ಈಗ ಫ್ರಾನ್ಸಿನಲ್ಲಿ ಲೀನವಾಗಿರುವ ಆರೆಂಜ್ ಎಂಬ ಪಾಳೆಯಪಟ್ಟು. ಚಾರಲ್ಸ್ ಮಹಾಶಯನ ಕಾಲದಿಂದಲೂ ಒಂದು ಸ್ವತಂತ್ರ ಸಂಸ್ಥಾನವಾಗಿದ್ದಿ ತೆಂದು ಐತಿಹಾಸಿಕವಾಗಿ ಕಂಡುಬರುತ್ತದೆ. ೮ನೆಯ ಶತಮಾನದಲ್ಲಿ ಜೀವಿಸಿದ್ದ ವಿಲಿಯಂ ಎಂಬಾತ ಆರೆಂಜಿನ ಮೊದಲ ರಾಜನಾಗಿದ್ದನೆಂದು ಹೇಳಲಾಗಿದೆ. ಹದಿನಾಲ್ಕನೆಯ ಲೂಯಿ ಈ ಪಾಳೆಯಪಟ್ಟನ್ನು ಜಯಿಸಿದ. ಆದರೆ ರಾಜಮನೆತನದ ಹಕ್ಕುಬಾಧ್ಯತೆಗಳನ್ನೊಪ್ಪಿ ಕೊಂಡ. ಮೂರನೆಯ ವಿಲಿಯಂ ಎಂಬ ಆರೆಂಜ್ ಸಂಸ್ಥಾನಾಧೀಶ ೧೬೮೮ರಲ್ಲಿ ಇಂಗ್ಲೆಂಡಿಗೆ ಬಂದಿಳಿದು ಎರಡನೆಯ ಜೇಮ್ಸನನ್ನು ಹೊರತಳ್ಳಿ ೧೭೦೨ರವರೆಗೂ ಇಂಗ್ಲೆಂಡಿನ ದೊರೆಯಾಗಿದ್ದ. ಆ ಬಳಿಕ ಹಕ್ಕುದಾರಿಕೆಯ ವಿಚಾರವಾಗಿ ಜಿಜ್ಞಾಸೆಯೆದ್ದಿತು. ಕೊನೆಗೆ ಜಾನ್ ವಿಲಿಯಂ ಫ್ರೈಸೋ ಎಂಬಾತನಿಗೆ ಆ ಹುರಳಿಲ್ಲದ ಹಕ್ಕುದಾರಿಕೆ ಲಭಿಸಿತು. ಆತನ ತರುವಾಯ ಐದನೆಯ ವಿಲಿಯಂ, ಆರನೆಯ ವಿಲಿಯಂ ಎಂಬುವರಿಗೆ ಆ ಹಕ್ಕು ದೊರೆಯಿತು. ಅವರಲ್ಲಿ ಆರನೆಯ ವಿಲಿಯಂ ೧೮೧೫ರಲ್ಲಿ ನೆದರ್ಲೆಂಡಿಗೆ ಒಂದನೆಯ ವಿಲಿಯಂ ಎಂಬ ಹೆಸರಿನಲ್ಲಿ ರಾಜನಾದ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: