ಅವಧಿ ಕಾಲ
ಅವಧಿ ಅಥವಾ ಕಾಲಕ್ಕೆ ಚಿತ್ತೈಕಾಗ್ರತೆ (ಕಾನ್ಸನ್ಟ್ರೇಷನ್), ಒಂದು ಕೆಲಸಕ್ಕೆ ಅಗತ್ಯವಾದ ಕ್ಲುಪ್ತವಾದ ವೇಳೆ, ನಮ್ಮ ಗಮನಕ್ಕೆ ಒಳಪಟ್ಟ ಸುತ್ತಮುತ್ತ ಅಥವಾ ಆವರಣ ಎಂಬ ಹಲವು ಅರ್ಥಗಳಿವೆ. ಒಂದು ಕ್ರಿಯೆ ಆರಂಭವಾಗಿ ಮುಕ್ತಾಯಗೊಳ್ಳುವ ವೇಳೆಯೇ ಕಾಲವೆಂಬ ಅರ್ಥ ಇಲ್ಲಿ ಪ್ರಸಕ್ತವಾದದ್ದು, ಏಕಘನವಾದ ವೇಳೆಯೇ ಕಾಲವೆಂಬುದು ಬರ್ಗ್‌ಸನ್ನನ ತತ್ತ್ವ. ಈ ವೇಳೆಯನ್ನು ಆತ ಕಾಲದ ಚಪ್ಪಡಿ ಎಂದು ವರ್ಣಿಸಿರುತ್ತಾನೆ. ಆ ವೇಳೆ ಚಿಕ್ಕದಾಗಿರಬಹುದು ಇಲ್ಲವೆ ನಿಶ್ಚಯದ ಕ್ರಿಯೆಯನ್ನೆಲ್ಲ ಒಟ್ಟಿಗೆ ಒಳಗೊಳ್ಳುವಷ್ಟು ವಿಶಾಲವಾಗಿರಬಹುದು. ಆದರೆ ಅದು ವಿಘಟಿತವಾಗಿರದ ಏಕ ಘನರೂಪ. ಬರ್ಗ್‌ಸನ್ ಅಂಗೀಕರಿಸಿರುವ ಕಾಲ ಅನಂತವಾಗಿ ವಿಭಜಿಸಬಹುದಾದ ಕ್ಷಣಗಳಿಂದ ಕೂಡಿದ್ದಲ್ಲ ; ಹಾಗೆ ವಿಭಜಿಸಿದರೆ ಕಾಲವನ್ನು ಹಾಳುಮಾಡಿದಂತಾಗುತ್ತದೆ. ಹಿಂದಿನವರು ಕಾಲವನ್ನು ಆ ರೀತಿಯಾಗಿ ಬಗೆದಿದ್ದರು. ಅದರಿಂದ ಕಾಲ ಎರಡು ಅನವಸ್ಥೆಗಳಿಗೆ (ಇನ್ಸ್ಟೆಬಿಲಿಟಿ) ಎಡೆಕೊಟ್ಟಿತ್ತು. ಹಿಂದೆ ಹಿಂದೆ ಸರಿಯುತ್ತ ಕೊನೆಮುಟ್ಟದ ಕ್ಷಣಗಳ ಅನವಸ್ಥೆ ಒಂದು. ಮುಂದೆ ಮುಂದೆ ಸರಿಯುತ್ತ ಕೊನೆ ಮುಟ್ಟದ ಕ್ಷಣಗಳ ಅನವಸ್ಥೆ ಇನ್ನೊಂದು. ಹೀಗೆ ಕಾಲದ ಭಾವನೆ ಅನವಸ್ಥೆಗೆ ಎಡೆ ಕೊಟ್ಟಿದ್ದಕ್ಕೆ ಕಾರಣ. ಕಾಲವನ್ನು ಆಕಾಶದಂತೆ ಭಾವಿಸಿ ಅನಂತ ಬಿಂದುಗಳಾಗಿ ವಿಭಾಗ ಮಾಡಲು ಪ್ರಯತ್ನಿಸಿದ್ದು. ಗಡಿಯಾರದ ಸೆಕೆಂಡುಗಳನ್ನೂ ಮಿನಿಟುಗಳನ್ನೂ ಎಣಿಸಿ ಒಂದು ಅವಧಿಯನ್ನು ನಿರ್ಧರಿಸುವುದು ವಾಡಿಕೆಯಾಗಿದೆ. ಹೀಗೆ ಕಾಲವನ್ನು ಕ್ಷಣಗಳಾಗಿ ಒಡೆದು ಅವುಗಳನ್ನು ಎಣಿಸಿ ಕೂಡಿಸಿ ಕಾಲದ ಸ್ವರೂಪವನ್ನು ತಿಳಿಯಲೆತ್ನಿಸಿದಾಗ ಗಡಿಯಾರದ ಮುಳ್ಳು ಎಷ್ಟು ದೂರವನ್ನು ಮುಟ್ಟಿದೆಯೋ ಆ ದೂರದಿಂದ ಅವಧಿಯನ್ನು ಅಳೆಯುತ್ತೇವೆ. ಹೀಗೆ ಮಾಡಿದಾಗ ನಾವು ಅಳೆಯುವುದು ದೇಶವಾಗಿ ಪರಿವರ್ತನೆಯಾದ ಕಾಲ (ಸ್ಪೇಸಿಯಲಿಸ್ಟ್ ಟೈಮ್), ಯಾಂತ್ರಿಕವಾದ ಕಾಲ, ಜೀವಂತವಾದ ಕಾಲವಲ್ಲ. ಕಾಲದ ಸ್ವರೂಪವನ್ನು ನಾವು ಅದರ ಹೊರಗೆ ನಿಂತು ಬುದ್ಧಿಯಿಂದ ತಿಳಿಯಲಾಗುವುದಿಲ್ಲ; ಅದನ್ನು ಕಣಗಳಾಗಿ ಒಡೆದು ಗ್ರಹಿಸುವುದಕ್ಕಾಗುವುದಿಲ್ಲ; ಅದರ ಒಳಹೊಕ್ಕು ಅಂತರ್ಬೋಧದಿಂದ (ಇಂಟ್ಯೂಷನ್) ಮಾತ್ರ ಅದನ್ನು ಗ್ರಹಿಸುವುದು ಸಾಧ್ಯ. ಒಂದು ಪದ್ಯವನ್ನು ಅಕ್ಷರಗಳನ್ನಾಗಿ ಒಡೆದು ಎಣಿಸಿ, ಈ ಪದ್ಯ ಐನೂರು ಅಕ್ಷರಗಳ ಸಮೂಹವೆಂದು ತಿಳಿದರೆ ಪದ್ಯದ ಸ್ವರೂಪ ಅರ್ಥವಾಗುತ್ತದೆಯೇ? ಅದು ಅದರ ಅರ್ಥವಾಗುವುದಾದರೆ ಪದ್ಯದ ಸ್ವರೂಪದ ಮಿಥ್ಯಾಭಾವನೆಯಾಗುವುದಿಲ್ಲವೇ? ಹಾಗೆಯೇ ಅವಧಿಯನ್ನೂ ಬಿಡಿಬಿಡಿಯಾದ ಕ್ಷಣಗಳ ಮೊತ್ತವೆಂದು ಭಾವಿಸಿದರೆ ಅದು ಮಿಥ್ಯಾಭಾವನೆಯಾಗುತ್ತದೆ. ಈ ಮಿಥ್ಯಾಭಾವನೆಯಿಂದ ಉಪಯೋಗವಿಲ್ಲದೆ ಇಲ್ಲ. ವ್ಯಾವಹಾರಿಕ ಉಪಯೋಗವಿದೆ. ಆದರೆ ಅದು ಪಾರಮಾರ್ಥಿಕ ಸತ್ಯವಲ್ಲ. ಒಂದು ಕುದುರೆಯ ಅಥವಾ ಮನುಷ್ಯನ ಓಟವನ್ನು ಕ್ಯಾಮರಾ ಮೂಲಕ ಒಂದು ಸುರುಳಿಯ ಮೇಲೆ ಹಲವು ಬಿಡಿ ಬಿಡಿ ಚಿತ್ರಗಳಾಗಿ ಗ್ರಹಿಸಿ, ಅದನ್ನು ಸುತ್ತು ಯಂತ್ರಕ್ಕೆ ಸೇರಿಸಿ ತಿರುಗಿಸಿದಾಗ ನಮಗೆ ಓಟದ ತೋರಿಕೆಯುಂಟಾಗುತ್ತದೆ. ಇಂಥ ತೋರಿಕೆಯ ಚಿತ್ರ ಉಪಯೋಗದಲ್ಲಿದೆ. ಆದರೆ ಅದು ಪಾರಮಾರ್ಥಿಕ ಸತ್ಯವೆಂದು ತಿಳಿದರೆ ಅದು ಒಂದು ಭ್ರಮೆಯಾಗುತ್ತದೆ. ಬರ್ಗ್‌ಸನ್ನನ ಕಾಲತತ್ತ್ವದಲ್ಲಿದ್ದ ಸತ್ಯಾಂಶವನ್ನು ಗ್ರಹಿಸಿ ಐನ್ಸ್ಟೈನ್ ಅದನ್ನು ಮಾರ್ಪಡಿಸಿರುತ್ತಾನೆ. ಕಾಲ ಬಿಟ್ಟು ದೇಶವಿಲ್ಲ, ದೇಶ ಬಿಟ್ಟು ಕಾಲವಿಲ್ಲ; ನಿಜವಾಗಿರುವುದು ಅವಿಭಾಜ್ಯವಾದ ದೇಶ-ಕಾಲ. ದೇಶ-ಕಾಲ ಸಾತತ್ಯವೇ ಸರಿಯಾದ ವರ್ಣನೆ. ದೇಶ ಕೇವಲ ನಿತ್ರಾಣವಾದ, ಖಾಲಿಯಾದ ವಿಷಯವಲ್ಲ. ಅದಕ್ಕೆ ಬಾಗು ಇದೆ, ವಕ್ರತೆ ಇದೆ, ಸ್ಥಿತಿಸ್ಥಾಪಕತ್ವವಿದೆ. ಆ ವಕ್ರತೆಗೆ ಕಾಲ ಕಾರಣ. ಆ ವಕ್ರತೆಯೇ ಕಾಲ. ಕಾಲ ಬರ್ಗ್‌ಸನ್ ತಿಳಿದಿದ್ದಂತೆ ಕಾಲ ಕೇವಲ ಚಲನೆಯಲ್ಲ. ಅದು ಹೆಪ್ಪುಗಟ್ಟುವ ಚಲನೆ. ವೇಳೆಯನ್ನು ಆತ ಕಾಲದ ಚಪ್ಪಡಿ ಎಂದು ಹೇಳಿದಾಗ ಆ ಲಕ್ಷಣದಲ್ಲಿ ದೇಶದ ಅಂಶ ಸ್ಪಷ್ಟವಾಗಿ ಕಾಣಿಸುತ್ತದೆ.