ಇಟಲಿಯ ಜನ ಸುಮಾರು 3000 ವರ್ಷಗಳಿಂದಲೂ ಅವಿಚ್ಛಿನ್ನವಾದ ಸಂಸ್ಕøತಿ ಪರಂಪರೆ ಬೆಳೆಸಿಕೊಂಡು ಬಂದಿದ್ದಾರೆ. ಸಾಹಿತ್ಯ, ಸಂಗೀತ, ಶಿಲ್ಪ, ವಾಸ್ತುಶಿಲ್ಪ, ಚಿತ್ರಕಲೆ ಮುಂತಾದ ಹಲವು ಪ್ರಭೇದಗಳಲ್ಲಿ ಜಗತ್ತಿನ ಕಣ್ಣು ಸೆಳೆಯುವಂಥ ಅತ್ಯುತ್ಕøಷ್ಟ ಮಟ್ಟವನ್ನು ಮುಟ್ಟಿದ್ದಾರೆ. ಯೂರೋಪಿನ ನಾಗರಿಕತೆಯ ತವರು, ಇಟಲಿ ದೇಶ ಎಂದು ಹೇಳಬಹುದು.

ರೋಮನ್ ಚಕ್ರಾಧಿಪತ್ಯ ಬದಲಾಯಿಸಿ

ಕ್ರಿ.ಶ. ನಾಲ್ಕನೆಯ ಶತಮಾನದ ರೋಮನ್ ಚಕ್ರಾಧಿಪತ್ಯದಲ್ಲಿ ಕ್ರೈಸ್ತಧರ್ಮ ಸ್ಥಾಪನೆಯಾದ ಅನಂತರ ಕ್ರೈಸ್ತಧರ್ಮದ ಅನುಯಾಯಿಗಳು, ಅದರ ಪ್ರವರ್ತಕರು, ಆ ದೇಶದಲ್ಲಿ ಅಳಿದುಳಿದ ಪ್ರಾಚೀನ ಗ್ರೀಕ್ ಹಾಗೂ ರೋಮನ್ ಕಲಾವಶೇಷಗಳನ್ನು ತಮ್ಮದೇ ಆದ ಉದ್ದೇಶಕ್ಕೆ ಬಳಸಿಕೊಂಡರು. ವಿಭಿನ್ನ ಕಲಾಪದ್ಧತಿ ಹಾಗೂ ಸಂಪ್ರದಾಯಗಳನ್ನು ಧರ್ಮಪ್ರಸಾರಕ್ಕೆ ಅಳವಡಿಸಿಕೊಂಡರು. ಆ ಕಾಲದಲ್ಲಿ ಮೊಟ್ಟಮೊದಲು ಅಸ್ತಿತ್ವಕ್ಕೆ ಬಂದುದು ವಾಸ್ತುಶಿಲ್ಪ. ಪ್ರಾಚೀನ ಗ್ರೀಕ್, ರೋಮನ್ ಕಟ್ಟಡಗಳಿಂದ ಪ್ರೇರಿತವಾಗಿ ನಾನಾ ಭಾಗಗಳಲ್ಲಿ ಹಲವಾರು ಚರ್ಚುಗಳು ನಿರ್ಮಿತವಾದವು. ಚಿತ್ರ ಹಾಗೂ ಶಿಲ್ಪಕಲೆಯನ್ನು ಈ ಚರ್ಚುಗಳ ಒಳ ಹೊರಗಣ ಅಲಂಕರಣಕ್ಕೆ ಉಪಯೋಗಿಸಿದರು. ರೋಮನ್ ಚಕ್ರಾಧಿಪತ್ಯಕ್ಕೂ ಬೈಜಾóಂಟೈನ್ ಮುಂತಾದ ಪೂರ್ವ ದೇಶಗಳಿಗೂ ನಿಕಟ ವಾಣಿಜ್ಯ ಸಂಬಂಧವಿದ್ದುದರಿಂದ ಇಟಲಿಯ ಬುನಾದಿಕಾಲದ ಕ್ರೈಸ್ತಕಲೆಯ ಮೇಲೆ ಕ್ರಿಸ್ತಪೂರ್ವ ಕಾಲದ ಗ್ರೀಕ್, ರೋಮನ್ ಕಲೆ ಎಷ್ಟು ವ್ಯಾಪಕವಾದ ಪ್ರಭಾವ ಬೀರಿತೋ ಪೂರ್ವದೇಶಗಳ ಕಲಾ ಪರಂಪರೆಯೂ ಅಷ್ಟೇ ಪ್ರಭಾವ ಬೀರಿತು.ಕ್ರೈಸ್ತಯುಗದ ಪ್ರಾರಂಭದಲ್ಲಿ ಚರ್ಚುಗಳನ್ನು ಕಟ್ಟಲು, ಪುರಾತನ ರೋಮಿನಲ್ಲಿ ಅರಮನೆ, ನ್ಯಾಯಾಲಯ ಕಟ್ಟಡಗಳನ್ನು ಕಟ್ಟಲು ಉಪಯೋಗಿಸಿದ ಬ್ಯಾಸಿಲಿಕನ್ ಪದ್ಧತಿಯನ್ನೇ ಇಲ್ಲೂ ಅನುಸರಿಸಲಾಯಿತು. ಆ ಕಾಲದ ಚರ್ಚುಗಳ ಹೊರಗಿನ ಗೋಡೆಗಳು ಬರಿದಾಗಿದ್ದು, ಕಟ್ಟಡದ ಒಳಭಾಗ ಹಾಗೂ ಮರದ ಮೇಲ್ಛಾವಣಿ ಬಣ್ಣದಿಂದ ಅಲಂಕೃತವಾಗಿರುತ್ತಿದ್ದವು. ಗೋಡೆಯನ್ನು ಅಮೃತಶಿಲೆಯಿಂದ ಅಲಂಕರಿಸುತ್ತಿದ್ದರು. ಬೈಜಾಂಟೈನ್ ಶೈಲಿಯಲ್ಲಿ ಕಟ್ಟಲಾದ ಕಟ್ಟಡಗಳಲ್ಲಿ ಬಣ್ಣದ ಕಲ್ಲು ಹಾಗೂ ಗಾಜಿನ ಚೂರುಗಳನ್ನು ಸಿಮೆಂಟಿನ ಮೇಲೆ ಜೋಡಿಸಿ, ಚಿತ್ರಗಳನ್ನು ಬಿಡಿಸಿ ಮೊಸಾಯಿಕ್ ಎಂಬ ಕಲಾವಿಧಾನದ ಪ್ರಕಾರ ಅಲಂಕರಿಸುತ್ತಿದ್ದರು. ಚರ್ಚಿನ ಮುಖ್ಯ ಭಾಗಗಳನ್ನು ಸಿಂಗರಿಸಲು ರೇಷ್ಮೆ ಬಟ್ಟೆ, ದಂತದ ಕೆತ್ತನೆ, ಎನಾಮಲ್‍ಗಳನ್ನು ಬಳಸುತ್ತಿದ್ದರು. ಚಿತ್ರಯುಕ್ತ ಹಸ್ತಪ್ರತಿಗಳನ್ನು (ಇಲ್ಯೂಮಿನೇಟೆಡ್ ಮ್ಯಾನುಸ್ಕ್ರಿಪ್ಟ್ಸ್) ಅಲಂಕಾರಕ್ಕಾಗಿ ಉಪಯೋಗಿಸುತ್ತಿದ್ದರು. ಇಟಲಿಯ ಕಲೆಯಲ್ಲಿ ಫ್ರೆಸ್ಕೋ ಎಂದು ಈಗ ಲೋಕವಿಖ್ಯಾತವಾಗಿರುವ ಭಿತ್ತಿಚಿತ್ರಕಲೆ ರೂಪಪಡೆದುದು ಆ ಕಾಲದಲ್ಲೇ, ಮೊಸಾಯಿಕ್ ಹಾಗೂ ಅಮೃತಶಿಲೆಯ ಬಳಕೆಗೆ ಹೆಚ್ಚು ಹಣ ಬೇಕಾಗುತ್ತಿದ್ದುದರಿಂದ, ಗಾರೆಯ ಗೋಡೆಯ ಮೇಲೆ ಚಿತ್ರಗಳನ್ನು ರಚಿಸುವ ಹೊಸಪದ್ಧತಿಯನ್ನು ಹೆಚ್ಚಾಗಿ ಬಳಸಲು ಪ್ರಾರಂಭಿಸಿದರು. ಕ್ರೈಸ್ತಯುಗದ ಪ್ರಾರಂಭದಲ್ಲಿನ ಕಲೆಯಲ್ಲಿ ಗ್ರೀಕ್ ರೋಮನ್ ಆಕೃತಿಗಳನ್ನೇ ಅನುಕರಿಸಿದರೂ ಅವುಗಳಷ್ಟು ಕ್ರೈಸ್ತ ಆಕೃತಿ ರೂಪಗಳು ವಾಸ್ತವಿಕವಾಗಿರುತ್ತಿರಲಿಲ್ಲ. ವಾಸ್ತವಿಕ ಮಾನವಾಕೃತಿಗಳನ್ನು ಹೋಲುವಂಥ ಚಿತ್ರಣ ಮೂಡಿಬರಲು ಸುಮಾರು ಸಾವಿರ ವರ್ಷಗಳು ಬೇಕಾದವು. ಆ ಯುಗದಲ್ಲಿ ಕಟ್ಟುತ್ತಿದ್ದ ಗೋರಿಗಳ ಮೇಲೆ ಬೈಬಲ್ಲಿನಿಂದ ಆರಿಸಿದ ದೃಶ್ಯಗಳನ್ನು ದಟ್ಟವಾಗಿ ಕೊರೆಯುತ್ತಿದ್ದರು. ನವಿಲು ಮುಂತಾದ ಪಕ್ಷಿಗಳನ್ನೂ ದ್ರಾಕ್ಷಿಬಳ್ಳಿಯ ಚಿತ್ರಗಳನ್ನೂ ಬಿಡಿಸುತ್ತಿದ್ದರು.[೧]

