ಇಟಾಲಿಯನ್ ಸಂಗೀತ

ಇಟಲಿಯ ಸಂಗೀತ ಸಂಸ್ಕ್ರತಿಯ ನೋಟ

ಇದು ತನ್ನದೇ ಆದ ವೈಶಿಷ್ಟ್ಯವನ್ನು ಪಡೆದುಕೊಂಡದು 13ನೆಯ ಶತಮಾನದ ಸುಮಾರಿನಲ್ಲಿ. ಅಲ್ಲಿಯವರೆಗೆ ಗ್ರೀಕ್ ಮತ್ತು ರೋಮನ್ ಸಂಗೀತಗಳ ಪ್ರಾಚೀನ ಛಾಯೆಯಲ್ಲಿಯೇ ಅಜ್ಞಾತವಾಸವನ್ನು ಅನುಭವಿಸುತ್ತಿತ್ತು.

ಇತಿಹಾಸ ಬದಲಾಯಿಸಿ

ಸಂಗೀತದ ಪ್ರಾಚೀನತೆಯ ಹಾಡುಗಳು ಫ್ಲಾರೆನ್ಸಿನ ಮ್ಯಾಗ್ಲಿಯಾ ಬೆಕಿಯಾನ ಪುಸ್ತಕಭಂಡಾರದ ಹಸ್ತಪ್ರತಿಯಲ್ಲಿ ದೊರೆಯುತ್ತವೆ. ಇವು 13-14ನೆಯ ಶತಮಾನದಲ್ಲಿ ಕ್ರೈಸ್ತ ಸನ್ಯಾಸಿಗಳು ಪಶ್ಚಾತ್ತಾಪಪೂರ್ವಕವಾಗಿ ಪ್ರಾಯಶ್ಚಿತ್ತ ರೂಪದಲ್ಲಿ ಹಾಡುತ್ತಿದ್ದ ಲಾಉಡಿ ಸ್ಪಿರಿಚ್ಯು ಅಲಿ ಎಂಬ ಸ್ತುತಿಗೀತೆಗಳು. ಇವುಗಳ ರಚನಕಾರರಲ್ಲಿ ಜಾಕೊಪೊ ಡ ಟೋಡಿ (ಸು.1230-1306) ಪ್ರಮುಖನಾದವ. ಈ ಬಗೆಯ ಹಾಡುಗಳು ಜರ್ಮನಿಗೂ ಹರಡಿ ಅನಂತರ ಯೂರೋಪಿನಲ್ಲೆಲ್ಲ ಪಸರಿಸಿ ನಿಂತವು. ದೇವಭಾಷೆಯಲ್ಲಿ ಅಲ್ಲದೆ ದೇಶೀಭಾಷೆಯಲ್ಲಿ ಸಹ ಮತಧರ್ಮದ ಕರ್ಮಾಚರಣೆಯ ಹಾಡುಗಳನ್ನು ರೂಪಿಸುವ ದೇಶೀಪ್ರವೃತ್ತಿಗೆ ಯೂರೋಪಿನಲ್ಲಿ ಇದೇ ನಾಂದಿಯಾಯಿತು. ಸುಮಾರು ಇದೇ ಸಮಯದಲ್ಲಿ ಕರ್ಣಾಟಕದಲ್ಲಿ ಶಿವಶರಣರೂ ಹರಿದಾಸರೂ ಮಹಾರಾಷ್ಟ್ರದಲ್ಲಿ ಜ್ಞಾನೇಶ್ವರನೂ, ತಮಿಳುನಾಡಿನಲ್ಲಿ ಪ್ರಾಚೀನ ಆಳ್ವಾರರುಗಳೂ, ವ್ರಜಭಾಷೆಯಲ್ಲಿ ತುಲಸೀದಾಸರೂ ಸೂರದಾಸರೂ ಭಾರತೀಯ ಸಂಗೀತದಲ್ಲಿ ದೇಶೀಪದ್ಧತಿಯನ್ನು ಪ್ರಾರಂಭಿಸಿದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಸಂಸ್ಕೃತಿ ಬದಲಾಯಿಸಿ

