ಆದಿನಾಥ ಸ್ವಾಮಿಯ ಬಸದಿ, ಹಿರಿಯಂಗಡಿ ರಸ್ತೆ

ಬಸದಿ

ಕಾರ್ಕಳದ ಹಿರಿಯಂಗಡಿಗೆ ಹೋಗುವ ರಸ್ತೆಯಲ್ಲಿ ಶ್ರೀ ಆದಿನಾಥ ಸ್ವಾಮಿಯ ಅರಮನೆ ಬಸದಿ ನೆಲೆಸಿದೆ.ಕಾರ್ಕಳದ ಆನೆಕೆರೆಯಿಂದ ಹಿರಿಯಂಗಡಿಗೆ ಹೋಗುವ ರಸ್ತೆಯ ಬದಿಯಲ್ಲಿ ಸಿಗುವ ಶ್ರೀ ನೇಮಿಸಾಗರವರ್ಣಿ ಪ್ರೌಢಶಾಲೆಯ ಆವರಣದಲ್ಲಿ ಈ ಬಸದಿ ಇದೆ.

ಇತಿಹಾಸ

ಬದಲಾಯಿಸಿ

ಪ್ರಾಚೀನ ಕಾಲದಲ್ಲಿ ಇಲ್ಲಿ ಭೈರವರಸರು ಆಳಿಕೊಂಡಿದ್ದರಿಂದ ಈ ಬಸದಿಯನ್ನು ಅವರೇ ಕಟ್ಟಿಸಿರಬೇಕೆಂದು ಹೇಳಲಾಗುತ್ತದೆ. ಅವರ ಪತನದ ನಂತರ ಈ ಪ್ರದೇಶದಲ್ಲಿ ಕಾಡು ಬೆಳದು ನಿರ್ಜನ ಪ್ರದೇಶವಾಗಿತ್ತು. ನಂತರ ಈ ಬಸದಿಯ ಆಸುಪಾಸಿನ ಜಾಗವನ್ನು ಶ್ರಾವಕರೊಬ್ಬರು ತನ್ನ ಸ್ವಾಧೀನಪಡಿಸಿಕೊಂಡು ಈ ಬಸದಿಯನ್ನು ಜೀರ್ಣೋದ್ದಾರಗೊಳಿಸಿದರಂತೆ. ಮಧ್ಯದಲ್ಲೊಮ್ಮೆ ಕಟ್ಟೆಮಾರು ರಘುಚಂದ್ರ ಬಲ್ಲಾಳರು ಈ ಬಸದಿಯ ದೈನಂದಿನ ನಿರ್ವಹಣೆಯಲ್ಲಿ ಹೆಚ್ಚಿನ ಜವಾಬ್ದಾರಿವಹಿಸಿ ಮುನ್ನಡೆಸಿದರು. ಈಗ ಬಸದಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಇಂದ್ರರು ತಮ್ಮ ಆರ್ಥಿಕ ಸಂಪನ್ಮೂಗಳನ್ನು ಬಸದಿಯ ನಿರ್ವಹಣೆಗೆ ವಿನಿಯೋಗಿಸಲು ಪ್ರಾರಂಭಿಸಿದರು .

