ಆಲದಹಳ್ಳಿ ರಂಗನಾಥ ಸ್ವಾಮಿ ಬೆಟ್ಟ
ಆಲದಹಳ್ಳಿ ಒಂದು ಕುಗ್ರಾಮ. ಈ ಕುಗ್ರಾಮದಲ್ಲಿ ಒಂದು ಸಣ್ಣ ಬೆಟ್ಟದ ಮೇಲೆ ರಂಗನಾಥ ಸ್ವಾಮಿ ದೇವಾಲಯವಿದೆ. ದೇವಾಲಯದ ಪಕ್ಕದಲ್ಲಿ ಒಂದು ದೊಡ್ಡ ಆಲದ ಮರವಿದೆ. ಇದರಿಂದಾಗಿ ಈ ದೇವಾಲಯಕ್ಕೆ ಆಲದ ಮರದ ರಂಗನಾಥ ಸ್ವಾಮಿ ದೇವಾಲಯವೆಂಬ ಹೆಸರಿದೆ. ಆಲದಹಳ್ಳಿ ಗ್ರಾಮವು ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ-೪ ರಿಂದ ೨ ಕಿ.ಮೀ ದೂರದಲ್ಲಿ ಬೆಂಗಳೂರಿನಿಂದ ಸುಮಾರು ೪೫ ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ತುಮಕೂರಿಗೆ ಹೋಗುವಾಗ ಮಹಿಮಾಪುರ ಕ್ರಾಸ್ ಆದ ಮೇಲೆ ಸುಮಾರು ಒಂದು ಕಿ.ಮೀ ನಂತರ ಎಡಬಾಗದಲ್ಲಿ ಆಲದಹಳ್ಳಿಗೆ ಹೋಗಲು ಒಂದು ಸಣ್ಣ ಜಲ್ಲಿ ರಸ್ತೆ ಇದೆ. ಇದರಲ್ಲಿ ಸುಮಾರು ೨ ಕಿ.ಮೀ ಪ್ರಯಾಣ ಮಾಡಿದರೆ ಬೆಟ್ಟದ ಕೆಳಭಾಗವನ್ನು ತಲುಪಬಹುದು. ಬೆಟ್ಟದ ಕೆಳಭಾಗದಲ್ಲಿ ಒಂದು ಬೃಹದಾಕಾರದ ಬಂಡೆ ನೆಲದಿಂದ ಮೇಲಕ್ಕೆ ಚಾಚಿಕೊಂಡು ಒಂದು ಗುಹೆಯನ್ನು ನಿರ್ಮಿಸಿದೆ. ಇಲ್ಲಿ ಲಕ್ಷ್ಮಿ ವಿಗ್ರಹವಿದ್ದು, ಈ ದೇವಾಲಯವನ್ನು "ಗುಹೆ ಲಕ್ಷ್ಮಮ್ಮ" ದೇವಾಲಯ ಎಂದು ಕರೆಯುತ್ತಾರೆ. ಬೆಟ್ಟದ ಮೇಲೆ ಇರುವ ರಂಗನಾಥ ಸ್ವಾಮಿ ದೇವಾಲಯ ಸುಂದರವಾಗಿದೆ. ಇಲ್ಲಿ ಪ್ರತಿದಿನ ಬೆಳಗ್ಗೆ ಪೂಜೆ ನಡೆಯುತ್ತದೆ. ಶನಿವಾರಗಳಂದು ವಿಶೇಷ ಪೂಜೆ ನಡೆಯುತ್ತದೆ.