ಇಟಲಿಯ ಲೌಕಿಕ ಸಂಗೀತದ ಉಗಮ 14ನೆಯ ಶತಮಾನದಲ್ಲಿ ಮಾಡ್ರಿಗಾಲೆ ಎಂಬ ಪುಟ್ಟ ಪ್ರೇಮಭಾವಗೀತೆಯಲ್ಲಿ ಕಾಣಬರುತ್ತದೆ. ಸಂವಾದರೂಪದ ಈ ಹಾಡು ಅನೇಕ ಚರಣಗಳಲ್ಲಿ ಇರುತ್ತಿದ್ದು, ಏಕಧಾತುಕವಾದ ಮಟ್ಟಿನಲ್ಲಿ, ಬೇಟೆಯ ಶೈಲಿಯಲ್ಲಿ, ವಾದ್ಯಸಂಗೀತದ ಪಕ್ಕವಾದ್ಯದೊಡನೆ ಇಬ್ಬರು ಸಂಭಾಷಣೆಯಲ್ಲಿ ಹಾಡುತ್ತಿದ್ದ ಕಾಚ್ಚಿಯ. ಪ್ರತಿ ಚರಣವೂ ಪುನಃ ಪಲ್ಲವಿಯ ಹಾಡಿಕೆಯಿಂದ ಮುಗಿಯುತ್ತಿದ್ದ, ನೃತ್ಯ ಛಂದಸ್ಸುಗಳಲ್ಲಿ ಹಾಡಲಾಗುತ್ತಿದ್ದ ಬಲ್ಲಾಟ ಹಾಗೂ ಕಡೆಯಲ್ಲಿ ಪುನರುಕ್ತವಾಗುತ್ತಿದ್ದ ರಿಟೊರ್ನೆಲೂ ಎಂಬ ವಾದ್ಯಸಂಗೀತದ ಅಂಶ-ಇವನ್ನು ಒಳಗೊಳ್ಳುತ್ತಿತ್ತು. ಈ ಶತಮಾನದಲ್ಲಿ ನೃತ್ಯಗೀತೆಗಳೂ ಸ್ವಲ್ಪವಾಗಿ ಚರ್ಚ್ ಸಂಗೀತವೂ ಉಪಲಬ್ಧವಿದೆ. ಫ್ಲಾರೆನ್ಸಿನ ಸ್ಕ್ವೇಸಿಯಾ ಲೂಪಿಯಂಥ ಪ್ರಸಿದ್ಧ ಸಂಗೀತಗಾರರು ಈ ಕಾಲದಲ್ಲಿ ಕಂಡುಬರುತ್ತಾರೆ. ಆದರೆ ಮುಖ್ಯ ವಾಗ್ಗೇಯಕಾರರೆಲ್ಲರೂ ಡ್ಯೊಫೆ ಮತ್ತು ಜೋಸ್ಕ್ವಿನ್ ಡೆಸ್ ಪ್ರೆಸ್‍ನಂತೆ, ಔತ್ತರೇಯ ಯೂರೋಪಿಯನ್ನರೇ. ಹದಿನಾರನೆಯ ಶತಮಾನ : 16ನೆಯ ಶತಮಾನದ ವೇಳೆಗೆ[ಹಾಲೆಂಡ್, ಡೆನ್ಮಾರ್ಕ್‍ಗಳಿಂದ ಬಹುಮಂದಿ ವಾಗ್ಗೇಯಕಾರರು ಇಟಲಿಗೆ ಬಂದು ನೆಲಸಿದರು. ಆದರೆ ಈ ವೇಳೆಗೆ ಫ್ರೊಟೋಲ ಎಂಬ ಸರಳವಾದ ಅನೇಕ ಚರಣಗಳುಳ್ಳ, ಅನೇಕರು ವಾದ್ಯದೊಡನೆ ಕೂಡಿ ಹಾಡುವ, ಒಬ್ಬರು ಅಥವಾ ನಾಲ್ವರು ಗಾಯಕರಿರುವ ಪ್ರಬಂಧಜಾತಿಯನ್ನು ಇಟಾಲಿಯನ್ನರೇ ನಿರ್ಮಿಸಿಕೊಂಡಿದ್ದರು. ಇದು ಅತಿಯಾಗಿ ಪ್ರಚಾರವಾಗಿ ಹಳಸಲು ಪ್ರಾರಂಭವಾದುದರಿಂದ ಇದಕ್ಕೆ ಉತ್ತರವಾಗಿ ಮ್ಯಾಡ್ರಿಗಲ್‍ನ ಹೊಸ ರೂಪಾಂತರವೊಂದನ್ನು (14ನೆಯ ಶತಮಾನದ ಮ್ಯಾಡ್ರಿಗಾಲೆ ಅಲ್ಲ) ಸೃಷ್ಟಿಸಿಕೊಳ್ಳಲಾಯಿತು. ಇದರಲ್ಲಿ ಸಮಷ್ಟಿರೂಪವಿದ್ದು ನುಡಿಗಳನ್ನು ಬೇರ್ಪಡಿಸಿರಲಿಲ್ಲ. ಮೆನೆಂಜಿಯೋ, ಗುಸುವಾಲ್ಡೋ ಮತ್ತು ಮಾಂಟಿವರ್ಡಿಗಳು 1530ರ ಸುಮಾರಿನಲ್ಲಿ ಅತಿಸರಳವಾಗಿದ್ದ ಇದನ್ನು ಪ್ರೌಢ ಸುಂದರಪ್ರಬಂಧವನ್ನಾಗಿಸಿದರು. 