ಆರ್ಥಿಕ ನಿಯಮಗಳು
ಆರ್ಥಿಕ ಸಮಸ್ಯೆಗಳ ಕಾರಣ ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಮಾರ್ಗದರ್ಶನ ನೀಡುವಂಥ ನಿಯಮಗಳು (economic laws). ಅರ್ಥವಿಜ್ಞಾನಿ ಪ್ರಥಮತಃ ಕೆಲವು ಊಹಾನಿಯಮಗಳನ್ನು ರಚಿಸಿಕೊಳ್ಳುತ್ತಾನೆ. ವಾಸ್ತವ ಪ್ರಪಂಚದ ಆಗುಹೋಗುಗಳಲ್ಲಿ ಇವುಗಳಿಗೆ ವಿರೋಧ ಕಂಡುಬಂದಿದ್ದಲ್ಲಿ ಮತ್ತು ಸಾರ್ವತ್ರಿಕ ಪ್ರಾಮುಖ್ಯಕ್ಕೆ ಹೊಂದುವ ಹಾಗೆ ತೋರಿಬಂದಲ್ಲಿ ಈ ಊಹಾನಿಯಮಗಳೇ ಸ್ಥಾಪಿತ ನಿಯಮಗಳಾಗುತ್ತವೆ. ಕಾಲಕ್ರಮದಲ್ಲಿ ಇವು ಪರೀಕ್ಷಿಸಲ್ಪಟ್ಟು ಸಿದ್ಧಾಂತಗಳಾಗುತ್ತವೆ. ಸದಾಕಾಲವೂ ಏಕಪ್ರಕಾರವಾಗಿ ಅನ್ವಯಿಸುವ ನಿಯಮ ರಚನೆಯೇ ಎಲ್ಲ ವಿಜ್ಞಾನಿಗಳ ಗುರಿ. ನಿಯಮಗಳ ನಿರ್ದಿಷ್ಟತೆ ಹೆಚ್ಚಿದಂತೆ ವಿಜ್ಞಾನ ನಿರ್ದಿಷ್ಟತೆಯೂ ಹೆಚ್ಚುತ್ತದೆ.
ವಿಜ್ಞಾನದ ನಿಯಮ ಒಂದು ಸಾಮಾನ್ಯ ಸಿದ್ಧಾಂತ ಅಥವಾ ಪ್ರವೃತ್ತಿಯ ನ್ಯಾಸ; ಇದು ಹೆಚ್ಚು ಕಡಿಮೆ ಸತ್ಯ ಹಾಗೂ ನಿರ್ದಿಷ್ಟ ಎಂದು ಆಲ್ಫ್ರೆಡ್ ಮಾರ್ಷಲ್ ಹೇಳಿದ್ದಾನೆ. ಯಾವ ಅಡಚಣೆಯೂ ಇಲ್ಲದಲ್ಲಿ ಪ್ರತಿಯೊಂದು ಕಾರಣವೂ ತನ್ನದೇ ಆದ ಫಲಿತಾಂಶವನ್ನು ಹೊಂದಿರುತ್ತವೆ. ಇತರ ಸಂದರ್ಭಗಳು ವ್ಯತ್ಯಾಸವಾಗಿದ್ದಲ್ಲಿ, ಒಂದು ಆರ್ಥಿಕ ಬದಲಾವಣೆ ಯಿಂದ ಏನು ಪರಿಣಾಮ ಉಂಟಾಗುತ್ತದೆ ಎಂಬುದನ್ನು ಅರ್ಥಶಾಸ್ತ್ರದ ನಿಯಮಗಳು ತೋರಿಸುತ್ತವೆ. ಮಾರ್ಷಲ್ ಹೇಳುವಂತೆ, ಒಂದು ಸಮಾಜಶಾಸ್ತ್ರದ ನಿಯಮ ಅಥವಾ ಒಂದು ಸಾಮಾಜಿಕ ನಿಯಮ ಆ ಸಮಾಜದಲ್ಲಿನ ಪ್ರವೃತ್ತಿಯ ನ್ಯಾಸ. ಅಂದರೆ, ಒಂದು ನಿರ್ದಿಷ್ಟ ಸಂದರ್ಭದಲ್ಲಿ, ಒಂದು ಸಮಾಜದ ಗುಂಪಿನಲ್ಲಿ ಒಂದು ನಿರ್ದಿಷ್ಟ ಕ್ರಿಯೆ ಉಂಟಾಗುತ್ತದೆ ಎಂದು ತೋರಿಸುವ ಹೇಳಿಕೆಯಾಗಿರುತ್ತದೆ. ಆರ್ಥಿಕ ನಿಯಮಗಳ, ಆರ್ಥಿಕ ಪ್ರವೃತ್ತಿಗಳ ಹೇಳಿಕೆಗಳು ಹಣದ ಸಹಾಯದಿಂದ ಅಳೆಯಬಹುದಾದ ಸಮಾಜ ನಿಯಮಗಳ ಒಂದು ಭಾಗ.
