ಆರ್ನಲ್ಡ್ ಜೋಸೆಫ್ ಟಾಯ್ನ್ ಬಿ
ಆರ್ನಲ್ಡ್ ಜೋಸೆಫ್ ಟಾಯ್ನ್ ಬಿ (1889-1975). ಇಂಗ್ಲಿಷ್ ಇತಿಹಾಸಕಾರ. ನಾಗರಿಕತೆಗಳ ಸರ್ವೇಕ್ಷಣೆ, ವಿಶ್ಲೇಷಣೆ ನಡೆಸುವ ಸ್ಟಡಿ ಆಫ್ ಹಿಸ್ಟೊರಿ ಎಂಬ ತಮ್ಮ ಗ್ರಂಥದಿಂದಾಗಿ ಪ್ರಸಿದ್ಧ.
ಬದುಕು
ಬದಲಾಯಿಸಿ1889ರ ಏಪ್ರಿಲ್ 14ರಂದು ಲಂಡನಿನಲ್ಲಿ ಜನಿಸಿದರು. ವಿಂಚೆಸ್ಟರಿನಲ್ಲೂ ಆಕ್ಸ್‍ಫರ್ಡಿನ ಬೇಲಿಯಲ್ ಕಾಲೇಜಿನಲ್ಲೂ ಶಿಕ್ಷಣ ಪಡೆದರು. ಬೇಲಿಯಲ್ ಕಾಲೇಜಿನಲ್ಲೇ ಇವರು 1912-1915ರಲ್ಲಿ ಫೆಲೋ ಆಗಿಯೂ ಪ್ರಾಚೀನ ಇತಿಹಾಸ ಬೋಧಕರಾಗಿಯೂ ಇದ್ದರು. 1919-1924ರಲ್ಲಿ ಇವರಿದ್ದುದು ಲಂಡನ್ ವಿಶ್ವವಿದ್ಯಾಲಯದಲ್ಲಿ-ಬಿಝಾಂಟೀನ್ ಮತ್ತು ಆಧುನಿಕ ಗ್ರೀಕ್ ಭಾಷೆ, ಸಾಹಿತ್ಯ ಮತ್ತು ಇತಿಹಾಸದ ಕಾರಾಯೀಸ್ ಪ್ರಾಧ್ಯಾಪಕರಾಗಿ. 1925ರಿಂದ, 1955ರಲ್ಲಿ ನಿವೃತ್ತರಾಗುವವರೆಗೆ, ಅವರು ಅಲ್ಲೇ ಅಂತರರಾಷ್ಟ್ರೀಯ ಇತಿಹಾಸದ ಸಂಶೋಧನ ಪ್ರಾಧ್ಯಾಪಕರಾಗಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳ ರಾಯಲ್ ಇನ್ಸ್ಟಿಟ್ಯೂಟಿನ ನಿರ್ದೇಶಕರಾಗಿ ಇದ್ದರು. ಒಂದನೆಯ ಮತ್ತು ಎರಡನೆಯ ಮಹಾಯುದ್ಧಗಳ ಕಾಲದಲ್ಲಿ ಇವರು ಸರ್ಕಾರಕ್ಕಾಗಿ ಕೆಲಸ ಮಾಡಿದರು. 1919ರಲ್ಲೂ 1945ರಲ್ಲೂ ಇವರು ಪ್ಯಾರಿಸ್ ಶಾಂತಿ ಸಮ್ಮೇಳನಗಳಲ್ಲಿ ಬ್ರಿಟಿಷ್ ನಿಯೋಗದ ಸದಸ್ಯರಾಗಿದ್ದರು.
ಮರಣ 1975ರ ಅಕ್ಟೋಬರ್ 22 ರಂದು.
