ಉತ್ತರ ಫ್ರಾನ್ಸಿನ ಒಂದು ಜಿಲ್ಲೆ. ಹೆಚ್ಚಾಗಿ ಬೆಲ್ಜಿಯಂನ ಆಗ್ನೇಯ ಪ್ರಾಂತ್ಯ ಮತ್ತು ಲಕ್ಸಂಬರ್ಗ್ನ ಉತ್ತರಭಾಗದಲ್ಲಿ ಹರಡಿರುವ ಅರಣ್ಯದಿಂದ ಕೂಡಿದ ಪ್ರಸ್ಥಭೂಮಿ ಪ್ರದೇಶ. ಇದು ಮ್ಯೂಸ್ ನದಿಯ ಪೂರ್ವ ಮತ್ತು ದಕ್ಷಿಣಪಾರ್ಶ್ವದಲ್ಲಿದೆ. ಇಳಿಜಾರು ಪ್ರವಾಹವುಳ್ಳ ನದಿಗಳು ಈ ಪ್ರದೇಶದಲ್ಲಿ ಹರಿಯುವುದರಿಂದ ಆಳವಾದ ಅನೇಕ ಕಮರಿಗಳು, ಕಡಿದಾದ ಬಂಡೆಗಳಿಂದ ಕೂಡಿದೆ. ಜನ ಹೆಚ್ಚಾಗಿ ವೆಲೂನ್. ಜನಾಂಗಕ್ಕೆ ಸೇರಿದವರು. ಈ ಪ್ರದೇಶದ ವಿಸ್ತೀರ್ಣಕ್ಕಿಂತಲೂ ಜನಸಂಖ್ಯೆಯೇ ಅಧಿಕಪ್ರಮಾಣದಲ್ಲಿದೆ. ಪಶುಪಾಲನೆ, ವ್ಯವಸಾಯ-ಇವು ಇಲ್ಲಿನ ಜನರ ಮುಖ್ಯ ಉದ್ಯೋಗಗಳು. ಹುಲ್ಲು ಬಯಲಿರುವ ಕಡೆಗಳಲ್ಲಿ ಮಾಂಸಕ್ಕಾಗಿ ದನಗಳನ್ನು ಸಾಕುತ್ತಾರೆ. ನೆಲ ಸಾಕಷ್ಟು ಫಲವತ್ತಾಗಿಲ್ಲದಿರುವುದರಿಂದ ಆಲೂಗಡ್ಡೆ, ತೋಕೆಗೋದಿ, ರೈ ಎಂಬ ಚಿಕ್ಕಗೋದಿ, ಟ್ರಿಫಾಯಲ್ ಎಂಬ ತ್ರಿಪತ್ರಕ ಸಸ್ಯ ಇಂಥವೇ ಮುಖ್ಯ ಬೆಳೆಗಳು. ಕಣಿವೆ ಪ್ರದೇಶದ ಕೆಲವು ಕಡೆ ಹಾಲಿಗಾಗಿ ದನಗಳನ್ನು ಸಾಕುತ್ತಾರೆ. ಕೈಗಾರಿಕೆ ಗಣನೀಯ ಪ್ರಮಾಣದಲ್ಲಿ ಬೆಳೆದಿಲ್ಲ. ರಸ್ತೆ ನಿರ್ಮಾಣಕ್ಕೆ ಬೇಕಾದ ಕಲ್ಲು ಚಚ್ಚುವುದು, ಮರಗಳನ್ನು ಕಡಿದು ಸಾಗಿಸುವುದು, ಚರ್ಮ ಹದ ಮಾಡುವುದು, ಉಣ್ಣೆತೆಗೆಯುವುದು-ಇವೇ ಮುಂತಾದ ಉದ್ಯೋಗಗಳು ಇಲ್ಲಿ ಬೆಳೆದಿವೆ. ರೈಲಿನ ಸೌಕರ್ಯ ಇರುವ ಬಟ್ಗೆನ್ಬಾಕ್, ಬಲಾಂಜ್, ಬೋವಿನಿ ಮುಂತಾದ ಕಡೆಗಳಲ್ಲಿ ಕೆಲವು ಸಣ್ಣ ವ್ಯಾಪಾರ ಕೇಂದ್ರಗಳಿವೆ. ಇವಲ್ಲದೆ ಕೆಲವು ಆಕರ್ಷಕ ಪ್ರವಾಸಿ ಕೇಂದ್ರಗಳೂ ಇವೆ. ಇವುಗಳಲ್ಲಿ ಸ್ಪಾ ಎಂಬ ಸ್ಥಳ ಖನಿಜಜಲದ ಚಿಲುಮೆಗಳನ್ನು ಹೊಂದಿದೆ. ಫ್ರಾನ್ಸ್ ಮತ್ತು ಬೆಲ್ಜಿಯಂಗಳ ನಡುವೆ ಇರುವ ಈ ಪ್ರದೇಶ ಎರಡು ಮಹಾಯುದ್ಧಗಳ ಕಾಲದಲ್ಲೂ ಭೀಕರ ಕದನಗಳ ಕೇಂದ್ರವಾಯಿತು. ೧೯೪೪ರ ಡಿಸೆಂಬರ್, ೧೯೪೫ರ ಜನವರಿ ಕಾಲದಲ್ಲಿ ನಡೆದ ಬ್ಯಾಟ್ಲ್ ಆಫ್ ದಿ ಬಲ್ಜ್ ಎಂಬ ಪರಿಣಾಮಕಾರಿ ಕದನ ನಡೆದದ್ದು ಇಲ್ಲಿಯೇ.

"https://kn.wikipedia.org/w/index.php?title=ಆರ್ಡೆನ್&oldid=715074" ಇಂದ ಪಡೆಯಲ್ಪಟ್ಟಿದೆ