ಆಫ್ರಿಕ ಮತ್ತು ಹೊರನಾಡಿನ ನೀಗ್ರೊ ಜಾನಪದ

ಹತ್ತೊಂಬತ್ತನೆಯ ಶತಮಾನದವರೆಗೆ ಅಜ್ಞಾತವಾಗಿ, ಕಗ್ಗತ್ತಲೆಯ ಖಂಡವೆನಿಸಿದ್ದ ಆಫ್ರಿಕದಲ್ಲಿ ನೀಗ್ರೊ ಜಾನಪದ ಅತ್ಯಂತ ಸತ್ತ್ವಪೂರ್ಣವಾಗಿ ಇನ್ನೂ ಉಳಿದಿದೆ. ಸಕ್ರಮ ಸಂಗ್ರಹಕಾರ್ಯ ಅಲ್ಲಿನ್ನೂ ನಡೆಯಬೇಕಾಗಿದ್ದರೂ ಪಾಶ್ಚಾತ್ಯ ಮಿಷನರಿಗಳೂ ವಿದ್ವಾಂಸರೂ ವಿಶೇಷ ಸಾಹಸದಿಂದ ಸಾಕಷ್ಟು ಸಾಹಿತ್ಯವನ್ನು ಸಂಗ್ರಹಿಸಿ ಈಗಾಗಲೇ ಅಧ್ಯಯನ ಕಾರ್ಯವನ್ನು ನಡೆಸಿದ್ದಾರೆ. ಪಾಶ್ಚಾತ್ಯ ಸಂಸ್ಕøತಿ ಕ್ರಮವಾಗಿ ಆ ನೆಲವನ್ನೆಲ್ಲ ತಬ್ಬುತ್ತಿರುವಾಗ ಅಲ್ಲಿನ ಸಂಗ್ರಹ ತೀವ್ರರೀತಿಯಲ್ಲಿ ನಡೆಯಬೇಕಾದ ಅಗತ್ಯವೂ ಇದೆ. ರಾಜಕೀಯವಾಗಿ, ಭೌಗೋಳಿಕವಾಗಿ, ಅನೇಕ ಅಡ್ಡಿ ಅಡಚಣೆಗಳಿರುವ ದಕ್ಷಿಣ ಆಫ್ರಿಕ ನೀಗ್ರೊಗಳ ನೆಲೆವೀಡು. ಸಹರ ಮರುಭೂಮಿಯ ದಕ್ಷಿಣ ಭಾಗವೆಲ್ಲ ದಕ್ಷಿಣ ಆಫ್ರಿಕವೆನಿಸುತ್ತದೆ. ಜೊತೆಗೆ ನೀಗ್ರೊಗಳು ನಾನಾ ಕಾರಣಗಳಿಂದಾಗಿ ಮುಖ್ಯವಾಗಿ ಗುಲಾಮರಾಗಿ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ವೆಸ್ಟ್ ಇಂಡೀಸ್ ಮುಂತಾದ ಕಡೆಗಳಿಗೂ ಒಯ್ಯಲ್ಪಟ್ಟು ಅಲ್ಲಿನ ಪ್ರಮುಖ ಪ್ರಜಾವರ್ಗವೇ ಆಗಿದ್ದಾರೆ. ಅವರ ಜೊತೆಯಲ್ಲಿ ಸಹಜವಾಗಿ ಆಫ್ರಿಕದ ಜಾನಪದವೂ ಸಾಗಿ ಅಲ್ಲಿನ ಪ್ರಭಾವ ಪರಿಸರಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆಯನ್ನು ಪಡೆದೂ ತನ್ನ ಮೂಲಸತ್ತ್ವವನ್ನೂ ತಕ್ಕಮಟ್ಟಿಗೆ ಕಾಪಾಡಿಕೊಂಡಿದೆ. ನೀಗ್ರೊ ಜಾನಪದ ಎಂದಾಗ ಈ ಎಲ್ಲ ಪ್ರದೇಶಗಳನ್ನೂ ದೃಷ್ಟಿಯಲ್ಲಿಟ್ಟುಕೊಳ್ಳುವುದು ಅನಿವಾರ್ಯ.

ಅಮೆರಿಕದಲ್ಲಿ ನೀಗ್ರೊ ಜಾನಪದ ಬದಲಾಯಿಸಿ

ಅಮೆರಿಕದಲ್ಲಿ ನೀಗ್ರೊ ಜಾನಪದದ ಮೇಲೆ ಅನೇಕ ಪ್ರಭಾವಗಳು ಉಂಟಾದುವು. ಅಲ್ಲಿನ ಮೂಲನಿವಾಸಿಗಳಾದ ರೆಡ್ ಇಂಡಿಯನ್ನರು, ಹೊರಗಿನಿಂದ ಬಂದ ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಷ್, ಪೋರ್ಚುಗೀಸ್, ಡಚ್ ಮುಂತಾದ ಜನಾಂಗಗಳು, ಅವುಗಳಲ್ಲಿನ ಸಾಮಾಜಿಕ ಪರಿವರ್ತನೆಗಳು ಸಾಕಷ್ಟು ರೀತಿಯಲ್ಲಿ ನೀಗ್ರೊ ಜಾನಪದವನ್ನು ಕಲಕಲು ಸಾಧ್ಯವಾಗಿವೆ ಎಂಬುದನ್ನು ಮನಗೊಂಡಾಗ, ಕೆಲವು ವಿದ್ವಾಂಸರು ಅಲ್ಲಿನ ನೀಗ್ರೊ ಜಾನಪದ ಗೀತೆಗಳನ್ನು ಮೂರು ಮುಖ್ಯ ಭಾಗಗಳಾಗಿ ವಿಂಗಡಿಸಿಕೊಂಡಿರುವುದು ಸಮರ್ಪಕವಾಗಿಯೇ ಇದೆ. ದಕ್ಷಿಣ ನೀಗ್ರೊ ಹಾಡುಗಳನ್ನು ಆಧುನಿಕ ಕೂನ್ ಪದಗಳು, ರ್ಯಾಗ್ ಟೈಮ್ ಹಾಡುಗಳು, ಮತ್ತು ಶುದ್ಧ ನೀಗ್ರೊ ಪದಗಳು ಎಂದು ಸ್ಥೂಲವಾಗಿ ವಿಂಗಡಿಸಲಾಗಿದೆ. ವಿವರಗಳಿಗೆ (ನೋಡಿ- ಆಫ್ರಿಕದ-ನೀಗ್ರೊ-ಸಂಗೀತ).ಕೆಲವು ಜನಪದ ಮೇಳಗಳೂ ಆಫ್ರಿಕದಲ್ಲಿ ನಡೆಯುತ್ತವೆ. ಕಥೆಗೆ ತಕ್ಕಂತೆ ಆಯಾ ಪಾತ್ರಕ್ಕೆ ತಕ್ಕಂತೆ ಮುಖ್ಯ ನಿರೂಪಕ ಅಭಿನಯಿಸುತ್ತಾನೆ. ಕೆಲವರಿಗೆ ಈ ಕಥೆಗಿಂತ ಮಧ್ಯೆ ಮಧ್ಯೆ ಬರುವ ಹಾಡುಗಳೇ ಮುಖ್ಯ. ಜನಪ್ರಿಯವಾದ ಯಾವ ಹಾಡನ್ನೂ ಕಥೆಗಾರ ಕೈಬಿಡುವಂತಿಲ್ಲ. ಹಾಗೆ ಬಿಟ್ಟರೆ ಜನ ರೇಗಿ ಬೀಳುತ್ತಾರೆ. ಹಾಡುಗಾರನ ಜೊತೆಯಲ್ಲಿ ಸಭಿಕರೂ ದನಿಗೂಡಿಸುತ್ತಾರೆ. ಅವರು ಮುಗಿಸುವವರೆಗೆ ಕಥೆ ಮುಂದೆ ಸಾಗುವಂತಿಲ್ಲ. ಮಕ್ಕಳು ನಿದ್ದೆ ಮಾಡದಂತೆ ಒಗಟುಗಳನ್ನು ಬೇರೆ ಈತ ನಡು ನಡುವೆ ಹೇಳುತ್ತಾನೆ.

ಆಫ್ರಿಕ ಗಾದೆ ಬದಲಾಯಿಸಿ

ಆಫ್ರಿಕ ಗಾದೆಗಳಿಗೆ ಹೆಸರಾದುದು. ಕೋರ್ಟು ಕಚೇರಿಗಳಲ್ಲೂ ಈ ಗಾದೆಗಳ ಬಳಕೆ ಹೆಚ್ಚು. ಗೋಲ್ಡ್‍ಕೋಸ್ಟಿನಲ್ಲಿ ಗಂಟೆಗಟ್ಟಲೆ ಕಾಲೇಜು ಹುಡುಗಿಯರು ಗಾದೆಗಳಲ್ಲೇ ಮಾತಾಡುತ್ತಾರೆ. ಕೋರ್ಟಿನಲ್ಲಿ ನ್ಯಾಯವಾದಿಗಳೂ ನ್ಯಾಯ ಮೂರ್ತಿಗಳೂ ಗಾದೆಗಳನ್ನು ಬಳಸುತ್ತಾರೆ. ನೀಗ್ರೊ ಗಾದೆಗಳು ಎಲ್ಲ ದೇಶದ ಗಾದೆಗಳಂತೆ ಅರ್ಥವತ್ತಾಗಿ, ಅನುಭವಪೂರ್ಣವಾಗಿ, ಆಕರ್ಷಕವಾಗಿರುತ್ತವೆ. ತಾಯುಳ್ಳ ಮಗು ಎರಡನೆಯ ಬಾರಿಗೆ ಉಣ್ಣುತ್ತದೆ. (ಕೆನ್ಯ) ಎರಡು ಪಾದಗಳಿಂದ ಯಾರೂ ನದಿಯ ಆಳವನ್ನು ನೋಡುವುದಿಲ್ಲ. (ಗೋಲ್ಡಕೋಸ್ಟ್) ಎರಡು ಮನೆಯುಳ್ಳವ ಹಸಿವಿನಿಂದ ಸಾಯುತ್ತಾನೆ. (ಉಗಾಂಡ) ಸೂಜಿಯಿಂದ ದಾರ ಹೆಸರಾಯಿತು. (ಕಾಂಗೊ)[೧]

ಆಫ್ರಿಕದ ಜಾನಪದ ಕಥೆ ಬದಲಾಯಿಸಿ

ಆಫ್ರಿಕದ ಜಾನಪದದಲ್ಲಿ ಕಥೆಗಳಿಗೂ ವಿಶೇಷವಾದ ಸ್ಥಾನವಿದೆ. ಜಾನಪದ ಸಂಗ್ರಹಕಾರರು ಸಹಸ್ರಾರು ಜನಪದ ಕಥೆಗಳನ್ನು ದಕ್ಷಿಣ ಆಫ್ರಿಕದಲ್ಲಿ ಗುರುತಿಸಿದ್ದಾರೆ. ಆಫ್ರಿಕದ ಸಾವಿರಾರು ಪಂಗಡಗಳ ಸಮಗ್ರ ಕಥಾಸಾಹಿತ್ಯ ಸಂಗ್ರಹವಾಗಬೇಕಾಗಿದೆ. ಒಂದೊಂದು ಪಂಗಡದಲ್ಲೂ ಸಾವಿರಾರು ಕಥೆಗಳಿವೆ ಎಂದು ಅಂದಾಜು ಮಾಡಲಾಗಿದೆ. ಸ್ಟ್ರಕ್, ಕ್ಲಿಪ್ಲೆ ಮುಂತಾದ ವಿದ್ವಾಂಸರು ಇಲ್ಲಿನ ಸಂಗ್ರಹ, ಪರಿಶೀಲನೆಗಳನ್ನು ನಡೆಸಿದ ಗಣ್ಯವಿದ್ವಾಂಸರು. ಆಫ್ರಿಕದ ಕಥೆಗಳಲ್ಲಿ ಅವುಗಳ ನೈಸರ್ಗಿಕ ಹಿನ್ನೆಲೆಯಿಂದಾಗಿ ಪ್ರಾಣಿಕಥೆಗಳ ಪಾತ್ರ ಪ್ರಮುಖವಾಗಿದೆ. ಅಲ್ಲಿನ ಕಥೆಗಳಲ್ಲಿ ಮೊಲ ತಂತ್ರಕುಶಲಿ. ಎರಡನೆಯ ಸ್ಥಾನ ಆಮೆಗೆ ದೊರೆಯುತ್ತದೆ. ಕಾಯಿಲೆಯೆಂದು ನಟನೆ ಹೂಡಿದ ಮೊಲ ತನಗಿಂತ ಪ್ರಬಲವಾದ ಪ್ರಾಣಿಯೊಂದರ ಮೇಲೆ ಪ್ರಯಾಣ ಮಾಡಿ ಪಂಥವನ್ನು ಗೆಲ್ಲುತ್ತದೆ. ನನ್ನನ್ನು ನೀರಿಗೆ ಮಾತ್ರ ಎಸೆಯಬೇಡ ಎಂದು ನಟಿಸಿ ಆಮೆ ಪ್ರಾಣಾಪಾಯದಿಂದ ಪಾರಾಗುತ್ತದೆ. ಉದಾಹರಣೆಗೆ ಚಿಕ್ಕಪ್ಪ ರೀಮಸ್‍ನ ಕಥೆಗಳನ್ನು ನೋಡಬಹುದು. ಅವೆಲ್ಲ ಮಕ್ಕಳಿಗಾಗಿ ಹುಟ್ಟಿದುವು. ನೀತಿಬೋಧಾತ್ಮಕವಾಗಿವೆ. ಕಥೆಗಳಲ್ಲಿನ ನಾಯಕಪಾತ್ರ ಉಪಾಯಗಾರ ಸಾಧು ಮೊಲದ್ದು. ಖಳನಾಯಕ ಕ್ರೂರ ತೋಳರಾಯ. ತೋಳರಾಯನ ಎಲ್ಲ ಕುತಂತ್ರಗಳನ್ನು ಮೊಲ ನಿರ್ನಾಮ ಮಾಡಿ ಗೆಲ್ಲುತ್ತದೆ. ಈ ಕಥೆಗಳನ್ನು ವಾಲ್ಟ್‍ಡಿಸ್ನೆ ಮಕ್ಕಳಿಗಾಗಿ ಬಹು ಸೊಗಸಾಗಿ ಚಿತ್ರಿಸಿದ್ದಾನೆ. ಚಲನಚಿತ್ರಗಳನ್ನು ತಯಾರಿಸಿದ್ದಾನೆ.ಹೀಗೆಯೇ ಮಾನವರ, ಅತಿಮಾನವರ ಕಥೆಗಳೂ ಅಪಾರ ಸಂಖ್ಯೆಯಲ್ಲಿವೆ. ಜಾಣರ ಕಥೆಗಳಿಗೂ ಬರವಿಲ್ಲ.

ಸುದೀರ್ಘ ಕಥೆಗಳು ಬದಲಾಯಿಸಿ

ಒಬ್ಬ ರಾಜ ಯಾರೋ ಒಬ್ಬನಿಗೆ ಅಕ್ಕಿಕಾಳಿನಿಂದ ಚಾಪೆಯನ್ನು ಮಾಡಲು ಸೂಚಿಸಿದ. ಆ ಜಾಣ ಅಂಥ ಒಂದು ಚಾಪೆಯನ್ನು ಮಾದರಿಗಾಗಿ ಕೊಡಿ ಅನಂತರ ಮಾಡುತ್ತೇನೆ ಎಂದ. ಇನ್ನೊಬ್ಬ ರಾಜ ಒಂದೇ ದಿನದಲ್ಲಿ ಎತ್ತರವಾದ ಮನೆಯೊಂದನ್ನು ಕಟ್ಟಲು ಸೂಚಿಸಿದ. ಕಟ್ಟುವಾತ ಗಾಳಿಯಪಟದ ದಾರವನ್ನು ಹತ್ತಿ ಬಂದರೆ ನಾನು ಕಟ್ಟಿದ ಮನೆಯನ್ನು ನೋಡಲು ಸಾಧ್ಯ ಎಂದ. ಮಾಂತ್ರಿಕ ಕಥೆಗಳೂ ರಾಕ್ಷಸನ ಕಥೆಗಳೂ ಹೇರಳವಾಗಿ ದೊರೆಯುತ್ತವೆ.ಸುದೀರ್ಘ ಕಥೆಗಳು ಮಾತ್ರ ಆಫ್ರಿಕದ ಕಥೆಗಳಲ್ಲಿ ವಿರಳ. ಆದರೆ ಸಮಸ್ಯೆಯ ಕಥೆಗಳು, ಅಂತ್ಯವೇ ಇಲ್ಲದ ಕಥೆಗಳು ಬೇಕಾದಷ್ಟಿವೆ. ಪಶ್ಚಿಮ ಆಫ್ರಿಕದಲ್ಲಿ ಪುರಾಣ ಸಾಹಿತ್ಯ ಹೆಚ್ಚು. ಅವನ್ನು ಹೇಳುವವರಿಗೆ ಇಲ್ಲಿ ಅಧಿಕ ಗೌರವ. ಐತಿಹ್ಯ, ವಿವರಣಾತ್ಮಕ ಕಥೆಗಳು ಸಾಕಷ್ಟು ಸಿಗುತ್ತವೆ. ಪೂರ್ವ ಆಫ್ರಿಕಾ ಕಥೆಗಳಲ್ಲಿ ವಿವರಣಾತ್ಮಕ ಕಥೆಗಳು ಹೆಚ್ಚು.ಜಾನಪದದ ಎಲ್ಲ ಬಗೆಗಳೂ ಆಫ್ರಿಕದ ನೀಗ್ರೊ ಜನಾಂಗದಲ್ಲಿ ಲಭ್ಯವಾಗುತ್ತದೆ. ಅದೊಂದು ಎಂದೂ ಬತ್ತದ ತೊರೆ. ಜೀವಂತವಾದ ಜಾನಪದ ಒರತೆ.[೨]

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2008-01-25. Retrieved 2016-10-27.
  2. http://www.kanaja.in/%E0%B2%A8%E0%B3%80%E0%B2%97%E0%B3%8D%E0%B2%B0%E0%B3%8B-%E0%B2%9C%E0%B2%A8%E0%B2%BE%E0%B2%82%E0%B2%97%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%86%E0%B2%95%E0%B2%BE%E0%B2%B6-%E0%B2%9C/[ಶಾಶ್ವತವಾಗಿ ಮಡಿದ ಕೊಂಡಿ]