಳು-ಪ್ರತಿ ಚಿತ್ರದಲ್ಲಿಯೂ ಕಂಡುಬಂದುವು. ಆದರೆ ಸ್ವಲ್ಪ ಕಾಲಾನಂತರ ಪರ್ಷಿಯನ್ನರು ತಮ್ಮ ಸ್ವಾಭಾವಿಕ ಸೌಂದರ್ಯ ಪ್ರಜ್ಞೆಯನ್ನು ಮತ್ತೊಮ್ಮೆ ಪಡೆದು ತಮ್ಮ ಉದ್ದೇಶಗಳಿಗೆ ಅನುಗುಣವಾದ ಮೇಲ್ಮಟ್ಟದ ಅಲಂಕಾರಕ್ಕೆ ತೆರಳಿ, ಚೀನೀ ಕಲೆಯ ಆಧ್ಯಾತ್ಮಿಕ ದೃಷ್ಟಿಯಿಂದ ಪಾರಾದರು. ತೈಮೂರ್ ಒಂದು ಅಚ್ಚುಕಟ್ಟಿನಲ್ಲಿ ಮಾತ್ರ ಸ್ವೇಚ್ಛೆಯನ್ನು ಪ್ರೋತ್ಸಾಹಿಸಿದರೆ, ಅವನ ಮಗನಾದ ಷಾ-ರುಖ್ (1404-1447) ತಂದೆಯ ನಿರ್ಬಂಧಗಳನ್ನು ಸಡಿಲಿಸಿದ, ಇವನ ಕಾಲದಲ್ಲಿನ ಅತ್ಯುತ್ತಮವಾದ ಹಸ್ತಲಿಖಿತ ಸೂಕ್ಷ್ಮಚಿತ್ರಗಳ ಪುಸ್ತಕಗಳು ಎಂದರೆ ಚಂಗೀಸ್ ಖಾನನ ದಿಗ್ವಿಜಯವನ್ನು (1167-1227) ಚಿತ್ರಿಸುವ ಕಾವ್ಯಸಂಗ್ರಹ, ಕಾರ್ಮಾನ್-ಖಾಜು ಕವಿಯ 43 ಕವನಗಳ ಸಂಗ್ರಹ (1281-1350). ಈ ಎರಡರಲ್ಲಿ ವಿನಿಯೋಗಿಸಿದ ಬಣ್ಣಗಳಲ್ಲಿ ಚಿನ್ನದ ನೀರು ಮತ್ತು ಟಾಕ್ರ್ವಾಯಿಸ್ ಪ್ರಾಧಾನ್ಯ ಹೊಂದಿದೆ. ತೈಮೂರ್ ಸುಲ್ತಾನನ ಮೊಮ್ಮಗನಾದ ಸುಲ್ತಾನ್ ಇಸ್ಕಾನ್ ಸಂಗ್ರಹಿಸಿದ ಕವನಗಳ ಹಸ್ತಲಿಪಿಗಳಲ್ಲಿ ಲೈಲಾ-ಮಜನೂ ಪ್ರೇಮದ ಘಟ್ಟವೂ ಮಂಗೋಲರ ಚರಿತ್ರೆಯೂ ಇವೆ. ಸುಲ್ತಾನ್ ಷಾ-ರುಖ್ ಆಡಳಿತದಲ್ಲಿ ರಾಜಧಾನಿ ಹೀರತ್‍ಗೆ ಬದಲಾವಣೆಯಾದುದರಿಂದ ಈ ಕಲಾ ಸಂಪ್ರದಾಯಕ್ಕೆ ಹೀರತ್ ಶೈಲಿ ಎಂದು ಹೆಸರಾಯಿತು. ಈ ಕಾಲದಲ್ಲಿ (1404-1447) ಸೂಕ್ಷ್ಮ ರೂಪರಚನೆ ಔತನ್ಯ ಹೊಂದಿತು. ವಿಶ್ವವಿಖ್ಯಾತ ಕಲೆಗಾರನಾದ ಬಿಜ್ಹದ್ ಈ ಯುಗಕ್ಕೆ ಸೇರಿದವ. ಅಲಂಕಾರವನ್ನು ವಿರಳವಾಗಿಸಿದ್ದೇ ಇವರ ವೈಶಿಷ್ಟ್ಯ.
ಸಫವಿದ್ ಯುಗ
ಬದಲಾಯಿಸಿಸಫವಿದ್ ಯುಗದಲ್ಲಿ (1502-1756) ಸೂಕ್ಷ್ಮಚಿತ್ರರಚನೆ ಮತ್ತಷ್ಟು ಮೇಲ್ಮಟ್ಟಕ್ಕೇರಿತು. ಬಿಜ್ಜದ್ ಶೈಲಿ ಹರಡಿತು. ಮೂಲಪುರುಷನಾದ ಇಸ್ಮಾಯೀಲ್‍ನ ರಾಜಧಾನಿಯಾದ ಟೈಬ್ರಿಜ್óನಲ್ಲಿ ಅಸಂಖ್ಯಾತ ಬರಹಗಾರರೂ, ಕಲೆಗಾರರೂ, ರಾಜ ಪೋಷಣೆಯಲ್ಲಿ ಪಾಲ್ಗೊಂಡರು. ಅವರಲ್ಲಿ ಮಿರಾಕ್, ಕಾಸಿಂಆಲಿ, ಸುಲ್ತಾನ್ ಮಹಮ್ಮದ್ ಮುಂತಾದವರಿದ್ದರು. ಇವರಲ್ಲಿ ಅಗ್ರಸ್ಥಾನ ಪಡೆದಿದ್ದ ಸುಲ್ತಾನ್ ಮಹಮ್ಮದ್ ಸೂಕ್ಷ್ಮಚಿತ್ರರಚನೆಯಲ್ಲೂ ಹಸ್ತಲಿಖಿತ ಪುಸ್ತಕಾಲಂಕಾರದಲ್ಲೂ ಹಳೆಯ ಸಂಪ್ರದಾಯವನ್ನೇ ಅನುಸರಿಸಿದ. ಆತ ಮೀರ್ ಸೈಯದ್ ಆಲಿ ನೈಜಜಾಮಿಯ ಕವನಗಳನ್ನು ಸುಂದರವಾಗಿ ಚಿತ್ರಿಸಿದ್ದಾನೆ. ಸಹ-ಇಡ್ರ ಕಾಲದಲ್ಲಿ ಭಾವಚಿತ್ರಗಳಿಗೆ ಹೆಚ್ಚಾದ ಪ್ರಾಧಾನ್ಯ ದೊರಕಿತು. ಸ್ಪಷ್ಟವಾದ ರೇಖಾ ವಿನ್ಯಾಸದ ಆವರಣದಲ್ಲಿ ಬಣ್ಣ ತುಂಬಿದ ರೂಪಗಳು ಪ್ರಚಾರಕ್ಕೆ ಬಂದುವು. ಈ ಯುಗದಲ್ಲಿ ಅಸಂಪೂರ್ಣ ಸೂಕ್ಷ್ಮಚಿತ್ರಣ, ಮುಖ್ಯಾಂಶಗಳನ್ನು ಮಾತ್ರ ಎತ್ತಿ ತೋರುವ ಉದ್ದೇಶದಿಂದ ಮೊದಲನೆಯ ಬಾರಿ ಚಿತ್ರಿತವಾದವು. ರಿಜಾó-ಅಬ್ಬಾಸಿ ಉತ್ತಮ ದರ್ಜೆಯ ಭಾವಚಿತ್ರಗಳನ್ನೂ ಸಾಮಾನ್ಯ ಜೀವನದ ದೃಶ್ಯಗಳನ್ನೂ ಚಿತ್ರಿಸಿದ. ಖುಸ್ರಾ ಮತ್ತು ಷಿರಿನ ಹಸ್ತಲಿಖಿತ ಪ್ರತಿಯನ್ನು ಕೂಡ (16-17) ಬಣ್ಣಿಸಿರುತ್ತಾನೆ. ಇವನ ಅನಂತರ ಸೂಕ್ಷ್ಮ ಚಿತ್ರಣ ಯೂರೋಪಿಯನ್ನರ ಪ್ರಭಾವದಿಂದ ಕ್ಷೀಣಿಸಿತು. ಆದರೆ, ಸುಸಂಸ್ಕøತಿ ಹೊಂದಿದ ಪಾರಸೀ ಕಲಾವಿದರು ಪಾಶ್ಚಾತ್ಯ ಆವರಣವನ್ನು ಮಾತ್ರ ಅನುಕರಿಸಿಕೊಂಡು ತಮ್ಮ ರೂಪಚಿತ್ರಣದಲ್ಲಿ ಹಿಂದಿನ ಸಂಪ್ರದಾಯವನ್ನೇ ಮುಂದೂ ಹರಡಿದರು. ಸಾಮಾನ್ಯರು ಕಾಂಚನಕಾಂಕ್ಷೆಯಿಂದ ಅಧಮ ದರ್ಜೆಯ ಕಲಾಕೃತಿಗಳ ರಚನೆಯಲ್ಲಿ ಲೀನವಾದರು. ಇದಕ್ಕೆ ಮೀರ್-ಆಫ್ಜಲ್‍ನ ಚಿತ್ರಗಳು ಉದಾಹರಣೆಗಳಾಗಿವೆ.19ನೆಯ ಶತಮಾನದಲ್ಲಿ ಮೆರುಗೆಣ್ಣೆ (ಲ್ಯಾಕರ್) ಚಿತ್ರಗಳು ಮುಂದುವರಿದುವು. ಪರಿಣಾಮವಾಗಿ ಪುಸ್ತಕಗಳ ಹೊದಿಕೆಯ ಅಲಂಕಾರ, ಪೆಟ್ಟಿಗೆ, ಸಂಪುಟ ಮತ್ತು ಗೃಹೋಪಕರಣಗಳ ಶೃಂಗಾರ ಹೆಚ್ಚಿತು. ಭಾರತ ಕಲಾ ಸಂಸ್ಕøತಿಯ ಸಂಪರ್ಕದಿಂದ ಪರಿಣಮಿಸಿದ ಇಸ್ಲಾಂ ಕಲೆ ಮತ್ತಷ್ಟು ವೈಶಿಷ್ಟ್ಯಗಳಿಸಿತು.
