ಅಷ್ಟಕ

(ಅಷ್ಟಕಗಳು ಇಂದ ಪುನರ್ನಿರ್ದೇಶಿತ)

ಅಷ್ಟಕ ಪದವು ಎಂಟು ಅರ್ಥದ ಸಂಸ್ಕೃತ ಶಬ್ದ ಅಷ್ಟದಿಂದ ವ್ಯುತ್ಪನ್ನವಾಗಿದೆ. ಕಾವ್ಯ ರಚನೆಯ ವಿಷಯದಲ್ಲಿ, ಅಷ್ಟಕ ಪದವು ಎಂಟು ಶ್ಲೋಕಗಳಲ್ಲಿ ಬರೆಯಲಾದ ನಿರ್ದಿಷ್ಟ ರೂಪದ ಕಾವ್ಯವನ್ನು ಸೂಚಿಸುತ್ತದೆ.

ಅಷ್ಟಕದೊಂದಿಗೆ ಸಂಬಂಧಿಸಿದ ಸಂಪ್ರದಾಯಗಳು ೨೫೦೦ ವರ್ಷಕ್ಕಿಂತ ಹೆಚ್ಚಿನ ಅದರ ಸಾಹಿತ್ಯಿಕ ಇತಿಹಾಸದಲ್ಲಿ ವಿಕಾಸಗೊಂಡಿವೆ. ಆದಿ ಶಂಕರರು ಅತ್ಯಂತ ಪರಿಚಿತ ಅಷ್ಟಕ ಲೇಖಕರಲ್ಲಿ ಒಬ್ಬರು. ಇವರು ಅಷ್ಟಕಗಳ ಗುಂಪಿನಿಂದ ಒಂದು ಅಷ್ಟಕ ಚಕ್ರವನ್ನು ಸೃಷ್ಟಿಸಿದರು. ಪ್ರತಿ ಅಷ್ಟಕವು ಒಬ್ಬ ನಿರ್ದಿಷ್ಟ ದೇವತೆಗೆ ಸಂಬೋಧಿತವಾಗುವಂತೆ ಹೊಂದಿಸಲ್ಪಟ್ಟಿತ್ತು, ಮತ್ತು ಪೂರ್ಣ ರೂಪದ ಪ್ರತ್ಯೇಕ ಕವಿತೆಗಳ ಸಂಗ್ರಹವಾಗಿ, ಮತ್ತು ಎಲ್ಲ ಪ್ರತ್ಯೇಕ ಅಷ್ಟಕಗಳನ್ನು ಒಳಗೊಂಡ ಒಂದು ಒಂಟಿ ಕಾವ್ಯ ಕೃತಿಯಾಗಿ ಓದಲ್ಪಡುವಂತೆ ವಿನ್ಯಾಸಗೊಂಡಿತ್ತು. ಅವರು ವಿವಿಧ ದೇವತೆಗಳಿಗೆ ಸ್ತುತಿಯಾಗಿ ಮೂವತ್ತಕ್ಕೂ ಹೆಚ್ಚು ಅಷ್ಟಕಗಳನ್ನು ಬರೆದರು.

ಸಂಸ್ಕೃತ ಸಾಹಿತ್ಯದ ಸುವರ್ಣ ಕಾಲ ಮತ್ತು ವೈದಿಕ ಸಾಹಿತ್ಯದ ಅವಧಿಯಲ್ಲಿ ಅಷ್ಟಕಗಳು ಭಕ್ತಿಪ್ರಧಾನ ಮತ್ತು ಸಾಮಾನ್ಯ ಕಾವ್ಯದ ಬಹಳ ಜನಪ್ರಿಯ ಹಾಗೂ ಸ್ವೀಕರಿಸಲಾದ ಶೈಲಿಯಾಗಿದ್ದವು.

