ಜರತುಷ್ಟ್ರನ ಅನುಯಾಯಿಗಳು ಬರೆದಿರುವ ಪ್ರಾಚೀನ ಧಾರ್ಮಿಕ ಲೇಖನಗಳ ಸಂಕಲನ.

ಜರತುಷ್ಟ್ರ

ಬದಲಾಯಿಸಿ

ಪ್ರ.ಶ.ಪೂ. 6ನೆಯ ಶತಮಾನದಲ್ಲಿ ಪ್ರವಾದಿ ಜರತುಷ್ಟ್ರ ತನ್ನ ಉಪದೇಶಗಳನ್ನು ಪ್ರಚಾರ ಮಾಡುತ್ತಿದ್ದ.

( ಆ ಧರ್ಮಾವಲಂಬಿಗಳ ಪೈಕಿ ಅನೇಕರು ಈಗ ಭಾರತದಲ್ಲಿ ಬಾಳುತ್ತಿದ್ದಾರೆ. ಇರಾನ್ ದೇಶ ಅವರ ಹಳೆಯ ತವರು ಮನೆ;)

ಪ್ರಥಮತಃ ಅವೆಸ್ತ ಎಂದರೆ ಪವಿತ್ರ ಗ್ರಂಥ ಎಂದು ಅರ್ಥ. ಅದಕ್ಕೆದುರಾಗಿ ಜ಼ಂಡ್ ಎಂಬುದು ಆ ಪವಿತ್ರ ಗ್ರಂಥದ ಮೇಲೆ ಪಹ್ಲವಿ ಭಾಷೆಯಲ್ಲಿರುವ ಟೀಕೆ ಮತ್ತು ಟಿಪ್ಪಣಿ. ಎರಡನೆಯದಾಗಿ, ಅವೆಸ್ತ ಎಂಬುದು ಆ ಪವಿತ್ರ ಗ್ರಂಥದಲ್ಲಿ ಪ್ರಯುಕ್ತವಾಗಿರುವ ಭಾಷೆಗೂ ಅನ್ವಯಿಸುತ್ತದೆ.

ಈಗ ಜ಼ಂಡ್ ಎಂಬುದು ಅವೆಸ್ತ ಭಾಷೆಯ ಹೆಸರಲ್ಲವೆಂಬುದು ಸ್ಪಷ್ಟ. ಅವೆಸ್ತ ಪದ ಪಹ್ಲವಿಯ ಅವಿಸ್ತಾಕ್ ಅಥವಾ ಅಪಸ್ತಾಕ್ ಎಂಬ ಮೂಲದಿಂದ ಬಂದುದು. ಈ ಮೂಲ ಶಬ್ದ ಉಪಸ್ತಾ ಎಂಬ ಮಾತೃಕೆಯಿಂದ ಹೊರಟಿದೆಯೆನ್ನುವ ಪಕ್ಷದಲ್ಲಿ, ಅದರ ಅರ್ಥ ಆದಿಮ ಅಥವಾ ಅಸಲು ಪ್ರತಿ ಎಂದಾಗುತ್ತದೆ.

ಈ ಶಬ್ದ ಪಹ್ಲವಿಯ ಅಪಸ್ತಾನ್ (ನಂಬಿಕೆ) ಎಂಬ ಪದಕ್ಕೆ ಸಂಬಂಧಿಸಿದೆ ಎಂದು ಸೂಚಿಸುವುದೂ ಉಂಟು; ಹಾಗಾದ ಪಕ್ಷದಲ್ಲಿ ಅದರ ಅರ್ಥ ವಿಶ್ವಾಸಾರ್ಹವಾದ ಅಥವಾ ಯಥಾರ್ಥವಾದ ಏಕಮಾತ್ರ ಗ್ರಂಥ ಎಂದಾಗುತ್ತದೆ.