ಈಜಿಪ್ಟ್ ಕಲಾಚರಿತ್ರೆ
ಬದಲಾಯಿಸಿಈಜಿಪ್ಟ್ ಕಲಾಚರಿತ್ರೆಯಲ್ಲಿ ಇಸ್ಲಾಮಿನ ಕಾಣಿಕೆ ಪ್ರಶಂಸನೀಯವಾಗಿದೆ. ಕ್ರಿ. ಶ. 1200ರಲ್ಲಿ ಐಬಾಕಿನಿಂದ ಸ್ಥಾಪಿತವಾದ ಮಾಲೂಕ್ ಸುಲ್ತಾನರ ಆಡಳಿತದಲ್ಲಿ ನಿರ್ಮಾತವಾದ ವಾಸ್ತುಶಿಲ್ಪ ಉನ್ನತಮಟ್ಟದ್ದು. ತುರ್ಕರ ಮತ್ತು ಮುಂಗೋಲರ ಸಮ್ಮಿಳಿತದ ಮೊದಲ ಬಾಹ್ರೀ ವಂಶ 1250-1390ರ ವರೆಗೂ ಆಡಳಿತ ನಡೆಸಿತು. ಸುಲ್ತಾನ್-ಅಲ್-ಹಸನ್ ಮಸೀದಿ (1362) 19ನೆಯ ಕಲೀಫ್ ಅಲ್-ಹಸನ್ ಕಾಲದಲ್ಲಿ (1347-61) ನಿರ್ಮಾಣಗೊಂಡಿತು. ಅದರ ರಮ್ಯ, ಭವ್ಯ, ಅಲಂಕರಣಗಳು ಕಲಾಪ್ರಪಂಚಕ್ಕೆ ಅದು ನೀಡಿದ ಕಾಣಿಕೆಯಾಗಿವೆ. ಅದು ಶಿಲುಬೆಯಾಕಾರದ ಮದ್ರಸಾ ಮಿಳಿತವಾದ ಮಸೀದಿ. ಸರ್‍ಕೇಷಿಯ ಪರಂಪರೆ (1382-1517)- ನಿರ್ಮಿಸಿದ ಮಸೀದಿಗಳನ್ನು ಎರಡನೆಯ ಬುರ್ಜೀ ವಂಶದ ಸುಲ್ತಾನರು ಪರಿಪೂರ್ಣತೆಗೆ ತಂದರು. ಹಿಂದಿನ ಗೋಪುರಗಳಂತೆ ಇವರ ಗೋಪುರಗಳು ಸಹ ಹಗುರವಾಗಿಯೂ ಅವುಗಳ ಹೊರಮೇರೆ ಲಘುವಾಗಿಯೂ ಅಲಂಕಾರ ಮತ್ತಿಷ್ಟು ಸೌಂದರ್ಯದಿಂದ ಕೂಡಿಯೂ ಮುಂದುವರಿಯಿತು. ಕಲ್ಲುಕಟ್ಟಡದ ವಿಧಾನದಲ್ಲಿ, ಮುಖ್ಯವಾಗಿ ಕಮಾನುಗಳ ರಚನೆಯಲ್ಲಿ, ಬಿಳಿ ಕಪ್ಪು ಪಟ್ಟಿಗಳ ಪ್ರಾಧಾನ್ಯ ಹೆಚ್ಚಿತು. ರೇಖಾಗಣಿತ ನಕ್ಷೆಗಳ ಅಲಂಕಾರ, ಕೂಫಿಕ್ ಬರಹದ ಶೃಂಗಾರ, ಜೇನುಗೂಡುಗಳಂತೆ ಒಳಮಾಳಿಗೆಯಿಂದ ಜೋಲಾಡುವ ನಯಗಾರೆಯ ಕೆಲಸ, ಇಲ್ಲಿ ಹೆಚ್ಚು ಪ್ರಶಂಸನೀಯವಾಗಿವೆ. ಆದರೆ ಈ ಅಲಂಕಾರದಲ್ಲಿ ಸ್ಪೇನ್, ಪರ್ಷಿಯಗಳ ಕಲೆಗಳಲ್ಲಿ ಹೇರಳವಾಗಿರುವಂತೆ ಪ್ರಾಣಿರೂಪಗಳು ಇಲ್ಲ. ಮಾಮಲೂಕ್‍ರ ಕಾಲದ ಕುಂದಣ ಕೌಶಲ, ಕುರಾನ್ ಹೊದ್ದಿಕೆಗಳ ಮೇಲಿನ ಶೃಂಗಾರಗಳು ಮಧುರವಾಗಿದ್ದು ಇಸ್ಲಾಮೀ ಕಲೆಗೆ ಮೆರಗುಕೊಟ್ಟಿವೆ. ಕ್ವಾ-ಇಟ್-ಬೇ ನಿರ್ಮಿಸಿದ ಮದ್ರಾಸ ಸುಂದರವಾಗಿದೆ. ಸೂಕ್ಷ್ಮಾಕೃತಿಗಳ ರಚನೆಯಲ್ಲಿ ಪ್ರಗತಿ ಸಾಧನೆಯಷ್ಟು ಆಗಿಲ್ಲ. ಆಟೊಮನ್ ಆಡಳಿತ ಈಜಿಪ್ಟ್ ಮತ್ತು ಸಿರಿಯ ಪ್ರದೇಶಗಳಲ್ಲಿ ಹರಡಿದ ಅನಂತರ ಹೊಳೆಯುವ ಹೆಂಚುಗಳ ತಯಾರಿಕೆಯಲ್ಲಿ ವಿನಾ ಉಳಿದಂತೆ ಇಸ್ಲಾಂ ಕಲೆ ಅವನತಿ ಹೊಂದಿತೆಂದೇ ಹೇಳಬಹುದು.
ಸೆಲ್ಯೂಕರು ಬಿಜಾನ್‍ಟಿಯಂ ಆಡಳಿತ
ಬದಲಾಯಿಸಿಸೆಲ್ಯೂಕರು ಬಿಜಾನ್‍ಟಿಯಂ ಆಡಳಿತದಿಂದ ರೋಮನ್ನರ ಪ್ರದೇಶಗಳನ್ನು ಕೈಕೊಂಡ ಅನಂತರ ಇಕೋನಿಯಂ ನಗರ ಕೋನಿಯ ಆಗಿ ಬದಲಾವಣೆ ಹೊಂದಿ ನಂತರ ರಾಜಧಾನಿಯಾಯಿತು. ಸೆಲ್ಯೂಕರು ನಿರ್ಮಿಸಿದ ಭವ್ಯವಾದ ಅಂತಃಪುರ ಹಾಗೂ ಮಸೀದಿಗಳೂ ಪ್ರಖ್ಯಾತವಾದುವು; ಪ್ರಪಂಚವನ್ನು ನೋಡದೇ ಇದ್ದರೂ ಸರಿ, ಕೋನಿಯ ನೋಡಬೇಕು ಎನ್ನುವ ಲೋಕೋಕ್ತಿ ಜಾರಿಗೆ ಬಂತು. ಮ್ಯಾಕ್ ವಂಶದವರ ಪೈಕಿ ಅರೇಬಿಯನ್ ನೈಟ್ಸ್ ಖ್ಯಾತಿಯ ಅಲಾ-ಯನ್-ದೀನ್ (1219-1236) ಕಾಲದಲ್ಲಿ ಕೋನಿಯ ಅಂತರರಾಷ್ಟ್ರೀಯ ಸಂಸ್ಕøತಿಗಳ ಕೇಂದ್ರವಾಗಿ ಪರಿಣಮಿಸಿತು. ಮೆಹ್ಲಾವಿ-ಸೋಫೀ ಎಂಬ ಉದಾರ ಧೋರಣೆಯ ಪಂಥ ಲುದ್ದೀನ್ ರೂಮಿನಿಂದ ಸ್ಥಾಪಿತವಾಯಿತು. ಈ ಪಂಗಡದ ಮುಸಲ್ಮಾನರು ವಿವಿಧ ಮತಗಳ ಆದೇಶಗಳನ್ನು ಖಂಡಿಸುತ್ತ, ದೇವತಾರಾಧನೆಯಲ್ಲಿ ಸಂಗೀತಕ್ಕೂ ತಾಳಮೇಳಕ್ಕೂ ತಕ್ಕಂಥ ಪ್ರಾಧಾನ್ಯ ಕೊಡುತ್ತ, ಕವಿತೆಗೆ, ಚಿತ್ರರಚನೆಗೆ, ನಾಟ್ಯಕಲೆಗೆ ಪ್ರೋತ್ಸಾಹವನ್ನು ನೀಡಿದರು. ಒಟ್ಟಿನಲ್ಲಿ ಅವರು ಕಲೆಯ ಮೂಲಕ ದೇವರನ್ನು ಪಡೆಯಲು ಯತ್ನಿಸಿದರು. ಸೌಂದರ್ಯ ನಿಧಿಯಾದ ದೇವರು ಸೌಂದರ್ಯವನ್ನು ಪ್ರೀತಿಸುತ್ತಾನೆ ಎಂಬ ಮಹಮ್ಮದನ ನುಡಿ ಈ ಮತಕ್ಕೆ ತಳಹದಿಯಾಗಿತ್ತು. ಈ ಪಂಗಡದ ಚಿತ್ರಕಾರರಲ್ಲಿ ಬೆದ್ದ್ರ-ದೀನ್-ಬೆಬ್ರಜಿ, ಬೆದ್ದ್ರ-ದೀನ್-ಯವಸಿ ಅದ್ವಿತೀಯರಾಗಿರುತ್ತಾರೆ. ಆದರೆ ಅಠೊಮನರು 1326ರಲ್ಲಿ ಆಡಳಿತಕ್ಕೆ ಬಂದ ಅನಂತರ 1453 ರಲ್ಲಿ ಬಿಜಾನ್‍ಟಿಯಂ ಅನ್ನು ಗೆದ್ದ ಮೇಲೆ ಕಾನ್‍ಸ್ಟ್ಯಂಟಿನೋಪಲ್ (ಇಸ್ತಾನ್ ಬುಲ್) ರಾಜಧಾನಿ ಆದಮೇಲೆ ಸೇಂಟ್ ಸೋಫಿಯ ದೇವಾಲಯ ಮಸೀದಿಯಾಯಿತು. ಅಲ್ಲಿನ ಕ್ರೈಸ್ತರ ಚಿತ್ರಗಳನ್ನು ಸುಣ್ಣದಿಂದ ಮುಚ್ಚಿ, ಅವುಗಳ ಮೇಲೆ ಮುಸಲ್ಮಾನರ ಗೂಢ ಸಾರಂಶದ ಚಿತ್ರಾಲಂಕಾರವನ್ನು ರಚಿಸಲಾಯಿತು. ಕೂಫಿ ಕೈಬರಹದ ಶೃಂಗಾರ ಚಿಕ್ಕ ದೊಡ್ಡ ಗೋಪುರಗಳ ಮೇಲೆ, ಮಸೀದಿಗಳಲ್ಲಿ ಕಂಡು ಬಂತು.