ಇಂಡಿಯನ್ನರು, ಉತ್ತರ ಅಮೆರಿಕದ

ಉತ್ತರ ಅಮೆರಿಕದ ಮೂಲ ನಿವಾಸಿಗಳು. ಯೂರೋಪಿಯನ್ನರು ಉತ್ತರ ಅಮೆರಿಕಕ್ಕೆ ವಲಸೆ ಬರುವುದಕ್ಕೆ ಮುಂಚಿನಿಂದಲೂ ಇವರು ಅಲ್ಲಿ ವಾಸಿಸುತ್ತಿದ್ದಾರೆ. ಅಮೆರಿಕವನ್ನು ಮೊದಲ ಬಾರಿ ಕಂಡ ಕೊಲಂಬಸ್ ತಾನು ಇಂಡಿಯದ ಪೂರ್ವತೀರವನ್ನು ತಲಪಿದ್ದನೆಂದು ಭಾವಿಸಿದ್ದರಿಂದ ಅಲ್ಲಿ ವಾಸಿಸುತ್ತಿದ್ದ ಜನರನ್ನು ಇಂಡಿಯನ್ನರೆಂದು ಕರೆದ. ಇವರು ಅಮೆರಿಕದವರಾದ್ದರಿಂದ ಇವರಿಗೆ ಈ ಹೆಸರು ಬಂತು. ಇವರ ಪೂರ್ವಿಕರು ಏಷ್ಯಾಈಶಾನ್ಯಭಾಗದಿಂದ ಬೇರಿಂಗ್ ಜಲಸಂಧಿಯ ಮೂಲಕ ವಲಸೆ ಬಂದವರು ಎಂಬುದು ಈಗ ಬಹಳ ಮಟ್ಟಿಗೆ ಖಚಿತವಾಗಿದೆ. ಇವರು ಅಲೆ ಅಲೆಯಾಗಿ ಬಂದು ಬೇರೆ ಬೇರೆಡೆಗಳಲ್ಲಿ ನೆಲೆಸಿದ್ದರಿಂದ ಇವರಲ್ಲಿ ಅನೇಕ ಭಾಷಾವರ್ಗಗಳಿವೆ. (ನೋಡಿ- ಅಮೆರಿಕದ-ಇಂಡಿಯನರ-ಭಾಷೆಗಳು)[]ನೆಲೆಸಿದ ಪ್ರದೇಶದ ಭೂಸ್ಥಿತಿ, ವಾಯುಗುಣ ಮುಂತಾದವುಗಳಿಗೆ ಅನುಗುಣವಾಗಿ ಇವರ ನಾಗರಿಕತೆಯಲ್ಲೂ ವೈವಿಧ್ಯವುಂಟಾಯಿತು. (ನೋಡಿ- ಅಮೆರಿಕದ-ಆದಿವಾಸಿಗಳು)

ಮಂಗೋಲ್ ಬುಡಕಟ್ಟಿ

ಬದಲಾಯಿಸಿ

ಇವರು ಮಂಗೋಲ್ ಬುಡಕಟ್ಟಿಗೆ ಸೇರಿದ್ದು, ಇವರೆಲ್ಲ ಒಂದೇ ಕಡೆಯಿಂದ ವಲಸೆ ಬಂದವರಾದ್ದರಿಂದ ಇವರ ದೈಹಿಕ ಲಕ್ಷಣಗಳು ಸಾಮಾನ್ಯವಾಗಿ ಒಂದೇ ರೀತಿಯಾಗಿವೆ. ಇವರ ತಲೆಗೂದಲು ಕಪ್ಪು, ಒರಟು; ಕಣ್ಣುಗಳು ಕಪ್ಪು; ಮೈ ಮೇಲೆ ಕೂದಲು ವಿರಳ; ಚರ್ಮದ್ದು ಕಂದುಬಣ್ಣ. ನವಶಿಲಾಯುಗದ ಸಂಸ್ಕøತಿಯನ್ನೇ ಇವರು ತಮ್ಮೊಡನೆ ತಂದರು. ತಿರುಗಣೆಯನ್ನು ತಿರುಗಿಸಿ ಇವರು ಬೆಂಕಿ ಮಾಡುತ್ತಿದ್ದರು; ನಾಯಿ ಸಾಕುತ್ತಿದ್ದರು; ಕುಕ್ಕೆ ಮಾಡುತ್ತಿದ್ದರು; ಕಲ್ಲಿನ ಸಲಕರಣೆ ಉಪಯೋಗಿಸುತ್ತಿದ್ದರು.[]ಯೂರೋಪಿಯನ್ನರು ಬರುವುದಕ್ಕೆ ಮುಂಚೆಯೇ ಇಂಡಿಯನ್ನರು ಭೂವ್ಯವಸಾಯದಲ್ಲಿ ಮುಂದುವರಿದಿದ್ದರು. ಹತ್ತಿ, ಹೊಗೆಸೊಪ್ಪು, ಆಲೂಗೆಡ್ಡೆ, ಮುಸುಕಿನ ಜೋಳ, ಹುರಳಿ, ಪರಂಗಿಹಣ್ಣು ಮುಂತಾದುವನ್ನು ಬೆಳೆಯುತ್ತಿದ್ದರು. ಬಾಣ ಈಟಿ ಭರ್ಜಿಗಳಿಂದ ಬೇಟೆಯಾಡುತ್ತಿದ್ದರು. ಸ್ಲೆಡ್ಜ್ ಅಥವಾ ಜಾರು ಬಂಡಿಗಳಲ್ಲಿ, ಹರಿಗೋಲುಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಕುಶಲ ಕಲೆಗಳಲ್ಲಿ ಬಹಳ ಮುಂದುವರಿದಿದ್ದರು; ಕೊಳಲು, ಮದ್ದಲೆ ಮುಂತಾದುವನ್ನು ಗಾಯನಕ್ಕೆ ಉಪಯೋಗಿಸುತ್ತಿದ್ದರು; ಚರ್ಮ, ಮಡಕೆ, ಮೂಳೆಗಳ ಮೇಲೆ ಅಂದವಾದ ಚಿತ್ರಗಳನ್ನು ಬರೆಯುತ್ತಿದ್ದರು. ಅನೇಕ ದೇವತೆಗಳನ್ನು ಆರಾಧಿಸುತ್ತಿದ್ದರು. ಪ್ರಕೃತಿಯ ಪ್ರತಿಯೊಂದು ಕ್ರಿಯೆಯಲ್ಲೂ ದೇವತಾಶಕ್ತಿಯೊಂದು ವ್ಯಕ್ತಪಡುತ್ತದೆಯೆಂದು ನಂಬಿ ಈ ಶಕ್ತಿಗಳನ್ನು ಪೂಜಿಸುತ್ತಿದ್ದರು. ಈ ಎಲ್ಲ ಶಕ್ತಿಗಳ ಹಿನ್ನೆಲೆಯಲ್ಲಿ ವಿಶ್ವದ ಜೀವಕ್ಕೆ ಕಾರಣಭೂತನಾದ ಅನಂತನಾದ ನಿತ್ಯನಾದ ಶಕ್ತಿಸ್ವರೂಪ ಭಗವಂತನಿದ್ದಾನೆ ಎಂದು ನಂಬಿದ್ದರು. ಮಾನವನ ಆತ್ಮ ಈ ಶಕ್ತಿಯ ಒಂದು ಅಂಶವಾದ್ದರಿಂದ ಅದೂ ಅಮರವೆಂದು ಇವರ ನಂಬಿಕೆ. ಒಂದೊಂದು ಬಣಕ್ಕೂ ಒಂದೊಂದು ಬುಡಕಟ್ಟಿಗೂ ಪ್ರತ್ಯೇಕ ದೇವತೆಯುಂಟು. ಈ ಗುಂಪಿನ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಈ ದೇವತೆಯ ಕೆಲಸ. ಈ ಸ್ಥಾನಿಕ ದೇವತೆಗಳೆಲ್ಲ ಸಾಮಾನ್ಯವಾಗಿ ಉಪಕಾರಿಗಳು, ಧರ್ಮಶೀಲರು. ಇದು ಈ ಜನರ ಸಾಮಾನ್ಯ ನಂಬಿಕೆ. ಸಮಾಜ ರಚನೆಯಲ್ಲಿ ಮಾತ್ರ ಇವರಲ್ಲಿ ವೈವಿಧ್ಯವನ್ನು ಕಾಣಬಹುದು. ಇರಕ್ವಾಯ್ಸ್, ನಚೀಸ್, ಪ್ಯುಬ್ಲೊ ಇಂಡಿಯನ್ನರು ಹೆಚ್ಚು ನಾಗರಿಕರಾಗಿ ವ್ಯವಸ್ಥಿತ ಸಮಾಜ ಜೀವನ ನಡೆಸುತ್ತಿದ್ದರು.

ಕೊಲಂಬಸ್

ಬದಲಾಯಿಸಿ

ಕೊಲಂಬಸ್ ಅಮೆರಿಕಕ್ಕೆ ಬಂದ ಕಾಲದಲ್ಲಿ 12 ಲಕ್ಷಕ್ಕೂ ಹೆಚ್ಚು ಇಂಡಿಯನ್ನರು ಅಲ್ಲಿ ವಾಸಿಸುತ್ತಿದ್ದರೆಂದು ಕಂಡುಬಂದಿದೆ. 20ನೆಯ ಶತಮಾನದ ಮೊದಲ ವರ್ಷಗಳಲ್ಲಿ ಇವರ ಸಂಖ್ಯೆ ಸುಮಾರು 4 ಲಕ್ಷಕ್ಕೆ ಕುಗ್ಗಿತ್ತು. ಈ ದೇಶಕ್ಕೆ ಬಂದ ಐರೋಪ್ಯ ವಲಸೆಗಾರರೊಂದಿಗೆ ನಡೆದ ಯುದ್ಧಗಳಲ್ಲಿ ಇವರು ಪದೇ ಪದೇ ಅನುಭವಿಸಿದ ಸೋಲುಗಳೂ ಬಿಳಿಯರಿಂದ ಇವರು ಕಲಿತ ಕುಡಿತವೇ ಮುಂತಾದ ದುಶ್ಚಟಗಳೂ ಹಳೆಯ ಜಗತ್ತಿನಿಂದ ಬಂದ ಬಿಳಿಯರು ತಮ್ಮೊಂದಿಗೆ ತಂದು ಹರಡಿದ ರೋಗಗಳೂ ಬಂದೂಕದ ಆಗಮನವೂ ಇವರ ಜನಸಂಖ್ಯೆ ತೀವ್ರವಾಗಿ ಕುಗ್ಗಲು ಕಾರಣ. 19ನೆಯ ಶತಮಾನದ ಮಧ್ಯಕಾಲದಿಂದ ಇವರು ಪ್ರತ್ಯೇಕ ಭೂ ಪ್ರದೇಶದಲ್ಲಿ ವಾಸಿಸುವಂತೆ ಕಡ್ಡಾಯ ಮಾಡಲಾಯಿತು. ಒಂದು ಸ್ಥಳದಲ್ಲಿ ನೆಲೆನಿಂತು ಬೇಸಾಯದಲ್ಲಿ ತೊಡಗುವ ಅಭ್ಯಾಸ ಇವರಲ್ಲಿರಲಿಲ್ಲವಾದ್ದರಿಂದ ಮೊದಮೊದಲು ಇವರಿಗೆ ಹಿಂಸೆಯಾಯಿತು. ಕ್ರಿಯಾಹೀನತೆಯೂ ಅಭಿಮಾನ ಶೂನ್ಯತೆಯೂ ಇವರ ಕ್ಷೀಣದೆಸೆಗೆ ಕಾರಣಗಳಾದುವು.[]

ಕೈಗಾರಿಕೆ

ಬದಲಾಯಿಸಿ

ಅಮೆರಿಕದಲ್ಲಿ ಬೆಳೆಯುತ್ತಿದ್ದ ಕೈಗಾರಿಕೆಗೆ ಸ್ಥಳೀಯ ಕಾರ್ಮಿಕರ ಬೇಡಿಕೆ ಅಧಿಕವಾದಾಗ ಇವರು ಮತ್ತೆ ಉಪಯುಕ್ತ ಜೀವನದಲ್ಲಿ ಹೆಚ್ಚು ಹೆಚ್ಚಾಗಿ ತೊಡಗುವುದು ಸಾಧ್ಯವಾಯಿತು. ಹಿಂದಿನ ತಲೆಮಾರುಗಳ ಗಾಯದ ಗುರುತುಗಳನ್ನು ಮರೆತು ಇವರು ಹೊಸ ಪರಿಸ್ಥಿತಿಗೆ ಹೊಂದಿಕೊಂಡರು. ಜನಸಂಖ್ಯೆಯ ಇಳಿತಕ್ಕೆ ತಡೆಯುಂಟಾಯಿತು. ಇವರ ಸಂಖ್ಯೆ ನಿಧಾನವಾಗಿ ಬೆಳೆಯಲಾರಂಭಿಸಿತು.ಒಂದು ಶತಮಾನದಿಂದೀಚೆಗೆ ಸಂಯುಕ್ತ ಸಂಸ್ಥಾನದ ಸರ್ಕಾರ ಈ ಇಂಡಿಯನ್ನರ ಕ್ಷೇಮಾಭ್ಯುದಯಗಳ ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸಿ ಅವರ ವಿದ್ಯಾಭ್ಯಾಸಕ್ಕಾಗಿ ಸುವ್ಯವಸ್ಥೆ ಕಲ್ಪಿಸಿದೆ. ಮಸಚೂಸೆಟ್ಸ್‍ನಲ್ಲಿರುವ ಸ್ಟಾಕ್ ಬ್ರಿಜ್ ನಗರದ ಇಂಡಿಯನ್ ಪ್ರೌಢ ವಿದ್ಯಾಶಾಲೆಯಂಥ ಶಿಕ್ಷಣ ಕೇಂದ್ರಗಳಲ್ಲಿ ಉನ್ನತ ಶಿಕ್ಷಣವೂ ಇವರಿಗೆ ದೊರಕುತ್ತದೆ. 1924ರಲ್ಲಿ ಇವರಿಗೆ ಪೌರತನದ ಮಾನ್ಯತೆ ನೀಡಲಾಯಿತು. ಸುಮಾರು ನಾಲ್ಕು ಲಕ್ಷ ಇಂಡಿಯನ್ನರು ಸಂಯುಕ್ತ ಸಂಸ್ಥಾನದಲ್ಲಿದ್ದಾರೆ. ಕೆನಡದಲ್ಲಿ ಇವರ ಸಂಖ್ಯೆ ಒಂದೂಕಾಲು ಲಕ್ಷ. ಅಲ್ಲಿ ಇವರು ಅಲ್ಪ ಸಂಖ್ಯಾತರೆಂದು ಪರಿಗಣಿತರಾಗಿದ್ದು ಸರ್ಕಾರದ ರಕ್ಷಣೆ ಪಡೆದಿದ್ದಾರೆ. ಅಲ್ಲೂ ಇವರಿಗೆ ಪೌರತ್ವ ನೀಡಲಾಗಿದೆ.

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. https://en.wikipedia.org/wiki/List_of_Indigenous_peoples_of_South_America
  2. https://www.britannica.com/topic/South-American-Indian
  3. "ಆರ್ಕೈವ್ ನಕಲು". Archived from the original on 2016-10-21. Retrieved 2016-10-19.