ಇಂಗಾಲಾಮ್ಲಮಿಶ್ರಿತ ನೀರು

ಸೋಡ ವಾಟರ್, ಲೆಮೊನೇಡ್, ಜಿಂಜರ್ ಇತ್ಯಾದಿ ಹೆಸರುಗಳಿಂದ ಜನಸಾಮಾನ್ಯರಿಗೆ ಪರಿಚಿತವಾದ ಪಾನೀಯಗಳು (ಏರೇಟೆಡ್ ವಾಟರ್). ಇವುಗಳಲ್ಲೆಲ್ಲ ಇಂಗಾಲಾಮ್ಲ (CO2) ಹೆಚ್ಚಿನ ಒತ್ತಡದಲ್ಲಿ ವಿಲೀನವಾಗಿರುವುದರಿಂದ ಈ ಹೆಸರು ಬಂದಿದೆ. CO2 ಗಾಳಿಯ ಒತ್ತಡದಲ್ಲಿ ನೀರಿನಲ್ಲಿ ತಕ್ಕಮಟ್ಟಿಗೆ ದ್ರಾವ್ಯ. 20° ಸೆ. ಉಷ್ಣತೆ ಮತ್ತು ಗಾಳಿಯ ಒತ್ತಡದಲ್ಲಿ ಒಂದು ಗಾತ್ರ ನೀರಿನಲ್ಲಿ ನೀರಿನ ಗಾತ್ರದ 88ರಷ್ಟು ಗಾತ್ರ CO2 ವಿಲೀನವಾಗುವುದು. ಒಂದು ನಿಯತ ಉಷ್ಣದಲ್ಲಿ CO2ರ ದ್ರಾವಣತೆ ಒತ್ತಡದ ಅಧೀನವಾಗಿದೆ. ಒತ್ತಡ ಹೆಚ್ಚಿದಂತೆಲ್ಲ ದ್ರಾವಣತೆಯೂ ಹೆಚ್ಚುವುದು. ಇಂಗಾಲಾಮ್ಲ ಮಿಶ್ರಿತ ನೀರುಗಳಲ್ಲಿ ಅಧಿಕ ಒತ್ತಡದಲ್ಲಿರುವ CO2 ಸೀಸೆಯ ಬಾಯಿಯ ಮೂಲಕ ಹೊರಸೂಸಿ ಹೋಗದಂತೆ ಬಾಯಿಯನ್ನು ಸೂಕ್ತ ರೀತಿಯಲ್ಲಿ ಮುಚ್ಚಿರುವರು. ಸೋಡ ಸೀಸೆಗಳನ್ನು ಉದಾಹರಿಸಬಹುದು. ಬಲ ಪ್ರಯೋಗಿಸಿ ಸೀಸೆಯ ಮುಚ್ಚಳವನ್ನು ಅಥವಾ ಗೋಲಿಯನ್ನು ತೆಗೆದಾಗ ಹೆಚ್ಚಿನ ಒತ್ತಡದಲ್ಲಿರುವ ಇಂಗಾಲಾಮ್ಲ ಸೀಸೆಯ ಬಾಯಿಯ ಮೂಲಕ ಹೊರಸೂಸುವುದು. ಹೇಗೆ CO2ವಿನ ಒತ್ತಡ ಕಡಿಮೆಯಾಗಿ ನೀರಿನಲ್ಲಿ ಅದರ ವಿಲೀನತೆ ಕಡಿಮೆಯಾಗುವುದು. ಕಡಿಮೆ ಒತ್ತಡದಲ್ಲಿ CO2ವಿನ ವಿಲೀನತೆಯ ಪ್ರಮಾಣಕ್ಕಿಂತ ಹೆಚ್ಚಿಗೆ ಇರುವ ಅನಿಲ ದ್ರಾವಣದಿಂದ ಹೊರಸೂಸುವುದು. ಆದ್ದರಿಂದಲೇ ಸೋಡ ವಾಟರ್ ಸೀಸೆಯ ನೀರನ್ನು ಉಪಯೋಗಿಸುವಾಗ ನೀರಿನಿಂದ ಸ್ವಚ್ಛವಾದ ಅನಿಲ ಘುಳುಘುಳಿಸುವುದು. ಈ ಪಾನೀಯಗಳಲ್ಲಿ CO2 ಅನ್ನು ಹೆಚ್ಚಿನ ಒತ್ತಡದಲ್ಲಿ ವಿಲೀನಗೊಳಿಸಿರುವುದಲ್ಲದೆ ಅವುಗಳಿಗೆ ಸುವಾಸನೆ, ರುಚಿ, ಮಾಧುರ್ಯಗಳನ್ನು ಕೊಡಲು ಬೇರೆ ಬೇರೆ ವಸ್ತುಗಳನ್ನು ಉಪಯೋಗಿಸುವರು. ಲೆಮನ್ ಗ್ರಾಸ್ ಎಣ್ಣೆ ನಿಂಬೆ ಹಣ್ಣಿನ ವಾಸನೆಯನ್ನು ಕೊಡುವುದು. ಇತರ ಹಣ್ಣುಗಳ ಸಾರಗಳನ್ನು ಉಪಯೋಗಿಸಿ ಬೇರೆ ಬೇರೆ ಹಣ್ಣುಗಳ ವಾಸನೆಯನ್ನು ಉಂಟುಮಾಡುವರು. ಜಿಂಜರ್ ಅಂದರೆ ಶುಂಠಿಯ ಸಾರ ಪಾನೀಯಕ್ಕೆ ಶುಂಠಿಯ ರುಚಿಕೊಡುವುದು. ಪಾನೀಯಕ್ಕೆ ಹುಳಿ ರುಚಿ ಕೊಡಲು ಫಾಸ್ಫಾರಿಕ್ ಆಮ್ಲ, ಸಿಟ್ರಿಕ್ ಆಮ್ಲ, ಟಾರ್ಟಾರಿಕ್ ಆಮ್ಲ ಮುಂತಾದ ಸೇವಿಸಲು ಯೋಗ್ಯವಾದ ಮತ್ತು ಅಗ್ಗವಾದ ಆಮ್ಲಗಳನ್ನು ಉಪಯೋಗಿಸುವರು. ಮಾಧುರ್ಯ ಕೊಡಲು ಸಕ್ಕರೆಯನ್ನಾಗಲಿ ಅಥವಾ ಸ್ಯಾಕರಿನ್ ಮುಂತಾದ ಅಗ್ಗದ ಅತಿಮಧುರ ವಸ್ತುಗಳನ್ನಾಗಲಿ ಉಪಯೋಗಿಸುವರು.

ಸೋಡಾ ಬಾಟಲಿ

ಈ ಪಾನೀಯಗಳ ತಯಾರಿಕೆಯಲ್ಲಿ ಉಪಯೋಗಿಸುವ ಬೃಹತ್ಪ್ರಮಾಣದ CO2 ಬಹುಭಾಗ ಮದ್ಯಸಾರದ ತಯಾರಿಕೆಯ ಕಾರ್ಖಾನೆಗಳಲ್ಲಿ ಉತ್ಪನ್ನವಾಗುತ್ತದೆ. ಮದ್ಯಸಾರ ತಯಾರಿಕೆಗೆ ಜೋನಿ ಬೆಲ್ಲವನ್ನು ಹುದುಗಲು ಹಾಕಿದಾಗ ವಿಶೇಷ ಪ್ರಮಾಣದ CO2 ಉತ್ಪನ್ನವಾಗುವುದು. ಇದನ್ನು ದಪ್ಪ ಪಾರ್ಶ್ವಗಳುಳ್ಳ ಕಬ್ಬಿಣದ ಉರುಳೆಗಳಲ್ಲಿ ಹೆಚ್ಚಿನ ಒತ್ತಡದಲ್ಲಿ ತುಂಬಿ ಮಾರುಕಟ್ಟೆಗೆ ಕಳುಹಿಸುವರು. ಇವುಗಳನ್ನು ಉಪಯೋಗಿಸಿಕೊಂಡು ಏರೇಟೆಡ್ ನೀರುಗಳ ತಯಾರಕರು ಜನಪ್ರಿಯವಾದ ಸೋಡವಾಟರ್ ಮುಂತಾದ ಪಾನೀಯಗಳನ್ನು ತಯಾರಿಸುವರು.

ಹೊರಗಿನ ಕೊಂಡಿಗಳು

ಬದಲಾಯಿಸಿ