ಪುಜೆಯನ್ನು ಸ್ವೀಕರಿಸಲು ಸನ್ನಿಹಿತವಾಗುವಂತೆ ದೇವತೆಗಳನ್ನು ಪ್ರಾರ್ಥಿಸುವ ಕರೆ. ಪುಜಾರಂಭದಲ್ಲಿ ಮಾಡುವ ಕ್ರಿಯೆ ಪುಜಾಂಗವಾದ ಹದಿನಾರು ವಿಧ ಉಪಚಾರಗಳಲ್ಲಿ ಮೊದಲನೆಯದು. ಉದ್ದಿಷ್ಟ ದೇವತಾ ಪ್ರಾರ್ಥನರೂಪ ಮಂತ್ರವನ್ನು ಉಚ್ಚರಿಸುವ ಮೂಲಕ ಆಹ್ವಾನಿಸಿ ಬಳಿಕ ಆಸನ ಸಮರ್ಪಣೆ ಮಾಡಬೇಕು. ವಿಗ್ರಹ ರೂಪದಲ್ಲಿ ಆಹ್ವಾನಿಸಿ ನಿತ್ಯದಲ್ಲೂ ಪುಜಿಸುವುದು ಅನಿಯತಕಾಲಿಕ ಆವಾಹನೆ. ವ್ರತಾದಿಪುಜೆಗಳಲ್ಲಿ ಗೊತ್ತಾದ ಕಾಲದವರೆಗೆ ಆವಾಹಿಸುವುದು ನಿಯತಕಾಲಿಕ. ಇದರಲ್ಲಿ ಮಂಡಲಾಕಾರದ ವೇದಿಕೆಯ ಮೇಲೆ ಗೊತ್ತಾದ ಸ್ಥಳಗಳಲ್ಲಿ ಆಯಾ ದೇವತೆಗಳನ್ನು ಆವಾಹಿಸಿ ಪುಜೆ ನಡೆಸಬೇಕು. ಪುಣ್ಯಾಹಕ್ರಿಯೆಗಾಗಿ ಪುರ್ಣಕುಂಭದಲ್ಲಿ ವರುಣನನ್ನು ಆವಾಹಿಸುವುದು, ಧಾನ್ಯಗಳಲ್ಲಿ ಗ್ರಹಗಳನ್ನು ಆವಾಹಿಸುವುದು, ದರ್ಭೆಯ ಕೂರ್ಚದಲ್ಲಿ ಪಿತೃಗಳನ್ನು ಆವಾಹಿಸುವುದು-ಇವು ಆವಾಹನೆಯ ಕ್ರಮದಲ್ಲಿ ಕಂಡುಬರುವ ಕೆಲವು ಭೇದಗಳು. ಸಂಧ್ಯಾವಂದನೆಯಲ್ಲಿ ಗಾಯತ್ರೀ ಜಪಾರಂಭಕ್ಕೆ ಮೊದಲು ಮಾಡುವ ಗಾಯತ್ರೀ ಸರಸ್ವತಿಯರ ಆವಾಹನೆ, ಶ್ರಾದ್ಧದಲ್ಲಿ ಬ್ರಾಹ್ಮಣರು ಸ್ವಯಂ ತಮ್ಮ ಮೇಲೆ ಮಾಡಿಕೊಳ್ಳುವ ಪಿತೃಗಳ ಆವಾಹನೆ, ಪ್ರತಿನಿತ್ಯದ ಹೋಮಾನಂತರದಲ್ಲಿ (ಔಪಾಸನಾಂತ್ಯದಲ್ಲಿ) ಮಾಡುವ ಅಗ್ನಿಯ ಆತ್ಮಸಮಾರೋಪಣರೂಪ ಆವಾಹನೆ-ಇವು ವ್ಯಕ್ತಿನಿಷ್ಠ ಆವಾಹನೆಗಳು. ಎಲ್ಲ ವಿಧದ ಆವಾಹನೆಗಳೂ ಪುಜಾರಂಭದಲ್ಲಿ ಮಾಡುವ ಕ್ರಿಯೆಗಳಾದರೆ ಆತ್ಮಸಮಾರೋಪಣ ರೂಪ ಆವಾಹನೆ ಕೊನೆಯಲ್ಲಿ ಮಾಡುವಂಥದು. ಸಪ್ತವ್ಯಾಹೃತಿಗಳಲ್ಲಿ ಭೂಃ ಭುವಃ ಸುವಃ-ಎಂಬ ಮೊದಲ ಮೂರನ್ನು ಓಂಕಾರಪುರ್ವಕ ಉಚ್ಚರಿಸಿ ಆವಾಹನೆ ಮಾಡುವುದು ಸಾಮಾನ್ಯ ನಿಯಮ. ಪಿತೃಗಳ ಆವಾಹನೆಯಲ್ಲಿ ತಿಲಾಕ್ಷತೆಯಿಂದಲೂ ದೇವತೆಗಳ ಆವಾಹನೆಯಲ್ಲಿ ಶೋಭನಾಕ್ಷತೆಯಿಂದಲೂ (ಅರಿಸಿನ ಹಚ್ಚಿದ ಅಕ್ಕಿ) ಪುಜಿಸುತ್ತಾರೆ. ಸಾಲಿಗ್ರಾಮ ಪುಜೆಯಲ್ಲಿ ಯಾವ ವಿಧವಾದ ಆವಾಹನೆಯೂ ಇಲ್ಲ. ಜನಪದ ಸಮಾಜದಲ್ಲಿ ದೇವತಾರಾಧನೆಗಳ ಸಂದರ್ಭದಲ್ಲಿ ದೈವಾಹನೆ ಸರ್ವೇಸಾಮಾನ್ಯ. ಆವಾಹನೆಗೆ ಮೊದಲು ಜಾಗಟೆ, ಗಂಟೆ, ತಮ್ಮಟೆಗಳ ನಿನಾದವನ್ನು ಉಂಟುಮಾಡುವುದು ಕ್ರಮ. ಜನತೆಯ ದುಃಖ ದುಮ್ಮಾನ, ಕಷ್ಟ ಸಂಕಷ್ಟಗಳಿಗೆ ಪರಿಹಾರ ಸೂಚಿಸುವ ಕೆಲಸವನ್ನು ಈ ದೈವಾಹನೆಗೊಂಡ ವ್ಯಕ್ತಿ ಮಾಡುತ್ತಾನೆ. ಹೀಗೆ ದೈವಾಹನೆಗೊಂಡು ಜನರಿಗೆ ಸ್ಪಂದಿಸುವ ವ್ಯಕ್ತಿಯನ್ನು `ಗಣಮಗ’ ಎಂದೂ ಕರೆಯುವುದುಂಟು. ದೈವಾವೇಶದಿಂದ ವಿಮುಕ್ತಿ ಹೊಂದುವಾಗ ಗ್ರಾಮದೇವತೆಗೆ ಮಂಗಳಾರತಿ ಮಾಡುವುದು ಪದ್ಧತಿ.

"https://kn.wikipedia.org/w/index.php?title=ಆವಾಹನೆ&oldid=615114" ಇಂದ ಪಡೆಯಲ್ಪಟ್ಟಿದೆ