ಉಪಲಬ್ಧವಾಗಿರುವ ಅವೆಸ್ತ

ಬದಲಾಯಿಸಿ

ಈಗ ಉಪಲಬ್ಧವಾಗಿರುವ ಅವೆಸ್ತ ಒಂದೇ ಒಂದು ಪುಸ್ತಕವಾಗಿಲ್ಲ; ಯಾವುದೋ ಕಾಲದಲ್ಲಿ ಹೇರಳವಾಗಿದ್ದ ಸಾಹಿತ್ಯರಾಶಿಯ ಏಕಾಂಶವೆನಿಸಿರುವ ಹಲವಾರು ಪುಸ್ತಕಗಳ ಸಂಕಲನ. ಪಾರಸಿ ಸಂಪ್ರದಾಯದ ಪ್ರಕಾರ 1000 ಅಧ್ಯಾಯಗಳ 21 ನಾಸ್ಕುಗಳನ್ನು (ಪುಸ್ತಕಗಳನ್ನು) ಒಳಗೊಂಡಿದ್ದ ಮೂಲ ಅವೆಸ್ತ ಪ್ರಮಾಣಾವಳಿ ಮೊದಲು ಅಕಿಮೀನಿಯನ್ ಕಾಲದಲ್ಲಿ ಸ್ಥಿರೀಕೃತವಾಯಿತು. ಅದನ್ನು ದನಗಳ ಚರ್ಮದ ಮೇಲೆ ಬರೆದು ಅದರ ಎರಡು ಪ್ರತಿಗಳನ್ನು ಪರ್ಸಿಪೊಲಿಸ್ ನಗರದ ಪತ್ರಾಗಾರ ಮತ್ತು ಧನಾಗಾರಗಳಲ್ಲಿ ಸುರಕ್ಷಿತವಾಗಿ ಇಡಲಾಗಿತ್ತು. ದುರದೃಷ್ಟವಶಾತ್ ಆ ಪ್ರತಿಗಳೆರಡೂ ಅಲೆಕ್ಸಾಂಡರ್ ನ ವಿಜಯಯಾತ್ರೆಯ ಪರಿಣಾಮವಾಗಿ ನಾಶ ಹೊಂದಿದವು. ಅದಾದ ಮೇಲೆ ವೊಲೊಗೋಸಿಸ್ I ಎಂಬ ರಾಜ ಪ್ರಾರಂಭ ಮಾಡಿದ ಉದ್ಯಮವನ್ನು ಜರತುಷ್ಟ್ರನ ಧರ್ಮದಲ್ಲಿ ತುಂಬ ಶ್ರದ್ಧೆಯುಳ್ಳ ಸಸ್ಸೇನಿಯನ್ ರಾಜರು ಮುಂದುವರಿಸುತ್ತ ಪ್ರ.ಶ. 3ನೆಯ ಶತಮಾನದ ಹೊತ್ತಿಗೆ ಬರೆಹದಲ್ಲಾಗಲೀ ಪುರೋಹಿತರ ನೆನಪಿನಲ್ಲಾಗಲೀ ಉಳಿದಿದ್ದ ಪ್ರಮಾಣಾವಳಿ ಎಲ್ಲವನ್ನೂ ಸಮಗ್ರವಾಗಿ ಪುನರುಜ್ಜೀವನಗೊಳಿಸಲು ಸಮರ್ಥರಾದರು. ಎರಡನೆಯ ಶಾಹಪುರ್ (4ನೆಯ ಶತಮಾನ) ರಾಜನ ಕಾಲದಲ್ಲಿ ಇದರ ಕಟ್ಟಕಡೆಯ ಪರಿಷ್ಕರಣ ನಡೆದು ಮತಕ್ಕೆ ಸಂಬಂಧಪಡದ ವೈದ್ಯ, ಜ್ಯೋತಿಷ ಮತ್ತು ಭೂಗೋಳಗಳ ವಿಷಯಗಳನ್ನೂ ಒಳಗೊಂಡಿದ್ದ ಸಸ್ಸೇನಿಯನ್ ಪ್ರಮಾಣಾವಳಿ ಒಂದು ಸ್ಥಿರರೂಪಕ್ಕೆ ಬಂತು. ದೀನ್ ಕರ್ದ್ ಎಂಬ 9ನೆಯ ಶತಮಾನದ ಪಹ್ಲವಿ ವಿಶ್ವಕೋಶ, ಈ ಎರಡನೆಯ ಪರಿಷ್ಕರಣದಲ್ಲೂ 21 ನಾಸ್ಕುಗಳಿದ್ದುವೆಂದೂ ಅವುಗಳಲ್ಲಿ 20 ಮೂಲ ಪ್ರಮಾಣಗಳಿಗೆ ಸರಿಹೊಂದುತ್ತಿದ್ದುವೆಂದೂ ತಿಳಿಸುತ್ತದೆ.

ಆದರೆ ಈ ಪುನರುದ್ಧೃತ ಗ್ರಂಥ ಮಹಮ್ಮದೀಯರು ಇರಾನಿನೊಳಕ್ಕೆ ನುಗ್ಗಿದಾಗ ತುಂಬ ಭಂಗಕ್ಕೆ, ಅಲೆಕ್ಸಾಂಡರನ ದಂಡಯಾತ್ರೆಯ ಸಮಯದಲ್ಲಿ ಆದುದಕ್ಕಿಂತಲೂ ಹೆಚ್ಚಾದ ಭಂಗಕ್ಕೆ ಒಳಗಾಯಿತು. ನಾಶಕ್ಕೆ ಪಕ್ಕಾಗದೆ ಶೇಷವುಳಿಯಿತೋ ಅದನ್ನು ಕೆಲವು ಜರತುಷ್ಟ್ರಾನುಯಾಯಿಗಳು, ಎಂದರೆ, ಇರಾನಿನಲ್ಲಿ ಉಳಿದುಕೊಂಡ ಗಾಬ್ರರೂ ಭಾರತದ ಪಶ್ಚಿಮ ತೀರದಲ್ಲಿ ಆಶ್ರಯ ಪಡೆದ ಪಾರಸಿಗಳೂ ಕಾಪಿಟ್ಟುಕೊಂಡರು. ಈಗಿನ ಅವೆಸ್ತ ಈ ಅವಶೇಷಗಳ ತಳಹದಿಯ ಮೇಲೆ ನಿಂತಿದೆ. ಆದುದರಿಂದ ಬಹಳ ಹರಕುಮುರುಕಾಗಿದೆ. ಸಸ್ಸನಿದನ ಪರಿಷ್ಕರಣದ ಮೂರನೆಯ ಒಂದು ಭಾಗ ಮಾತ್ರ ಅದರಲ್ಲಿದೆ ಎಂದು ಊಹಿಸಲಾಗಿದೆ. ಆದರೆ ನಷ್ಟವಾಗಿರುವ ಪರಿಷ್ಕರಣದಲ್ಲಿ ಸಾಮಾನ್ಯವಾಗಿ ಯಾವ ಯಾವ ವಿಷಯಗಳಿದ್ದುವೆಂಬುದು ದೀನ್ ಕರ್ದ್ ಎಂಬ ಗ್ರಂಥದಲ್ಲಿನ ವಿವರಗಳಿಂದ ನಮಗೆ ತಿಳಿದು ಬರುತ್ತದೆ.

