ಆಟಿ ತಿಂಗಳ ತಿನಿಸುಗಳು

ಆಟಿ ತಿಂಗಳ ತಿನಿಸುಗಳು:ಆಟಿ ತಿಂಗಳು ಅಂದರೆ ಆಷಾಢ ಮಾಸ. ಈ ತಿಂಗಳಲ್ಲಿ ಬಿಡುವಿಲ್ಲದೆ ಮಳೆ. ಮಳೆಗಾಲಕ್ಕೆ ಬೇಕಾದ ದವಸ ಧಾನ್ಯದ ಜೊತೆಗೆ, ದೀರ್ಘಕಾಲ ಬಾಳಿಕೆ ಬರುವ ಹಣ್ಣು ಸೌತೆ, ಉಪ್ಪು ನೀರಲ್ಲಿ ಹಾಕಿಟ್ಟ ಹಲಸಿನ ತೊಳೆ ಮೊದಲಾದವನ್ನು ಕರಾವಳಿ ಜನ ಸಂಗ್ರಹಿಸಿಟ್ಟಿರುತ್ತಾರೆ.

ಆಟಿ ಅಮವಾಸ್ಯೆದಂದು ಬಗೆ ಬಗೆಯ ತಿನಿಸುಗಳು

ಬದಲಾಯಿಸಿ

ಅರಿಶಿನ ಎಲೆಯಲ್ಲಿ ತಯಾರಾದ ತಿಂಡಿ, ಹಪ್ಪಳ, ಕಡ್ಲೆ ಬೇಳೆ ಪಾಯಸ, ಎಳೆ ಬಿದಿರಿನ ಉಪ್ಪಿನಕಾಯಿ, ತಜಂಕ ಪಲ್ಯ, ಈ ಆಟಿ ತಿಂಗಳಲ್ಲಿ ತಯಾರಾಗುವ ವಿಶೇಷ ತಿನಿಸುಗಳು. ಆಟಿ ತಿಂಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಯಗಳಿಗೆ ತೆರಳುವ ಮೊದಲು ತೆಂಗಿನ ಕಾಯಿ ಅಥವಾ ತಾರಾಯಿದ ಗಂಜಿ, ಕಾಯಿ ಹಾಲಿನ ಗಂಜಿ ಸೇವಿಸಿತೆರಳುವ ಪದ್ಧತಿ ಇಂದಿಗೂ ಇದೆ. ಮೋಡೆ, ಅರಸಿನ ಎಲೆಯ ಕಡುಬು, ಹಲಸಿನ ಕಡುಬು , ಪತ್ರೋಡೆ, ಕೆಸುವಿನ ಚಟ್ನಿ,ತಿಮರೆದ ಚಟ್ನಿ, ಮಾವಿನಕಾಯಿ ಚಟ್ನಿ, ಹುರುಳಿಸಾರು, ಚಿಲಿಂಬಿದ ಅಡ್ಡೆ, ಸೌತೆ ಪದಂಗಿ ಗಸಿ, ತಜಂಕ ವಡೆ, ಪಚ್ಚಿರ್ ಪಲ್ಯ, ಹಲಸಿನ ಮುಳ್ಕು, ಕಣಲೆ ಕಡ್ಲೆ, ತೇವು ಪದಪೆ ಗಸಿ, ಪಜಕಾಯಿ ಚಟ್ನಿ, ಮಾವಿನ ಹಣ್ಣಿನ ಮೆನಸ್ ಕಾಯಿಯ ರುಚಿ ಈ ಆಟಿ ತಿಂಗಳಲ್ಲಿ ಮಾತ್ರ ನೋಡಬಹುದಾಗಿದೆ.[]

ನುಗ್ಗೆ ಸೊಪ್ಪಿನ ಇಡ್ಲಿ

ಬದಲಾಯಿಸಿ

ಬೇಕಾಗುವ ವಸ್ತುಗಳು: ಬೆಳ್ತಿಗೆ ಅಕ್ಕಿ- 1ಕಪ್, ನುಗ್ಗೆ ಸೊಪ್ಪು (ತೊಳೆದು ಶುಚಿ ಗೊಳಿಸಿದ) -1 ಕಪ್, ಉದ್ದಿನ ಬೇಳೆ- 1 ಮುಷ್ಠಿ, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಅಕ್ಕಿ ಮತ್ತು ಬೇಳೆಯನ್ನು ತೊಳೆದು 2 ಗಂಟೆ ನೆನಸಿ, ಉದ್ದು ನಯವಾಗಿ ರುಬ್ಬಿ ಅಕ್ಕಿ ಮತ್ತು ಸೊಪ್ಪು ಸೇರಿಸಿ, ಇಡ್ಲಿ ಹಿಟ್ಟಿನ ಹದಕ್ಕೆ ಸ್ವಲ್ಪ ತರಿ ತರಿಯಾಗಿ ರುಬ್ಬಿ. ರುಬ್ಬಿದ ಉದ್ದಿನ ಹಿಟ್ಟು ಸೇರಿಸಿ, ಉಪ್ಪು ಹಾಕಿ ಮರು ದಿನ ಬೆಳಗ್ಗೆ ಇಡ್ಲಿ ಪಾತ್ರೆಯಲ್ಲಿ ಗಿನ್ನಲುಗಳಿಗೆ ಎಣ್ಣೆ ಸವರಿ ಹಿಟ್ಟು ಹಾಕಿ ಬೇಯಲಿಡಿ. ಮೆತ್ತತಗಾದ ಪೌಷ್ಠಿಕಾಂಶವುಳ್ಳ ಇಡ್ಲಿಯನ್ನು ಚಟ್ನಿಯೊಂದಿಗೆ ಸವಿಯಿರಿ.

