ಆಸ್ಟ್ರಿಯನ್ ಪಂಥ
ಗೊಸ್ಸೆನ್ ಎಂಬ ಜರ್ಮನ್ ಅರ್ಥಶಾಸ್ತ್ರಜ್ಞನಲ್ಲಿ ಮೂಡಿದ ಕೆಲ ವಿಚಾರಗಳ ತಳಹದಿಯನ್ನು ವಿಸ್ತರಿಸಿ, ಪರಿಷ್ಕರಿಸಿ, ಆಸ್ಟ್ರಿಯದ ಕಾರ್ಲ್ ಮೆಂಗರ್, ವೀಸರ್ ಮತ್ತು ಬೊಂ-ಬಾವರ್ಕ್, ಇಂಗ್ಲೆಂಡಿನ ಚೆವನ್ಸ್ ಮತ್ತು ಫ್ರಾನ್ಸಿನ ಲಿಯೋ ವಾಲ್ರಾಸ್ ಅವರು 1860ರ ಅನಂತರದ 2-3 ದಶಕಗಳಲ್ಲಿ ಸ್ಥಾಪಿಸಿದ ಒಂದು ನೂತನ ಆರ್ಥಿಕ ವಿಚಾರಧಾರೆಯನ್ನು ಈ ಹೆಸರಿನಿಂದ ಕರೆಯುತ್ತಾರೆ. ಉಪಯುಕ್ತತೆ ಎಂಬ ಪಾರಿಭಾಷಿಕ ಪದಕ್ಕೆ ವ್ಯಕ್ತಿನಿಷ್ಠ ಮೌಲ್ಯಗಳ ವಿವರಣೆಯನ್ನು ಕೊಟ್ಟಿರುವುದು ಈ ಸಿದ್ಧಾಂತದ ವೈಶಿಷ್ಟ್ಯ. ಈ ಪೈಕಿ ಮೆಂಗರ್, ಜೆವನ್ಸ್ ಮತ್ತು ವಾಲ್ರಾಸ್ ಈ ಪಂಥದ ಆಚಾರ್ಯಪುರುಷರು. ಪರಸ್ಪರ ಸಂಪರ್ಕವಿಲ್ಲದಿದ್ದರೂ ಒಂದೇ ತೆರನ ತತ್ತ್ವವನ್ನು ಹೆಚ್ಚು ಕಡಿಮೆ ಏಕಕಾಲದಲ್ಲಿ ಅವರು ಪ್ರಕಟಿಸಿದ್ದು (ಮೆಂಗರ್ ಮತ್ತು ಜೆವನ್ಸ್ ಅವರ ಎರಡು ಮುಖ್ಯ ಗ್ರಂಥಗಳು 1871ರಲ್ಲಿಯೇ ಹೊರಬಿದ್ದುವು) ಆಶ್ಚರ್ಯಕರವಾಗಿದೆ. ದೃಢವಾಗಿ ನೆಲೆಯಾಗಿದ್ದ ಅಭಿಜಾತ (ಕ್ಲಾಸಿಕಲ್) ಪಂಥವನ್ನು ವಿರೋಧಿಸಿದ ಧಾಷ್ಟರ್ಯರ್ಕ್ಕಾಯ್ಗಿಅ ವಾಲ್ರಾಸ್ ಮತ್ತು ಮೆಂಗರ್ ಅವರ ಬೆಂಬಲಿಗರಿಗೆ ಮೊದಮೊದಲು ವಿಶ್ವವಿದ್ಯಾನಿಲಯಗಳಿಂದ ಪುರಸ್ಕಾರ ದೊರೆಯದಾ ಯಿತು. ಜರ್ಮನಿಯಲ್ಲಿ ಆಸ್ಟ್ರಿಯನ್ ಪಂಥಕ್ಕೆ ವಿರುದ್ಧವಾಗಿ ಮಾಕ್ರ್ಸ್ ವಾದಿ ಅರ್ಥಸೂತ್ರಗಳನ್ನೇ ಎತ್ತಿ ಕಟ್ಟಿದರು. ನಿಧಾನವಾಗಿಯಾದರೂ ಬಹಳ ಯುಕ್ತಿಪುರ್ವಕವಾಗಿ ಇಂಗ್ಲಿಷ್, ಅರ್ಥಶಾಸ್ತ್ರದ ಬಲವನ್ನು ಆಸ್ಟ್ರಿಯನ್ ವಿಚಾರಗಳಿಗೆ ಹೊಂದಿಸಿದ ಶ್ರೇಯಸ್ಸು ಆಲ್ಫ್ರೆಡ್ ಮಾರ್ಷಲ್ಗೆ ಸಲ್ಲುತ್ತದೆ. ಕಾಲಾನುಕ್ರಮದಲ್ಲಿ ಜರ್ಮನಿಯಲ್ಲೂ ಈ ಪಂಥದವರ ಮೂಲವಿಚಾರಗಳು ಪುರ್ತಿಯಾಗಿ ಮೌಲ್ಯ ಸಿದ್ಧಾಂತದಲ್ಲೂ ಅಂಶತಃ ಧಾರಣೆಸಿದ್ಧಾಂತ ದಲ್ಲೂ ವಿಲೀನಗೊಂಡವು. ಉಪಯುಕ್ತತೆಯೆಂಬ ಪಾರಿಭಾಷಿಕ ಪದವನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ವಿಶ್ಲೇಷಿಸಿ ವ್ಯಕ್ತಿನಿಷ್ಠ ಅಂಶಗಳಿಂದಲೇ ಮೌಲ್ಯಗಳ ಉತ್ಪನ್ನವಾಗುವುವೆಂದು ಆಸ್ಟ್ರಿಯನ್ ಪಂಥದವರು ಸಾಧಿಸಿದರು. ಅಷ್ಟಲ್ಲದೆ ಉತ್ಪಾದನೆಯ ಅವಯವ ಅಥವಾ ಕಾರಕಗಳಿಗೂ ಇದೇ ಮೌಲ್ಯ ವಿಶ್ಲೇಷಣೆಯನ್ನು ಅನ್ವಯಿಸಿ ಬಂಡವಾಳ ಮತ್ತು ಬಡ್ಡಿಯನ್ನು ಕುರಿತ ಪ್ರತ್ಯೇಕ ತತ್ತ್ವವನ್ನು ನಿರ್ಮಿಸಿದರು. ಉಪಯುಕ್ತತೆಯೇ ಮೌಲ್ಯದ ಮೂಲಾಧಾರ. ತಂತಮ್ಮ ಅಭಿಲಾಷೆಗಳ ತೃಪ್ತಿಯನ್ನು ಬೇರೆ ಬೇರೆ ವ್ಯಕ್ತಿಗಳು ವಿಭಿನ್ನವಾಗಿ ಅಳೆಯುವುದರಿಂದ, ಅಥವಾ ಆರ್ಥಿಕ ಉದ್ದೇಶಗಳಿಂದ ಪ್ರೇರಿತವಾದ ವಿನಿಮಯ ಸಂದರ್ಭಗಳಲ್ಲಿ ವಿನಿಮಯಕ್ಕೆ ಹೊರಟ ಕುಳಗಳು ಸರಕುಗಳ ಪ್ರಮಾಣಕ್ಕೆ ಬೇರೆ ಬೇರೆ ಮೌಲ್ಯವನ್ನು ಹಚ್ಚುವುದರಿಂದ, ಮೌಲ್ಯಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ ಎಂದು ಮೆಂಗರ್ ಸೂಚಿಸಿದ. ‘ಹೀಗೆ ತಯಾರಾದ ಸರಕುಗಳಿಗೆ-ಉತ್ಪಾದನೆಯ ವೆಚ್ಚಕ್ಕೆ ಮಿಗಿಲೂ ಅಲ್ಲ, ಕಡಿಮೆಯೂ ಅಲ್ಲ ಎಂಬಂತೆ-ಮೌಲ್ಯ ಏತರಿಂದ ಬಂತು, ಅಥವಾ ಇಂತಿಷ್ಟೇ ಮೌಲ್ಯವೆಂದು ಹೇಗೆ ನಿರ್ಣಯಿತವಾಯಿತು, ಎಂಬುದನ್ನು ವಿಚಾರಿಸುವುದಾದರೆ ಹೊರಟಲ್ಲಿಗೇ ಮುಟ್ಟಿದಂತಾಗುತ್ತದೆ. ಅಂದರೆ ಸರಕುಗಳ ಮೌಲ್ಯ ಅವುಗಳಲ್ಲಿ ಹುದುಗಿರುವ ಉಪಯುಕ್ತತೆಯಿಂದಲೇ ಸೃಷ್ಟಿಯಾಗುವುದು. ಅವುಗಳ ತಯಾರಿಕೆಗೆ ತಗುಲಿದ ವೆಚ್ಚಕ್ಕೂ ಅವುಗಳ ಮೌಲ್ಯಕ್ಕೂ ಯಾವ ಸಂಬಂಧವೂ ಇಲ್ಲ. ವೆಚ್ಚಮೌಲ್ಯ ಉಪಯೋಗ ಮೌಲ್ಯವನ್ನು ನಿರ್ಣಯಿಸಲು ಶಕ್ತವಾದದ್ದಲ್ಲ; ಉಪಯೋಗ ಮೌಲ್ಯ ಸ್ವಯಂಕೃತವಾಗಿ, ಸ್ವಯಂ ನಿರ್ಧರಿತವಾಗಿ ವೆಚ್ಚಮೌಲ್ಯವನ್ನು ನಿರ್ಣಯಿಸುತ್ತದೆ’-ಎಂದು ವೀಸರ್ ವ್ಯಕ್ತಿನಿಷ್ಠವಾದ ಉಪಯೋಗಮೌಲ್ಯದ ಮಹತ್ತ್ವವನ್ನು ಸಾರಿದ್ದಾನೆ. ಸರಕುಗಳಿಂದ ಒದಗುವ ಸುಖಲಾಭ ಅಥವಾ ಅವುಗಳ ಅಭಾವದಿಂದುಂಟಾಗುವ ದುಃಖಪ್ರಾಪ್ತಿ-ಇವುಗಳ ಪ್ರಮಾಣದಿಂದ ಸರಕುಗಳ ಮೌಲ್ಯ ನಿರ್ಣಯವಾಗುತ್ತದೆ. ಒಂದು ಪ್ರತ್ಯಕ್ಷ ಅಭಿಲಾಷೆ ಅಥವಾ ಇಚ್ಛೆಯ ಹೆಚ್ಚುವರಿ ಎಷ್ಟು ಪ್ರಾಮುಖ್ಯವಾದದ್ದೆನ್ನುವುದರ ಮೇಲೆ ಸರಕಿನ ಮೌಲ್ಯ ನಿರ್ಧಾರಗೊಳ್ಳುತ್ತದೆ. ಸರಕುಗಳು ಒದಗಿಸಬಲ್ಲ ಇಚ್ಛಾಪುರ್ತಿಯಲ್ಲಿ (ಬಯಕೆಯ ಪುರೈಕೆ) ಅತಿ ಕಡಿಮೆ ಮಹತ್ತ್ವದ ಇಚ್ಛಾಪುರ್ತಿ ಯಾವುದೋ ಅದರ ಅಳತೆಗೆ ಮೌಲ್ಯ ಸರಿಹೊಂದುತ್ತದೆ ಎಂದು ಬೊಂ-ಬಾವರ್ಕ್ ಪ್ರತಿಪಾದಿಸಿದ್ದಾನೆ. ವೀಸರ್ ಮತ್ತು ಬೊಂ-ಬಾವರ್ಕ್ ಇಬ್ಬರೂ ಜೆವನ್ಸ್ ಸೃಷ್ಟಿಸಿದ ‘ಅಂತಿಮ ಉಪಯುಕ್ತತೆಯ ಸ್ಥಾನದಲ್ಲಿ ಅದಕ್ಕಿಂತ ಶ್ರೇಷ್ಠವೂ ಕಾಲಕ್ರಮೇಣ ಸರ್ವ ಪ್ರಚಲಿತವೂ ಆದ ಪರಿಸರದ ಅಥವಾ ಅಂಚಿನ ಉಪಯುಕ್ತತೆ’ (ಮಾರ್ಜಿನಲ್ ಯುಟಿಲಿಟಿ) ತತ್ತ್ವವನ್ನು ಆಸ್ಟ್ರಿಯನ್ ಪಂಥದಲ್ಲಿ ಸೇರಿಸಿಕೊಂಡದ್ದನ್ನು ಮರೆಯಬಾರದು. ಮಾರ್ಷಲ್ನ ಬೇಡಿಕೆಪುರೈಕೆ ಪ್ರತಿಪಾದನೆಯಲ್ಲಿ ಸರ್ವವ್ಯಾಪಿಯಾಗಿ ತದನಂತರ, ಅಣು ಅರ್ಥಶಾಸ್ತ್ರದ (ಮೈಕ್ರೊ ಎಕನಾಮಿಕ್ಸ್) ಊರುಗಂಬವಾಗಿ ನೆಲೆನಿಂತ ಪರಿಸರದ ಉಪಯುಕ್ತತೆ, ಅರ್ಥಶಾಸ್ತ್ರ ಚಿಂತನೆಯಲ್ಲಿ ಕೇವಲ ಒಂದು ನೂತನ ಪರಿಭಾಷೆಯನ್ನು ಮಾತ್ರವಲ್ಲದೆ, ನೂತನ ವಿಚಾರಸೂತ್ರವನ್ನೂ ಪ್ರೇರಿಸಿತೆಂದು ಹೇಳಬಹುದು.
ಉಪಯುಕ್ತತೆಗೆ ಯಾವ ನೈತಿಕ ಲೇಪವೂ ಇಲ್ಲ. ಅಂಬಲಿ, ಹರಳೋಲೆ, ಹೆಂಡ-ಇವು ಮೂರೂ ಉಪಯುಕ್ತ ವಸ್ತುಗಳೇ. ವಿನಿಮಯ ಸಂದರ್ಭಗಳಲ್ಲಿ ಮುಖ್ಯವಾದದ್ದು ಅಂತಿಮ ಉಪಯುಕ್ತತೆಯೇ ಹೊರತು ಒಟ್ಟು ಉಪಯುಕ್ತತೆ ಅಲ್ಲ. ನೂರಾರು ಪದಾರ್ಥಗಳು, ಸಾವಿರಾರು ಜನರು ಇರುವಲ್ಲಿ ಒಂದು ಕಾಲಕ್ಕೆ ಒಂದು ಮಾರುಕಟ್ಟೆಯಲ್ಲಿ ಒಂದೇ ಧಾರಣೆ ಹೇಗೆ ನಿಲ್ಲುತ್ತದೆಂಬ ಪ್ರಶ್ನೆಯನ್ನು ಉಪಯುಕ್ತತೆಯ ಸಿದ್ಧಾಂತಿಗಳು ಬಗೆಹರಿಸಿದ್ದಾರೆ. ನೂರು ಲೋಟ ಕಾಫಿಯಲ್ಲಿ ವ್ಯಕ್ತಿಗೆ ತಾನು ಸ್ವೀಕರಿಸುವ ಒಂದನೆಯದು ನೂರನೆಯದರಂತೆಯೇ ಇರುವುದರಿಂದ, ಎಲ್ಲ ನೂರು ಲೋಟಗಳ ದರವೂ ಸಮಾನವಾಗಿರುತ್ತದೆ. ಸರಕಿನ ಮೌಲ್ಯವು ನೀಡುವ ಅತಿ ಕಡಿಮೆ ಸುಖಲಾಭದ ಸಂದರ್ಭದಲ್ಲಿ ನಿರ್ಣಯಿತವಾಗುವುದೆಂಬ ಈ ಸಾಮಾನ್ಯ ತತ್ತ್ವವನ್ನು ಉತ್ಪಾದನೆ, ಅನುಭೋಗ ಮತ್ತು ವಿತರಣೆಯ ರಂಗಗಳಿಗೂ ಅನ್ವಯಿಸಬಹುದು. ಸ್ವತಂತ್ರ ಪೈಪೋಟಿಯ ಸನ್ನಿವೇಶದಲ್ಲಿ ಒಂದು ಸರಕು ಇನ್ನೊಂದು ಸರಕಿಗೆ ವಿನಿಮಯಿಸಲ್ಪಡುವ ಸಾಧ್ಯತೆ ಇರುವುದರಿಂದ ಸರಕಿನ ಮೌಲ್ಯ ಉತ್ಪಾದನೆಯ ವೆಚ್ಚಕ್ಕೆ ಸಮನಾಗಿರುತ್ತದೆ. ಸರಕುಗಳ ಅನುಭೋಗದಲ್ಲಂತೂ ಗ್ರಾಹಕ ತಾನು ಕೊಳ್ಳುವ ಸರಕುಗಳಲ್ಲಿ ಸದಾ ವ್ಯತ್ಯಾಸ, ಹೆಚ್ಚು ಕಡಿಮೆ ಮಾಡುತ್ತಲೇ ಇರುತ್ತಾನೆ. ವರಮಾನದ ವಿತರಣೆಯಲ್ಲಿ ಸಾಧ್ಯವಾದಷ್ಟು ಹೆಚ್ಚಿನ ತೃಪ್ತಿಯನ್ನು ಪಡೆಯುವ ದೃಷ್ಟಿಯಿಂದ ಬೇರೆ ಬೇರೆ ಸರಕುಗಳಿಗೆ ಆತ ಬೇರೆ ಬೇರೆ ಮಹತ್ತ್ವ ನೀಡಿರುತ್ತಾನೆ. ಸಮತೋಲಸ್ಥಿತಿಯನ್ನು ಮುಟ್ಟಿದಾಗ ಈಡೇರಿಸಿದ ಎಲ್ಲ ಬಯಕೆಗಳಿಗೂ ಆತ ಸಮಾನ ಮೌಲ್ಯವನ್ನಿಟ್ಟಿದ್ದಾನೆಂದು, ಕೊನೆಯಲ್ಲಿ ಈಡೇರಿಸಿದ ಇಚ್ಛೆಗಳು ಒಂದಕ್ಕೊಂದು ಸಮನಾಗಿರಬೇಕು ಎನ್ನುವಾಗ ಅಂತಿಮ ಉಪಯುಕ್ತತೆಯ ತತ್ತ್ವವನ್ನೇ ನಾವು ಕಾಣುತ್ತೇವೆ. ಅಮೆರಿಕದ ಅರ್ಥಶಾಸ್ತ್ರಜ್ಞ ಜೆ.ಬಿ. ಕ್ಲಾರ್ಕ್ ವಿತರಣೆಯ ರಂಗಕ್ಕೆ ಸೇರಿದ ಬಡ್ಡಿ, ಕೂಲಿ, ಗೇಣಿಗಳಿಗೂ ಈ ತತ್ತ್ವವನ್ನು ಅಳವಡಿಸಿದ್ದಾನೆ. ಕೊನೆಯ ಅಥವಾ ಪರಿಸರದ ಕೂಲಿಗಾರ ಎಷ್ಟು ಮೌಲ್ಯವನ್ನು ಉತ್ಪಾದಿಸುವನೋ ಅಷ್ಟು ಕೂಲಿ ಎಲ್ಲರಿಗೂ ಲಭ್ಯವಾಗುವುದು. ಮಾಲೀಕ ಕೂಲಿಯ ದರವನ್ನು ನಿರ್ಣಯಿಸುವುದು ಇಂಥ ಕನಿಷ್ಠ ಉಪಯೋಗಿ ಕೂಲಿಯವನ ಕರ್ತೃತ್ವಶಕ್ತಿಯಿಂದ, ಇಂಥವನಿಗಿಂತ ಹೆಚ್ಚು ಉತ್ಪಾದಿಸಬಲ್ಲ ಕೂಲಿಗಳಿಗೂ ಇವನಿಗೆ ದೊರೆಯುವಷ್ಟೇ ಕೂಲಿ ಸಿಗುತ್ತದೆ. ಅಭಿಜಾತ ಪಂಥದ ಕೆಲವು ಕೊರತೆಗಳನ್ನು ತುಂಬಿಸಿಕೊಟ್ಟು ಮೌಲ್ಯನಿರ್ಣಯಕ್ಕೆ ಒಂದು ಏಕೀಕೃತ ಮತ್ತು ಅಂತಿಮ ಕಾರಣವನ್ನು ವ್ಯಕ್ತಿನಿಷ್ಠ ತಳಹದಿಯಲ್ಲಿ ಶೋಧಿಸುವ ಸಾಹಸದಲ್ಲಿ ಆಸ್ಟ್ರಿಯನ್ ಪಂಥದವರು ಸಫಲರಾದರು. ಅಭಿಜಾತ ಮಾರ್ಗದವರಿಗೆ ಮೌಲ್ಯ ಶ್ರಮದ ಪ್ರಮಾಣವನ್ನು ಅವಲಂಬಿಸಿದ್ದರೆ ಆಸ್ಟ್ರಿಯನ್ ಪಂಥದವರಿಗೆ ಅದು ಉಪಯಕ್ತತೆಗೆ ಹೊಂದಿಕೊಂಡಿದೆ. ಅಭಿಜಾತ ಪಂಥದವರು