ಬರಹ
ಬದಲಾಯಿಸಿಸ್ಟಡಿ ಆಫ್ ಹಿಸ್ಟೊರಿ ಎಂಬ ಹತ್ತು ಸಂಪುಟಗಳ ಗ್ರಂಥದ ರಚನೆಯಲ್ಲಿ ಟಾಯ್‍ನ್‍ಬಿ ತೊಡಗಿದ್ದು 1922ರಲ್ಲಿ ಇವರು ಇದನ್ನು ಆರಂಭಿಸಿದ್ದಾದರೂ ಅಕಸ್ಮಾತ್ತಾಗಿ. ಕ್ರಿ.ಪೂ. 5ನೆಯ ಶತಮಾನದ ಗ್ರೀಕ್ ಇತಿಹಾಸಕಾರ ಹಿರಾಡೊಟಸ್ ಬಣ್ಣಿಸಿರುವ, ಪರ್ಷಿಯನ್ ದೊರೆ ಜûಕ್ರ್ಸೀಸನ ಸೈನಿಕರ ತಲೆಯುಡಿಗೆಗಳಂತೆಯೆ ಇದ್ದ, ನರಿಯ ಚರ್ಮದ ಟೋಪಿಗಳನ್ನು ಧರಿಸಿದ್ದ ಬಲ್ಗೇರಿಯನ್ ರೈತರನ್ನು ನೋಡಿದಾಗ ಟಾಯ್‍ನ್‍ಬಿಗೆ ಮೇಲೆ ಹೇಳಿದಂಥ ಕೃತಿಯನ್ನು ರಚಿಸಬೇಕೆಂಬ ಪ್ರೇರಣೆ ಬಂತು. ಈ ಘಟನೆ ಇವರ ಇತಿಹಾಸ ಗ್ರಂಥದ ಸ್ವರೂಪದ ಮೇಲೆ ಬೆಳಕು ಚೆಲ್ಲುತ್ತದೆ. ಇತಿಹಾಸದ ನಿರಂತರತೆಯ ಕಲ್ಪನೆ, ಅದರ ವಿನ್ಯಾಸವನ್ನು ಕಾಣಬಲ್ಲ ದೃಷ್ಟಿ, ವಿದ್ವತ್‍ಪ್ರಪೂರ್ಣತೆ. ಸೂಕ್ಷ್ಮಾವಲೋಕನ-ಈ ಗುಣಗಳಿಂದಾಗಿ ಇವರ ಈ ಗ್ರಂಥಕ್ಕೆ ವಿಶಿಷ್ಟತೆ ಪ್ರಾಪ್ತವಾಗಿದೆ. ಈ ಬೃಹದ್ಗ್ರಂಥದ ಹತ್ತು ಸಂಪುಟಗಳು 1934-1954ರಲ್ಲಿ ಪ್ರಕಟವಾದುವು. ಇದರ ಮೊದಲ ಆರು ಸಂಪುಟಗಳ ಸಂಗ್ರಹ ಆವೃತ್ತಿ 1946ರಲ್ಲೂ ಕೊನೆಯ ನಾಲ್ಕು ಸಂಪುಟಗಳದು 1957ರಲ್ಲೂ ಪ್ರಕಟವಾದುವು.
ಟಾಯ್ನ್‍ಬಿಯವರ ಅಭಿಪ್ರಾಯ ಮತ್ತು ಸಿದ್ಧಾಂತಗಳನ್ನು ಅನೇಕ ಪರಿಣತರು ಟೀಕಿಸಿದ್ದಾರೆ. ಇವರ ತೀರ್ಮಾನಗಳು ಇತಿಹಾಸಕಾರನವನಂತೆ ಇಲ್ಲವೆಂದೂ ಕ್ರೈಸ್ತ ನೀತಿಬೋಧಕನ ದೃಷ್ಟಿಯಿಂದ ಇತಿಹಾಸ ಬರೆದಿರುವುದು ಈ ಗ್ರಂಥದ ದೊಷವೆಂದೂ ಅವರ ಅಭಿಪ್ರಾಯ. ಆದರೂ ನಾಗರಿಕತೆಯ ಇತಿಹಾಸಕ್ಕೆ ಇವರ ಕೃತಿ ಒಂದು ಅಮೂಲ್ಯ ಕೊಡುಗೆಯೆಂದು ಪರಿಭಾವಿಸಲಾಗಿದೆ.
ನಾಗರಿಕತೆಗಳ ಹುಟ್ಟು ಬೆಳೆವಣಿಗೆಗಳನ್ನು ಸೂಕ್ಷ್ಮವಾಗಿ, ಆಳವಾಗಿ, ವ್ಯಾಸಂಗ ಮಾಡಿರುವ ಟಾಯ್‍ನ್‍ಬಿ ಅವುಗಳ ಬಗ್ಗೆ ಕೆಲವು ಸಿದ್ಧಾಂತಗಳನ್ನು ರೂಪಿಸಿದ್ದಾರೆ. ನಾಗರಿಕತೆ ಹೇಗೆ ಪ್ರಗತಿ ಹೊಂದುತ್ತದೆ? ಆ ಪ್ರಗತಿಯ ಸಾಧಕರಾರು? ಅದುಕ್ಷೀಣಿಸಲು ಕಾರಣಗಳೇನು?-ಎಂಬ ಪ್ರಶ್ನೆಗಳಿಗೆ ಟಾಯ್‍ನ್‍ಬಿ ಸಮರ್ಪಕ ಉತ್ತರ ನೀಡಲು ಯತ್ನಿಸಿದ್ದಾರೆ. ಪ್ರಪಂಚದ 21 ನಾಗರಿಕತೆಗಳನ್ನು ಖಚಿತವಾಗಿ ಗುರುತಿಸಿದ್ದಾರೆ. ಅವುಗಳ ಜೀವಿತವನ್ನು ಕುರಿತು ವಿವೇಚಿಸಿದ್ದಾರೆ. ನಾಗರಿಕತೆಗಳ ಬೆಳೆವಣಿಗೆಯಾಗುವುದು ಸವಾಲುಗಳಿಗೆ ಯಶಸ್ವಿಯಾದ ರೀತಿಯ ಪ್ರತಿವರ್ತನೆ ತೋರುವ ಕ್ರಿಯಾಶಕ್ತಿಯುಳ್ಳ ಅಲ್ಪಸಂಖ್ಯಾತ ಗುಂಪುಗಳ ನಾಯಕತ್ವದಲ್ಲಿ-ಎಂಬುದು ಟಾಯ್‍ನ್‍ಬಿಯವರ ಗ್ರಂಥದ ಪ್ರಮೇಯ. ನಾಯಕರು ಕ್ರಿಯಾತ್ಮಕವಾಗಿ ಈ ಸವಾಲುಗಳಿಗೆ ಪ್ರತಿಕ್ರಿಯೆ ತೋರಿಸದಿದ್ದಾಗ ಆ ನಾಗರಿಕತೆಗಳು ಕ್ಷೀಣಿಸುತ್ತವೆ.
ಟಾಯ್ನಿಬಿಯವರ ಸಿದ್ಧಾಂತಗಳು ಇತರ ಹಲವು ಇತಿಹಾಸಕಾರರಕ್ಕಿಂತ ಭಿನ್ನವಾಗಿವೆ. ನಾಗರಿತೆಯ ಸಾವು ಅನಿವಾರ್ಯವೆಂದು ಸ್ಪಿಂಗ್ಲರ್ ತನ್ನ ದಿ ಡಿಕ್ಲೈನ್ ಆಫ್ ದಿ ವೆಸ್ಟ್ ಎಂಬ ಗ್ರಂಥದಲ್ಲಿ ಹೇಳಿರುವ ಮಾತನ್ನು ಟಾಯ್‍ನ್‍ಬಿ ಒಪ್ಪುವುದಿಲ್ಲ. ಎಡೆಬಿಡದೆ ಬರುತ್ತಿರುವ ಸವಾಲುಗಳಿಗೆ ಅದು ಅನುಕ್ರಿಯೆ ತೋರಿಸಬಹುದು ಅಥವಾ ತೋರಿಸದಿರಬಹುದು. ಆರ್ಥಿಕ ಬಲಗಳಿಂದ ಇತಿಹಾಸ ರೂಪಿತವಾಗುತ್ತದೆ ಎಂಬ ಕಾರ್ಲ್ ಮಾಕ್ರ್ಸನ ವಾದವನ್ನೂ ಟಾಯ್‍ನ್‍ಬಿ ಒಪ್ಪುವುದಿಲ್ಲ. ಆಧ್ಯಾತ್ಮಿಕ ಬಲಗಳು ಇತಿಹಾಸವನ್ನು ರೂಪಿಸುತ್ತವೆ ಎಂಬುದು ಇವರ ಅಭಿಪ್ರಾಯ.
ಟಾಯ್ನಿಬಿಯವರು ಇತರ ಗ್ರಂಥಗಳು ಇವು: ಗ್ರೀಕ್ ಹಿಸ್ಟಾರಿಕಲ್ ಥಾಟ್ ಮತ್ತು ಗ್ರೀಕ್ ಸಿವಿಲೈಝೇಷನ್ ಅಂಡ್ ಕ್ಯಾರೆಕ್ಟರ್ (1924), ಸಿವಿಲೈಝೇಷನ್ ಆನ್ ಟ್ರೈಯಲ್ (1948), ಆ್ಯನ್ ಹಿಸ್ಟೋರಿಯನ್ಸ್ ಅಪ್ರೋಚ್ ಟು ರಿಲಿಜನ್ (1956), ಈಸ್ಟ್ ಟು ವೆಸ್ಟ್ : ಎ ಜರ್ನಿ ರೌಂಡ್ ದಿ ವಲ್ರ್ಡ್ (1958) ಮತ್ತು ಹೆಲೆನಿಸಂ : ದಿ ಹಿಸ್ಟೊರಿ ಆಫ್ ಎ ಸಿವಿಲೈಝೇಷನ್ (1959).