ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ

ಕನ್ಯಾ ವಿಕ್ರಯದ ಪರಿಣಾಮವು ಎಂಬ ಇನ್ನೊಂದು ಹೆಸರನ್ನೂ ಉಳ್ಳ ಈ ಪುಟ್ಟ ಪುಸ್ತಕ ಹೊಸಗನ್ನಡದ ಮೊತ್ತಮೊದಲ ಗ್ರಂಥಗಳಲ್ಲಿ ಒಂದು; ಕನ್ನಡದಲ್ಲಿ ಮುದ್ರಣ ಕಂಡ ಮೊದಲ ಹತ್ತೆಂಟರಲ್ಲಿ ಕೂಡ ಒಂದು. ಮುಖ ಪುಟದಲ್ಲಿ ಉಲ್ಲೇಖವಾಗಿರುವಂತೆ ಹವ್ಯಕ ಹಿತೇಚ್ಛುವಾದ ಒಬ್ಬ ವಿದ್ವಾಂಸರಿಂದ ರಚಿಸಲ್ಪಟ್ಟದ್ದನ್ನು (1887) ಬೊಂಬಾಯಿಯ ಭಾರತೀ ಛಾಪಖಾನೆಯ ಅಧ್ಯಕ್ಷರು ತಮ್ಮ ಮುದ್ರಣಾಲಯದಲ್ಲಿ ಛಾಪಿಸಿದರು. ಇದೊಂದು ಚಿಕ್ಕ ನಾಟಕ; 14 ಪುಟ್ಟ ಪುಟ್ಟ ದೃಶ್ಯಗಳುಳ್ಳದ್ದು, ಕ್ರೌನ್ ಅಷ್ಟಪತ್ರದ ಮುದ್ರಣದಲ್ಲಿ 47 ಪುಟ; ಸುಮಾರು ಮುಕ್ಕಾಲು ಗಂಟೆ ಅವಧಿಯಲ್ಲಿ ಆಡಬಹುದಾದದ್ದು.

ಉತ್ತರ ಕನ್ನಡದ ಕರ್ಕಿಯ ವೆಂಕಟರಮಣಶಾಸ್ತ್ರಿಸೂರಿ ಎಂಬ ಸಾಹಸಿ ವಿದ್ವಾಂಸ ಬೊಂಬಾಯಿಯಲ್ಲಿ ಭಾರತೀ ಛಾಪಾಖಾನೆಯನ್ನು ಸ್ಥಾಪಿಸಿದ್ದರು. ಅಲ್ಲಿ ಮಂಗಳೂರಿನ ಅಕ್ಕಸಾಲಿಗರಿಂದ ಕನ್ನಡ ಅಕ್ಷರ ಕೆತ್ತಿಸಿ ಕನ್ನಡದ ಹಳೆಯ ಕಾವ್ಯ ಪ್ರಸಂಗಗಳನ್ನು ಮುದ್ರಿಸಿದ್ದರಲ್ಲದೆ ನಿಯತಕಾಲಿಕಗಳನ್ನು ಪ್ರಕಟಿಸುತ್ತಿದ್ದರು. ಅವರೇ ಈ ಪುಸ್ತಕದ ಕರ್ತೃ ಎಂಬುದು, ಈ ಪುಸ್ತಕವನ್ನು ಎರಡನೆಯ ಬಾರಿಗೆ ಪರಿಚಯ ಸಮೇತ ಪ್ರಕಟಿಸಿದ (ಕುಮಟ 1953) ಲಿಂಗೇಶಶರ್ಮರ ಹೇಳಿಕೆ. ಇದು ಸಂಭವ.

ಕಥಾಹಂದರ

ಬದಲಾಯಿಸಿ

ಆಗಲೇ ಇಬ್ಬರು ಹೆಂಡಿರನ್ನು ಕಳೆದುಕೊಂಡು 60 ವರ್ಷ ಮೀರಿದ್ದ ಮುದುಕ ಇಗ್ಗಪ್ಪ ಹೆಗಡೆ ಸಾಲ ಮಾಡಿ ತೆರ (ವಧು ದಕ್ಷಿಣೆ) ಕೊಟ್ಟು ಎಳೆಯ ಹುಡುಗಿಯನ್ನು ಮದುವೆಯಾದ. ದಾಂಪತ್ಯ ವಿರಸಗೊಳ್ಳುತ್ತಿರುವಾಗಲೇ ರೋಗದಿಂದ ಸತ್ತ. ಹಣಕ್ಕೆ ಮಗಳನ್ನು ಮಾರಿದ. ಶಿವಭಟ್ಟ ಮನೆಯೂ ಸುಟ್ಟು ಇದ್ದ ಒಬ್ಬನೇ ಮಗನೂ ಸತ್ತು ಹಾಳಾದ. ವಿಧವೆಯಾದ ಹುಡುಗಿ ಕೆಟ್ಟಳು; ಗರ್ಭ ಶೂನಿ ಮಾಡಿ ಅಪರಾಧಿಯಾದಳು. ಈ ಅಪರಾಧದಲ್ಲಿ ಸಾಮಾಜಿಕ ದೋಷವೇ ಹೆಚ್ಚೆಂಬುದನ್ನು ಕಂಡ ನ್ಯಾಯಾಧೀಶರು ಅಲ್ಪ ಶಿಕ್ಷೆ ವಿಧಿಸಿ ಮುಗಿಸಿದರು. ಇದು ಸ್ಥೂಲವಾಗಿ ನಾಟಕದ ಕಥೆ.

