ಆಂಗ್ಕೋರ್ ಥೊಮ್

ಒಂದೇ ಅಸ್ತಿತ್ವದ ಜನಸಂಖ್ಯೆ

ಆಂಗ್ಕೋರ್ ಥೊಮ್

ಕಂಬುಜ (ಕಾಂಬೊಡಿಯಾ)
ಹೆಬ್ಬಾಗಿಲು

ಕಂಬುಜದ (ಕಾಂಬೋಡಿಯಾ)[] ಶ್ರೇಷ್ಠ ವಾಸ್ತುಶಿಲ್ಪಗಳ ನಗರ (ಸಂಸ್ಕೃತದ ನಗರಧಾಮ). ಭಾರತೀಯ ಸಂಸ್ಕೃತಿಯ ಪ್ರಭಾವ ಕಂಬುಜದಲ್ಲಿ ಯಾವ ರೀತಿ ಹರಡಿತ್ತು ಎಂಬುದಕ್ಕೆ ಇಲ್ಲಿನ ಬೌದ್ಧ ವಾಸ್ತುಶಿಲ್ಪ ಕಲಾಕೃತಿಗಳೇ ಸಾಕ್ಷಿ. ಕಂಬುಜದ ಚರಿತ್ರೆಯಲ್ಲಿ ಅತ್ಯಂತ ಶ್ರೇಷ್ಠ ದೊರೆ ಎಂದು ಖ್ಯಾತನಾಗಿರುವ ಏಳನೆಯ ಜಯವರ್ಮ[] (ಕ್ರಿ.ಶ. ೧೧೮೧-೧೨೧೮) ಆಂಗ್ಕೋರ್ ಥೊಮಿನ ನಿರ್ಮಾತ. ೩೦೦' ಅಗಲ ೧೦ ಮೈಲಿ ಸುತ್ತಳತೆಯುಳ್ಳ ಕಂದಕವನ್ನು ಈ ನಗರದ ಸುತ್ತಲೂ ನಿರ್ಮಿಸಿ, ಒಳಭಾಗದಲ್ಲಿ ಗೋಡೆಯನ್ನು ಕಟ್ಟಿದ್ದಾರೆ. ಇದಕ್ಕೆ ಗೋಪುರಾಕೃತಿಯ ಐದು ಹೆಬ್ಬಾಗಿಲುಗಳಿದ್ದವು. ಪ್ರತಿಯೊಂದು ಗೋಪುರಕ್ಕೂ ನಾಲ್ಕು ಮುಖಗಳು. ಈ ಮುಖಗಳಲ್ಲಿ ಬೃಹದಾಕಾರದ ಬುದ್ಧನ ಶಿಲ್ಪ. ಗೋಪುರವೇ ಬುದ್ಧನ ರೂಪದಲ್ಲಿ ಮೂರ್ತಿವೆತ್ತಂತೆ ಇರುವುದೇ ಆಂಗ್ಕೋರ್ ಥೊಮಿನ ವೈಶಿಷ್ಟ್ಯ. ಮಧ್ಯದಲ್ಲಿ ಬಯಾನ್ ಎಂದು ಪ್ರಸಿದ್ಧವಾಗಿರುವ ಜಯವರ್ಮನ ಪರ್ವತ ದೇವಾಲಯವಿದೆ. ನಡುವಣ ಎತ್ತರದ ಗೋಪುರದ ಸುತ್ತಲೂ ಅನೇಕ ಗೋಪುರಗಳಿವೆ. ಈ ಗೋಪುರಗಳಲ್ಲೂ ಬುದ್ಧ ಲೋಕೇಶ್ವರನ ಶಿಲ್ಪಗಳಿವೆ. ಇದು ಮೇರು ಪರ್ವತದ ಸಂಕೇತವಾಗಿದೆಯೆಂದು ಹೇಳಬಹುದು. ಸಮೀಪದಲ್ಲೇ ಇರುವ ನೀಕ್‍ಪಿಯನ್ ಗೋಪುರದಲ್ಲಿ ಬೃಹದಾಕಾರದ ಕುದುರೆಯ ಶಿಲ್ಪ ಬೋಧಿ ಸತ್ವನನ್ನು ಸೂಚಿಸುತ್ತದೆ. ಬಯಾನ್‍ಗೆ ಹೋಗುವ ದಕ್ಷಿಣಮಾರ್ಗದಲ್ಲಿ ಸ್ವರ್ಗದ ೫೪ ದೇವತೆಗಳು ಉತ್ತರಮಾರ್ಗದಲ್ಲಿ ೫೪ ಪಾತಾಳ ದೇವತೆಗಳೂ ಸರ್ಪವನ್ನು ಹಗ್ಗದ ರೀತಿಯಲ್ಲಿ ಎಳೆಯುತ್ತಿರುವ ಶಿಲ್ಪಗಳು ಬಹಳ ಮುಖ್ಯವಾದವುಗಳು. ಗೋಡೆಗಳ ಮೇಲೆ ನಾಗ ನಾಗಿನಿಯರ ಅನೇಕ ಶಿಲ್ಪಗಳಿವೆ. ಇವೆಲ್ಲವೂ ಖ್ಮರ್ ಶಿಲ್ಪಿಗಳ ಮಹಾ ಸಾಧನೆಯ ಕುರುಹುಗಳು. ಒಟ್ಟಿನಲ್ಲಿ ಹೇಳುವುದಾದರೆ ಏಳನೆಯ ಜಯವರ್ಮ ರಾಜಕೀಯರಂಗದಲ್ಲಿ ಸಾಧಿಸಿದ ಮಹಾಕಾರ್ಯಗಳಿಗನುಗುಣನಾಗಿ ಅವನ ವಾಸ್ತುಶಿಲ್ಪಕೃತಿಗಳು ಶೈಲಿಯಲ್ಲೂ ಗಾತ್ರದಲ್ಲೂ ಮಹಾಸಾಧನೆಗಳೇ ಆಗಿದ್ದು ವಿಶ್ವವಿಖ್ಯಾತವಾಗಿವೆ. ಇಂಥ ಬೃಹತ್ಪ್ರಮಾಣದ ಶಿಲ್ಪಗಳನ್ನು ಕಾಣುವುದು ದುರ್ಲಭ. ಈ ನಗರದ ವಿಸ್ತೀರ್ಣ ಸುಮಾರು ೫.೫ ಚ.ಮೈ. ಆಗಿತ್ತು. ಇದಕ್ಕೆ ಒಂದು ಮೈಲಿ ದೂರದಲ್ಲಿ ಆಂಗ್ಕೋರ್‍ವಾಟ್ ಎಂಬ ಇಂಥದೇ ನಗರವೊಂದಿತ್ತು. (ಎನ್.ಎ.ಎನ್.)[]

ಉಲ್ಲೇಖಗಳು

ಬದಲಾಯಿಸಿ