ಸಾಧಾರಣವಾದ ಅರ್ಥದಲ್ಲಿ ಗೇಣಿ ಎಂದರೆ ಒಂದು ವಸ್ತುವಿನ ಉಪಯೋಗಕ್ಕಾಗಿ ನಿರ್ದಿಷ್ಟ ಕಾಲದಲ್ಲಿ ಕೊಡಬೇಕಾಗುವ ಹಣ. ಆದರೆ ಆರ್ಥಿಕ ಪರಿಭಾವನೆ ಯಲ್ಲಿ ಗೇಣಿಯ ಅರ್ಥ ಬೇರೆ (ಎಕನಾಮಿಕ್ ರೆಂಟ್). ಕ್ಲಾಸಿಕಲ್ ಅರ್ಥಶಾಸ್ತ್ರಜ್ಞನಾದ ರಿಕಾರ್ಡೊ ಗೇಣಿಯನ್ನು ಮೂಲ ಹಾಗೂ ಅವಿನಾಶಿ ಭೂಮಿಯ ಉಪಯೋಗಕ್ಕಾಗಿ ಜಮೀನಿನ ಒಡೆಯನಿಗೆ ಕೊಡಲಾಗುವ ಭಾಗ ಎಂದು ವಿವರಿಸಿದ. ರಿಕಾರ್ಡೊ ಪ್ರಕಾರ ಗೇಣಿ ಭೂಮಿಯ ವಿವಿಧ ಫಲಗುಣದ ಸ್ವಭಾವದಿಂದಾಗಿ ಉದ್ಭವಿಸುತ್ತದೆ. ಮೊಟ್ಟಮೊದಲು ಅತ್ಯಂತ ಫಲವತ್ತಾದ ಭೂಮಿಯಲ್ಲಿ ಫಸಲು ತೆಗೆಯಲಾಗುತ್ತದೆ. ಭೂಮಿಯಲ್ಲಿ ಸಹ ಫಸಲು ತೆಗೆಯಲಾಗುತ್ತದೆ. ಕಾಲ ಕಳೆದಂತೆ ಪ್ರಜಾಸಂಖ್ಯೆ ಹೆಚ್ಚಿ ಆಹಾರಕ್ಕೆ ಬೇಡಿಕೆ ಹೆಚ್ಚಾದಾಗ ಕಡಿಮೆ ಫಲವತ್ತಾದ ಭೂಮಿಯಲ್ಲಿ ಸಹ ಫಸಲು ತೆಗೆಯಲಾಗುತ್ತದೆ. ಆದರೆ ಕಡಿಮೆ ಫಲವತ್ತಾದ ಭೂಮಿಯುಳ್ಳ ಮಾಲೀಕರಿಗೆ ಸ್ವಲ್ಪ ಅಧಿಶೇಷ ಪ್ರಾಪ್ತವಾಗುತ್ತದೆ. ಈ ಅಧಿಶೇಷವೇ ಆರ್ಥಿಕ ಗೇಣಿ. ಕಡಿಮೆ ಫಲವತ್ತಾದ ಭೂಮಿಗಳಲ್ಲಿ ಅಧಿಶೇಷ ಉದ್ಭವಿಸುತ್ತ ಹೋಗುತ್ತದೆ. ಸೀಮಾಂತ ಭೂಮಿಯಲ್ಲಿ (ಕೊಟ್ಟಕೊನೆಯಲ್ಲಿ ವ್ಯವಸಾಯ ಮಾಡಿದ) ಗೇಣಿ ಉದ್ಭವಿಸುವುದಿಲ್ಲ. ಏಕೆಂದರೆ ಈ ಭೂಮಿಯಲ್ಲಿ ಬೆಳೆಯಲಾಗುವ ಬೆಳೆಯ ಉತ್ಪಾದನಾ ವೆಚ್ಚ ಆ ಬೆಳೆಯ ಮಾರುಕಟ್ಟೆಯ ಬೆಲೆಗೆ ಸಮವಾಗಿರುತ್ತದೆ. ಆದ್ದರಿಂದ ಸೀಮಾಂತ ಭೂಮಿಯ ಬೆಳೆ ಮತ್ತು ಅದರ ಉತ್ಪಾದನಾ ವೆಚ್ಚ ಉಳಿದ ಭೂಮಿಗಳಲ್ಲಿ ಉದ್ಭವಿಸಬಹುದಾದ ಗೇಣಿಗೆ ಅಳತೆಗೋಲು. ಈ ರೀತಿ ವಿವಿಧ ಫಲಗಳಿಂದ ಉದ್ಭವಿಸುವ ಗೇಣಿಗೆ ವಿವಿಧ ಫಲ ಪರಿಣಾಮ ಗೇಣಿ (ಡಿಫರೆನ್ಷಿಯಲ್ ರೆಂಟ್) ಎಂದು ಕರೆಯಬಹುದು.

ಭೂಮಿ ಉತ್ಪಾದಕ ಅವಯವಗಳಲ್ಲೊಂದು. ಬೇರೆ ಅವಯವಗಳಿಗೂ ಗೇಣಿ ಇರುವ ಸಾಧ್ಯತೆಯುಂಟು ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟರು. ಆದ್ದರಿಂದ ಗೇಣಿ ವಿರಳತೆ ಆದಾಯವಾಗುವುದೂ ಉಂಟು. ಒಂದು ವಸ್ತು ಹೇರಳವಾಗಿ ಲಭಿಸುವುದಾದರೆ ಅದಕ್ಕೆ ಗೇಣಿಯ ಪ್ರಶ್ನೆಯೇ ಬರುವುದಿಲ್ಲ. ಅದರಿಂದ ನೀಡಿಕೆಗೆ ಸಂಬಂಧಪಟ್ಟಂತೆ ಅಪರಿಪುರ್ಣ ಸ್ಥಿತಿಸ್ಥಾಪಕತ್ವವಿರುವ ಉತ್ಪಾದಕ ಅವಯವಗಳೆಲ್ಲದಕ್ಕೂ ಗೇಣಿ ಪ್ರಾಪ್ತವಾಗುವ ಸಾಧ್ಯತೆ ಉಂಟು. ಹೀಗೆ ವಿರಳತೆಯಿಂದಾಗಿ ಉದ್ಭವಿಸುವ ಗೇಣಿಗೆ ವಿರಳತೆಯ ಪರಿಣಾಮ ಗೇಣಿ (ಸ್ಕೇರ್ಸಿಟಿ ರೆಂಟ್) ಎಂದು ಕರೆಯಬಹುದು. ನೀಡಿಕೆಯ ದೃಷ್ಟಿಯಿಂದ ಭೂಮಿ ಸ್ಥಾಯಿಯಾಗಿರುವುದರಿಂದ ಮತ್ತು ಅದರ ನೀಡಿಕೆಯ ಬೆಲೆ ಸೊನ್ನೆಯಾಗಿರುವುದರಿಂದ ಅದರಿಂದ ಬರುವ ಇಡೀ ಉತ್ಪನ್ನವನ್ನು ಆರ್ಥಿಕದೃಷ್ಟಿಯಿಂದ ಗೇಣಿ ಎಂದು ಕರೆಯಬಹುದು. ಹಾಗೆಯೇ ಬೇರೆಯ ವಸ್ತುಗಳಿಂದ ಬರುವ ಇಡೀ ಪ್ರತಿಫಲ ಸಹ ಅವುಗಳ ಬೇಡಿಕೆ ಸ್ಥಾಯಿಯಾಗಿದ್ದರೆ ಮತ್ತು ಬೇಡಿಕೆಯ ಬೆಲೆ ಸೊನ್ನೆಯಾಗಿದ್ದರೆ ಗೇಣಿಯಾಗಬಹುದು. ಭೂಮಿಯಿಂದ ಬರುವ ಇಡೀ ಉತ್ಪನ್ನವನ್ನು ನಾವು ಗೇಣಿ ಎಂದು ಕರೆದರೆ ಅದರ ಉಪಯೋಗಕ್ಕೆ ಏಕೆ ಯಾವಾಗಲೂ ಬೆಲೆ ತೆರಬೇಕಾಗುತ್ತದೆ ಎನ್ನುವ ಪ್ರಶ್ನೆ ಬರುತ್ತದೆ. ಇದಕ್ಕೆ ಉತ್ತರ ಮೇಲೆ ನೋಡಿದ ವಿರಳತೆಯ ಪರಿಣಾಮ. ಭೂಮಿಯ ಬೇಡಿಕೆಗೆ ಸಂಬಂಧಪಟ್ಟಂತೆ ನೀಡಿಕೆ ಕಡಿಮೆಯಿರುವುದರಿಂದ ಅದರ ಉಪಯೋಗಕ್ಕೆ ಸ್ವಲ್ಪ ಬೆಲೆ ಕೊಡಬೇಕಾಗುತ್ತದೆ. ಕೆಲವು ಅರ್ಥಶಾಸ್ತ್ರಜ್ಞರು ಆರ್ಥಿಕ ಗೇಣಿಯನ್ನು ವಿವರಿಸಲು ವರ್ಗಾವಣೆ ಆದಾಯ ಸಾಧ್ಯತೆಯೆಂದರೆ, ಒಂದು ಉತ್ಪಾದನಾ ಅವಯವವನ್ನು ಅದರ ಪ್ರಸ್ತುತ ಉಪಯೋಗದಿಂದ ಮತ್ತೊಂದು ಉಪಯೋಗಕ್ಕೆ ವರ್ಗಾಯಿಸಿದಾಗ ಅದರಿಂದ ಬರುವ ಆದಾಯ ಸಾಧ್ಯತೆ. ಉದಾಹರಣೆಗೆ ಒಂದು ಭಾಗದ ಭೂಮಿ ವರ್ಷಕ್ಕೆ ಅದರ ಪ್ರಸ್ತುತ ಬೆಳೆಯಲ್ಲಿ ೧,೦೦೦ ರೂಪಾಯಿನಷ್ಟು ಉತ್ಪಾದಿಸುತ್ತದೆಂದು ಭಾವಿಸೋಣ. ಇದನ್ನು ಮತ್ತೊಂದು ಉಪಯುಕ್ತ ಬೆಳೆಗೆ ಉಪಯೋಗಿಸಿದರೆ ಅದು ವರ್ಷಕ್ಕೆ ೯೦೦ ರೂಪಾಯಿನಷ್ಟು ಉತ್ಪಾದಿಸುತ್ತದೆ ಎಂದುಕೊಳ್ಳೋಣ. ಹೀಗಾದಾಗ ಅದರ ಪ್ರಸ್ತುತ ಉಪಯೋಗದಲ್ಲಿ ಅದು ೧೦೦ ರೂಪಾಯಿ ಹೆಚ್ಚು ಆದಾಯ ಸಂಪಾದಿಸುತ್ತದೆ ಎಂದ ಹಾಗಾಯಿತು. ಈ ೧೦೦ ರೂ. ಒಂದು ರೀತಿಯ ಅಧಿಶೇಷ. ಈ ಅಧಿಶೇಷವನ್ನು ಒಂದು ರೀತಿಯ ಗೇಣಿ ಎಂದು ಕರೆಯಬಹುದು. ಈ ರೀತಿಯ ಅಧಿಶೇಷ ಎಲ್ಲ ಉತ್ಪಾದಕ ಅವಯವಗಳ ವಿಷಯದಲ್ಲೂ ಉದ್ಭವವಾಗಬಹುದು. ಭೂಮಿಯ ಗೇಣಿಗೂ ಇತರ ಉತ್ಪಾದನಾ ಸಾಧನೆಗಳಿಂದ ಬರುವ ಅಧಿಶೇಷಕ್ಕೂ ಇರುವ ವ್ಯತ್ಯಾಸವನ್ನು ಮಾರ್ಷಲ್ ಪ್ರಸ್ತಾಪಿಸುತ್ತಾನೆ. ಭೂಮಿಯ ನೀಡಿಕೆ ಸ್ಥಾಯಿ. ಇದರ ನೀಡಿಕೆಯನ್ನು ಮಾನವ ವೃದ್ಧಿಗೊಳಿಸಲಾರ. ಉತ್ಪಾದನಾ ಸಾಮಗ್ರಿಗಳನ್ನು ಬೇಡಿಕೆ ಹೆಚ್ಚಿದಂತೆ ಹೆಚ್ಚು ಉತ್ಪಾದಿಸಲು ಸಾಧ್ಯ. ಭೂಮಿಯ ನೀಡಿಕೆ ಸ್ಥಾಯಿಯಾಗಿರುವುದರಿಂದ ಅದರಿಂದ ಬರುವ ಆದಾಯವನ್ನು ಗೇಣಿ ಎಂದು ಕರೆಯಬಹುದು. ಉತ್ಪಾದನಾ ಸಾಮಗ್ರಿಗಳ ನೀಡಿಕೆಯನ್ನು ಅತ್ಯಲ್ಪ ಕಾಲದಲ್ಲಿ ವೃದ್ಧಿಗೊಳಿಸುವುದು ಸಾಧ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ಅವುಗಳ ಬೇಡಿಕೆ ಹೆಚ್ಚಾದರೆ ಅದು ಬೆಲೆಯ ಏರಿಕೆಯಲ್ಲಿ ಪರ್ಯವಸಾನವಾಗುತ್ತದೆ. ಈ ಬೆಲೆ ಏರಿಕೆ ಹೊಸ ಸಾಧನಗಳು ನಿರ್ಮಾಣವಾಗುವವರೆಗೂ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಇವುಗಳಿಂದ ಬರುವ ಆದಾಯದಲ್ಲಿ ಇರುವ ಅಧಿಶೇಷವನ್ನು ಅರೆಗೇಣಿ ಎಂದು ಕರೆಯಬಹುದು. ಈ ಗೇಣಿಯ ಅಧಿಶೇಷ ತಾತ್ಕಾಲಿಕ. ನೀಡಿಕೆ ಅಧಿಕವಾದ ಅನಂತರ ಇದು ಮಾಯವಾಗುತ್ತದೆ ಗೇಣಿ,ಗೇಣಿ ಸಿದ್ಧಾಂತ.