ಒಂದು ಅಷ್ಟಕದಲ್ಲಿನ ಶ್ಲೋಕಗಳು ನಾಲ್ಕು ಸಾಲುಗಳಿರುವ ಪ್ರಾಸಬದ್ಧ ಚತುಷ್ಕಗಳಾಗಿರುತ್ತವೆ, ಅಂದರೆ ಅಂತ್ಯದ ಸಾಲುಗಳು ಆ-ಆ-ಆ-ಆ ಎಂದು ಪ್ರಾಸವಾಗುತ್ತವೆ. ಹಾಗಾಗಿ, ಒಂದು ಅಷ್ಟಕದಲ್ಲಿ ಸಾಮಾನ್ಯವಾಗಿ ಮೂವತ್ತೆರಡು ಸಾಲುಗಳನ್ನು ಕಾಪಾಡಿಕೊಳ್ಳಲಾಗುತ್ತದೆ. ಈ ಎಲ್ಲ ಶ್ಲೋಕಗಳು ಕಟ್ಟುನಿಟ್ಟಿನ ಪ್ರಾಸ ವಿನ್ಯಾಸವನ್ನು ಅನುಸರಿಸುತ್ತವೆ. ಒಂದು ಅಷ್ಟಕಕ್ಕೆ ಸರಿಯಾದ ಪ್ರಾಸ ವಿನ್ಯಾಸವೆಂದರೆ: ಅ-ಅ-ಅ-ಅ/ಬ-ಬ-ಬ-ಬ….. (/ ಹೊಸ ಶ್ಲೋಕವನ್ನು ಪ್ರತಿನಿಧಿಸುತ್ತದೆ). ಪ್ರಾಸ ವಿನ್ಯಾಸಗಳು ಕರ್ಣ ವಿನ್ಯಾಸಗಳು ಮತ್ತು ನೇತ್ರ ವಿನ್ಯಾಸಗಳು ಎರಡೂ ಆಗಿರುತ್ತವೆ. ಕರ್ಣ ಪ್ರಾಸ ಹೇಗೆಂದರೆ ಕೊನೆಯ ಅಕ್ಷರಗಳು ಧ್ವನಿ ಮತ್ತು ಕೇಳಿಸುವಿಕೆಯಲ್ಲಿ ಪ್ರಾಸವಾಗುತ್ತವೆ, ಮತ್ತು ನೇತ್ರ ಪ್ರಾಸ ಹೇಗೆಂದರೆ ಕೊನೆಯ ಅಕ್ಷರಗಳು ಹೋಲುವಂತೆ ಕಾಣುತ್ತವೆ. ಈ ಪ್ರಾಸ ಸರಣಿಯು ಅಷ್ಟಕದ ಸಾಮಾನ್ಯ ರಚನೆಯನ್ನು ವಿಧಿಸುತ್ತದೆ. ಅಷ್ಟಕ ಪ್ರಾಸವು ಊಹಿಸಬಹುದಾದ ಸ್ಥಳಗಳಲ್ಲಿ ಇರಿಸಲಾದ ಅನನ್ಯ (ಗಡಸು-ಪ್ರಾಸ) ಅಥವಾ ಹೋಲುವ (ಮೃದು-ಪ್ರಾಸ) ಧ್ವನಿಗಳನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಈ ಸ್ಥಳಗಳು ಬಾಹ್ಯ ಪ್ರಾಸಕ್ಕಾಗಿ ಸಾಲುಗಳ ಕೊನೆಗಳು ಮತ್ತು ಆಂತರಿಕ ಪ್ರಾಸಕ್ಕಾಗಿ ಸಾಲುಗಳೊಳಗೆ ಆಗಿರುತ್ತವೆ.

ಸಂಸ್ಕೃತ ಭಾಷೆಯು ಪ್ರಾಸಬದ್ಧ ರಚನೆಗಳನ್ನು ಉಳಿಸಿಕೊಳ್ಳುವಲ್ಲಿ ಉನ್ನತ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತದೆ. ಹಾಗಾಗಿ ಸಂಸ್ಕೃತ ಅಷ್ಟಕಗಳು ಸುದೀರ್ಘ ರಚನೆಯ ಉದ್ದಕ್ಕೂ ಪ್ರಾಸಗಳ ಸೀಮಿತ ಸಮೂಹವನ್ನು ಒಯ್ಯಲು ಸಮರ್ಥವಾಗಿವೆ. ಒಂದು ಅಷ್ಟಕದಲ್ಲಿ ಹಲವು ಬಾರಿ, ಚೌಪದಿಗಳು ಹಠಾತ್ತನೆ ಅಂತ್ಯಗೊಳ್ಳುತ್ತವೆ ಅಥವಾ ಇತರ ಸಂದರ್ಭಗಳಲ್ಲಿ, ದ್ವಿಪದಿಗಳಿಂದ ಅಂತ್ಯವಾಗುತ್ತವೆ. ಚರಣ ಚೌಪದಿಗಳಲ್ಲಿ ಕವಿಯು ಒಂದು ವಿಷಯವನ್ನು ಸ್ಥಾಪಿಸುತ್ತಾನೆ ಮತ್ತು ನಂತರ ದ್ವಿಪದಿ ಎಂದು ಕರೆಯಲಾಗುವ ಅಂತಿಮ ಸಾಲುಗಳಲ್ಲಿ ಅದನ್ನು ಬಗೆಹರಿಸಬಹುದು, ಅಥವಾ ಬಗೆಹರಿಸದೇ ಬಿಟ್ಟುಬಿಡಬಹುದು. ಕೆಲವೊಮ್ಮೆ ಅಂತ್ಯದ ದ್ವಿಪದಿಯು ಕವಿಯ ಸ್ವ ಗುರುತನ್ನು ಹೊಂದಿರಬಹುದು.