ಸಂಪತ್ತು ಅಥವಾ ಸರಕುಗಳೊಂದಿಗೆ ಮಾನವನ ವ್ಯವಹಾರಿಕ ಮತ್ತು ಸಾಮಾನ್ಯ ಸಂಬಂಧಗಳೇನು ಎಂಬುದನ್ನು ಅರ್ಥಶಾಸ್ತ್ರದ ನಿಯಮಗಳು ತೋರಿಸಿಕೊಡುತ್ತವೆ. ಅಂದರೆ ಮಾನವ ಮಾರುಕಟ್ಟೆಯಲ್ಲಿ ನಡೆಸುವ ವ್ಯವಹಾರಗಳನ್ನು ವಿವರಿಸುವುದೇ ಆರ್ಥಿಕ ನಿಯಮಗಳ ಮುಖ್ಯ ಉದ್ದೇಶ. ಮಾನವನ ಸಾಮಾನ್ಯ ಚಟುವಟಿಕೆಗಳು ಅವನ ವಿಚಾರಶೀಲತೆಯನ್ನವಲಂಬಿಸಿರುವುದರಿಂದ, ಅವು ಎಲ್ಲ ಸಂದರ್ಭಗಳಲ್ಲೂ ಒಂದೇ ರೀತಿ ಇರುತ್ತವೆಂದು ಹೇಳಲಾಗುವುದಿಲ್ಲ. ಆರ್ಥಿಕ ನಿಯಮಗಳು ಮಾನವನ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದುವಾದುದರಿಂದ ಮತ್ತು ಆ ಚಟುವಟಿಕೆಗಳು ನಿರ್ದಿಷ್ಟವಾಗಿರು ವುದಿಲ್ಲವಾದ್ದರಿಂದ, ಆರ್ಥಿಕ ನಿಯಮಗಳೂ ನಿರ್ದಿಷ್ಟವಾಗಿರುವುದಿಲ್ಲ. ಅರ್ಥಶಾಸ್ತ್ರ ಮಾನವನ ಆರ್ಥಿಕ ಚಟುವಟಿಕೆಗಳನ್ನು ಸಾಮಾನ್ಯವಾಗಿ ತಿಳಿಸಬಹುದೇ ವಿನಾ ನಿರ್ದಿಷ್ಟವಾಗಿ ತಿಳಿಸಲಾರದು. ಆದ್ದರಿಂದಲೇ ಅರ್ಥಶಾಸ್ತ್ರದ ನಿಯಮಗಳ ಸ್ವರೂಪ, ಪ್ರಕೃತಿ ಹಾಗೂ ಭೌತವಿಜ್ಞಾನಿಗಳ ಸ್ವರೂಪದಿಂದ ಬೇರೆಯಾಗಿದೆ. ಉದಾಹರಣೆಗೆ, ಗುರುತ್ವಾಕರ್ಷಣ ನಿಯಮ ಒಂದು ನಿರ್ದಿಷ್ಟವಾದ ಹೇಳಿಕೆ. ಯಾವ ಊಹೆಗಳ ಮೇಲೆ ಈ ನಿಯಮ ರಚಿತವಾಗಿದೆಯೋ ಅವು ಹೆಚ್ಚು ಬದಲಾವಣೆಗೆ ಒಳಗಾಗುವುದಿಲ್ಲವಾದ್ದರಿಂದ ಇದರ ನಿರ್ದಿಷ್ಟತೆ ಹೆಚ್ಚಾಗಿರುತ್ತದೆ. ಆದರೆ ಆರ್ಥಿಕ ನಿಯಮಗಳಿಗೆ ಆಧಾರವಾಗಿರುವ ಊಹೆಗಳು ಹೆಚ್ಚು ಬದಲಾವಣೆ ಹೊಂದುವುದಕ್ಕೆ ಅವಕಾಶವಿರುವುದರಿಂದ ಈ ನಿಯಮಗಳ ನಿರ್ದಿಷ್ಟತೆ ಕಡಮೆಯಾಗುತ್ತದೆ. ಊಹೆಗಳು ಬದಲಾದಾಗ ಅವುಗಳ ಆಧಾರದ ಮೇಲೆ ರಚಿತವಾಗಿರುವ ನಿಯಮಗಳೂ ಬದಲಾಗುತ್ತವೆ. ಎಲ್ಲ ವಿಜ್ಞಾನಗಳ ನಿಯಮಗಳೂ ಆಯ್ದ ಪರಿಸ್ಥಿತಿಗಳಿಗೆ ಮಾತ್ರ ಅನ್ವಯಿಸುತ್ತವೆಂದು ಹೇಳುವುದುಂಟು. ಈ ಹೇಳಿಕೆ ಪ್ರಕೃತಿ ಹಾಗೂ ಭೌತವಿಜ್ಞಾನಿಗಳ ನಿಯಮಗಳಿಗಿಂತ ಹೆಚ್ಚಾಗಿ ಅರ್ಥಶಾಸ್ತ್ರದಂಥ ಸಮಾಜ ವಿಜ್ಞಾನದ ನಿಯಮಗಳಿಗೆ ಅನ್ವಯಿಸುತ್ತದೆ. ಆರ್ಥಿಕ ನಿಯಮಗಳು ಹೆಚ್ಚು ನಿರ್ದಿಷ್ಟವಾಗಿರುವುದಿಲ್ಲವೆಂಬುದನ್ನು ಬೇಡಿಕೆ ನಿಯಮದ ಮೂಲಕ ನಿದರ್ಶಿಸಬಹುದು. ಇತರ ಸಂದರ್ಭಗಳು ಏಕರೀತಿಯಲ್ಲಿರು ವಾಗ, ಬೇಡಿಕೆ ನಿಯಮ ಸೂಚಿಸುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ ಬೇಡಿಕೆ ಹೆಚ್ಚಿದರೂ ಬೆಲೆಗಳು ಏರದಿರಬಹುದು. ಹೀಗೆ ಸಂಭವಿಸಿದಾಗ ಈ ನಿಯಮ ಸುಳ್ಳೆಂದು ಭಾವಿಸುವುದು ಸರಿಯಲ್ಲ. ಇತರ ಸಂದರ್ಭಗಳು ಬದಲಾವಣೆ ಹೊಂದಿರುವುದರಿಂದ ಈ ನಿಯಮದಲ್ಲಿ ಪರಿಣಾಮ ಉಂಟಾಗದಿರಬಹುದು. ಹೀಗೆ ಸಂದರ್ಭಗಳು ವ್ಯತ್ಯಾಸವಾಗುವುದರಿಂದ ಆರ್ಥಿಕ ನಿಯಮಗಳು ಆಯ್ದ ಪರಿಸ್ಥಿತಿಗಳಿಗೆ ಮಾತ್ರ ಅನ್ವಯಿಸುತ್ತವೆ.
ಆರ್ಥಿಕ ನಿಯಮಗಳು ಪ್ರಕೃತಿ ಹಾಗೂ ಭೌತವಿಜ್ಞಾನಗಳ ನಿಯಮಗಳಷ್ಟು ನಿರ್ದಿಷ್ಟವಾಗಿಲ್ಲದಿದ್ದರೂ ಸಮಾಜವಿಜ್ಞಾನಗಳ ಪೈಕಿ ಹೆಚ್ಚು ನಿರ್ದಿಷ್ಟವಾದ ನಿಯಮಗಳನ್ನು ಳ್ಳದ್ದು ಅರ್ಥಶಾಸ್ತ್ರವೇ. ಇತರ ಸಮಾಜವಿಜ್ಞಾನಗಳ ನಿಯಮಗಳಿಗಿಂತ ಆರ್ಥಿಕ ನಿಯಮಗಳು ಹೆಚ್ಚು ನಿರ್ದಿಷ್ಟವಾಗಿರಲು ಕೆಲವು ಕಾರಣಗಳಿವೆ. ಆರ್ಥಿಕ ಚಟುವಟಿಕೆಗಳ ಮಾಪನ ಹಣದ ಅಳತೆಗೋಲಿನಿಂದ ಸಾಧ್ಯವಾಗಿದೆ. ಅಷ್ಟೇ ಅಲ್ಲದೆ ಅರ್ಥಶಾಸ್ತ್ರದಲ್ಲಿ ಇತ್ತೀಚೆಗೆ ಗಣಿತ ಮತ್ತು ಸಂಖ್ಯಾಶಾಸ್ತ್ರಗಳ ಬಳಕೆ ಹೆಚ್ಚಿರುವುದರಿಂದ ಆರ್ಥಿಕ ನಿಯಮಗಳ ನಿರ್ದಿಷ್ಟತೆಯನ್ನು ಹೆಚ್ಚಿಸಲು ಸಾಧ್ಯವಾಗಿದೆ ಆರ್ಥಿಕ ಅಧ್ಯಯನ ಕ್ರಮಗಳು, ಆರ್ಥಿಕ ಸಂಖ್ಯಾಶಾಸ್ತ್ರ.