ಆಲ್ಫ್ರಡ್ ಫೊನ್ ಟಿರ್ಪಿಟ್ಸ್
ಆಲ್ಫ್ರಡ್ ಫೊನ್ ಟಿರ್ಪಿಟ್ಸ್ (1849-1930). ಜರ್ಮನ್ ಅಡ್ಮಿರಲ್, ಒಂದನೆಯ ಮಹಾಯುದ್ಧಕ್ಕಿಂತ ಹದಿನೇಳು ವರ್ಷಗಳ ಮೊದಲು ಜರ್ಮನ್ ನೌಕಾಬಲವನ್ನು ಕಟ್ಟಿದಾತ ಮತ್ತು ಚಕ್ರವರ್ತಿ ಎರಡನೆಯ ವಿಲಿಯಮನ ರಾಜ್ಯಭಾರದ ದಿನಗಳಂದು ಪ್ರಬಲನಾಗಿದ್ದ ಓರ್ವ ನೌಕಾ ಧುರೀಣ.
ಬದುಕು ಮತ್ತು ಸಾಧನೆ
ಬದಲಾಯಿಸಿಪ್ರಷ್ಯನ್ ನೌಕಾಪಡೆಯನ್ನು ಸೇರಿ (1865) ಅಲ್ಲೇ ಅಧಿಕಾರಿ ಆಗಿ ಬಡ್ತಿ ಪಡೆದ (1869). ಪಡೆಯ ಶ್ರೇಷ್ಠ ಟಾರ್ಪೀಡೊ ತಜ್ಞ ಎಂದು 1880ರಲ್ಲಿ ಪ್ರಸಿದ್ಧನಾದ. ನೌಕಾವರಿಷ್ಠ ವಿಭಾಗದ ಮುಖ್ಯಸ್ಥನಾಗಿ 1892ರಲ್ಲೂ ಇಂಪಿರಿಯಲ್ ನೌಕಾ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ 1897ರಲ್ಲೂ ನೇಮನ ಪಡೆದ. ಈ ಎರಡನೆಯ ಹುದ್ದೆಯಲ್ಲಿ ಹೆಚ್ಚುಕಡಿಮೆ 19 ವರ್ಷಗಳ ಕಾಲ ಅವಿಚ್ಛಿನ್ನವಾಗಿ ಸೇವೆ ಸಲ್ಲಿಸಿದ. ಈತನಿಗೆ ಲಭಿಸಿದ ಮುಂದಿನ ಬಿರುದುಗಳೆಂದರೆ ಅಡ್ಮಿರಲ್ (1903) ಮತ್ತು ಗ್ರ್ಯಾಂಡ್ ಅಡ್ಮಿರಲ್ (1911).
ಎರಡನೆಯ ವಿಲಿಯಮ್ ಚಕ್ರವರ್ತಿ (1859-1941, ಕೈಸರ್ ಎಂಬ ಹೆಸರಿನಿಂದ ಪ್ರಸಿದ್ಧನಾಗಿದ್ಧ) ಜರ್ಮನ್ ಹಿರಿಮೆಯ ವಿಚಾರ ಅದರಲ್ಲೂ ಸ್ವಂತ ಪ್ರತಿಷ್ಠೆಯ ವಿಚಾರ ಅಪಾರ ವಿಶ್ವಾಸ ಉಳ್ಳವನಾಗಿದ್ದ. ಈತ ರಾಜ್ಯಭಾರ ನಡೆಸುವಾಗ ನಾಗರಿಕ ಅಧಿಕಾರಿಗಳಿಗಿಂತಲೂ ಸೇನಾಧಿಕಾರಿಗಳನ್ನೇ ಹೆಚ್ಚಾಗಿ ನಂಬಿಕೊಂಡಿದ್ದ. ಇಂಥ ಸನ್ನಿವೇಶದಲ್ಲಿ ವಿಲಿಯಮನಿಗೂ ಟರ್ಪಿಟ್ಸ್‍ನಿಗೂ ಮೈತ್ರಿ ಬೆಳೆದದ್ದು ನಿರೀಕ್ಷಿತ ವಿದ್ಯಮಾನ. ಹಿಡಿದ ಪಟ್ಟನ್ನು ಬಿಡದ ಛಲವಂತ ನಾಯಕ ಟಿರ್ಪಿಟ್ಸ್ ಮತ್ತು ಅಧಿಕಾರಪ್ರಿಯ, ಗುಣವಂತ ಆದರೆ ಅಸ್ಥಿರಮನಸ್ಸಿನ ವಿಲಿಯಮ್ ಇವರ ನಡುವಿನ ಬಾಂಧವ್ಯ ಜರ್ಮನಿಯ ಭವ್ಯತೆಯನ್ನೂ ಪತನವನ್ನೂ ಏಕಕಾಲದಲ್ಲಿ ನಿರ್ಧರಿಸಿತು ಎಂಬುದಾಗಿ ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಬಿಸ್‍ಮಾರ್ಕ್ 1871ರಲ್ಲಿ ಕಟ್ಟಿದ ಜರ್ಮನ್ ಚಕ್ರಾಧಿಪತ್ಯ ಮಿಲಿಯಮ್-ಟಿರ್ಪಿಟ್ಸ್ ನಾಯಕತ್ವದಲ್ಲಿ ಪ್ರವರ್ಧಿಸಿದಂತೆ ಕಂಡರೂ ಮುಂದೆ ಆಂತರಿಕ ಅಸಾಂಗತ್ಯಗಳಿಂದಾಗಿ ಕುಸಿದುಬಿತ್ತು (1914-18).
ಜರ್ಮನಿಯ ನೌಕಾವ್ಯವಸ್ಥೆಯನ್ನು 1889ರಲ್ಲಿ ಮೂರು ಬೇರೆ ಬೇರೆ ವಿಭಾಗಗಳಾಗಿ ಒಡೆಯಲಾಯಿತು: ಇಂಪಿರಿಯಲ್ ನೌಕಾವಿಭಾಗ (ಆಡಳಿತೆಗಾಗಿ), ನೌಕಾ ವರಿಷ್ಠ ವಿಭಾಗ (ಯೋಜನೆಗಳು ಮತ್ತು ಯುದ್ಧಕ್ರಿಯೆಗಳಿಗಾಗಿ) ಮತ್ತು ನೌಕಾ ಸಂಪುಟ (ನಾವಿಕಾಧಿಕಾರಿಗಳಿಗಾಗಿ). ಈ ಏರ್ಪಾಡಿನಿಂದ ವಿಲಿಯಮನಿಗೆ ನೌಕೆಯ ಮೇಲೆ ಪೂರ್ಣ ಹತೋಟಿ ದೊರೆಯಿತು. ಇದರೊಂದಿಗೆ ಟಿರ್ಪಿಟ್ಸನಿಗೆ (ಇಂಪಿರಿಯಲ್ ನೌಕಾವಿಭಾಗದ ವರಿಷ್ಠನಾಗಿ, 1897-1916) ವಿಶೇಷ ಅಂತಸ್ತು ಪ್ರಾಪ್ತವಾಯಿತು. ಅದುವರೆಗೆ ಕೇವಲ ಕರಾವಳಿ ರಕ್ಷಣಾಪಡೆಯಾಗಿ ಇದ್ದ ಜರ್ಮನ್ ನೌಕಾಪಡೆಯನ್ನು ವಿಶಾಲಸಾಗರಗಳ ಕದನದಳವಾಗಿ ಮಾರ್ಪಡಿಸುವಲ್ಲಿ ಟಿರ್ಪಿಟ್ಸ್ ಅಸೀಮ ದಕ್ಷತೆಯನ್ನು ಪ್ರದರ್ಶಿಸಿದ. 1890ರ ವೇಳೆಗೆ ಜರ್ಮನಿ ಪ್ರಪಂಚದ ಆರನೆಯ ನೌಕಾದಳವಾಗಿ (ಗ್ರೇಟ್ ಬ್ರಿಟನ್ ಐದನೆಯದು) ಬಡ್ತಿ ಪಡೆದಿತ್ತು. ಇದರಲ್ಲಿ ಟಿರ್ಪಿಟ್ಸನ ಪಾತ್ರವೇನೂ ಅಲ್ಪವಲ್ಲ. 1900ರಲ್ಲಿ ಅಂಗೀಕೃತವಾದ ನೌಕಾ ಅಧಿನಿಯಮದ ಪ್ರಕಾರ 1917ರ ವೇಳೆಗೆ ಜರ್ಮನ್ ನೌಕಾಬಲವನ್ನು 2 ಪತಾಕೆನೌಕೆಗಳು. 36 ಯುದ್ಧನೌಕೆಗಳು, 11 ದೊಡ್ಡ ಕಾವಲುಹಡಗುಗಳು (ಕ್ರೂಜûರ್ಸ್) ಮತ್ತು 34 ಚಿಕ್ಕ ಕಾವಲುಹಡಗುಗಳು ಇರತಕ್ಕದ್ದು ಎಂದು ಗೊತ್ತುಪಡಿಸಿತು. ಆನಂತರದ ವರ್ಷಗಳಲ್ಲಿ ಅಂಗೀಕೃತವಾದ ಇತರ ಮಸೂದೆಗಳು ಈ ಮಿತಿಗಳನ್ನು ಇನ್ನೂ ಏರಿಸಿದುವು. ಇಲ್ಲೆಲ್ಲ ಜರ್ಮನಿಯ ಉದ್ದೇಶ ತನಗೆ ಸಮೀಪದ ಪ್ರತಿಸ್ಪರ್ಧಿ ಆಗಿದ್ದ ಗ್ರೇಟ್ ಬ್ರಿಟನ್ನನ್ನು ಸೋಲಿಸಿ ಜರ್ಮನಿಯ ಸಾಗರೋತ್ತರ ವ್ಯಾಪಾರವನ್ನು ವಿಸ್ತರಿಸುವುದೇ ಆಗಿತ್ತು. ಇದರ ಅಂಗವಾಗಿ ಪ್ರಪಂಚಬಲಗಳ ವಿತರಣೆ ಜರ್ಮನಿಯು ಕೇಂದ್ರಸ್ಥಾನಕ್ಕೆ ಬರುವ ದಿಶೆಯಲ್ಲಿ ಆಗ ಬೇಕಾದದ್ದು ಅನಿವಾರ್ಯವಾಯಿತು. ಹೀಗೆ ಟರ್ಪಿಟ್ಸ್‍ನ್ ಮಹತ್ತ್ವಾಕಾಂಕ್ಷೆ ಹಾಗೂ ಧುರೀಣತ್ವ ಜರ್ಮನಿಯ ನೌಕೆಯನ್ನು ವ್ಯವಸ್ಥಿತವಾಗಿ ಕಟ್ಟುವುದರ ಜೊತೆಗೆ ಜರ್ಮನಿಯನ್ನೂ ಅದರೊಂದಿಗೆ ಪ್ರಪಂಚವನ್ನೂ ಯುದ್ಧದ ಅಂಚೆಗೆ ಕ್ರಮಶಃ ಕೊಂಡೊಯ್ದವು.
ಆದರೆ ಒಂದನೆಯ ಮಹಾಯುದ್ಧ (1914-18) ಜರ್ಮನಿಗೆ ಹೇಗೊ ಹಾಗೆ ಟಿರ್ಪಿಟ್ಸನಿಗೂ ವಿಶೇಷ ಹತಾಶೆಯನ್ನು ತಂದೊಡ್ಡಿತು. ಜರ್ಮನಿಯ ಒಳಗೆ ಅಂತರಬಲ ಪೈಪೋಟಿಯೂ ಮತ್ಸರವೂ ಇದರ ಒಂದು ಕಾರಣ. ಬ್ರಿಟನ್ನನನ್ನು ಸದೆಬಡೆಯಲು ಯೂ-ಬೋಟುಗಳ ಅನಿರ್ಬಂಧಿತ ಬಳಕೆಯನ್ನು ಟಿರ್ಪಿಟ್ಸ್ ಯೋಜಿಸಿದ. ಆದರೆ ಈಗಾಗಲೇ (1916) ಅವನ ಧುರೀಣತ್ವಕ್ಕೆ ಸಾಕಷ್ಟು ಕಳಂಕ ಲೇಪಿತವಾಗಿತ್ತು. ಎಲ್ಲ ಕಡೆಗಳಲ್ಲಿಯೂ ಜರ್ಮನಿಯ ಸೋಲು ಮತ್ತು ಮುಖಭಂಗಗಳಿಗೆ ಟಿರ್ಪಿಟ್ಸನೇ ಮುಖ್ಯ ಅಪರಾಧಿ ಎಂಬುದಾಗಿ ಪರಿಗಣಿಸಲ್ಪಟ್ಟ. 1916ರ ಮಾರ್ಚ್ 15ರಂದು ಅವನು ಇಂಪಿರಿಯಲ್ ನೌಕಾ ವಿಭಾಗದ ಕಾರ್ಯದರ್ಶಿತ್ವಕ್ಕೆ ರಾಜಿನಾಮೆ ನೀಡಿದ.
ನಿವೃತ್ತ ಜೀವನದಲ್ಲೂ ಟಿರ್ಪಿಟ್ಸ್ ರಾಜಕೀಯ ಚಟುವಟಿಕೆಗಳಲ್ಲಿ ನಿರತನಾಗಿದ್ದ. 1930 ಮಾರ್ಚ್ 6ರಂದು ಗತಿಸಿದ.