16ನೆಯ ಶತಮಾನ ಇನ್ನೂ ಹಲವು ವಿಧಗಳಲ್ಲಿ ಹೊಸತನ್ನು ಮೂಡಿಸಿತು. ಸುಗಮಗೇಯ ರೀತಿಯಾಗಿದ್ದ ಬ್ಯಾಲೆಟ್ಟೊ ಮುಂತಾದ ಹಾಡುಗಳು ಹುಟ್ಟಿ ಗಸ್ಟೋಲ್ಡಿ ಮುಂತಾದ ವಾಗ್ಗೇಯಕಾರರಿಂದ ಪುಷ್ಟವಾಗಿ ಬೆಳೆದುವು. ಕೌನ್ಸಿಲ್ ಆಫ್ ಟ್ರಿಂಟ್‍ನ (1562) ಸಲಹೆಯಂತೆ ಚರ್ಚ್ ಸಂಗೀತ ಸರಳವೂ ಸಾಮಾನ್ಯರಿಗೆ ಹೆಚ್ಚು ಸಾಧ್ಯವೂ ಆಯಿತು. ಈ ನಿಟ್ಟಿನಲ್ಲಿ ಪ್ಯಾಲೆಸ್ಟ್ರಿನ ಸಲ್ಲಿಸಿದ ಸೇವೆ ಸ್ಮರಣೀಯವಾದುದು. ಚಿಕ್ಕವರೂ ಧಾರ್ಮಿಕಗೋಷ್ಠಿಗಳಲ್ಲಿ ಹಾಡಬಹುದಾದ ಸರಳಧಾರ್ಮಿಕ ಗೋಷ್ಠಿಗಾನವನ್ನು ಈ ಕಾಲದಲ್ಲಿ ರಚಿಸಿ, ಇಂಥ ಪ್ರಥಮಗೋಷ್ಠಿಯನ್ನು ಎಮಿಲಿಯೊ ಡಿ ಕೆವೆಲಿಯರಿ ರೆಪ್ರೆಜೆಂಟೀಯೋನ್ ಡಿ ಅನಿಮ ಎ ಡಿಕಾರ್ಪೊ ಎಂಬ ರೂಪಕವನ್ನು ರಚಿಸಿ 1660ರಲ್ಲಿ ಹಾಡಿದ. ಆಪೆರದ ಹುಟ್ಟು : ಪಾಶ್ಚಾತ್ಯ ಸಂಗೀತದಲ್ಲಿ ಇಂದು ಆಪೆರ ಎಂಬ ಪ್ರಸಿದ್ಧ ಗೇಯ ನಾಟಕ ಅಥವಾ ಗೇಯ ರೂಪಕದ ರೀತಿ ಇಟಲಿಯ ಫ್ಲಾರೆನ್ಸಿನಲ್ಲಿ, ಅಲ್ಲಿಯ ಬಾರ್ಡಿ ಮತ್ತು ಕಾರ್ಸಿ ಎಂಬ ಶ್ರೀಮಂತ ಪಾಳೆಯಗಾರರ ಆಶ್ರಯದಲ್ಲಿ ಹುಟ್ಟಿತು. ಈ ನಿಟ್ಟಿನಲ್ಲಿ ಮೊದಲು ಶ್ರಮಿಸಿದವರು ಗೆಲಿಲಿ, ಕಾಚ್ಚಿನಿ, ಕೆವಲಿಯರಿ ಮತ್ತು ಪೆರಿ. ಇದೇ ಆಶ್ರಯದಾತರಲ್ಲಿ ಕವಿಯಾಗಿದ್ದ ರಿನುಚ್ಚಿನಿಯ ಯೂರಿಡಿಸ್ ಎಂಬ ನಾಟಕಕ್ಕೆ ಸಂಗೀತವನ್ನು ಪೆರಿ ಮತ್ತು ಕಾಚ್ಚಿನಿ ಅಳವಡಿಸಿದರು. ಪ್ರಾಚೀನ ಗ್ರೀಕ್‍ನಾಟಕಗಳ ಸಂಗೀತಕ್ರಮವನ್ನು ಪುನರುಜ್ಜೀವನಗೊಳಿಸಲು ಆಪೆರ ಯತ್ನಿಸಿತು. ಇದು ಪ್ರಾರಂಭವಾದುದು ಒಬ್ಬರೇ ಹಾಡುವ ಅಥವಾ ಏಕಕಂಠಪ್ರಧಾನವಾದ, ನಿಷ್ಕøಷ್ಟ ಪದೋಚ್ಛಾರಣೆಯ, ಮ್ಯಾಡ್ರಿಗಲ್‍ನ ಹೊಸರೂಪವೊಂದರಲ್ಲಿ, ಪಕ್ಕವಾದ್ಯ ಅತ್ಯಂತ ಸರಳವೂ ಸುಲಭವೂ ಆಗಿದ್ದರಿಂದ ಗಾಯಕ ಛಂದೋಲಯ ಕಾಲಗಳಲ್ಲಿ ರಸಾಭಿವ್ಯಕ್ತಿಗೆ ಅನುಸಾರವಾಗಿ ಸ್ವಂತಮನೋಧರ್ಮಕ್ಕೆ ಅನುಗುಣವಾಗಿ ಹಾಡಬಹುದಾಗಿತ್ತು. ಇದು ಸ್ವತಂತ್ರವೂ ಸಂಕೀರ್ಣವೂ ಬಹು ಜನಪ್ರಿಯವೂ ಆದ ಪ್ರಬಂಧ ಪ್ರಕಾರವಾದುದು ಮಾಂಟೆವರ್ಡಿಯ ಪ್ರತಿಭೆಯಿಂದ; 1607ರಲ್ಲಿ ಮಾಂಟುವದ ರಾಜಾಸ್ಥಾನದಲ್ಲಿ ಆತ ರಚಿಸಿದ ಫೆವೂಲಾ ಡಿ ಓರ್ಫಿಯೋ ಆಪೆರ ಚಳವಳಿಗೆ ನಾಂದಿಯಾಯಿತು. ಪ್ಯಾಲೆಸ್ಟ್ರಿನನಂತೆ ಆತ ಚರ್ಚ್‍ಸಂಗೀತವನ್ನೂ ಮ್ಯಾಡ್ರಿಗಲ್‍ಗಳನ್ನೂ ಗಮನಾರ್ಹವಾಗಿ ರಚಿಸಿದ್ದಾನೆ. ವಿವರಗಳಿಗೆ (ನೋಡಿ- ಗೇಯರೂಪಕ).[೧]