ವಿನ್ಯಾಸ

ಬದಲಾಯಿಸಿ

ಈ ಬಸದಿಯು ದೂರದಿಂದಲೇ ತನ್ನ ದೇವಕೂಟದ ಸ್ಥಾನದಲ್ಲಿರುವ ವಿಶಿಷ್ಟ ಮಾಡಿನ ರಚನೆಯಿಂದ ಗಮನವನ್ನು ಸೆಳೆಯುತ್ತದೆ. ಹಂಚಿನ ಮಾಡನ್ನು ಹೊಂದಿದ್ದರೂ ಇದರ ಎದುರಿನ ರಚನೆಯು ಆಕರ್ಷಕವಾದುದು. ಬಸದಿಯ ಗೋಪುರವು ಇತ್ತೀಚೆಗೆ ಜೀರ್ಣೋದ್ಧಾರ ಹೊಂದಿದ್ದು, ಬಸದಿಯ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಉಪಯೋಗಿಸಲ್ಪಡುತ್ತಿದೆ. ಬಸದಿಯ ಅಧಿಷ್ಟಾನಕ್ಕೆ ಹೋಗಲು ನಾಲು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ಜಗಲಿಯಲ್ಲಿ ಶಿಲಾಕಂಬಗಳ ಬದಲಾಗಿ ಮರದ ಕಂಬಗಳನ್ನು ಅಳವಡಿಸಲಾಗಿದೆ. ಪ್ರವೇಶದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರ ವರ್ಣಚಿತ್ರಗಳು ಕಂಡು ಬರುವುದಿಲ್ಲ. ಒಳಗಿನ ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇಲ್ಲ. ಅಲ್ಲಿ ತೂಗಿ ಹಾಕಲಾಗುವ ಜಯಘಂಟೆ, ಜಾಗಟೆಗಳನ್ನು ಹೊರಗಿನ ಜಗಲಿಯಲ್ಲಿ ತೂಗಿ ಹಾಕಲಾಗಿದೆ. ಬಸದಿಗೆ ತೀರ್ಥಂಕರ ಮಂಟಪ ಇಲ್ಲ. ಆದರೆ ಇಲ್ಲಿ ಗಂಧ ಕುಟಿಯು ಇದೆ. ಇದೇ ಮಂಟಪದಲ್ಲಿ ದೇವಕೂಟದಲ್ಲಿ ಪೂರ್ವಕ್ಕೆ ಮುಖ ಮಾಡಿದ ಶ್ರೀ ಪದ್ಮಾವತಿ ದೇವಿಯ ಮೂರ್ತಿ ಇದೆ. ದೇವಿಯ ಹಿಂದೆ ಲೋಹದ ಮಕರ ತೋರಣ ಪ್ರಭಾವಳಿ ಹಾಗೂ ಮೇಲ್ಗಡೆ ಒಂದು ನಾಗನ ಹೆಡೆ ಇದೆ. ಗರ್ಭಗೃಹದಲ್ಲಿ ವಿರಾಜಮಾನರಾಗಿರುವ ಶ್ರೀ ಆದಿನಾಥ ಸ್ವಾಮಿಯು ಚಂದ್ರಕಾಂತ ಶಿಲೆಯ ಬಿಂಬದಲ್ಲಿ ಸನ್ನಿಹಿತರಾಗಿದ್ದಾರೆ. ಸ್ವಾಮಿಯ ಹಿಂಬದಿಯಲ್ಲಿ ಲೋಹದ ಪ್ರಭಾವಳಿಯಿದ್ದು, ಅದರಲ್ಲಿ ಸ್ವಾಮಿಯ ಎಡ ಬಲಗಳಲ್ಲಿ ಗೋಮುಖ ಯಕ್ಷ ಮತ್ತು ಮಾತಂಗಿ ಯಕ್ಷಿಯರ ಉಬ್ಬು ಶಿಲ್ಪವಿದೆ. ಪ್ರಭಾವಲಯದಲ್ಲಿ ಮಕರ ತೋರಣದ ಅಲಂಕಾರ ಇಲ್ಲ, ಬದಲಾಗಿ ವಿಭಿನ್ನ ಸುಂದರ ಆಕೃತಿಗಳನ್ನು ಕಾಣಬಹುದು. ಮಧ್ಯಭಾಗದಲ್ಲಿ ಮೇಲ್ಗಡೆ ಕೀರ್ತಿ ಮುಖವಿದೆ. ರ‍್ಯಂಕಾಸನ ಭಂಗಿಯಲ್ಲಿರುವ ಸ್ವಾಮಿಯ ಕೆಳಗಡೆ ವೃಷಭ ಲಾಂಛನವನ್ನು ತೋರಿಸಲಾಗಿದೆ. ಕೆಳಗಡೆ ಒಂದು ಪೀಠದ ಮೇಲೆ ಮಹಾವೀರ ಸ್ವಾಮಿಯ ಚಂದ್ರಕಾಂತ ಶಿಲೆಯ ಮೂರ್ತಿ ಇದೆ. ಬಳಿಯಲ್ಲಿ ಶ್ರುತ ಮತ್ತು ಚತುರ್ವಿಂಶತಿ ತೀರ್ಥಂಕರರ ಒಂದು ಚಿಕ್ಕ ಬಿಂಬ ಇದೆ. ಅದರಂತೆ ಪಂಚಪರಮೇಷ್ಠಿಯ ಬಿಂಬವೂ ಇದೆ. ಆದರೆ ಪೂಜಿಸಲ್ಪಡುವ ಬ್ರಹ್ಮದೇವರ ಮೂರ್ತಿ ಇಲ್ಲ. ಇಲ್ಲಿ ಮೇಗಿನ ನೆಲೆ ಇದೆ, ಆದರೆ ಅಲ್ಲಿ ಯಾವುದೇ ಮೂರ್ತಿಯನ್ನು ಪ್ರತಿಷ್ಠಾಪಿಸಿಲ್ಲ.[]