ಕೃತಿಯ ವಿಶೇಷತೆಗಳು

ಬದಲಾಯಿಸಿ

ಆಡುಭಾಷೆಯನ್ನೇ ತದ್ವತ್ ಲಿಪಿಗೊಳಿಸಿ ಸಂಭಾಷಣೆ ರಚಿಸಿದ್ದು ಈ ನಾಟಕದ ಮುಖ್ಯ ವೈಶಿಷ್ಟ್ಯ. ಇಲ್ಲಿನ ಮುಖ್ಯ ಪಾತ್ರಗಳು ಹೆಚ್ಚಾಗಿ ಅಡಕೆ ತೋಟವನ್ನೇ ಅವಲಂಬಿಸಿದ ಬ್ರಾಹ್ಮಣವರ್ಗದವರು, ಹವ್ಯಕರು. ಹವ್ಯಕರು ಇವತ್ತಿಗೂ ಬಳಸುವ ಹಳಗನ್ನಡಪ್ರಚುರವಾದ ವಿಶಿಷ್ಟದೇಸಿಯನ್ನೇ ಅಪ್ಪಟವಾಗಿ ಇಲ್ಲಿನ ಸಂಭಾಷಣೆಗಳಲ್ಲಿ ಬಳಸಿದೆ. ಹಾಗೇ, ನಾಟಕದಲ್ಲಿ ಬರುವ ಕೊಂಕಣಸ್ಥರು ಕೊಂಕಣಿಯಲ್ಲಿ ಅಥವಾ ಕೊಂಕಣಸ್ಥ ಕನ್ನಡದಲ್ಲಿ ಮಾತಾಡುತ್ತಾರೆ. ಆಳು ತನ್ನ ಸಮಾಜದ ದೇಸಿಯಲ್ಲೇ ಮಾತಾಡುತ್ತಾನೆ.

ಕನ್ನಡ ಸಾಹಿತ್ಯ ಚರಿತ್ರೆಯ ಒಂದು ತಿರುವಿನಲ್ಲಿ ಅನೇಕ ಹೊಸತನಗಳಿಗೆ ಧೈರ್ಯ ಮಾಡಿದ ಈ ಚಿಕ್ಕ ಗ್ರಂಥದ ವೈಶಿಷ್ಟ್ಯಗಳು ಇವು :

  1. ಕನ್ನಡದಲ್ಲಿ ಮುದ್ರಿತವಾದ ಮೊದಲ ಹತ್ತೆಂಟರಲ್ಲಿ ಇದೂ ಒಂದು.[]
  2. ಕನ್ನಡದ ಮೊತ್ತ ಮೊದಲ ಸ್ವತಂತ್ರ ನಾಟಕ; ಅಷ್ಟೇ ಅಲ್ಲ ಹೊಸಗನ್ನಡವನ್ನು ಆರಂಭಿಸಿದ ಮೊದಲ ಸ್ವತಂತ್ರ ಕೃತಿ.[]
  3. ಸಂಸ್ಕೃತದ ರೂಪಾಂತರವಾದ ಮಿತ್ರವಿಂದಾ ಗೋವಿಂದ ಕನ್ನಡದ ಮೊದಲ ನಾಟಕವಾದರೆ ಇದೇ ಎರಡನೆಯದು.
  4. ವಸ್ತು ಯಾವುದೇ ಗ್ರಂಥವನ್ನು ಆಧರಿಸದೆ ಜೀವನದಿಂದ ನೇರ ಎತ್ತಿಕೊಂಡದ್ದು; ವಿಷಯ ಸಾಮಾಜಿಕ.
  5. ಆದ್ಯಂತ ಆಡುಮಾತನ್ನೇ ಅಪ್ಪಟವಾಗಿ ಬಳಸಿಕೊಂಡಿದ್ದು.
  6. ಹವ್ಯಕ ಭಾಷೆಯ (ಹವಿಗನ್ನಡ, ಹವ್ಯಕ ಕನ್ನಡ - ಕನ್ನಡದ ಉಪಭಾಷೆ) ಮೊದಲ ನಾಟಕ

ಉಲ್ಲೇಖ

ಬದಲಾಯಿಸಿ
  1. "ಆರ್ಕೈವ್ ನಕಲು" (PDF). Archived from the original (PDF) on 2021-07-28. Retrieved 2020-12-30.
  2. "ಆರ್ಕೈವ್ ನಕಲು". Archived from the original on 2021-05-11. Retrieved 2020-12-30.