ವಾದ್ಯ ಸಂಗೀತ, ಸಂಗೀತ ಲಿಪಿ ಬದಲಾಯಿಸಿ

ವೆನಿಸ್ 16ನೆಯ ಶತಮಾನದಲ್ಲಿ ಆಪೆರಕ್ಕೆ ಪ್ರಸಿದ್ಧಿಪಡೆದಂತೆಯೇ ವಾದ್ಯಸಂಗೀತಕ್ಕೂ ಸಂಗೀತಲಿಪಿಗೂ ಕೇಂದ್ರವಾಯಿತು. ಬಹುಸ್ವರ ಶ್ರೇಣಿಯನ್ನು ಒಮ್ಮೆಗೇ ಹಾಡುವ, ವಾದನ ರಹಿತವಾದ, ಬೈಬಲ್‍ನಿಂದ ಉದ್ಧರಿಸಿಕೊಂಡ ಮಾತುಗಳಿಗೆ ಧಾತು ರಚನೆ ಮಾಡಿದ ಮೋಟೆಟ್ ಎಂಬ ಪ್ರಬಂಧಜಾತಿಯ ಫ್ಲೆಮಿಷ್ ಪ್ರಭೇದಗಳನ್ನು ಆಂಡ್ರಿಯಾಗೇರಿಯಲ್ಲಿ ಮತ್ತು ಕ್ಲಾಡಿಯ ಮೇರುಲೋಗಳು ಸ್ವತಂತ್ರವಾದ ವಾದ್ಯಪ್ರಬಂಧಗಳನ್ನಾಗಿ ಪರಿವರ್ತಿಸಿದರು. ಇವನ್ನು ಜೋವಾನಿ ಗೇಬ್ರಿಯಲಿ ಆರ್ಗನ್ ವಾದ್ಯದಲ್ಲಿ ವಿಶೇಷವಾಗಿ ಸಂವರ್ಧಿಸಿದ. ನೃತ್ಯಗೀತೆಗಳನ್ನೂ ಲಘುಗೀತೆಗಳನ್ನೂ ಈ ಕಾಲದಲ್ಲಿ ವಾದ್ಯಗಳಿಗೆ ಅಳವಡಿಸಲಾಯಿತು. ಟಾಕಟಾ ಎಂಬ ಒಂದು ಹೊಸವಾದನ ತಂತ್ರವನ್ನು ಪಾಂಡಿತ್ಯ ಪ್ರದರ್ಶನ ಹಾಗೂ ವಾದ್ಯದ ಸಕಲ ಸಾಧ್ಯತೆಗಳ ಸಾಕ್ಷಾತ್ಕಾರಗಳಿಗೆಂದೇ ನಿರ್ಮಿಸಲಾಯಿತು. ಮತ್ತೊಂದು ಹಾಡಿನಿಂದ ಅನುಕರಿಸಿಕೊಳ್ಳುವ ಧಾತುವುಳ್ಳ, ಎರಡು ಅಥವಾ ಮೂರು ಭಾಗಗಳಲ್ಲಿ ರಚಿತವಾದ ಕನ್‍ಜೋನ ಎಂಬ ವಾದ್ಯಪ್ರಬಂಧವೂ ಬಹುಸ್ವರಶ್ರೇಣಿಯಲ್ಲಿ ಪ್ರಾರಂಭವಾಗಿ, ಪಾಂಡಿತ್ಯಪೂರ್ಣವಾಗಿ, ಆಧುನಿಕ ಫ್ಯೂಗ್ ಪ್ರಬಂಧಕ್ಕೆ ಮಾತೃಕೆಯಾಗಿದ್ದ ರಿಚರ್ಕಾರ್ ಎಂಬ ವಾದ್ಯ ಪ್ರಬಂಧವೂ ಈ ಯುಗದಲ್ಲಿ ಬೆಳೆದುವು. ಫ್ರೆಸ್ಕೋಬಾಲ್ಡಿ ರಿಚರ್ಕಾರನ್ನು ಪರಿಪುಷ್ಟಗೊಳಿಸಿದ. ಗೇಬ್ರೆಯಲಿ ಮನೆತನದವರು ಚರ್ಚ್ ಸಂಗೀತವನ್ನು ವಾದ್ಯಕ್ಕೆ ಬರೆದು ಹರಡಿದರು. ವೆನಿಸ್ಸಿನಲ್ಲಿ ಚರ್ಚ್ ಸಂಗೀತ ವಾದ್ಯಪ್ರಧಾನವಾಗಿಬಿಟ್ಟುದರ ಪ್ರತಿಕ್ರಿಯೆಯಾಗಿ ಆನೆರಿಯೋ ಸೋದರ ನಾನಿನಿ ಸೋದರರು ವಾದ್ಯಗಳೇ ಇಲ್ಲದೆ ಮಾಡುವ ಆ ಕಾಪೆಲ್ಲ ಶೈಲಿಯನ್ನು ರೋಂನಲ್ಲಿ ಬೆಳೆಸಿದರು. ಬಹು ಸಂಖ್ಯೆಯಲ್ಲಿ ವಾದ್ಯವೈವಿಧ್ಯವನ್ನು ಬಳಸುವ ಆರ್ಕೆಸ್ಟ್ರಾಗಳ ಮೂಲಕ ಮಾಂಟೆವರ್ಡಿ ತನ್ನ ಆಪೆರಗಳನ್ನು ರಚಿಸಿದ.

