ಜನಸಮೂಹ

(ಇಟ್ಟಣ ಇಂದ ಪುನರ್ನಿರ್ದೇಶಿತ)

ಜನಸಮೂಹ ಎಂದರೆ ಸೇರಿರುವ ಅಥವಾ ಒಟ್ಟೆಂದು ಪರಿಗಣಿಸಲಾದ ಜನರ ದೊಡ್ಡ ಗುಂಪು. ಒಂದು ಜನಸಮೂಹವನ್ನು ಒಂದು ಸಾಮಾನ್ಯ ಉದ್ದೇಶ ಅಥವಾ ಭಾವನಾಸಮೂಹದ ಮೂಲಕ ವ್ಯಾಖ್ಯಾನಿಸಬಹುದು, ಉದಾಹರಣೆಗೆ ರಾಜಕೀಯ ರ‍್ಯಾಲಿಯಲ್ಲಿ, ಕ್ರೀಡಾ ಕಾರ್ಯಕ್ರಮದಲ್ಲಿ, ಅಥವಾ ಲೂಟಿಯಲ್ಲಿ (ಇದನ್ನು ಮನೋವೈಜ್ಞಾನಿಕ ಜನಸಮೂಹ ಎಂದು ಕರೆಯಲಾಗುತ್ತದೆ), ಅಥವಾ ಸರಳವಾಗಿ ಒಂದು ಬಿಡುವಿಲ್ಲದ ಪ್ರದೇಶದಲ್ಲಿ ತಮ್ಮ ಕಾರ್ಯದಲ್ಲಿ ಮಗ್ನವಾಗಿರುವ ಅನೇಕ ಜನರಿಂದ ರಚನೆಯಾಗಿರಬಹುದು.

ಮೆಟ್ರೊ ನಿಲ್ದಾಣದಲ್ಲಿ ಜನಸಮೂಹ

ಸಾಮಾಜಿಕ ಅಂಶಗಳು ಜನಸಮೂಹಗಳ ರೂಪಗೊಳ್ಳುವಿಕೆ, ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿರುತ್ತವೆ, ವ್ಯಕ್ತಿಗಳು ಮತ್ತು ಗುಂಪುಗಳು ಇಬ್ಬರ ದೃಷ್ಟಿಗಳಿಂದಲೂ. ಹಲವುವೇಳೆ ಒಂದು ನಿರ್ದಿಷ್ಟ ದೃಷ್ಟಿಕೋನದೊಂದಿಗೆ ಹೊಂದಿಕೊಳ್ಳುವಂತೆ ಜನಸಮೂಹದ ಮನವೊಲಿಸಲು (ಉದಾ. ರಾಜಕೀಯ ರ‍್ಯಾಲಿಗಳು), ಅಥವಾ ಹಾನಿ ಅಥವಾ ಜನಸಮೂಹ ವರ್ತನೆಯನ್ನು ತಡೆಯುವ ಸಲುವಾಗಿ ಗುಂಪುಗಳನ್ನು ಹತೋಟಿಯಲ್ಲಿಡಲು ಜನಸಮೂಹ ನಿಯಂತ್ರಣವನ್ನು ವಿನ್ಯಾಸಗೊಳಿಸಲಾಗಿರುತ್ತದೆ. ರಾಜಕೀಯವಾಗಿ ಆಯೋಜಿತ ಜನಸಮೂಹ ನಿಯಂತ್ರಣವನ್ನು ಸಾಮಾನ್ಯವಾಗಿ ಕಾನೂನು ಜಾರಿ ಮೂಲಕ ನಿರ್ವಹಿಸಲಾಗುತ್ತದೆ ಆದರೆ ಕೆಲವು ಸಂದರ್ಭಗಳಲ್ಲಿ ವಿಶೇಷವಾಗಿ ದೊಡ್ಡ ಅಥವಾ ಅಪಾಯಕಾರಿ ಜನಸಮೂಹಗಳಿಗಾಗಿ ಸೇನಾ ಪಡೆಗಳನ್ನು ಬಳಸಲಾಗುತ್ತದೆ.

ಸಾಮಾನ್ಯ ಮಟ್ಟದಲ್ಲಿ, ಜನಸಮೂಹ ಮನೋಭಾವವು ಪ್ರತ್ಯೇಕ ಜನಸಮೂಹ ಸದಸ್ಯರು ಮತ್ತು ಒಟ್ಟಾರೆ ಜನಸಮೂಹದ ವರ್ತನೆ ಮತ್ತು ಯೋಚನಾ ಪ್ರಕ್ರಿಯೆಗಳಿಗೆ ಸಂಬಂಧಿಸಿದೆ. ಜನಸಮೂಹ ಕಾರ್ಯಕ್ರಮಗಳ ಸಾಮಾನ್ಯತೆ, ಮತ್ತು ಜನರ ಅಂತಹ ದೊಡ್ಡ ಸಮೂಹಗಳಿಗೆ ಸಂಬಂಧಿಸಿದ ಸಂಭಾವ್ಯ ಸುರಕ್ಷತಾ ಸಮಸ್ಯೆಗಳನ್ನು ಪರಿಗಣಿಸಿ, ಈ ವಿಷಯವು ಜನಸಮೂಹ ನಿರ್ವಹಣೆಗೆ ಹೊಣೆಯಾದ ಸಂಸ್ಥೆಗಳಿಂದ ಮತ್ತು ಸರ್ಕಾರಗಳಿಂದಲೂ ಹೆಚ್ಚು ಗಮನ ಪಡೆಯುತ್ತಿದೆ.

ಜನಸಮೂಹಗಳ ಮೇಲಿನ ಅನೇಕ ಅಧ್ಯಯನಗಳು ಜನಸಮೂಹಗಳು ವಿಭಿನ್ನ ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸುತ್ತವೆಂಬ ಬಗ್ಗೆ ಒಳನೋಟಗಳನ್ನು ನೀಡಿವೆ. ೨೦೦೯ರ ಒಂದು ವರದಿಯು ಜನಸಮೂಹಗಳ ಅನೇಕ ವೀಕ್ಷಿಸಬಲ್ಲ ವರ್ತನೆಗಳನ್ನು ಎತ್ತಿ ತೋರಿಸಿತು.[೧] ಇದರಲ್ಲಿ ಕೇವಲ ಕೆಲವೇ ಸದಸ್ಯರು ಅಂತಹ ನಿರ್ಣಯಗಳನ್ನು ಮಾಡಲು ಬೇಕಾದ ಮಾಹಿತಿಯನ್ನು ಹೊಂದಿದ್ದರೂ ಸಹ, ಜನಸಮೂಹಗಳು ತಮ್ಮ ದಿಕ್ಕು ಹಾಗೂ ಚಲನೆಯ ವೇಗಕ್ಕೆ ಸಂಬಂಧಿಸಿದಂತೆ ಒಗ್ಗಟ್ಟಿನ ನಿರ್ಣಯಗಳನ್ನು ಮಾಡಬಲ್ಲವು ಎಂಬ ಸಾಕ್ಷ್ಯಗಳು ಸೇರಿವೆ. ತಿಳಿವಳಿಕೆಯುಳ್ಳ ಸದಸ್ಯರು ಜನಸಮೂಹದ ಮೇಲೆ ಪ್ರಭಾವ ಬೀರುವ ಪ್ರಮಾಣವು ಆ ಗುಂಪಿನಲ್ಲಿ ಅವರ ಸ್ಥಾನವನ್ನು ಅವಲಂಬಿಸಿರುತ್ತದೆ, ಮತ್ತು ಜನಸಮೂಹದ ಕೇಂದ್ರದಲ್ಲಿರುವವರು ಹೆಚ್ಚಿನ ಪ್ರಭಾವ ಹೊಂದಿರುವ ಸಾಧ್ಯತೆ ಇರುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. Challenger, R., Clegg, C. W., & Robinson, M. A. (2009). Understanding crowd behaviours. Multi-volume report for the UK Government’s Cabinet Office. London: Cabinet Office. http://www.cabinetoffice.gov.uk/resource-library/understanding-crowd-behaviours-documents
"https://kn.wikipedia.org/w/index.php?title=ಜನಸಮೂಹ&oldid=842111" ಇಂದ ಪಡೆಯಲ್ಪಟ್ಟಿದೆ