ಆಶಾಭಂಗ ಮತ್ತು ದುರಾಕ್ರಮಣ
ಆಶಾಭಂಗಕ್ಕೂ (ಫ್ರಸ್ಟ್ರೇಷನ್), ದುರಾಕ್ರಮಣಕ್ಕೂ (ಅಗ್ರೆಷನ್) ನಡುವೆ ಇರುವ ಸಂಬಂಧವನ್ನು ಅರಿಯಬೇಕಾದರೆ, ಇವೆರಡು ಭಾವನೆಗಳನ್ನೂ ಪ್ರತ್ಯೇಕವಾಗಿ ಪರೀಕ್ಷಿಸುವುದೊಳ್ಳೆಯದು. ಈ ಭಾವನೆಗಳೇನೂ ಹೊಸವಲ್ಲ; ಅನೇಕ ವೇಳೆ ನಿಷ್ಕೃಷ್ಟಾರ್ಥದಲ್ಲಲ್ಲದಿದ್ದರೂ ಸಾಮಾನ್ಯಾರ್ಥದಲ್ಲಿ ಇವು ಪದೇ ಪದೇ ತಲೆ ಹಾಕುತ್ತಲೇ ಇರುತ್ತವೆ.
ಆಶಾಭಂಗವೆಂಬುದು ವ್ಯಕ್ತಿಯೊಬ್ಬನ ಮಾನಸಿಕಸ್ಥಿತಿ. ಒಂದು ಜೀವ ಅತ್ಯಾವಶ್ಯಕವಾದ ತನ್ನ ಕೊರತೆಯನ್ನು ತುಂಬಿಕೊಳ್ಳಲು ಹೊರಟಾಗ ನಡುವೆ ಏಗಲಾರದ ಅಡೆತಡೆಗಳು ಬಂದರೆ ಅದರ ಆಶೆಗೆ ಭಂಗವುಂಟಾಗುತ್ತದೆ. ಕೆಲವು ಸಂಶೋಧಕರು ಆಶಾಭಂಗಕ್ಕೆ ಈ ರೀತಿಯಾಗಿ ಲಕ್ಷಣ ಹೇಳಿದ್ದಾರೆ: ಗುರಿಯನ್ನು ಸಾಧಿಸುವ ಪ್ರಯತ್ನಕ್ಕೆ ಭಂಗವುಂಟಾದಾಗ ಮೂಡುವ ಮನಸ್ಥಿತಿ. ಆವಶ್ಯಕವೆನಿಸಿದ ಆಶೆಯೊಂದನ್ನು ಪುರೈಸಿಕೊಳ್ಳಲಾಗದಂತೆ ಮಾಡುವ ಅಡೆತಡೆಗಳಿಂದ ಹುಟ್ಟುವ ಅಸಂತುಷ್ಟಿ. ಆಶಾಭಂಗದಲ್ಲಿ ಎರಡು ಭಾವನೆಗಳು ಅಡಕವಾಗಿವೆ: ಫಲವಂಚನೆ ಮತ್ತು ವ್ಯಕ್ತಿತ್ವಭಂಗ. ಸತತವಾದ ಸೋಲಿನಿಂದ ಕಲಿವಿನ ಪ್ರಕ್ರಿಯೆಗಳು ನಿಂತುಹೋಗಿ ಹೊಂದುವಣೆಯ ತಂತ್ರಗಳು ಕಾರ್ಯೋನ್ಮುಖವಾದಾಗ ಉಂಟಾಗುವ ಮನಸ್ಥಿತಿಯನ್ನು ಆಶಾಭಂಗ ನಿರ್ದೇಶಿಸುತ್ತದೆ. ಆಶಾಭಂಗವನ್ನುಂಟುಮಾಡುವ ಪರಿಸ್ಥಿತಿಯಲ್ಲಿ ಮೂರು ಅಂಗಗಳಿವೆ: ಗುರಿ, ಅದನ್ನು ಸಾಧಿಸುವ ಯತ್ನ ಮತ್ತು ಆಗಬರುವ ಅಡಚಣೆಗಳು ಅಥವಾ ಅಡೆತಡೆಗಳು. ಆಶಾಭಂಗವನ್ನು ತರಲು ಇವುಗಳಲ್ಲಿ ಪ್ರತಿಯೊಂದೂ ಪ್ರಮುಖಪಾತ್ರ ವಹಿಸುತ್ತದೆ. ಒಂದು ಕೊರತೆ, ಆವಶ್ಯಕತೆ ಅಥವಾ ವ್ಯಕ್ತಿಯನ್ನು ಕುರಿತ ಶ್ಲಾಘನೆಗಳು ಆಶಾಭಂಗಕ್ಕೆ ಗುರಿಯಾಗಿರಬಹುದು. ಯತ್ನವೆಂದರೆ ಗುರಿಯನ್ನು ಮುಟ್ಟಲು ವ್ಯಕ್ತಿ ತನ್ನೊಳಗಾಗಲೀ ಹೊರಗಾಗಲೀ ಮಾಡುವ ಸಾಧನೆ. ಪ್ರಯತ್ನವನ್ನು ವಿಫಲಗೊಳಿಸುವ ಅಡಚಣೆ ಒಂದು ವಸ್ತುವಾಗಿರಬಹುದು, ಒಬ್ಬ ವ್ಯಕ್ತಿಯಾಗಿರಬಹುದು. ಅದು ಹೊರಗಣದಾಗಿರಬಹುದು, ಒಳಗಿನದಾಗಿರಬಹುದು. ಇದರ ಫಲವಾಗಿ, ಆ ಪ್ರಯತ್ನವನ್ನು ಮಾಡುವ ಮನುಷ್ಯ ತನ್ನ ಗುರಿ ಮುಟ್ಟಿ ಆ ಫಲವನ್ನು ಹೊಂದಲಾರದವನಾಗುತ್ತಾನೆ. ಗುರಿ ಮುಟ್ಟುವುದರಲ್ಲಿ ಜಯಶಾಲಿಯಾದ ಮನುಷ್ಯ ಸುಖಿಯೂ ಸಂತುಷ್ಟನೂ ಆಗುತ್ತಾನೆ; ಗುರಿ ಮುಟ್ಟದಿದ್ದರೆ ಅಥವಾ ಗುರಿ ಮುಟ್ಟಲಾಗದಂಥ ಅಡ್ಡಿಗೊಳಗಾದರೆ ಆಗ ಆತ ಅಸುಖಿಯಾಗಿ ಕುಗ್ಗಿಹೋಗುತ್ತಾನೆ. ಗುರಿಮುಟ್ಟಲು ಅಡ್ಡಿ ಬಂದಾಗ ಉಂಟಾದ ಪರಿಸ್ಥಿತಿಯನ್ನು ಆಶಾಭಂಗ ಪರಿಸ್ಥಿತಿ ಎಂದು ಕರೆಯುವುದು ವಾಡಿಕೆ. ಆಶಾಭಂಗದ ಪರಿಸ್ಥಿತಿಗಳನ್ನು ವಿಘ್ನಗಳ ಆಧಾರದ ಮೇಲೆ ಬೇರೆ ಬೇರೆ ವರ್ಗಗಳಾಗಿ ವಿಂಗಡಿಸಬಹುದು. ವಿಘ್ನ ನಿಷ್ಕ್ರಿಯವಾಗಿರಬಹುದು; ಇಲ್ಲ ಸಕ್ರಿಯವಾಗಿರಬಹುದು. ನಿಷ್ಕ್ರಿಯವಿಘ್ನ-ತಾನೇ ಉಗ್ರರೂಪವನ್ನು ತೋರದಿದ್ದರೂ ತನ್ನನ್ನು ನಿವಾರಿಸಲು ಅಸಾಧ್ಯವೆ ನಿಸುವ ರೂಪವನ್ನು ಪ್ರಕಟಿಸಬಹುದು. ಉದಾಹರಣೆಗೆ, ಹಸಿದವ ಆಹಾರ ತುಂಬಿ ಬೀಗ ಹಾಕಿದ ಕೋಣೆಯ ಬಳಿ ನಿಂತಿರುವುದು. ನಿಷ್ಕ್ರಿಯವಿಘ್ನಗಳ ಹಾಗೆ ಸಕ್ರಿಯವಿಘ್ನಗಳಿಗೆ ತಮ್ಮನ್ನು ಅತಿವರ್ತಿಸದಂತೆ ತಡೆದಿಡುವ ಸಾಮರ್ಥ್ಯವಿರುವುದರ ಜೊತೆಗೆ ಅವು ಸ್ವರೂಪತಃ ಅಪಾಯಕಾರಿಗಳೂ ಆಗಿವೆ. ಉದಾಹರಣೆಗೆ, ಹಸಿದಿರುವವನೂ ನಿರ್ಗತಿಕನೂ ಆದವನೊಬ್ಬ ಅನ್ನವಿರುವ ಜಾಗಕ್ಕೆ ಹೋಗದಂತೆ ತಡೆದಿಡುವ ಪೊಲೀಸ್ ನೌಕರ. ನಿಷ್ಕ್ರಿಯ ವಿಘ್ನಗಳು ಯಾವ ವಿಷಯಕ್ಕೋಸ್ಕರ ಆಶಾಭಂಗವುಂಟಾಯಿತೋ ಆ ವಿಷಯಕ್ಕೆ ಮಾತ್ರ ಸಂಬಂಧಿಸಿವೆ; ಸಕ್ರಿಯವಿಘ್ನಗಳಾದರೆ ತತ್ಕ್ಷಣದಲ್ಲಿ ಆತ್ಮರಕ್ಷಣೆಗೆ ಸಂಬಂಧಪಟ್ಟ ಇತರ ಆವಶ್ಯಕತೆಗಳನ್ನೂ ಒಳಗೊಳ್ಳುತ್ತವೆ. ವಿಘ್ನಗಳು ಹೊರಗಿರಬಹುದು, ಇಲ್ಲ ಒಳಗಿರಬಹುದು. ಆದ್ದರಿಂದ ಅವುಗಳಲ್ಲಿ ಬಾಹ್ಯ ಮತ್ತು ಆಂತರಿಕಗಳೆಂಬ ವ್ಯತ್ಯಾಸಗಳುಂಟು. ನಿಷ್ಕ್ರಿಯವಾಗಿರುವ ಬಾಹ್ಯ ವಿಘ್ನಗಳು ಯಾವುವೆಂದರೆ, ಮನುಷ್ಯನಿಗೂ ಆತನ ಗುರಿಗೂ ನಡುವೆ ತೋರುವ ಜಡವಸ್ತುಗಳು. ಸಕ್ರಿಯವಾದ ಹೊರಗಿನ ಅಡಚಣೆಗಳಾವುವೆಂದರೆ, ಒಬ್ಬಾತನಿಗೆ, ತನ್ನ ಗುರಿಯಿಂದ ದೂರವಿರುವಂತೆ ಬೆದರಿಕೆ ಹಾಕುವುದು. ಮೇಲೆ ಹೇಳಿದ ಎರಡು ಉದಾಹರಣೆಗಳೂ ಇವೆರಡೂ ವಿಘ್ನಗಳನ್ನು ಚಿತ್ರಿಸುತ್ತವೆ. ಮನುಷ್ಯನ ಅಸಾಮರ್ಥ್ಯ, ಹೀನಭಾವ, ಸಾಕಷ್ಟು ಯೋಗ್ಯತೆ ಇಲ್ಲದಿರುವಿಕೆ-ಇವು ಸಾಮಾನ್ಯವಾಗಿ ಆಂತರಿಕ ನಿಷ್ಕ್ರಿಯವಿಘ್ನಗಳು. ಒಂದನ್ನು ಕೊರಗಿಸದೆ ಮತ್ತೊಂದನ್ನು ಸಂತುಷ್ಟಿಗೊಳಿಸಲಾಗದಂಥ ಎರಡು ಕಾಮನೆಗಳು ಒಟ್ಟಿಗೆ ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ಪ್ರಸಂಗದಲ್ಲಿ ಆಂತರಿಕ ಸಕ್ರಿಯ ವಿಘ್ನಗಳೇಳುತ್ತವೆ. ಉದಾಹರಣೆಗೆ, ಒಬ್ಬ ಮನುಷ್ಯ ಒಂದು ವಸ್ತುವನ್ನು ಕದಿಯಲು ಆಶಿಸುತ್ತಾನೆ, ಆದರೆ ಆತನ ಮನಸ್ಸು ನೀತಿಯ ಹಿಡಿತಕ್ಕೆ ಸಿಕ್ಕಿದ್ದು ಆ ಕೆಲಸಕ್ಕೆ ಅವನನ್ನು ಪ್ರೋತ್ಸಾಹಿಸುತ್ತಿಲ್ಲ. ಆಶೆಗೆ ಭಂಗ ಬಂದಾಗ ವ್ಯಕ್ತಿ ಅದರ ಸಾಫಲ್ಯಕ್ಕಾಗಿ ಕೈಗೊಳ್ಳುವ ಅಕ್ರಮ ಕೆಲಸ ಕಾರ್ಯಗಳನ್ನು ದುರಾಕ್ರಮಣವೆನ್ನಬಹುದು. ಜಗಳಗಂಟಿತನ ಅಥವಾ ಮೇಲೆ ಬೀಳುವ ಹವ್ಯಾಸಗಳ ಭಾವನೆಗಳನ್ನು ಮೆಕ್ಡುಗಲ್ ಮನಶ್ಶಾಸ್ತ್ರದೊಳಕ್ಕೆ ತಂದ. ಪ್ರಣಯ, ಹಸಿವು ಮುಂತಾದ ಸಹಜಪ್ರೇರಣೆಗಳು ಭಂಗಕ್ಕೊಳಗಾದಾಗ ಸಂಘರ್ಷಣಾ ಪ್ರವೃತ್ತಿ ಉದ್ಭವಿಸುವುದು. ಈ ಸಹಜ ಪ್ರವೃತ್ತಿ ಎಲ್ಲ ಪ್ರಾಣಿಗಳಲ್ಲೂ ಇರುತ್ತದೆ. ಅನಂತರ ಫ್ರಾಯ್ಡ್ ಥನಾಟೋಸ್ (ಡೆತ್-ಸಾವು) ಘರ್ಷಣೆಯ ಸಹಜವರ್ತನೆ ಎಂಬ ಪರಿಭಾವನೆಯನ್ನು ಸಂಸ್ಥಾಪಿಸಿದ. ಇದೊಂದು ಸ್ವತಂತ್ರವಾದ ವಿನಾಶಕಾರಕ ಪ್ರೇರಣೆ. ಈರೋಸ್ ಎಂದರೆ ಕಾಮ ಮತ್ತು ಜೀವಪ್ರೇರಣೆಯನ್ನು ನೇರವಾಗಿ ಇದಿರಿಸುತ್ತ ನಿಂತಿರುವಂಥದು. ಈ ಎರಡು ಪ್ರೇರಣೆಗಳ ಸಮತೂಕ ತಪ್ಪಿದರೆ ಆಗ ಮೃತ್ಯು ಸಂಭವಿಸಬಹುದು. ಇದು ಒಳಸರಿದ ಘರ್ಷಣೆಯಲ್ಲಿ (ಇದರ ಅಂತಿಮ ಸ್ವರೂಪ ಆತ್ಮಹತ್ಯೆ) ಬಹಿರಂಗವಾಗಿ ವ್ಯಕ್ತವಾಗುವ ಘರ್ಷಣೆಯ ಸ್ವರೂಪ ಕೊಲೆ. ಘರ್ಷಣೆಯ ಪ್ರಕಟಣೆ ಯಾವ ರೂಪದಲ್ಲಾಗುತ್ತದೆ ಎಂಬುದು ಮೂರು ಅಂಶಗಳನ್ನು ಅವಲಂಬಿಸಿದೆ:
- ಅಂತಃಕರಣದ ಅಥವಾ ಆತ್ಮಸಂಯಮದ ವಿಶಿಷ್ಟ ಸಾಮರ್ಥ್ಯ ಮತ್ತು ಸ್ವರೂಪ
- ವ್ಯಕ್ತಿ ತಾನೇ ಕಟ್ಟಿರುವ ಅಹಮಾದರ್ಶ,
- ಬಾಹ್ಯಲೋಕದ ಪರಿಸ್ಥಿತಿ.
ಒಂದು ಪ್ರಾಣಿಸಂಸ್ಥೆಯನ್ನಾಗಲೀ ಅಥವಾ ಅದರ ಪ್ರತಿನಿಯುಕ್ತವನ್ನಾಗಲೀ ಕಷ್ಟಕ್ಕೀಡು ಮಾಡುವ ಗುರಿಯುಳ್ಳ ಪ್ರಯತ್ನವೇ ದುರಾಕ್ರಮಣವೆಂದು ಡಲಾರ್ಡ್ ಹೇಳಿದ್ದಾನೆ. ಘರ್ಷಣೆ ಮೇಲೆದ್ದು ತೋರುವ ನಡೆವಳಿಕೆಗಳಲ್ಲಿ ಮಾತ್ರವಲ್ಲದೆ ಅದು ಕಲ್ಪನೆ, ಕನಸು ಅಥವಾ ಸೇಡು ತೀರಿಸಿಕೊಳ್ಳುವ ಯುಕ್ತ ಹಂಚಿಕೆಗಳಲ್ಲೂ ಇರಬಹುದು. ಯಾವುದು ಆಶಾಭಂಗಕ್ಕೆ ಕಾರಣವೋ ಆ ವಸ್ತುವಿನತ್ತ ಅದು ಮುಖ ಮಾಡಿರಬಹುದು ಅಥವಾ ಯಾವ ತಪ್ಪನ್ನೂ ಮಾಡದ ಸಾಧುವಿನತ್ತಲೇ ಸಾರಬಹುದು ಅಥವಾ ಸ್ವಪೀಡನರತಿ, ಹುತಾತ್ಮತೆ ಅಥವಾ ಆತ್ಮಹತ್ಯೆಗಳ ಕಡೆಯೂ ಹೊರಳಬಹುದು. ಆಶಾಭಂಗಕ್ಕೂ ಘರ್ಷಣೆಗೂ ಕಾರ್ಯಕಾರಣ ಸಂಬಂಧ ಸಾರ್ವತ್ರಿಕವಾಗಿದ್ದರೂ ಎರಡು ಭಾವನೆಗಳನ್ನೂ ವಿಂಗಡಿಸಿ ಅವಕ್ಕೆ ಸ್ವತಂತ್ರವಾದ ಲಕ್ಷಣವನ್ನು ಹೇಳಿದ್ದಾರೆಂಬುದನ್ನು ಮುಖ್ಯವಾಗಿ ಗಮನಿಸಬೇಕು. ಈಗ ಆಶಾಭಂಗ ಮತ್ತು ಘರ್ಷಣೆಗಳೆರಡಕ್ಕೂ ಇರುವ ಪರಸ್ಪರಾವಲಂಬಿಯಾದ ಸಂಬಂಧವನ್ನು ಗುರುತಿಸೋಣ. ಘರ್ಷಣೆ ಆಶಾಭಂಗದ ಫಲ ಎಂಬುದನ್ನು ಮೊದಲು ಪರಿಭಾವಿಸಿದವ ಫ್ರಾಯ್ಡ್ ಎಂಬಾತ. ಈ ಪರಿಭಾವನೆ ಡಲಾರ್ಡ್ 1939ರಲ್ಲಿ ಪ್ರಕಟಿಸಿದ ಆಶಾಭಂಗ ಮತ್ತು ದುರಾಕ್ರಮಣ ಎಂಬ ಪುಸ್ತಕದ ತಳಹದಿಯಾಯಿತು. ಆಶಾಭಂಗದ ಪರಿಣಾಮವೇ ಇಂಥ ಘರ್ಷಣೆ ಎಂಬ ಭಾವನೆಯಿಂದ ಅದು ಮೊದಲಾಗುತ್ತದೆ. ಹೆಚ್ಚು ನಿಷ್ಕೃಷ್ಟವಾಗಿ ಈ ಪ್ರಮೇಯವನ್ನು ರೂಪಿಸಿದಾಗ, ಘರ್ಷಣಾತ್ಮಕವಾದ ನಡೆವಳಿಕೆ ತನ್ನ ಬೆನ್ನಹಿಂದೆ ಆಶಾಭಂಗವಿರುವುದನ್ನು ತೋರುತ್ತದೆ; ಇದನ್ನೇ ತಿರುಗಿಸಿ ಹೇಳಬೇಕಾದರೆ, ಆಶಾಭಂಗವಿದ್ದರೆ ಯಾವುದಾದರೊಂದು ರೂಪದಲ್ಲಿ ಘರ್ಷಣೆ ತಲೆದೋರುತ್ತದೆ. ಗ್ರಂಥಕರ್ತರು ಈ ಕಲ್ಪನೆಗೆ ಪ್ರಾಯೋಗಿಕ ಚಿಕಿತ್ಸಾ ಮತ್ತು ಸಾಮಾಜಿಕ ಮನಶ್ಶಾಸ್ತ್ರದಿಂದ ಸಾಕ್ಷ್ಯವನ್ನು ಎತ್ತಿಕೊಡಲು ಪ್ರಯತ್ನಿಸಿದ್ದಾರೆ. ಆಶಾಭಂಗಕ್ಕೂ ಘರ್ಷಣೆಗೂ ಇರುವ ಸಂಬಂಧದ ಬಗ್ಗೆ ಎರಡು ಮೂಲ ಕಲ್ಪನೆಗಳು ಉಕ್ತವಾಗಿವೆ. ಮೊದಲನೆಯದಾಗಿ ಆಶಾಭಂಗದ ಅನುಭವದ ಪರಿಮಾಣಕ್ಕೆ ತಕ್ಕಂತೆ ಘರ್ಷಣೆಯನ್ನು ಪ್ರಚೋದಿಸುವ ಪ್ರೇರಣಾಬಲ ವ್ಯತ್ಯಾಸ ಹೊಂದುತ್ತದೆ. ಎಂದರೆ, ಆಶಾಭಂಗಾನುಭವದ ತೀವ್ರತೆಗೆ ತಕ್ಕಂತೆ ಘರ್ಷಣಾ ಪ್ರತಿಕ್ರಿಯೆ ಹೊಂದಿಕೊಂಡಿದೆ. ಎರಡನೆಯದಾಗಿ, ಘರ್ಷಣೆಯನ್ನು ಪ್ರಕಟಿಸುವ ಕ್ರಿಯೆಯ ನಿರೋಧಶಕ್ತಿ ಆ ಕಾರ್ಯದ ಫಲವಾಗಿ ನಿರೀಕ್ಷಿಸುವ ಶಿಕ್ಷೆಯ ಪ್ರಮಾಣಕ್ಕೆ ಅನುಗುಣವಾಗಿ ನೇರವಾಗಿ ವ್ಯತ್ಯಾಸ ಹೊಂದುತ್ತದೆ. ಘರ್ಷಣೆಯ ಪ್ರಕಟಣೆಯಿಂದ ಆಶಾಭಂಗ ಹೆಚ್ಚುತ್ತದೆಯೇ ವಿನಾ ಕುಗ್ಗುವುದಿಲ್ಲವೆಂಬುದು ಅನುಭವದಿಂದ ತಿಳಿದುಬಂದರೆ ಆಗ ಆ ಆಶಾಭಂಗಕಾರಕ ವ್ಯಕ್ತಿಯ ಮೇಲೆ ಪ್ರಯುಕ್ತವಾಗಬೇಕಾದ ಘರ್ಷಣಾಕ್ರಿಯೆಯೇ ನಿರುದ್ಧವಾಗುತ್ತದೆ. ಇಲ್ಲದಿದ್ದರೆ, ಇಬ್ಬರಿಗೂ ಸಂಬಂಧಪಡದೆ ತನ್ನ ಪಾಡಿಗೆ ತಾನಿರುವ ಮೂರನೆಯವನತ್ತ ತಿರುಗುತ್ತದೆ. 1939ರಿಂದೀಚೆಗೆ, ಆಶಾಭಂಗ ಮತ್ತು ದುರಾಕ್ರಮಣದ ಕಲ್ಪನೆಯ ವಿಷಯದಲ್ಲಿ ತುಂಬ ಕುತೂಹಲಕಾರಕ ಅಂಶಗಳು ಪ್ರಕಟವಾಗಿವೆ. ಆಶಾಭಂಗ ಅನೇಕ ಭಿನ್ನ ಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ; ಘರ್ಷಣೆಯ ಯಾವುದೋ ಒಂದು ಪ್ರಕಾರದ ಪ್ರಚೋದನೆ ಅವುಗಳಲ್ಲೊಂದು ಎಂದು ಮಿಲ್ಲರ್ ಹೇಳಿದ್ದಾನೆ. ಯಾವ ಪರಿಸ್ಥಿತಿಯಲ್ಲಿ ಆಶಾಭಂಗ ಘರ್ಷಣೆಗೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ಕಂಡುಹಿಡಿಯಲು ಕೆಲವು ಪ್ರಯೋಗಗಳು ನಡೆದಿವೆ. ನಿರಾಶನಾದವ ಗುರಿಗೆ ತೀರ ಹತ್ತಿರವಿದ್ದಾಗ, ಆಶಾಭಂಗಕ್ಕೆ ಕಾರಣವಾದ ಅಂಶ ಅಷ್ಟು ಕಟ್ಟುನಿಟ್ಟಾಗಿಲ್ಲದಾಗ ಒದಗಬಹುದಾದ ಶಿಕ್ಷೆಯ ತಿಳಿವಳಿಕೆಯನ್ನವಲಂಬಿಸಿ, ಆರ್ಥಿಕ ಪರಿಸ್ಥಿತಿಗಳಿಗನುಗುಣವಾಗಿ ವ್ಯಕ್ತಿಯ ಸಾಮಾಜಿಕ ಅಂತಸ್ತು ಮತ್ತು ತನ್ನ ಗುರಿಯ ವಿಚಾರದಲ್ಲಿ ಇರುವ ನೀತಿ, ನಂಬಿಕೆಗಳಿಗನುಗುಣವಾಗಿ ದುರಾಕ್ರಮಣ ಮನೋಧರ್ಮ ಕೆಲಸಮಾಡುತ್ತದೆ. ಅನೇಕವೇಳೆ ಆಶಾಭಂಗ ಘರ್ಷಣೆಗೆ ಎಡೆಮಾಡಿಕೊಡಬಹುದಾದರೂ ಎಲ್ಲ ಘರ್ಷಣೆಗೂ ಆಶಾಭಂಗವೇ ಕಾರಣವಾಗಬೇಕಾದ್ದಿಲ್ಲ. ದಿನಬಳಕೆಯ ಮಾತಿನಲ್ಲಿ ದುರಾಕ್ರಮ ಣಕ್ಕೆ ವಿರುದ್ಧವಾದ ಭಾವನೆ ಆತ್ಮರಕ್ಷಣೆ ಎನ್ನಿಸಿಕೊಳ್ಳುತ್ತದೆ. ಎಂದಮೇಲೆ ಘರ್ಷಣೆಯ ಪ್ರಮಾಣ ಆಶಾಭಂಗದ ಅನುಭವದ ಬಲ, ಪರಿಸ್ಥಿತಿಗಳ ಪ್ರಭಾವ-ಈ ಎರಡು ಅಂಶಗಳನ್ನೂ ಅವಲಂಬಿಸಿದೆ. ಸ್ನೇಹಿತರ ಬೆಂಬಲವಿದ್ದರೆ ಘರ್ಷಣಾ ಮನೋವೃತ್ತಿ ಅಧಿಕ ಸ್ವಾತಂತ್ರ್ಯದಿಂದ ಪ್ರವರ್ತಿಸುತ್ತದೆ. ವೃತ್ತಿಚ್ಯುತಿ ಮತ್ತು ಶಿಕ್ಷೆಯ ಭಯಗಳಿಂದ ಘರ್ಷಣೆ ನಿರುದ್ಧವಾಗಬಹುದು. ಈ ಪರಿಸ್ಥಿತಿಗಳಲ್ಲಿ ಅದು ತನಗೆದುರುಬೀಳದ ತನ್ನ ಅಂತಸ್ತಿನ ವ್ಯಕ್ತಿಯ ಮೇಲೋ ಅಥವಾ ಗುಂಪಿನ ಮೇಲೋ ತಿರುಗಬಹುದು. ಹೀಗೆ ಘರ್ಷಣೆ ಬೇರೆ ಕಡೆಗೆ ತಿರುಗಬೇಕಾದರೆ ಆಶಾಭಂಗದ ಪರಿಸ್ಥಿತಿಗೆ ಯಾವ ವಿಧದಲ್ಲೂ ಕಾರಣನಲ್ಲದವನ ಮೇಲೆ ಪ್ರಾಯಶಃ ಅದು ತಿರುಗುತ್ತದೆ. ಯಾವನು ಇದರಿಂದ ತನ್ನ ನೆಮ್ಮದಿಗೆ ಚ್ಯುತಿಬಾರದೆಂದುಕೊಂಡು ಆ ಪರಿಸ್ಥಿತಿಯನ್ನು ಕುರಿತು ತನ್ನ ಮನೋಭಾವನೆಗಳನ್ನು ವ್ಯಕ್ತಪಡಿಸುತ್ತಾನೋ ಆತನೇ ಆ ಪರಿಸ್ಥಿತಿಯನ್ನು ಹದಕ್ಕೆ ತರಲೂ ಪ್ರಯತ್ನಿಸುತ್ತಾನೆ. ಒಬ್ಬ ವ್ಯಕ್ತಿಗೆ ಆಶಾಭಂಗದ ಅನುಭವವನ್ನು ತಂದೊಡ್ಡುವುದರಿಂದ ಅಷ್ಟೇನೂ ಕೆಡಕಾಗುವುದಿಲ್ಲ, ಆದರೆ ಏರುತ್ತಿರುವ ತನ್ನ ಮನಸ್ಸಿನ ಉದ್ವೇಗಗಳಿಗೆ ಥಟ್ಟನೆ ಪರಿಹಾರವನ್ನು ಕಂಡುಕೊಳ್ಳಲು ಆ ವ್ಯಕ್ತಿ ತಾನು ತೀರ ನಿಸ್ಸಹಾಯನೆಂಬ ಪರಿಸ್ಥಿತಿಯಲ್ಲಿ ಅದನ್ನು ತಂದೊಡ್ಡುವುದರಿಂದ ತುಂಬ ಕೆಡಕಾಗುತ್ತದೆ. ಒಬ್ಬಾತ ತನ್ನ ಆಶಾಭಂಗಕ್ಕೆ ಯಾವ ರೀತಿಯ ಪ್ರತಿಕ್ರಿಯೆಯನ್ನು ತೋರಿಸುತ್ತಾನೆ ಎಂಬುದನ್ನು ನಿರ್ಧರಿಸುವುದರಲ್ಲಿ ಸಂದರ್ಭಾಂಶಗಳಿಗಿರುವಷ್ಟೇ ಪ್ರಾಮುಖ್ಯ ವ್ಯಕ್ತಿಯ ಸ್ವಭಾವಕ್ಕೂ ಉಂಟು. ಆಶಾಭಂಗವನ್ನು ಸಹಿಸಿಕೊಳ್ಳುವುದರಲ್ಲೂ ಆಶಾಭಂಗದಿಂದುಂಟಾದ ಮನಸ್ಸಿನ ಉದ್ವೇಗಗಳನ್ನು ಉಪಶಮನಗೊಳಿಸಲು ಪ್ರಯುಕ್ತವಾದ ಉಪಾಯಗಳಲ್ಲೂ ವ್ಯಕ್ತಿ ವ್ಯಕ್ತಿಗೂ ವ್ಯತ್ಯಾಸವಿರುವುದು ತಿಳಿದುಬಂದಿದೆ. ಆಶಾಭಂಗ ವ್ಯಕ್ತಿಯ ಮುಂದಿನ ನಡೆವಳಿಕೆಗಳಲ್ಲಿ ತರುವ ವ್ಯತ್ಯಾಸಗಳ ಬಗ್ಗೆ, ಮುಖ್ಯವಾಗಿ ಆಶಾಭಂಗಕ್ಕೂ ಘರ್ಷಣೆಗೂ ಇರುವ ಸಂಬಂಧದ ವಿಷಯದಲ್ಲಿ ಎದ್ದಿರುವ ಸಾಮಾನ್ಯ ಸಮಸ್ಯೆ ಇನ್ನೂ ಅಸ್ಪಷ್ಟವಾಗಿಯೇ ಉಳಿದಿವೆ. ಕೆಲವು ಆಶಾಭಂಗಗಳು ತರುವ ದುಷ್ಪರಿಣಾಮಗಳನ್ನು ಮಿತಗೊಳಿಸಲೂ ನಾವು ಆಶಾಭಂಗದ ಅನುಭವದ ತೀವ್ರತೆಯನ್ನೇ ತಗ್ಗಿಸಬೇಕು. ಅಲ್ಲದೆ ಆ ಉದ್ವೇಗಗಳು ಕೆಡುಕಿಲ್ಲದ ಬೇರೆ ದಾರಿಯಲ್ಲಿ ಹೊರಹರಿಯುವಂತೆ ಅವಕಾಶಗಳನ್ನು ಕಲ್ಪಿಸಬೇಕು. ಆಶಾಭಂಗದ ತೀವ್ರತೆ ಅದು ಆ ಮನುಷ್ಯನ ಮನಸ್ಸಿನಲ್ಲಿ ಎಂಥ ಪರಿಣಾಮವನ್ನುಂಟು ಮಾಡುತ್ತದೆ ಎಂಬುದನ್ನೂ ಅದು ಉದ್ಭವಿಸುವ ಸಂದರ್ಭಾಂಶಗಳನ್ನೂ ಅವಲಂಬಿಸಿದೆಯಷ್ಟೆ. ಆದ್ದರಿಂದ ಮೈತ್ರಿಯ ವಾತಾವರಣದಲ್ಲಿ ಮನಸ್ಸು ನೆಮ್ಮದಿಯಿಂದಿರುವಾಗ ನಿರ್ಬಂಧವನ್ನು ಹಾಕಿದಲ್ಲಿ ಪರಿಣಾಮರೂಪದ ಮನೋವಿಕಾರಗಳನ್ನೂ ದುರಾಕ್ರಮಣಬುದ್ಧಿಯನ್ನೂ ತಡೆಗಟ್ಟಬಹುದು.