ಮಧ್ಯಯುಗ ಬದಲಾಯಿಸಿ

ಮಧ್ಯಯುಗದಲ್ಲಿ ಇಟಲಿಯ ಪರ್ಯಾಯದ್ವೀಪವನ್ನು ಆಕ್ರಮಿಸಿಕೊಳ್ಳಲು ಅನಾಗರಿಕ ಜನಾಂಗಗಳು ಕ್ರೈಸ್ತರ ವಿರುದ್ಧ ಹೋರಾಡುತ್ತಿದ್ದವು. ರೋಮನ್ನರಿಂದ ಪ್ರೇರಿತವಾದ ಕಲಾ ಸಂಪ್ರದಾಯ, ಹಾಗೂ ಬೈಜಾಂಟೈನ್ ಕಲೆಗಳ ಜೊತೆಗೆ ಅನಾಗರಿಕ ಜನಾಂಗದ ಕಲಾರೀತಿಯೂ ಸೇರಿ ಮಧ್ಯಯುಗದ ಇಟಲಿಕಲೆ ರೂಪಿತವಾಯಿತು. ಸುಮಾರು 10ನೆಯ ಶತಮಾನದಿಂದ ಹಿಡಿದು 12ನೆಯ ಶತಮಾನದವರೆಗೆ ರೋಮನೆಸ್ಕ್ ಎಂಬ ವಾಸ್ತುಶಿಲ್ಪ ಶೈಲಿ ಅನುಷ್ಠಾನಕ್ಕೆ ಬಂತು. ಮರದ ಚಾವಣಿಯ ಬದಲು ದುಂಡುಕಲ್ಲಿನ ಕಮಾನು ಎಬ್ಬಿಸುವ ಹಾಗೂ ಅದನ್ನು ಏರಿಸಿ ನಿಲ್ಲಿಸಲು ದಪ್ಪಗೋಡೆಗಳನ್ನು ಕಟ್ಟುವ ಪದ್ಧತಿ ಜಾರಿಗೆ ಬಂತು. ಬಿಡುಬೀಸಾದ ಒಳಹಜಾರ ಹಾಗೂ ಭವ್ಯವಾದ ಕಂಬಗಳನ್ನುಳ್ಳ ಆ ಕಟ್ಟಡಗಳು ಅನನ್ಯಗಾಂಭೀರ್ಯದಿಂದ ತುಂಬಿ ಮೆರೆಯುವಂತಿದ್ದವು. ರೋಮನೆಸ್ಕ್ ಶೈಲಿಯ ಕಟ್ಟಡಗಳಿಗೆ ಇಟಲಿಯ ವಿಶಿಷ್ಟ ಕೊಡುಗೆಯೆಂದರೆ, ಚರ್ಚಿನ ಪಕ್ಕದಲ್ಲಿ ಗಂಟೆಗೋಪುರ ಕಟ್ಟುವ ಪದ್ಧತಿ. ಒಂಬತ್ತನೆಯ ಶತಮಾನದಿಂದ ಹನ್ನೆರಡನೆಯ ಶತಮಾನದವರೆಗಿನ ವೆನಿಸ್, ರಾವೆನಾಗಳಲ್ಲಿ ಕಟ್ಟಲಾದ ಚರ್ಚುಗಳ ಒಳಭಾಗದಲ್ಲಿ ಚಿತ್ರಗಳನ್ನು ಕೆತ್ತುತ್ತಿದ್ದರು.ಹನ್ನೆರಡನೆಯ ಶತಮಾನದ ಅನಂತರ ಫ್ರಾನ್ಸ್ ದೇಶದಲ್ಲಿ ಬಳಕೆಗೆ ಬಂದ ಗಾಥಿಕ್ ಶಿಲ್ಪಶೈಲಿ ಇಟಲಿಯಲ್ಲೂ ಹರಡಿತು. ಉದ್ದುದ್ದ ತ್ರಿಕೋಣಾಕಾರದ ಚೂಪುಗೋಪುರಗಳು ಮತ್ತು ಕಮಾನುಗಳನ್ನು ಹೊಂದಿದ್ದು ಆಕಾಶದುದ್ದಕ್ಕೂ ಭವ್ಯವಾಗಿ ನಿಂತಂತೆ ತೋರುವ ಗಾಥಿಕ್ ಶೈಲಿಯ ಕಟ್ಟಡಗಳು, ಪ್ರಾರ್ಥನೆ ಮಾಡುವ ಮಂದಿಯ ಕಣ್ಣು ಸ್ವರ್ಗದತ್ತ ಹೊರಳುವಂತೆ ಮಾಡಿದವು. ಆದರೆ ಗಾಥಿಕ್ ಶೈಲಿ ಇಟಲಿಯಲ್ಲಿ ಅಷ್ಟೇನೂ ಹೆಚ್ಚಾಗಿ ಜನಪ್ರಿಯವಾದಂತೆ ತೋರುವುದಿಲ್ಲ. ಫ್ಲಾರೆನ್ಸ್‍ನಲ್ಲಿನ ಕೆಥೆಡ್ರಲ್ ಕಟ್ಟಿದ ಅರ್ನಾಲ್ಫೋಡಿ ಕ್ಯಾಂಬಿಯ (1232-1300) ಆ ಕಾಲದ ಮಹಾಶಿಲ್ಪಿಗಳಲ್ಲೊಬ್ಬ. ಆತ ಕಟ್ಟಿದ ಕೆಲವು ಕಟ್ಟಡಗಳಲ್ಲಿ ಗಾಥಿಕ್ ಶೈಲಿಯನ್ನು ಅನುಸರಿಸಿದರೂ ಅವು ಫ್ರೆಂಚ್ ಗಾಥಿಕ್ ಶೈಲಿಯಿಂದ ತೀರಾ ವಿಭಿನ್ನವಾದ ಮಾರ್ಗ ಹಿಡಿದವು.[೨]

ಇಟಲಿಯ ಗಾಥಿಕ್ ಕಟ್ಟಡ ಬದಲಾಯಿಸಿ

ಇಟಲಿಯ ಗಾಥಿಕ್ ಕಟ್ಟಡಗಳಲ್ಲಿ ಬಿಡಿಸಿದ ಕೆತ್ತನೆಯ ಚಿತ್ರಗಳಲ್ಲಿ ಪ್ರಕೃತಿ ಹಾಗೂ ಮಾನವಜೀವನವನ್ನು ಕುರಿತ ಹೊಸಪ್ರವೃತ್ತಿ ಮೂಡಿಬಂದಿರುವುದು ಗಮನಾರ್ಹ, ಮಧ್ಯಯುಗದಲ್ಲಿ ಕ್ರೈಸ್ತಮಠಗಳು ಮನುಷ್ಯನ ಜೀವನ ಹೇಯ, ಕ್ಷಣಿಕ ಹಾಗೂ ಪಾಪಕರವೆಂದು ಒತ್ತಿಹೇಳಿದವು. ನಿಜವಾದ ಮೋಕ್ಷಸುಖ ಸತ್ತ ಅನಂತರವೇ ದೊರೆಯುವಂಥದು ಎಂದು ಮುಂತಾಗಿ ಬೋಧಿಸಿದವು. ಆದರೆ 12ನೆಯ ಶತಮಾನದ ಅನಂತರ ಈ ದೃಷ್ಟಿಯಲ್ಲಿ ಬದಲಾವಣೆಯಾದಂತೆ ಕಾಣುತ್ತದೆ. ಅನಾಮಧೇಯರಾಗಿ ಉಳಿಯುತ್ತಿದ್ದ ಶಿಲ್ಪಿಗಳು, ಕಲಾವಿದರು, ತಮ್ಮ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದು ಕಂಡು ಬರುತ್ತದೆ. ಸಿಯಾನೋ ಚರ್ಚಿನಲ್ಲಿ ಜೋವನಿ ಪಿಸಾನೋ ಕೆತ್ತಿದ ಶಿಲ್ಪಕೃತಿಗಳಲ್ಲಿ ಗಿಡಮರಗಳು, ಪ್ರವಾದಿಗಳು, ಕುದುರೆ ಮುಂತಾದ ಪ್ರಾಣಿಗಳು ಮೂಡಿಬಂದಿವೆ. ಮಾನವಾಕೃತಿಗಳು ನಿಚ್ಚಳವಾಗಿ ಅರಳಿ, ಮುಖದಲ್ಲಿ ಎಳೆನಗೆ ಸೂಸುವಂತೆ ಕಾಣುತ್ತವೆ. ಆರ್ವಿಟೋ ಎಂಬಲ್ಲಿನ ಚರ್ಚಿನಲ್ಲಿರುವ ಸೃಷ್ಟಿ ಹಾಗೂ ಪ್ರಳಯದ ಚಿತ್ರಗಳಲ್ಲಿ ಮಾನವಜೀವನದ ನೋವಿನ ಪ್ರಜ್ಞೆ ಇದೆ. ಸಪುರವಾದ ಮಾನವಾಕೃತಿಗಳ ಅಂಗಸೌಷ್ಠವದಲ್ಲಿ ಗಾಥಿಕ್ ರೂಪವಿದ್ದರೂ ಮಾನವೀಯತೆ ಎದ್ದು ಕಾಣುತ್ತದೆ. ಆ ಯುಗದಲ್ಲಿ ಹರಡುತ್ತಿದ್ದ ಮಾನವತಾವಾದವನ್ನು ಈ ಶಿಲ್ಪ ಕೃತಿಗಳು ತುಂಬಿತೋರಿಸುತ್ತವೆ. ಆ ಕಾಲದ ನಿಕೋಲೋ ಪಿಸಾನೋ, ಅವನ ಮಗ ಜೋವನಿ ಪಿಸಾನೋ ಇಬ್ಬರೂ ಟಸ್ಕನ್ ಪ್ರದೇಶದಲ್ಲಿನ ಹಲವಾರು ಚರ್ಚುಗಳಲ್ಲಿ ತಮ್ಮ ಶಿಲ್ಪಕಲಾವೈಭವವನ್ನು ಬೆಳಗಿಸಿದರು. ಪ್ರಾಚೀನ ರೋಮನ್ ಕಲೆಯ ರೀತಿ ಸೂತ್ರಗಳೆಲ್ಲ ಇವರ ಕೈಲಿ ಹೊಸ ಜೀವ ಪಡೆದಂತೆ ಕಾಣುತ್ತವೆ. ನಿಕೋಲೋ ಕೊರೆದ ವರ್ಜಿನ್ ಮೇರಿ ಮೂವರು ದೊರೆಗಳನ್ನು ಸ್ವಾಗತಿಸುವ ಚಿತ್ರದಲ್ಲಿ ಮೇರಿ, ರೋಮನ್ ಚಕ್ರವರ್ತಿನಿಯಂತೆ ತೋರುತ್ತಾಳೆ.ಮಾನವತಾವಾದದ ಪ್ರಭಾವವನ್ನು ಅಂದಿನ ಚಿತ್ರಕಲೆಯಲ್ಲೂ ಕಾಣಬಹುದು. 11-13ನೆಯ ಶತಮಾನದ ಪ್ರಮುಖ ಕಲಾವಿದರೆಲ್ಲ ಸಿಯಾನಾ ಪ್ರದೇಶಕ್ಕೆ ಸೇರಿದವರಾಗಿದ್ದು, ಬೈಜಾóಂಟೈನ್ ಶೈಲಿಯ ಪ್ರಭಾವಕ್ಕೆ ಒಳಗಾದಂತೆ ಕಾಣುತ್ತದೆ. ಫ್ರೆಂಚ್‍ಗಾಥಿಕ್ ಶೈಲಿ ಹಾಗೂ ಬೈಜಾóಂಟೈನ್ ಸಂಪ್ರದಾಯದ ಸಮನ್ವಯವನ್ನು ಸಿಮೊನಿ ಮಾರ್ಟಿನಿಯ (1283-1344) ಕೃತಿಗಳಲ್ಲಿ ಮಾತ್ರ ಗುರುತಿಸಬಹುದು. ಆದರೆ ನಿಜವಾಗಿ ಮಾನವತಾವಾದದ ಸಾರಸರ್ವಸ್ವವನ್ನು ಸಮಗ್ರವಾಗಿ ಪ್ರತಿರೂಪಿಸಿದ ಕಲಾವಿದನೆಂದರೆ ಗಿಯಾಟೋ (1267-1337). ಅರಿನಾ ಪ್ರಾರ್ಥನಾ ಮಂದಿರದಲ್ಲಿ ಈತ ಚಿತ್ರಿಸಿರುವ ದೃಶ್ಯಗಳು ವಾಸ್ತವಿಕತೆಯ ಪ್ರತೀಕದಂತಿದೆ. ಶಿಶುಕ್ರಿಸ್ತನನ್ನು ದುಕೂಲದಲ್ಲಿ ಮರೆಮಾಡಿ ಎತ್ತಿಕೊಂಡು ಪ್ರಯಾಣ ಮಾಡುವ ವರ್ಜಿನ್ ಮೇರಿಯ ಮುಖದಲ್ಲಿ ತಾಯ್ತನದ ಮಾರ್ದವ, ಆತಂಕಗಳನ್ನು ಕಾಣಬಹುದು. ಅವರ ಕಡೆ ತಿರುಗಿನೋಡುವ ಜೋಸೆಫನ ಮುಖದಲ್ಲಿ ಮಾನವ ಸಹಜವಾದ ಕಾತರ ಸೂಸಿರುವುದು ಅಷ್ಟೇ ಸುಸ್ಪಷ್ಟವಾಗಿದೆ. ಗಿಯಾಟೋ ಚಿತ್ರಿಸಿರುವ ಬೈಬಲ್ ಕಥೆಯ ದೃಶ್ಯಗಳೆಲ್ಲದರಲ್ಲೂ ಸರಳವಾದ ನಿರೂಪಣಾ ಶೈಲಿಯಿದೆ. ಬೈಬಲ್ಲಿನ ಕಥೆಯನ್ನು ಶ್ರೀಸಾಮಾನ್ಯರಿಗೆ ತಿಳಿಸಲು ಉದ್ದೇಶಿಸಿದ ಈ ಚಿತ್ರಗಳು ತಮ್ಮ ಗುರಿ ಮುಟ್ಟಿದಂತೆ ಕಾಣುತ್ತವೆ.

ಹೊಸಹುಟ್ಟಿನ ಕಾಲದ ಕಲಾಪರಂಪರೆ ಬದಲಾಯಿಸಿ

ಶಿಲ್ಪಿಗಳಾದ ಪಿಸಾನೋದ್ವಯರು, ಚಿತ್ರಕಾರ ಗಿಯಾಟೋ ಹಾಕಿಕೊಟ್ಟ ಮಾರ್ಗವನ್ನೇ ಹೊಸಹುಟ್ಟಿನ (ರಿನೈಸನ್ಸ್) ಕಾಲದ ಕಲಾವಿದರು ಅನುಸರಿಸಿದಂತೆ ತೋರುತ್ತದೆ. ಗ್ರೀಕ್, ರೋಮನ್ ಸಂಸ್ಕøತಿ ಇಟಲಿಯಲ್ಲಿ ಅತ್ಯಂತ ಗಾಢಪ್ರಭಾವ ಬೀರಿದ ಕಾಲ ಅದು. ಕ್ರೈಸ್ತಮಠ ಮತ್ತು ಅದಕ್ಕೆ ಸೇರಿದ ಜೀವನಕ್ಷೇತ್ರ ಎಷ್ಟು ಮುಖ್ಯವೋ ಮನುಷ್ಯ ಜೀವನ ಮತ್ತು ಅದರ ಪರಿಸರ ಅಷ್ಟೇ ಮುಖ್ಯವೆಂದು ತೋರಿಸಿದ ಕಾಲ ಅದು. ಅದ್ಭುತ ವೈಜ್ಞಾನಿಕ ಸಂಶೋಧನೆ, ಹೊಸ ಕ್ಷಿತಿಜಗಳ ಶೋಧನೆ ನಡೆದ ಆ ಯುಗದಲ್ಲಿ, ಇಟಲಿ ಕಲೆ ಫ್ಲಾರೆನ್ಸ್, ರೋಮ್, ವೆನಿಸ್‍ಗಳಲ್ಲಿ ವ್ಯಾಪಕವಾಗಿ ಬೆಳೆಯಿತು.ಫ್ಲಾರೆನ್ಸ್ ಹಲವು ವಿರೋಧ, ವಿಚಿತ್ರಗಳಿಂದ ತುಂಬಿದ್ದ ಪಟ್ಟಣ. ಇಡೀ ಊರೇ ಕೋಟೆ ಕೊತ್ತಲಗಳಿಂದ ಆವೃತವಾಗಿದ್ದು, ಸಣ್ಣ ರಸ್ತೆಗಳು, ಉದ್ದುದ್ದ ಗೋಪುರಗಳು ಎಲ್ಲೆಲ್ಲೂ ಹರಡಿದ್ದವು. ನಗರದ ತುಂಬ ಚಿತ್ತಾರದಂಥ ಅರಮನೆಗಳು. ಮೆಡಿಚಿಯಂಥ ಶ್ರೀಮಂತರು ತುಂಬಿದ ಈ ನಗರದಲ್ಲಿ ವಾಣಿಜ್ಯ, ಕಲೆಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದವು. ಕ್ರೌರ್ಯ, ಹಿಂಸೆಗಳಿಗೆ ಹೆಸರುವಾಸಿಯಾದ ಆ ಊರಿನಲ್ಲಿ ಯುದ್ಧಗಳು ಆಗಾಗ ಹೊತ್ತಿ ಉರಿಯುತ್ತಿದ್ದವು. ಮಠಾಧಿಕಾರಿಗಳ, ಶ್ರೀಮಂತರ ನಡುವೆ ದಿನಬೆಳಗಾದರೆ ಪರಸ್ಪರ ಕಲಹಗಳುಂಟಾಗುತ್ತಿದ್ದವು. ಈ ಪರಸ್ಪರ ವೈಷಮ್ಯ ಕಲೆಯ ಮೇಲೂ ಪ್ರಭಾವ ಬೀರಿತು. ಪ್ರತಿಯೊಂದು ಶ್ರೀಮಂತ ಕುಟುಂಬವೂ ಅತ್ಯಂತ ಶ್ರೇಷ್ಠ ಕಲಾವಿದನ ಸೇವೆ ಪಡೆಯಲು ಪೈಪೋಟಿ ನಡೆಸುತ್ತಿದ್ದು, ಅತ್ಯುತ್ಕøಷ್ಟ ಕಲಾಕೃತಿಗಳನ್ನು ಸಂಗ್ರಹಿಸಲು ಕಾತರವಾಗಿರುತ್ತಿತ್ತು. ಆದ್ದರಿಂದ ಆಗಿನ ಕಾಲದ ಯಾವ ನಗರದಲ್ಲೂ ಕಾಣದಷ್ಟು ಅಸಂಖ್ಯಾತ ಮಂದಿ ಕಲಾವಿದರಿಗೆ ಫ್ಲಾರೆನ್ಸ್ ನಗರ ತವರೂರಾಯಿತು.[೩]

