ಆಲ್ಬಿಜನ್ನೀಸ್
11-13ನೆಯ ಶತಮಾನದಲ್ಲಿ ದಕ್ಷಿಣ ಫ್ರಾನ್ಸ್ ನ ಕೆಲವು ಕಡೆಗಳಲ್ಲಿ ಹರಡಿದ್ದ ಕ್ರೈಸ್ತೇತರ ಧರ್ಮೀಯರ ಗುಂಪು.
ಕ್ರೈಸ್ತಧರ್ಮಕ್ಕೆ ವಿರುದ್ಧವಾಗಿದ್ದ ಮತಾಭಿಪ್ರಾಯ ಗಳನ್ನು ಹೊಂದಿದ್ದರಿಂದ ಇವರನ್ನು ಪಾಷಂಡಿಗಳೆಂದು ಕ್ರೈಸ್ತರು ಪರಿಗಣಿಸಿದರು. ಆದರೆ ಇವರು ನಿಷ್ಠರಾದ ವಿರಾಗಿಗಳು, ತಪಸ್ವಿಗಳು ಗಾಢಾನುರಕ್ತ ಧರ್ಮೋಪದೇಶಕರು. ಟುಲೊಸ್ನ ಆರ್ಲ್ನಾದ ಆರನೆಯ ರೇಮಾಂಡ್ ನ ಬೆಂಬಲವೂ ಅವರಿಗೆ ಇತ್ತು. ಆದರೂ ಕ್ರೈಸ್ತಮತೀಯರು 1176 ಮತ್ತು 1179ರಲ್ಲಿ, ಇವರನ್ನು ಉಗ್ರವಾಗಿ ಖಂಡಿಸಿದರು. ಪೋಪ್ ಮೂರನೆಯ ಇನ್ನೊಸೆಂಟ್ ಅನ್ಯಧರ್ಮೀಯರ ವಿಷಯದಲ್ಲಿ ಕೊಂಚ ಉದಾರಭಾವನೆ ತಳೆದಿದ್ದುದರಿಂದ ಸ್ವಲ್ಪಕಾಲ ಕ್ರೈಸ್ತರ ವೈರ ಉಗ್ರವಾಗಿರಲಿಲ್ಲ. ಇವರನ್ನು ರೋಮನ್ ಕ್ಯಾಥೊಲಿಕ್ ರನ್ನಾಗಿ ಮತಾಂತರಗೊಳಿಸುವ ಪ್ರಯತ್ನಗಳು ಫಲಕಾರಿಯಾಗಲಿಲ್ಲ. ಕೊನೆಗೆ ಮೂರನೆಯ ಇನ್ನೊಸೆಂಟನೇ ಇವರನ್ನಡಗಿಸಲು ಧಾರ್ಮಿಕದಂಡಯಾತ್ರೆ ನಡೆಸಬೇಕೆಂದು ಆಜ್ಞೆ ಹೊರಡಿಸಿದ್ದರಿಂದ, ಸೈಮನ್ ಡಿ. ಮಾಂಟ್ಫರ್ಟ್ ಎಂಬ ಫ್ರಂಚ್ ಶ್ರೀಮಂತ ಆ ಕೆಲಸವನ್ನು ಕೈಗೊಂಡ. ಇದಕ್ಕೆ ಪಾಷಂಡವಾದವನ್ನು ಅಡಗಿಸಲು ನಿಯಮಿಸಿದ್ದ ಮತೀಯ ನ್ಯಾಯಾಸ್ಥಾನದ ([ಇನ್ಕ್ವಸಿಷನ್|ಇನ್ಕ್ವಸಿಷನ್]]) ಬೆಂಬಲವೂ ದೊರಕಿತು. ಕ್ರಮೇಣ ಅವರೆಲ್ಲ ರೋಮನ್ ಕ್ಯಾಥೊಲಿಕರಾದರು.