ಆಟೊಮನ್ ಸುಲ್ತಾನರ ಉತ್ಕರ್ಷ ಕಾಲದಲ್ಲಿ ಅಂದರೆ 15, 16ನೆಯ ಶತಮಾನಗಳಲ್ಲಿ ಅಲಂಕಾರ, ಸೌಲಭ್ಯ ಮತ್ತು ಮನೋರಂಜನ ಪ್ರವೃತ್ತಿ ಇಸ್ಲಾಮೀ ಕಲೆಯಲ್ಲಿ ಕಂಡುಬಂದುವು. ಇದರ ಸಾರಾಂಶದ ಶೈಲಿಯಲ್ಲಿ ಕ್ಷೇತ್ರಗಣಿತ ನಕ್ಷೆಗಳೂ ಸೇರಿವೆ. ಆದರೆ ಇದರಲ್ಲಿ ವಾಸ್ತವಿಕತೆ ಇಲ್ಲ. ಸೆಲ್ಯೂಕರ ಅಲಂಕಾರ ವಿನ್ಯಾಸದಲ್ಲಿ ಪ್ರದರ್ಶಿತವಾದ ಮನುಷ್ಯ ಮತ್ತು ಪ್ರಾಣಿಗಳ ರೂಪಗಳು ಇಲ್ಲಿಲ್ಲ. ಪರಿಣಾಮವಾಗಿ ಅಲಂಕಾರದ ಸ್ಥೂಲತೆಯನ್ನು ಕಳೆದುಕೊಂಡು ಹಗುರವಾಗಿದೆ.ಕಾಲಕ್ರಮೇಣ ಮುಸ್ಸವ್ವೀರ್ ಪಂಗಡದ ಕಲೆಗಾರರು ಸಾಮಾನ್ಯ ಜೀವನದ ಅವಶ್ಯಗಳನ್ನೂ ಭಾವಚಿತ್ರಗಳನ್ನೂ ರಚಿಸಿದ ಮೇಲೆ ಬರಹದ ಅಲಂಕಾರ ಕ್ಷೀಣಿಸಿತು. ಜೊತೆಯಲ್ಲಿ ಪುಸ್ತಕಾಲಂಕಾರದ ಸೂಕ್ಷ್ಮ ಚಿತ್ರಗಳು ಹೆಚ್ಚಿದುವು. ಬೇಟೆ, ಅಂತಃಪುರದ ಉತ್ಸವಗಳು ಮತ್ತು ಸಾಮಾನ್ಯ ಜೀವನದ ದೃಶ್ಯಗಳನ್ನೊಳಗೊಂಡ ಫ್ಯೂನರ್-ನಾಮ ಮುಂತಾದ ಹಸ್ತಲಿಖಿತ ಪ್ರತಿಗಳು ತಲೆದೋರಿದುವು.
2ನೆಯ ಮಹಮ್ಮದನ ಆಡಳಿತ
ಬದಲಾಯಿಸಿಆದರೆ 15ನೆಯ ಶತಮಾನದ ಉತ್ತರಾರ್ಧದಲ್ಲಿ 2ನೆಯ ಮಹಮ್ಮದನ ಆಡಳಿತದಲ್ಲಿ (1451-1481) ಪಾಶ್ಚಾತ್ಯ ಕಲೆಗಾರರ ಸಂಪರ್ಕದ ಪರಿಣಾಮವಾಗಿ ಶಾಸ್ತ್ರೀಯ ಇಸ್ಲಾಂ ಕಲೆ ಅಧೋಮುಖವಾಯಿತು. ಭಾವಚಿತ್ರಣ, ಬರಹ, ಅಲಂಕಾರ ಮುಂತಾದವು ಕ್ಷೀಣಿಸಿದುವು. ಹಿಂದೀಬೇ ಸ್ಥಾಪಿಸಿದ ಅಕೆಡೆಮಿ ಆಫ್ ಆಟ್ರ್ಸ್ (1883). ಬುರಾನ್-ಟ್ರೋಪಕ್ ಸ್ಥಾಪಿಸಿದ ಯೂನಿಯನ್ ಆಫ್ ಆಟ್ರ್ಸ್ (1908), ಆಲಿ, ಜಕೀ, ನೂರುಲ್ಲ ಮುಂತಾದವರು ಸ್ಥಾಪಿಸಿದ ಯೂನಿಯನ್ ಸೊಸೈಟಿ ಆಫ್ ಇಂಡಿಪೆಂಡೆಟ್ಸ್ ಮೊದಲಾದ ಸಂಸ್ಥೆಗಳ ಮೇಲೆ ಫ್ರಾನ್ಸಿನ ಪರಿಣಾಮ ವಿಧಾನ (ಇಂಪ್ರೆಸಲಿಸಂ) ಮತ್ತು ಅತಿ ವಾಸ್ತವ್ಯ ವಾದಗಳ (ಸರ್ರಿಯಲಿಸಂ) ಪ್ರಭಾವ ಹೆಚ್ಚಾದಂತೆಲ್ಲ ಇಸ್ಲಾಂ ಕಲೆ ತನ್ನ ವೈಶಿಷ್ಟ್ಯವನ್ನು ಕಳೆದುಕೊಂಡಿತು.
ಭಾರತ ಇಸ್ಲಾಮೀ ಕಲೆ
ಬದಲಾಯಿಸಿಭಾರತ ಇಸ್ಲಾಮೀ ಕಲೆಯಲ್ಲಿ ವಾಸ್ತುಶಿಲ್ಪಕ್ಕೂ ಚಿತ್ರಲೇಖನಕ್ಕೂ ಶತಮಾನವಾದ ಪ್ರಾಧಾನ್ಯ ದೊರಕಿತು. ಪ್ರಾರಂಭದಲ್ಲಿ ಪರ್ಷಿಯನ್ನರ ಕಲೆಯ ಅಭಾವ ಹೆಚ್ಚಾಗಿ ತೋರಿಬಂದರೂ ಭಾರತೀಯ ಕಲಾ ಸಂಪ್ರದಾಯಗಳು, ಮುಖ್ಯವಾಗಿ ಅಕ್ಬರನ ಕಾಲದಲ್ಲಿ ಕಂಡುಬರುತ್ತದೆ. ಸಂಪ್ರದಾಯದ ಗಿಡ, ಹೂವು, ಕಲಶ ಮುಂತಾದುವುಗಳಿಂದ ರಚಿಸಿದ ಚಿತ್ರಾಲಂಕಾರವನ್ನು ಭಾರತೀಯರಿಂದ ಬೌದ್ಧರೂ ಬೌದ್ಧರಿಂದ ಚೀನೀಯರೂ ಅನುಕರಿಸಿದ್ದನ್ನು ಮೆಚ್ಚಿದ ಪರ್ಷಿಯನ್ನರು ತಮ್ಮ ಕಲೆಯಲ್ಲಿ ಅದನ್ನು ತಂದಿದ್ದಾರೆ. ವಾಸ್ತುಶಿಲ್ಪದಲ್ಲಿ ಅರ್ಧಚಂದ್ರಾಕಾರದ ಗೋಪುರಗಳು, ಕಮಾನುಗಳು, ಕುದುರೆಲಾಳದ ರೂಪವನ್ನು ತಾಳಿದ ಕಮಾನುಗಳು ಕೊಠಡಿಗಳಾಗಿ ಕೊರೆದ ಪರದೆ ಮಾದರಿಯ ಕಿಟಿಕಿಗಳು, ಮರೆ ಮಾಡುವ ಅಡ್ಡ ಪಟ್ಟಿಗಳು, ನೀಪ, ಮಲ್ಲಿಕಾ, ಕಮಲ, ಕಲ್ಪಪುಷ್ಪಗಳನ್ನೊಳಗೊಂಡ ಲತಾ ಸುರುಳಿಗಳು, ಕಮಲದಳಪಾದಗಳ ಮೇಲೆ ಕುಂಭಾಕೃತಿಗಳಲ್ಲಿ ಕಡೆದ ಸ್ತಂಭಗಳು, ಅವುಗಳ ಮೇಲೆ ಕಲಶರೂಪದಲ್ಲಿ ರಚಿಸಿದ ಬೋದಿಗೆಗಳಿಂದ ನೇತಾಡುವ ಬಾಳೆ ಅಥವಾ ಕಮಲ ಮೊಗ್ಗುಗಳ ಪದಕಗಳು. ಕಟ್ಟಡದ ಮುಂಭಾಗದಲ್ಲಿನ ಕಮಾನಿನ ಉಭಯ ಪಾಶ್ರ್ವಗಳಲ್ಲಿ ಕಮಾಲಾಕಾರದಂತೆ ಕೆತ್ತಿದ ಅಥವಾ ಕೊರೆದ ಪದಕಗಳು-ಮುಂತಾದವು ಭಾರತ ಸಂಪ್ರದಾಯದವು.
