ಆರ್ಕಾಟ್ ಮುತ್ತಿಗೆ
ಮೊಗಲರ ಆಳ್ವಿಕೆಯ ಕೊನೆಗಾಲದಲ್ಲಿ ಮರಾಠರು ಪ್ರಬಲರಾಗಿ ದಕ್ಷಿಣಭಾರತ ಮೊಗಲ್ ಆಡಳಿತದಿಂದ ಸ್ವತಂತ್ರವಾಯಿತು. ಹೈದರಾಬಾದಿನ ನಿಜಾಮನೂ ಆರ್ಕಾಟಿನ ನವಾಬನೂ ಸ್ವತಂತ್ರರಾದರು. ೧೭೧೦ರಲ್ಲಿ ಸಾದುತ್ತುಲ್ಲಾಖಾನ್ ಸ್ವತಂತ್ರನಾಗಿ ಆರ್ಕಾಟ್ ಮತ್ತು ತಂಜಾವೂರು ಪ್ರದೇಶಗಳಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸಿ ಆರ್ಕಾಟ್ ನವಾಬೀ ಮನೆತನವನ್ನು ಸ್ಥಾಪಿಸಿದ. ಈತ ೧೭೪೨ರಲ್ಲಿ ಮರಣಹೊಂದಿದ. ಆ ಕಾಲದಲ್ಲೇ ಮರಾಠರ ಪ್ರಾಬಲ್ಯ ವಿಶೇಷವಾಗಿತ್ತು. ೧೭೪೩-೧೭೪೯ರ ವರೆಗೆ ಅನ್ವರುದ್ದೀನ್ ನವಾಬನಾಗಿದ್ದ. ಈತನ ಅನಂತರ ಆರ್ಕಾಟ್ ಮುತ್ತಿಗೆ ೧೭೫೧ರಲ್ಲಿ ನಡೆಯಿತು. ಅದೇ ಕಾಲದಲ್ಲಿ ಹೈದರಾಬಾದಿನ ನಿಜಾಮ ಮರಣಹೊಂದಿದ. ಅಧಿಕಾರಕ್ಕಾಗಿ ಮಗನಾದ ನಾಸಿರ್ಜಂಗನಿಗೂ ಮೊಮ್ಮಗನಾದ ಮುಸಾಫರ್ಜಂಗನಿಗೂ ಕದನವೇರ್ಪಟ್ಟಿತು. ಚಂದಾಸಾಹೇಬ ಫ್ರೆಂಚರ ಸಹಾಯದಿಂದ ಆರ್ಕಾಟಿನ ನವಾಬನಾದ ಅನ್ವರುದ್ದೀನನನ್ನು ಕೊಂದುಹಾಕಿದ. ಮುಸಾಫರ್ಜಂಗ್, ಚಂದಾಸಾಹೇಬ ಮತ್ತು ಫ್ರೆಂಚರು ಒಂದಾದರು. ಅನ್ವರುದ್ದೀನನ ಮಗನಾದ ಮಹಮ್ಮದಾಲಿ, ನಾಸಿರ್ಜಂಗ್ ಹಾಗೂ ಇಂಗ್ಲಿಷರು ಪ್ರತಿಪಕ್ಷ ವನ್ನು ಹೂಡಿದರು. ಫ್ರೆಂಚರು ಮತ್ತು ಚಂದಾಸಾಹೇಬ ಒಂದಾಗಿ ಮಹಮ್ಮದಾಲಿಯನ್ನು ನಿರ್ನಾಮಮಾಡಲು ತಿರುಚಿರಾಪಳ್ಳಿಯನ್ನು ಮುತ್ತಿದರು. ಆ ಸಮಯದಲ್ಲಿ ಶತ್ರುಪಕ್ಷದವರ ಗಮನ ಸೆಳೆದು ಅವರ ಬಲವನ್ನು ಕುಗ್ಗಿಸಲು ಕ್ಲೈವ್ನ ನೇತೃತ್ವದಲ್ಲಿ ಇಂಗ್ಲಿಷ್ ಸೈನ್ಯ ಆರ್ಕಾಟಿಗೆ ಮುತ್ತಿಗೆ ಹಾಕಿತು. ಅವರ ಸಹಾಯಕ್ಕಾಗಿ ಮರಾಠರ ಮುರಾರಿರಾವ್ ಹೋಳ್ಕರ್ ಆರ್ಕಾಟಿಗೆ ಧಾವಿಸಿದ. ಇಂಗ್ಲಿಷರು ಆರ್ಕಾಟನ್ನು ವಶಪಡಿಸಿಕೊಂಡ ಸುದ್ದಿ ತಿಳಿದ ಚಂದಾಸಾಹೇಬ ತಿರುಚನಾಪಳ್ಳಿಯಿಂದ ಅರ್ಧಭಾಗ ಸೈನ್ಯವನ್ನು ಆರ್ಕಾಟಿನತ್ತ ಕಳುಹಿಸಿದ. ಸೈನ್ಯ ಸೋತುಹೋಯಿತಲ್ಲದೆ ಚಂದಾಸಾಹೇಬ ಕೊಲೆಯಾದ. ಹೈದರಾಬಾದಿನ ಸಿಂಹಾಸನಕ್ಕಾಗಿ ಕಾದಾಡುತ್ತಿದ್ದ ನಾಸಿರ್ಜಂಗ್ ಹಾಗೂ ಮುಸಾಫರ್ಜಂಗರೂ ಕ್ರಮೇಣ ಕೊಲೆಯಾದರು. ಬ್ರಿಟಿಷರ ನೆರವಿನಿಂದ ಮಹಮ್ಮದಾಲಿ ಆರ್ಕಾಟಿನ ನವಾಬನಾದ. ಯುದ್ಧ ೧೭೫೪ರಲ್ಲಿ ಇಂಗ್ಲಿಷ್ ಮತ್ತು ಫ್ರೆಂಚರಿಗೆ ಪರಸ್ಪರ ಒಪ್ಪಂದದಲ್ಲಿ ಕೊನೆಯಾಯಿತು. ಆರ್ಕಾಟ್ ಮುತ್ತಿಗೆಯೆಂದು ಕರೆಯುವ ಘಟನೆಯ ಪರಿಣಾಮಗಳು ಬಹಳ ಮಹತ್ತರ ವಾದುವು. ಮೊದಲನೆಯದಾಗಿ ದೇಶೀಯ ರಾಜರು ದುರ್ಬಲಗೊಂಡು ಕ್ರಮೇಣ ಇಂಗ್ಲಿಷರ ಆಜ್ಞಾನುವರ್ತಿಗಳಾಗುತ್ತ ಬಂದರು. ಎರಡನೆಯದಾಗಿ ಡೂಪ್ಲೆಯ ಪತನವೂ ಕ್ಲೈವನ ಏಳ್ಗೆಯೂ ಪ್ರಾರಂಭವಾದುವು. ಕೊನೆಯದಾಗಿ ಫ್ರೆಂಚರ ಪ್ರಾಬಲ್ಯ ಕುಂದಿ ಇಂಗ್ಲಿಷರ ಬಲಸಂವರ್ಧನೆಯಾಯಿತು.