ಹೆನ್ರಿಚ್ ಡಬ್ಲ್ಯು ಎಂ ಆಲ್ಬರ್ಸ್

(ಆಲ್ಬರ್ಸ್, ಹೆನ್ರಿಚ್ ಡಬ್ಲ್ಯು ಎಂ ಇಂದ ಪುನರ್ನಿರ್ದೇಶಿತ)

ಆಲ್ಬರ್ಸ್, ಹೆನ್ರಿಚ್ ಡಬ್ಲ್ಯು ಎಂ (1758-1840). ಜರ್ಮನಿಯ ವಿಜ್ಞಾನಿ. ಶಿಕ್ಷಣ ವೈದ್ಯಶಾಸ್ತ್ರದಲ್ಲಿ, ವೃತ್ತಿ ಔಷಧವ್ಯಾಪಾರ. ಕುತೂಹಲ ಆಕಾಶವೀಕ್ಷಣೆ.

ಖಗೋಳಶಾಸ್ತ್ರದಲ್ಲಿ ಸಾಧನೆಗಳು

ಬದಲಾಯಿಸಿ

ಹಗಲಿಡೀ ಮನುಷ್ಯ ದೇಹಗಳ ರಿಪೇರಿ ಮಾಡುತ್ತಿದ್ದ ಅಲ್ಬರ್ಸನಿಗೆ ಧೂಮಕೇತು ಶೋಧನೆ ಅತಿಪ್ರಿಯ ಹವ್ಯಾಸ. ಅವುಗಳ ಕಕ್ಷೆಗಳನ್ನು ನಿರ್ಧರಿಸಲು ಅವು ಒಂದು ವಿಧಾನವನ್ನು ರೂಪಿಸಿದ. ಇಂದೂ ಅದು ಪ್ರಚಲಿತವಿದೆ.

ಐದು ಧೂಮಕೇತುಗಳನ್ನು ಶೋಧಿಸಿದ. ಅವುಗಳ ಪೈಕಿ 1815ರಲ್ಲಿ ಈತ ಮೊದಲಾಗಿ ಗುರುತಿಸಿದ ಧೂಮಕೇತು ಆಲ್ಬರ್ಸನ ಧೂಮಕೇತುವೆಂದೇ ಪ್ರಸಿದ್ಧವಾಗಿದೆ.

ಮಂಗಳ ಮತ್ತು ಗುರು ಗ್ರಹಗಳ ಕಕ್ಷೆಗಳ ನಡುವಿನ ಪ್ರದೇಶದಲ್ಲಿ ಬೋಡನ ಸೂತ್ರದ ಪ್ರಕಾರ ಇರಬಹುದಾದ ಕಾಯಗಳನ್ನು ಶೋಧಿಸುವವರ ತಂಡದಲ್ಲಿ ಇವನದು ಅಗ್ರಸ್ಥಾನ. ಉತ್ಸಾಹ ತಗ್ಗದ, ಎಡೆಬಿಡದ ಇವನ ದುಡಿಮೆ ಅವರಿಗೆ ಹುರುಪಿನ ಚಿಲುಮೆ. ಪಲ್ಲಾಸ್ ಮತ್ತು ವೆಸ್ಟ ಎಂಬ ಕ್ಷುದ್ರ ಗ್ರಹಗಳನ್ನು ಕ್ರಮವಾಗಿ 1802 ಮತ್ತು 1807ರಲ್ಲಿ ಶೋಧಿಸಿದ. ಗ್ರಹಗಳು ಒಡೆದಾಗ ಅವುಗಳ ತುಂಡುಗಳೇ ಕ್ಷುದ್ರ ಗ್ರಹಗಳೆಂದು ತಿಳಿಸಿದವರಲ್ಲಿ ಇವನೇ ಮೊದಲಿಗ. ಇಂದಿಗೂ ಈ ಆಧಾರಭಾವನೆಯನ್ನು ಅಲ್ಲಗಳೆದವರಿಲ್ಲ. ಇದು ಸರಿಯಾದುದೆಂದೇ ನಂಬಿದವರು ಬಹಳ ಮಂದಿ ಇದ್ದಾರೆ. ಇವನ ಹೆಸರನ್ನು ಶಾಶ್ವತಗೊಳಿಸಲು ಕ್ಷುದ್ರ ಗ್ರಹಗಳ ಸಮುದಾಯದಲ್ಲಿ ಶೋಧಿಸಲಾದ 102ನೆಯ ಕಾಯವನ್ನು ಆಲ್ಬೇರಿಯಾ ಎಂದು ಕರೆದರು.

