ಅಸಮನಿಟ್ಟು (ಅಬಿಂದುಕತೆ)
ವಕ್ರಾಕೃತಿ ದರ್ಪಣ, ಮಸೂರ ಅಥವಾ ಮಸೂರ ವ್ಯವಸ್ಥೆಯಲ್ಲಿನ ದೋಷದಿಂದಾಗಿ ಬಿಂದುವಿನ ಪ್ರತಿಬಿಂಬ ಬಿಂದುವಾಗಿ ಕಾಣಿಸದೆ ಹರಡಿಕೊಂಡಂತೆ ಭಾಸವಾಗುವ ದೋಷ. (ಅಸ್ಟಿಗ್ಮ್ಯಾಟಿಸಮ್) ಕಣ್ಣಿನ ಮಸೂರದಲ್ಲಿಯೇ ಈ ದೋಷ ಕಾಣಿಸಿಕೊಳ್ಳಬಹುದು. ಅಕ್ಷಿಪಟಲದ (ರೆಟಿನಾ) ವಕ್ರತೆ ಅಸಮವಾಗಿದ್ದರೆ ಒಂದು ಬಿಂದುವಿನ ಪ್ರತಿಬಿಂಬ ಎರಡು ಸಣ್ಣ ಗೆರೆಗಳಂತೆ ಕಾಣಿಸುತ್ತದೆ. ಇದನ್ನು ಅಸಮದೃಷ್ಟಿ, ಕೋಚುದೃಷ್ಟಿ ಎಂದೂ ಕರೆಯುತ್ತಾರೆ. ನಕ್ಷತ್ರಗಳನ್ನು ನೋಡಿದಾಗ ಹೊಳೆಯುವ ಬಿಂದುಗಳಿಗೆ ಬದಲಾಗಿ ಅದರಿಂದ ಕಿರಣಗಳು ಹೊರಟಂತೆ ಕಂಡರೆ ಅಸಮದೃಷ್ಟಿ ಇರಬಹುದೆಂದು ಊಹಿಸಬಹುದು. ನೇತ್ರ ವೈದ್ಯರು ಸಿಲಿಂಡ್ರಿಕಲ್ (ಉರುಳೆಯಾಕಾರದ) ಮಸೂರವನ್ನು ಈ ದೋಷ ನಿವಾರಿಸಲು ಬಳಸುತ್ತಾರೆ. ಛಾಯಾಚಿತ್ರಗ್ರಾಹಿಗಳು ಅಬಿಂದುಕತಾ ವಿಹೀನ ಮಸೂರ ಅಳವಡಿಸಿದ ಕ್ಯಾಮೆರಾ ಬಳಸುತ್ತಾರೆ.