ಹಣ ಕೊಡದೆ ಪುಕ್ಕಟೆ ಸಿಕ್ಕುವ ಪದಾರ್ಥಗಳಿಂದ ಭಿನ್ನವಾದುದನ್ನು ಈ ಹೆಸರಿನಿಂದ ಕರೆಯಲಾಗಿದೆ (ಎಕನಾಮಿಕ್ ಗೂಡ್ಸ್). ಪುಕ್ಕಟೆಯಾಗಿ ಸಿಗುವ ಸರಕುಗಳಿಗೆ ಉದಾಹರಣೆಯೆಂದರೆ ಗಾಳಿ, ಸೂರ್ಯನ ಬಿಸಿಲು, ಬೆಳಕು ಇತ್ಯಾದಿ. ಸಂದರ್ಭಕ್ಕೆ ತಕ್ಕಂತೆ ಸರಕುಗಳನ್ನು ಈ ರೀತಿ ವಿಭಾಗ ಮಾಡಬೇಕಾಗುತ್ತದೆ. ಏಕೆಂದರೆ ಸಾಧಾರಣ ಸಂದರ್ಭಗಳಲ್ಲಿ ಗಾಳಿ, ಸೂರ್ಯನ ಬೆಳಕು, ಜೊತೆಗೆ ನೀರು ಇವೆಲ್ಲ ಪುಕ್ಕಟೆ ಸಿಗುವ ಸರಕುಗಳೇ ನಿಜ. ಆದರೆ ಕೊಳಾಯಿಯಲ್ಲಿ ಬರುವ ನೀರು, ಯಂತ್ರಗಳಿಂದ ನಾವೇ ಪುಕ್ಕಟೆಕೊಳ್ಳುವ ಗಾಳಿ-ಇವು ಆರ್ಥಿಕ ಸರಕುಗಳಾಗುತ್ತವೆ. ಏಕೆಂದರೆ ಹಾಗಾದಾಗ ಅವಕ್ಕೆ ಹಣದಬೆಲೆ ಬರುತ್ತದೆ. ಪುಕ್ಕಟೆವಸ್ತುಗಳಿಗೆ ಹಣದಬೆಲೆ ಇಲ್ಲವಾಗಿ ಅವು ಅರ್ಥಶಾಸ್ತ್ರದ ಪರಿಮಿತಿಗೆ ಒಳಪಡುವುದಿಲ್ಲ. ಆರ್ಥಿಕ ಸರಕುಗಳು ಮಾತ್ರ ಈ ಪರಿಮಿತಿಗೆ ಒಳಪಡುತ್ತವೆ. ಆರ್ಥಿಕ ಸರಕುಗಳು ವಸ್ತು, ಸೇವೆ-ಹೀಗೆ ಎರಡು ರೂಪದಲ್ಲೂ ಇರಬಹುದು. ಆಸ್ತಿಯ ಹಕ್ಕಿನ ಪತ್ರ, ಬಂಧಪತ್ರ, ಕರಾರುಪತ್ರ ಇತ್ಯಾದಿಗಳು ಪರೋಕ್ಷ ಸರಕುಗಳೆನಿಸುತ್ತವೆ. ಸರ್ಕಾರ ಮೊದಲಾದ ಸಂಸ್ಥೆಗಳು ಒದಗಿಸುವ ಸಲಹೆ, ಸೇವೆಗಳು ಹೊರನೋಟಕ್ಕೆ ಪುಕ್ಕಟೆಯಾಗಿ ಕಂಡರೂ ಅವಕ್ಕೆ ಜನ ತೆರಿಗೆ ರೂಪದಲ್ಲಿ ಹಣ ತೆತ್ತಿರುತ್ತಾರಾದ ಕಾರಣ ಅಂಥವೂ ಆರ್ಥಿಕ ಸರಕುಗಳಾಗುತ್ತವೆ. ವಸ್ತುರೂಪವಾದ ಆರ್ಥಿಕ ಸರಕುಗಳನ್ನು ಅನೇಕ ಅರ್ಥಶಾಸ್ತ್ರಜ್ಞರು ಸಂಪತ್ತು ಎಂದು ಕರೆದಿದ್ದಾರೆ. ಅದು ಎರಡು ಬಗೆ : ಅನುಭೋಗಿಗಳ ಸರಕು ಮತ್ತು ಉತ್ಪಾದಕರ ಸರಕು. ಅನುಭೋಗಿಗಳಿಗೆ ನೇರ ಭೋಗಕ್ಕೆ ಒದಗುವುವು ಅನುಭೋಗಿಗಳ ಸರಕುಗಳಾಗು ತ್ತವೆ. ಅಂಥ ವಸ್ತುಗಳ ಉತ್ಪಾದನೆಗಾಗಿ ಉತ್ಪಾದಕರು ಬಳಸುವುದೇ ಉತ್ಪಾದಕರ ಸರಕುಗಳು. ಸರಕು ಯಾರ ಸ್ವಾಮ್ಯದಲ್ಲಿದೆ ಎಂಬುದರ ಮೇಲೆ ಈ ವಿಂಗಡಣೆಯನ್ನು ಮಾಡಲಾಗಿದೆ. ಇದ್ದಿಲು, ಬಟ್ಟೆ ಮುಂತಾದವನ್ನು ಎರಡೂ ಬಗೆಯವೆಂದು ಹೇಳಬಹುದು. ಇವು ಮನೆಯಲ್ಲಿ ದ್ದರೆ ಅನುಭೋಗಿಯ ಸರಕುಗಳಾಗುತ್ತವೆ. ಅಂಗಡಿಯಲ್ಲೋ ಕಾರ್ಖಾನೆಯಲ್ಲೋ ಇದ್ದರೆ ಉತ್ಪಾದನಾ ಸರಕುಗಳಾಗುತ್ತವೆ.