ಆಲ್ಬರ್ಸನ ವಿರೋಧಾಭಾಸ

ಬದಲಾಯಿಸಿ

ಆಲ್ಬರ್ಸನ ಹೆಸರು ಇಂದು ಪ್ರಸಿದ್ಧವಾಗಿರುವುದು ಈ ಕಾರಣದಿಂದ; 1826ರಲ್ಲಿ ಈತ ಮಂಡಿಸಿದ ಈ ತರ್ಕ ಬೆಳಕಿನ ಅರ್ಧಾಂಶ ಮಾತ್ರ ಸೂರ್ಯನಿಂದ ಬರುತ್ತದೆ; ಉಳಿದ ಅರ್ಧಾಂಶ ಆಕಾಶದ ಆಸಂಖ್ಯಾತ ನಕ್ಷತ್ರಗಳಿಂದ ಬರುತ್ತದೆ; ಹಾಗಾದರೆ ಮಧ್ಯರಾತ್ರಿಯ ಆಕಾಶ ನಕ್ಷತ್ರಗಳ ಬೆಳಕಿನಿಂದ ಪ್ರಕಾಶಮಯವಾಗಿರಬೇಕಷ್ಟೆ-ಅಂದರೆ ಆಕಾಶ ಕಪ್ಪಾಗಿರಲೇಬಾರದು; ಇದು ವಾಸ್ತವಿಕ ಪರಿಸ್ಥಿತಿಗೆ ವ್ಯತಿರಿಕ್ತ; ಆದ್ದರಿಂದ ವಿರೋಧಾಭಾಸ. ಆಕಾಶ ಅತಿ ದೊಡ್ಡ, ಕೋಟ್ಯಂತರ ಮೈಲಿ ವ್ಯಾಸವಿರುವ ಗೋಳ. ಇದರಲ್ಲಿ ಅಸಂಖ್ಯಾತ ನಕ್ಷತ್ರಗಳು ವಿವಿಧ ದೂರಗಳಲ್ಲಿ ದಟ್ಟೈಸಿವೆ. ಪ್ರತಿಯೊಂದು ನಕ್ಷತ್ರವೂ ಒಂದೊಂದು ಸೂರ್ಯ. ಆಕಾಶದಲ್ಲಿ ಯಾವ ದಿಕ್ಕಿನಲ್ಲಿಯೇ ಆಗಲಿ ದೂರ ದೂರ ಸಾಗಿದಂತೆ ನಕ್ಷತ್ರಸಾಂದ್ರತೆ ಏರುತ್ತ ಹೋಗುವುದು. ಈ ರೀತಿ ನಿಬಿಡವಾಗಿ ಪಸರಿಸಿರುವ ಅಸಂಖ್ಯಾತ ನಕ್ಷತ್ರಗಳಿಂದ ಮೊತ್ತವಾಗಿ ಭೂಮಿಗೆ ಬರುವ ಬೆಳಕು, ಉಷ್ಣ ಅಧಿಕವಾಗಿರಬೇಕು. ನಮ್ಮ ಮಧ್ಯರಾತ್ರಿಯೂ ಬೆಳಕಿನಿಂದ ಮಿರುಗುತ್ತಿರಬೇಕು, ಉಷ್ಣದಿಂದ ಬಿಸುಸುಯ್ಯುತ್ತಿರಬೇಕು. ಆದರೆ ವಾಸ್ತವಿಕ ಪರಿಸ್ಥಿತಿ ತದ್ವಿಪರೀತ-ಇದು ಆಲ್ಪರ್ಸನ ವಿರೋಧಾಭಾಸದ ವಿವರ. ಒಂದು ದೊಡ್ಡ ಬಯಲಿನ ಮಧ್ಯೆ ನಾವು ನಿಂತಿದ್ದೇವೆಂದು ಊಹಿಸೋಣ. ನಮ್ಮ ಸುತ್ತಲೂ ಎಲ್ಲ ಕಡೆಗಳಲ್ಲಿಯೂ ಎಲ್ಲ ದೂರಗಳಲ್ಲಿಯೂ ಅಸಂಖ್ಯಾತ ವಿದ್ಯುದ್ದೀಪಗಳನ್ನು ಉರಿಸಿದ್ದಾರೆಂದು ತಿಳಿಯೋಣ. ನಮ್ಮ ಸಮೀಪದಲ್ಲಿರುವ ಅತಿ ಪ್ರಕಾಶಮಾನವಾದ ದೀಪ ಸೂರ್ಯನೆಂದು ಭಾವಿಸಬಹುದು. ಈಗ ಈ ಒಂದು ದೀಪವನ್ನು ನಂದಿಸಿದರೆ ಬಯಲಿನಲ್ಲಿ ಪಸರಿಸಿರುವ ಪಸರಿಸುತ್ತಿರುವ ಬೆಳಕು, ಉಷ್ಣ, ಸ್ವಲ್ಪ ಕಡಿಮೆಯಾಗಬಹುದು; ಆದರೆ ಬಯಲು ಪುರ್ಣ ಕಪ್ಪಾಗದಷ್ಟೆ, ನಕ್ಷತ್ರ ಸಂಖ್ಯೆ ಅನಂತವೆಂದು ಅಲ್ಬರ್ಸ್ ಭಾವಿಸಿದ್ದ. ಸಮೀಪದ ಸೂರ್ಯ ಕಂತಿದೊಡನೆ ದೂರ ನಕ್ಷತ್ರಗಳ ಬೆಳಕನ್ನು ಅಂತರ ನಕ್ಷತ್ರ ಪ್ರದೇಶಗಳಲ್ಲಿ ದಟ್ಟವಾಗಿ ಹಬ್ಬಿರುವ ಧೂಳು ಹೀರಿಕೊಳ್ಳುವುದರಿಂದ ರಾತ್ರಿಯ ಆಕಾಶ ಕಪ್ಪಾಗಿಯೇ ಇರುವುದೆಂದು ಆಲ್ಬರ್ಸ್ ಪರಿಹಾರಸೂಚಿಸಿದ್ದ. ಆದರೆ ವಿರೋಧಾಭಾಸವನ್ನು ಒಪ್ಪಿಕೊಂಡ ವಿಜ್ಞಾನಿಗಳು ಈ ಪರಿಹಾರದಲ್ಲಿ ಏನೋ ಕೊರತೆ ಇದೆ ಎಂದು ತಿಳಿದರು. ಖಗೋಳಶಾಸ್ತ್ರ ಒಂದು ಶತಮಾನಕಾಲವೇ ಈ ಗಂಟನ್ನು ಅಂಟಿಸಿಕೊಂಡು ಮುಂದುವರಿಯಬೇಕಾಯಿತು.

