ಅವಶ್ಯ ಪ್ರತಿಜ್ಞೆ
ಅಗತ್ಯವಾದ ಲಕ್ಷಣಗಳ ಆಧಾರದಮೇಲೆ ಇದು ಇಂಥದೇ ಆಗಿದೆ ಎಂದು ನಿರ್ಧರಿಸುವ ಬಗೆಗೆ ಈ ಹೆಸರಿದೆ (ಅಪೋಡಿಕ್ಟಿಕ್ ಪ್ರಾಪೊಸಿಷನ್). ಪ್ರತಿಜ್ಞೆಗಳಲ್ಲಿ ಮೂರು ಬಗೆ. ಇದು ಹೀಗೆ ಇದೆ ಎಂಬುದು ಮೊದಲನೆಯದು. ನಮಗೆ ಪರಿಚಿತವಾದ ಹಸುವನ್ನು ನೋಡಿ ಇದು ಹಸು ಎಂದು ಎಲ್ಲರೂ ಹೇಳುತ್ತೇವೆ. ಆ ವಿಚಾರದಲ್ಲಿ ಯಾವ ಸಂಶಯವೂ ಇಲ್ಲ. ಆದರೆ ವಿಲಾಯತಿಯಿಂದ ಬಂದ ಹಸುವನ್ನು ನೋಡಿದಾಗ ಅದು ನಾಡಹಸುವಿಗಿಂತ ಕೆಲವು ವಿಧದಲ್ಲಿ ಬೇರೆಯಾಗಿರುವುದರಿಂದಲೂ ನಾಡಹಸುವನ್ನು ಕೆಲವು ಅಂಶಗಳಲ್ಲಿ ಹೋಲುವುದರಿಂದಲೂ ಇದು ಹಸುವಿರಬಹುದು ಎಂದು ಹೇಳುತ್ತೇವೆ. ಏಕೆಂದರೆ ಆ ಪ್ರಾಣಿ ಹಸು ಎಂದು ನಮಗೆ ಖಚಿತವಲ್ಲ. ಆದರೆ ಅದನ್ನು ಪರೀಕ್ಷಿಸಿ ಹಸುವಿಗೆ ಅಗತ್ಯವಾದ ಸೀಳು ಗೊರಸು ಮತ್ತು ಗಂಗೆದೊಗಲು ಈ ಪ್ರಾಣಿಗೂ ಇರುವುದರಿಂದ ಇದು ಹಸುವಾಗಿ ಇರಲೇಬೇಕು ಎಂದು ನಿರ್ಧರಿಸುತ್ತೇವೆ. ಅಗತ್ಯವಾದ ಲಕ್ಷಣದ ಆಧಾರದ ಮೇಲೆ ನಿರ್ಧರಿಸಿದ ಈ ಮೂರನೆಯ ಬಗೆಯ ಪ್ರತಿಜ್ಞೆಯೇ ಅವಶ್ಯ ಪ್ರತಿಜ್ಞೆ. ಈ ಮೂರು ಬಗೆಯ ಪ್ರತಿಜ್ಞೆಗಳನ್ನೂ ವಿಶದಪಡಿಸಿದವ ಇಮ್ಯಾನ್ಯುಅಲ್ ಕ್ಯಾಂಟ್.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: