ಇಂಗ್ಲೆಂಡಿನ ನಾಣ್ಯಗಳು
ಇಂಗ್ಲೆಂಡಿನ ಚರಿತ್ರೆಗಿರುವಂತೆ ಅದರ ನಾಣ್ಯಗಳಿಗೂ ಒಂದು ಭವ್ಯ ಇತಿಹಾಸವಿದೆ. ಪ್ರ.ಶ.ಪು. 4ನೆಯ ಶತಮಾನದಿಂದ ಆರಂಭವಾದ ಅಲ್ಲಿನ ನಾಣ್ಯಗಳ ಚರಿತ್ರೆ ವೈವಿಧ್ಯಪೂರ್ಣವೂ ವೈಭವಯುತವೂ ಆಗಿದೆ. ಇಲ್ಲಿ ಕಾಣುವ ಪ್ರಾಚೀನತೆಯ ನಾಣ್ಯಗಳೆಂದರೆ ಗ್ರೀಕ್ ನಾಣ್ಯಗಳು. ಮ್ಯಾಸಿಡೋನಿಯದ 2ನೆಯ ಫಿಲಿಪ್ ರಾಜನ ನಾಣ್ಯಗಳನ್ನು ಅನುಕರಿಸಿ ಮುದ್ರಿತವಾದವುಗಳೇ ಇದುವರೆಗೂ ಇಲ್ಲಿ ದೊರಕಿರುವವುಗಳಲ್ಲಿ ಪ್ರಾಚೀನವಾದವು. (ಪ್ರ.ಶ.ಪು.4ನೆಯ ಶತಮಾನದ ಮಧ್ಯಭಾಗ). ಇವು ಚಿನ್ನದಿಂದ ಮಾಡಿದಂತಹವು. ಕಾಲಕ್ರಮೇಣ ಚಿನ್ನದ ಅಂಶ ಕಡಿಮೆಯಾಗುತ್ತ ಬಂತು. ಈ ನಾಣ್ಯಗಳ ಮೇಲೆ ಯಾವ ಬರೆವಣಿಗೆಯೂ ಕಾಣಬರುವುದಿಲ್ಲ. ಮೂರು ಶತಮಾನಗಳ ಅನಂತರ ರೋಮನ್ನರ ವಿಶ್ವಪ್ರಸಿದ್ಧವಾದ ನ್ಯಾಣಗಳು ಇಂಗ್ಲೆಂಡಿನಲ್ಲಿ ತಮ್ಮ ಪ್ರಭಾವವನ್ನು ಬೀರಲಾರಂಭಿಸಿದವು. ಪ್ರ.ಶ.ಪು. ಒಂದನೆಯ ಶತಮಾನದಲ್ಲಿ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು ಪ್ರಾರಂಭವಾದವು. ಇವುಗಳಲ್ಲಿ ರಾಜನ ಹೆಸರಿನ ಶಾಸನಗಳು ಕಾಣಬರುತ್ತವೆ. ರೋಮನ್ನರು ಇಂಗ್ಲೆಂಡನ್ನು ತಮ್ಮ ವಶಮಾಡಿಕೊಂಡ ಅನಂತರ, ಇಂಗ್ಲೆಂಡಿನ ಸ್ಥಳೀಯ ನಾಣ್ಯಗಳು ನಾಶವಾದುವು. ಬದಲು ರೋಮನ್ ನಾಣ್ಯಗಳು ಬಳಕೆಗೆ ಬಂದವು. ಲಂಡನ್ನಿನ ಟಂಕಶಾಲೆಯಲ್ಲಿ 5-7ನೆಯ ಶತಮಾನದವರೆಗೆ ಕೀಳುವರ್ಗದ ರೋಮನ್ ನಾಣ್ಯಗಳು ಚಲಾವಣೆಗೆ ಬಂದವು. 7ನೆಯ ಶತಮಾನದ ಅನಂತರ ರೂನಿಕ್ ಲಿಪಿಯ ಶಾಸನಗಳುಳ್ಳ ಸಣ್ಣ ಬೆಳ್ಳಿಯ ನಾಣ್ಯಗಳು ಬಳಕೆಗೆ ಬಂದವು.
8ನೆಯ ಶತಮಾನದಿಂದ ಇಂಗ್ಲೆಂಡಿನ ನಾಣ್ಯಗಳಲ್ಲಿ ಗಮನಾರ್ಹ ಬದಲಾವಣೆ ಗಳುಂಟಾದುವು. ನಾರ್ಥಾಂಬ್ರಿಯ ರಾಜ್ಯದ ಓಪ ಎಂಬ ರಾಜ ಬೆಳ್ಳಿಯ ಪೆನ್ನಿಗಳನ್ನು ಚಲಾವಣೆಗೆ ತಂದ. ಈ ನಾಣ್ಯ ಬಹುಸುಂದರವಾಗಿದ್ದು ಒಂದು ಕಡೆ ರಾಜನ ಚಿತ್ರವನ್ನು ಹೊಂದಿದೆ. ದಪ್ಪಗೆ ಡೊಂಕಾಗಿರದೆ ಮಟ್ಟಸವಾಗಿ ತೆಳುವಾಗಿದೆ. ಇದು ಬಹಳ ಕಾಲದವರೆಗೆ ಬದಲಾವಣೆಯಿಲ್ಲದೆ ಚಲಾವಣೆಯಲ್ಲಿತ್ತು. ಇದೇ ರಾಜ ಅರಬ್ಬೀ ದೀನಾರಗಳನ್ನು ಹೋಲುವ ಚಿನ್ನದ ನಾಣ್ಯಗಳನ್ನು ಬಳಕೆಗೆ ತಂದ. ಇದೂ ಬಹು ಸುಂದರವಾದ ನಾಣ್ಯ. ಇದೇ ಸುಮಾರಿಗೆ ಕ್ಯಾಂಟರ್ಬರಿಯ ಆರ್ಚ್ ಬಿಷಪ್ ರಾಜನ ಹೆಸರಿನ ಶಾಸನವುಳ್ಳ ನಾಣ್ಯಗಳನ್ನು ಅಚ್ಚು ಹಾಕಿಸಲು ಪ್ರಾರಂಭಿಸಿದ. ಕೆಂಟ್ ಮತ್ತು ಪೂರ್ವ ಆ್ಯಂಗ್ಲಿಯ ರಾಜ್ಯಗಳಲ್ಲೂ ಪೆನ್ನಿ ಬಳಕೆಗೆ ಬಂತು. ವೆಸೆಕ್್ಸ ಪ್ರಬಲವಾದ ಮೇಲೆ ನಾಣ್ಯಗಳಲ್ಲಿ ಇನ್ನೂ ಕೆಲವು ಹೊಸ ರೀತಿಯವು ಬಳಕೆಗೆ ಬಂದವು. 9 ಮತ್ತು 10ನೆಯ ಶತಮಾನಗಳ ಅನಂತರ ನಾಣ್ಯಗಳ ವಿನ್ಯಾಸ, ಅಂದ, ಲಿಪಿ ಮುಂತಾದವುಗಳಿಗೆ ಹೆಚ್ಚು ಗಮನ ಕೊಡಲಾಯಿತು. ಅಚ್ಚು ಹಾಕಿಸುವ ರಾಜನ ಚಿತ್ರ, ಹೆಸರು ಮತ್ತು ಟಂಕಸಾಲೆಯ ಹೆಸರು ಮುಂತಾದವು ನಾಣ್ಯಗಳಲ್ಲಿ ಇರಬೇಕೆಂಬ ನಿಯಮವೂ ಬಂತು. ಹೀಗಾಗಿ ಈ ಕಾಲದ ನಾಣ್ಯಗಳು ಬಹು ಸುಂದರವಾಗಿದ್ದು ಚರಿತ್ರಕಾರರಿಗೆ ಬಹು ಪ್ರಯೋಜನಕಾರಿಯಾಗಿವೆ. ನಾರ್ಮನ್ ಪ್ರಾಬಲ್ಯ ಹೆಚ್ಚಾದ ಅನಂತರ ನಾಣ್ಯಗಳು ಪದೇ ಪದೇ ಬದಲಾವಣೆಗೊಂಡುವು. ಖೋಟಾನಾಣ್ಯಗಳನ್ನು ತಡೆಯುವುದೇ ಇದರ ಮುಖ್ಯ ಉದ್ದೇಶ. ನಾಣ್ಯಗಳ ಮೂಲಮುದ್ರೆಗಳನ್ನು ಲಂಡನ್ನಿನಲ್ಲಿ ತಯಾರಿಸಿ ದೇಶದ ಟಂಕಸಾಲೆಗಳಿಗೆ ಕಳಿಸಲಾಗುತ್ತಿತ್ತು. 1 ಮತ್ತು 2ನೆಯ ವಿಲಿಯಂ ರಾಜರ ಕಾಲಗಳಲ್ಲಿ ಪೆನ್ನಿಗಳು ಮುಂದುವರಿದವು.
1247ರಲ್ಲಿ 2ನೆಯ ಹೆನ್ರಿ ಟಂಕಸಾಲೆಗಳನ್ನು ಕಡಿಮೆಮಾಡಿ, ನಾಣ್ಯಗಳ ಮೇಲಿದ್ದ ಶಿಲುಬೆಯ ಚಿತ್ರವನ್ನು ದೊಡ್ಡದಾಗಿ ಮಾಡಿದ ಮೊದಲನೆಯ ಎಡ್ವರ್ಡ್ ದೊರೆ ಅರ್ಧ ಪೆನ್ನಿ ಮತ್ತು ಫಾರ್ದಿಂಗು ನಾಣ್ಯಗಳನ್ನೂ ನಾಲ್ಕು ಪೆನ್ನಿ ಮೌಲ್ಯದ ಗ್ರೋಟ್ ಎಂಬ ನಾಣ್ಯವನ್ನೂ ಬಳಕೆಗೆ ತಂದ. ಇವು 2ನೆಯ ಮತ್ತು 3ನೆಯ ಎಡ್ವರ್ಡ್ ದೊರೆಗಳ ಕಾಲದಲ್ಲೂ ಮುಂದುವರಿದುವು. ಮೂರನೆಯ ಹೆನ್ರಿ 20 ಬೆಳ್ಳಿಯ ಪೆನ್ನಿಗಳ ಮೌಲ್ಯದ ಚಿನ್ನದ ಪೆನ್ನಿಗಳನ್ನು ಬಳಕೆಗೆ ತಂದ. ಅನಂತರ ಅದರ ಮೌಲ್ಯವನ್ನು 24 ಬೆಳ್ಳಿಯ ಪೆನ್ನಿಗಳಿಗೆ ಏರಿಸಿದ. ಆದರೆ ಬಹುಬೇಗ ಅದರ ಬಳಕೆಯನ್ನು ನಿಲ್ಲಿಸಿದ. 1344ರಲ್ಲಿ 3ನೆಯ ಎಡ್ವರ್ಡ್ ಅರ್ಧ ಮತ್ತು ಕಾಲುಭಾಗ ಮೌಲ್ಯದ ಪ್ಲೋರಿನ್ ನಾಣ್ಯವನ್ನು ಬಳಕೆಗೆ ತಂದ. ಆಮೇಲೆ ನೋಬಲ್ ಎಂಬ ಚಿನ್ನದ ನಾಣ್ಯವನ್ನೂ ಛಾಪು ಹಾಕಿಸಿದ. ಇದು 1461ರ ವರೆಗೆ 6 ಷಿಲ್ಲಿಂಗ್ ಮತ್ತು 8 ಪೆೆನ್ನಿಗಳ ಮೌಲ್ಯವನ್ನುಳ್ಳದ್ದಾಗಿತ್ತು. ನಾಣ್ಯದ ಮುಂಭಾಗದಲ್ಲಿ ಮೈಕೆಲನ ಚಿತ್ರವಿರುವುದರಿಂದ ಇದಕ್ಕೆ ಏಂಜಲ್ ಎಂಬ ಹೆಸರು ಬಂತು. ಹಿಂಭಾಗದಲ್ಲಿ ಹಡಗಿನ ಚಿತ್ರಣವಿದೆ. ಇದು ಚಲಾವಣೆಗೆ ಹೆಚ್ಚಾಗಿ ಬರದಿದ್ದರೂ 3-4 ಶತಮಾನಗಳ ಕಾಲ ಅರಮನೆಯಲ್ಲಿ ಮಾತ್ರ ಬಳಕೆಯಲ್ಲಿತ್ತು.
7ನೆಯ ಹೆನ್ರಿಯ ಕಾಲದಲ್ಲಿ ಇಂಗ್ಲೆಂಡಿನ ನಾಣ್ಯಗಳಲ್ಲಿ ಗಮನಾರ್ಹವಾದ ಬದಲಾವಣೆಗಳುಂಟಾದವು. 240 ಗ್ರೇನ್ ಮೌಲ್ಯದ ಸವರನ್ ಎಂಬ ಚಿನ್ನದ ನಾಣ್ಯವನ್ನು ಈತ ಅಚ್ಚು ಹಾಕಿಸಿದ. ಇದರ ಮುಂಭಾಗದಲ್ಲಿ ರಾಜ ಸಿಂಹಸನಾರೂಢನಾಗಿರುವ ಚಿತ್ರಣವಿದೆ. 1583ರಲ್ಲಿ ಇದೇ ರಾಜ ಷಿಲ್ಲಿಂಗ್ ಎಂಬ ನಾಣ್ಯವನ್ನೂ ಬಳಕೆಗೆ ತಂದ. ಅನಂತರ ಬಂದ 8ನೆಯ ಹೆನ್ರಿ ಸವರನ್ ನಾಣ್ಯದ ಚಿನ್ನದ ಮೌಲ್ಯವನ್ನು ತಗ್ಗಿಸಿದ ಮತ್ತು ಕ್ರೌನ್, ಅರ್ಧ ಕ್ರೌನ್ ಎಂಬ ಚಿನ್ನದ ನಾಣ್ಯಗಳನ್ನು ಬಳಕೆಗೆ ತಂದ. ಅಲ್ಲದೆ ಏಂಜಲ್ ಎಂಬ ನಾಣ್ಯದ ಮೌಲ್ಯವನ್ನು ಹೆಚ್ಚಿಸಿ, ಜಾರ್ಜ್ ನೋಬಲ್ ಎಂಬ ನಾಣ್ಯವನ್ನೂ ಬಳಕೆಗೆ ತಂದ. ಷಿಲ್ಲಿಂಗಿನ ಮೌಲ್ಯವನ್ನೂ ಕಡಿಮೆಮಾಡಿ 12 ಪೆನ್ನಿಯ ಷಿಲ್ಲಿಂಗುಗಳನ್ನು ಬಳಕೆಗೆ ತಂದ. ಕ್ಯಾಂಟರ್ ಬರಿಯ ಟಂಕಸಾಲೆಯನ್ನು ಮುಚ್ಚಿಸಿದ. ಅನಂತರ ಆಳಿದ ಮೇರಿ ಷಿಲ್ಲಿಂಗಿನ ಮೇಲ್ಭಾಗದಲ್ಲಿ ತನ್ನ ಪತಿ ಸ್ಪೇನಿನ ಎರಡನೆ ಫಿಲಿಪ್ನ ಚಿತ್ರವನ್ನು ಅಚ್ಚು ಹಾಕಿಸಿದಳು. ಎಲಿಜಬೆತ್ ರಾಣಿ ಸಣ್ಣ ಬದಲಾವಣೆಗಳೊಡನೆ ಹಿಂದಿನ ನಾಣ್ಯಗಳನ್ನು ಮುಂದುವರಿಸಿಕೊಂಡು ಬಂದಳು. ಸ್ಟುವರ್ಟ್ ಮನೆತನದ 1ನೆಯ ಜೇಮ್್ಸ ವಿವಿಧ ಮೌಲ್ಯದ ಹೊಸ ಚಿನ್ನದ ನಾಣ್ಯಗಳನ್ನು ಬಳಕೆಗೆ ತಂದ. ತಾಮ್ರದ ಹ್ಯಾರಿಂಗ್ಟನ್ ಫಾರ್ದಿಂಗುಗಳು ಬಳಕೆಗೆ ಬಂದುದು ಇವನ ಕಾಲದಲ್ಲಿ. ಎರಡನೆಯ ಚಾರ್ಲ್ಸ್ ದೊರೆ ಗಿನಿ ಎಂಬ ಚಿನ್ನದ ನಾಣ್ಯವನ್ನು ಬಳಕೆಗೆ ತಂದ. ಆಗ ಇದರ ಮೌಲ್ಯ 20 ಷಿಲ್ಲಿಂಗುಗಳು ಮಾತ್ರ ಇತ್ತು. 1717ರ ಅನಂತರ ಗಿನಿಗೆ 21 ಷಿಲ್ಲಂಗುಗಳೆಂದು ನಿರ್ಧರಿಸಲಾಯಿತು. ಈತ ಬೆಳ್ಳಿಯ ಕ್ರೌನ್, ಅರ್ಧ ಕ್ರೌನ್ಗಳನ್ನು ಮತ್ತು 1672ರಲ್ಲಿ ಅರ್ಧಪೆನ್ನಿ ಮತ್ತು ಫಾರ್ದಿಂಗು ಮೌಲ್ಯದ ಕಂಚಿನ ನಾಣ್ಯಗಳನ್ನು ಬಳಕೆಗೆ ತಂದ. ಹತ್ತೊಂಬತ್ತನೆಯ ಶತಮಾನದ ಆದಿಭಾಗದಲ್ಲಿ ಚಿನ್ನದ ಸವರನ್ ಮತ್ತು ಬೆಳ್ಳಿಯ ವಿವಿಧ ನಾಣ್ಯಗಳೂ ಬಳಕೆಗೆ ಬಂದುವು. 1848ರಲ್ಲಿ ವಿಕ್ಟೋರಿಯಾ ರಾಣಿ ಎರಡು ಷಿಲ್ಲಿಂಗಿನ ನಾಣ್ಯವನ್ನು ಅಚ್ಚುಹಾಕಿಸಿದಳು. ಇದು ಬಹಳ ಜನಾನುರಾಗಿಯಾಯಿತು. 1914ರಿಂದ ಬಳಕೆಯಲ್ಲಿಲ್ಲದೇ ಇದ್ದ ಸವರನ್ಗಳನ್ನು 1917ರಿಂದ ಮತ್ತೆ ಅಚ್ಚು ಮಾಡಲಾಯಿತು. ಅವೂ ಜನಾನುರಾಗಿಯಾದವು. ಕಾಗದದ ಹಣ ಹೆಚ್ಚಾಗಿ ಬಂದ ಮೇಲೆ ನಾಣ್ಯಗಳ ವೈವಿಧ್ಯ ಮತ್ತು ಸೌಂದರ್ಯಕ್ಕೆ ಧಕ್ಕೆ ಬಂದಿತು. ಆದರೂ ಇತ್ತೀಚೆಗೆ ಇಂಗ್ಲೆಂಡಿನ ನಾಣ್ಯಗಳಲ್ಲಿ ಅನೇಕ ಹೊಸ ರೀತಿಗಳು ಬಳಕೆಗೆ ಬಂದಿವೆ. 2005-06ರಲ್ಲಿಯೂ ಚಾಲ್ತಿಯಲ್ಲಿರುವ ನಾಣ್ಯಗಳೆಂದರೆ ಎರಡು ಪೌಂಡು, ಒಂದು ಪೌಂಡು, 50 ಪೆನ್ಸ್, 20 ಪೆನ್ಸ್, 10 ಪೆನ್ಸ್, 5 ಪೆನ್ಸ್, 2 ಪೆನ್ಸ್ ಮತ್ತು ಒಂದು ಪೆನ್ಸ್.
ಗ್ಯಾಲರಿ
ಬದಲಾಯಿಸಿ-
ಜಾರ್ಜ್ IV ರ ಕಾಪರ್ ಫಾರ್ಥಿಂಗ್, 1825
-
ರಾಣಿ ವಿಕ್ಟೋರಿಯಾ ಪೆನ್ನಿ, 1858, ತಾಮ್ರ
-
ಜಾರ್ಜ್ III ರ ತಾಮ್ರದ ಎರಡು ಪೆನ್ಸ್, 1797
-
ರಾಣಿ ವಿಕ್ಟೋರಿಯಾ ಶಿಲ್ಲಿಂಗ್, 1853, ಬೆಳ್ಳಿ
-
ವಿಕ್ಟೋರಿಯಾ ರಾಣಿಯ ಡಬಲ್ ಫ್ಲೋರಿನ್, 1878, ಬೆಳ್ಳಿ
-
ರಾಣಿ ವಿಕ್ಟೋರಿಯಾ ಕ್ರೌನ್, 1891, ಬೆಳ್ಳಿ