ವರ್ಗೀಕರಣ

ಬದಲಾಯಿಸಿ

ಅವೆಸ್ತದ ಪುಸ್ತಕಗಳನ್ನು ಈ ಮುಂದಿನಂತೆ ವರ್ಗೀಕರಿಸುವುದು ರೂಢಿ : 1. ಗಾಥೆಗಳು 2. ಯಸ್ನ 3. ವೀಸ್ ಪರೆಡ್ 4. ಯಷ್ತ್‌ಗಳು 5. ವೆಂದಿದಾದ್ ಮತ್ತು 6. ಲಘುಸ್ತುತಿಗಳು ಹಾಗೂ ಅಸಮಗ್ರ ಲೇಖನಗಳು. ಭಾಷೆ ಮತ್ತು ಛಂದಸ್ಸುಗಳ ತಳಹದಿಯ ಮೇಲೆ ಕಟ್ಟಿರುವ ಕಾಲಾನುಕ್ರಮದ ದೃಷ್ಟಿಯಿಂದ ಈ ಗ್ರಂಥಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: 1. ಗಾಥೆಗಳು, ಯೆಣ್‌ಹೆ ಹಾತಂ ಪ್ರಾರ್ಥನೆ ಹಳೆಯ ಗಾಥೆಯ ಉಪಭಾಷೆಯೊಂದರಲ್ಲಿ ಬರೆದಿರುವ ಒಂದು ಲೇಖನ ಸಮುದಾಯವನ್ನೊಳಗೊಂಡಿರುವ ಯಸ್ನ ಹಾಪ್ತನ್ ಹಾಯಿತಿ 2. ಈಚಿನ ಉಪಭಾಷೆಯೊಂದರಲ್ಲಿ ರಚಿತವಾದ ಕಿರಿಯ ಅವೆಸ್ತ ಎಂಬ ಮಿಕ್ಕ ಭಾಗ.