ಕೆಲವು ವೇಳೆ ಫಲಶ್ರುತಿ ರೂಪವಾದ ಇಲ್ಲವೇ ಕವಿಪರಿಚಯವನ್ನು ಸೂಚಿಸುವ ಒಂದೆರಡು ಶ್ಲೋಕಗಳು ಜೊತೆಗೆ ಸೇರಿರುವುದುಂಟು. ಎಂಟು ಎಂಬ ಸಂಖ್ಯೆಯ ಬಗೆಗೆ ಭಾರತೀಯರಲ್ಲಿ ಒಂದು ಬಗೆಯ ಪವಿತ್ರತಾಭಾವನೆ, ಗೌರವ ಇದೆ. ಆದ್ದರಿಂದಲೇ ನಾಮಜಪ, ಮಂತ್ರಜಪ, ಹೋಮ, ಅರ್ಚನೆ ಮುಂತಾದುವು ಗಳಲ್ಲಿ ಎಂಟರಿಂದ ಕೂಡಿದ ಇಪ್ಪತ್ತೆಂಟು, ನೂರೆಂಟು, ಸಾವಿರದೆಂಟು (ಅಷ್ಟವಿಂಶತಿ, ಅಷ್ಟೋತ್ತರಶತ, ಅಷ್ಟೋತ್ತರ ಸಹಸ್ರ) ಮೊದಲಾದ ಸಂಖ್ಯಾಪರಿಮಿತಿಯ ಬಳಕೆಯಿದೆ. ಹಾಗೆಯೆ ಈ ಎಂಟು ಶ್ಲೋಕಗಳ ಪದಗುಚ್ಛದ ಹಿರಿಮೆ. ಅಷ್ಟಕಗಳೆಲ್ಲವೂ ಸಾಧಾರಣವಾಗಿ ದೇವತಾಸ್ತುತಿ ರೂಪವಾದುವು. ಅನುಷ್ಟುಭ್‍ನಿಂದ ಹಿಡಿದು ಎಲ್ಲ ಛಂದಸ್ಸಿನಲ್ಲಿ ಇವು ರಚಿತವಾಗಿವೆ. ಎಲ್ಲ ದೇವತೆಗಳ ವಿಷಯದಲ್ಲೂ ರಚಿತವಾಗಿವೆ. ವಾಲ್ಮೀಕಿಕೃತವೆಂದು ಹೇಳಲಾದ ಗಂಗಾಷ್ಟಕವೂ ಪ್ರಹ್ಲಾದ ಕೃತವೆನಿಸಿದ ಶ್ರೀಹರ್ಯಷ್ಟಕವೂ ಇವುಗಳಲ್ಲಿ ಪ್ರಾಚೀನತಮವಿರಬಹುದು. ಪುಷ್ಕರಾಷ್ಟಕ, ಪ್ರಯಾಗಾಷ್ಟಕ, ಸರಸ್ವತ್ಯಷ್ಟಕ, ಶೀತಲಾಷ್ಟಕ ಮುಂತಾಗಿ ಹಲವು ಅಷ್ಟಕಗಳು ಪುರಾಣಾಂತರ್ಗತಗಳು. ಎಲ್ಲ ಮತಾಚಾರ್ಯರೂ ತಮ್ಮ ತಮ್ಮ ಇಷ್ಟದೇವತೆಗಳನ್ನು ಕುರಿತು ಅಷ್ಟಕಗಳನ್ನು ರಚಿಸಿದ್ದಾರೆ. ಅಚ್ಯುತಾಷ್ಟಕ, ಅನ್ನಪುರ್ಣಾಷ್ಟಕ, ಗುರ್ವಾಷ್ಟಕ, ಜಗನ್ನಾಥಾಷ್ಟಕ ಮೊದಲಾಗಿ 20ಕ್ಕೂ ಮೇಲ್ಪಟ್ಟು ಅಷ್ಟಕಗಳು ಶ್ರೀಶಂಕರಾಚಾರ್ಯರ ಹೆಸರಿನಲ್ಲಿ ಬಳಕೆಯಲ್ಲಿವೆ. ವೇದಾಂತಾಚಾರ್ಯರೆಂದು ಪ್ರಖ್ಯಾತರಾದ ವೆಂಕಟನಾಥರೂ ಕಾಮಾಸಿಕ ನೃಸಿಂಹಾಷ್ಟಕ, ಅಷ್ಟಭುಜಾಷ್ಟಕ, ಸುದರ್ಶನಾಷ್ಟಕಗಳನ್ನು ರಚಿಸಿದ್ದಾರೆ. ಕಾಳಿದಾಸಕೃತವೆಂಬ ಗಂಗಾಷ್ಟಕವೊಂದು ರೂಢಿಯಲ್ಲಿವೆ. ಅಗಸ್ತ್ಯಾಷ್ಟಕ, ತಾರಾಷ್ಟಕ, ಶೀತಲಾಷ್ಟಕ, ನರ್ಮದಾಷ್ಟಕ, ಸೂರ್ಯಾಷ್ಟಕ, ಮಹಾಲಕ್ಷ್ಮ್ಯಷ್ಟಕ, ಸುಬ್ರಹ್ಮಣ್ಯಾಷ್ಟಕ ಮುಂತಾದುವು ದಿಗ್ದರ್ಶಕವಾಗಲು ಸಾಕಾಗುವ ಕೆಲವು ಅಷ್ಟಕಗಳು. ಅಂತೂ ಚಿಕ್ಕವಾಗಿ ಚೊಕ್ಕವಾಗಿ ವಿಶಾಲವಾದ ಭಾವಗಳನ್ನು ಸಂಗ್ರಹವಾಗಿ ನಿರೂಪಿಸಿ ನೆನಪಿನಲ್ಲಿಡಲು ಅನುಕೂಲಿಸುವಂತೆ ರಚಿತವಾದ ಅಷ್ಟಕಗಳು ಜನತೆಯ ಆದರಕ್ಕೆ ಪಾತ್ರವಾಗಿವೆ.

ಉಲ್ಲೇಖಗಳು ಬದಲಾಯಿಸಿ

ಬಾಹ್ಯ ಕೊಂಡಿಗಳು ಬದಲಾಯಿಸಿ

"https://kn.wikipedia.org/w/index.php?title=ಅಷ್ಟಕ&oldid=808289" ಇಂದ ಪಡೆಯಲ್ಪಟ್ಟಿದೆ