ಇಂಗ್ಲಿಷ್ ಬಜಾರ್
ಪಶ್ಚಿಮ ಬಂಗಾಲದಲ್ಲಿ ಮಹಾನಂದ ನದಿಯ ಬಲದಂಡೆಯ ಮೇಲಿರುವ ಒಂದು ಪಟ್ಟಣ. ಈ ನಗರವನ್ನು ಮಾಲ್ಡ ಎಂಬ ಹೆಸರಿನಿಂದ ಗುರುತಿಸಲಾಗುತ್ತಿದೆ. ಆಂಗ್ರೇಜಾಬಾದ್ ಎಂಬ ಹೆಸರೂ ರೂಢಿಯಲ್ಲಿದೆ. ಮಾಲ್ಡ ಜಿಲ್ಲೆಯ ಆಡಳಿತ ಕೇಂದ್ರ. ಸನ್ನಿವೇಶ : 25º ಉ. ಅ. 88º 9º ಪೂ. ರೇ. ಜನಸಂಖ್ಯೆ 161448(2001). ಈ ಪ್ರದೇಶದಲ್ಲಿ [ಹಿಪ್ಪುನೇರಳೆ] ಹೆಚ್ಚಾಗಿ ಬೆಳೆಯುವುದರಿಂದ ಈಸ್ಟ್ ಇಂಡಿಯ ಕಂಪೆನಿ ಇಲ್ಲೊಂದು ರೇಷ್ಮೆ ಕಾರ್ಖಾನೆಯನ್ನು ಸ್ಥಾಪಿಸಿತು (1676). ಡಚ್ಚರು ಮತ್ತು ಫ್ರೆಂಚರು ಇಲ್ಲಿ ತಮ್ಮ ವಸತಿಗಳನ್ನು ಹೊಂದಿದ್ದರು. 1770ರಲ್ಲಿ ಸ್ಥಳೀಯ ವಾಣಿಜ್ಯ ಕೇಂದ್ರವೆನಿಸಿದ ಈ ಊರು ಈಸ್ಟ್ ಇಂಡಿಯ ಕಂಪೆನಿ ಭಾರತವನ್ನು ಬಿಡುವವರೆಗೂ ತನ್ನ ಪ್ರಾಮುಖ್ಯವನ್ನು ಉಳಿಸಿಕೊಂಡಿತ್ತು. 1869ರಲ್ಲಿ ಇಲ್ಲಿಯ ಪೌರಸಭೆ ಅಸ್ತಿತ್ವಕ್ಕೆ ಬಂತು. ನದಿಯ ಪ್ರವಾಹಗಳಿಂದ ಪಟ್ಟಣವನ್ನು ರಕ್ಷಿಸಲು ದಂಡೆಗುಂಟ ಕಲ್ಲಿನ ಗೋಡೆಯನ್ನು ಕಟ್ಟಿದ್ದಾರೆ. ಈಗ ಇದು ಧಾನ್ಯಗಳ ವ್ಯಾಪಾರ ಕೇಂದ್ರ. ರೇಷ್ಮೆ ವ್ಯಾಪಾರವೂ ಇದೆ. ಈಗಲೂ ಸುತ್ತಲಿನ ಪ್ರದೇಶದಲ್ಲಿ ಗೃಹಕೈಗಾರಿಕೆಯ ರೂಪದಲ್ಲಿ ರೇಷ್ಮೆಯ ತಯಾರಿಕೆ ಇದೆ. ಭಾರತದ ಮೊದಲ ಮಹಿಳಾ ನ್ಯಾಯಾಲಯ ಈ ನಗರದಲ್ಲಿ ಸ್ಥಾಪಿತವಾಯಿತು.ಮಾಲ್ಡ ಮಹಿಳಾ ನ್ಯಾಯಾಲಯ