ಮೊಗಲರ ವಾಸ್ತುಕಲೆ
ಬದಲಾಯಿಸಿಮೊಗಲರ ವಾಸ್ತುಕಲೆಯ ಚರಿತ್ರೆಯನ್ನು 3 ಯುಗಗಳಾಗಿ ವಿಭಜಿಸಬಹುದು. ಮೊದಲನೆಯದು ಪ್ರಾಚೀನವಾದದ್ದು. 1199-1411ರ ವರೆಗಿನದು. ಮಧ್ಯಮ ಕಾಲದ್ದು 1414-1510ರ ವರೆಗಿನದು, ಈಚಿನದು 1560-1658ರ ವರೆಗಿನದು. ಕುನಾಕ್-ಉಲ್-ಇಸ್ಲಾಂ ಮಸೀದಿ, ಅದಕ್ಕೆ ಪೂರ್ವದಲ್ಲಿದ್ದ ಭಾರತೀಯರ ದೇವಾಲಯದ ರೂಪಾಂತರ (1199). ಅದರ ಮುಂದಿನ ಹೆಬ್ಬಾಗಿಲ ದಾರಿ ಆಮಲಕ ಆಧಾರವುಳ್ಳ ಕಮಾನುಗಳಿಂದ ಕಟ್ಟಲಾಗಿ, ಪುಷ್ಕಳವಾದ ಸುರುಳಿಗಳಿಂದ ಅಲಂಕೃತವಾಗಿದೆ. ಮಸೀದಿಯಲ್ಲಿನ ಪ್ರಾರ್ಥನೆ ಗೂಡು ಮತ್ತು ಅದರ ಸುತ್ತ ಇರುವ ಗೋಡೆಗಳು ಅತಿ ನಾಜೂಕಾದ ಸುರಳಿ, ನಕ್ಷತ್ರಗಳಿಂದ ತುಂಬಿದೆ, ಕುಂಭಪೀಠಗಳ ಮೇಲಿನ ಅರ್ಧಸ್ತಂಭ ಚಿತ್ರಣ ಭಾರತೀಯ ವಿಧಾನದಲ್ಲಿದ್ದು ಅತ್ಯಂತ ರಮಣೀಯವಾಗಿದೆ. ಇದೇ ಕಾಲದ ಕುತುಬ್ ಮಿನಾರಿನ (1200) ಶೃಂಗಾರದಲ್ಲಿ ಕೂಡ ಭಾರತ ಸಂಪ್ರದಾಯಗಳು ಕಂಡುಬರುತ್ತವೆ. ಇಲ್ಲಿ ರೇಖಾಗಣಿತ ನಕ್ಷೆಗಳ ಅಲಂಕಾರ, ಬರಹಾಲಂಕಾರದ ಸುತ್ತ ಹೆಚ್ಚಾಗಿದೆ. ಇಲ್-ಕಾತ್‍ಮಿರ್ (1235) ಗೋರಿಯ ಅಂತರದಲ್ಲಿ ಇರುವ ಗೋಡೆಗಳು, ಕಮಾನುಗಳು, ಕುಂಭಾಕೃತಿಯ ಕಂಬಗಳು ಮುಂತಾದವುಗಳ ಮೇಲೆ ಬರಹಾಲಂಕಾರ, ಪುಷ್ಪಭರಿತ ಲತಾವಿಧಾನ, ಮೂಲೆ ಮೂಲೆಗಳಿಂದ ನೇತಾಡುವ ಕಮಲ ಮೊಗ್ಗುಗಳು, ಕೊಠಡಿಗಳಾಗಿ ಕೊರೆದ ಅಡ್ಡಪಟ್ಟಿಗಳ ನಮೂನೆಗಳು-ಇವೆಲ್ಲವೂ ಇನ್ನೂ ಮುಂದೆ ಬರುವ ಅಲಂಕಾರ ವಿಧಾನವನ್ನು ಸೂಚಿಸುತ್ತವೆ. ಇಲ್ಲಿ ಭಾರತ, ಇಸ್ಲಾಂ ಅಲಂಕಾರ ಶೈಲಿಗಳ ಸಂಯೋಗವನ್ನು ಕಾಣಬಹುದು. (ಷೇಕ್ ಯೂಸುಫ್ ಕಾಟಿಲ್‍ನ ಗೋರಿ, ಫತೇಪುರ್ ಸಿಕ್ರಿ, ಕಿಲಾಕುನ್ಹ ಮಸೀದಿಯ ಪ್ರಾರ್ಥನೆ ಗೂಡು, ಷೇಕ್ ಇಮಾಮ್ ಸಲೀಮ್ ಫಿಸಿಟಯ ಗೋರಿ, ತುರ್ಕಿ ಸುಲ್ತಾನನ ಅಂತಃಪುರ, ದಿವಾನ್-ಇ-ಖಾಸಿಗೆ ಸೇರಿದ ಸಿಂಹಾಸನದ ಗೌಸಣಿಕೆ; ಸಿಕಂದರದಲ್ಲಿನ ಅಕ್ಬರನ ಗೋರಿ; ಶೀಷ್‍ಮಹಲ್).
ಖಿಲಾ-ಈ-ಕುನ್ಹಾ ಮಸೀದಿ
ಬದಲಾಯಿಸಿಹುಮಾಯೂನನ ಅe್ಞÁತವಾಸದಲ್ಲಿ ಷೇರ್‍ಷಾ ತನ್ನ ಉಪಯೋಗಕ್ಕೆ ಕಟ್ಟಿಸಿದ ಖಿಲಾ-ಈ-ಕುನ್ಹಾ ಮಸೀದಿಯ ಅಲಂಕಾರ (1545) ಮತ್ತಷ್ಟು ಕಲಾಕೌಶಲ್ಯವನ್ನು ಪಡೆದು ಮುಂದಿನ ಅಲಂಕಾರದ ಪಕ್ವತೆಗೆ ದಾರಿ ಮಾಡಿತು. ಷೇರ್‍ಷಾನ ಗೋರಿಯಲ್ಲಿ ಬಣ್ಣ ಬಣ್ಣದ ಕಲ್ಲುಗಳಿಂದಲೂ ಅಮೃತಶಿಲೆಯಿಂದಲೂ ಗೋಡೆಗಳ ಮೇಲೆ ಭಾರತದಲ್ಲಿ ಮೊದಲನೆಯ ಬಾರಿ ಮಾಡಿದ ಕುಂದಣದ ಕೆಲಸ ಸುಂದರವಾಗಿದೆ. ಅಕ್ಬರ್ ಕಾಲದ ವಾಸ್ತುಶಿಲ್ಪದ ಪ್ರಾರಂಭದಿಂದ (1560) ಷಾಹಜಹಾನ್ ಮರಣದವರೆವಿಗೂ (1658) ಮೊಗಲರ ಕಟ್ಟಡದ ಚಟುವಟಿಕೆಗಳು ಅಸಂಖ್ಯಾತವಾಗಿದ್ದು, ವರ್ಣನಾತೀತವಾಗಿವೆ. ಈ ಕಾಲದ ಕಟ್ಟಡಗಳ ಕಲಾಪ್ರೌಢಿಮೆಯನ್ನೂ ಅವುಗಳಲ್ಲಿನ ಅಲಂಕಾರ ವೈಶಿಷ್ಟ್ಯವನ್ನೂ ಕುಶಲತೆಯನ್ನೂ ತೋರಲು ಇಂದಿಗೂ ದೆಹಲಿ, ಲಾಹೋರ್ ಪ್ರಾಂತ್ಯಗಳಲ್ಲಿ ಉಳಿದುಕೊಂಡಿರುವ ಕಲಾಕೃತಿಗಳನ್ನು ಮಾತ್ರ ಇಲ್ಲಿ ವರ್ಣಿಸಲಾಗಿದೆ. ಅಕ್ಬರ್ ತನ್ನ ಕಾಲದಲ್ಲಿ ಸಾಧಿಸಿದ ಮತಸಂಯೋಗವನ್ನು ವಾಸ್ತುಶಿಲ್ಪದಲ್ಲೂ ಚಿತ್ರರಚನೆಯಲ್ಲೂ ಸ್ಪಷ್ಟವಾಗಿ ಕಾಣಬಹುದು. ಇದು ಜಹಾಂಗೀರನ ಕಾಲದಲ್ಲಿ ಇನ್ನೂ ಮುಂದುವರಿಯಿತು. ಆದರೆ ಷಾಹಜಹಾನನ ಕಾಲದಲ್ಲಿ ಪರ್ಷಿಯನ್ ಶೈಲಿಯ ಪ್ರಭಾವ ಹೆಚ್ಚಿತೆನ್ನಬಹುದು. ಇದಲ್ಲದೆ ಅಲಂಕಾರದ ಉಪಕರಣಗಳು ಕೂಡ ಬದಲಾದುವು. ಅವುಗಳ ಶೇಖರಣೆ ಕಷ್ಟವಾಗಿರಬಹುದು. ಆದಕಾರಣ ಗುರ್ಝರ ಪ್ರದೇಶಗಳಲ್ಲಿ ಮುಸಲ್ಮಾನರ ಆಡಳಿತ ಕಾಲದಲ್ಲಿ ಪ್ರಚುರವಾಗಿದ್ದ ಮರದ ಮದನಕೈಗಳು, ತೋರಣಗಳು ಮುಂತಾದವನ್ನು ಅಕ್ಬರ್ ತನ್ನ ಕಟ್ಟಡಗಳಲ್ಲಿ ಅಷ್ಟಾಗಿ ಬಳಸಲಿಲ್ಲ. ಇದರಿಂದ ಹೈಂದವ ಶಿಲ್ಪದ ಸಂಪ್ರದಾಯದ ಅಂಶ ಇಸ್ಲಾಂ ಕಲೆಯಲ್ಲಿ ಹೆಚ್ಚಾಗಿ ಬೆರೆಸಬೇಕಾಗಿ ಬಂತು. ಅದು ಊರ್ಜಿತಕ್ಕೆ ಬಂತು. ದೆಹಲಿಯ ಉತ್ತರದಲ್ಲಿ ಹೇರಳವಾಗಿರುವ ಕೆಂಪುಬಣ್ಣದ ಪದರಕಲ್ಲು (ಸ್ಯಾಂಡ್ ಸ್ಟೋನ್) ದೊಡ್ಡ ದೊಡ್ಡ ಮೂಲಗಳಿಗೂ ಹಾಸಿಗೆಯ ಕಲ್ಲುಗಳಿಗೂ ಅನುಕೂಲವಾದದ್ದು. ಇವುಗಳ ಮೇಲಿನ ಕೆತ್ತನೆಯ ಅಲಂಕಾರ ವಿಸ್ತಾರವಾಯಿತು. ಅಕ್ಬರನ ಕಾಲದಲ್ಲಿ ಅಮೃತಶಿಲೆಯನ್ನು ಹೆಚ್ಚಾಗಿ ಉಪಯೋಗಿಸಲಿಲ್ಲ. ಬಾಹ್ಯಾಲಂಕಾರದಲ್ಲಿ, ಮುಖ್ಯ ಸ್ಥಳಗಳಲ್ಲಿ ಮಾತ್ರ, ಅದನ್ನು ಉಪಯೋಗಿಸಿದರು. ಆದರೆ ಜಹಾಂಗೀರನ ಕಾಲದಲ್ಲಿ ಕುಂದಣದ ಅಲಂಕಾರವನ್ನು ಹೊರಗಿನ ಗೋಡೆಗಳ ಮೇಲೆ ಶೋಭಾಯಮಾನವಾಗಿ ಮಾಡಲಾಯಿತು. ಆದರೂ ಗೋರಿಗಳ ನಕ್ಷೆಗಳು, ಅವುಗಳ ವಿಧಾನಗಳು ಇಸ್ಲಾಂ ತೈಮೂರಿದ್ ಕಾಲದವಾಗಿಯೇ ಉಳಿದುಕೊಂಡವು. ಅಕ್ಬರ್, ಇತ್ಮ್-ಉದ್-ದೌಲಾ, ಹುಮಾಯೂನ್ ಇವರ ಕಾಲದ ಶಿಲ್ಪ ತೈಮೂರಿದ್ ಮಾದರಿಯವು ಎನ್ನಬಹುದು.
ತಾಜ್‍ಮಹಲ್
ಬದಲಾಯಿಸಿತಾಜ್ಮಹಲ್ (1635) ಸ್ಥೂಲವಾಗಿ ಹುಮಾಯೂನನ ಗೋರಿ ನಕ್ಷೆಯನ್ನು ಹೋಲುತ್ತದೆ. ಅದರ ಗೋಪುರ ಸಂಪೂರ್ಣ ಅರ್ಧಚಂದ್ರಾಕಾರದಲ್ಲಿದ್ದರೆ, ಹುಮಾಯುನ್ ಗೋರಿಯ ಗೋಪುರ ಮೊನಚಾಗಿ ಆಮಲಕದ ಚಿತ್ರರೇಖೆಯನ್ನು ತಾಳಿದೆ. ತಾಜಮಹಲಿನ ಅಮೃತಶಿಲೆಯ ತೇಜಸ್ಸು ಅತ್ಯಂತಾಕರ್ಷಣೀಯವಾಗಿದ್ದು, ಆ ಭವನಕ್ಕೆ ಅಮೃತಶಿಲೆಯಲ್ಲಿನ ಕನಸು ಎಂಬ ಪ್ರಶಸ್ತಿಯನ್ನು ತಂದಿದೆ. ಅಲ್ಲಿನ ಕುಂದಣಗೆಲಸ, ಅಮೃತಶಿಲೆಯಲ್ಲಿ ಕುಶಲತೆಯಿಂದ ಕೊರೆದ ವಿವಿಧಾಲಂಕಾರ-ಇವು ಅದ್ಭುತದಾಗಿವೆ. ವಾಸ್ತುಶಿಲ್ಪದ ಬಿಡಿ ಬಿಡಿ ಭಾಗಗಳ ಮಧುರವಾದ ಸಂಯೋಗ ಇಲ್ಲಿ ವಿಸ್ಮಯಗೊಳಿಸುತ್ತದೆ. ಅಕ್ಬರನ ಔದಾರ್ಯದಲ್ಲಿ, ಸಂಪತ್ತಿನಲ್ಲಿ, ಸಂಯೋಗದ ದೃಷ್ಟಿಯಲ್ಲಿ, ಹಿಂದೂ ಮುಸಲ್ಮಾನ್ ವಾಸ್ತುಶಿಲ್ಪ ಔನ್ನತ್ಯವನ್ನು ಹೊಂದಿತೋ ಅಥವಾ ಷಾಹಜಹಾನ್ ಕಾಲದ ವಿಶಿಷ್ಟಾಲಂಕಾರ ಸೊಂಪಿನಿಂದ ಮೇಲ್ಮಟ್ಟವನ್ನು ಗಳಿಸಿತೋ ಹೇಳುವುದು ಕಷ್ಟ. ನಿಜವಾಗಿ, ಅಲಂಕಾರ ರಚನೆಯಲ್ಲಿ ಇವೆರಡೂ ಸಮನಾಗಿದೆ. ಆದರೆ ಷಾಹಜಹಾನನ ಕಾಲದಲ್ಲಿ ಅಮೃತಶಿಲೆಯಲ್ಲಿ ಮಾಡಿದ ಬಣ್ಣಬಣ್ಣದ ನವರತ್ನಗಳ ಕುಂದಣದ ಕೆಲಸ ಮಾತ್ರ ಅಸದೃಶ. ಇದೇ ಮಾದರಿಯಲ್ಲಿ ಇತ್ಮ್-ಉದ್-ದೌಲಾನ ಗೋರಿ ಅಲಂಕೃತವಾಗಿದೆ. ತುರ್ಕಿ ಸುಲ್ತಾನ್ ಮನೆಯ ಅಲಂಕಾರ ಹೂವು ಹಣ್ಣುಗಳಿಂದ ಕೂಡಿದ ಗಿಡಗಳ ವಿವಿಧ ರೂಪವನ್ನೊಳಗೊಂಡ ಅಕ್ಬರ್ ಗೋರಿಯ ಅಲಂಕಾರವನ್ನು ಹೋಲುತ್ತದೆ.
