ಇಸಿಲ ಇಂದು ವಾಸ್ತವವಾಗಿ ಕಣ್ಮರೆಯಾಗಿರುವುದಾದರೂ ಭಾರತದ ಪ್ರಾಕ್ತನ ಭೂಪಟದಲ್ಲಿ ಶಾಶ್ವತವಾಗಿ ಉಳಿದಿರುವ ನಗರವೊಂದರ ಹೆಸರು. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಬ್ರಹ್ಮಗಿರಿಯಲ್ಲಿ ಸಿಕ್ಕಿರುವ ಅಶೋಕಕಾಲದ ಶಾಸನಗಳಲ್ಲಿ ಈ ನಗರದ ಉಲ್ಲೇಖವಿದೆ (ನೋಡಿ- ಬ್ರಹ್ಮಗಿರಿ-1).

ಸ್ಥಳಸಂಪಾದಿಸಿ

ಮೌರ್ಯ ಸಾಮ್ರಾಜ್ಯದ ದಕ್ಷಿಣದ ರಾಜಧಾನಿಯಾಗಿದ್ದ ಸುವರ್ಣಗಿರಿಯಿಂದ ಈ ನಗರಕ್ಕೆ ರಾಜಶಾಸನ ತರಲಾಯಿತೆಂದು ಇವುಗಳಲ್ಲಿ ಹೇಳಿರುವುದರಿಂದ ಈ ಪ್ರದೇಶದಲ್ಲೆ ಇಸಿಲವಿದ್ದಿರಬೇಕೆಂದು ಊಹೆ. ಜನಗಹಳ್ಳ ಅಥವಾ ಸಣ್ಣ ಹಗರಿ ನದಿಯ ಆಚೀಚೆ ದಡಗಳ ಮೇಲೆ, ತ್ರಿಭುಜದ ಮುಮ್ಮೂಲೆಗಳಂತಿರುವ ಈ ಶಾಸನಗಳು ಇರುವ ಸುತ್ತಮುತ್ತಲಿನಲ್ಲಿ ಈ ನಗರವಿತ್ತೆಂಬುದು ಇಲ್ಲಿನ ನೆಲದ ಪರಿಶೀಲನೆಯಿಂದ ವ್ಯಕ್ತವಾಗಿದೆ

ಇತಿಹಾಸಸಂಪಾದಿಸಿ

ಈ ಪ್ರದೇಶದ ಇತಿಹಾಸದಲ್ಲಿ ಏಳುಬೀಳುಗಳಿದ್ದಿರಬೇಕು. 1190ರ ಸುಮಾರಿನಲ್ಲಿ ಈ ಬೆಟ್ಟದ ಪಶ್ಚಿಮಕ್ಕೆ ಹನೆಯವೆಂಬ ನಗರ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಆದರೆ ಇಸಿಲ ಇದಕ್ಕಿಂತ ಪುರಾತನ, ಪ್ರತ್ಯೇಕ. ಇದರ ಪೂರ್ವಕ್ಕೆ ಚೌಡೇಶ್ವರಿ ಕೆರೆ ಮತ್ತು ಕೊಪ್ಪ ಗುಡ್ಡ, ಉತ್ತರಕ್ಕೆ ಹಗರಿ ಹೊಳೆ, ಪಶ್ಚಿಮಕ್ಕೆ ಎಮ್ಮೆತಮ್ಮನ ಗುಂಡು ಮತ್ತು ಅಕ್ಕತಂಗಿ ಕೆರೆ, ದಕ್ಷಿಣಕ್ಕೆ ಬ್ರಹ್ಮಗಿರಿ ಬೆಟ್ಟ (ಈ ಬೆಟ್ಟದಲ್ಲಿರುವ ಗುಹೆಗಳಲ್ಲಿ ಚರಿತ್ರಪೂರ್ವಕಾಲದ ಮಾನವನಿದ್ದುದರ ಕುರುಹುಗಳಿವೆ).

ಹಿಂದೆ ಒಂದು ಸಾಮಾನ್ಯ ಊರಾಗಿದ್ದ ಇಸಿಲ ಅಶೋಕನ ಕಾಲಕ್ಕಾಗಲೆ ಪ್ರಾಂತೀಯ ಮುಖ್ಯ ಪಟ್ಟಣವಾಗಿ ಬೆಳೆದಿರಬೇಕು; ಅನಂತರವೂ ಶಾತವಾಹನರ ಕಾಲದಲ್ಲಿ ಚೆನ್ನಾಗಿ ಅಭಿವೃದ್ಧಿ ಹೊಂದಿರಬೇಕು. ಆದರೆ ಬ್ರಹ್ಮಗಿರಿಯ ಮೇಲಿದ್ದ ಚೈತ್ಯಾಲಯದ ಇಟ್ಟಿಗೆಯ ತಳಪಾಯವೊಂದನ್ನು ಬಿಟ್ಟರೆ ಆ ಕಾಲದ ಅವಶೇಷಗಳು ಯಾವುವೂ ದೊರೆತಿಲ್ಲ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಇಸಿಲ&oldid=817052" ಇಂದ ಪಡೆಯಲ್ಪಟ್ಟಿದೆ