ಆಹಾರಲೋಹಾಂಶ ಚಲನೆ (ಸಸ್ಯಗಳಲ್ಲಿ)
ಸಸ್ಯಗಳಲ್ಲಿ ಆಹಾರಲೋಹಾಂಶ ಚಲನೆ ಎಂದರೆ ಮೇಲುವರ್ಗದ ಸಸ್ಯಗಳಲ್ಲಿ ಆಹಾರ ಮತ್ತು ಖನಿಜಾಂಶಗಳು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಚಲಿಸುವ ಕ್ರಿಯೆ (ಟ್ರಾನ್ಸ್‍ಲೋಕೆಶನ್ ಆಫ್ ಸೊಲ್ಯೊಟ್ಸ್ ಇನ್ ಪ್ಲಾಂಟ್ಸ್).
ಹಿನ್ನೆಲೆ
ಬದಲಾಯಿಸಿಇದನ್ನು ತಿಳಿದುಕೊಳ್ಳಬೇಕಾದರೆ ಆಹಾರ, ನೀರು ಮತ್ತು ಲೋಹಗಳನ್ನು ಒಯ್ಯುವ ನಾಳಕೊರ್ಚಗಳ ಪರಿಚಯ ಅಗತ್ಯ. ನಾಳಕೊರ್ಚ ಕ್ಸೈಲಂ (ನೀರ್ಗೊಳವೆ) ಮತ್ತು ಪ್ಲೋಯಂ ನಾಳಗಳು ಯಾವಾಗಲೂ ಒಟ್ಟಿಗೆ ಇದ್ದು ಬೇರಿನಿಂದ ಹಿಡಿದು ಎಲೆಗಳ ತುದಿಯವರೆಗೂ ಅನುಬಂಧವಾಗಿ ಸಾಗುತ್ತವೆ. ದ್ವಿದಳಸಸ್ಯಗಳ ಗುಂಪಿಗೆ ಸೇರಿದ ಪೊದರು ಮತ್ತು ಮರಗಳಲ್ಲಿ ಇವೆರಡು ಕಣಧಾತುಗಳ ಮಧ್ಯೆ ಕ್ಯಾಂಬಿಯಂ ಇದೆ. ಇದು ಸಜೀವ ಜೀವಕಣವಾದ ಪೇರೆಂಖೈಮದಿಂದ ಕೂಡಿದೆ.[೧]
ಕ್ಸೈಲಂನಲ್ಲಿ ನಾಲ್ಕು ಬಗೆಯ ಜೀವಕಣಗಳಿವೆ : ವೆಸಲ್ ಅಥವಾ ಟ್ರೇಕಿಯ, ಟ್ರೇಕೀಡ್, ಕ್ಸೈಲಂ ತಂತು (ಫೈಬರ್) ಮತ್ತು ಕ್ಸೈಲಂ ಪೇರೆಂಖೈಮ. ಇವುಗಳಲ್ಲಿ ಮೊದಲ ಮೂರು ಬಗೆಯ ಜೀವಕಣಗಳು ನಿರ್ಜೀವವಾಗಿಯೂ ಕೊನೆಯದು ಸಜೀವವಾಗಿಯೂ ಇವೆ. ಪ್ಲೋಯೆಂನಲ್ಲೂ ನಾಲ್ಕು ಬಗೆಯ ಜೀವಕಣಗಳಿವೆ. ಸೀವ್ ಟ್ಯೊಬ್, ಕಂಪ್ಯಾನಿಯನ್ ಜೀವಕಣ, ಪ್ಲೋಯೆಂ ಪೇರೆಂಖೈಮ ಮತ್ತು ಪ್ಲೋಯೆಂ ತಂತು. ಇವುಗಳಲ್ಲಿ ಮೊದಲ ಮೂರು ಬಗೆಯವು ಸಜೀವವಾಗಿಯೂ ನಾಲ್ಕನೆಯದು ನಿರ್ಜೀವವಾಗಿಯೂ ಇವೆ. ಸೆಕೆಂಡರಿ ಬೆಳೆವಣಿಗೆ (ಸೆಕೆಂಡರಿ ಗ್ರೋತ್) ಇರುವ ಸಸ್ಯಗಳಲ್ಲಿ ಸೆಕೆಂಡರಿ ಕ್ಸೈಲಂ ಮತ್ತು ಸೆಕೆಂಡರಿ ಪ್ಲೋಯೆಂಗಳಲ್ಲೆರಡರಲ್ಲೂ ವ್ಯಾಸ್ಕುಲರ್ ರೇಸ್ ಎಂಬ ಪೇರೆಂಖೈಮ ಕಣಧಾತುಗಳಿವೆ. ಎಂದ ಮೇಲೆ ಕ್ಸೈಲಂ ಮತ್ತು ಪ್ಲೋಯೆಂಗಳೆರಡರಲ್ಲೂ ಸಜೀವ ಜೀವಕಣಗಳಿರುವುದರಿಂದ ಒಂದಕ್ಕೊಂದಕ್ಕೆ ನಿಕಟಸಂಬಂಧವಿದೆ. ಕ್ಯಾಂಬಿಯಂ ಇರುವ ಸಸ್ಯಗಳಲ್ಲಿ ಈ ಸಂಬಂಧ ಹೆಚ್ಚಾಗಿದ್ದು ಆಹಾರ ಮತ್ತು ಲೋಹಗಳು ಕ್ಸೈಲಂನಿಂದ ಪ್ಲೋಯೆಂಗೂ ಪ್ಲೋಯೆಂನಿಂದ ಕ್ಸೈಲಂಗೊ ಚಲಿಸುವುದಕ್ಕೆ ಅನುಕೂಲವಾಗಿದೆ. ಪ್ಲೋಯೆಂನಲ್ಲಿ ಕಂಡುಬರುವ ನಾಲ್ಕು ಬಗೆಯ ಜೀವಕಣಗಳಲ್ಲಿ ಸೀವ್‍ಟ್ಯೊಬ್ ಆಹಾರ ಚಲನೆಯಲ್ಲಿ ಬಹಳ ಮುಖ್ಯಪಾತ್ರವಹಿಸುತ್ತದೆ. ಇದನ್ನು 1837ರಲ್ಲಿ ಹಾರ್ಟಿಗ್ ಎಂಬ ವಿಜ್ಞಾನಿ ಕಂಡುಹಿಡಿದ. ಇದರ ರಚನೆಯ ಮೇಲೆ ಅನೇಕ ಸಂಶೋಧನೆಗಳು ನಡೆದಿದ್ದರೂ ಇದಕ್ಕೆ ಸಂಬಂಧಪಟ್ಟ ಕೆಲವು ವಿಚಾರಗಳು ಇನ್ನೂ ನಿರ್ದಿಷ್ಟವಾಗಿ ತಿಳಿದಿಲ್ಲ. ಒಂದು ಸೀವ್‍ಟ್ಯೊಬ್ ಅನೇಕ ಸೀವ್‍ಟ್ಯೊಬ್ ಘಟಕಗಳಿಂದ (ಎಲಿಮೆಂಟ್ಸ್) ಮಾಡಲ್ಪಟ್ಟಿದೆ ; ಈ ಘಟಕ ಜೀವಕಣಗಳು ಪ್ಲೋಯೆಂನಲ್ಲಿ ಬಹಳ ವೈಶಿಷ್ಟ್ಯವುಳ್ಳವು. ಈ ಜೀವಕಣಗಳು ಎಳಸಾಗಿರುವಾಗ ಆಕಾರದಲ್ಲಿ ಚಿಕ್ಕವಾಗಿದ್ದು ಬೀಜಕಣಗಳನ್ನು (ನ್ಯೂಕ್ಲಿಯಸ್) ಹೊಂದಿರುತ್ತವೆ ; ಬಲಿತಾಗ ಕೊಳವೆಯಾಕಾರವಾಗಿದ್ದು ಬೀಜಕಣರಹಿತವಾಗಿರುತ್ತವೆ. ಆದರೂ ಸೈಟೋಪ್ಲಾಸಂ ಇರುತ್ತದೆ. ಒಂದು ಸೀವ್‍ಟ್ಯೊಬ್ ಘಟಕ ಇನ್ನೊಂದನ್ನು ಸೇರುವ ಕಡೆ ಅಡ್ಡ ಭಿತ್ತಿಯಲ್ಲಿ (ಗೋಡೆ) ಜರಡಿಯಂತೆ ರಂಧ್ರಗಳಿರುತ್ತವೆ. ಈ ರಂಧ್ರಗಳಿಗೆ ಸೀವ್‍ಪ್ಲೇಟ್ಸ್ ಎಂದು ಹೆಸರು. ರಂಧ್ರಗಳ ಮೂಲಕ ಒಂದು ಸೀವ್‍ಟ್ಯೊಬ್ ಘಟಕದ ಸೈಟೋಪ್ಲಾಸಂ ಇನ್ನೊಂದರ ಸೈಟೋಪ್ಲಾಸಂಗೆ ಸೇರಿಕೊಂಡಿರುತ್ತದೆ. ಹೀಗೆ ಸೈಟೋಪ್ಲಾಸಂ ಸೀವ್‍ಟ್ಯೊಬಿನ ಉದ್ದಕ್ಕೂ ನಿರಂತರವಾಗಿದೆ.[೨]
ಆಹಾರಚಲನೆ
ಬದಲಾಯಿಸಿಆಹಾರದಲ್ಲಿ ಕಾರ್ಬೊಹೈಡ್ರೇಟುಗಳು, ತೈಲ ಸಂಬಂಧ ಪದಾರ್ಥಗಳು ಮತ್ತು ಪ್ರೋಟೀನುಗಳು ಎಂದು ಮೂರು ವಿಧಗಳಿವೆ. ಕಾರ್ಬೊಹೈಡ್ರೇಟುಗಳು ಅದರಲ್ಲೂ ಸಕ್ಕರೆಗಳು ಚಲಿಸುವ ಕ್ರಮದ ವಿಚಾರವಾಗಿ ವಿಜ್ಞಾನಿಗಳು ಅನೇಕ ಪ್ರಯೋಗಗಳನ್ನು ನಡೆಸಿದ್ದಾರೆ. ಆಹಾರ ಚಲನೆಯಲ್ಲಿ ಮೂರು ಬಗೆಗಳಿವೆ : 1. ಎಲೆಗಳಲ್ಲಿ ತಯಾರಾದ ಆಹಾರ, ಬೇರು ಮತ್ತು ಇತರ ಆಹಾರ, ಶೇಖರಣಾಂಗಗಳಿಗೆ ಚಲಿಸಬಹುದು. ಈ ರೀತಿಯ ಅಹಾರಚಲನೆ ದ್ಯುತಿ ಸಂಶ್ಲೇಷಣ ಕ್ರಿಯೆ ನಡೆಯುತ್ತಿರುವಾಗ ಹೆಚ್ಚಿಗೆ ಇರುವುದು. 2. ಶೇಖರಿಸಲ್ಪಟ್ಟ ಭಾಗಗಳಿಂದ (ಉದಾಹರಣೆಗೆ ಬೀಜ ಮತ್ತು ಗಡ್ಡೆಗಳಿಂದ) ಆಹಾರ ಮೇಲಕ್ಕೆ ಚಲಿಸಬಹುದು. ಈ ರೀತಿಯ ಆಹಾರಚಲನೆ ಬೀಜಗಳು ಮೊಳೆತು ಸಸ್ಯದ ಎಲೆಗಳು ದ್ಯುತಿಸಂಶ್ಲೇಷಣ ಕ್ರಿಯೆಯನ್ನು ಪ್ರಾರಂಭಿಸುವವರೆಗೆ ಇರುತ್ತದೆ. 3. ಆಹಾರ ಕಾಂಡದಲ್ಲಿ ಚಲಿಸುವಾಗ ಕ್ಸೈಲಂನಿಂದ ಪ್ಲೋಯೆಂಗೂ ಪ್ಲೋಯೆಂನಿಂದ ಕ್ಸೈಲಂಗೂ ಅದರ ಅಡ್ಡಚಲನೆ ಆಗಬಹುದು.
ಆಹಾರದ ಚಲನೆ
ಬದಲಾಯಿಸಿಆಹಾರ ಕ್ಸೈಲಂ ಮುಖಾಂತರ ಚಲಿಸುತ್ತದೆ ಎಂದು ವಿಜ್ಞಾನಿ ಡಿಕ್ಸನ್ ನಂಬಿದ್ದ. ಆದರೆ ಕರ್ಟೆಸ್ ಮುಂತಾದ ವಿಜ್ಞಾನಿಗಳು ರಿಂಗಿಂಗ್ ಅಥವಾ ಗರ್ಡ್‍ಲಿಂಗ್ ಪ್ರಯೋಗಗಳಿಂದ ಆಹಾರ ಪ್ಲೋಯೆಂ ಮುಖಾಂತರ ಚಲಿಸುತ್ತದೆ ಎಂದು ತೋರಿಸಿದ್ದಾರೆ. ಒಂದು ಸಜೀವ ಮತ್ತು ದ್ಯುತಿಸಂಶ್ಲೇಷಣ ಕ್ರಿಯೆಯನ್ನು ನಡೆಸುತ್ತಿರುವ ಕಾಂಡದ ಸುತ್ತಲೂ ಉಂಗುರಾಕಾರವಾಗಿ ಕ್ಸೈಲಂ ಹೊರಭಾಗದಲ್ಲಿರುವ ಕಣಧಾತುಗಳನ್ನೆಲ್ಲ ಅಂದರೆ ತೊಗಟೆಯನ್ನು ಕಿತ್ತು ಹಾಕಬೇಕು. ಹೀಗೆ ಮಾಡಿದ ಕೆಲವು ದಿವಸಗಳ ಮೇಲೆ ಆ ಸಸ್ಯವನ್ನು ಪರೀಕ್ಷಿಸಿದರೆ ಉಂಗುರದ ಮೇಲು ಭಾಗದಲ್ಲಿ ಒಂದು ವಿಧವಾದ ಗಂಟು ಕಟ್ಟಿಕೊಂಡಿರುತ್ತದೆ. ಏಕೆಂದರೆ ಎಲೆಗಳಲ್ಲಿ ತಯಾರಾದ ಆಹಾರ ಈ ಭಾಗದಲ್ಲಿ ಶೇಖರವಾಗಿರುವುದರಿಂದ ಬೆಳೆವಣಿಗೆ ಹೆಚ್ಚಾಗಿರುತ್ತದೆ. ಆಹಾರ ಉಂಗುರದಿಂದ ಕೆಳಭಾಗಕ್ಕೆ ಇಳಿಯುವುದಿಲ್ಲ. ಈ ಉಂಗುರದ ಕೆಳಭಾಗದಲ್ಲಿ ಆಹಾರ ಕೊರತೆಯಿರುವುದರಿಂದ ಇಲ್ಲಿ ಬೆಳೆವಣಿಗೆಯಿರುವುದಿಲ್ಲ ; ಮತ್ತು ಮೊದಲೇ ಶೇಖರವಾಗಿದ್ದ ಆಹಾರ ಪ್ರಮಾಣ ಕ್ರಮೇಣ ಕಡಿಮೆಯಾಗಿ ಬೇರುಗಳು ಸತ್ತುಹೋಗುತ್ತವೆ ; ಕೊನೆಯಲ್ಲಿ ಸಸ್ಯವೂ ಸತ್ತುಹೋಗುತ್ತದೆ.
ರಿಂಗಿಂಗ್ ಪ್ರಯೋಗದಲ್ಲಿ ಕ್ಸೈಲಂ ತೆಗೆದು ಪ್ಲೋಯೆಮನ್ನು ತೆಗೆಯದೆ ಇದ್ದರೆ ಇಂಥ ಬದಲಾವಣೆಯಾವುದಿಲ್ಲ. ಅಥವಾ ಎಂಡೊಡರ್ಮಿಸ್‍ವರೆಗೆ ಮಾತ್ರ ತೆಗೆದು ಪ್ಲೋಯೆಂನಿಂದ ತೆಗೆಯದೆ ಇದ್ದರೊ ಹೆಚ್ಚಿನ ಬದಲಾವಣೆಗಳಾಗುವುದಿಲ್ಲ. ರಿಂಗಿಂಗ್ ಪ್ರಯೋಗಗಳು ಎರಡು ಗುಂಪು. ಪ್ಲೋಯೆಂನಿಂದ ಎಂದರೆ ಬೈಕೊಲ್ಯಾಟರಲ್ ಬಂಡಲ್ಸ್ (ಜೊತೆನಾಳಕೊರ್ಚ) ಇರುವ ಸಸ್ಯಗಳಲ್ಲಿ ಯಶಸ್ವಿಯಾಗುವುದಿಲ್ಲ. ಏಕೆಂದರೆ ಇಂಥ ಸಸ್ಯಗಳಲ್ಲಿ ಈ ಪ್ರಯೋಗಗಳಿಂದ ಇರುವ ಎಲ್ಲ ಪ್ಲೋಯೆಮನ್ನೂ ತೆಗೆದುಹಾಕಲು ಸಾಧ್ಯವಿಲ್ಲದಿರುವುದರಿಂದ ಈ ಪ್ರಯೋಗಗಳು ಯಶಸ್ವಿಯಾಗುವುದಿಲ್ಲ. ಮೇಲಿನ ಪ್ರಯೋಗಗಳಿಂದ ಅಹಾರ ಪ್ಲೋಯೆಂ ಮುಖಾಂತರ ಚಲಿಸುತ್ತದೆ, ಕ್ಸೈಲಂ ಮುಖಾಂತರ ಅಲ್ಲ ಎಂದು ವಿಜ್ಞಾನಿಗಳು ತೋರಿಸಿದ್ದಾರೆ.[೩]