ಅರಿಶಿನ ಎಲೆಯ ಸಿಹಿ ಕಡುಬು

ಬದಲಾಯಿಸಿ

ಬೇಕಾಗುವ ವಸ್ತುಗಳು : ಬೆಳ್ತಿಗೆ ಅಕ್ಕಿ- 1ಕಪ್, ಹಸಿ ತೆಂಗಿನ ಕಾಯಿ ತುರಿ 1 1/2 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ - 1 ಕಪ್, ಏಲಕ್ಕಿ ಪುಡಿ-1/2 ಚಮಚ, 10-12 ಅರಿಶಿನ ಎಲೆಗಳು. ಮಾಡುವ ವಿಧಾನ: ಅರಿಶಿನದ ಎಲೆಗಳನ್ನು ತೊಳೆದು ಶುಚಿಗೊಳಿಸಿ. ನಂತರ ನೆನೆಸಿದ ಬೆಳ್ತಿಗೆ ಅಕ್ಕಿ ತೆಂಗಿನಕಾಯಿ, ಉಪ್ಪು ಹಾಕಿ ನಯವಾಗಿ ರುಬ್ಬಿ. ಅರಿಶಿನದ ಎಲೆಗೆ ತೆಳುವಾಗಿ ಹಚ್ಚಿರಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಬೆಲ್ಲ ಹಾಕಿ. ಸ್ವಲ್ಪ ನೀರು ಹಾಕಿ, ನೂಲು ಪಾಕವಾದಾಗ ಕಾಯಿತುರಿ, ಏಲಕ್ಕಿ ಹುಡು ಹಾಕಿ ಕಲಸಿ, ಈ ಮಿಶ್ರಣವನ್ನು ಅರಿಶಿನ ಎಲೆಯ ಮೇಲಿಟ್ಟು ಉದ್ದಕ್ಕೆ ಮಡಚಿ ಇಡ್ಲಿ ಪಾತ್ರೆಯಲ್ಲಿಟ್ಟು ಬೇಯಿಸಿ. ಅರಿಶಿನ ಎಲೆಯ ಸುವಾಸನಾಭರಿತ ಕಡುಬು ಸವಿಯಲು ಸಿದ್ಧ.

ಹೆಸರುಕಾಳು-ಕಣಿಲೆ ಗಸಿ

ಬದಲಾಯಿಸಿ

ಬೇಕಾಗುವ ವಸ್ತುಗಳು: ಮೊಳಕೆ ಹೆಸರುಕಾಳು - 1/2 ಕಪ್, ಕಣಿಲೆ ಚೂರುಗಳು - 1/2 ಕಪ್, ತೆಂಗಿನ ತುರಿ- 1ಕಪ್, ಒಣ ಮೆಣಸು 2-3, ಕೊತ್ತಂಬರಿ- 1 ಚಮಚ, ಜೀರಿಗೆ - 1/2 ಚಮಚ, ಅಂಬಟೆ ಕಾಯಿ 1, ಸಾಸಿವೆ 1/2 ಚಮಚ, ಎಣ್ಣೆ 1/2 ಚಮಚ, ಕರಿಬೇವು 1 ಎಸಳು, ಉಪ್ಪು -ರುಚಿಗೆ ತಕ್ಕಷ್ಟು. ಮಾಡುವ ವಿಧಾನ: ಮೊಳಕೆ ಹೆಸರು ಕಾಳು ಮತ್ತು ಶುಚಿಗೊಳಿಸಿದ ಕಣಿಲೆ ಚೂರುಗಳನ್ನು ಬೇರೆ ಬೇರೆಯಾಗಿ ಬೇಯಿಸಿ, ಕೊತ್ತಂಬರಿ, ಜೀರಿಗೆ ಮತ್ತು ಕೆಂಪು ಮೆಣಸು ಸ್ವಲ್ಪ ಎಣ್ಣೆ ಹಾಕಿ ಹುರಿದು ತೆಂಗಿನ ತುರಿ ಸೇರಿಸಿ ರುಬ್ಬಿ. ನಂತರ ಅಂಬಟೆಕಾಯಿ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಬೇಯಿಸಿದ ಹೆಸರುಕಾಳು ಮತ್ತು ಕಣಿಲೆ ಚೂರು ಸೇರಿಸಿ ಕುದಿಸಿ. ನಂತರ ಸಾಸಿವೆ ಕರಿಬೇವಿನ ಒಗ್ಗರಣೆ ಕೊಡಿ.

ತಗಟೆ (ಚಗಟೆ) ಸೊಪ್ಪು ಹಲಸಿನ ಬೀಜದ ಸುಕ್ಕ

ಬದಲಾಯಿಸಿ

ಬೇಕಾಗುವ ವಸ್ತುಗಳು: ಚಗಟೆ ಸೊಪ್ಪು ಸಣ್ಣಗೆ ಹೆಚ್ಚಿದ್ದು 1/2 ಕಪ್, ಹಲಸು ಬೀಜ 10-12, ತೆಂಗಿನ ತುರಿ- 1ಕಪ್, ಒಣಮೆಣಸು 3-4, ಕೊತ್ತಂಬರಿ -1ಚಮಚ, ಸ್ವಲ್ಪ ಹುಳಿ, ಸಾಸಿವೆ 1/2 ಚಮಚ, ಎಣ್ಣೆ- 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಹಲಸಿನ ಕಾಯಿಯ ಬೀಜ ಮತ್ತು ತಗಟೆ ಸೊಪ್ಪಿನ ಚೂರುಗಳನ್ನು ಬೇರೆ ಬೇರೆ ಬೇಯಿಸಿ, ಕೊತ್ತಂಬರಿ, ಒಣ ಮೆಣಸು, ಸ್ವಲ್ಪ ಎಣ್ಣೆ ಹಾಕಿ ಹುರಿದು, ತೆಂಗಿನ ತುರಿಯೊಂದಿಗೆ ಹುಳಿ ಹಾಕಿ ರುಬ್ಬಿಡಿ. ನಂತರ ಬೇಯಿಸಿದ ಹಲಸಿನ ಬೀಜ ಮತ್ತು ತಗಟೆ ಸೊಪ್ಪಿಗೆ ಸೇರಿಸಿ, ಉಪ್ಪು ಹಾಕಿ ಒಂದು ಕುದಿ ಕುದಿಸಿ, ಸಾಸಿವೆ ಒಗ್ಗರಣೆ ಕೊಡಿ.

ಕೆಸುವಿನ ಪತ್ರೊಡೆ

ಬದಲಾಯಿಸಿ

ಬೇಕಾಗುವ ವಸ್ತುಗಳು : 1/2 ಕಪ್ ಬೆಳ್ತಿಗೆ ಅಕ್ಕಿ, 1/2 ಕಪ್ ಹೆಸರು, 7-8 ಹುರಿದ ಕೆಂಪು ಮೆಣಸು, ಚಿಟಿಕಿ ಇಂಗು, 1/2 ಲಿಂಬೆ ಗಾತ್ರದ ಹುಳಿ, ಉಪ್ಪು ರುಚಿಗೆ ತಕ್ಕಷ್ಟು, 1/2 ಕಪ್ ತೆಂಗಿನ ತುರಿ, 10-12 ಕೆಸುವಿನ ಎಲೆ.

ಮಾಡುವ ವಿಧಾನ: ಅಕ್ಕಿ ಮತ್ತು ಹೆಸರನ್ನು 1 ಗಂಟೆ ನೆನೆಸಿ, ಮೆಣಸು ತೆಂಗಿನ ತುರಿ ಸ್ವಲ್ಪ ರುಬ್ಬಿ. ನಂತರ ಅದಕ್ಕೆ ಅಕ್ಕಿ, ಹೆಸರು, ಇಂಗು, ಹುಳಿ ಸೇರಿಸಿ ಚೆನ್ನಾಗಿ ರುಬ್ಬಿ. ನಂತರ ಹಿಟ್ಟನ್ನು ಕೆಸುವಿನ ಎಲೆಗೆ ಸವರಿ ಸುರುಳಿ ಮಾಡಿ ಹಬೆಯಲ್ಲಿ ಬೇಯಿಸಿ. ಇದು ಊಟದೊಂದಿಗೆ ರುಚಿಯಾಗಿರುತ್ತದೆ. ಈ ಪತ್ರೊಡೆ ಕಾವಲಿಯಲ್ಲಿಟ್ಟು ಎಣ್ಣೆ ಹಾಕಿ ಕಾಯಿಸಬಹುದು. ಇಲ್ಲವೆ ಸಣ್ಣಗೆ ಹೆಚ್ಚಿ ಒಗ್ಗರಣೆ ಮಾಡಿ ತೆಂಗಿನ ತುರಿ ಉದಿರಿಸಿ ಪಲ್ಯದಂತೆ ಮಾಡಿ ತಿನ್ನಬಹುದು. ಬೇಕಿದ್ದರೆ ಸ್ಪಲ್ಪ ಬೆಲ್ಲ ಸೇರಿಸಬಹುದು.

ಉಲ್ಲೇಖಗಳು

ಬದಲಾಯಿಸಿ
  1. "ಆಟಿ ತಿಂಗಳ ತಿನಿಸು". Vijay Karnataka. Retrieved 16 July 2024.