ಲಾಹೋರಿನ ವಜೀರ್‍ಖಾನ್ ಗೋರಿ
ಬದಲಾಯಿಸಿಇದೇ ಕಾಲಕ್ಕೆ ಸೇರಿದ, ಹೆಂಚುಗಳಿಂದ ನಾನಾ ರೂಪಗಳಲ್ಲಿ ಅಲಂಕೃತವಾದ, ಲಾಹೋರಿನ ವಜೀರ್‍ಖಾನ್ ಗೋರಿ, ಆಗ್ರದ ಚೀನೀತಾಜ್, ಲಾಹೋರ್ ಕೋಟೆಗಳ ಅಲಂಕಾರ ಹೆಚ್ಚಾದ ಮನ್ನಣೆ ಪಡೆದಿವೆ. ಇವುಗಳ ಸೌಂದರ್ಯ ಅದ್ವಿತೀಯವಾದ್ದು. ಇಲ್ಲಿನ ಮೊಸಯಿಕ್ ಚಿತ್ರಗಳು ಸಾಧಾರಣ ಜೀವನಕ್ಕೂ ರಾಜರ ಆಡಂಬರಕ್ಕೂ ಸಾದೃಶ್ಯವಾಗಿವೆ. ಚೀನೀ ಕಾತಾಂಜಾದಲ್ಲಿ ರಾಜರ ಮತ್ತು ಶ್ರೀಮಂತರ ಭಾವಚಿತ್ರಗಳು ಮಿಶ್ರಿತವಾಗಿವೆ. ಇಲ್ಲಿನ ಚಿತ್ರಗಳಲ್ಲಿ ರಾಜರು ಪೋಲೋ ಆಡುವುದು; ಸವಾರರು ಆನೆ, ಒಂಟೆ, ಕುದುರೆಗಳನ್ನು ಮುಂದೆ ಒಯ್ಯುವುದು; ಆನೆ, ಒಂಟೆ, ಕುದುರೆಗಳ ಮೇಲೆ ಕುಳಿತು ಯುದ್ಧಮಾಡುವುದು; ಹೋರಿ, ಆನೆ, ಒಂಟೆಗಳ ಗುದ್ದಾಟಗಳು; ಅಂತಃಪುರದ ಮಧುಪಾನ ಮತ್ತು ನೃತ್ಯ ಮುಂತಾದ ಕ್ರೀಡೆಗಳು; ಚಿರತೆಗಳ ಸಹಿತ ರಾಜರು ಬೇಟೆ ಆಡುವುದು; ಭೂಮಿಯನ್ನು ಉಳುವುದು; ಬಾತು, ಕೊಕ್ಕರೆ, ಗಿಡುಗ, ಹಮ್ಮಿಂಗ್ ಪಕ್ಷಿಗಳ ಹಾರಾಟ ಮುಂತಾದವು ರಮಣೀಯವಾಗಿವೆ. ಆಡುಗಳನ್ನು ಕೊಂದ ಅನಂತರ ಕೈಗಳನ್ನು ತೊಳೆಯುವ ಮತ್ತು ಮಧುವನ್ನು ಹಂಚುವ ವಿಧಾನಗಳು ಶ್ರೀಮಂತರ ಉದ್ಯಾನವನದ ಕ್ರೀಡೆಗಳು ಆಕರ್ಷಣೀಯವಾಗಿವೆ. ಈ ಹೆಂಚುಗಳ ಶೃಂಗಾರ ಜಹಾಂಗೀರ್ ಕಾಲದಲ್ಲಿ ಪ್ರಾರಂಭವಾಗಿ ಷಾಹಜಹಾನ್ ಕಾಲದಲ್ಲಿ ಶ್ರೇಷ್ಠತೆಯನ್ನು ಗಳಿಸಿತು. ಈ ಶೃಂಗಾರದಲ್ಲಿ ಅಸಂಖ್ಯಾತ ಬಣ್ಣಬಣ್ಣದ ಕಲ್ಲಿನ ಫಲಕಗಳನ್ನೂ ಉಪಯೋಗಿಸಲಾಗಿದೆ. ಹೆಂಚಿನ ಅಲಂಕಾರ ಲಾಹೋರ್ ಕೋಟೆಯಲ್ಲಿ ಕೇಂದ್ರೀಕೃತವಾಯಿತು. ಅದು ಷಾಹಜಹಾನ್ ಆಡಳಿತದಲ್ಲಿ ವೈಭವದ ಶ್ರೇಷ್ಠತೆಯನ್ನು (1628-58) ಸಾಧಿಸಿತು. ಲಾಹೋರಿನ ಅಲಂಕಾರ ಚತುರಶ್ರದಲ್ಲಿ ನಿರ್ಮಿತವಾದ ಮೊಸಾಯಿಕ್‍ಗಳಿಂದ ಕೂಡಿದೆ. ಒಂದೊಂದು ಸಲ ಚತುರಶ್ರ ಬಿಲ್ಲೆಗಳ ಮಧ್ಯಭಾಗ ಕೆಂಪು ಗಾರೆಯಿಂದ ತುಂಬಿಸಲ್ಪಟ್ಟು ಇಟ್ಟಿಗೆಗಳಿಂದ ಕಟ್ಟಲಾಗಿದೆಯೋ ಎನ್ನುವ ಭಾವನೆಯನ್ನು ಕೊಡುತ್ತದೆ (ಉದಾ: ವಜೀರ್‍ಖಾನನ ಮಸೀದಿ). ಹೆಂಚುಗಳಿಂದ ಹೊದ್ದಿಸಿದ ಬಿಲ್ಲೆಗಳ ಮೇಲೆ ಕ್ಷೇತ್ರಗಣಿತದ ನಕ್ಷೆಗಳ ಮಧ್ಯೆ ಪುಷ್ಪಭರಿತ ಲತಾ ಸುರಳಿಗಳ ಅಲಂಕಾರ ಮಾಡಲಾಗಿದೆ. ಫಲಭರಿತ ತಟ್ಟೆಗಳಲ್ಲಿ ಕರಬೂಜ, ಕಲ್ಲಂಗಡಿ, ದಾಳಿಂಬರ ಹಣ್ಣುಗಳು ನೈಜ ಬಣ್ಣಗಳಿಂದ ಚಿತ್ರಿತವಾಗಿವೆ. ಪುಷ್ಪಗಳ ಪೈಕಿ ದಾಳಿಂಬೆ ಹಣ್ಣುಗಳು ನೈಜ ಬಣ್ಣಗಳಿಂದ ಚಿತ್ರಿತವಾಗಿವೆ. ಪುಷ್ಪಗಳ ಪೈಕಿ ದಾಳಿಂಬೆ, ಟ್ಯೂಲಿಪ್, ನಾರ್ಸಿಸಸ್ ಮುಂತಾದವು ತಟ್ಟೆಗಳಲ್ಲಿ ಹೊಳೆಯುತ್ತಿವೆ. ಕೆಲವು ಬಳ್ಳಿಗಳ ಮೇಲೆ ಪರ್ಷಿಯನ್ನರ ಪುಸ್ತಕಗಳಿಂದ ಶೇಖರಿಸಿದ ಮಾತುಗಳ ಶಾಸನಗಳಿವೆ. ಒಳಗಿನ ಗಾರೆಯ ಮೇಲಿನ ಚಿತ್ರಗಳಿಗೂ ಈ ನಕಾಶೆಗಳಿಗೂ ಪರಸ್ಪರ ಸಂಬಂಧವಿದೆ. ಕಮಾನುಗಳ ಎರಡು ಪಾಶ್ರ್ವಗಳಲ್ಲಿನ ಪುಷ್ಪಲತಾ ಸುರಳಿಗಳ ಅಲಂಕಾರ, ಜೀರಂಗಡಿಗಳ ಉದ್ದಕ್ಕೂ ಅವುಗಳ ಸುತ್ತಲೂ ಇರುವ ರೇಖಾವಿಲಾಸ, ಮಸೀದಿ ಮತ್ತು ಗೋಡೆಗಳ ಮೇಲೆ ಹೊಳೆಯುವ ಬಣ್ಣಬಣ್ಣದ ಹೆಂಚುಗಳ ಹೊದ್ದಿಗೆ, ಇವೆಲ್ಲವೂ ರಮಣೀಯವಾಗಿವೆ. (ಉದಾ: ಶಾಹೀ ಮಸೀದಿಯ ಷಾ-ಬುರಾನಿನ ಗೋರಿ, ಆಲಿ-ಮರ್ದಾನ್-ಖಾನನ ಧಕ್ಕೈಶರಾಯ್ 1640, ಚೀನೀವಾಲೇ ಮಸೀದಿ 1565-66, ಅಬ್ದುಲ್ ವಾಹಬ್ ಮಸೀದಿ.)
ಹೆಂಚಿನ ಅಲಂಕಾರ
ಬದಲಾಯಿಸಿಮುಸಲ್ಮಾನರು ಭಾರತಕ್ಕೆ ಬಂದ ಪ್ರಾರಂಭದಲ್ಲಿ ಮಿತವಾಗಿ ಉಪಯೋಗಿಸಿದ ಹೆಂಚಿನ ಅಲಂಕಾರ ಮೊಗಲರ ಆಡಳಿತದಲ್ಲಿ ಪ್ರಾಮುಖ್ಯ ಪಡೆಯಿತು. ರುಕ್ನುದ್ದೀನ್ (1320-24) ಗೋರಿಯ ಹೊರಭಾಗ ಹೊಳೆಯುವ ನೀಲಿ, ಉದಾ ಮತ್ತು ಬಿಳೀ ಹೆಂಚುಗಳಿಂದ ಬಿಲ್ಲೆ ಬಿಲ್ಲೆಗಳಾಗಿ ವಿಭಾಗಗೊಂಡಿದೆ. ಪಂಜಾಬಿನಲ್ಲಿ ಲೋದಿ ಸುಲ್ತಾನರ ಕಾಲದಲ್ಲಿ ಈ ಬಣ್ಣಗಳಿಗೆ ಹಳದೀ ಬಣ್ಣದ ಹೆಂಚುಗಳು ಸೇರಿದುವು. ಸಿಕಂದರ್ ಲೋದಿ (1517) ಗೋರಿಯ ಉಭಯ ಪಾಶ್ರ್ವಗಳಲ್ಲಿನ ಅಲಂಕಾರದಲ್ಲಿ ರೋಜಾ ರೂಪದ ಆಕಾಶ ಬಣ್ಣದ ಪದಕಗಳನ್ನು ಕ್ಷೇತ್ರಗಣಿತ ನಮೂನೆಗಳ ಅಂತರದಲ್ಲಿ ಲತಾವಿನ್ಯಾಸ ಸಹಿತ ಸೇರಿಸಲಾಗಿದೆ.
