ಇಲಿಯ ಗರಾಶನಿನ್ (1812-1874) ಆಧುನಿಕ ಸರ್ಬಿಯದ ಒಬ್ಬ ರಾಜಕೀಯ ಪ್ರಮುಖ, ದಕ್ಷ ಆಡಳಿತಗಾರ. ಎರಡು ಸಾರಿ ಪ್ರಧಾನಮಂತ್ರಿಯಾಗಿ ಹೆಸರು ಪಡೆದ.

ಇಲಿಯ ಗರಾಶನಿನ್

ಆರಂಭಿಕ ಜೀವನ

ಬದಲಾಯಿಸಿ

ಈತ ಧನಿಕ ವ್ಯಾಪಾರಿಯೊಬ್ಬನ ಮಗನಾಗಿ 1812ರ ಜನವರಿ 28ರಂದು ಗರಾಶಿಯಲ್ಲಿ ಹುಟ್ಟಿದ. ಜರ್ಮನ್ ಮತ್ತು ಗ್ರೀಕ್ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆದ. 1834ರಲ್ಲಿ ಸುಂಕದ ಅಧಿಕಾರಿಯಾದ ಗರಾಶನಿನ್ ಅನಂತರ ಸೈನ್ಯ ಸೇರಿ, ಅದರ ದಳಪತಿಯಾದ.[] ಮಿಲೋಶ್ ಒಬ್ರೆನೊವಿಚ್ (1839) ದೊರೆತನವನ್ನು ತ್ಯಾಗಮಾಡಿದಾಗ ಗರಾಶನಿನ್ ದೇಶದಿಂದ ಹೊರಹೋಗಿ ತಲೆ ಮರೆಸಿಕೊಂಡಿದ್ದ. 1842ರಲ್ಲಿ ಒಬ್ರೆನೊವಿಚನನ್ನು ಪದಚ್ಯುತಿಗೊಳಿಸಿ ಅಲೆಕ್ಸಾಂಡರ್ ಕಾರಾಜಾರ್ಜೆವಿಚನನ್ನು ದೊರೆಯಾಗಿ ಆಯ್ಕೆಮಾಡಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ.

ರಾಜಕೀಯ ಜೀವನ

ಬದಲಾಯಿಸಿ

ಅನಂತರ ಗೃಹಖಾತೆಯ ಅಧೀನ ಕಾರ್ಯದರ್ಶಿಯಾಗಿಯೂ, ಗೃಹಕಾರ್ಯದರ್ಶಿಯಾಗಿಯೂ ನೇಮಕಗೊಂಡ. 1852ರಲ್ಲಿ ಪ್ರಧಾನಮಂತ್ರಿಯಾದ. ಈತನ ಒಲವು ಪಶ್ಚಿಮ ದೇಶಗಳ ಕಡೆ ಇತ್ತೆಂಬ ಕಾರಣದಿಂದಾಗಿ ಇವನನ್ನು ದೊರೆ ಅಧಿಕಾರದಿಂದ ತೆಗೆದುಹಾಕಿದ. ಇದಕ್ಕೆ ರಷ್ಯದ ಒತ್ತಡವೇ ಕಾರಣ. ಈತ ಮತ್ತೆ ಗೃಹಕಾರ್ಯದರ್ಶಿಯಾಗಿ ನೇಮಕಗೊಂಡ (1858). ಅಲೆಕ್ಸಾಂಡರನ ಪದವಿ ತ್ಯಾಗಕ್ಕೆ ಈತನೇ ಕಾರಣ (1858). ದೊರೆ ಮಿಲೋಶ್ ಒಬ್ರೆನೊವಿಚ್ ಎರಡನೆಯ ಬಾರಿಗೆ ಅಧಿಕಾರಕ್ಕೆ ಬಂದಾಗ ಗರಾಶನಿನ್ ರಾಜಕೀಯದಿಂದ ನಿವೃತ್ತನಾದ. 1860ರಲ್ಲಿ ಒಬ್ರೆನೊವಿಚ್ ತೀರಿಕೊಂಡ. ಮೈಕೇಲ್ ಸಿಂಹಾಸನಾರೋಹಣ ಮಾಡಿದ. ಈತ ಗರಾಶನಿನನನ್ನು 1861ರಲ್ಲಿ ಪ್ರಧಾನಮಂತ್ರಿಯಾಗಿ ಮಾಡಿಕೊಂಡ. ಮೈಕೇಲ್ ತನ್ನ ಸೋದರ ಸಂಬಂಧಿ ಕ್ಯಾಟರೀನ ಕಾನ್‌ಸ್ಟಾಂಟಿನೋವಿಚಳನ್ನು ಮದುವೆಯಾಗ ಬಯಸಿದಾಗ ಗರಾಶನಿನ್ ಇದನ್ನು ಒಪ್ಪಲಿಲ್ಲ. ಆದ್ದರಿಂದ ಈತ ಪ್ರಧಾನಿ ಪದವಿ ಕಳೆದುಕೊಂಡ. 1868ರಲ್ಲಿ ಮೈಕೇಲ್ ಕೊಲೆಯಾದ.[] ಆಗ ಸರ್ಬಿಯನನ್ನು ಅನಾಯಕತ್ವಸ್ಥಿತಿಯಿಂದ ರಕ್ಷಿಸಿದವನು ಗರಾಶನಿನ್. ಮಿಲಾನ್ ಒಬ್ರೆನೊವಿಚ್ ಸಿಂಹಾಸನಾರೋಹಣ ಮಾಡಿದಾಗ ಗರಾಶನಿನ್ ಅಧಿಕಾರದಿಂದ ನಿವೃತ್ತನಾದ. 1874ರ ಜೂನ್ 28ರಂದು ಬೆಲ್‍ಗ್ರೇಡಿನಲ್ಲಿ ಮರಣ ಹೊಂದಿದ.

ಗರಾಶನಿನ್ ತನ್ನ ಮೊದಲ ಅಧಿಕಾರಾವಧಿಯಲ್ಲಿ (1843-53) ಸರ್ಬಿಯವನ್ನು ಪ್ರಗತಿಪರವಾಗಿ ಪರಿವರ್ತಿಸಿದ. ದಕ್ಷ ಆಡಳಿತಾಂಗವನ್ನು ಸ್ಥಾಪಿಸಿದ. ಸರ್ಬಿಯದ ಸ್ವಯಮಧಿಕಾರವನ್ನು ರಕ್ಷಿಸುವುದು ಶಕ್ತರಾಷ್ಟ್ರಗಳ ಸಂಯುಕ್ತ ಹೊಣೆಗಾರಿಕೆಯೆಂಬುದಕ್ಕೆ ಪ್ಯಾರಿಸ್ ಒಪ್ಪಂದದಲ್ಲಿ (1856) ಮಾನ್ಯತೆ ದೊರಕಲು ಗರಾಶನಿನ್ ಕಾರಣ. ಗೃಹಾಡಳಿತದಲ್ಲಿ ಈತ ಸಂಪ್ರದಾಯ ನೀತಿ ಅನುಸರಿಸಿದರೂ ವಿದೇಶಾಂಗ ವ್ಯವಹಾರಗಳಲ್ಲಿ ಈತನದು ಧಾರಾಳ ನೀತಿಯಾಗಿತ್ತು. ಗರಾಶನಿನನ ಎರಡನೆಯ ಅಧಿಕಾರಾವಧಿಯಲ್ಲಿ (1861-1867) ಸರ್ಬಿಯದ ಮುಂದಾಳುತನದಲ್ಲಿ ದಕ್ಷಿಣ ಸ್ಲಾವ್ ರಾಜ್ಯಸ್ಥಾಪನೆಗಾಗಿ ಹಲವಾರು ಒಡಂಬಡಿಕೆಗಳನ್ನು ಮಾಡಿಕೊಂಡ.

ಈತನ ಮಗ ಮಿಲ್ಯುಟಿನ್ ಗರಾಶನಿನ್ (1843-1898).[] ಬೆಲ್‍ಗ್ರೇಡಿನಲ್ಲಿ ಹುಟ್ಟಿದ ಈತ ವಿದ್ಯಾಭ್ಯಾಸ ಮುಗಿಸಿದ ಅನಂತರ 1874ರಲ್ಲಿ ಪಾರ್ಲಿಮೆಂಟ್ ಪ್ರವೇಶಿಸಿದ. 1880-83ರಲ್ಲಿ ಗೃಹಕಾರ್ಯದರ್ಶಿಯಾಗಿ, 1883ರಲ್ಲಿ ವಿಯೆನ್ನದ ಮಂತ್ರಿಯಾಗಿ, 1895-96ರಲ್ಲಿ ಪಾರ್ಲಿಮೆಂಟಿನ ಅಧ್ಯಕ್ಷನಾಗಿದ್ದ. ಮತ್ತೆ ಮಂತ್ರಿಯಾದ. 1898ರಲ್ಲಿ ಮರಣಹೊಂದಿದ.

ಉಲ್ಲೇಖಗಳು

ಬದಲಾಯಿಸಿ
  1. MacKenzie 1985, p. 15.
  2. Mijatovich 1911, pp. 455–456.
  3. Hajdarpasic, Edin (2015-11-18). Whose Bosnia?: Nationalism and Political Imagination in the Balkans, 1840–1914 (in ಇಂಗ್ಲಿಷ್). Cornell University Press. ISBN 9781501701108.


ಗ್ರಂಥಸೂಚಿ

ಬದಲಾಯಿಸಿ



 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: