ಇಂಗ್ಲೆಂಡಿನಲ್ಲಿ ಹಣ ಮತ್ತು ಬ್ಯಾಂಕು ವ್ಯವಸ್ಥೆ
ಇಂಗ್ಲೆಂಡಿನಲ್ಲಿ ಹಣ ಮತ್ತು ಬ್ಯಾಂಕು ವ್ಯವಸ್ಥೆ ಬೆಳೆಯದೇ ಹೋಗಿದ್ದಿದ್ದರೆ, ಅಲ್ಲಿನ ಕೈಗಾರಿಕೆ ಹಾಗೂ ವಾಣಿಜ್ಯ ಪ್ರಗತಿ ಅಸಾಧ್ಯವಾಗುತ್ತಿತ್ತು. ಇವೆರಡೂ ಒಂದಕ್ಕೊಂದು ಕೂಡಿ ಮುನ್ನಡೆದವು. ಒಂದು ಇನ್ನೊಂದಕ್ಕೆ ಪೂರಕವೂ ಪ್ರೇರಕವೂ ಆಯಿತು. ಮಧ್ಯ ಯುಗದಲ್ಲಿ ಬೆಳ್ಳಿಯ ನಾಣ್ಯಗಳೇ ಪ್ರಧಾನವಾಗಿದ್ದವು. ಚಿನ್ನದ ನಾಣ್ಯಗಳು ಆ ಕಾಲದಲ್ಲಿ ಅಷ್ಟು ಪ್ರಮುಖವಾಗಿರಲಿಲ್ಲ. 1561ರಲ್ಲಿ ಹೊಸನಾಣ್ಯಪದ್ಧತಿಯನ್ನು ಅನುಸರಿಸಲಾಯಿತಾದರೂ ಚಿನ್ನ ಮತ್ತು ಬೆಳ್ಳಿ ನಾಣ್ಯಗಳ ನಡುವೆ ವಿನಿಮಯ ಪ್ರಮಾಣ ನಿಗದಿಮಾಡುವುದು ಕಠಿಣವಾಗಿಯೇ ಉಳಿಯಿತು. 18ನೆಯ ಶತಮಾನದ ಮುಖ್ಯ ಬದಲಾವಣೆಯೆಂದರೆ ಬೆಳ್ಳಿ ನಾಣ್ಯತ್ವವನ್ನು ಹೋಗಲಾಡಿಸಿ ಅದರ ಸ್ಥಾನದಲ್ಲಿ ಸ್ವರ್ಣಾಧಾರವಾದ ಏಕನಾಣ್ಯ ಪದ್ಧತಿ ಜಾರಿಗೆ ತಂದದ್ದು. 1774ರ ನಾಣ್ಯಪದ್ಧತಿಕಾಯಿದೆ ಜಾರಿಗೆ ಬಂದು ದ್ವಿಲೋಹ ನಾಣ್ಯಪದ್ಧತಿಯಿಂದ ಏಕಲೋಹ ನಾಣ್ಯಪದ್ಧತಿಗೆ ಬದಲಾವಣೆಯಾಯಿತು. ಆದರೆ ಬೆಳ್ಳಿ ನಾಣ್ಯ 25 ಪೌಂಡ್ ವರೆಗೆ ವಿಧಿಮಾನ್ಯ ನಾಣ್ಯವಾಗಿ ಮುಂದುವರಿಯಿತು. 1816ರಲ್ಲಿ ಜಾರಿಗೆ ಬಂದ ಕಾನೂನು ಈ ಮಿತಿಯನ್ನು 2 ಪೌಂಡಿಗೆ ಇಳಿಸಿತು. ಹೀಗಾಗಿ ಬೆಳ್ಳಿಯ ನಾಣ್ಯಗಳು ಕೇವಲ ಪ್ರತೀಕನಾಣ್ಯವಾಗಿ ಮುಂದುವರಿದವು. 1816ರ ಕಾಯಿದೆ 1821ರಲ್ಲಿ ಜಾರಿಗೆ ಬಂದು, ಇಂಗ್ಲೆಂಡಿನಲ್ಲ್ಲಿ ಸ್ವರ್ಣ ಪ್ರಮಾಣವನ್ನು ಸ್ಥಾಪಿಸಿತು. ಇತರ ಅನೇಕ ರಾಷ್ಟ್ರಗಳು ಸಹ ಈ ಪದ್ಧತಿಯನ್ನನು ಸರಿಸಿದ್ದರಿಂದ ಚಿನ್ನದ ಸಾಗುವಿಕೆಯನ್ನು ನಿಯಂತ್ರಿಸುವುದು ಅಗತ್ಯವಿತ್ತು. ಬ್ಯಾಂಕ್ ಆಫ್ ಇಂಗ್ಲೆಂಡಿಗೆ ಈ ಕೆಲಸವನ್ನು ಒಪ್ಪಿಸಲಾಯಿತು. ಅದು ತನ್ನ ಬಡ್ಡಿದರದ ಮೂಲಕ ರಾಷ್ಟ್ರದ ಒಳಕ್ಕೆ ಬರುತ್ತಿದ್ದ ಹಾಗೂ ರಾಷ್ಟ್ರದಿಂದ ಹೊರಕ್ಕೆ ಹೋಗುತ್ತಿದ್ದ ಚಿನ್ನದ ಪ್ರಮಾಣವನ್ನು ನಿಯಂತ್ರಿಸುತ್ತಿತ್ತು. ಸ್ವರ್ಣಪ್ರಮಾಣಪದ್ಧತಿ ಬಹಳ ಕಾಲದವರೆಗೆ ಸಮರ್ಪಕವಾಗಿ ಮುಂದುವರಿಯಿತು. 17ನೆಯ ಶತಮಾನದ ಅಂತ್ಯದ ಭಾಗದಲ್ಲಿ ಕಾಗದದ ನೋಟುಗಳ ಚಲಾವಣೆ ಆರಂಭವಾಯಿತು. ಬ್ಯಾಂಕ್ ಆಫ್ ಇಂಗ್ಲೆಂಡ್ ಸಂಸ್ಥೆ ಬ್ಯಾಂಕ್ ನೋಟುಗಳನ್ನು ಚಲಾವಣೆಗೆ ತಂದಿತು. ಸ್ವರ್ಣಪ್ರಮಾಣಪದ್ಧತಿ ಬಹಳ ಕಾಲ ನಡೆದುಕೊಂಡು ಬಂತು. 1931ರಲ್ಲಿ ಅದನ್ನು ಕೈಬಿಡಲಾಯಿತು. 1844ರಲ್ಲಿ ಜಾರಿಗೆ ಬಂದ ಬ್ಯಾಂಕ್ ಚಾರ್ಟರ್ಸ್ ಕಾಯಿದೆಯಿಂದ ಬ್ಯಾಂಕುಗಳ ನೋಟು ಚಲಾವಣೆಯ ಅಧಿಕಾರಕ್ಕೆ ನಿರ್ಬಂಧವುಂಟಾಯಿತು. ಆದರೆ ಇದರಿಂದ ಕೂಡುಬಂಡವಾಳ ಬ್ಯಾಂಕುಗಳ ಬೆಳವಣಿಗೆಯೇನೂ ಕುಂಠಿತವಾಗಲಿಲ್ಲ. 1844ರ ಕೂಡುಬಂಡವಾಳ ಕಂಪನಿಗಳ ಕಾಯಿದೆ ಪ್ರಕಾರ, ಬ್ಯಾಂಕುಗಳು ಕನಿಷ್ಠ ಪಕ್ಷ ಇಂತಿಷ್ಟು ಬಂಡವಾಳವನ್ನು ಹೊಂದಿರಬೇಕೆಂದೂ ಇಂತಿಷ್ಟು ಪೌಂಡಿಗಿಂತ ಕಡಿಮೆ ಬೆಲೆಯ ಷೇರುಗಳನ್ನು ನೀಡಬಾರದೆಂದೂ ವಿಧಿಸಲಾಯಿತು. ಕೂಡುಬಂಡವಾಳ ಬ್ಯಾಂಕುಗಳು ಪರಸ್ಪರ ಸಂಯೋಗಹೊಂದಿ ದೊಡ್ಡ ಬ್ಯಾಂಕುಗಳಾಗಲಾರಂಭಿಸಿದವು. ಅಂತಿಮವಾಗಿ 5 ಬೃಹತ್ ಬ್ಯಾಂಕುಗಳು ದೇಶದ ಬ್ಯಾಂಕು ವ್ಯವಹಾರದ ಬಹುಭಾಗವನ್ನು ನಡೆಸಲಾರಂಭಿಸಿದವು. ಈ ಬ್ಯಾಂಕುಗಳ ಶಾಖೆಗಳೂ ವೇಗವಾಗಿ ಹರಡಲಾರಂಭಿಸಿದವು. ವಿದೇಶಗಳಲ್ಲೂ ಶಾಖೆಗಳನ್ನು ತೆರೆಯಲಾಯಿತು. ಕೂಡುಬಂಡವಾಳ ಬ್ಯಾಂಕುಗಳಿಗೆ ಎಲ್ಲ ವಿಧದಲ್ಲೂ ಬ್ಯಾಂಕ್ ಆಫ್ ಇಂಗ್ಲೆಂಡ್ ಸಹಾಯಮಾಡುತ್ತಿತ್ತು. 1911ರಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡಿನ ಪ್ರತಿನಿಧಿಗಳ ಬ್ಯಾಂಕುಗಳು ಪ್ರತಿನಿಧಿಗೂ ಇತರ ಆರ್ಥಿಕ ಸಂಘಗಳೂ ಮೂರು ತಿಂಗಳಿಗೊಮ್ಮೆ ಸಭೆ ನಡೆಸುವ ಕ್ರಮದ ಮೂಲಕ ಪರಸ್ಪರ ಸಹಕಾರ ಬೆಳೆಯಿತು. 1940ರಲ್ಲಿ ಬ್ರಿಟಿಷ್ ಬ್ಯಾಂಕುಗಳಿಂದ ನೇರವಾಗಿ ಸಾಲಪಡೆದುಕೊಳ್ಳುವುದಕ್ಕೆ ಪ್ರಾರಂಭಿಸಿತು. ಇದು ಬ್ಯಾಂಕುಗಳಿಗೆ ಅಧಿಕಲಾಭ ತರುವ ವ್ಯವಹಾರವಾಯಿತು. 1946ರಲ್ಲಿ ಥ್ರೆಡ್ ನೀಡ್ಸ್ ರಸ್ತೆಯ ವೃದ್ಧ ವನಿತೆಗೆ ಟ್ರಿಷರಿಯ ವೃದ್ಧನೊಡನೆ ಕಾನೂನುಬದ್ಧವಾದ ವಿವಾಹವಾಯಿತು. ಲೇಬರ್ ಪಕ್ಷ ಜಾರಿಗೆ ತಂದ ರಾಷ್ಟ್ರೀಕರಣದ ಕ್ರಮಗಳಲ್ಲಿ ಇದು ಮೊದಲನೆಯ ಹೆಜ್ಜೆಯಾಗಿತ್ತು (ಇಂಗ್ಲೆಂಡಿನ ಬ್ಯಾಂಕು).