ಆರ್ತ್ಯಾಪ್ಟರ
ಕೀಟವರ್ಗದ ಒಂದು ಗಣ. ಮಿಡತೆ (ಗ್ರಾಸ್‍ಹಾಪರ್) ಚಿಮ್ಮಂಡೆ, ಹೆಮ್ಮಿಡತೆ ಮುಂತಾದ ಕೀಟಗಳನ್ನೊಳಗೊಂಡಿದೆ. ಇವುಗಳಲ್ಲಿ ಮುಂದಿನ ರೆಕ್ಕೆ ಕಿರಿದಾಗಿದ್ದು ಅಪಾರದರ್ಶಕವಾಗಿದೆ. ಹಿಂದಿನ ರೆಕ್ಕೆಗಳು ಅಗಲವಾಗಿ ಪಾರದರ್ಶಕವಾಗಿವೆ. ಅವು ಬೀಸಣಿಗೆಯಂತೆ ಮಡಚಿಕೊಳ್ಳಬಲ್ಲವು. ಬಾಯಲ್ಲಿನ ಅಂಗಗಳು ಆಹಾರವನ್ನು ಕತ್ತರಿಸಲು ಅನುಕೂಲವಾಗುವಂತೆ ಮಾರ್ಪಟ್ಟಿವೆ. ಹಿಂಭಾಗದ ಮೂರನೆಯ ಜೊತೆಯ ಕಾಲುಗಳು ಉದ್ದವಾಗಿದ್ದು ಕುಪ್ಪಳಿಸಲು ಅಥವಾ ಜಿಗಿಯಲು ಸಹಾಯಕ. ರೂಪಾಂತರಣ ಅಪುರ್ಣ ರೀತಿಯದ್ದು. ಈ ಗಣದ ಕೀಟಗಳು ಶಬ್ದವನ್ನುಂಟುಮಾಡುವ ವಿಶೇಷ ಅಂಗಗಳನ್ನು ಹೊಂದಿವೆ. ವರ್ಣಮಯವಾಗಿ ಎಕ್ಕದ ಗಿಡಗಳ ಮೇಲೆ ಜೀವಿಸುವ ಪೊಸೆಲಿಸಿರಾಷ್ಟಿಕ ಸಾಮನ್ಯವಾಗಿ ಕಾಣಬಹುದಾದ ಕುಪ್ಪಳಿಸುವ ಮಿಡತೆ. ಹಸಿರು ಬಣ್ಣದ, ಉದ್ದ ಕುಡಿಮೀಸೆಗಳಿರುವ ಅನೇಕ ಪ್ರಭೇದದ ಮಿಡತೆಗಳನ್ನು ಹುಲ್ಲಿನ ಮೇಲೆ ಕುಪ್ಪಳಿಸುವುದನ್ನು ನೋಡಬಹುದು. ಸಣ್ಣ ಕುಡಿಮೀಸೆಯ ಕುಪ್ಪಳಿಸುವ ಮಿಡತೆಗಳನ್ನೇ ಹೋಲುವ ಗುಂಪುಗುಂಪಾಗಿ ವಲಸೆ ಹೋಗುವ ಮಿಡತೆಗಳಿವೆ. ಏಕಾಏಕಿ ಪಿಡುಗಿನಂತೆ ಕಾಡಿ ಸಸ್ಯಸಂಪತ್ತನ್ನು ನಾಶಮಾಡುವ ಕೆಲವೊಂದು ವಿಶಿಷ್ಟ ಮಿಡತೆಗಳಿರುತ್ತವೆ. ಉದಾಹರಣೆ: ಲೇಕಸ್ಯ ಮೈಗ್ರಟೋರಿಯ, (ವಲಸೆಮಿಡತೆ), ಸಿಸ್ಟೇಸೆರ್ಕ ಗ್ರಿಗೇರಿಯ, (ಮರು ಭೂಮಿಮಿಡತೆ) ನೋಮಡಕ್ರಿಸ್ ಸೆಪ್ಟೆಮ್ಫಾಸಿಯೋಟ (ಕೆಂಪುಮಿಡತೆ). ಚಿಮ್ಮಂಡೆಗಳಲ್ಲಿ ಕೆಲವಕ್ಕೆ ಸಣ್ಣ ರೆಕ್ಕೆಗಳಿದ್ದರೆ, ಕೆಲವೊಂದರಲ್ಲಿ ಅವು ಸಂಪುರ್ಣವಾಗಿ ಕ್ಷೀಣಿಸಿರಬಹುದು. ಗೃಹ ಚಿಮ್ಮಂಡೆ (ಹೌಸ್ಕ್ರಿಕೆಟ್) ಗ್ರಿಲ್ಲಸ್ ಡೊಮೆಸ್ಟಿಕಸ್ ನಿಶಾಚರಿ. ಸಂದುಗೊಂದುಗಳಲ್ಲಿ ಅಡಗಿಕೊಂಡು ಒಂದೇ ಸಮನೆ ಶಬ್ದ ಮಾಡುವುದು. ಬಟ್ಟೆ, ಕಾಗದ, ಹಣ್ಣು ಮುಂತಾದ ಯಾವುದೇ ವಸ್ತುವನ್ನು ತಿಂದು ಹಾಳುಮಾಡುತ್ತದೆ.