1. ಗಾಥೆಗಳು

ಬದಲಾಯಿಸಿ

ಗಾಥೆಗಳಲ್ಲಿ ಅವೆಸ್ತದ ಅತ್ಯಂತ ಪ್ರಾಚೀನ ಭಾಗಗಳಿವೆ. ಜರತುಷ್ಟ್ರನ ಜೀವಿತಕಾಲಕ್ಕೆ ಅವು ಸಂಬಂಧಿಸಿವೆ. ನೇರ ಆತನ ಬಾಯಿಂದ ಬಂದ ನುಡಿಗಳಿವು. ಈಚಿನ ಅವೆಸ್ತಕ್ಕಿಂತ ಅವು ಭಾಷೆಯಲ್ಲೂ ವಿಷಯಗಳಲ್ಲೂ ಭಿನ್ನವಾಗಿರುವುವಲ್ಲದೆ ಅವನ್ನು ಅರ್ಥಮಾಡಿಕೊಳ್ಳುವುದೂ ಕೊಂಚಮಟ್ಟಿಗೆ ಕಷ್ಟವಾಗಿದೆ. ಜರತುಷ್ಟ್ರನ ದಿವ್ಯದರ್ಶನಗಳನ್ನೂ ಉಪದೇಶಗಳನ್ನೂ ಗಾಥೆಗಳು ಒಳಗೊಂಡಿವೆಯಾದ ಕಾರಣ ಆ ಮತದ ಪ್ರಾಚೀನತಮರೂಪ ನಮಗಲ್ಲಿ ದೊರಕುತ್ತದೆ. ಸತ್ಯವನ್ನರಸುತ್ತ ಜರತುಷ್ಟ್ರ ತನ್ನ ಮನೆಯನ್ನು ಬಿಟ್ಟು ಹೊರಟ ಹತ್ತು ವರ್ಷಗಳಾದ ಮೇಲೆ ಅಹುರಮಜ್ದ ಒಬ್ಬನೇ ಏಕಮಾತ್ರ ದೈವವೆಂಬ ತಿಳಿವಳಿಕೆ ಆತನ ಮನಸ್ಸಿಗೆ ಹೊಳೆಯಿತು. ಈ ದೈವಕ್ಕೆ ಸಹಾಯಕರಾಗಿ ಅಮೇಷ ಸ್ಬೆಂಟಾ ಎಂಬ ಆರು ಮಂದಿಯ ಸಲಹಾಮಂಡಲಿಯಿದೆ. ಆ ಧರ್ಮದ ಮತ್ತೊಂದು ವೈಶಿಷ್ಟ್ಯವೇನೆಂದರೆ, ಅದು ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ ಕಾಲ ಹುಟ್ಟಿದಂದಿನಿಂದ ಹೋರಾಟವಿದೆ ಎಂಬ ನೈತಿಕದ್ವೈತ ಮತವನ್ನು ಎತ್ತಿ ಹಿಡಿಯುತ್ತದೆ. ಈ ಹೋರಾಟದಲ್ಲಿ ಮನುಷ್ಯನ ಪಾತ್ರ ಬಹುಮುಖ್ಯವಾದುದೆಂದು ಜರತುಷ್ಟ್ರನ ಅಭಿಪ್ರಾಯ. ಸ್ವತಂತ್ರಕರ್ತನಾಗಿ ಆತ ಯಾವ ಪಕ್ಷವನ್ನು ಹಿಡಿಯಬೇಕೆಂದು ನಿರ್ಣಯಿಸಲು ತಕ್ಕವನಾಗಿದ್ದಾನೆ, ಒಳ್ಳೆಯದರ ಕಡೆಗಿದ್ದುಯ ಕೊಂಡು ಆತ ದೈವಸಾಮ್ರಾಜ್ಯದ ವಿಸ್ತರಣ, ಕೆಟ್ಟದ್ದರ ಮೇಲೆ ಒಳ್ಳೆಯದರ ಅಂತ್ಯವಿಜಯಕ್ಕೂ ನೆರವಾಗಬಲ್ಲ. ಜರತುಷ್ಟ್ರನ ಧರ್ಮ ಪ್ರಾಣಿವಧೆ, ಹೋಮ ಮೊದಲಾದ ಯಜ್ಞಗಳನ್ನು ಬೋಧಿಸುವುದಿಲ್ಲ; ತಪಶ್ಚರ್ಯೆಯನ್ನು ಒಪ್ಪುವುದಿಲ್ಲ; ಅಲ್ಲದೆ ಐಶ್ವರ್ಯ ಸಂಪನ್ನರಾಗಲು ಎಲ್ಲರೂ ಪ್ರಯತ್ನ ಮಾಡಬೇಕೆಂದು ಸೂಚಿಸುತ್ತದೆ. ನೆಲವನ್ನು ಉಳುವುದೂ ದನಕರುಗಳನ್ನು ಸಾಕುವುದೂ ಸತ್ಕರ್ಮವೆಂದೂ ಋದ್ಧಿಮೂಲವೆಂದೂ ಸಾರುತ್ತದೆ. ಗಾಥೆಗಳಲ್ಲಿ ಜರತುಷ್ಟ್ರ ಮನುಷ್ಯರೂಪನಾಗಿ ಕಂಡುಬರುತ್ತಾನೆ. ಆತನೊಂದಿಗೆ ಅಹುರಮಜ್ದ ಸ್ನೇಹಿತನೊಂದಿಗೆ ಸ್ನೇಹಿತನು ಹೇಗೋ ಹಾಗೆ ಮಾತಾಡುತ್ತಾನೆ. ಮನುಷ್ಯವರ್ಗಕ್ಕೆ ಸತ್ಯವನ್ನು ತಿಳಿಸಲು ದೇವರು ತನ್ನನ್ನೇ ಆರಿಸಿಕೊಂಡಿದ್ದಾನೆ ಎಂದು ಪ್ರವಾದಿಯ ಅಪ್ರತಿಹತವಾದ ನಂಬುಗೆ. ಆದರೆ ದೇವರ ಸಂದೇಶವನ್ನು ಹರಡುವುದು ಆತನಿಗೆ ಅಷ್ಟು ಸುಲಭವಾದ ಕೆಲಸವಾಗಲಿಲ್ಲ. ಜರತುಷ್ಟ್ರನನ್ನು ಆತನ ಕುಲದವರೇ ಸ್ಥಳದವರೇ ಪಟ್ಟುಹಿಡಿದು ಎದುರಿಸಿದರು. ಆದರೆ ಕಟ್ಟಕಡೆಗೆ ಆತ ಪುರ್ವ ಇರಾನಿನ ಕವಿ ವಿಷ್ಟಾಸ್ಪ ಎಂಬ ಉದಾರನಾದ ರಾಜಪುತ್ರನನ್ನು ತನ್ನ ಕಡೆಗೆ ಒಲಿಸಿಕೊಳ್ಳುವುದರಲ್ಲಿ ಜಯಶೀಲನಾದ. ಹೀಗೆ ಜರತುಷ್ಟ್ರ ತನ್ನ ಜೀವಿತಾವಧಿಯಲ್ಲೇ ತನ್ನ ಗೆಲವನ್ನು ಕಂಡ.

