ಆಲನ್ ಬಾರ್ಡರ್ ಇವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಇವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂದ ಪ್ರಥಮ ಬಾರಿಗೆ ವಿಶ್ವ ಕಪ್ ಕ್ರಿಕೆಟ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಇವರು ಒಟ್ಟು ೧೫೬ ಟೆಸ್ಟ್ ಪಂದ್ಯಗಳನ್ನಾಡಿದ್ದು, ಇವರು ನಿವೃತ್ತಿಯಾದಾಗ ಅದು ವಿಶ್ವದಾಖಲೆಯಾಗಿತ್ತು(ಮುಂದೆ ಇದೇ ತಂಡದ ಸ್ಟೀವ್ ವಾ ಈ ದಾಖಲೆಯನ್ನು ಮುರಿದರು). ಇವರು ಸತತ ೧೫೩ ಟೆಸ್ಟ್ ಪಂದ್ಯಗಳನ್ನಾಡಿದ ದಾಖಲೆಯನ್ನು ಹೊಂದಿದ್ದಾರೆ. ಇವರು ಸತತ ೯೬ ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಿದ್ದು ಅದು ಕೂಡ ವಿಶ್ವ ದಾಖಲೆಯಾಗಿದೆ.
ಇವರು ಎಡಗೈ ಬ್ಯಾಟ್ಸಮನ್ನರಾಗಿದ್ದರು, ಅಷ್ಟೇ ಅಲ್ಲದೇ ಉಪಯುಕ್ತ ಅರೆಕಾಲಿಕ ಎಡಗೈ ಸ್ಪಿನ್ ಬೌಲರರೂ ಆಗಿದ್ದರು. ಇವರು ಟೆಸ್ಟ್ ಪಂದ್ಯಗಳಲ್ಲಿ ೧೧,೧೭೪ ರನ್ನುಗಳನ್ನು ಗಳಿಸಿದ್ದರು(ಇದು ಕೂಡ ವಿಶ್ವದಾಖಲೆಯಾಗಿತ್ತು, ಮುಂದೆ ಬ್ರಿಯಾನ್ ಲಾರಾ ಈ ದಾಖಲೆಯನ್ನು ಮುರಿದರು). ಇವರು ಒಟ್ಟು ೨೭ ಟೆಸ್ಟ್ ಶತಕಗಳನ್ನು ಗಳಿಸಿದರು. ಇವರು ನಿವೃತ್ತರಾದಾಗ ಆಸ್ಟ್ರೇಲಿಯಾ ತಂಡದ ಟೆಸ್ಟ್ ಮತ್ತು ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ಹೆಚ್ಚಿನ ರನ್ನುಗಳನ್ನು ಗಳಿಸಿದ ಸಾಧನೆಯನ್ನು ಮಾಡಿದ್ದರು.
ಬಾರ್ಡರ್ ಅವರು ೨೯ ಡಿಸೆಂಬರ್, ೧೯೭೮ರಲ್ಲಿ ಆಷಸ್ ಸರಣಿಯ ಮೂರನೇಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿದರು. ಪ್ರಥಮ ಪಂದ್ಯದಲ್ಲಿ ೨೯ ಮತ್ತು ೦ ರನ್ನುಗಳನ್ನು ಗಳಿಸಿದರು. ಎರಡನೆಯ ಪಂದ್ಯದಲ್ಲಿ ಇವರ ಸಾಧನೆ ಅಭಿವೃದ್ಧಿಗೊಂಡು ೬೦ ಮತ್ತು ೪೫ ರನ್ನುಗಳನ್ನು ಗಳಿಸಿ ತಂಡದ ಗರಿಷ್ಟ ರನ್ನುಗಳನ್ನು ಗಳಿಸಿದ್ದರು. ಮೂರನೇಯ ಪಂದ್ಯದಲ್ಲಿ ಕೇವಲ ೧೧ ಮತ್ತು ೧ ರನ್ನುಗಳಿಸಿದ್ದರಿಂದ ಮುಂದಿನ ಪಂದ್ಯಕ್ಕೆ ಇವರನ್ನು ತಂಡದಿಂದ ಕೈಬಿಡಲಾಯಿತು. ಮುಂದೆ ಪಾಕಿಸ್ತಾನದ ವಿರುದ್ಧ ತಂಡಕ್ಕೆ ಮರಳಿದಾಗ, ಮೊದಲ ಪಂದ್ಯದಲ್ಲಿ ಚೊಚ್ಚಲ ಶತಕವನ್ನು ಗಳಿಸಿದರು ಮತ್ತು ಅದೇ ಸರಣಿಯಲ್ಲಿ ೯೨ರ ಸರಾಸರಿಯಲ್ಲಿ ಒಟ್ಟು ೨೭೬ರನ್ನುಗಳನ್ನು ಗಳಿಸಿದರು.