ಒಮ್ಮೆ ಉಪಯುಕ್ತತೆಗೂ ಮತ್ತೊಮ್ಮೆ ಶ್ರಮ ಪ್ರಮಾಣಕ್ಕೂ ಶರಣು ಹೋಗುವುದನ್ನು ನೋಡಿದರೆ ಅವರಲ್ಲಿ ಏನೋ ದ್ವೈತವಿರುವಂತೆ ಸಂಶಯ ಬರುತ್ತದೆ. ಉದಾಹರಣೆಗೆ, ಅಭಿಜಾತ ಪಂಥದವರ ಗುರುವಾದ ರಿಕಾರ್ಡೊ ಮಗುದೊಮ್ಮೆ ತಯಾರಿಸಲಾಗದ (ಕಲಾವಿದರ ಚಿತ್ರ, ಮೂರ್ತಿ ಇತ್ಯಾದಿ) ಸರಕುಗಳಿಗೆ ವಿರಳತ್ವದಿಂದ ಮೌಲ್ಯವೆಂದು ಒಂದು ನಿಯಮವನ್ನೂ ಮತ್ತೆ ಮತ್ತೆ ತಯಾರಿಸಲಾಗುವ ಆರ್ಥಿಕ ಸರಕುಗಳಿಗೆ ಉತ್ಪಾದನೆಯ ವೆಚ್ಚವೇ ಮೌಲ್ಯಕಾರಣವೆಂದು ಬೇರೊಂದು ನಿಯಮವನ್ನೂ ಸ್ಥಾಪಿಸಿದ್ದಾನೆ. ಆದರೆ ಆಸ್ಟ್ರಿಯನ್ ಪಂಥದವರು ವೆಚ್ಚವನ್ನು ಉಪಯುಕ್ತತೆಯಲ್ಲಿಯೇ ಸಮಾವಿಷ್ಟಗೊಳಿಸಿ ವೈಜ್ಞಾನಿಕವಾದ ಅದ್ವೈತ ಸಿದ್ಧಾಂತವನ್ನು ಸ್ಥಾಪಿಸಿದ್ದಾರೆ. ಅಲ್ಲದೆ ರಿಕಾರ್ಡೊನ ಮೌಲ್ಯಸಿದ್ಧಾಂತ ಉತ್ಪಾದಿತ ಸರಕುಗಳಿಗೆ ಮಾತ್ರ ಸೀಮಿತವಾದದ್ದು; ಆಸ್ಟ್ರಿಯನ್ನರ ಪರಿಸರದ ಉಪಯುಕ್ತತೆಯ ಸೂತ್ರ ಉತ್ಪಾದನೆಯ ಅವಯವಗಳಾದ ಭೂಮಿ, ಬಂಡವಾಳ, ಶ್ರಮಗಳಿಗೂ ತರ್ಕಬದ್ಧವಾಗಿ ಅನ್ವಯವಾಗುತ್ತದೆ. ಮನುಷ್ಯನ ಆರ್ಥಿಕ ಚಟುವಟಿಕೆಗಳನ್ನು ವ್ಯಕ್ತಿನಿಷ್ಠ ದೃಷ್ಟಿಕೋನದಿಂದ ಅಳೆಯುವ ಆಸ್ಟ್ರಿಯನ್ ಪಂಥದವರು ಸ್ವಹಿತವನ್ನು ತಮ್ಮ ವಾದದ ಕೇಂದ್ರಸ್ಥಾನದಲ್ಲಿರಿಸಿ ಚಾರ್ವಾಕತನದ ನಿಂದೆಗೆ ತಮ್ಮನ್ನು ಗುರಿಪಡಿಸಿಕೊಂಡಿದ್ದಾರೆ. ಸುಖೈಕಸಾಧಕರೆಂಬ ಅಪವಾದವನ್ನು ಅವರು ಹೊರಬೇಕಾಗಿ ಬಂದಿದೆ. ಮನುಷ್ಯನ ಆರ್ಥಿಕ ಇಚ್ಛೆಗಳಿಗೆ ಸುಖಲಾಭವೇ ಪರಮೋದ್ದೇಶ ವೆಂದು ಸಾರುವ ತತ್ತ್ವದಿಂದಾಗಿ ಅವರು ಇಂಥ ಟೀಕೆಗಳಿಗೆ ಪಾತ್ರರಾಗಬೇಕಾಗಿದೆ. ಅವರ ಅತಿ ಪರಿಷ್ಕೃತ ಪರಿಸರದ ಉಪಯುಕ್ತತೆಯ ಸೂತ್ರವಾದರೂ ವಿಮರ್ಶೆಗೆ ಹೊರತಾಗಿಲ್ಲ. ಬಯಕೆಯಿಂದ ಸುಖಲಾಭವೆ? ಅಥವಾ ಸುಖದಾಸೆಯಿಂದ ಬಯಕೆಯೇ? ವೈಯಕ್ತಿಕ ಮೌಲ್ಯಾಂಕ ಕ್ರಿಯೆಯಲ್ಲಿ ವ್ಯಕ್ತಿನಿಷ್ಠವಾದದ್ದಕ್ಕೆ ಮಾತ್ರ ಪ್ರಾಧಾನ್ಯ ಕೊಡುವುದು ಹೇಗೆ? ವ್ಯಕ್ತಿಯ ಸಂಸ್ಕಾರ, ಅವನ ಸಮಾಜದ ರೂಢಿ, ಸಂಪ್ರದಾಯಗಳಿಗೆ ಯಾವ ಸ್ಥಾನವೂ ಇಲ್ಲವೇ? ವ್ಯಕ್ತಿಯ ಅಂತರಂಗನಿಷ್ಠ ಸ್ಪಂದನಗಳಿಗೂ ಹೊರಗಿನ ಮಾರುಕಟ್ಟೆಯ ಧಾರಣೆವಾಸಿ ಮತ್ತು ಬೆಲೆಗಳ ಸ್ಥಾಪನೆಗೂ ನಡುವೆ ಇರುವ ಅಂತರವನ್ನು ಕೂಡಿಸುವುದು ಹೇಗೆ? ಪರಿಸರವನ್ನು ಬಿಟ್ಟು ಸನ್ನಿವೇಶದಿಂದ ಪ್ರತ್ಯೇಕಿಸಲು ಸಾಧ್ಯವೇ? ಅದು ಒಟ್ಟು ಸನ್ನಿವೇಶದ ಅಂಕಸೂಚಿಯಲ್ಲವೇ? ಅಪರಿಪುರ್ಣ ಪೈಪೋಟಿ, ಹಣ ಮುಂತಾದ ಆರ್ಥಿಕ ಸನ್ನಿವೇಶಗಳ ಗೋಜಿಗೆ ಇವರು ಹೋಗಿಲ್ಲ ಎಂಬಂಥ ಅನೇಕ ಟೀಕೆಗಳಿಗೆ ಆಸ್ಟ್ರಿಯನ್ನರು ಒಳಗಾಗಿದ್ದಾರೆ. ಅಭಿಜಾತ ಪಂಥದವರು ಅಸಡ್ಡೆಯಿಂದ ಕಡೆಗಣಿಸಿದ ಅನೇಕ ಮಹತ್ತ್ವದ ವಿಷಯಗಳತ್ತ ಅರ್ಥಶಾಸ್ತ್ರದ ಒಲವನ್ನು ಹರಿಯಿಸಿದ ಶ್ರೇಯಸ್ಸು ಆಸ್ಟ್ರಿಯನ್ ಪಂಥದವರಿಗೆ ಸಲ್ಲುತ್ತದೆ. ಪರಿಸರದ ಉಪಯುಕ್ತತೆಯ ತತ್ತ್ವದ ದೆಸೆಯಿಂದ ಶುದ್ಧ ಅರ್ಥಶಾಸ್ತ್ರ ಉದಯವಾಯಿತು. ಸರಾಸರಿ ಅಂದಾಜು ಇತ್ಯಾದಿಗಳಿಂದ ಬಾಧಿತವಾಗಿ ಅರ್ಥವಿಜ್ಞಾನ ಒಂದು ನಿಶ್ಚಿತಜ್ಞಾನವೆಂಬ ಭ್ರಮೆಯನ್ನು ಹುಟ್ಟಿಸುತ್ತಿದ್ದ ಕ್ಲಾಸಿಕಲ್ ಪಂಥದ ಪ್ರಭಾವ ಕುಗ್ಗಿತು. ಅಲ್ಲದೆ ಶ್ರಮವೊಂದೇ ಮೌಲ್ಯ ಕಾರಣವೆಂಬ ಅಭಿಜಾತ ಪಂಥದ ಭ್ರಮೆಯನ್ನು ದೂರಮಾಡಿದ ಶ್ರೇಯಸ್ಸೂ ಆಸ್ಟ್ರಿಯನ್ನರಿಗೆ ಸಲ್ಲಬೇಕು. ಶ್ರಮೈಕಸಾಧ್ಯ ಮೌಲ್ಯವೆಂಬ ವಸ್ತುನಿಷ್ಠ ದೃಷ್ಟಿಕೋನದ ಸ್ಥಾನದಲ್ಲಿ ಆಸ್ಟ್ರಿಯನ್ ಪಂಥದವರು ನಿಲ್ಲಿಸಿದ ವ್ಯಕ್ತಿನಿಷ್ಠ ಮೌಲ್ಯ ಸರ್ವಗ್ರಾಹಿಯಾದ ಒಂದು ತತ್ತ್ವವಾಯಿತು. ಅಲ್ಪಾವಧಿ, ದೀರ್ಘಾವಧಿ ಎಂಬ ಕಾಲಮಾನಭೇದವಿಲ್ಲದೆ, ಒಮ್ಮೆ ಮಾತ್ರ ತಯಾರಿಸಲಾಗುವ ವಿರಳ ವಸ್ತು, ಪದೇ ಪದೇ ತಯಾರಿಸಲಾಗುವ ವಸ್ತು ಎಂಬ ಭೇದವೂ ಇಲ್ಲದೆ ಸರ್ವ ಸನ್ನಿವೇಶಗಳಿಗೂ ಏಕರೀತಿಯಲ್ಲಿ ಅನ್ವಯಿಸಬಹುದಾದ ಈ ಮುಖ್ಯತತ್ತ್ವ ಮನುಷ್ಯನ ಇಚ್ಛೆಗಳ ತೃಪ್ತಿಯನ್ನೂ ಆ ಇಚ್ಛೆಗಳಲ್ಲಿ ನಡೆಯುವ ಬದಲಾವಣೆ ಗಳನ್ನೂ ನಿರೂಪಿಸಿದ್ದಲ್ಲದೆ, ಅರ್ಥಶಾಸ್ತ್ರಕ್ಕೆ ವಿಜ್ಞಾನದ ಮೆರುಗನ್ನು ದಯಪಾಲಿಸಿತು ಎನ್ನಲೂಬಹುದು.
ಆ್ಯಸ್ಟ್ರಿಯನ್ ಪಂಥದ ತ್ರಿಮೂರ್ತಿಗಳೂ ಅವರ ಸಮಕಾಲೀನರೂ ಅಲ್ಲದೆ ಈಚಿನ ದಶಕಗಳಲ್ಲೂ ಹಲವರು ಅವರ ಮಾರ್ಗದಲ್ಲಿಯೇ ನಡೆದು ಆ ಪಂಥದ ಪೋಷಣೆ ಮಾಡಿದ್ದಾರೆ. ಲಡ್ವಿಗ್ ವಾನ್ ಮೀಸಸ್ ಹಣದ ಮೌಲ್ಯಮಾಪನಕ್ಕೂ ವ್ಯಾಪಾರಚಕ್ರದ ವಿಶ್ಲೇಷಣೆಗೂ ಪರಿಸರದ ಉಪಯುಕ್ತತೆಯನ್ನೂ ಬಳಸಿಕೊಂಡಿದ್ದಾನೆ. ಫ್ರೆಡರಿಕ್ ವಾನ್ ಹಯೆಕ್ ತನ್ನ ವಿಶಿಷ್ಟ ವ್ಯಾಪಾರಚಕ್ರ, ಬಂಡವಾಳ ಮತ್ತು ಬಡ್ಡಿಯ ಸಿದ್ಧಾಂತಗಳನ್ನು ಈ ಹಾದಿಯಲ್ಲೇ ಕಟ್ಟಿದ್ದಾನೆ. ಇಂಗ್ಲೆಂಡಿನಲ್ಲಿ ವಿಕ್ಸ್ಪೀಡ್ ಮತ್ತು ಎಡ್ಜ್ವರ್ತ್ ಹೇಗೋ ಅಮೆರಿಕದ ಜೆ.ಬಿ.ಕ್ಲಾರ್ಕ್ ಗಣಿತಶಾಸ್ತ್ರದ ರೀತ್ಯಾ ಪರಿಸರದ ಉಪಯುಕ್ತತೆಯನ್ನು ಸಾಧಾರಣವಾಗಿ ಸಮರ್ಥಿಸಿರುವುದಲ್ಲದೆ ಅದನ್ನು ಮುಂದಿನ ಮಜಲಿಗೆ ಒಯ್ದು ಮುಟ್ಟಿಸಿದ್ದಾನೆ.