ಅಷೂಲಿಯನ್ ಉದ್ಯಮ
ಹಳೆಶಿಲಾಯುಗದ ಮೊದಲ ಭಾಗದಲ್ಲಿ ರೂಢಿಯಲ್ಲಿದ್ದ ಶಿಲಾ ಉದ್ಯಮ. ಉತ್ತರ ಫ್ರಾನ್ಸಿನ ಸೇಂಟ್ ಅಷಲ್ ಎಂಬ ಸ್ಥಳದಲ್ಲಿ ಮೊದಲು ಗುರುತಿಸಲ್ಪಟ್ಟಿದ್ದರಿಂದ ಈ ಹೆಸರು ರೂಢಿಗೆ ಬಂದಿದೆ. ಇದಕ್ಕೂ ಪೂರ್ವದ ಅಬೆವಿಲಿಯನ್ ರೀತಿಯಿಂದಲೇ ಬೆಳೆದುಬಂದಿರುವ ಈ ಉದ್ಯಮದಲ್ಲೂ ಕೈ ಕೊಡಲಿಗಳೇ ಮುಖ್ಯ ಉಪಕರಣಗಳು. ಆದರೂ ಅಗಲವಾದ ಅಂಚುಳ್ಳ ಸೀಳುಗೊಡಲಿ (ಕ್ಲೀವರ್), ಹೆರೆಯುವ ಉಪಕರಣಗಳೂ (ಸ್ಕ್ರೇಪರ್ಸ್) ಉಪಯೋಗದಲ್ಲಿದ್ದವು. ಉಪಕರಣ ತಯಾರಿಕೆಯಲ್ಲಿ ಕಲ್ಲಿನ ಸುತ್ತಿಗೆಗಳ ಬದಲು ಮರ ಅಥವಾ ಎಲುಬಿನ ಸುತ್ತಿಗೆಗಳನ್ನು ಉಪಯೋಗಕ್ಕೆ ತಂದುದರಿಂದ, ಉಪಕರಣಗಳು ಹೆಚ್ಚು ನಾಜೂಕಿನವಾಗಿ ನೇರ ಅಂಚುಗಳೊಡನೆ, ನಿರ್ದಿಷ್ಟ ಆಕಾರವನ್ನು ಹೊಂದಿದವಲ್ಲದೆ ತೆಳ್ಳಗೂ ಆಗುತ್ತ ಬಂದುವು. ಉಪಕರಣಗಳನ್ನು ಮಾಡುವುದು ಮೂಲ ಶಿಲೆಯಿಂದ ಎಬ್ಬಿದ ದೊಡ್ಡ ಕಲ್ಲು ಚಕ್ಕೆಗಳಿಂದ. ಅಂಚಿನಲ್ಲಿ ಮೆಟ್ಟಲು ಮೆಟ್ಟಲಾಗಿ ಸಣ್ಣ ಚಕ್ಕೆಗಳನ್ನು ಎಬ್ಬಿಸಿ, ಅಂಚುಗಳನ್ನು ನೇರವಾಗಿ ಹರಿತವಾಗಿ ಮಾಡುವ ಪದ್ಧತಿ ಸಹ ಈ ಕಾಲದಲ್ಲೇ ರೂಢಿಗೆ ಬಂತು. ಈ ಸಂಸ್ಕೃತಿ ಯುರೋಪ್, ಪಶ್ಚಿಮ ಏಷ್ಯ, ಭಾರತ ಮತ್ತು ಆಫ್ರಿಕ ಮುಂತಾದ ಕಡೆ ಕಂಡುಬರುತ್ತದೆ. ಪ್ಲಿಸ್ಟೋಸೀನ್ನ ಎರಡನೆಯ ಹಿಮಯುಗದ ಕೊನೆ ಅಥವಾ ಅನಂತರದ ಉಷ್ಣಕಾಲದ ಮೊದಲಲ್ಲಿ ಮಧ್ಯ ಆಫ್ರಿಕದಲ್ಲಿ ಹುಟ್ಟಿದ ಈ ಉದ್ಯಮ ಸು. 300000-100000 ವರ್ಷಗಳ ಪೂರ್ವದಲ್ಲಿ ಪ್ರಚಲಿತವಾಗಿತ್ತು.