ಪೂಜಾವಿಧಿಯನ್ನೊಳಗೊಂಡ ಮುಖ್ಯ ಕೃತಿ (ಯಸ್ನ=ಯಜ್ಞ). 72 ಹಾಯಿತಿ (ಅಧ್ಯಾಯ) ಗಳಿವೆ. ಅವುಗಳಲ್ಲಿ ಸಮಸ್ತ ದೇವತೆಗಳನ್ನೂ ಆಹ್ವಾನಿಸುವ ಗೀತೆಗಳೂ ಪ್ರಾರ್ಥನಾಪದ್ಯಗಳೂ ಇವೆ. ಯಾಷ್ತ್‌ಗಳಲ್ಲಾದರೋ ಒಂದೊಂದು ದೇವತೆಯನ್ನೇ ಪ್ರತ್ಯೇಕವಾಗಿ ಕುರಿತ ಸ್ತೋತ್ರಗಳಿವೆ. ಪುಜಾಕಲ್ಪದಲ್ಲಿ ಯಜ್ಞದ ನಡುವೆ ಗಾಥೆಗಳನ್ನು ಹಾಡುತ್ತಾರೆ. ಬಗೆಬಗೆಯ ಯಜ಼ತರ ಹೆಸರುಗಳೂ ವಿಶೇಷಣಗಳೂ ಮತ್ತು ಯಜ಼ಮೈದೆ (ಪುಜಿಸುವೆವು) ಎಂಬ ಪದವೂ ಅನೇಕ ಬಾರಿ ಪುನರಾವರ್ತಿತವಾಗುವುದು ಯಸ್ನದ ವೈಶಿಷ್ಟ್ಯ. ಜರತುಷ್ಟ್ರನಿಗೆ ಹಓಮದ ದಿವ್ಯದರ್ಶನವಾದುದನ್ನು ವರ್ಣಿಸುವ ಮತ್ತು ಹಓಮವನ್ನು ಒಂದು ವನಸ್ಪತಿಯಂತೆಯೂ ಒಂದು ದೇವತೆಯಂತೆಯೂ ಸ್ತುತಿಸುವ ಹಓಮ ಯಷ್ತ್‌ ಎಂಬುದು ಯಸ್ನದಲ್ಲಿ (9-11) ಅಂತರ್ಗತವಾಗಿದೆ. ಯಸ್ನಗಳಲ್ಲೂ ಯಷ್ತಗಳಲ್ಲೂ ಇತ್ತೀಚೆಗಿನ ಒಂದು ಸೃಷ್ಟಿ ನಮಗೆ ಕಂಡುಬರುತ್ತದೆ. ಜರತುಷ್ಟ್ರನ ಪರಿಷ್ಕರಣಗಳಿಗೆ ಹಿಂದೆ ಇರಾನಿನಲ್ಲಿ ಪ್ರಚಲಿತವಾಗಿದ್ದ ಮತಾಂಶಗಳಲ್ಲಿ ಕೆಲವಕ್ಕೆ ಇಲ್ಲಿ ಆಸ್ಪದ ದೊರೆತಿದೆ. ಪ್ರಾಚೀನರಾದ ಮಿಥ್ರನಂಥ ದೇವತೆಗಳು; ಜಲ, ಅಗ್ನಿ ಮತ್ತು ಭೂಮಿಯಂಥ ಭೂತಗಳು, ಸಂರಕ್ಷಕರೆನಿಸುವ ಮೃತರ ಆತ್ಮಗಳು ಇದರಲ್ಲಿ ಗೌರವಸ್ಥಾನ ಪಡೆದಿವೆ. ಹಓಮದ ಪುಜಾವಿಧಿ ಪುನರುದ್ಧೃತವಾಗಿದೆ.

3. ಮೀಸ್ ಪರೆಡ್

ಬದಲಾಯಿಸಿ

24 ಅಧ್ಯಾಯಗಳನ್ನೊಳಗೊಂಡ ಈ ಭಾಗ, ಸಮಸ್ತ ಪ್ರಭುಗಳಿಗೂ ಎಂದರೆ ನಭದ ಹಾಗೂ ನೆಲದ ಸಮಸ್ತ ಭೂತಗಳ ಪ್ರಭುಗಳಿಗೂ ನೀರಿನ ತಳದಲ್ಲಿರುವ ಹಾಗೂ ನೆಲದ ಮೇಲೆ ಜೀವಿಸುವ ಸಮಸ್ತಕ್ಕೂ ಒಡೆಯರಾಗಿರುವರೆಲ್ಲರಿಗೂ ಮತ್ತಿತರರಿಗೂ ಮೊರೆಗೊಡುವ ಗೀತಗಳ ಆಕರವಾಗಿದೆ.

