ಆಸಿಂಟೊ
ಆಸಿಂಟೊ ಸ್ಪ್ಯಾನಿಷ್ ಭಾಷೆಯಲ್ಲಿ ಇದಕ್ಕೆ ಒಪ್ಪಂದ ಎಂಬರ್ಥವಿದೆ. ಗ್ರೇಟ್ ಬ್ರಿಟನ್ ಮತ್ತು ಸ್ಪೇನ್‍ಗಳ ನಡುವೆ ನಡೆದ ಆಸಿಂಟೊ ಒಪ್ಪಂದವನ್ನು (1713) ಈ ಪದ ಸೂಚಿಸುತ್ತದೆ. 16ನೆಯ ಶತಮಾನದ ಮಧ್ಯಭಾಗದಲ್ಲಿ ನೀಗ್ರೊ ಗುಲಾಮರನ್ನು ಸ್ಪ್ಯಾನಿಷ್ ಅಮೆರಿಕಕ್ಕೆ ಮಾರಾಟ ಮಾಡುವ ಸಂಬಂಧವಾಗಿಯೇ ಈ ಒಪ್ಪಂದವಾದದ್ದು. 1713ರಕ್ಕೂ ಮೊದಲು ಇಂಥ ಒಪ್ಪಂದಗಳನ್ನು ಸ್ಪೇನ್, ಪೋರ್ಚುಗಲ್ ಮತ್ತು ಫ್ರಾನ್ಸ್‍ನ ಖಾಸಗೀ ವ್ಯಕ್ತಿಗಳು ಮಾಡಿಕೊಳ್ಳುತ್ತಿದ್ದರು. ಅಧಿಕ ತೆರಿಗೆ, ಸರ್ಕಾರದ ಹಸ್ತಕ್ಷೇಪ ಮತ್ತು ವ್ಯಾಪಾರದಲ್ಲಿನ ಏರುಪೇರುಗಳು-ಇವು ಇಂಥ ಗುಲಾಮೀ ವ್ಯಾಪಾರವನ್ನು ಹೆಚ್ಚು ಲಾಭದಾಯಕವನ್ನಾಗಿ ಮಾಡಲು ಸಹಕಾರಿಯಾಗದಿದ್ದರೂ ಸ್ಪ್ಯಾನಿಷ್ ಅಮೆರಿಕದೊಡನೆ ವ್ಯಾಪಾರವಹಿವಾಟುಗಳಲ್ಲಿ ಭಾಗವಹಿಸಲು ಮತ್ತು ಸಾಧ್ಯವಾದಷ್ಟು ಚಿನ್ನವನ್ನು ಗಳಿಸಲು ವಿದೇಶೀಯರಿಗೆ ಒಂದು ಅವಕಾಶವನ್ನು ಕಲ್ಪಿಸುತ್ತಿದ್ದುವು. ಈ ವ್ಯಾಪಾರವನ್ನು ವಿರೋಧಿಸಿ ಬ್ರಿಟಿಷರು ಯುಟ್ರೆಚ್ ಒಪ್ಪಂದ ಮಾಡಿಕೊಂಡರು. ಒಪ್ಪಂದದಿಂದ ತಾವು ಪಡೆದುಕೊಂಡ ಅಧಿಕಾರವನ್ನು ಬ್ರಿಟಿಷರು ದುರುಪಯೋಗಪಡಿಸಿಕೊಂಡದ್ದರ ಸಲುವಾಗಿ ಸೌತ್ ಸೀಬಬಲ್ ಎಂಬ ಸಟ್ಟಾ ವ್ಯಾಪಾರ ಹುಟ್ಟಿಕೊಂಡು, ಕಳ್ಳಪೇಟೆಗಳು ಬಲಿತು ಕ್ರಮೇಣ ಯುದ್ಧಕ್ಕೆ ಅವಕಾಶವಾಯಿತು. ಏ-ಲಾ-ಶಾಪೇಲ್ ಎಂಬ ಒಪ್ಪಂದದಿಂದಾಗಿ ಇಂಥ ವ್ಯಾಪಾರ ಕೆಲವು ಕಾಲ ನಡೆದುಬಂದರೂ ಸ್ಪ್ಯಾನಿಷರೂ ಬ್ರಿಟಿಷರಿಗೆ 1 ಲಕ್ಷ ಪೌಂಡ್ ಹಣ ಕೊಟ್ಟಿದ್ದರಿಂದ ಗುಲಾಮೀ ವ್ಯಾಪಾರ ಸಂಬಂಧಿಯಾದ ಈ ಒಪ್ಪಂದ ರದ್ದಾಯಿತು (1750).
ಉಲ್ಲೇಖಗಳು
ಬದಲಾಯಿಸಿ- ↑ https://www.britannica.com/topic/asiento-de-negros
- ↑ www.spanishcentral.com/translate/asiento