ಫ್ಲಾರೆನ್ಸ್ ಹಾಗೂ ರೋಮ್‍ನಲ್ಲಿ ವಾಸ್ತುಶಿಲ್ಪ ಬದಲಾಯಿಸಿ

ಫ್ಲಾರೆನ್ಸ್ ಹಾಗೂ ರೋಮ್‍ನಲ್ಲಿ ವಾಸ್ತುಶಿಲ್ಪವನ್ನು ಪುನರುಜ್ಜೀವಗೊಳಿಸುವ ಪ್ರಯತ್ನಗಳು ನಡೆದವು. ಪ್ರಾಚೀನ ಗ್ರೀಕ್, ರೋಮನ್ ವಾಸ್ತುಶಿಲ್ಪ ಕೃತಿಗಳನ್ನು ಅಭ್ಯಸಿಸಬೇಕೆಂಬ ಪ್ರೇರಣೆ, ಧೋರಣೆ ಬೆಳೆಯಿತು. ಆ ಕಾಲದ ಶ್ರೇಷ್ಠ ವಾಸ್ತುಶಿಲ್ಪಿಗಳಲ್ಲಿ ಫಿಲಿಪೋ ಬ್ರುನಲೆಶ್ಚಿ (1377-1446) ಅತ್ಯಂತ ಹೆಸರಾದವ. ಆತ ಹಲವು ವರ್ಷ ರೋಮ್‍ನಲ್ಲಿದ್ದು ಅಲ್ಲಿನ ಶಿಲ್ಪದ ಭಗ್ನಾವಶೇಷವನ್ನೆಲ್ಲ ಸತತವಾಗಿ ಅಧ್ಯಯನ ಮಾಡಿದ. ಫ್ಲಾರೆನ್ಸ್‍ಗೆ ಹಿಂತಿರುಗಿ ಹೊಸ ಶೈಲಿಯನ್ನನುಸರಿಸಿ ಕಟ್ಟಡಗಳನ್ನು ನಿರ್ಮಿಸಲುಪಕ್ರಮಿಸಿದ. ಗಾಥಿಕ್ ಮಾದರಿಯ ಚೂಪು ಕಮಾನಿನ ಬದಲು ಉರುಟು ರೋಮನ್ ಕಮಾನು ತೋರಣಗಳನ್ನು ನಿರ್ಮಿಸಿದ. ಹೆಚ್ಚಾಗಿ ಕೆತ್ತನೆ ಬಳಸದಿದ್ದರೂ ಕಂಬ, ಬೋದಿಗೆಗೆ ಪಾದಕಲ್ಲುಗಳನ್ನು ಜೋಡಿಸುವುದರಲ್ಲಿ ರೋಮನ್ ಪದ್ಧತಿಯನ್ನೇ ಅನುಕರಿಸಿದ. ಫ್ಲಾರೆನ್ಸ್ ಕೆಥೆಡ್ರಲ್ ಕಟ್ಟಡದ ಗೋಳಕಗೋಪುರ ಅವನ ಕಲಾಪ್ರೌಢಿಮೆಗೆ ಚಿರಂತನ ಸಾಕ್ಷಿಯಾಗಿದೆ. ಸ್ವಲ್ಪ ಕಾಲದ ಅನಂತರ ಈ ಶಿಲ್ಪ ಶೈಲಿಯನ್ನೇ ಉಪಯೋಗಿಸಿ ಅರಮನೆ ಮತ್ತು ಸಾರ್ವಜನಿಕ ಸೌಧಗಳನ್ನು ಕಟ್ಟುವುದಕ್ಕೆ ಪ್ರಾರಂಭಿಸಿದರು. ಫ್ಲಾರೆನ್ಸ್‍ನ ಸಂದಿಗೊಂದಿಯ ರಸ್ತೆಗಳಲ್ಲಿ, ದಪ್ಪಕಲ್ಲುಗಟ್ಟಿಗಳಿಂದ ಕಟ್ಟಲಾದ ಅರಮನೆಗಳು ಕೋಟೆಗಳಂತೆ ಭವ್ಯವಾಗಿದ್ದವು. ಹೊರೆಗೆ ನೋಡಲು ದೈತ್ಯಾಕಾರ ತಳೆದಿದ್ದರೂ ಒಳಭಾಗವನ್ನು ಹಿತಮಿತವಾಗಿ ಸಿಂಗರಿಸಲಾಗುತ್ತಿತ್ತು. ಅವುಗಳಲ್ಲಿ ಶಿಲ್ಪಾಕೃತಿಗಳಿಂದ ರಚಿತವಾದ ನೀರಿನ ಕಾರಂಜಿಗಳನ್ನು, ವಿಸ್ತಾರವಾದ ಕೊಠಡಿಗಳು, ಎತ್ತರದ ಗೋಡೆಗಳಿಂದಾವೃತವಾದ ತೋಟಗಳು, ಲತಾಕುಂಜಗಳು ತುಂಬಿರುತ್ತಿದ್ದವು.

ಮೈಕೆಲೇಂಜಲೊ ಕಟ್ಟಿದ ಮೆಡಿಚಿಯ ಅರಮನೆ ಬದಲಾಯಿಸಿ

ಮೈಕೆಲೇಂಜಲೊ ಕಟ್ಟಿದ ಮೆಡಿಚಿಯ ಅರಮನೆ ಇಂಥ ಭವ್ಯಕಟ್ಟಡಗಳಲ್ಲಿ ಒಂದು. ಆ ಕಾಲದ ಇನ್ನೊಬ್ಬ ಸುಸಂಸ್ಕøತ ವಿದ್ವಾಂಸಶಿಲ್ಪಿ ಲಿಯಾನ್ ಬ್ಯಾಟಿಸ್ಟ ಆಲ್‍ಬರ್ಟಿ ಮುಂದಿನ ವಾಸ್ತುಶಿಲ್ಪ ಪರಂಪರೆಯ ಮೇಲೆ ಹೆಚ್ಚಿನ ಪ್ರಭಾವ ಬೀರಿದ. ಆಡಂಬರ ವೈಭವಗಳಿಂದ ತುಂಬಿದ ರೋಮ್ ನಗರದ ತುಂಬಾ ಫಾರ್‍ನೀಸ್ ಅರಮನೆಯಂಥ ಭವ್ಯಕಟ್ಟಡಗಳೂ ಶ್ರೀಮಂತರ ಸೌಧಗಳೂ ಚರ್ಚುಗಳೂ ತುಂಬಿದ್ದವು. ಹಲವು ಅಂತಸ್ತಿನ ಕಟ್ಟಡಗಳನ್ನು ಕಟ್ಟುವುದಕ್ಕೆ ಸುಣ್ಣಕಲ್ಲು ಉಪಯೋಗಿಸುವುದನ್ನು ಪ್ರಾರಂಭಿಸಿದವನೆಂದರೆ ಆಂಟೊನಿಯಾ ಸ್ಯಾಂಗೆಲೊ. ಫಾರ್‍ನೆಸ್ ಅರಮನೆಯನ್ನು ಇವನೇ ಪ್ರಾರಂಭಿಸಿದನೆಂದರೆ ಅದರ ಮೇಲುಗಡೆಯ ಅಂತಸ್ತನ್ನು ರಚಿಸಿದವ ಮೈಕೆಲೇಂಜಲೊ. ಆಗಿನ ಕಾಲದ ಮತ್ತೊಬ್ಬ ಮಾಹಾಶಿಲ್ಪಿ ಮಿಲಾನಿನ ಡೊನಾಟೊ ಬ್ರಮಾಂಟೆ (1444-1514). ಈತ ಮಿಲಾನಿನಿಂದ ದೇಶಭ್ರಷ್ಟನಾಗಿ ರೋಮ್‍ಗೆ ಓಡಿಹೋದ. ಅಲ್ಲಿ ಪಡೆದ ಸ್ಫೂರ್ತಿಯಿಂದ ಮೊಂಟಾರಿಯೋದಲ್ಲಿನ ಚರ್ಚಿನ ನಡುವೆ ಕಟ್ಟಿದ ಅನಘ್ರ್ಯರತ್ನದಂಥ ಪುಟಾಣಿ ಮಂದಿರ (ಟೆಂಪಿಯೆಟ್ಟೊ) ಇಟಲಿ ವಾಸ್ತುಶಿಲ್ಪದ ಮಹತ್ ಸಾಧನೆಗೊಂದು ಉದಾಹರಣೆ. ಪೋಪ್ ಎರಡನೆಯ ಜೂಲಿಯಸ್ ಸೇಂಟ್ ಪೀಟರ್ ಮಂದಿರವನ್ನು ಪುನರುಜ್ಜೀವಗೊಳಿಸಲು ಯೋಚಿಸಿ ನಡೆಸಿದ ಶಿಲ್ಪಸ್ಪರ್ಧೆಯಲ್ಲಿ ಬ್ರಮಾಂಟೆ ಯಶಸ್ವಿಯಾದ. ಆತನಿಂದ ಪ್ರಾರಂಭವಾಗಿ ಅನಂತರ 120 ವರ್ಷಗಳಾದರೂ ಮುಗಿಯದೆ ಹಾಗೇ ಉಳಿದ ಈ ದೈತ್ಯ ಕಟ್ಟಡವನ್ನು ಮುಗಿಸುವ ಉದ್ದೇಶದಿಂದ ಮೈಕೆಲೇಂಜಲೊ ಸಹ ತನ್ನ ಬಾಳಿನ ಕೊನೆಯ ವರ್ಷಗಳನ್ನು ಆ ಕೆಲಸಕ್ಕೆ ವಿನಿಯೋಗಿಸಿದ. ವೆನಿಸ್ ಅತ್ಯಂತ ಸುಂದರವಾದ ದ್ವೀಪನಗರ, ಪ್ರಶಾಂತ ಪಟ್ಟಣ. ಅಲ್ಲಿ ಸುಂದರ ಗ್ರಂಥಾಲಯವನ್ನು ಕಟ್ಟಿ ಊರಿನ ಮಧ್ಯದಲ್ಲಿರುವ ಚೌಕವನ್ನು ಅತ್ಯಂತ ಮನೋಹರವಾಗಿ ನಿರ್ಮಿಸಿದ ಕೀರ್ತಿ ಶಿಲ್ಪಿ ಜಕೋಪೊ ಸಾನ್‍ಸೊವಿನೊಗೆ ಸಲ್ಲಬೇಕು. ಗ್ರಾಂಡ್ ಕಾಲುವೆಯ ಮೇಲೆ ಕಟ್ಟಿದ ಅರಮನೆಯಲ್ಲಿ ಸದಾಕಾಲವೂ ನೀರು ಸರಬರಾಜು ನಡೆಯುವಂತೆ ನಿರ್ಮಿಸಿದ ಕೀರ್ತಿ ಶಿಲ್ಪಿ ಜಕೋಪೊ ಸಾನ್‍ಸೊವಿನೊಗೆ ಸಲ್ಲಬೇಕು. ಗ್ರಾಂಡ್ ಕಾಲುವೆಯ ಮೇಲೆ ಕಟ್ಟಿದ ಅರಮನೆಯಲ್ಲಿ ಸದಾಕಾಲವೂ ನೀರು ಸರಬರಾಜು ನಡೆಯುವಂತೆ ನಿರ್ಮಿಸಿದ ವ್ಯವಸ್ಥೆ ಅಂದಿಗೆ ಅಚ್ಚರಿ ಉಂಟುಮಾಡುವಂಥದು. ಸುಂದರವಾದ ಉದ್ಯಾನಗೃಹ (ವಿಲ)ಗಳನ್ನು ನಿರ್ಮಿಸಿದ ಆಂಡ್ರಿಯ ಪೆಲ್ಲೇಡಿಯಾ (1518-80) ಎಂಬಾತ ರೊಟಂಡೋ ಎಂಬ ಅತ್ಯಂತ ಚೆಲುವಾದ ಗೃಹವನ್ನು ಕಟ್ಟಿದ. ಇವನ ಶಿಲ್ಪಶೈಲಿ ಸುಮಾರು 300 ವರ್ಷ ಇಟಲಿಯ ಶಿಲ್ಪಿಗಳಿಗೆ ಸ್ಫೂರ್ತಿಯಾಗಿ ಉಳಿಯಿತು.

ಇಟಲಿಯ ಶಿಲ್ಪಕಲೆ ಬದಲಾಯಿಸಿ

ಎಲ್ಲದಕ್ಕಿಂತ ಮಿಗಿಲಾಗಿ ಇಟಲಿಯ ಶಿಲ್ಪಕಲೆ ಲೋಕಕ್ಕೆ ಚಿರನೂತನ ಮಾದರಿಗಳನ್ನು ಒದಗಿಸಿತು. ಫ್ಲಾರೆನ್ಸ್‍ನ ಕೆಥೆಡ್ರಲ್‍ಗಾಗಿ ಎರಡು ಭೀಮಾಕಾರದ ಕಂಚಿನ ದ್ವಾರಗಳನ್ನು ಕೆತ್ತಲು ಪ್ರಾರಂಭಿಸಿದ ಲೊರೆನ್ಸೋ ಘಿಬರ್ಟಿ ಅದನ್ನು ಮುಗಿಸಿದ್ದು 20 ವರ್ಷಗಳ ಅನಂತರ. ಅದಾದಮೇಲೆ ಪ್ರಾರಂಭಿಸಿದ ಇನ್ನೊಂದು ಜೊತೆ ಬಾಗಿಲುಗಳನ್ನು ಮುಗಿಸಲು ಅವನಿಗೆ 22 ವರ್ಷ ಹಿಡಿಯಿತು. ಬೈಬಲ್ ಕಥೆಯನ್ನು ನಿರೂಪಿಸುವ ಪ್ರತ್ಯೇಕವಾದ ಶಿಲ್ಪಾಕೃತಿಗಳಿಂದ ತುಂಬಿದ ಈ ಮಹಾದ್ವಾರಗಳು ಲೋಕವಿಖ್ಯಾತ ಕೃತಿಗಳು.ಇಟಲಿಯ ಶಿಲ್ಪಿಗಳಲ್ಲಿ ಅನನ್ಯ ಸೋಪಜ್ಞತೆಗೆ ಹೆಸರಾದವನೆಂದರೆ ಡೋನಟೆಲ್ಲೊ, ಪರ್‍ಸ್ಪೆಕ್ಟಿವ್ ಕಲೆ ಎಂದು ಕರೆಯುವ ಹೊಸ ಶಿಲ್ಪಶೈಲಿಯನ್ನು ಕಂಡುಹಿಡಿದವ ಈತನೇ. ಎಲ್ಲಿಂದ ನೋಡಿದರೂ ಎದ್ದುಕಾಣುವ ಉದ್ದಗಲ, ಘನಾಕೃತಿ ಪಡೆದ ಪ್ರತಿಮೆಗಳನ್ನು ಮೊಟ್ಟಮೊದಲು ಕಡೆದವ ಡೊನಟೆಲ್ಲೊ. ಮಾನವ ಅವಯವಗಳ ಚಲನವಲನಗಳನ್ನು ಅತ್ಯಂತ ಸೂಕ್ಷ್ಮವಾಗಿ ಅಭ್ಯಸಿಸಿ, ಕಲಾತ್ಮಕವಾಗಿ, ಜೀವಂತವಾಗಿ ರೂಪಿಸಿದ ಅಗ್ಗಳಿಕೆ ಇವನದು. ಕಂಚಿನಲ್ಲಿ ಕೆತ್ತಿದ ಡೇವಿಡ್, ಅಮೃತಶಿಲೆಯಲ್ಲಿ ರೂಪಿಸಿದ ಪ್ರವಾದಿಗಳು, ಕುದುರೆಸವಾರ ಗಟಾಮೆಲಾಟೊನ ಚಿತ್ರಪ್ರತಿಮೆ-ಇವು ಜಗತ್‍ಪ್ರಸಿದ್ಧ ಕೃತಿಗಳು.ಪರಿಷ್ಮಾರವಾದ ಜೇಡಿಮಣ್ಣಿನಲ್ಲಿ (ಟೆರ್ರಾಕೋಟ) ಸುಲಭಸಾಧ್ಯವಾದ, ಕಡಿಮೆ ವೆಚ್ಚ ತಗಲುವ, ಶಿಲ್ಪಾಕೃತಿಗಳನ್ನು ಕಡೆದು ಬಣ್ಣ ಬಣ್ಣಗಳಿಂದ ಸಿಂಗರಿಸಿ, ನಯನಮನೋಹರ ಪ್ರತಿಮೆಗಳನ್ನು ನಿರ್ಮಿಸಿದವ ಲ್ಯೂಕಡೆಲ್ಲಾ ರೊಬ್ಬಿಯೊ.ಜಗತ್ತಿನಲ್ಲೆಲ್ಲ ಚಿರಂತನ ವಿಖ್ಯಾತಿಗಳಿಸಿದ, ಚಿತ್ರಕಾರ, ಶಿಲ್ಪಿ ಎಂದರೆ ಮೈಕೆಲೇಂಜಲೊ (1475-1564). ಅಮೃತಶಿಲೆಯಲ್ಲಿ ಕೆತ್ತಿದ ಹದಿನೆಂಟು ಅಡಿ ಎತ್ತರದ ಇವನ ಡೇವಿಡ್ ಜಗತ್ತನ್ನೇ ಮೋಹಿಸುವಂಥ ಕೃತಿ.

