ಅಸಮಪ್ರಸರಣ
ಖನಿಜಗಳನ್ನು ದೃಗ್ವಿಜ್ಞಾನದ ಪ್ರಕಾರ ಸಮಪ್ರಸಾರಿಕ, ಅಸಮಪ್ರಸಾರಿಕ ಎಂದು ಎರಡು ವರ್ಗಗಳಾಗಿ ವಿಂಗಡಿಸಬಹುದು. ಸಮಪ್ರಸಾರಿಕ ಖನಿಜಗಳಲ್ಲಿ ಹಾಯ್ದು ಹೋಗುವ ಬೆಳಕಿನ ಕಿರಣಗಳು ಎಲ್ಲ ದೆಸೆಗಳಲ್ಲೂ ಸ್ಫಟಿಕಾಕ್ಷಗಳ ಸಮತೆಯಿಂದ ಒಂದೇ ವೇಗದಲ್ಲಿ ಚಲಿಸುತ್ತವೆ. ಆದರೆ ಅಸಮಪ್ರಸಾರಿಕ ಖನಿಜಗಳಲ್ಲಿ ಸ್ಫಟಿಕಾಕ್ಷಗಳ ಅಸಮತೆಯಿಂದ ಎಲ್ಲ ದೆಸೆಗಳಲ್ಲೂ ಒಂದೇ ವೇಗಗತಿಯಿಂದ ಚಲಿಸುವುದಿಲ್ಲ. ಬೆಳಕಿನ ಕಿರಣಗಳು ದ್ವಿವಕ್ರೀಕರಣವಾಗುವುದೇ (ಡಬಲ್ ರಿಫ್ಯ್ರಾಕ್ಷನ್) ಇದಕ್ಕೆ ಮುಖ್ಯ ಕಾರಣ. ಇದೇ ಅಸಮಪ್ರಸರಣ (ಅನಿಸ್ಟ್ರಾಪಿಸಂ), ಚತುಷ್ಕೋನೀಯ (ಟೆಟ್ರಾಗೋನಲ್) ಮತ್ತು ಷಟ್ಕೋನೀಯ (ಹೆಕ್ಸಾಗೋನಲ್) ವರ್ಗಗಳಲ್ಲಿ ಸ್ಫಟಿಕಾಕಾರಗೊಳ್ಳುವ ಜಿರ್ಕಾನ್, ಕ್ವಾರ್ಟ್ಸ್ (ಬೆಣಚು) ಮುಂತಾದ ಖನಿಜಗಳಲ್ಲಿ ಬೆಳಕಿನ ಕಿರಣಗಳ ವೇಗ ಕೆಲವು ದೆಸೆಗಳಲ್ಲಿ ವ್ಯತ್ಯಾಸವಿದ್ದರೂ, ಶೀರ್ಷಾಕ್ಷದ ಕಡೆ ಮಾತ್ರ ಎರಡು ಕಿರಣಗಳು ಒಂದೇ ವೇಗಗತಿಯಲ್ಲಿರುತ್ತವೆ. ಈ ಅಕ್ಷವನ್ನು ದೃಗಕ್ಷ (ಆಪ್ಟಿಕ್ ಆ್ಯಕ್ಸಿಸ್) ಎನ್ನುತ್ತಾರೆ. ಒಂದೇ ದೃಗಕ್ಷವಿರುವವುಗಳೇ ಏಕ ಅಕ್ಷೀಯ (ಯೂನಿ ಆ್ಯಕ್ಸಿಯಲ್) ಖನಿಜಗಳು. ಆರ್ಥೋರಾಂಬಿಕ್, ಮಾನೊಕ್ಲಿನಿಕ್ ಮತ್ತು ಟ್ರೈಕ್ಲಿನಿಕ್ ವರ್ಗಗಳಲ್ಲಿ ಸ್ಫಟಿಕಾಕಾರಗೊಳ್ಳುವ ಬೆರೈಟ್, ಜಿಪ್ಸಂ, ಪ್ಲೆಜಿಯಾಕ್ಲೇಸ್, ಫೆಲ್ಡ್‌ಸ್ಪಾರ್ ಮುಂತಾದ ಖನಿಜಗಳಲ್ಲಿ ಹಾಯ್ದುಹೋಗುವ ಬೆಳಕಿನ ಅಕ್ಷಗಳ ಕಿರಣಗಳು ಎಲ್ಲ ದೆಸೆಗಳಲ್ಲೂ ಒಂದೇ ವೇಗಗತಿಯಲ್ಲಿರುವುದಿಲ್ಲ. ಆದರೆ ಎರಡು ಅಕ್ಷಗಳ ದೆಸೆಯಲ್ಲಿ ಮಾತ್ರ ಎರಡು ಕಿರಣಗಳು ಒಂದೇ ವೇಗದಲ್ಲಿ ಚಲಿಸುತ್ತವೆ. ಈ ಎರಡು ದೃಗಕ್ಷಗಳಿರುವವುಗಳೇ ದ್ವಿಅಕ್ಷೀಯ (ಬೈ ಆ್ಯಕ್ಸಿಯಲ್) ಖನಿಜಗಳು.