ಇದರ ಹತ್ತಿರದಲ್ಲಿ ಅಬ್ಬಗ ದೇವಿಯ ಶ್ರೀ ಆದಿನಾಥ ಸ್ವಾಮಿ ಬಸದಿ ಮತ್ತು ಮಹಾವೀರ ಸ್ವಾಮಿಯ ಬಸದಿ ಇದೆ. ಇದು ಕಾರ್ಕಳ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಟ್ಟಿದೆ. ಬಸದಿಗೆ ಸಂಬಂಧಿಸಿದ ಎಲ್ಲಾ ಖರ್ಚು ವೆಚ್ಚಗಳನ್ನು ಡಾ. ಜಿನಚಂದ್ರರು ನೋಡಿಕೊಳ್ಳುತ್ತಿದ್ದಾರೆ. ಶ್ರೀ ಶಿಶುಪಾಲ ಇಂದ್ರರು ಇದರ ಪೂಜೆ ಪುರಸ್ಕಾರಗಳನ್ನು ನೆರವೇರಿಸುತ್ತಾರೆ. ಇಲ್ಲಿ ದಿನಕ್ಕೆ ಒಂದು ಬಾರಿ ಬೆಳಿಗ್ಗೆ ಮಾತ್ರ ಪೂಜೆ ನಡೆಯುತ್ತಿದೆ. ಬಸದಿಯ ಸುತ್ತಲೂ ಮುರಕಲ್ಲಿನಿಂದ ನಿರ್ಮಿತವಾದ ಭದ್ರವಾದ ಪ್ರಾಕಾರ ಗೋಡೆ ಇದೆ.

ವಿಧಿವಿಧಾನ

ಬದಲಾಯಿಸಿ

ಅಮ್ಮನವರಿಗೆ ವಿಶೇಷ ಪೂಜಾ ಸಂದರ್ಭಗಳಲ್ಲಿ ಸೀರೆಯುಡಿಸಿ, ಬಳೆಗಳನ್ನು ತೊಡಿಸಿ, ಶೃಂಗರಿಸಿ ಪೂಜಿಸಲಾಗುತ್ತದೆ. ಇಲ್ಲಿ ಅಭಿಷೇಕ ಪೂಜಾದಿಗಳು ಸರಳವಾಗಿ ನಡೆಯುತ್ತಿವೆ.

ಉಲ್ಲೇಖಗಳು

ಬದಲಾಯಿಸಿ
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೪೮-೪೯.