ಚಿತ್ರ ಕಲೆ ಬದಲಾಯಿಸಿ

ಸುಪ್ರಸಿದ್ಧ ಚಿತ್ರಕಾರ ಮಸಾಚಿಯೊ ಮಧ್ಯಯುಗದ ಸಂಪ್ರದಾಯವನ್ನು ಕಿತ್ತೊಗೆದು, ಸುಮಾರು 200 ವರ್ಷಗಳವರೆಗೂ ಅಚ್ಚಳಿಯದೆ ನಿಲ್ಲುವಂಥ ಹೊಸ ಸಂಪ್ರದಾಯ ಸ್ಥಾಪಿಸಿದ. ಫ್ಲಾರೆನ್ಸ್‍ನ ಬ್ರಾಂಕಾಚಿ ಮಂದಿರದಲ್ಲಿ ಈತ ರಚಿಸಿರುವ ಅಮೋಘವಾದ ಭಿತ್ತಿಚಿತ್ರಗಳಲ್ಲಿ ಬೈಬಲ್ ಕಥೆಯ ಪಾತ್ರಗಳು ಜೀವಂತವಾಗಿವೆ. ಈತ ಚಿತ್ರಕಲೆಯಲ್ಲಿ ಪರ್‍ಸ್ಪೆಕ್ಟಿವ್ (ಈಗ ತ್ರೀ ಡೈಮೆನ್ಷನ್ ಚಿತ್ರ ಎನ್ನುವ) ತಂತ್ರವನ್ನಳವಡಿಸಿಕೊಂಡ. ಇವನ ಶೈಲಿಯನ್ನು ಅನುಸರಿಸಿದರೂ ರೇಖಾಗಣಿತದ ಜ್ಞಾನವನ್ನು ಉಪಯೋಗಿಸಿ ಸಿಲೆಂಡರ್ ಆಕೃತಿಯ ಚಿತ್ರಗಳನ್ನು ರಚಿಸಿದವನೆಂದರೆ ಫ್ರಾನ್ಸೆಸ್ಕಾ ಎಂಬ ಗಣಿತಶಾಸ್ತ್ರಜ್ಞ, ಕಲಾವಿದ.ಹೊಸ ಹುಟ್ಟಿನ ಕಾಲದ ಚಿತ್ರಕಲೆಯಲ್ಲಿ ಅತ್ಯಂತ ನವಿರಾದ ರಮ್ಯಕಾವ್ಯಮಯ ಅಂಶಗಳನ್ನು ರೂಪಿಸಿದವ ಸಾಂದ್ರೊ ಬೊಟೆಚೆಲ್ಲಿ (1444-1510). ಲಿಯೊನಾರ್ಡೊಡ ವಿಂಚಿ ಹೊಸಹುಟ್ಟಿನ ಕಾಲದ ಸರ್ವತೋಮುಖ ಪ್ರತಿಭೆಯ ಪ್ರತಿನಿಧಿ. ಮಾನವನ ಅಂತರಂಗದ ಗಾಢಭಾವನೆಗಳನ್ನು ಮುಖದ ಭಾವಭಂಗಿಗಳಲ್ಲಿ ಅತ್ಯಂತ ಸೂಕ್ಷ್ಮವೇದಿಯಾಗಿ ಚಿತ್ರಿಸುವುದರಲ್ಲಿ ಅವನಿಗೆ ಸಾಟಿಯಾದ ಕಲಾವಿದರು ಈವರೆಗೆ ಹುಟ್ಟಿಲ್ಲವೆನ್ನುತ್ತಾರೆ. ಅವನ ಕಲಾಭಿಜ್ಞತೆಗೆ ಸಾಕ್ಷಿ ದಿ ಲಾಸ್ಟ್ ಸಪ್ಪರ್ (ಕೊನೆಯ ಔತಣ) ಒಂದೇ ಸಾಕು. ಅವನಂತೆಯೇ ಹೆಸರಾಂತ ವಿಖ್ಯಾತ ಚಿತ್ರಕಾರ ರ್ಯಾಫೆಲ್ ಸ್ಕಾನ್‍ಜಿಯೊ (1483-1520), ಲಿಯೊನಾರ್ಡೊನಿಂದ ಪ್ರೇರಣೆ ಪಡೆದವ. ರೋಮಿನ ವ್ಯಾಟಿಕನ್ ಮಂದಿರದಲ್ಲಿ ಈತ ಚಿತ್ರಿಸಿರುವ ಹಲವಾರು ಅನಾದೃಶ ಚಿತ್ರಗಳಿವೆ. ತಾಯಿಮಗುವನ್ನು ಕುರಿತು ಈತ ಸೃಜಿಸಿದ ನೂರಾರು ಭಂಗಿಯಲ್ಲಿರುವ, ಭಿನ್ನ ಭಿನ್ನ ಚಿತ್ರಗಳು ಲೋಕವಿಖ್ಯಾತ ಕೃತಿಗಳು. ಚಿತ್ರಕಲೆಯನ್ನು ಶಿಲ್ಪಕಲೆಯ ಹತ್ತಿರಕ್ಕೆ ತಂದವ ಮೈಕೆಲೇಂಜಲೊ. ಸಿಸ್ಟೈನ್ ಮಂದಿರದಲ್ಲಿ ಈತ ಸೃಷ್ಟಿಸಿರುವ ಭಿತ್ತಿಚಿತ್ರಗಳು ಇವನ ಶಿಲ್ಪಕೃತಿಗಳಂತೆ ಲೋಕೋತ್ತರ ದಿವ್ಯಕೃತಿಗಳು. ಬೈಬಲ್ ಕಥೆಗೆ ಸಂಬಂಧಿಸಿದ ಈ ಚಿತ್ರಗಳಲ್ಲಿ ಕಾಣುವ ಸಾವು, ನೋವುಗಳ ಭವ್ಯಕಲ್ಪನೆ, ಮಾನವ ಹಾಗೂ ದಿವ್ಯಾಕೃತಿಗಳ ಭೀಮಸೃಷ್ಟಿ, ಲೋಕವನ್ನು ಇಂದಿಗೂ ಬೆಕ್ಕಸಬೆರಗುಗೊಳಿಸುತ್ತವೆ.ಆ ಕಾಲದ ವೆನಿಸ್ ಚಿತ್ರಗಾರರು ತಮ್ಮದೇ ಆದ ಶೈಲಿಯನ್ನು ಬೆಳೆಸಿಕೊಂಡು ಲೋಕದ ಕಣ್ಣನ್ನು ಸೆಳೆದರು. ಅವರು ಮೃದುವಾದ, ಸುಂದರವಾದ ಭೂದೃಶ್ಯ (ಲ್ಯಾಂಡ್‍ಸ್ಕೇಪ್) ಗಳನ್ನು ಚಿತ್ರಿಸಿದರು. ಹದಿನಾರನೆಯ ಶತಮಾನದ ಹೊತ್ತಿಗೆ ವೆನಿಸ್ ಚಿತ್ರಕಲೆ ಫ್ಲಾರೆನ್ಸ್ ಕಲೆಯಿಂದ ತೀರಾ ವಿಭಿನ್ನವಾದ ಸ್ವರೂಪ ತಳೆಯಿತು. ವೆನಿಸ್‍ಕಲೆಗೆ ಪ್ರತ್ಯೇಕವಾದ ಅಸ್ತಿತ್ವಗಳಿಸಿಕೊಟ್ಟವರೆಂದರೆ ಜಾರ್ಜಿಯೊನೆ, ಟೆಷಿಯನ್, ಟೆಂಟೊರೆಟ್ಟೊ ಹಾಗೂ ವೆರೋನೀಸ್. ಇವರು ಸಹ ಚರ್ಚು ಹಾಗೂ ಸಾರ್ವಜನಿಕ ಕಟ್ಟಡಗಳ ಒಳಾಂಗಣವನ್ನು ಸಿಂಗರಿಸಲು ತಮ್ಮ ಚಿತ್ರಕಲಾನೈಪುಣ್ಯವನ್ನು ಪ್ರಯೋಗಿಸಿದರೂ ಹಲವಾರು ಖಾಸಗಿ ವ್ಯಕ್ತಿಗಳಿಗಾಗಿ ಚಿತ್ರಗಳನ್ನು, ದೃಶ್ಯಗಳನ್ನು ಬರೆದುಕೊಟ್ಟರು. ತೈಲವರ್ಣವನ್ನು ತುಂಬ ಸೊಗಸಾಗಿ ಬಳಸಿದವ ಜಾರ್ಜಿಯೊನೆ. ಈತ ಚಿಕ್ಕವಯಸ್ಸಿನಲ್ಲಿ ತೀರಿಕೊಂಡ. ಇವನಶೈಲಿಯ ಪರಂಪರೆಯನ್ನು ಚಿರಸ್ಥಾಯಿಗೊಳಿಸಿದವ ಟೆಷಿಯನ್. ಸುಮಾರು ಅರವತ್ತು ವರ್ಷಗಳ ಕಾಲ ಟೆಷಿಯನ್, ತೈಲವರ್ಣಮಾಧ್ಯಮದಲ್ಲಿ ಹಲವು ತೆರನಾದ ಪ್ರಯೋಗ ನಡೆಸಿದ. ತಮ್ಮ ಚಿತ್ರಗಳನ್ನು ಬರೆಸಿಕೊಂಡ ಶ್ರೀಮಂತರ ಇಂಗಿತವನ್ನನುಸರಿಸಿ ನಡೆದುದರಿಂದ ಇವನಿಗೆ ಅಪಾರಜನಪ್ರಿಯತೆ, ಗೌರವ ದೊರೆಯಿತು.

ಕೆಥೊಲಿಕ್ ಮಠಾಧಿಕಾರಿಗಳು ಬದಲಾಯಿಸಿ

ಕಲೆಗಳನ್ನು ಸೃಷ್ಟಿಸಿದವರು ಮನುಷ್ಯ ವ್ಯಕ್ತಿತ್ವದ ಸಂಪೂರ್ಣತೆಯಲ್ಲಿ ಅಚಲಶ್ರದ್ಧೆ, ನಂಬಿಕೆ ವ್ಯಕ್ತಪಡಿಸಿದರು. ಆದರೆ ಆ ಕಾಲದಲ್ಲಿ ಪ್ರಾರಂಭವಾದ ಧಾರ್ಮಿಕ ಘರ್ಷಣೆಗಳ ಕಾರಣದಿಂದಾಗಿ ಕೆಥೊಲಿಕ್ ಮಠಾಧಿಕಾರಿಗಳು ಕಲಾವಿದರ ಮೇಲೆ ಸಲ್ಲದ ಕಟ್ಟುಪಾಡುಗಳನ್ನು, ನೀತಿನೇಮಗಳನ್ನು ಹೇರಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಫ್ಲಾರೆನ್ಸಿನ ಕೆಲವು ಕಲಾವಿದರು ಶಿಲ್ಪ ಅಥವಾ ಚಿತ್ರಕಲೆಯ ವಸ್ತುವಿನತ್ತ ಗಮನ ಹರಿಸದೆ ಶೈಲಿಯೇ ಮುಖ್ಯವೆಂದು ಹೊಸ ಚಳವಳಿ ಪ್ರಾರಂಭಿಸಿದರು. ಇವರನ್ನು ಮ್ಯಾನರಿಸ್ಟ್ ಪಂಥದವರೆನ್ನುವ ವಾಡಿಕೆ. ಚಿತ್ರವಿಚಿತ್ರವಾದ ಆಕೃತಿಯುಳ್ಳ ಬಾಗಿಲುಗಳು, ಆಯತಪ್ಪಿದಂತೆ ತೋರುವ ಅಸಂಪೂರ್ಣ ಕಟ್ಟಡಗಳು ನಿರ್ಮಿತವಾದವು. ಈ ಪಂಥದ ಕಲೆಗಾರರಲ್ಲಿ ಬೆನ್‍ವೆಂಚುಯೊ ಚೆಲ್ಲಿನಿ, ಕೊರೆಗ್ಚಿಯೊ-ಇವರು ಖ್ಯಾತಿವೆತ್ತ ವ್ಯಕ್ತಿಗಳು. ಗಿರ್ರನೆ ತಿರುಗುತ್ತ ಆಕಾಶದತ್ತ ಹಾರುವಂತೆ ಕಾಣುವ ದೇವಕಿನ್ನರರೇ ಮುಂತಾದ ವಿಚಿತ್ರ ಭಂಗಿಯ ಶಿಲ್ಪಾಕೃತಿಗಳನ್ನು ರಚಿಸಿದ ಈ ಪಂಥದ ಶಿಲ್ಪ ಚಿತ್ರಕಾರರು ಮುಂದಿನ ಯುಗದ ಫ್ರೆಂಚ್ ಕಲಾವಿದರಿಗೆ ಹೆಚ್ಚು ಸ್ಪೂರ್ತಿ ನೀಡಿದರು.