4. ಯಷ್ತ್‌ಗಳು

ಬದಲಾಯಿಸಿ

ಮೂಲ ಪ್ರಮಾಣಗ್ರಂಥದ 14ನೆಯ ನಾಸ್ಕಿಗೆ ಅಪರೂಪವಾಗಿದೆ. ಸಾಮಾನ್ಯವಾಗಿ ಅಷ್ಟಾಕ್ಷರವುಳ್ಳ ಪದ್ಯಗಳ ರೂಪದಲ್ಲಿದೆ. ಅಹುರಮಜ್ದ, ಮಿಥ್ರ , ಹಓಮ, ಅರ್ದ್ವೀ, ಸುರಾ, ಅನಾಹಿತಾ, ಸ್ರಓಫಾ ಮತ್ತು ಇತರ ಅನೇಕ ದೇವತೆಗಳ ಗುಣಚರಿತೆಗ ಳನ್ನು ಕುರಿತ 21 ಸ್ತೋತ್ರಗಳು. ಇವರ ಪೈಕಿ ಕೆಲವರು ವೇದದಲ್ಲಿ ಬರುವ ದೇವತೆಗಳಿಗೆ ಸಮಾನವಾಗಿದ್ದಾರಾದುದರಿಂದ ಇವರನ್ನು ಇಂಡೊ-ಇರಾನಿಯನ್ನರ ಮೂಲ ದೇವತೆಗಳೆಂದು ಹೇಳಬಹುದು. ಆದರೆ ಮಿಕ್ಕವರು ತಾವು ಇರಾನಿಯನ್ನರೇ ಎನ್ನಿಸಿಕೊಳ್ಳುವಷ್ಟು ವೈಲಕ್ಷಣ್ಯವನ್ನು ಪಡೆದಿದ್ದಾರೆ. ಇವುಗಳ ಪೈಕಿ ಕೆಲವು ಸ್ತೋತ್ರಗಳಿಗೆ ಕೆಟ್ಟ ಮಾಟಗಾತಿಯರನ್ನು ಕೊಲ್ಲುವ ಮಾಯಾಶಕ್ತಿಯುಂಟೆಂಬ ನಂಬಿಕೆಯಿದೆ. ಜ್ವರವನ್ನು ಹೋಗಲಾಡಿಸುವುದಕ್ಕೂ ಸಾವು ಹಾಗೂ ವಿಪತ್ತುಗಳನ್ನು ಓಡಿಸುವುದಕ್ಕೂ ಅವು ಸಮರ್ಥವಾಗಿವೆ. ಯಷ್ತ್‌ಗಳ ಪ್ರಶಸ್ತಿಯನ್ನು ಹೆಚ್ಚಿಸಲು ಅವು ಜರತುಷ್ಟ್ರನಿಗೂ ಅಹುರಮಜ್ದನಿಗೂ ನಡೆದ ಸಂಭಾಷಣೆ ಎಂದು ಭಾವಿಸಲಾಗಿದೆ. ಹಳೆಯ ಪುರಾಣಗಳ ಭಾಗಗಳನ್ನೂ ಪಿರ್ದೂಸಿ ತನ್ನ ಷಹನಾಮ ಎಂಬ ಗ್ರಂಥದಲ್ಲಿ ಸಮಗ್ರರೂಪವನ್ನು ಕೊಟ್ಟಿರುವ ಐತಿಹಾಸಿಕ ಕಥೆಗಳನ್ನೂ ತಮ್ಮಲ್ಲಿ ಕಾಪಿಟ್ಟುಕೊಂಡು ಬಂದಿವೆಯಾದುದರಿಂದ ಯಷ್ತ್‌ಗಳಿಗೊಂದು ವಿಶಿಷ್ಟವಾದ ಪ್ರಾಮುಖ್ಯವಿದೆ.

5. ವೆಂದೀದಾದ್

ಬದಲಾಯಿಸಿ

ಆಧುನಿಕ ಅವೆಸ್ತದಲ್ಲಿ ಈ ಪುಸ್ತಕವೊಂದೇ ಸಸ್ಸನಿದ್ ಪರಿಷ್ಕರಣದ 19ನೆಯ ನಾಸ್ಕಿಗೆ ಬಹುವಾಗಿ ಸರಿಹೊಂದುತ್ತದೆ. ಅದರ ವೀ-ದಏವೋ-ದಾತ (ದಾನವರನ್ನು ದಮನ ಮಾಡುವ ನೀತಿ) ಎಂಬ ಹೆಸರೇ ಸೂಚಿಸುವಂತೆ, ಮುಖ್ಯವಾಗಿ ಅದೊಂದು ನ್ಯಾಯನಿಬಂಧನೆಗಳ ಗ್ರಂಥ. ಆದರೆ ಪಾರಸಿಕ ಧಾರ್ಮಿಕ ವಿಧಿಗಳಲ್ಲಿ ಅವುಗಳನ್ನು ಯಸ್ನ ಮತ್ತು ಗಾಥೆಗಳ ಜತೆಗೆ ಪಠಿಸುತ್ತಾರೆ. ಅದರಲ್ಲಿ ಸಂಶುದ್ಧಿಯ ಬಗೆಗೆ ಪ್ರಾಚೀನ ಪುರೋಹಿತರ ದೃಷ್ಟಿಗಳೆಂಥವು ಎಂಬುದರ ವಿವರಣೆಯಿದೆ. ಸ್ತ್ರೀ ಪುರುಷರು ಮಾತ್ರವಲ್ಲ, ಮನೆ, ಬೆಂಕಿ ಮತ್ತು ನೀರು ಅಶುದ್ಧವೆಂದು ಅವರೆಣಿಕೆ. ಹೊಡೆದಾಟ, ಒಪ್ಪಂದಗಳನ್ನು ಮುರಿಯುವುದು, ನೀತಿಗೆಟ್ಟು ಒಡಗೂಡುವುದು, ಮೈಯಿಳಿಸಿಕೊಳ್ಳುವುದು ಇತ್ಯಾದಿ ಅನೇಕ ಅನೀತಿಗಳಿಗೆ ಅದು ಶಿಕ್ಷೆಗಳನ್ನು ವಿಧಿಸುತ್ತದೆ. ಆಪಾದನೆಗೊಳಗಾದವನಿಗೆ ಆಗಬೇಕಾದ ಶಿಕ್ಷೆ ಮತ್ತು ಅವನು ತೆರಬೇಕಾದ ದಂಡ ಇವುಗಳು ಅವನ ಸಾಮಾಜಿಕ ಸ್ಥಾನವನ್ನು ಅವಲಂಬಿಸಿರುತ್ತವೆ. ಕುಟುಂಬಜೀವನ, ವ್ಯವಸಾಯ ಮತ್ತು ನಿತ್ಯದ ದುಡಿಮೆ ಇವು ಕೇಡನ್ನು ದುರ್ಬಲಗೊಳಿಸುತ್ತವೆ ಎಂದು ಹೇಳಿ ಅವುಗಳನ್ನು ಅದು ಶ್ಲಾಘಿಸುತ್ತದೆ. ವೆಂದೀದಾದ್ ಎಂಬುದು ಈ ಕಾರಣದಿಂದಾಗಿ ಪ್ರಾಚೀನ ಇರಾನಿಗಳ ನಡೆವಳಿಕೆಗಳ ಮತ್ತು ನಂಬಿಕೆಗಳ ತಿಳಿವಳಿಕೆಗೆ ಬಹುಮುಖ್ಯ ಗ್ರಂಥವಾಗಿದೆ. ನ್ಯಾಯ ನಿಬಂಧನೆಗಳ ಪುಸ್ತಕವಾಗಿರುವುದರ ಜೊತೆಗೆ, ವೆಂದೀದಾದ್ ಸೃಷ್ಟಿಯ ಕಥೆ, ಅಹುರಮಜ್ದ ಈ ಮತವನ್ನು ಯಾರಿಗೆ ಬೋಧಿಸಿದನೋ ಮತ್ತು ಯಾರಿಂದ ಈ ಭೂಮಿ ಮನುಷ್ಯರಿಗೂ ಪಶುಗಳಿಗೂ ವಿಸ್ಕೃತವಾಯಿತೋ ಅಂಥ ಯಿಮ ಎಂಬಾತನ ಕಥೆ, ದುರ್ಬರವಾದ ಚಳಿಗಾಲದ ಮತ್ತು ಪ್ರಳಯಪ್ರವಾಹದ ಕಥೆ-ಇವುಗಳನ್ನು ಒಳಗೊಂಡಿದೆ.

