ಸಂಪುರ್ಣವಾಗಿ ಸ್ವಂತ ಆಡಳಿತಾಧಿಕಾರವಿಲ್ಲದ ಪ್ರದೇಶಗಳು (ಡಿಪೆಂಡೆನ್ಸೀಸ್). ಸಾಮಾನ್ಯವಾಗಿ ಆಳುವ ರಾಷ್ಟ್ರದ ಪ್ರದೇಶವೂ ಆಶ್ರಿತರಾಜ್ಯದ ಪ್ರದೇಶವೂ ಪರಸ್ಪರ ಭಿನ್ನವಾಗಿಯೂ ದೂರದೂರದಲ್ಲೂ ಇದ್ದು, ಈ ಎರಡು ಪ್ರದೇಶಗಳಲ್ಲಿ ವಾಸಿಸುವ ಜನರು ಭಿನ್ನ ಬುಡಕಟ್ಟುಗಳಿಗೆ ಸೇರಿದವರಾಗಿರುತ್ತಾರೆ. ಆಶ್ರಿತ ಪ್ರದೇಶಗಳ ಮೇಲೆ ಆಳುವ ರಾಷ್ಟ್ರಗಳು ಹೊಂದಿರುವ ಹತೋಟಿ ಒಂದೇ ಸಮನಾಗಿರುವುದಿಲ್ಲ. ಕೆಲವು ಆಶ್ರಿತರಾಜ್ಯಗಳ ಆಡಳಿತದ ಸಂಪುರ್ಣ ಹೊಣೆಯನ್ನೆಲ್ಲ ಆಳುವ ರಾಷ್ಟ್ರವೇ ವಹಿಸಬಹುದು; ಆಳುವ ರಾಷ್ಟ್ರದ ಸರ್ಕಾರದಿಂದ ನಿಯೋಜಿತರಾಗಿ ಬಂದ ಅಧಿಕಾರಿಗಳೇ ಆ ಪ್ರದೇಶಗಳ ಆಡಳಿತ ನಿರ್ವಹಿಸಬಹುದು. ಇನ್ನೂ ಕೆಲವು ಪ್ರದೇಶಗಳಲ್ಲಿ ಅಲ್ಲಿನ ಜನರು ಸ್ಥಳೀಯ ನಾಯಕರ ಮೂಲಕವಾಗಿ ಪ್ರಭುತ್ವ ನಡೆಸಬಹುದು. ಇಂಥ ಆಳಿಕೆ ಪರೋಕ್ಷ. ಇನ್ನೂ ಕೆಲವು ಪ್ರದೇಶಗಳಲ್ಲಿ ಜನರ ಪ್ರಾತಿನಿಧ್ಯ ಹೊಂದಿದ ಆಡಳಿತ ವ್ಯವಸ್ಥೆ ಏರ್ಪಟ್ಟಿರಬಹುದು. ಇಂಥ ಪ್ರದೇಶಗಳಲ್ಲಿ ಆಡಳಿತ ನಡೆಸುವ ಸರ್ಕಾರಗಳಿಗೆ ಅಲ್ಲಿನ ಆಂತರಿಕ ವ್ಯವಹಾರಗಳಲ್ಲಿ ಬಹಳಮಟ್ಟಿಗೆ ಸ್ವಯಮಾಡಳಿತಾಧಿಕಾರವಿರುತ್ತದೆ. ಆಶ್ರಿತರಾಜ್ಯವನ್ನು ವಸಾಹತು ಎಂಬ ಅರ್ಥದಲ್ಲೂ ಬಳಸುವುದುಂಟು. ಆದರೆ ಎರಡಕ್ಕೂ ಸೂಕ್ಷ್ಮವ್ಯತ್ಯಾಸಗಳುಂಟು. ಆಶ್ರಿತ ರಾಜ್ಯಗಳ ಹಿತರಕ್ಷಣೆ ಮಾಡಿ, ಅವುಗಳ ಮೇಲ್ವಿಚಾರಣೆ ನಡೆಸುವ ಕೆಲಸ ಈಗ ಹೆಚ್ಚು ಹೆಚ್ಚಾಗಿ ವಿಶ್ವಸಂಸ್ಥೆಯ ಹೊಣೆಯಾಗುತ್ತಿದೆ.