ಕ್ಷೇತ್ರಗಣಿತ ನಕ್ಷೆ
ಬದಲಾಯಿಸಿಕ್ಷೇತ್ರಗಣಿತ ನಕ್ಷೆಗಳನ್ನೊಳಗೊಂಡ ಪುಷ್ಪಲತಾಲಂಕಾರದ ಮಧ್ಯೆ ರಚಿಸಲಾದ ನೀಲಿಚ್ಛಾತ್ರಿ ಹೆಸರಿನ ಗೋರಿ ಮತ್ತು ನೀಲಿಗುಂಬಸ್ (1567) ರಮಣೀಯವಾಗಿವೆ. ಈ ಗೋರಿಗಳಲ್ಲಿ ಅತ್ಯಾಕರ್ಷಣೀಯವಾದದ್ದು ಅಕ್ಬರನ ಸಾಕು ತಂದೆಯಾದ ಶಂಶುದ್ದೀನ್ ಅತ್ಗಖಾನನ (1567) ಗೋರಿ. ಇದು ಎನಾಮಲ್, ಮೊಸಾಯಿಕ್‍ಗಳಿಂದ ಅಲಂಕೃತವಾಗಿದೆ. ಇದರಲ್ಲಿ ಹೊಳೆಯುವ ಆಕಾಶನೀಲ ಮತ್ತು ಹಳದಿ ಬಣ್ಣಗಳ ಹೆಂಚುಗಳು ಬಿಳೀ ಅಮೃತಶಿಲೆಗಳೊಡನೆ ರೇಖಾನಕ್ಷತ್ರಗಳ ಅಲಂಕಾರದಲ್ಲಿ ಬೆರೆತಿವೆ. ಅಕ್ಬರನ ಕಾಲದಲ್ಲಿ ಅಲಂಕಾರಕ್ಕೆ ನೀಲಿ, ಆಕಾಶ ನೀಲಿ, ಹಳದಿ ಮತ್ತು ಹಸಿರು ಬಣ್ಣಗಳ ಹೆಂಚುಗಳನ್ನು ಮುಖ್ಯವಾಗಿ ಉಪಯೋಗಿಸಿದರು. ಮೊಗಲ್ ಕಾಲದ ಅಲಂಕಾರ ಭಾರತದ ಪ್ರಭಾವವನ್ನಲ್ಲದಿದ್ದರೂ ಸಮಕಾಲೀನವಾದ ಪರ್ಷಿಯ ದೇಶದ ಸಫಾವಿದ್ ರಾಜರ ಅಲಂಕಾರದ ಧೋರಣೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೋಲುತ್ತದೆ.
ಮೊಗಲ್ ಕಾಲದ ಚಿತ್ರಣ
ಬದಲಾಯಿಸಿಮೊಗಲ್ ಕಾಲದ ಚಿತ್ರಣದಲ್ಲಿ ಭಾವಚಿತ್ರಗಳು ಪುಷ್ಕಳವಾಗಿವೆ. ಪ್ರಸ್ತುತ ವಿಷಯವನ್ನು ವಿವರಿಸುವುದಕ್ಕಾಗಿ ಇದನ್ನು ಸೂಕ್ಷ್ಮರೂಪದಲ್ಲಿ ತಿಳಿಸಬೇಕಾಗಿದೆ. ಈ ಸಂಪ್ರದಾಯ ಪರ್ಷಿಯ ದೇಶದ ಆಚರಣೆಯನ್ನು ಮುಂದುವರಿಸುತ್ತದೆ. ಅದು ಸೆಫಾವಿದ ಕಲಾವಿಧಾನದಲ್ಲಿದ್ದರೂ ರೇಖಾವಿನ್ಯಾಸದಲ್ಲೂ, ಬಣ್ಣಗಳ ವಿನಿಯೋಗದಲ್ಲೂ, ಹೈಂದವ, ಅಜಂತ ಶೈಲಿಗಳಲ್ಲಿದೆ. ಯಥಾದೃಷ್ಟ ರೂಪಣ (ಪರ್ ಸ್ಪೆಕ್ಟಿವ್), ಬೆಳಕು ನೆರಳುಗಳ ವಿನ್ಯಾಸ ಇವು ಉತ್ತಮ ಚಿತ್ರಗಳಲ್ಲಿ ಕಂಡುಬರುತ್ತದೆ (ಉದಾ: ಚಕ್ರವರ್ತಿ ಷಹಜಹಾನನ ಭಾವಚಿತ್ರ, ಜಯಂತ್ಯುತ್ಸವ, ಹಕಿಮ್‍ತಾಯ್‍ನ ಯುದ್ಧ ಚಿತ್ರಣ. ಅಕ್ಬರ್‍ನಾಮದ ಬೇಟೆ ದೃಶ್ಯಗಳು-ಮುಂತಾದವು). ಪರ್ಷಿಯದ ಇಸ್ಲಾಮೀ ಕಲೆಯಲ್ಲಿ ಪಾಶ್ರ್ವದೃಷ್ಟಿಯ ಭಾವಚಿತ್ರಗಳು ಹೆಚ್ಚಾಗಿಲ್ಲ; ಸಂಪೂರ್ಣ ಅಥವಾ ಮುಕ್ಕಾಲು ವದನವನ್ನು ಅವು ಚಿತ್ರಿಸುತ್ತವೆ. ಮೊಗಲರ ಕಾಲದ ಭಾವಚಿತ್ರಗಳ ಅಂಚಿನಲ್ಲಿ ಚಿನ್ನ ಅಥವಾ ನೀಲಿ ಹಿನ್ನೆಲೆಯಲ್ಲಿ ಮನೋಹರವಾದ ಪುಷ್ಪಲತಾ ಸುರಳಿಗಳ ಮಧ್ಯೆ ಕ್ರೀಡಿಸುವ, ಹಾಡುತ್ತಿರುವ ಅಥವಾ ಹಾರಿ ಹೋಗುತ್ತಿರುವ ವಿವಿಧ ಹಕ್ಕಿಗಳು ಚಿತ್ರತವಾಗಿವೆ. ಇವೆಲ್ಲವೂ ಖಗ, ಮೃಗ, ವನಸ್ಪತಿಗಳ ಸಂಯೋಗವನ್ನು ಸಾರುತ್ತವೆ. ಈ ಅಲಂಕಾರ ಲಾಹೋರ್ ಗೋಡೆಯ ಹೆಂಚಿನ ಜೋಡಣೆಯಂತೆ, ಮಾದರಿಗಳ ವೈಶಿಷ್ಟ್ಯವನ್ನಲ್ಲದೆ ಘನತರವಾದ ಲಾಲಿತ್ಯವನ್ನೂ ಪಡೆದಿರುತ್ತವೆ. ಲಾವಣ್ಯದಲ್ಲಿ ಈ ಶೃಂಗಾರ ಅದ್ವಿತೀಯ. ಇದರಲ್ಲಿ ಭಾವಚಿತ್ರದ ರಸಭಾವವಿದೆ. ಇವುಗಳಲ್ಲಿನ ಚರಿತ್ರಾಂಶ, ಪುರುಷರ ಚಿತ್ರಣ ಪರ್ಷಿಯನ್ನರ ಸಂಪ್ರದಾಯ ಭಂಗಿಗಳಲ್ಲಿ, ವ್ಯವಸ್ಥೆಯಲ್ಲಿ, ಆಡಂಬರದಲ್ಲಿ ಅಸಹಜವಾಗಿದ್ದರೂ ಆಕರ್ಷಣೀಯವಾಗಿವೆ. ಆದರೆ, ಸಾಮಾನ್ಯ ಜೀವನದ ದೃಶ್ಯಗಳಲ್ಲಿ ಬೇಟೆ, ಯುದ್ಧ, ವ್ಯವಸಾಯ ಹೆಚ್ಚಾದ ನೈಜತೆ, ಭಾವನಿರೂಪಣೆ, ಜೀವಕಳೆ ಕಂಡುಬರುತ್ತವೆ. ಅಂತಃಪುರದಲ್ಲಿನ ಮನೋರಂಜನೆಯ ದೃಶ್ಯಗಳು, ಸ್ತ್ರೀಸಹಿತವಾದವು. ಇಸ್ಲಾಮೀ ಕಲೆಯಲ್ಲಿ ಎಲ್ಲಿಯೂ ಚಿತ್ರಿತವಾಗಿಲ್ಲ.ಉದ್ಯಾನವನಗಳ ನಿರ್ಮಾಣ, ಅಪೂರ್ವ ಬಣ್ಣದ ಹಕ್ಕಿಗಳ ಶೇಖರಣೆ, ಲಾಲನೆ, ಪಾಲನೆ ಮತ್ತು ಅವುಗಳ ಆಟ ಕಾದಾಟಗಳ ವೀಕ್ಷಣೆ ಈ ಕ್ರಿಯೆಗಳಲ್ಲಿ ತನ್ನ ಮುತ್ತಾತನಾದ ಬಾಬರನಂತೆಯೂ ಕಟ್ಟಡಗಳ ನಿರ್ಮಾಣ ಮತ್ತು ಶೃಂಗಾರ ವಿಧಾನಗಳಲ್ಲಿ ತನ್ನ ತಾತನಾದ ಅಕ್ಬರನಂತೆಯೂ ಜಹಾಂಗೀರ್ ಉತ್ಸುಕನಾಗಿದ್ದ. ಔರಂಗಜೇಬ್ ವಿನಾ ಮೊಗಲ್ ಚಕ್ರವರ್ತಿಗಳೆಲ್ಲರೂ ಕೇಸರವಿಲ್ಲದ ಸಿಂಹಗಳ ಕಾಡುಕತ್ತೆಗಳ, ಜಿಂಕೆಗಳ, ಆನೆಗಳ, ಹುಲಿಗಳ ಬೇಟೆಯಲ್ಲಿ ಆಸಕ್ತಿ ಹೊಂದಿದ್ದರು. ಅದೂ ಅಲ್ಲದೆ ಜಹಾಂಗೀರ್ ಕಾಲದ ಭಾವಚಿತ್ರಗಳ ಅಂಚುಗಳಲ್ಲಿ ಆತ ಶೇಖರಿಸಿದ ಪಕ್ಷಿಗಳ ರೂಪಗಳು ಮಧುರವಾಗಿ ಚಿತ್ರತವಾಗಿವೆ. ಅಂತಃಪುರದಲ್ಲಿ ಏರ್ಪಡಿಸಿದ ಕ್ರೀಡೆಗಳಲ್ಲಿ, ಆನೆಗಳ, ಒಂಟೆಗಳ, ಕೋಳಿಗಳ, ಗುದ್ದಾಟಗಳನ್ನು, ಕುಸ್ತಿ ಭಂಗಿಗಳನ್ನು ನೋಡುವುದರಲ್ಲಿ, ಅವರಿಗೆ ತುಂಬ ಅಭಿಲಾಷೆ ಇತ್ತೆಂದು ತೋರುತ್ತದೆ. ಮುಖ್ಯವಾಗಿ ಭಾರತ ಚಿತ್ರಕಾರರೆÉೀ ಜೀವಕಳೆ ತುಂಬಿ ಮಧುರವಾಗಿ ಚಿತ್ರಿಸಿದ ಹಸ್ತ ಲಿಖಿತ ಪುಸ್ತಕಗಳಲ್ಲಿನ ಚಿತ್ರಗಳು (ವಾಕಿಯತ್-ಈ-ಬಾಬರಿ 1528, ಅಕ್ಬರ್ ನಾಮಾ) ಇದನ್ನು ಉದಾಹರಿಸುತ್ತವೆ. ಜೈನ ಕವಿ ನಯಚಂದ್ರಸೂರಿ ಸಂಸ್ಕøತದಲ್ಲಿ ರಚಿಸಿದ ಹಮ್ಮೀರ ಮಹಾಕಾವ್ಯದ ವೀರ ಚರಿತೆಯ ವರ್ಣನೆ (1496) 18ನೆಯ ಶತಮಾನದ ಕಾಂಗ್ರಾ ಚಿತ್ರಕಾರರಿಂದ ಶಕ್ತಿಯುತವಾಗಿಯೂ ಜೀವಯುತವಾಗಿಯೂ ಚಿತ್ರಿತವಾಗಿದೆ. ಹಮ್ಮೀರ್ ರಾಜ್ಯದ ಮೇಲೆ ಅಲ್ಲಾಉದ್ದೀನ್ ಖಿಲ್ಜಿ ನಡೆಸಿದ ರಣ ಥಂಭೂರ್ ದಾಳಿಯನ್ನು (1096) ಅಲ್ಲಾ ಉದ್ದೀನನ ಪರಾಭವವನ್ನೂ ತಪ್ಪು ತಿಳಿವಳಿಕೆಯಿಂದ ಅಂತಃಪುರ ಸ್ತ್ರೀಯರ ಸಹಗಮನವನ್ನೂ ಕಡೆಗೆ ಹಮ್ಮೀರ್ ವೀರನ ಆತ್ಮಹತ್ಯವನ್ನೂ ಈ ಹಸ್ತಲಿಖಿತ ಪುಸ್ತಕ ಶ್ರೇಷ್ಠ ಚಿತ್ರಗಳೊಡನೆ ಘನತೆಯಿಂದ ವರ್ಣಿಸುತ್ತದೆ.
ಇಸ್ಲಾಂ ಚರಿತ್ರೆ
ಬದಲಾಯಿಸಿಇಸ್ಲಾಂ ಚರಿತ್ರೆಗೆ ಅವರ ಕಲೆ ಹೊಂದಿಕೊಂಡಿದೆ. ಶಿಲ್ಪವಾಗಲೀ ಉಬ್ಬಿರುವ ಕೆತ್ತನೆಯ ಕೆಲಸವಾಗಲೀ ವಾಸ್ತುಶಿಲ್ಪ ಸೌಂದರ್ಯಕ್ಕೆ ಅತ್ಯವಸರವಾದುದೆನ್ನುವ ಭಾವನೆ ಇಸ್ಲಾಮೀ ಕಲೆಯಲ್ಲಿ ಎಲ್ಲೂ ತೋರುವುದಿಲ್ಲ.ಭಾರತ ಇಸ್ಲಾಮೀ ಚಿತ್ರಕಲೆಯಲ್ಲಿ ಪಾಲ್ಗೊಂಡವರು ಮಧು, ಮಹೇಶ, ಬಸವಾನ್, ಮನೋಹರ್, ಸರ್ವಾನ್, ಧರ್ಮದಾಸ್, ಮುಕುಂದ್, ಛಾತ್ರಮುನಿ ಮುಂತಾದ ಹೈಂದವರೇ. ಇಸ್ಲಾಮೀ ಚಿತ್ರಕಲೆಗೂ ಭಾರತ ಚಿತ್ರಕಲೆಗೂ ವಿಷಯಾಂಶದಲ್ಲಿ ಮಾತ್ರ ಭೇದವಿದೆ. ಶೈಲಿಗಳು ಒಂದೇ. ಅತ್ಯಂತ ಪ್ರಾಚೀನವಾದ ಭಾರತೀಯ ಸಂಪ್ರದಾಯವನ್ನು ಅನುಸರಿಸಿದ ಅಜಂತಾ ಚಿತ್ರಗಳು ಇವೆಲ್ಲಕ್ಕೂ ಸ್ಫೂರ್ತಿದಾಯಕವಾಗಿವೆ. (ಪಿ.ಎಸ್.)ಭಾರತದಲ್ಲಿ ನಿರ್ಮಿತವಾದ ಇಸ್ಲಾಂ ಶೈಲಿ ಭಾರತೀಯ ಸಂಸ್ಕøತಿ ಮತ್ತು ಕಲೆಗಳ ಪ್ರಭಾವದಿಂದಾಗಿ ಒಂದು ವಿಶೇಷ ರೀತಿಯ ಶೈಲಿಗಾಗಿ ಬೆಳೆಯಿತು. ದೆಹಲಿ ಮತ್ತು ಆಗ್ರ ನಗರಗಳಲ್ಲಿ ನಿರ್ಮಿತವಾಗಿರುವ ಭವನಗಳನ್ನು ನೋಡಿದರೆ ಇದು ಚೆನ್ನಾಗಿ ವೇದ್ಯವಾಗುತ್ತದೆ.ಭಾರತೀಯ ಇಸ್ಲಾಂ ಕಟ್ಟಡಗಳು ಹೆಚ್ಚು ಚತುರತೆಯಿಂದ ನಿರ್ಮಿತವಾಗಿವೆಯಲ್ಲದೆ, ನಿರ್ಮಾಣ ಕಲೆಯ ಅನೇಕ ಸಮಸ್ಯೆಗಳನ್ನು ಇವುಗಳಲ್ಲಿ ಪರಿಹರಿಸಲಾಗಿದೆ. ಮೊದಮೊದಲು ಇಸ್ಲಾಂ ದಂಡನಾಯಕರು ಭಾರತದ ಜೈನ ದೇವಾಲಯಗಳ ಗರ್ಭ ಗೃಹವನ್ನು ಒಡೆದುಹಾಕಿ, ಪಶ್ಚಿಮ ಭಾಗದಲ್ಲಿ ಮೆಕ್ಕ ಕಡೆಗೆ ಮಿಹ್ರಾಬ್ ಅನ್ನು (ಪೀಠ) ನಿರ್ಮಿಸಿದರು. ಇಸ್ಲಾಂ ಶೈಲಿಯ ಕಮಾನುಗಳನ್ನು ಉಪಯೋಗಿಸಿ, ಬಳಕೆಗೆ ತಂದರು. ಅಮೃತಶಿಲೆ ಮತ್ತು ಬಳಪದ ಕಲ್ಲಿನಲ್ಲಿ ಕಟ್ಟಲ್ಪಟ್ಟು ಬಹು ಅಂದವಾದ ಶೈಲಿಯಲ್ಲಿ ಇವರ ವಾಸ್ತುಶಿಲ್ಪ ಬೆಳೆಯಿತು.ದೆಹಲಿಯ ಕುತುಬ್ ಮಿನಾರ್, ಜುಮ್ಮಾ ಮಸೀದಿ, ಕೆಂಪುಕೋಟೆಯೊಳಗಿನ ಅರಮನೆಗಳು, ಆಗ್ರಾದ ಕೆಂಪುಕೋಟೆ, ಫತೇಪುರ್ ಸಿಕ್ರಿ ನಗರ, ಅಕ್ಬರ್ ಹುಮಾಯೂನ್ ಮೊದಲಾದ ಚಕ್ರವರ್ತಿಗಳ ಗೋರಿಗಳು, ಎಲ್ಲಕ್ಕೂ ಮಿಗಿಲಾಗಿ ಪ್ರಪಂಚದ ಅದ್ಭುತಗಳಲ್ಲೊಂದಾದ ವಿಶ್ವವಿಖ್ಯಾತ ತಾಜ್‍ಮಹಲ್-ಇವು ಭಾರತೀಯ ಇಸ್ಲಾಂ ಶೈಲಿಯ ಪ್ರತೀಕವಾಗಿ ಇಂದೂ ಆಕರ್ಷಣೀಯವಾಗಿವೆ.ಮುಸ್ಲಿಮರಾದ ಮೇಲೆ ಬಂದ ಆಂಗ್ಲರೂ ಇತರ ಸಾಮಂತ ರಾಜರೂ ಇಸ್ಲಾಂ ಶೈಲಿಯ ಕೆಲವು ರೂಪರೇಷೆಗಳನ್ನು ತಾವು ನಿರ್ಮಿಸಿದ್ದ ಕೆಲವು ಕಟ್ಟಡಗಳಲ್ಲೂ ಉಪಯೋಗಿಸಿದರು. ಮೈಸೂರಿನ ಅರಮನೆ ಇಂಥ ನಿರ್ಮಾಣ ಕಲೆಗೆ ಉತ್ತಮ ನಿದರ್ಶನವಾಗಿದೆ.