6. ಲಘುಸ್ತುತಿಗಳು

ಬದಲಾಯಿಸಿ

ಇವಕ್ಕೂ ಮತೀಯ ವಿಧಿಗಳಲ್ಲಿ ಸ್ಥಾನವಿಲ್ಲ. ಜೀವನದ ಕೆಲವು ಘಟನೆಗಳ ಸಂದರ್ಭಗಳಲ್ಲಿ ಅಥವಾ ನಿತ್ಯದ ಕೆಲವು ಸಮಯಗಳಲ್ಲಿ ಪಠಿಸುವಂಥ ಸ್ತುತಿಗಳು ಮತ್ತು ಸೂತ್ರಗಳು-ನೈಷ್ಗಳೆಂಬುವು ಇವುಗಳಲ್ಲಿ ಶ್ರೇಷ್ಠತಮವೆನಿಸಿವೆ. ಅವು ಸೂರ್ಯ, ಮಿಥ್ರ, ಚಂದ್ರ, ಜಲ ಮತ್ತು ಅಗ್ನಿ ಇವರನ್ನು ಕುರಿತ ಚಿಕ್ಕ ಸ್ತೋತ್ರಗಳು. ಕೆಲವು ನಿಯತಗಳಿಗೆ ಗಳಲ್ಲಿ ಪ್ರತಿನಿತ್ಯವೂ ಇವುಗಳಲ್ಲಿ ಬಹು ಭಾಗವನ್ನು ಪಠಿಸುತ್ತಾರೆ. ಅಹುರಮಜ್ದ ಮತ್ತು ಇತರ ದೇವತೆಗಳ ಪರವಾದ ಗಾಹ್ಗಳೆಂಬ ಸ್ತೋತ್ರಗಳು ದಿನದ ಐದು ಭಾಗಗಳಲ್ಲೂ ಪಠಿಸಲ್ಪಡುತ್ತವೆ. ತಿಂಗಳ 30 ದಿನಗಳಿಗೂ ಅಧಿಪತಿಗಳಾದ ದೇವತೆಗಳನ್ನು ಕುರಿತ ಸ್ತೋತ್ರಗಳಿಗೆ ಸೀರೋeóÁಗಳೆಂದು ಹೆಸರು. ಆಫ್ರೀನ್‌ಗಾನ್‌ ಎಂಬುವು ದೇವತೆಯನ್ನೋ ಭೂತ ವನ್ನೋ ಆಹ್ವಾನಿಸಿ ಹರಕೆಯ ಕಾಣಿಕೆಗಳನ್ನೊಪ್ಪಿಸುವಾಗ ಹೇಳುವ ಹಾರೈಕೆಯ ನುಡಿಗಳು.

ಇವುಗಳ ಜೊತೆಗೆ ನಷ್ಟವಾಗಿರುವ ಅವೆಸ್ತ ಗ್ರಂಥಗಳಿಂದ ಉದ್ಧೃತವಾದ ಕೆಲವು ಪಾಠಗಳು ಪಹ್ಲವೀ ಸಾಹಿತ್ಯದಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ನಿರಂಗಿಸ್ತಾನ್ ಎಂಬ ಮೂರು ಅಧ್ಯಾಯಗಳುಳ್ಳ ಮತಾಗಮಗಳ ಕೃತಿ ಮುಖ್ಯವಾದುದು. ನಷ್ಟವಾಗಿರುವ ಅವೆಸ್ತ ಗ್ರಂಥಗಳಲ್ಲಿನ ಶಬ್ದಗಳ ಮತ್ತು ಶಬ್ದಪುಂಜಗಳ ಪಟ್ಟಿಯನ್ನು ಕೊಟ್ಟಿರುವ ಫ್ರಹರಿಗ್ ಇ ಓಈಮ್ ಏವಕ್ ಎಂಬ ಅವೆಸ್ತ-ಪಹ್ಲವಿ ಅರ್ಥಕೋಶವನ್ನು ಇಲ್ಲಿ ಹೆಸರಿಸಬಹುದು.