ಮಿಟ್ಲರ್, ಕೆನಡಿ ಮುಂತಾದ ವಿಜ್ಞಾನಿಗಳು ಪ್ಲೋಯೆಂ ರಸವನ್ನು ಹೊಸ ವಿಧಾನಗಳಿಂದ ತೆಗೆದು ಅದನ್ನು ಪರೀಕ್ಷಿಸಿದ್ದಾರೆ. ಈ ರಸದಲ್ಲಿ ಸುಕ್ರೋಸ್ ಎಂಬ ಸಕ್ಕರೆ ಅನೇಕ ವಿಧವಾದ ಅಮೈನೋ ಆಮ್ಲಗಳು ಮತ್ತು ಕಡಿಮೆ ಪ್ರಮಾಣದಲ್ಲಿ ಲೋಹಗಳು ಕಂಡುಬಂದಿವೆ. ಕಾರ್ಬೊಹೈಡ್ರೇಟುಗಳಲ್ಲಿ ಕೆಲವು ಸಸ್ಯಗಳಲ್ಲಿ ಸುಕ್ರೋಸ್ (ಡೈಸ್ಯಾಕರೈಡ್) ಮಾತ್ರ ಇದೆ. ಇನ್ನು ಕೆಲವು ಸಸ್ಯಗಳಲ್ಲಿ ಸುಕ್ರೋಸ್, ಜೊತೆಗೆ ರ್ಯಾಫಿನೋಸ್ (ಟ್ರೈಸ್ಯಾಕರೈಡ್) ಮತ್ತು ಸ್ಟ್ಯಾಕೆಯೋಸ್ (ಟೆಟ್ರಸ್ಯಾಕರೈಡ್) ಸಕ್ಕರೆಗಳು ಅತಿ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿವೆ. ಕ್ಸೈಲಂ ರಸದಲ್ಲಿ ಮುಖ್ಯವಾಗಿ ಲೋಹಗಳು ಸ್ವಲ್ಪ ಪ್ರಮಾಣದಲ್ಲಿ ಅಮೈನೋ ಆಮ್ಲಗಳು ಮತ್ತು ಅತಿ ಸ್ವಲ್ಪ ಪ್ರಮಾಣದಲ್ಲಿ ಸಕ್ಕರೆ ಕಂಡುಬಂದಿವೆ.
ಆಹಾರ ಮುಖ್ಯವಾಗಿ ಪ್ಲೋಯೆಂ ಮುಖಾಂತರ ಚಲಿಸಿದರೂ ಸ್ವಲ್ಪ ಭಾಗವಾದರೂ ಕ್ಸೈಲಂ ಮುಖಾಂತರ ಚಲಿಸುತ್ತದೆ ಎಂಬುದು ಈಗ ಸ್ಪಟ್ಟಪಟ್ಟಿದೆ. ಹಿಂದೆ ಕಾರ್ಬೊಹೈಡ್ರೇಟುಗಳ ಗುಂಪಿಗೆ ಸೇರಿದ ಆಹಾರಗಳು ಗ್ಲೊಕೋಸ್ ಮುಂತಾದ ಮಾನೋಸ್ಯಾಕರೈಡ್‍ಗಳ ರೂಪದಲ್ಲಿ ಚಲಿಸುತ್ತವೆ ಎಂಬ ನಂಬಿಕೆಯಿತು. ಈಚಿನ ಸಂಶೋಧನೆಗಳು ಕಾರ್ಬೊಹೈಡ್ರೇಟುಗಳು ಸುಕ್ರೋಸ್ ಅಂದರೆ ಡ್ರೈಸ್ಯಾಕರೈಡ್ ರೂಪದಲ್ಲಿ ಮುಖ್ಯವಾಗಿಯೂ ಒಂದೊಂದು ವೇಳೆ ಅತಿ ಸಣ್ಣ ಪ್ರಮಾಣದಲ್ಲಿ ಇನ್ನೂ ಮೇಲುವರ್ಗದ ಕಾರ್ಬೊಹೈಡ್ರೇಟುಗಳು, ಅಂದರೆ ಟ್ರೈಸ್ಯಾಕರೈಡ್ ಮತ್ತು ಟೆಟ್ರಸ್ಯಾಕರೈಡ್ ರೂಪದಲ್ಲಿಯೂ ಚಲಿಸುತ್ತವೆ, ಮಾನೋಸ್ಯಾಕರೈಡುಗಳ ರೂಪದಲ್ಲಿ ಅಲ್ಲ ಎಂದು ತಿಳಿಯಬಹುದು. ಸಸ್ಯದಲ್ಲಿ ಆಹಾರ ಯಾವಾಗಲೂ ಅಧಿಕವಾಗಿರುವ ಭಾಗದಿಂದ ಕಡಿಮೆಯಾಗಿರುವ ಭಾಗಕ್ಕೆ ಚಲಿಸಿ ಸಸ್ಯದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಾಧಾರಣವಾಗಿ ವ್ಯಾಪಿಸುತ್ತದೆ (ಡಿಫ್ಯೂಸ್) ಎಂದು ಕೆಲವು ವಿಜ್ಞಾನಿಗಳ ವಾದ. ಆದರೆ ಆಹಾರ ಚಲನೆ ಕೆಲವು ವೇಳೆ ಸಾಮಾನ್ಯವಾಗಿ ವ್ಯಾಪಿಸುವುದಕ್ಕಿಂತ ಬಹಳ ವೇಗವಾಗಿ ನಡೆಯುತ್ತದೆ. ಉದಾಹರಣೆಗೆ ಹತ್ತಿಗಿಡದಲ್ಲಿ ಸುಕ್ರೋಸ್ ಸಕ್ಕರೆಯ ಚಲನೆ ಸಾಮಾನ್ಯ ವ್ಯಾಪನೆಗಿಂತ ಸುಮಾರು 40,000 ಬಾರಿ ಹೆಚ್ಚಿಗೆ ವೇಗದಲ್ಲಿ ನಡೆಯುತ್ತದೆ. ವಿಕಿರಣಶೀಲ (ರೇಡಿಯೊ ಆಕ್ಟಿವ್) ಕಾರ್ಬನ್ ಅ14 ಪ್ರಯೋಗಗಳಿಂದ ಆಹಾರ ಕಬ್ಬಿನಲ್ಲಿ ಗಂಟೆಗೆ 270 ಸೆಂಟಿಮೀಟರುಗಳ ವೇಗದಲ್ಲೊ ಅವರೆ ಗಿಡದಲ್ಲಿ ಗಂಟೆಗೆ 107 ಸಂಟಿಮೀಟರುಗಳ ವೇಗದಲ್ಲೂ ಚಲಿಸುತ್ತದೆ ಎಂದು ಗೊತ್ತಾಗಿದೆ. ಆಹಾರ ಚಲನೆಗೆ ಉಷ್ಣತೆ ಮತ್ತು ಲವಣಗಳು ಅವಶ್ಯಕವಾಗಿ ಬೇಕು. ಕಾರ್ಬೊಹೈಡ್ರೇಟುಗಳ ಚಲನೆಯನ್ನು ಬೋರಾನ್ ಕ್ರಮಪಡಿಸುತ್ತದೆ. ಇದರ ವಿವರಗಳು ಇನ್ನೂ ಸರಿಯಾಗಿ ತಿಳಿದಿಲ್ಲ. ಗ್ರಾವ್ಜ್ ಮತ್ತು ದುಗ್ಗಾರ್ ಎಂಬ ವಿಜ್ಞಾನಿಗಳು ಬೋರಾನ್ ಕೊರತೆಯಿರುವ ಟೊಮ್ಯಾಟೋ ಗಿಡಗಳಿಗೆ ಬೊರೇಟುಗಳನ್ನು ಒದಗಿಸಿ ಕೊಡುವುದರಿಂದ ವಿಕಿರಣಶೀಲ ಸಕ್ಕರೆಯ ಚಲನೆ ಬಲುಪಾಲು ಹೆಚ್ಚುತ್ತದೆ ಎಂದು ತೋರಿಸಿದ್ದಾರೆ. ಆಹಾರ ಚಲನೆಯ ಕ್ರಿಯಾವಿಧಿ (ಮೆಕಾನಿಸಂ) ಇನ್ನೊ ನಿರ್ದಿಷ್ಟವಾಗಿ ತಿಳಿದಿಲ್ಲ. ವಿಜ್ಞಾನಿಗಳು ಅದನ್ನು ಕೆಲವು ತತ್ತ್ವಗಳಿಂದ ವಿವರಿಸಿದ್ದಾರೆ. ಅವುಗಳಲ್ಲಿ ಕೆಳಗೆ ಸೂಚಿಸಿರುವ ಎರಡು ಮುಖ್ಯವಾದುವು. 1. ಸೈಟೋಪ್ಲಾಸಂ ಚಲನೆಗೆ ಸಂಬಂಧಪಟ್ಟ ತತ್ತ್ವ, ಇದನ್ನು 1885ರಲ್ಲಿ ಡಿರೀಸ್ ಎಂಬ ವಿಜ್ಞಾನಿಯೂ ಅನಂತರ 1935ರಲ್ಲಿ ಕರ್ಟಿಸ್ ಎಂಬ ವಿಜ್ಞಾನಿಯೂ ಪ್ರತಿಪಾದಿಸಿದರು. ಈ ತತ್ತ್ವದ ಪ್ರಕಾರ ಆಹಾರ ಸೀವ್‍ಟ್ಯೊಬಿನ ಸೈಟೋಪ್ಲಾಸಂ ಪ್ರವಾಹದಲ್ಲಿ ಸೇರಿ ಒಂದು ಸೀವ್‍ಟ್ಯೂಬಿನಿಂದ ಇನ್ನೊಂದು ಸೀವ್‍ಟ್ಯೊಬಿಗೆ ವ್ಯಾಪಿಸಿ ಹೀಗೆ ಸಸ್ಯದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಚಲಿಸುತ್ತದೆ. ಆದರೆ ಆಹಾರಚಲನೆಯ ವೇಗವನ್ನು ಗಣನೆಗೆ ತೆಗೆದುಕೊಂಡರೆ ಈ ರೀತಿ ವ್ಯಾಪಿಸಬಹುದಾದ ಆಹಾರದ ಪ್ರಮಾಣ ವಾಸ್ತವವಾಗಿ ಚಲಿಸುವ ಆಹಾರದ ಪ್ರಮಾಣಕ್ಕಿಂತ ಬಲು ಕಡಿಮೆ. ಆದ್ದರಿಂದ ಈ ತತ್ತ್ವವನ್ನು ಸುಲಭವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೆಲವು ವಿಜ್ಞಾನಿಗಳು ಇದನ್ನು ಸ್ವಲ್ಪ ಮಾರ್ಪಡಿಸಿ ಅಹಾರದ ಕಣಗಳ ವೇಗವನ್ನು ಸೈಟೋಪ್ಲಾಸಂ ಯಾವುದೋ ಒಂದು ಇನ್ನೂ ಸರಿಯಾಗಿ ಗೊತ್ತಿಲ್ಲದ ರೀತಿಯಲ್ಲಿ ಚುರುಕುಗೊಳಿಸುತ್ತದೆ ಎಂದು ವಾದಿಸಿದ್ದಾರೆ. 2. ವ್ಯಾಪಕ ಅಥವಾ ಮಾಸ್‍ಪ್ಲೋ ತತ್ತ್ವ : ಎರ್ನ್‍ಸ್ಟ್ ಮಂಜ್ ಎಂಬ ಜರ್ಮನ್ ವಿಜ್ಞಾನಿ 1930ರಲ್ಲಿ ಸೊಚಿಸಿದ. ಇದನನು ಈ ಕೆಳಗೆ ಸೂಚಿಸಿರುವ ಒಂದು ಮಾದರಿಯಿಂದ ವಿವರಿಸಬಹುದು :[೪]
ಲೋಹಗಳ ಚಲನೆ
ಬದಲಾಯಿಸಿಲೋಹಗಳ ಅಥವಾ ಖನಿಜಗಳ ಚಲನೆಯ ಸಂಬಂಧವಾಗಿಯೂ ವಿಜ್ಞಾನಿಗಳು ರಿಂಗಿಂಗ್ ಪ್ರಯೋಗಗಳನ್ನು ಮಾಡಿದ್ದಾರೆ. ಇತ್ತೀಚೆಗೆ ರೇಡಿಯೊ ಸಮಸ್ಥಾನಿಗಳು (ಐಸೊಟೋಪುಗಳು) ಅದರಲ್ಲೂ ವಿಕಿರಣಶೀಲ ಪೊಟ್ಯಾಸಿಯಮ್ಮನ್ನು ಪ್ರಯೋಗಗಳಲ್ಲಿ ಉಪಯೋಗಿಸಿದ್ದಾರೆ. ಕ್ಸೈಲಂ ರಸವನ್ನೂ ತೆಗೆದು ಪರೀಕ್ಷಿಸಲಾಗಿದೆ. ಕ್ಸೈಲಂ ರಸದಲ್ಲಿ ಲೋಹಗಳು, ಅಮೈನೋ ಆಮ್ಲಗಳು ಮತ್ತು ಅತಿ ಸಣ್ಣ ಪ್ರಮಾಣದಲ್ಲಿ ಅನೇಕ ವೇಳೆ ಸಕ್ಕರೆಗಳೂ ಕಂಡುಬಂದಿವೆ. ಪ್ಲೋಯೆಂ ರಸದಲ್ಲಿ ಕಾರ್ಬೊಹೈಡ್ರೇಟುಗಳು, ಅಮೈನೋ ಆಮ್ಲಗಳು ಮತ್ತು ಸಣ್ಣ ಪ್ರಮಾಣದಲ್ಲಿ ಲೋಹಗಳು ಕಂಡುಬಂದಿವೆ. ಲೋಹಗಳ ಚಲನೆಯ ಬಲುಭಾಗ ಕ್ಸೈಲಂ ಮುಖಾಂತರ ನಡೆದರೂ ಸ್ವಲ್ಪಭಾಗವಾದರೂ ಪ್ಲೋಯೆಂ ಮುಖಾಂತರ ನಡೆಯಬಹುದೆಂದು ಪರಿಗಣಿಸಲಾಗಿದೆ. ಲೋಹಗಳ ಚಲನೆಯನ್ನು ಕೆಳಗೆ ಸೂಚಿಸಿರುವಂತೆ ಸಂಕ್ಷೇಪಿಸಬಹುದು. ಬೇರಿನಿಂದ ತೆಗೆದುಕೊಂಡ ಮೇಲೆ ಲೋಹಗಳು ಕ್ಸೈಲಂನಲ್ಲಿ ನೀರಿನ ಮುಖಾಂತರ ಮೇಲುಭಾಗಕ್ಕೆ ಚಲಿಸುತ್ತವೆ. ಅವು ಎಲೆಗಳನ್ನು ತಲುಪಿದ ಮೇಲೆ ಅಲ್ಲಿ ವಿಂಗಡಿಸಲ್ಪಡುತ್ತದೆ. ಎಲೆಗಳಲ್ಲಿ ಉಪಯೋಗಿಸದೆ ಇರುವ ಲೋಹಗಳು ಎಲೆಗಳಲ್ಲಿ ತಯಾರಾದ ಆಹಾರದ ಜೊತೆಗೆ ಸೇರಿ ಅವುಗಳೊಡನೆ ಪ್ಲೋಯೆಂ ಮುಖಾಂತರ ಕೆಳಭಾಗಕ್ಕೆ ಚಲಿಸುತ್ತವೆ. ಹೀಗೆ ಲೋಹಗಳು ಮೇಲುಭಾಗಕ್ಕೆ ಅಥವಾ ಕೆಳಭಾಗಕ್ಕೆ ಚಲಿಸುವಾಗ ಕೆಲವು ಲೋಹಗಳು ಕ್ಸೈಲಂನಿಂದ ಪ್ಲೋಯೆಂಗೂ ಪ್ಲೋಯೆಂನಿಂದ ಕ್ಸೈಲಂಗೂ ಅಡ್ಡವಾಗಿ ಚಲಿಸಬಹುದು. ಆಹಾರದೊಡನೆ ಕೆಳಭಾಗಕ್ಕೆ ಬಂದ ಲೋಹಗಳು ಮತ್ತೆ ಕ್ಸೈಲಂ ಮುಖಾಂತರ ಮೇಲುಭಾಗಕ್ಕೆ ಚಲಿಸಬಹುದು. ಹೀಗೆ ಸಸ್ಯಗಳಲ್ಲಿ ಲೋಹಗಳ ಚಲನೆ ಒಂದು ವಿಧವಾದ ಪರಿಚಲನೆಯೇ (ಸಕ್ರ್ಯುಲೇಷನ್) ಆಗಿರುತ್ತದೆ.[೫]
ಉಲ್ಲೇಖಗಳು
ಬದಲಾಯಿಸಿ- ↑ http://www.biologydiscussion.com/plants/translocation/translocation-of-organic-solutes-with-diagram-plants/23272
- ↑ "ಆರ್ಕೈವ್ ನಕಲು". Archived from the original on 2021-03-01. Retrieved 2020-01-11.
- ↑ http://www.biologydiscussion.com/plants/translocation-of-solutes-in-plants-with-diagram/18071
- ↑ https://bio.libretexts.org/Bookshelves/Introductory_and_General_Biology/Book%3A_General_Biology_(Boundless)/25%3A_Seedless_Plants/25.4%3A_Seedless_Vascular_Plants/25.4B%3A_Vascular_Tissue%3A_Xylem_and_Phloem
- ↑ http://www.bulletinofinsectology.org/pdfarticles/vol56-2003-035-040sur.pdf