ಬ್ಯಾರೋಕ್ ಕಲೆ ಬದಲಾಯಿಸಿ

ಹದಿನೇಳನೆಯ ಶತಮಾನದ ಇಟಲಿ ಕಲೆಯನ್ನು ಬ್ಯಾರೋಕ್ ಕಲೆ ಎನ್ನುತ್ತಾರೆ. ಹಲವಾರು ಹೊಸರೀತಿಯ ಚರ್ಚುಗಳನ್ನು ನಿರ್ಮಿಸಿದ ಬರ್ನಿನಿ ಈ ಶೈಲಿ ಅನುಸರಿಸಿದ ಹೆಸರಾಂತ ಶಿಲ್ಪಿ. ಆತ ಅಂಡಾಕಾರದ, ರೇಖಾಗಣಿತದ ಆಕೃತಿಗಳನ್ನು ಹೆಚ್ಚಾಗಿ ನಿರ್ಮಿಸಿದ. ಚಿತ್ರವಿಚಿತ್ರವಾದ ನೀರಿನ ಚಿಲುಮೆಗಳು, ನೀರಿನ ಕೊಳವೆಗಳು, ಗೋಡೆಯೊಳಗೆ ನಿರ್ಮಿಸಿದ ಪ್ರತಿಮೆಗಳನ್ನಿಡುವ ಕಪಾಟುಗಳು, ಮುಂತಾದ ಔಪಯೋಗಿಕವೆನ್ನಬಹುದಾದ ಕಲಾಸ್ವರೂಪಗಳನ್ನು ರಚಿಸಿದ. ದೇವದಾನವರ, ರಾಜ ಶ್ರೀಮಂತರ ಆಕೃತಿಗಳನ್ನೇ ಮಾದರಿಯಾಗಿ ಬಳಸುವ ಹೊಸಹುಟ್ಟಿನ ಸಂಪ್ರದಾಯ ತ್ಯಜಿಸಿ, ಕೂಲಿಗಾರರು ಭಿಕ್ಷುಕರಂಥ ಶ್ರೀಸಾಮಾನ್ಯರ ಮಾದರಿಗಳನ್ನು ಚಿತ್ರಿಸಿ ಕೊರೆಗ್ಜಿಯೊ ವಾಸ್ತವಿಕತೆಯ ಕ್ರಾಂತಿಯನ್ನೇ ಎಬ್ಬಿಸಿದ. ಈತ ಚಿತ್ರಿಸಿದ ವರ್ಜಿನ್ ಮೇರಿ ಹಾಗೂ ಏಸುವಿನ ಚಿತ್ರಗಳು ನಿತ್ಯಜೀವನದೊಂದಿಗೆ ನಿಕಟಸಂಬಂಧ ಕಲ್ಪಿಸಿ ನೈಜಚಿತ್ರಣಗಳಾದವು.ಹದಿನೆಂಟನೆಯ ಶತಮಾನದಲ್ಲಿ ಟೈಪೊಲೊ (1696-1770) ಎಂಬ ಇಟಲಿಯ ಚಿತ್ರಕಾರ ಭಿತ್ತಿಚಿತ್ರದ ರೂಢಿಗೆ ಹೊಸಜೀವ ತುಂಬಿದ. ಉದ್ಯಾನಗೃಹಗಳ (ವಿಲ) ಮೇಲ್ಛಾವಣಿಯ ಒಳಭಾಗವನ್ನು ಗ್ರೀಕ್ ದೇವತೆಗಳಿಂದ ತುಂಬಿಸಿದ. ಗೋಡೆಗಳನ್ನು ಬರಿದಾಗಿ ಬಿಡುವುದರ ಬದಲು ಅವುಗಳ ಮೇಲೆ ಕಂಬಸಾಲುಗಳನ್ನು ಚಿತ್ರಿಸಿ ಅವುಗಳ ಹಿಂದೆ ಕುಳಿತಂತೆ ಕಾಣುವ ಪುರಾಣೇತಿಹಾಸಗಳ ವ್ಯಕ್ತಿಗಳನ್ನೂ ಕಥನ ದೃಶ್ಯಗಳನ್ನೂ ಚಿತ್ರಿಸಿದ. ಟೆಷಿಯನ್‍ನಂತೆ ಇವನೂ ಕಣ್ಣುಕೋರೈಸುವಂಥ ಬಣ್ಣಗಳನ್ನು ವಿಸ್ತಾರವಾದ ಹಿನ್ನೆಲೆಯಲ್ಲಿ ಅಳವಡಿಸಿ ಪುರಾಣ ಕಾವ್ಯ, ಇತಿಹಾಸಗಳ ವ್ಯಕ್ತಿಗಳನ್ನು ಚಿತ್ರಿಸಿದ. ಈ ಅತಿರಂಜಕ ಶೈಲಿಯನ್ನು ರೊಕೊಕೊ ಶೈಲಿಯೆನ್ನುತ್ತಾರೆ.

ನಿಯೋಕ್ಲಾಸಿಕಲ್ ಯುಗ ಬದಲಾಯಿಸಿ

ನಿಯೋಕ್ಲಾಸಿಕಲ್ ಯುಗವಾದ ಹದಿನೆಂಟನೆಯ ಶತಮಾನದಲ್ಲಿ ಗ್ರೀಕ್ ರೋಮನ್ ಅಭಿಜಾತ ಪರಂಪರೆಯನ್ನು ಅನುಸರಿಸಿದವ ಶಿಲ್ಪಿ ಕ್ಯಾನೊವ. ಗ್ರೀಕ್ ರೋಮನ್ ಶಿಲ್ಪಾಕೃತಿಗಳ ಸುಂದರ ಅನುಕರಣೆಯನ್ನು ಇವನ ಕೃತಿಗಳಲ್ಲಿ ಕಾಣಬಹುದು. ಹತ್ತೊಂಬತ್ತನೆಯ ಶತಮಾನದ ಫ್ಲಾರೆನ್ಸ್ ಚಿತ್ರಕಾರರಲ್ಲಿ ಕೆಲವರು, ಫ್ರೆಂಚ್ ಕಲಾವಿದರ ಪ್ರಭಾವಕ್ಕೆ ಒಳಗಾಗಿ ಪರಿಣಾಮವಿಧಾನ (ಇಂಪ್ರೆಷನಿಸಂ) ತತ್ತ್ವವನ್ನು ಪ್ರತಿಪಾದಿಸಿದರು.ಈ ಶತಮಾನದ ಪ್ರಾರಂಭದಲ್ಲಿ ಇಟಲಿಯ ಕೆಲವು ಚಿತ್ರಗಾರರು ತಮ್ಮನ್ನು ಸ್ವೇಚ್ಛಾಸಂಕೇತವಿಧಾನದವರು (ಫ್ಯೂಚರಿಸ್ಟ್ಸ್) ಎಂದು ವರ್ಣಿಸಿಕೊಂಡು ಹೊಸ ಕಾಲದ ಮಾನಸಿಕ ತುಡಿತ, ಬಡಿತ, ಕಲ್ಪನೆಯ ವೈಚಿತ್ರ್ಯಗಳನ್ನು ತಮ್ಮ ಚಿತ್ರಗಳಲ್ಲಿ ಅಭಿವ್ಯಕ್ತಗೊಳಿಸಲು ಪ್ರಾರಂಭಿಸಿದರು. ಹೊಸಕಾಲದ ಕಲಾವಿದರುಗಳಲ್ಲಿ ಸರ್ರಿಯಲಿಸಂ ಪಂಥವನ್ನು ಸಮರ್ಥಿಸಿದ ಚಿತ್ರಕಾರ ಚಿರಿಕೊ, ಪ್ರತಿಭಾನ್ವಿತ ಶಿಲ್ಪಿ ಮೆರಿನೊ ಇವರುಗಳು ಸೇರಿದ್ದಾರೆ. ನೆರ್ವಿ, ಪೋಂಟಿ ಮುಂತಾದ ಸಮಕಾಲೀನ ವಾಸ್ತು ಶಿಲ್ಪಿಗಳು ಸಿಮೆಂಟ್ ಕಾಂಕ್ರಿಟ್ ಬಳಸಿ ಹೊಸ ಶೈಲಿಯ ವಾಸ್ತುಶಿಲ್ಪ ರಚಿಸಿ ಹೊಸ ಅಭಿವ್ಯಕ್ತಿಯಲ್ಲೂ ಇಟಲಿಯ ಅವಿಚ್ಛಿನ್ನ ಕಲಾ ಪರಂಪರೆ ಮಸಕಾಗಿಲ್ಲವೆಂದು ತೋರಿಸಿದ್ದಾರೆ.

