ಆದಿನಾಥ ಮತ್ತು ಶಾಂತಿನಾಥ ಬಸದಿ, ಬಜಿಲಕೇರಿ

ಆದಿನಾಥ ಮತ್ತು ಶಾಂತಿನಾಥ ಬಸದಿ, ಕರಾವಳಿಯ ಪುರಾತನ ಜೈನ ಬಸದಿಯಾಗಿದೆ.

ಮಂಗಳೂರು ನಗರದ ಬಂದರದ ಬಳಿ ಇರುವ ಬಜಿಲಕೇರಿಯಲ್ಲಿ ಈ ಜೈನ ಬಸದಿ ಇದೆ. ಇಲ್ಲಿ ಭಗವಾನ್ ಆದಿನಾಥಸ್ವಾಮಿ, ಭಗವಾನ್ ಶಾಂತಿನಾಥ ಸ್ವಾಮಿ ಹಾಗೂ ಮೇಗಿನನೆಲೆಯಲ್ಲಿ ಶೀತಲನಾಥ ಸ್ವಾಮಿ ಪೂಜಿಸಲ್ಪಡುತ್ತಿದ್ದಾರೆ, ಇದು ಉಳ್ಳಾಲ ಬಸ್ತಿಯಿಂದ ೧೨ ಕಿ. ಮೀ. ದೂರದಲ್ಲಿದೆ. ಈ ಬಸದಿಯು ಮೂಡುಬಿದಿರೆ ಶ್ರೀ ಮಠದ ಧಾರ್ಮಿಕ ವಲಯದಲ್ಲಿದೆ.[]

ಇತಿಹಾಸ

ಬದಲಾಯಿಸಿ

ಪಾಳುಬಿದ್ದಿದ್ದ ಈ ಚಾರಿತ್ರಿಕ ಬಸದಿಯನ್ನು ಸಂಪೂರ್ಣ ಪುನರ್ ನಿರ್ಮಾಣ ಮಾಡಿಸಿ ೧೯೩೩ನೇ ಇಸವಿ ಮಾರ್ಚ್ ತಿಂಗಳ ಪ್ರಥಮ ವಾರದಲ್ಲಿ ಪಂಚಕಲ್ಯಾಣ ಪೂರ್ವಕ ಭಗವಾನ್ ಆದಿನಾಥಸ್ವಾಮಿಯನ್ನು ಪ್ರತಿಷ್ಠಾಪಿಸಿದ ಮಹನೀಯರು ಶ್ರೀ ಕಟೇಮಾರ್ ರಘುಚಂದ್ರ ಬಳ್ಳಾಲ್ ಅವರು. ಆದರೆ ಕ್ರಿ. ಶ. ೧೪೦೦-೧೪೫೫ ರವರೆಗೆ ಮಂಗಳೂರು ಪ್ರದೇಶವನ್ನು ಆಳಿದ ಒಂದನೇ ಲಕ್ಷ್ಮಪ್ಪ ಅರಸ ಬೆಂಗರಾಜನ ಕಾಲದಲ್ಲಿ ಈ ಬಸದಿಯು ನಿರ್ಮಾಣವಾಗಿರಬಹುದೆಂಬ ಅಭಿಪ್ರಾಯವಿದೆ.

ಈ ಬಸದಿಯಲ್ಲಿ ಅಷ್ಟಮ ನಂದೀಶ್ವರ ಪ್ರತಿಮೆ, ಶ್ರುತಸ್ಕಂಧ, ಸ್ಪಟಿಕದ ಸಿದ್ಧರ ಬಿಂಬ ಮತ್ತು ಬಸದಿಯಲ್ಲಿರಬೇಕಾದ ಇತರ ಜಿನಬಿಂಬಗಳಿವೆ. ಶುಕನಾಸಿಯ ಎದುರಿನ ತೀರ್ಥಂಕರ ಮಂಟಪದ ಬಲಗಡೆ ಮಾತೆ ಪದ್ಮಾವತಿಯ ಮೂರ್ತಿ, ಜಿನವಾಣಿ ಮೂರ್ತಿ ಇದ್ದು, ದಿನವೂ ಪೂಜೆ ಆರತಿಗಳು ನಡೆಯುತ್ತವೆ. ಭಗವಾನ್ ಶಾಂತಿನಾಥಸ್ವಾಮಿಯ ಐತಿಹಾಸಿಕ ಮೂರ್ತಿ ಸಹ ಇಲ್ಲಿದೆ. ಅಲ್ಲಿ ಶ್ರುತ, ಸ್ಕಂದ ಸಹಿತವಾಗಿ ಆನೇಕ ಪೂಜಾ ಜಿನಬಿಂಬಗಳಿವೆ. ಇವೆಲ್ಲವುಗಳಿಗೆ ಸಾಂಗೋಪಾಂಗವಾಗಿ ಪೂಜೆ ನಡೆಸಲಾಗುತ್ತದೆ.

ಭಗವಾನ್ ಆದಿನಾಥ ಸ್ವಾಮಿ

ಬದಲಾಯಿಸಿ

ಗರ್ಭಗೃಹದಲ್ಲಿ ಕಪ್ಪುಶಿಲೆಯ ಭಗವಾನ್ ಆದಿನಾಥ ಸ್ವಾಮಿಯ ಪರ್ಯಂಕಾಸನದ ರ್ಮೂರ್ತಿ ಇದೆ. ಸುತ್ತಲೂ ಪ್ರಭಾವಳಿ ಇದೆ. ಈ ಮೂರ್ತಿಯು ಸುಮಾರು ಮೂರುವರೆ ಅಡಿ ಎತ್ತರವಿದ್ದೆ.

ಪೂಜಾ ವಿಧಾನ

ಬದಲಾಯಿಸಿ

ಮಾತೆ ಪದ್ಮಾವತಿಗೆ ಆಭರಣಗಳನ್ನು ತೊಡಿಸಿ, ಸೀರೆ ಉಡಿಸಿ, ಅಲಂಕಾರ ಮಾಡಿ ನಿತ್ಯಪೂಜೆಯನ್ನು ನಡೆಸಲಾಗುತ್ತದೆ. ಪಾದತಳದಲ್ಲಿ ಕುಕ್ಕುಟೋರುಗ ಮೂರ್ತಿಯಿರುವ ಅಮ್ಮನವರ ಮೂರ್ತಿಯು ಪಶ್ಚಿಮ ಸಮುದ್ರದ ಕಡೆಗೆ ಮುಖಮಾಡಿಕೊಂಡಿದೆ. ಹರಕೆಯ ಮಂಗಳ ಸಂದರ್ಭದಲ್ಲಿ ಲಕ್ಷ ಹೂವಿನ ಪೂಜೆಯು ಶೋಡಶೋಪ ಚಾರದೊಂದಿಗೆ ಸಂಪನ್ನಗೊಳ್ಳುತ್ತದೆ. ಭಗವಾನ್ ಆದಿನಾಥ ಸ್ವಾಮಿಗೆ ನಿತ್ಯವೂ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ ಮತ್ತು ಜಲಾಭಿಷೇಕವು ನಡೆದು ಮಹಾಮಂಗಳಾರತಿಯೊಂದಿಗೆ ಪೂಜೆ ನಡೆಯುತ್ತದೆ. ಕೆಲವೊಮ್ಮೆ ೫೪ ಕಲಶ, ೧೦೮ ಕಲಶ, ೫೦೮ ಕಲಶಗಳ ಅಭಿಷೇಕವು ನಡೆಯುತ್ತದೆ. ನೋಂಪಿಗಳು, ಆರಾಧನೆಗಳು, ಗತಿ ಅಭಿಷೇಕಗಳು, ವಾರ್ಷಿಕ ವರ್ಧಂತಿ, ದೀಪಾವಳಿ, ಅಘ್ರ್ಯೋತ್ಸವ, ದಶಲಕ್ಷಣ ಪೂಜೆ, ಷೋಡಶ ಭಾವನಾ ಪೂಜೆ, ಮಹಾವೀರ ಜಯಂತಿ, ಜಿನಧರ್ಮ ಕಾವ್ಯವಾಚನ ಇತ್ಯಾದಿಗಳು ನಡೆಯುತ್ತವೆ. ದಿನದಲ್ಲಿ ಮೂರು ಹೊತ್ತು ಪೂಜೆ ಮತ್ತು ಒಂದು ಹೊತ್ತು ಪೂಜೆ ನೈವೇದ್ಯದೊಂದಿಗೆ ನಿತ್ಯಪೂಜೆಯನ್ನು ನಡೆಸಲಾಗುತ್ತದೆ.

ಪ್ರಾಂಗಣ

ಬದಲಾಯಿಸಿ

ಒಳಾಂಗಣ ಪ್ರಾಂಗಣ

ಬದಲಾಯಿಸಿ

ಶುಕನಾಸಿಯ ಎದುರಿನ ತೀರ್ಥಂಕರ ಮಂಟಪದ ಬಲಗಡೆ ಮಾತೆ ಪದ್ಮಾವತಿಯ ಮೂರ್ತಿ ಇದೆ, ಮೇಗಿನ ನಲೆಯಲ್ಲಿ ಭಗವಾನ್ ಶೀತಲನಾಥ ಸ್ವಾಮಿಯ ಪೀಠದ ತಳದಲ್ಲಿ ಬ್ರಹ್ಮ ಯಕ್ಷನ ಮೂರ್ತಿ ಇದೆ. ತೀರ್ಥಂಕರ ಮಂಟಪದ ಎಡಗಡೆ ಜಿನವಾಣಿ ಮೂರ್ತಿ ಇದ್ದು, ಬಸದಿಯ ಮುಂಭಾಗದಲ್ಲಿ ಮೇಲಂತಸ್ತು ಹಾಗೂ ಸಭಾಗೋಷ್ಠಿ ನಡೆಸಲು ಯೋಗ್ಯವಾದ ಗೋಪುರ ಭವನವಿದೆ. ಬಸದಿಯ ಅಂಗಳದ ಬದಿಯಲ್ಲಿ ಕ್ಷೇತ್ರಪಾಲ ದೈವವಿದೆ. ಮಾಘ ಆಷ್ಠಾಹ್ನಿಕ ಪೌರ್ಣಮಿಯಂದು ವರ್ಷಾಂಕಿತ ಪೂಜೆ, ಭಗವಾನ್ ಮಹಾವೀರ ಜಯಂತಿ ಇಂತಹ ಪರ್ವದಿನಗಳ ಅಭಿಷೇಕ ಪೂಜಾ ಸಂದರ್ಭಗಳಲ್ಲಿ ಸಭಿಕರಿಗೆ ಮತ್ತು ಶೋತೃ ವರ್ಗದವರಿಗೆ ಆಸೀನರಾಗಲು ಗೋಪುರ ತಳಭವನವನ್ನು ಉಪಯೋಗಿಸಲಾಗುತ್ತದೆ. ಪ್ರಾರ್ಥನಾ ಮಂಟಪದ ಎಡಬಲಗಳಲ್ಲಿ ಪುರುಷ ಪ್ರಮಾಣದ ದ್ವಾರಪಾಲಕರ ವರ್ಣ ಚಿತ್ರಗಳಿವೆ. ಪ್ರಾರ್ಥನಾ ಮಂಟಪ ಮತ್ತು ನಮಸ್ಕಾರ ಮಂಟಪದ ಗೋಡಗಳ ಮೇಲೆ ಪ್ರಾರ್ಥನಾ ಶ್ಲೋಕ ಪಟ್ಟಿ ಮುಂತಾದವುಗಳನ್ನು ಸೂಚಿಸುವ ಫಲಕಗಳಿವೆ.

ಹೊರಾಂಗಣ ಪ್ರಾಂಗಣ

ಬದಲಾಯಿಸಿ

ಬಸದಿಯ ಅಂಗಳದ ಎಡಬದಿಯಲ್ಲಿ ನಾಗಪುಷ್ಪ ಮರದ ತಳಭಾಗದಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ, ಬಳಿಯಲ್ಲಿ ನಾಗ ಕಲ್ಲುಗಳು ಮತ್ತು ತ್ರಿಶೂಲವೂ ಇದೆ, ಇದರ ಮುಂಭಾಗದಲ್ಲಿ ಬಸದಿಯ ಉಪಯೋಗದ ತೀರ್ಥಬಾವಿ ಇದೆ. ಬಸದಿಯ ಸುತ್ತಲೂ ಅಷ್ಟದಿಕ್ಪಾಲಕರ ಕಲ್ಲುಗಳು ಮತ್ತು ಬಲಿಕಲ್ಲುಗಳಿವೆ. ಇವರಿಗೂ ಪೂಜೆಯನ್ನು ಸಲ್ಲಿಸಲಾಗುತ್ತದೆ. ಬಸದಿಯ ಸುತ್ತಲೂ ಸುಮಾರು ೧೦ ಅಡಿ ಎತ್ತರದ ಮುರಕಲ್ಲಿನ ಪ್ರಾಕಾರ ಗೋಡೆ ಇದೆ.

ಉಲ್ಲೇಖಗಳು

ಬದಲಾಯಿಸಿ
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರೆ: ಮಂಜುಶೀ ಪ್ರಿಂಟರ್ಸ್. p. ೨೯೫.