1842ರಲ್ಲಿ ಶೋಧವಾದ ಡಾಪ್ಲರ್ ಪರಿಣಾಮ ಆಲ್ಬರ್ಸನ್ ವಿರೋಧಾಭಾಸಕ್ಕೆ ಸಮರ್ಪಕ ಉತ್ತರ ನೀಡಬಹುದಿತ್ತು. ಆದರೆ ತಜ್ಞರ ಗಮನ ಈ ಹೊಂದಾಣಿಕೆ ಮಾಡುವೆಡೆ ಹರಿಯಲಿಲ್ಲ. ವಿಶ್ವ ಅನಂತವಲ್ಲ, ನಕ್ಷತ್ರ ಸಂಖ್ಯೆ ಅನಂತವಲ್ಲ, ವಿಶ್ವ ಉಬ್ಬುತ್ತಿದೆ ಆದ್ದರಿಂದ ನಕ್ಷತ್ರಗಳು ಒಂದರಿಂದ ಇನ್ನೊಂದು ದೂರ ದೂರ ಸಾಗುತ್ತಿವೆ ಎಂದು 1924ರಿಂದೀಚೆಗೆ ನಡೆದ ಪ್ರಯೋಗಗಳಿಂದ, ವೀಕ್ಷಣೆಗಳಿಂದ ಸ್ಥಿರಪಟ್ಟಿತು. ಈ ದಾರಿಯಲ್ಲಿ ಡಾಪ್ಲರ್ ಪರಿಣಾಮದ ಪಾತ್ರ ಮಹತ್ತ್ವದ್ದು. ಅನಂತ ಸಂಖ್ಯೆಯಲ್ಲಿಲ್ಲದ ನಕ್ಷತ್ರಗಳು ವಿಶ್ವದ ಮಹಾವ್ಯಾಪ್ತಿಯ ಬೆಳಕಿನ ಅಭಾವವನ್ನು ಪರಿಣಾಮಕಾರಿಯಾಗಿ ನೀಗಲಾರವು; ಅಲ್ಲದೇ ಅವು ಒಂದರಿಂದ ಇನ್ನೊಂದು ದೂರ ದೂರ ಧಾವಿಸುತ್ತಿರುವುದರಿಂದ ಭೂಮಿಗೆ (ಅಥವಾ ಯಾವುದೇ ಪ್ರದೇಶಕ್ಕೆ) ಅವುಗಳಿಂದ ತಲಪುವ ಬೆಳಕು ಉಷ್ಣಗಳ ಮೊತ್ತ ಅತ್ಯಲ್ಪ; ಆದ್ದರಿಂದ ಭೂಮಿಯ ಹಗಲು, ರಾತ್ರಿ ಉಷ್ಣ ಮುಂತಾದವುಗಳ ನಿಯಂತ್ರಕ ನಕ್ಷತ್ರ ಸೂರ್ಯನೇ ಎಂದು ಸಿದ್ಧವಾಯಿತು.