ಸಂಗೀತ ಕಲೆ ಬದಲಾಯಿಸಿ

ಉಳಿದೆಲ್ಲ ಲಲಿತಕಲೆಗಳಂತೆ, ಸಂಗೀತವೂ ಇಟಲಿಯಲ್ಲಿ ಮೊದಲು ಧರ್ಮಪ್ರಸಾರಕ್ಕೆ ಪೂರಕವಾದ ಅಭಿವ್ಯಕ್ತಿಯ ಸ್ವರೂಪದ್ದಾಗಿದ್ದು, ಕಾಲಾನುಗತಿಯಲ್ಲಿ ಲೌಕಿಕರೂಪ ತಳೆಯಿತು.ಸ್ವಚ್ಛಂದವಾಗಿ ಹಾಡಬೇಕೆನ್ನುವ ಅಭಿವ್ಯಕ್ತಿಯ ಒತ್ತಡದಿಂದಲೋ ಏನೋ ಕಾಲಕ್ರಮೇಣ ಒಟ್ಟಿಗೆ ಹೆಚ್ಚು ಧ್ವನಿಗಳು ಸೇರಿ ವಿಭಿನ್ನ ಕೃತಿಯಲ್ಲಿ ಹಾಡುವ ಪಾಲಿಫೋನಿಕ್ ಪದ್ಧತಿ ಜನಪ್ರಿಯವಾಯಿತು. ಶತಮಾನಗಳ ಅನಂತರ ಮೂರು ನಾಲ್ಕು ಮಂದಿ ಕೂಡಿ ಹಾಡುವ ಸಂಪ್ರದಾಯ ಬೆಳೆಯಿತು. ಇದರಿಂದ ಹಾಡಿನ ಸಾಹಿತ್ಯ ಅಸ್ಪಷ್ಟವಾಯಿತು. ಧರ್ಮಗೀತೆಗಳು ಅರ್ಥವಾಗದೆ ಗೊಂದಲವುಂಟಾಗಿ ಚರ್ಚಿನ ಅಧಿಕಾರಿಗಳು ಈ ರೀತಿ ಹಾಡುವುದನ್ನು ಪ್ರತಿಬಂಧಿಸಿದರು. ಆದರೆ ಈ ತೆರನ ಹಾಡುಗಾರಿಕೆಯನ್ನು ಜನಮೆಚ್ಚಿಕೊಂಡಿದ್ದರಿಂದ, ಅದು ಚರ್ಚಿನಿಂದಾಚೆ ಹೊರಳಿ, ಜನಮನದಲ್ಲಿ ಅರಳಲು ಪ್ರಾರಂಭಿಸಿತು. ಅನಂತರ ಹಾಡಿನೊಂದಿಗೆ ವಾದ್ಯಗಳನ್ನು ಬಳಸಿದರು.

ಇಟಲಿ ಸಂಗೀತ ಬದಲಾಯಿಸಿ

ಮಧ್ಯಯುಗದಲ್ಲಿ ಇಟಲಿ ಸಂಗೀತ ಯೂರೋಪಿನ ಹಲವೆಡೆಗಳಲ್ಲಿ ಹರಡಿತು. ಸಂಪೂರ್ಣವಾಗಿ ಕ್ರೈಸ್ತಮಠಗಳು ಈ ತೆರನ ಸಂಗೀತವನ್ನು ಬಹಿಷ್ಕರಿಸಿದ ಮೇಲೆ ಅದರ ಆಕರ್ಷಣೆ ಹೆಚ್ಚಾಯಿತು. ತಂತಿವಾದ್ಯಗಳನ್ನು ನುಡಿಸುವುದರಲ್ಲಿ ನಿಪುಣನಾದ ಕುರುಡ ಫ್ರಾನ್ಸೆಸ್ಕೊ ಲ್ಯಾಂಡಿನಿ (1325-97) ಆ ಕಾಲದ ಶ್ರೇಷ್ಠ ಗಾಯಕ.ಹೊಸಹುಟ್ಟಿನ ಕಾಲದಲ್ಲಿ ಮೇಳಗೂಡಿ ನಡೆಸುವ ಹಾಡುಗಾರಿಕೆ ಹೆಚ್ಚು ಸಂಕೀರ್ಣವಾಯಿತು. ಕ್ಲಿಷ್ಟವಾಯಿತು. ಕಾಲಕ್ರಮೇಣ ಮರೆಂಜಿಯೊ, ಜೆಸುಲ್ಡ ಮುಂತಾದ ಗಾಯಕರು ವಾದ್ಯಸಂಗೀತವನ್ನು ಜನಪ್ರಿಯಗೊಳಿಸಿದರು. ಮ್ಯಾಡ್ರಿಗಲ್ ಎಂಬ ಲಘುಸಂಗೀತ ರಚನೆಗಳು ಜನರನ್ನು ಆಕರ್ಷಿಸಿದವು. ಗ್ಯಾಬ್ರಿಯಲಿ ಮತ್ತು ಜೋವನಿ ಎಂಬುವರು ಮೊಟ್ಟಮೊದಲು ಹಿತ್ತಾಳೆ ವಾದ್ಯಗಳಲ್ಲಿ ನುಡಿಸುವ ಗೋಷ್ಠಿಗಾನಕ್ಕಾಗಿ ಕೃತಿಗಳನ್ನು ರಚಿಸಿದರು. ವಯಲ್ಸ್ ಎಂಬ ದೊಡ್ಡ ವಾದ್ಯಗಳ ಬದಲು, ನಾವು ಪಿಟೀಲೆನ್ನುವ ವಯಲಿನ್ ಪ್ರಚಂಡ ಜನಪ್ರಿಯತೆ ಗಳಿಸಿತು. ಇಟಲಿಯಲ್ಲಿ ಎಲ್ಲೆಲ್ಲೂ ಪಿಟೀಲು ತಯಾರಿಸುವವರೂ ನುಡಿಸುವವರೂ ಹುಟ್ಟಿಕೊಂಡರು.

ಇಟಾಲಿಯನ್ ಸಂಗೀತಶಬ್ದಗಳು ಬದಲಾಯಿಸಿ

ಹದಿನೆಂಟನೆಯ ಶತಮಾನದಲ್ಲಿ ಉದಯವಾದ ಹೊಸ ಸಂಗೀತನಾಟಕ ಪ್ರಭೇದವೆಂದರೆ ಅಪೆರ. ರಾಗವಿನ್ಯಾಸ ಹಾಗೂ ವಾದ್ಯಗಳ ಬಳಕೆಗೆ ಅಪೆರದಲ್ಲಿ ಹೆಚ್ಚಿನ ಪ್ರಾಮುಖ್ಯ ದೊರೆಯಿತು. ಬರಬರುತ್ತ ಯೂರೋಪಿನ ಎಲ್ಲ ದೇಶಗಳಲ್ಲೂ ಇಟಲಿಯ ಅಪೆರ ಹರಡಿತು. ಇಟಾಲಿಯನ್ ಸಂಗೀತಶಬ್ದಗಳು ಯೂರೋಪಿಯನ್ ಭಾಷೆಗಳಲ್ಲಿ ಹೆಚ್ಚು ಬಳಕೆಗೆ ಬಂದವು.ಪಿಯಾನೋ ವಾದ್ಯ ನುಡಿಸುವ ಪದ್ಧತಿ ಪ್ರಾರಂಭವಾದುದು ಕೇವಲ ಇಟಲಿಯಲ್ಲಿ ಮಾತ್ರವಲ್ಲದಿದ್ದರೂ ಅದು ಜನಪ್ರಿಯವಾಗುವಂತೆ ಮಾಡಿದವರು ಇಟಲಿಯ ಸಂಗೀತಗಾರರು. ಹೆಚ್ಚು ಸ್ವರ ವೈವಿಧ್ಯ ಸೃಜಿಸುವುದು ಸಾಧ್ಯವಾಯಿತಾದ್ದರಿಂದ ಇದು ಹೆಚ್ಚು ಬಳಕೆಗೆ ಬಂತು. ಇಟಲಿಯಲ್ಲಿ ಸಂಗೀತ ಕಲೆ ಹುಟ್ಟಿತಾದರೂ ಲೋಕ ವಿಖ್ಯಾತಿ ಪಡೆದ ರಚನಕಾರರ ಪರಂಪರೆ ಬೇರೆ ದೇಶಗಳಲ್ಲೂ ಸೃಷ್ಟಿಯಾಯಿತು. ಇಟಲಿಯ ರಚನಕಾರರಲ್ಲಿ ಯಾರೊಬ್ಬರೂ ಮೊಜಾರ್ಟ್. ಬೇತೋವೆನ್‍ರನ್ನು ಮೀರಿಸದಿದ್ದರೂ ಹದಿನೆಂಟನೆಯ ಶತಮಾನದ ವರ್ದಿ ಎಂಬಾತ 53 ಅಪೆರಗಳನ್ನು ಬರೆದು ಇಟಾಲಿಯನ್ ಅಪೆರದ ಶ್ರೀಮಂತಿಕೆ ಹೆಚ್ಚಿಸಿದ. ಕಳೆದ ಶತಮಾನದಲ್ಲಿ ಪೂಚನಿ ಹೆಚ್ಚು ಖ್ಯಾತಿ ಗಳಿಸಿದ. ಆಧುನಿಕ ಯುಗದಲ್ಲಿ ಜಾನಪದ ಸಂಗೀತ ಇಟಲಿಯ ಸಂಗೀತದ ಮೇಲೆ ಪ್ರಭಾವ ಬೀರಿದೆ. ನಿಯೋಪಾಲಿಟನ್ ಗೀತೆಗಳೆಂದು ಹೇಳುವ ಪ್ರಣಯಾನುರಾಗದ ಹಾಡುಗಳು ಮೆಚ್ಚುಗೆ ಗಳಿಸಿವೆ. ಅಮೆರಿಕದ ಜಾಜ್ ಹಾಗೂ ಲ್ಯಾಟಿನ್ ಅಮೆರಿಕದ ಜಾನಪದ ನೃತ್ಯಗಳು ಇಟಲಿಯ ಸಂಗೀತದ ಮೇಲೆ ತಮ್ಮ ಮುದ್ರೆ ಒತ್ತಿವೆ. ಸಂಗೀತ ಕ್ಷೇತ್ರದಲ್ಲಿ ಹಲವಾರು ಪ್ರಯೋಗಗಳು ನಡೆಯುತ್ತಿದ್ದು ಇಟಲಿಯ ಸಂಗೀತ ವಿಮರ್ಶಕರು ಇಂದಿಗೂ ವಿಪುಲವಾದ, ಸ್ವಾರಸ್ಯವಾದ ಚರ್ಚೆ ನಡೆಸುತ್ತಿದ್ದಾರೆ.(ನೋಡಿ- ಇಟಾಲಿಯನ್-ಸಂಗೀತ)

ಉಲ್ಲೇಖಗಳು ಬದಲಾಯಿಸಿ