ಅವಕಾಶಸಮಾನತೆ (ಶಿಕ್ಷಣದಲ್ಲಿ)

ಶಿಕ್ಷಣಕ್ಷೇತ್ರದಲ್ಲಿ ಜನ್ಮ, ಜಾತಿ, ಸಂಪತ್ತು ಅಥವಾ ಇನ್ನು ಯಾವುದೇ ಕಾರಣಗಳಿಂದ ಯಾವುದೇ ಜನಾಂಗಕ್ಕೆ ಇರುವ ವಿಶೇಷ ಅವಕಾಶ ಅಥವಾ ಅನುಕೂಲತೆಗಳನ್ನು ತೆಗೆದುಹಾಕುವುದೇ ಸಮಾನತಾ ತತ್ತ್ವದ ಮುಖ್ಯ ಉದ್ದೇಶ. ಬುದ್ಧಿಶಕ್ತಿ, ವಿದ್ಯಾರ್ಹತೆ, ಶಕ್ತಿ ಸಾಮರ್ಥ್ಯಗಳು, ಪ್ರತಿಭೆ, ಕ್ರಿಯಾಸಾಮರ್ಥ್ಯ ಈ ದೃಷ್ಟಿಯಿಂದ ಒಬ್ಬೊಬ್ಬರಿಗೂ ವ್ಯತ್ಯಾಸವುಂಟು. ಸಮಾಜದಲ್ಲೂ ಒಬ್ಬೊಬ್ಬನ ಯೋಗ್ಯತೆ, ಆದಾಯ, ವ್ಯವಹಾರಗಳಲ್ಲಿ ಭೇದವಿದೆ. ಆದರೆ ಯಾವುದೇ ಕಾರಣದಿಂದಾಗಲೀ ಶಿಕ್ಷಣಾವಕಾಶಗಳನ್ನು ಏರ್ಪಡಿಸುವಾಗ ವ್ಯಕ್ತಿ ವ್ಯಕ್ತಿಗೆ ಭೇದ ತೋರಿಸಬಾರದು. ಯಾವ ಭೇದಭಾವವನ್ನೂ ಮಾಡದೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವುದು ಸರ್ಕಾರದ ಕರ್ತವ್ಯ. ವೈಜ್ಞಾನಿಕ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ರಂಗಗಳಲ್ಲಿ ಸರಿಯಾದ ತರಬೇತಿ ಯನ್ನು ಕೊಟ್ಟು ಎಲ್ಲರೂ ಸ್ವತಂತ್ರರಾಗಿ ಜೀವನ ನಿರ್ವಹಣೆ ಮಾಡುವಂತಾಗಬೇಕು. ಎಲ್ಲರಿಗೂ ಒಂದೇ ರೀತಿಯ ಅವಕಾಶಗಳನ್ನು ಒದಗಿಸಿಕೊಟ್ಟು, ಒಂದೇ ಪ್ರಕಾರದ ತರಬೇತಿಯನ್ನು ಕೊಟ್ಟು ಎಲ್ಲರನ್ನೂ ಸಿರಿವಂತರನ್ನಾಗಿ, ಸಾಹಿತಿಗಳನ್ನಾಗಿ ಇಲ್ಲವೆ ವಿಜ್ಞಾನಿಗಳನ್ನಾಗಿ ಪರಿವರ್ತಿಸುವುದು ಉದ್ದೇಶವಲ್ಲ. ವಿವಿಧ ಗುಣಧರ್ಮಗಳಿಂದ ತುಂಬಿದ ಮಾನವ ಸಮಾಜದಲ್ಲಿ ಇದು ಸಾಧ್ಯವೂ ಅಲ್ಲ. ಆದರೆ ಯಾವುದೇ ರಂಗದಲ್ಲಿ ಯಾವುದೇ ಕಾರಣಗ ಳಿಂದ ಮಾನವ-ಮಾನವನಲ್ಲಿ ಭೇದಭಾವವನ್ನು ಕೃತಕರೀತಿಯಲ್ಲಿ ಕಲ್ಪಿಸದೆ, ಅವನ ಆವಶ್ಯಕತೆಗಳನ್ನು ಪೂರೈಸಿ ಅವನ ಹಿತಾಸಕ್ತಿಗಳನ್ನು ರಕ್ಷಿಸುವುದು ಸರ್ಕಾರದ ಮತ್ತು ಸಮಾಜದ ಆದ್ಯಕರ್ತವ್ಯ. ಹಾಗೆಂದ ಮಾತ್ರಕ್ಕೆ ಉನ್ನತ ವ್ಯಾಸಂಗಕ್ಷೇತ್ರದಲ್ಲಿ ಅನರ್ಹರಿಗೂ ಸ್ಥಾನವಿರಬೇಕೆಂದಲ್ಲ. ಅಧಿಕಾರ ಇದ್ದವನಿಗೆ ಮಾತ್ರ ವಿದ್ಯೆ ಎಂಬುದನ್ನು ನೆನಪಿನಲ್ಲಿಡಬೇಕು. ಇದೊಂದೇ ಶಿಕ್ಷಣಕ್ಷೇತ್ರದಲ್ಲಿ ಅವಕಾಶ ಹಂಚಿಕೆಯ ಧ್ಯೇಯವಾಗಿರಬೇಕು. ಉಳಿದ ಯಾವ ಕಾರಣಕ್ಕಾಗಿಯೂ ಯಾರಿಗೂ ಅದನ್ನು ಇಲ್ಲವೆನ್ನಲಾಗದು. ಆದ್ದರಿಂದ ಅವರವರ ಯೋಗ್ಯತೆಗನುಗುಣವಾಗಿ, ಅವರ ಗುಣಲಕ್ಷಣ ಮತ್ತು ಒಲವುಗಳು ಪೂರ್ಣವಾಗಿ ಅಭಿವೃದ್ಧಿಗೊಳ್ಳುವಂತೆ ಎಲ್ಲರಿಗೂ ಸಾಕಷ್ಟು ಸರಿಯಾದ ಅವಕಾಶಗಳನ್ನು ಇಲ್ಲವೆ ಅನುಕೂಲತೆಗಳನ್ನು ಒದಗಿಸುವುದೇ ಇದರಲ್ಲಿ ಅಡಗಿರುವ ಮುಖ್ಯ ತತ್ತ್ವ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: