19ನೆಯ ಶತಮಾನದವರೆಗೆ: ರೋಮನ್ನರ ಕಾಲಕ್ಕೆ ಸೇರಿದ ಅನೇಕ ಕಲಾಕೃತಿಗಳು ಲಂಡನ್, ಕಾಲ್ಚೆಸ್ಟರ್, ನಾರ್ಫೋಕ್, ವೆರುಲೇಮಿಯಮ್ ಇತ್ಯಾದಿ ಎಡೆಗಳಲ್ಲಿ ದೊರಕಿವೆ. ಇವುಗಳಲ್ಲಿ ನಾರ್ಫೋಕಿನಲ್ಲಿ ಸಿಕ್ಕಿದ ನೀರೋನ ಕಂಚಿನಪ್ರತಿಮೆ. ಕಾಲ್ಚೆಸ್ಟರಿನಲ್ಲಿ ದೊರಕಿದ ಕ್ಯಾಲಿಗುಲಾನ ಶಿಲಾಪ್ರತಿಮೆ, ಲಂಡನ್ನಿನಲ್ಲಿ ದೊರಕಿದ ಹ್ಯಾದ್ರಿಯನ್ನಿನ ಕಂಚಿನ ಕಲೆ ಉತ್ತಮ ಕೃತಿಗಳು. ಇವಲ್ಲದೆ ಅನೇಕ ರೋಮನ್ ದೇವವಿಗ್ರಹಗಳೂ ವೀರರ ಸಮಾಧಿ ಕೆತ್ತನೆಗಳುಳ್ಳ ನೆಲಹಂಚುಗಳೂ ಅನೇಕ ಕಡೆಗಳಲ್ಲಿ ದೊರಕಿವೆ. ಇವೆಲ್ಲವೂ ಬಲುಮಟ್ಟಿಗೆ ರೋಮನ್ ಶೈಲಿಯಲ್ಲಿಯೇ ಇದ್ದು, ರೋಮ್ ಸಾಮ್ರಾಜ್ಯದ ಇತರ ಭಾಗಗಳಿಂದ ತಂದಂಥವು. ಇವುಗಳ ಜೊತೆಗೆ ಕೆಲವು ಸ್ಥಳೀಯ ವಿಗ್ರಹಗಳು (ಲಿಕರ್ನ ಮಂಗಳ ವಿಗ್ರಹ ಇತ್ಯಾದಿ) ದೊರಕಿದರೂ ಅವುಗಳಲ್ಲಿ ರೋಮನ್ ಕಲೆಯ ವಸ್ತು ಮತ್ತು ವಿನ್ಯಾಸದ ಪ್ರಭಾವ ಗಮನಾರ್ಹವಾಗಿ ಎದ್ದು ಕಾಣುತ್ತದೆ (ರೋಮನ್ ಕಲೆ). ಇಂಗ್ಲೆಂಡಿನ ಮಧ್ಯಯುಗದ ಮೊದಲ ಭಾಗಕ್ಕೆ ಸಂಬಂಧಪಟ್ಟಂತೆ ಕೆಲವು ಚಿತ್ರಿತ ಹಸ್ತಪ್ರತಿಗಳು (ಕೊಡೆಕ್ಸ್ ಅಮಿಯಾಟಿನಸ್, ಲಿಂಡಿಸ್ ಫರ್ನೆ ಗಾಸ್ಪೆಲ್ ಇತ್ಯಾದಿ) ಮತ್ತು ಶಿಲಾಶಿಲುಬೆಗಳು ಮಾತ್ರ ಉಳಿದಿವೆ. ಕ್ರೈಸ್ತ ಮತಕ್ಕೆ ಸಂಬಂಧಿಸಿದ ಅನೇಕ ಕಥೆಗಳು ಮತ್ತು ವ್ಯಕ್ತಿಗಳೇ ಹಸ್ತಪ್ರತಿಗಳ ಚಿತ್ರಗಳ ಮುಖ್ಯ ವಸ್ತುಗಳು. ಆದರೆ ಜೊತೆಯಲ್ಲೇ ಜ್ಯಾಮಿತೀಯ ಆಕೃತಿಗಳು ಮುಂತಾದ ನಮೂನೆಗಳು ಬಹಳ ಜಾಣ್ಮೆಯಿಂದ ಅಲಂಕರಣಕ್ಕಾಗಿ ಉಪಯೋಗಿಲಸ್ಪಡುತ್ತಿದ್ದುವು. ಈ ನಮೂನೆಗಳು ಮತ್ತು ವ್ಯಕ್ತಿಚಿತ್ರಗಳಲ್ಲಿ ದೇಶೀಯ ಕೆಲ್ಟಿಕ್ ಮತ್ತು ಆ್ಯಂಗ್ಲೊ ಸ್ಯಾಕ್ಸನ್ ಅಂಶಗಳೂ ಹಲವೆಡೆ ಸಮಕಾಲೀನ ಇಟ್ಯಾಲಿಯನ್ ಕಲಾ ಅಂಶಗಳೂ ಬೆರೆತಿರುವುದು ಕಾಣುತ್ತದೆ. ಈ ಚಿತ್ರಗಳಲ್ಲಿ ಕಂಡುಬರುವ ಅನೇಕ ವಾಸ್ತುವಿನ್ಯಾಸಗಳು ಮುಂದೆ ವಾಸ್ತುಶಿಲ್ಪದಲ್ಲಿ ಸಹ ಬಳಕೆಗೆ ಬಂದಿತು. ಹೆಡ್ಬೋರ್ನ್ ವರ್ಥಿ ಮತ್ತು ಬ್ರೀಮೋರ್ಗಳಲ್ಲಿ ಈ ಕಾಲದ ಕೆಲವು ಶಿಲ್ಪಾವಶೇಷಗಳಿವೆ. ಇಂಗ್ಲಿಷ್ ಶಿಲ್ಪದ ಮುಂದಿನ ಘಟ್ಟ ರೋಮನೆಸ್್ಕ ಶೈಲಿಯದು (ರೋಮನೆಸ್ಕ್ ಕಲೆ).ಈ ಕಾಲದ ಶಿಲ್ಪಗಳು ಬಹುಮಟ್ಟಿಗೆ ವಾಸ್ತುರಚನೆಗೆ ಪುರಕಗಳಾಗಿರುತ್ತವೆ. ಕ್ಯಾಂಟರ್ಬರಿ ಕೆಥೀಡ್ರಲ್ ಮತ್ತು ಡರ್ಹಾಮ್ ಕಥೀಡ್ರಲ್ಗಳಲ್ಲಿ ಈ ಕಾಲದ ಕೆಲವು ಶಿಲ್ಪಗಳಿವೆ. ಈ ಶಿಲ್ಪಗಳು ಸಮಕಾಲೀನ ಐರೋಪ್ಯ ರೀತಿಯವು. ಲಿಂಕನ್ ಇಗರ್ಜಿ (ಸು. 1145), ಎಲಿಯ ಪ್ರಯರ್ ಬಾಗಿಲುಗಳಲ್ಲಿ (ಸು. 1140) ಇಟ್ಯಾಲಿಯನ್ನ ಮತ್ತು ಮಾಲ್ಮೆಸ್ಬರಿ (ಸು. 1165)ಯಲ್ಲಿ ಫ್ರೆಂಚ್ಶಿಲ್ಪಶೈಲಿಗಳ ಅನುಕರಣೆ ಕಂಡುಬರುತ್ತದೆ. ಇದೇ ಕಾಲದಲ್ಲಿ (1120-30ರ ಸುಮಾರಿನಲ್ಲಿ) ಇಂಗ್ಲಿಷ್ ಚಿತ್ರಕಲೆ ಒಂದು ಹೊಸಹಾದಿ ಹಿಡಿಯುತ್ತದೆ. ಈ ಕಾಲದ ಹಸ್ತಪ್ರತಿಗಳಲ್ಲಿ ಆಲ್ಬನಿ ಸಾರ್ಟರ್ ಇತ್ಯಾದಿ ಚಿತ್ರಣ ಪುಟಪೂರ್ತ ಕಾಣಿಸಿಕೊಳ್ಳುವುದೇ ಇವುಗಳ ವೈಶಿಷ್ಟ್ಯ. ಆಲ್ಬನಿ ಸಾರ್ಟರನ್ನನುಸರಿಸಿ ಬರಿ ಬೈಬಲ್, ಲಾಂಬೆತ್ ಬೈಬಲ್ ಮುಂತಾದ ಹಸ್ತಪ್ರತಿಗಳು ಇದೇ ಜಾಡಿನಲ್ಲಿ ಮುಂದುವರಿದು ಮುಂದಿನ ಗಾಥಿಕ್ ಕಾಲದ ಶೈಲಿಯ ಬೆಳವಣಿಗೆಗೆ ದಾರಿಮಾಡಿಕೊಟ್ಟವು. ಈ ಹಸ್ತಪ್ರತಿಯ ಚಿತ್ರಣವನ್ನು ಅನುಸರಿಸಿದ ದೊಡ್ಡ ಭಿತ್ತಿಚಿತ್ರಗಳು ಈ ಕಾಲದಲ್ಲಿರಬಹುದಾದರೂ ಅವುಗಳಲ್ಲಿ ಗಮನಾರ್ಹವಾದುವಾವುವೂ ಉಳಿದುಬಂದಿಲ್ಲ. ಕ್ಯಾಂಟರ್ಬರಿ ಇಗರ್ಜಿಯ ಸೇಂಟ್ ಆನ್ಸೆಲ್ಮ್ ಛಾಪೆಲ್ನಲ್ಲಿ ಅಲ್ಪ ಸ್ವಲ್ಪ ಮಾತ್ರ ಇದೆ. ಇಂಗ್ಲಿಷ್ ಗಾಥಿಕ್ ಕಾಲದ ಮೊದಲ ಚಿತ್ರಕಲೆ ವೆಸ್ಟ್ ಮಿನ್ಸ್ಟರ್ ಸಾಲ್ಟರ್ (ಸು. 1200), ಕ್ಯಾಂಟರ್ಬರಿ ಸಾಲ್ಟರ್ ಮುಂತಾದ ಹಸ್ತಪ್ರತಿಗಳಲ್ಲಿ ಚೆನ್ನಾಗಿ ಬಿಂಬಿತವಾಗಿದೆ. ಹೊಳಪಿನ ಬಣ್ಣಗಳಿಂದ ರಚಿತವಾಗಿರುವುದು ಇವುಗಳ ವೈಶಿಷ್ಟ್ಯ. 13ನೆಯ ಶತಮಾನದ ಅನೇಕ ಹೊಳಪುಚಿತ್ರದ ಹಸ್ತಪ್ರತಿಗಳಲ್ಲಿ ಅವುಗಳನ್ನು ರಚಿಸಿದ ಕಲೆಗಾರರ (ವಿಲಿಯಮ್ ಡಿ ಬೈಲ್ಸ್, ಮ್ಯಾಥ್ಯೂ ಪ್ಯಾರಿಸ್) ಸಹಿ ಇರುತ್ತದೆ. ಈ ಕಾಲದ ಚಿತ್ರಗಳ ವಸ್ತು ಸಾಮಾನ್ಯವಾಗಿ ಧರ್ಮಕ್ಕೆ ಸಂಬಂಧಿಸಿದ್ದು, ವೈವಿಧ್ಯಕ್ಕೆ ಅವಕಾಶವಿಲ್ಲದಿದ್ದರೂ ಇಲ್ಲಿನ ವ್ಯಕ್ತಿಚಿತ್ರಣಗಳಲ್ಲಿ ಕಂಡುಬರುವ ಪುಷ್ಟಿ ಮತ್ತು ಗಾಂಭೀರ್ಯ ಮನಸೆಳೆಯುವಂತಿವೆ. ಈ ಹಸ್ತಪ್ರತಿಗಳ ಚಿತ್ರಕಲೆ ವಿಶೇಷವಾಗಿ ಸಿರಿವಂತರ ಪೋಷಣೆಯಲ್ಲಿ ಬೆಳೆದು ಬಂದಿತ್ತು. ಆದರೆ 13ನೆಯ ಶತಮಾನದ ಅಂತ್ಯದಲ್ಲಿ ರಾಜಸ್ತಾನದ ಪೋಷಣೆಯಲ್ಲಿ ಹುಟ್ಟಿದ ಕಲಾಕೃತಿಗಳು ಹಿಂದಿನ ಮೋಹಕಶೈಲಿಯನ್ನು ಉಳಿಸಿಕೊಂಡಿಲ್ಲ. ಈ ಚಿತ್ರಗಳಲ್ಲಿ ವ್ಯಕ್ತಿಗಳನ್ನು ತಳಮಳಗೊಂಡಿರುವಂತೆ ಏರುಪೇರಾಗಿ ಚಿತ್ರಿಸಿರುವುದೇ ಈ ಅವನತಿಗೊಂದು ಗುರುತು. ಈ ಬಗೆಯ ಚಿತ್ರಗಳು ವೆಸ್ಟ್ ಮಿನ್ಸ್ಟರ್ ಅಬೆಯಲ್ಲಿವೆ. ಗಾಥಿಕ್ ಶೈಲಿಯ ಶಿಲ್ಪಕಲೆಯ ಉತ್ತಮ ಉದಾಹರಣೆಗಳು ಲಿಂಕನ್ ಕೆಥೀಡ್ರಲ್, ವೆಸ್ಟ್ ಮಿನ್ಸ್ಟರ್ ಅಬೆ ಮತ್ತು ಕ್ಯಾಂಟರ್ಬರಿ ಇಗರ್ಜಿಗಳಲ್ಲಿವೆ. ಸಾಮಾನ್ಯವಾಗಿ ಐರೋಪ್ಯ ಗಾಥಿಕ್ ಶೈಲಿಯಲ್ಲಿ ಕಂಡುಬರುವಂತೆ ಇಲ್ಲಿಯೂ ವಾಸ್ತುರಚನೆಗೆ ಶಿಲ್ಪ ಪೂರಕ ಅಂಶಮಾತ್ರವಾದರೂ ವಸ್ತು ಮತ್ತು ನಿರೂಪಣೆಯಲ್ಲಿ ಕೆಲವು ವಿಶಿಷ್ಟ ಆಂಗ್ಲೇಯತ್ವ ಬೆಳೆದಿರುವುದು ಕಾಣುತ್ತದೆ. 14ನೆಯ ಶತಮಾನದ ಹೊತ್ತಿಗೆ ಈ ಹಿಂದಿನ ಕಾಲದ ಸರಳ ಶಿಲ್ಪಗಳ ಬದಲಾಗಿ ವೈವಿಧ್ಯ ಮತ್ತು ವೈಭವಕ್ಕೆ ಹೆಸರಾದ ಅತ್ಯಾಂಲಂಕೃತ ಶಿಲ್ಪಗಳು ಕಾಣಿಸಿಕೊಳ್ಳುತ್ತವೆ. ಈ ಹೊಸರೀತಿಯ ಶಿಲ್ಪಗಳು ಲಿಂಕನ್ ಇಗರ್ಜಿ (ಸು. 1360ರ ರಾಜರ ಶಿಲ್ಪಗಳು) ಮತ್ತು ವೆಸ್ಟ್ ಮಿನ್ಸ್ಟರ್ ಹಾಲ್ಗಳಲ್ಲಿವೆ. ಆದರೆ ಸಮಕಾಲೀನ ಮೃತರ ಸ್ಮಾರಕಗಳಲ್ಲಿ ಮಾತ್ರ (ವೆಸ್ಟ್ ಮಿನ್ಸ್ಟರ್ನಲ್ಲಿರುವ ಕಂಚಿನ ಬ್ಲಾಕ್ ಪ್ರಿನ್ಸ್ನ ಸ್ಮಾರಕ ಇತ್ಯಾದಿ) ಅಲ್ಪಾಲಂಕರಣ ಮತ್ತು ಸ್ನಿಗ್ಧತೆ ಉಳಿದಿದ್ದಿತು. 14ನೆಯ ಶತಮಾನದಲ್ಲಿ ಇಂಗ್ಲೆಂಡಿನ ಧಾರ್ಮಿಕ ಚಿತ್ರಕಲೆಯ ಅವನತಿ ಆರಂಭವಾಯಿತು. ಈ ಅವನತಿ ಮುಂದೆ ಬಂದ ಆಂದೋಳನದಿಂದಾಗಿ ಪೂರ್ಣವಾಗಿ 8ನೆಯ ಹೆನ್ರಿಯ ಕಾಲದಲ್ಲಿ (1509-1547) ಸಂಪೂರ್ಣ ನಿಂತೇಹೋಯಿತು. ಈ ದುಃಸ್ಥಿತಿಯ ಕಾಲದಲ್ಲಿ ಹೊಸಕೃತಿಗಳು ಬೆಳೆಯಲಿಲ್ಲ. ಅಷ್ಟೇ ಅಲ್ಲದೆ, ಹೊಸ ಧರ್ಮದ ಅತ್ಯಾಭಿಮಾನ ದಿಂದಾಗಿ ಅನೇಕ ಹಳೆಯ ಕೃತಿಗಳು ನಾಶಮಾಡಲ್ಪಟ್ಟವು. ಆದರೆ ಈ ಕಾಲದಲ್ಲಿ ಧಾರ್ಮಿಕ ಚಿತ್ರಣಕ್ಕೆ ಬದಲಾಗಿ ಭಾವಚಿತ್ರರಚನೆ ಬೆಳೆದು ಬಂದುದು ಒಂದು ಮುಖ್ಯ ಅಂಶ. ಈ ಹೊಸ ರೀತಿಯ ಆವಿರ್ಭಾವಕ್ಕೆ ಯುರೋಪ್ ಖಂಡ ಭಾಗದಿಂದ ಇಲ್ಲಿಗೆ ಬಂದ ಹಾಲ್ಬೀನ್ ಮುಂತಾದವರು ಮುಖ್ಯ ಕಾರಣರು. ಇದೇ ಚಿತ್ರಪ್ರಕಾರ ನಿಕೋಲಾಸ್ ಹಿಲ್ಲಿಯರ್ಡ್ (1537-1616) ಐಸ್ಯಾಕ್ ಆಲಿವರ್ (1564-1617) ಮತ್ತು ಅವನ ಮಗ ಪೀಟರ್ ಆಲಿವರ್ ಮುಂತಾದವರಿಂದ ಸ್ಥಳೀಯ ಶೈಲಿಯಲ್ಲಿ ಬೆಳೆಯಿತು. ಪುನಃ ಸ್ಟುವರ್ಟ್ ಅರಸರ ಕಾಲದಲ್ಲಿ ಸರ್ ಆಂಥೋನಿ ವಾನ್ ಡಿಕ್ (ಇಂಗ್ಲೆಂಡಿನಲ್ಲಿ 1632-1641) ಎಂಬ ವಿದೇಶೀಯನೊಬ್ಬನ ಪ್ರಭಾವದಿಂದ ಇಂಗ್ಲಿಷ್ ಚಿತ್ರಕಲೆಯಲ್ಲಿ ಹೊಸ ಹುರುಪು ಬೆಳೆಯಿತು. ವಿಲಿಯಮ್ ಡಾಬ್ಸನ್ (1610-46). ರಾಬರ್ಟ್ ವಾಕರ್ (1600-59) ಮುಂತಾದವರು ವಾನ್ ಡಿಕ್ನ ಶೈಲಿಯನ್ನೇ ಅನುಸರಿಸಿದರು. ಮುಂದೆಯೂ ಅನೇಕ ವಿದೇಶೀ ಚಿತ್ರಗಾರರು ಇಂಗ್ಲೆಂಡಿನ ಚಿತ್ರಕಲೆಯ ಬೆಳವಣಿಗೆಗೆ ಮುಖ್ಯ ಕಾರಣರಾದರು. ಇವರಲ್ಲಿ ಹಾಲೆಂಡಿನ ಸರ್ ಪೀಟರ್ ಲೆಲಿ, ಜರ್ಮನಿಯ ಸರ್ ಗಾಡ್ಫ್ರೆ ನೆಲ್ಲರ್ ಮುಖ್ಯರಾದವರು. ಅನೇಕ ಭಿತ್ತಿಚಿತ್ರಗಳನ್ನು ರಚಿಸಿರುವ ರಾಬರ್ಟ್ ಸ್ಟ್ರೀಟರ್ (1624-80) ಮತ್ತು ಜಾನ್ ರಿಲೆ (1646-91) ಈ ಕಾಲದ ಇತರ ಮುಖ್ಯ ಇಂಗ್ಲಿಷ್ ಚಿತ್ರಕಾರರು. 18ನೆಯ ಶತಮಾನದ ಆದಿಭಾಗದಲ್ಲಿ ಗಾಡ್ಫ್ರೆ ನೆಲ್ಲರ್ ಪ್ರಭಾವಿಯಾಗಿದ್ದ. ಆದರೆ ಅವನ ಅನಂತರ ಪ್ರಸಿದ್ಧಿಗೆ ಬಂದ ವಿಲಿಯಮ್ ಹೋಗಾರ್ಥ್ (1697-1764) ಉಚ್ಚತಮ ಚಿತ್ರಗಾರ. ಇವನು ತನ್ನ ಪ್ರತಿಭೆಯಿಂದಾಗಿ, ಈ ಹಿಂದಿನ ವೈಶಿಷ್ಟ್ಯವಾಗಿದ್ದ ಭಾವಚಿತ್ರಕಲೆಯನ್ನು ಎದುರಿಸಿ, ಸಮಕಾಲೀನ ಜನಜೀವನದ ಚಿತ್ರಗಳನ್ನು ರೂಪಿಸುವ ಹೊಸಪದ್ಧತಿಯನ್ನು ಉದ್ಘಾಟಿಸಿದ. ಹೊಸ ಆವಿಷ್ಕಾರಕ್ಕೆ ಹೆಸರಾದ ಈ ಕಾಲದ ಇನ್ನೊಬ್ಬ ಚಿತ್ರಕಾರ ಥಾಮಸ್ ಗೈನ್ಸ್ಬರೋ (1776-1837). ಇವನನ್ನು ಆಧುನಿಕ ಇಂಗ್ಲಿಷ್ ಚಿತ್ರಕಲೆಯ ತಂದೆ ಎಂದು ಕರೆಯುವ ವಾಡಿಕೆ ಇದೆ. ಇಂಗ್ಲಿಷ್ ಚಿತ್ರಕಲೆಯ ಹೆಮ್ಮೆಯಾದ ಪ್ರಕೃತಿಚಿತ್ರಣವನ್ನು ಆರಂಭಿಸಿದವನು ಗೈನ್್ಸ ಬರೋ, ರೇನಾಲ್ಡ್ಸ್, ಜಾರ್ಜ್ ಸ್ಟಬ್ಸ್, ಜೇಮ್ಸ್ ವಾರ್ಡ್ ಮತ್ತು ರಿಚರ್ಡ್ ವಿಲ್ಸನ್ ಇವರು 18ನೆಯ ಶತಮಾನದ ಇತರ ಮುಖ್ಯ ಚಿತ್ರಗಾರರು. ಶಿಲ್ಪಕಲೆಯಲ್ಲಿ ಸಹ 17-18ನೆಯ ಶತಮಾನಗಳಲ್ಲಿ ಹೊಸತನ ಕಾಣಿಸಿಕೊಳ್ಳುತ್ತದೆ. ಚಿತ್ರಕಲೆಯಲ್ಲಿದ್ದಂತೆ ಈ ಕಲಾವಿಧಾನದಲ್ಲೂ ಯುರೋಪಿನ ಖಂಡ ಭಾಗದ ಕಲೆಯ ಪ್ರಭಾವ ಈ ಕಾಲದಲ್ಲಿ ಬಹುವಾಗಿ ಇದೆ. ನಿಕೋಲಸ್ ಸ್ಟೋನ್ (1587-1647), ಜಾನ್ ಬುಷ್ನೆಲ್ (ಸು. 1630-1700), ಎಡ್ವರ್ಡ್ ಪಿಯರ್ಸ್ (ಕೃತಿಗಳು 1656-95), ಜಾನ್ ಮೈಕೆಲ್ ರಿಸ್ಬ್ರಾಕ್ (1694-1770), ಲೂಯಿ ಫ್ರಾಂಕೊ ರೂಬಿಲಿಯಾ (ಸು. 1705-63), ಜಾರಲ್ಸ್ ಜೇಮ್ಸ್ ಫಾಕ್ಸ್ ಮುಂತಾದವರು ಈಕಾಲದ ಪ್ರಸಿದ್ಧ ಶಿಲ್ಪಿಗಳು. ಪ್ರಸಿದ್ಧ ಇಂಗ್ಲಿಷ್ ಕಲೆಗಾರರು ಮತ್ತು ಅವರ ಕೃತಿಗಳಿಗೆ ನೋಡಿ : ಬಾಯ್ಲ್, ರಾಬರ್ಟ್; ವಾನ್ ಬ್ರೂ, ಸರ್ ಜಾನ್; ವೆಬ್, ಜೇಮ್ಸ್; ಹಾಲ್ಬೀನ್, ಹ್ಯಾನ್ಸ್; ವಾನ್ ಡಿಕ್, ಸರ್ ಆಂಥೋನಿ; ಡಾಬ್ಸನ್, ವಿಲಿಯಮ್; ವಾಕರ್, ರಾಬರ್ಟ್; ಲೆಲಿ, ಸರ್ ಪೀಟರ್; ನೆಲ್ಲರ್, ಗಾಡ್ಫ್ರೆ; ಹೋಗಾರ್ಥ್, ವಿಲಿಯಮ್; ಗೈನ್ಸ್ ಬರೋ, ಥಾಮಸ್; ವಿಲ್ಸನ್, ರಿಚರ್ಡ್; ಮೋರ್ಲಾಂಡ್, ಜಾರ್ಜ್; ರೇನಾಲ್ಡ್ಸ್, ಸರ್ ಜೋಷುಯಾ ಇತ್ಯಾದಿ.