ವಾದ್ಯಸಂಗೀತದ ಉತ್ಕರ್ಷ ಬದಲಾಯಿಸಿ

17-18ನೆಯ ಶತಮಾನಗಳು ಮತ್ತೆ ಕೆಲವು ನವ್ಯಸಾಧನೆಗಳನ್ನು ಇಟಲಿಗೆ ತಂದುಕೊಟ್ಟವು. ವಾದ್ಯಸಂಗೀತ ಈ ಯುಗದಲ್ಲಿ ಹೆಚ್ಚಿನ ಉತ್ಕರ್ಷವನ್ನು ಸಾಧಿಸಿತು; ಆಂಡ್ರಿಯ ಆಮಾಟಿ, ಬರ್ಟೊಲಾಟಿ (ಗ್ಯಾಸ್ಟಾರೋ ಡ ಸಾಲೋ) ಮತ್ತು ಆಂಟೋನಿಯೋ ಸ್ಟ್ರ್ಯಾಡಿವೆರಿಗಳು ನಾದಶಾಸ್ತ್ರದಲ್ಲಿ ಅದ್ಭುತ ಸಂಶೋಧನೆಯಿಂದ ಪಿಟೀಲನ್ನು ಉತ್ತಮಗೊಳಿಸಿದರು. ಪಿಟೀಲಿನ ಸ್ವರದ ಬಲವನ್ನು ಕ್ರಮೋನದ ಗ್ವಾರ್ನಿಯರಿ ಅಭಿವೃದ್ಧಿಗೊಳಿಸಿದ. ಗಾರ್ತೋಲೋಮಿಯೋ ಕ್ರಿಸ್ಟೋಫರಿ ಆಧುನಿಕ ಪಿಯಾನೋ ವಾದ್ಯಕ್ಕೆ ಜನಕನಾದ. ವಾದ್ಯಸಂಗೀತಕ್ಕೆ ಸ್ವರಲಿಪಿಯನ್ನು ಅಳವಡಿಸುವ ಪ್ರಯತ್ನ ಮೊದಲಾದ್ದದೂ ಈ ಕಾಲದಲ್ಲಿಯೇ. ಮಂದ್ರತಮಸ್ಥಾಯಿಯಲ್ಲೆ ಬರುವ ಸ್ವರವಿರಾಮಗಳನ್ನು ಮಾತ್ರ ಗುರುತುಹಾಕಿ ಊಧ್ರ್ವಸ್ವರಶ್ರೇಣಿಗಳನ್ನು (ಕಾರ್ಡ್) 1, 2 ಮುಂತಾದ ಅಂಕಗಳಿಂದ ಸೂಚಿಸುವ ಫಿಗರ್ಡ್ ಬಾಸ್ ಎಂಬ ಶೀಘ್ರಲಿಪಿ ಪದ್ಧತಿಯೂ ನೀಚತಮಸ್ಕರಗಳನ್ನು ಮಾತ್ರ ಗುರುತುಹಾಕಿ ಕಾರ್ಡ್‍ಗಳನ್ನು ಅರಬ್ಬೀ ಅಂಕಗಳಿಂದ ಸೂಚಿಸುವ ಥರೋ ಬಾಸ್ ಎಂಬ ಶೀಘ್ರಲಿಪಿ ಪದ್ಧತಿಯೂ ರೂಢಿಗೆ ಬಂದವು. ಈ ಶತಮಾನಗಳಲ್ಲಿಯೇ ಆಪೆರದಂತೆ ಮೇಳವನ್ನು ಪ್ರಮುಖವಾಗಿ ಉಳಿಸಿಕೊಂಡು ಆಪೆರವನ್ನು ಹೋಲುವ, ಆದರೆ ಅಭಿನಯ, ನೇಪಥ್ಯ ರಂಗಸಜ್ಜಿಕೆಗಳಿಲ್ಲದ ರಟೋರಿಯೋ ಉದ್ಭವಿಸಿತು. ಕ್ಯಾರಿಸ್ಸಿಮಿ ಇದರ ಪ್ರಸಿದ್ಧ ಪ್ರವರ್ತಕನಾದ. ಆದರೆ ದೃಶ್ಯಪ್ರಧಾನವಾದ ಬ್ಯಾರೋಕ್ ರೀತಿಯ ಆಪೆರಗಳಲ್ಲೆ ಕ್ಯವಿಲೆ, ಚೇಸ್ಟಿ ಮುಂತಾದವರು ವೆನಿಸ್ಸಿನಲ್ಲೂ ಪ್ರತಿಭಾಸಂಪನ್ನ ವಾಗ್ಗೇಯಕಾರನಾದ ಅಲೆಗ್ಸ್ಯಾಂಡ್ರೋ ಸ್ಕಾರ್ಲಟ್ಟಿ ರೋಂ ಮತ್ತು ನೇಪಲ್ಸ್‍ಗಳಲ್ಲೂ ಓರಟೋರಿಯೋಯಿಂದ ಮೇಳವನ್ನು ಕಿತ್ತುಹಾಕಿದರು. ಆಪೆರದಲ್ಲಿ ಪೀಠಿಕಾರೂಪದ ಸಂಗೀತವಾದ ವರ್ಚರ್‍ನಲ್ಲಿ ಡ ಕಾಪೋ ಎಂಬ ರೀತಿ, ಸೆಕೋ ಎಂಬ ವಾದ್ಯ ರಹಿತವಾದ, ಸ್ಟ್ರುಮೆಂಟೀಟೋ ಎಂಬ ವಾದ್ಯಸಹಿತವಾದ ಪಾಠ್ಯರೀತಿಗಳು ಉಚ್ಛ್ರಾಯಗೊಂಡ್ಡದೂ ಆ ಕಾಲದಲ್ಲೇ. ಇದೇ ಸುಮಾರಿನಲ್ಲಿ ಪಿಟೀಲಿಗಾಗಿಯೇ ಸಂಗೀತ ರಚನೆ ಮಾಡಿದ ಗಾರೆಲ್ಲಿ, ವೀಟಾಲಿ, ಜೆಮಿನಿಯಾನಿ, ಪೂನ್ಯಾನಿ ಹಾಗೂ ಮಹಾಪ್ರತಿಭಾವಂತನಾದ ಗಿವಾಲ್ಡಿ-ಇವರು ಪಿಟೀಲಿನ ಸಂಗೀತವನ್ನು ಇಟಲಿಯಲ್ಲಿ ಮೆರೆಸಿದ ಧೀಮಂತ ವಾಗ್ಗೇಯಕಾರರು. ಹಾಪ್ಸೀಕಾರ್ಡ್ ವಾದ್ಯದ ಸಂಗೀತವನ್ನು ವಿಶೇಷವಾಗಿ ನೊಮಿನ್ಸಿಯೋ ಸ್ಕಾರ್ಲಟ್ಟಿ ರಚಿಸಿ ಸೊನ್ಯಾಟಾ ಎಂಬ ವಾದ್ಯ ಸಂಗೀತ ಪ್ರಬಂಧಕ್ಕೆ ಆದಿಪುರುಷನಾದ. ಪೂರ್ಣವಾದ, ವಾದ್ಯಬಾಹುಳ್ಯವುಳ್ಳ ವೃಂದಗಳಿಗಾಗಿ ರಚಿಸಿದ ಸನ್ಸರ್ಟೋ ಗ್ರಾಸೋ ಮತ್ತು ತಂತೀವಾದ್ಯಬೃಂದವೂ ಈಗಲೇ ರೂಢಿಪಡೆದವು. ಸಿಂಫೂನಿ ಎಂದು ಈಗ ಬಹು ಪರಿಚಿತವಾಗಿರುವ ಮಹಾಪ್ರಬಂಧದ ಮೂಲಪುರುಷನಾದ ಸಮ್ಮಾರ್ಟಿನಿ ಈ ಯುಗದವ. ಬೊಕ್ಕೆರಿನಿ ಅಲ್ಪಶ್ರೋತೃಸಮುದಾಯಕ್ಕಾಗಿ ಪ್ರತ್ಯೇಕವಾಗಿ ಸಂಗೀತವನ್ನು (ಚೇಂಬರ್ ಮ್ಯೂಸಿಕ್) ರಚಿಸಿದ.