ಸಸ್ಸನಿಯನ್ ಕಾಲದಲ್ಲೇ ಅವೆಸ್ತ ದುರ್ಗ್ರಾಹ್ಯವೆನಿಸಿತು. ಆದುದರಿಂದ ಆ ಪಾಠದ ಪಹ್ಲವಿಯ ರೂಪಾಂತರ ಆವಶ್ಯಕವೆನಿಸಿತು. ಸಸ್ಸನಿಯನ್ ಕಾಲದಲ್ಲಿ ಅವೆಸ್ತದ 19 ನಾಸ್ಕಗಳನ್ನೂ ಪಹ್ಲವಿಗೆ ಶಬ್ದಶಃ ಭಾಷಾಂತರಿಸಲಾಯಿತೆಂದು ಹೇಳಲಾಗಿದೆ. ಈ ಅನುವಾದದಲ್ಲಿ ಸಮಸ್ತ ಯಸ್ನಗಳ ಪೈಕಿ ಒಂದೇ ಒಂದು ಮಾತ್ರ, ವೀಸ್ ಪೆರೆಡ್ ವೆಂದೀದಾದ್ ಮತ್ತು ಕೆಲವು ಯಷ್ತಗಳು ಈಗ ಉಪಲಬ್ಧವಾಗಿವೆ. ಈ ಭಾಷಾಂತರವನ್ನು ಸಂಪುರ್ಣವಾಗಿ ನೆಚ್ಚಿಕೊಂಡರೆ ಅವೆಸ್ತದ ಪರಿಜ್ಞಾನ ಆಗುವುದಿಲ್ಲವಾದರೂ ಅದನ್ನು ಅರ್ಥಮಾಡಿಕೊಳ್ಳಲು ಅನೇಕ ವಿಧದಲ್ಲಿ ಇದು ನೆರವಾಗುವುದೆಂದೆಣಿಸಿ ಇದನ್ನು ಬಿಡದೆ ಪರಾಮರ್ಶಿಸುತ್ತಾರೆ. ಈ ಪಹ್ಲವಿಯ ಅನುವಾದದ ಅನೇಕ ಭಾಗಗಳನ್ನು ಭಾರತದಲ್ಲಿ ವಾಸಮಾಡುವ ಕೆಲವು ಪಾರ್ಸಿಪುರೋಹಿತರು ಸಂಸ್ಕೃತಕ್ಕೆ ಪರಿವರ್ತಿಸಿದ್ದಾರೆ. ಅವರ ಪೈಕಿ ಸು. 12ನೆಯ ಶತಮಾನದದ್ದು. ನೆರ್ಯೊಸಂಗ್ ಪ್ರಮುಖ.

ಅವೆಸ್ತದ ಕೈ ಬರೆಹದ ಪ್ರತಿಗಳನ್ನು, ಆ ಲಿಪಿಯ ಗೋಪ್ಯವನ್ನು ಬಿಡಿಸಿ ಆ ಗ್ರಂಥಗಳನ್ನು ಪಾಶ್ಚಾತ್ಯ ಗಮನಕ್ಕೆ ತಂದ ಕೀರ್ತಿ ಆಂಕ್ವೆತಿಲ್ ದುಪೆರ್ರಾನ್ ಎಂಬ ಫ್ರೆಂಚ್ ವಿದ್ವಾಂಸನಿಗೆ ಸಲ್ಲುತ್ತದೆ. ಅವನ ತರುವಾಯ ಅನೇಕ ವಿದ್ವಾಂಸರು ಅವೆಸ್ತವನ್ನು ವ್ಯಾಸಂಗ ಮಾಡಿದ್ದಾರೆ. ಅವರ ಪೈಕಿ ಚುಕ್ಕಿಯಂತೆ ಹೊಳೆವ ಬರ್ನೂಫ್, ವೆಸ್ಟರ್‌ಗಾರ್ಡ್‌, ಸ್ವಿಗೆಲ್ಗೀಗರ್, ರಾತ್, ಹೌಗ್, ಬಾರ್ತೊಲೋಮಿವೆಸ್ಟ್‌, ಮಿಲ್ಸ್‌, ಡಾರ್ಮೆಸ್ಟರ್ ಮತ್ತು ಗಲ್ಡ್ನರ್ ಇಂಥ ಹೆಸರುಗಳಿವೆ. ಈ ಪ್ರಾಚೀನ ಗ್ರಂಥಗಳ ವ್ಯಾಸಂಗ ಈಗಲೂ ಬಿರುಸಾಗಿ ನಡೆಯುತ್ತಿದೆ.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಇದನ್ನೂ ನೋಡಿ

ಬದಲಾಯಿಸಿ
"https://kn.wikipedia.org/w/index.php?title=ಅವೆಸ್ತ&oldid=1015016" ಇಂದ ಪಡೆಯಲ್ಪಟ್ಟಿದೆ