ಕವಲೊಡೆದ ಆಪೆರ ಬದಲಾಯಿಸಿ

18ನೆಯ ಶತಮಾನದ ಪೂರ್ವಾರ್ಧದಲ್ಲಿಯೇ ಆಪೆರ ಕವಲೊಡೆದು ಎರಡಾಯಿತು; ನೇಪಲ್ಸ್‍ನಲ್ಲಿ ಲಿಯೊನಾರ್ಡೊ ಲಿಯೊ ಲೋಗ್ರೋಸಿನೋ, ಗುಲೈಲ್ಮಿ, ಪಿಚ್ಚಿನಿ ಮುಂತಾದ ವಾಗ್ಗೇಯಕಾರರ ನೇತೃತ್ವದಲ್ಲಿ ಜನಸಾಮಾನ್ಯರೇ ಪಾತ್ರಗಳಾದ ಪ್ರಹಸನರೂಪದ ಆಪೆರ ಬೊಫಾ ಬೆಳೆದು ಬಲಿಯಿತು; ಇದರಲ್ಲಿ ಸಾಮೂಹಿಕ ಗಾನ, ದ್ವಂದ್ವಗಾನ, ತನಿಯಾದ ಆರಿಯಾಗಳು ಕೂಡಿಕೊಂಡವು; ಹೀಗೆ ಉಳಿದುಬಂದಿರುವ ಏಕಾಂಕ ಗೇಯಪ್ರಹಸನಗಳಲ್ಲಿ ಮತ್ತು ಅಂಕಗಳ ಮಧ್ಯದಲ್ಲಿರುವ ಧ್ರುವಾಸಂಗೀತದಲ್ಲಿ ಪೆರ್ಗೋಲೆಸಿ ರಚಿಸಿದ ಲಾ ಸೆರ್ವವೇ ಅತ್ಯಂತ ಮುಖ್ಯವಾದುದು. ಇದೇ ಕಾಲದಲ್ಲಿ ಮಾತೆಲ್ಲವೂ ಪಾಠ್ಯರೂಪದ ವಾಚನದಲ್ಲಿಯೇ ಇದ್ದ ಸಾಮೂಹಿಕಗಾನ ವಾದನಗಳು ಪ್ರಧಾನವಾಗಿದ್ದ ಆಪೆರ ಸೀರಿಯ ನೇಪಲ್ಸ್‍ನಲ್ಲಿಯೇ ಜೀನೋ ಮತ್ತು ಮೆಟಸ್ಟೇಸಿಯರಿಂದಲೊ ಇತರ ಇಟ್ಯಾಲಿಯನ್ ವಾಗ್ಗೇಯಕಾರರಾದ ಬೊಮ್ಮೆಲ್ಲಿ, ಟ್ರಾಎಟ್ಟ, ಮಾಇಒ-ಇವರಿಂದಲೂ ಬೆಳೆಯಿತು. ಕೇವಲ ವಿನೋದಕ್ಕಾಗಿ ಬರೆದ ಗೇಯಪ್ರಹಸನಗಳನ್ನು ಸಾರ್ಟಿ, ಪೈಸಿಯಲ್ಲೂ, ಗಜ್ಜಾನಿಗ, ಚಿಮರೋಸಗಳು ಮುಂದಕ್ಕೆ ತಂದರು.

19ನೆಯ ಶತಮಾನದಿಂದ ಪ್ರಥಮ ಪಾದದವರೆಗೂ ಇಟಾಲಿಯನ್ ಸಂಗೀತದಲ್ಲಿ ಆಪೆರದ ಪ್ರಾಧಾನ್ಯ ಬೃಹತ್ತಾಗಿ ಮೂಡಿತು. ಮರ್ಕಡ್ಯಾಂಟಿ ಮತ್ತು ಪಾಚಿನಿಯರಂಥ ವಾಗ್ಗೇಯಕಾರರೂ ದೊಡ್ಡ ಆಪೆರಗಳನ್ನು ನಿರ್ಮಿಸಿದರು. ಮಹಾ ಪ್ರಭಾವಶಾಲಿಗಳಾದ ರೋಸ್ಸಿನಿ ಮತ್ತು ಡೊನಿಜೆಟ್ಟಿ, ಬೆಲ್ಲಿನಿಗಳೂ ಅದರ ಗುಣಗಾತ್ರಗಳನ್ನು ಸಂವರ್ಧಿಸಿದರು. ಈ ಯುಗದಲ್ಲಿ ವರ್ಡಿಯೇ ಇವರೆಲ್ಲರಿಗಿಂತ ಮಹತ್ತು ಬೃಹತ್ತುಗಳಲ್ಲಿ ಸಮಾನನಾದ ವಿಭೂತಿ ವಾಗ್ಗೇಯಕಾರನೆಂಬುದು ನಿಸ್ಸಂದೇಹ. ಈತ ಆಪೆರಗಳನ್ನೇ ಅಲ್ಲದೆ ಇತರ ಪ್ರಬಂಧರೀತಿಗಳನ್ನೂ ರಚಿಸಿದ್ದಾನೆ. ಇದೇ ಕಾಲದಲ್ಲಿ ಸ್ಗಂಬಟಿ ಮತ್ತು ಮಾರ್ಟೊಚ್ಚಿಯಂತ ಪ್ರಮುಖರು ಏಕಾಂಗಿ ವೀರರಾಗಿ ಶುದ್ಧ (ಮಾತುಗಳಿಲ್ಲದ) ಸಂಗೀತವನ್ನು ಬೆಳೆಸಿದರು; ಪೊಂಚಿಯಲ್ಲಿಯೂ ರಿಚ್ಚೆ ಸೋದರರೂ ನವರಸ ಪ್ರಧಾನವಾದ ವೆರಿಸ್ಕೋ ಎಂಬ ಶೈಲಿಯನ್ನು ಆಪೆರದಲ್ಲಿ ಪ್ರಸಿದ್ಧಿಗೆ ತಂದರು. ಇದರ ಅತಿರೇಕ ಮೃಸ್ಕಾನ್ಯಿ ಮತ್ತು ಜಾರ್ಡನೋಗಳ ರಚನೆಗಳಲ್ಲಿ ಕಾಣುತ್ತದೆ. ಆಧುನಿಕ ತಂತ್ರ, ಸಾಮಗ್ರಿ, ಸಾಧನಗಳನ್ನು ಬಳಸಿ ಆಪೆರಗಳನ್ನು ರಚಿಸಿದ ಲುಚ್ಚ ಜಾಕೋವೋ ಪೂಚ್ಚಿನಿ ಆಧುನಿಕ ಪಾಶ್ಚಾತ್ಯ ಸಂಗೀತ ಕಚೇರಿಗಳಲ್ಲಿ ಆಪೆರಕ್ಕೆ ಹಿರಿಯಸ್ಥಾನವನ್ನು ಕಲ್ಪಿಸಿಕೊಟ್ಟ ಮಹಾಪ್ರತಿಭಾಸಂಪನ್ನ; ರಂಗ ಸಜ್ಜಿಕೆಯ ತಂತ್ರಗಳನ್ನು ಉಪಯೋಗಿಸಿಕೊಂಡು ಸಂಗೀತದ ಮೂಲಕ ವಾತಾವರಣ, ರಸಾನುಭೂತಿ ಮತ್ತು ಸಂವೇದನೆಗಳನ್ನು ಉಂಟುಮಾಡುವುದರಲ್ಲಿ ಈತ ಅದ್ವಿತೀಯ. ಇವನ ಅನಂತರ ಪಿಜೆಟ್ಟಿ ಗಾಂಭೀರ್ಯ ಪ್ರಧಾನವಾದ ಆಪೆರಗಳನ್ನೂ ಒಟ್ಟೊರಿನೋರೆಸ್ಪಘಿ ಆಪೆರ, ಆರ್ಕೆಸ್ಟ್ರ ಮತ್ತು ಚೇಂಬರ್ ಮ್ಯೂಸಿಕ್‍ಗಳನ್ನೂ ರಚಿಸಿದ್ದಾರೆ. ಮಲಿಪಿಯರೋ ಮತ್ತು ಕೆಸೆಲ್ಲಗಳು ಈ ಯುಗದ ಸಂಗೀತ ರಚನಾಪ್ರಯೋಗ ಪಟುಗಳು. ಘೇಡಿನಿ ತನ್ನ ಸಂಗೀತದಲ್ಲಿ ಆಧುನಿಕ ಸಂಪ್ರದಾಯದ ಮುನ್ಸೂಚನೆಗಳನ್ನು ತೋರಿಸಿದ್ದಾನೆ. ಆಧುನಿಕ ಇಟಾಲಿಯನ್ ವಾಗ್ಗೇಯಕಾರರಲ್ಲಿ ಡಲ್ಲಾ ಪಿಟ್ಟೋಲನನ್ನು ಹೆಸರಿಸಬಹುದು. ಪರದೇಶಗಳಲ್ಲಿ ಇಟಾಲಿಯನ್ ಸಂಗೀತ : 19ನೆಯ ಶತಮಾನದಿಂದಲೂ ಹಲವು ಇಟಾಲಿಯನ್ ಸಂಗೀತಕಾರರು ಪರದೇಶಗಳಿಗೆ ವಲಸೆಹೋಗಿ ಅಲ್ಲಿ ತಮ್ಮ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸಿದರು. ಹೀಗೆ ಇಂಗ್ಲೆಂಡಿನಲ್ಲಿ ಕ್ಲೆಮೆಂಟಿ ಮತ್ತು ರಾಉಜ್ಜಿನಿ, ಪ್ಯಾರಿಸ್ಸಿನಲ್ಲಿ ಪಾಎರ್, ಸ್ಪೊಂಟನಿ, ಚೆರುಬಿನಿ, ವಯೊಲಾಟ್ಟಿ ಮುಂತಾದವರು ಖ್ಯಾತಿವೆತ್ತವರು. ಪೆಗಾನಿನಿ ಪಿಟೀಲಿನಲ್ಲೂ ಕ್ಲೆಮೆಂಟಿ ಪಿಯಾನೋದಲ್ಲೂ ಡೊಮೆಸ್ಸಿಯೋ ಸ್ಕಾರ್ಲಟ್ಟಿ ಹಾಪ್ರ್ಸಿಕಾರ್ಡ್‍ನಲ್ಲೂ ಅದ್ಭುತ ಸಾಧನೆಗಳಿಂದ ಜಗದ್ವಂದ್ಯರಾದರು. ಅಮೆರಿಕದ ಸಂಯುಕ್ತ ಸಂಸ್ಥಾನಕ್ಕೆ ವಲಸೆಹೋಗಿ ನೆಲೆಸಿದ ಇಟಾಲಿಯನ್ ವಾಗ್ಗೇಯಕಾರ-ಸಂಗೀತಕಾರರಲ್ಲಿ ಜಾನ್ ಕಾರ್ಲೊಮೆನಾಟ್ಟಿ, ವಾಲ್ಟರ್ ಪಿಸ್ಟನ್ ಮತ್ತು ಪಾಲ್ ಕ್ರೆಸ್ಟನ್ನರು ಬಹುಶ್ರುತರು.

ಆಧುನಿಕ ಇಟಾಲಿಯನ್ ಸಂಗೀತ ಬದಲಾಯಿಸಿ

ಆಧುನಿಕ ಇಟಲಿಯಲ್ಲಿ ಗಿಡೋ ಎಂ. ಗಾಲ್ಟ. ಫೋಸ್ಟೋ ಅಕಾನ್‍ಫೂರ ಡಿ ಟಾರ್ರೆಫ್ರಾಂಕಾ, ಫರ್ನಾಂಡೋ ಲೊಇಜ್ಜಿ, ಆಂಡ್ರಿಯ ಡೆಲಾಕಾರ್ಟ್, ಗಿಡೋ ಪೆನ್ನೈನ್-ಇವರು ಸಂಗೀತಶಾಸ್ತ್ರ ಕೋವಿದರಾಗಿ ಬಹುಸೇವೆ ಸಲ್ಲಿಸುತ್ತಿದ್ದಾರೆ. ಇಟಲಿಯಲ್ಲಿ ಇಂದು ಐನೂರಕ್ಕೂ ಮೀರಿದ ಸಂಗೀತಸಭೆ, ಸಂಗೀತಸಮಾಜಗಳಿವೆ. ಗ್ರೊಪ್ಟಿ ಯೂನಿವರ್ಸಿಟಾರಿ ಮ್ಯೂಸಿಕಾಲಿ ಎಂಬ ಸಂಸ್ಥೆ ಹದಿನೆಂಟು ಬೇರೆ ಬೇರೆ ವಿಶ್ವವಿದ್ಯಾನಿಲಯಗಳ ಸಂಗೀತವಿದ್ಯಾರ್ಥಿಗಳನ್ನೊಳಗೊಂಡು ರೋಂ, ಮಿಲಾನ್ ಮತ್ತು ಪಾಲೆರ್ಮೋಗಳಲ್ಲಿರುವ ತನ್ನ ಶಾಖೆಗಳಲ್ಲಿ ಪ್ರಾಚೀನ ಹಾಗೂ ಆಧುನಿಕ ಸಂಗೀತಗಳ ಅಧ್ಯಯನವನ್ನು ನಡೆಸುತ್ತಿದೆ. ಸಂಗೀತಕಚೇರಿ, ಸಂಗೀತರಚನೆಗಳು ಸಂಗೀತ ಶಾಸ್ತ್ರಗ್ರಂಥಗಳು ಮೊದಲಾದವನ್ನು ಪ್ರಕಟಿಸುವ ಸಂಸ್ಥೆಗಳು ನಲವತ್ತಕ್ಕೂ ಹೆಚ್ಚಿವೆ. ಹಲವು ಸಂಗೀತಸಂಸ್ಥೆಗಳು ಪ್ರಪಂಚ ಪರ್ಯಟನೆಮಾಡಿ ಸಂಗೀತ ಕಚೇರಿಗಳನ್ನು ಮಾಡಿವೆ. ಆಧುನಿಕ ಇಟಾಲಿಯನ್ ಸಂಗೀತದಲ್ಲಿ ಸ್ವದೇಶಾಭಿಮಾನ, ಸ್ವದೇಶೀಯ ಪ್ರವೃತ್ತಿಗಳು ಹೆಚ್ಚಾಗಿ ಗಾಂಭೀರ್ಯ ಸಂಯಮ, ದೃಢತೆ, ಸಂಕ್ಷಿಪ್ತತೆ ಮುಂತಾದ ಗುಣಗಳ ಸಂವರ್ಧನೆ ನಡೆಯುತ್ತಿದೆ. ಅನ್ಯಸಂಗೀತಗಳ ಪ್ರಭಾವ ಅಲ್ಲಲ್ಲಿ ಕಂಡುಬಂದರೂ ಒಟ್ಟಿನಲ್ಲಿ ಭಾವಕ್ಕೆ ಪ್ರಾಧಾನ್ಯ ನೀಡಲಾಗುತ್ತಿದೆ. ಇಟಲಿಯ ವಿವಿಧ ಭಾಗಗಳ ಸಂಗೀತದಲ್ಲಿರುವ ವೈಪರೀತ್ಯ, ವೈಲಕ್ಷಣಗಳನ್ನು ಕಳೆದು ಸಮರೂಪತೆಯನ್ನು ತಂದುಕೊಡುವ ಮುಖ್ಯವೂ ಅಗತ್ಯವೂ ಆಗಿರುವ ಚಳವಳಿ ಆಧುನಿಕ ಇಟಾಲಿಯನ್ ಸಂಗೀತದ ಶುಭಲಕ್ಷಣಗಳಲ್ಲಿ ಒಂದು.

(ಆರ್.ಎಸ್.ಎನ್.)

ಉಲ್ಲೇಖಗಳು ಬದಲಾಯಿಸಿ